Sunday, 24th November 2024

ಅಯ್ಯೋ ನಂಗೆ ಟೈಮೇ ಇಲ್ಲಾ ರೀ ! ತುಂಬಾ ಬ್ಯುಸಿ !

ಶಿಶಿರ ಕಾಲ

shishirh@gmail.com

ಸಮಯವನ್ನು ಸರಿಯಾಗಿ ಬಳಸಿಕೊಳ್ಳದವರ ಇನ್ನೊಂದು ಸಮಸ್ಯೆಯೆಂದರೆ ಅಂಥವರು ತಮ್ಮ ಬಹುತೇಕ ಆಯ್ಕೆಗಳನ್ನು, ಆದ್ಯತೆಗಳನ್ನು ಆರಿಸಿಕೊಳ್ಳುವಲ್ಲಿ ಎಡವುತ್ತಾರೆ. ಇದೊಂದು ವಿಷವರ್ತುಲ. ಆಯ್ಕೆಗಳು ತಪ್ಪಿದಲ್ಲಿ ಇನ್ನಷ್ಟು ಸಮಯ ಪೋಲಾಗುತ್ತದೆ. ಸಮಯದ ಪೋಲು ಹೆಚ್ಚಿದಂತೆ ಆಯ್ಕೆಗಳಲ್ಲಿ ಇನ್ನಷ್ಟು ತಪ್ಪಾಗುತ್ತದೆ.

ಬದುಕಿನಲ್ಲಿ ಒಂದಿಷ್ಟು ಹವ್ಯಾಸವಿರಬೇಕು ಎನ್ನುವ ವಕಾಲತ್ತು ನನ್ನದು. ಸಾಮಾನ್ಯವಾಗಿ ಹೊಸತಾಗಿ ಪರಿಚಯವಾದಾಗ ‘ನಿಮ್ಮ ಹವ್ಯಾಸವೇನು?’ ಎಂದು ಪ್ರಶ್ನಿಸುವುದು ನನ್ನ ಅಭ್ಯಾಸ. ನನ್ನ ಮಟ್ಟಿಗೆ ಅದು ನಾನು ಕೇಳುವ ಪ್ರಶ್ನೆಗಳ ಅತ್ಯಂತ ಗಂಭೀರವಾದದ್ದು.

ಅದು ನಿಜವಾಗಿ ಉತ್ತರ ಬಯಸುವ ಪ್ರಶ್ನೆ. ಹೇಳಿಕೊಳ್ಳುವಂಥ ಒಂದೂ ಹವ್ಯಾಸವಿಲ್ಲದವರೆಂದರೆ ಅದೇಕೋ ಅವರ ಬಗ್ಗೆ ಮೂಡುವ ಅಭಿಪ್ರಾಯವೇ ಬೇರೆ. ಮನುಷ್ಯನಿಗೆ ಏನಾದರೂ ಒಂದು ಹವ್ಯಾಸವಿರಲೇಬೇಕು ಎನ್ನುವುದು ನನ್ನ ಗಟ್ಟಿನಂಬಿಕೆ. ಕೆಲಸ ಬಯಸಿ ಬರುವವರನ್ನು ಇಂಟರ್‌ವ್ಯೂ ಮಾಡುವಾಗ ‘ನಿಮ್ಮ ಹವ್ಯಾಸವೇನು?’ ಎಂದು ಪ್ರಶ್ನಿಸುವುದು ಕಾರ್ಪೊರೇಟ್ ಜಗತ್ತಿನ ವಾಡಿಕೆ. ಆ ಪ್ರಶ್ನೆಯನ್ನು ನಾನು ಮಾತ್ರ ರೂಢಿಗೆ ಕೇಳುವುದಿಲ್ಲ; ಎಲ್ಲಿಲ್ಲದ ಆಸ್ಥೆಯಿಂದಲೇ ಕೇಳುವುದು.

ಏಕೆಂದರೆ ಹವ್ಯಾಸವು ಒಬ್ಬನ ವ್ಯಕ್ತಿತ್ವದ, ಬದುಕಿನ ಜಾಗ್ರತೆಯ ಸೂಚಕ. ಹವ್ಯಾಸವನ್ನು ತಿಳಿದರೆ ಆತನನ್ನು ಹೆಚ್ಚುಕಡಿಮೆ ತಿಳಿದಂತೆ. ಹವ್ಯಾಸ ಯಾವುದೇ ಇರಬಹುದು. ಅದರಲ್ಲಿಯೂ ಹವ್ಯಾಸಕ್ಕೆ ಸಮಯ ಹೊಂದಿಸಿಕೊಂಡಿದ್ದಾನೆ ಎಂದಾದರೆ ಆತನಿಗೆ ಟೈಮ್ ಮ್ಯಾನೇಜ್ಮೆಂಟ್ ಗೊತ್ತು ಎಂದೇ ಅರ್ಥ. ಹವ್ಯಾಸವೇ ಇಲ್ಲದ ವ್ಯಕ್ತಿ ಅಪೂರ್ಣ. ಏಕೆಂದರೆ ಅದು ಆತನಲ್ಲಿನ ಸೃಜನಶೀಲತೆ ಮತ್ತು ಬದುಕಿನೆಡೆಗಿನ ಪ್ರೀತಿ ಬತ್ತಿದ ಸೂಚಕ. ಕೆಲಸದ ಸಂದರ್ಶನಕ್ಕೆ ಬರುವವರಲ್ಲಿ ಕೆಲವರು ಏನಾದ ರೊಂದು ಹವ್ಯಾಸವನ್ನು ತಮ್ಮ ರೆಸ್ಯುಮ್‌ನಲ್ಲಿ ಕಾಟಾಚಾರಕ್ಕೆ ಬರೆದುಕೊಂಡು ಬಂದಿರುತ್ತಾರೆ. ಅಂಥವರಲ್ಲಿ ಅವರ ಹವ್ಯಾಸದ ಬಗ್ಗೆ ಕೊಂಚ ಆಳಕ್ಕಿಳಿದು ಕೇಳಿದಾಗ ಒಂದಿಷ್ಟು ಹಾರಿಕೆಯ ಉತ್ತರ ಸಿಗುತ್ತದೆ.

‘ಮೊದಲೆಲ್ಲ ಆ ಹವ್ಯಾಸದಲ್ಲಿ ತೊಡಗಿz, ಈಗೀಗ ಸಮಯ ಸಾಕಾಗುತ್ತಿಲ್ಲ’ ಎನ್ನುವ ಉತ್ತರ ಅಂಥವರಿಂದ ನಿರೀಕ್ಷಿತ.
ಈಗೀಗ ಸೋಷಿಯಲ್ ಮೀಡಿಯಾದಲ್ಲಿ ತಲೆಹೊಗಿಸಿ ಸಮಯ ಕಳೆಯುವುದನ್ನೂ ಹವ್ಯಾಸವೆನ್ನುವ ಕೆಲವರಿದ್ದಾರೆ ಬಿಡಿ. ಅವರ ಲೆಕ್ಕದಲ್ಲಿ ಎಲ್ಲ ಹವ್ಯಾಸವೂ ಸಮಯವನ್ನು ವ್ಯರ್ಥವಾಗಿ ವ್ಯಯಿಸುವುದು. ಹಾಗಾಗಿ ಇದು ಕೂಡ ಅದೇ ಸಾಲಿನಲ್ಲಿ ನಿಲ್ಲುವಂಥದ್ದು. ಪುಸ್ತಕ, ಪತ್ರಿಕೆ ಓದುವುದು ಸಮಯ ಕಳೆಯುವುದೆಂದಾದರೆ ಸೋಷಿಯಲ್ ಮೀಡಿಯಾದಲ್ಲಿ ಸಮಯ ಕಳೆಯುವುದು ಕೂಡ ಹವ್ಯಾಸವೆಂದೇ ಕರೆಯಬೇಕೆನ್ನುವ ಮೊಂಡು ವಾದ.

ಅದು ಬಿಟ್ಟು ಬೇರಿನ್ನೇನು ಹವ್ಯಾಸವಿದೆಯೆಂದರೆ ‘ಟೈಮ್ ಇ ಸಾರ್’ ಎನ್ನುವ ಉತ್ತರ. ಕೆಲವರಿzರೆ. ಅವರಿಗೆ ನಿಮ್ಮ ಸಖತ್ ಹವ್ಯಾಸದ ಬಗ್ಗೆ ತಿಳಿದಿದೆಯೆಂದುಕೊಳ್ಳಿ. ‘ಅದು ಹೇಗೆ ಅಂಥದ್ದಕ್ಕೆಲ್ಲ ಸಮಯ ಹೊಂದಿಸಿಕೊಳ್ಳುತ್ತೀ ಮಾರಾಯಾ, ನನಗಂತೂ ಟೈಮೇಸಿಗುವುದಿಲ್ಲ’ ಎಂದು ಆಶ್ಚರ್ಯಪಟ್ಟವರಂತೆ ಆಡುತ್ತಾರೆ. ಅಸಲಿಗೆ ಅಂಥವರನ್ನು ಕಂಡಾಗ ನಾವು ಆಶ್ಚರ್ಯಪಡಬೇಕು. ನಿಮ್ಮಲ್ಲಿ ಪುಕ್ಸಟ್ಟೆ ಸಮಯ ತುಂಬ ಇದೆ, ನಮ್ಮಲ್ಲಿ ಅದು ಇಲ್ಲ ಎನ್ನುವ ಅವರ ಮಾತಿನ ಧಾಟಿ ಕೆಲವೊಮ್ಮೆ.

ಅವರಲ್ಲಿ ‘ನೀವೇಕೆ ನಿಮ್ಮ ನೆಚ್ಚಿನ ಹವ್ಯಾಸವನ್ನು ಮುಂದುವರಿಸಿಕೊಂಡು ಹೋಗಲಿಲ್ಲ, ಅಷ್ಟಕ್ಕೇ ಬಿಟ್ಟುಬಿಟ್ಟಿರಿ?’ ಎಂದು ಕೇಳಿದರೆ ಮತ್ತದೇ ‘ಅಯ್ಯೋ ಪುರುಸೊತ್ತಿಲ್ಲ ಸಾರ್’! ಪುರುಸೊತ್ತಿಲ್ಲ ಎನ್ನುವುದನ್ನು ಒಬ್ಬ ವ್ಯಕ್ತಿ ಮೊದಲಿಗೆ ಸುಮ್ಮನೆ,
ಏನೋ ಒಂದರಿಂದ ತಪ್ಪಿಸಿಕೊಳ್ಳಲು ಹೇಳುತ್ತ, ಕ್ರಮೇಣ ಅದನ್ನೇ ನಂಬಿಕೊಂಡುಬಿಡುತ್ತಾನೆ. ಅಂಥವರ ಸಾಮಾನ್ಯ
ಡೈಲಾಗ್- ‘ಇರುವ ೨೪ ಗಂಟೆಯೇ ಸಾಲುವುದಿಲ್ಲ, ಅಂಥದ್ದರಲ್ಲಿ ಹವ್ಯಾಸವನ್ನು, ಬೇರೆ ಕೆಲಸವನ್ನು ಹೇಗೆ ನಿಭಾಯಿಸಲಿ?’.

ಸಮಯವಿಲ್ಲ ಎನ್ನುವುದನ್ನು ಬಾಯ್ಮಾತಿನಲ್ಲಿ, ಮಾತುಮಾತಿಗೆ ಹೇಳುವುದನ್ನು ಮೊದಲು ನಿಲ್ಲಿಸಬೇಕು. ಭಾಷೆಗೆ,
ಸ್ವಗತ ಮಾತಾಡಿಕೊಳ್ಳುವುದಕ್ಕೆ ಬಹಳ ಶಕ್ತಿಯಿದೆ. ನಮಗೆ ಸಮಯವಿಲ್ಲವೆಂದು ನಾವೇ ಹೇಳಿಕೊಂಡಾಗ, ಅದುವೇ
ಸತ್ಯವೆನ್ನುವುದಕ್ಕೆ ಬೇಕಾದಷ್ಟು ಉದಾಹರಣೆಗಳನ್ನು ನಮ್ಮ ಮಿದುಳು ಹೆಚ್ಚು ಗ್ರಹಿಸಲು ಶುರುಮಾಡುತ್ತದೆ. ಮಿದುಳಿಗೆ ತಾನು ಅಂದಾಜಿಸಿದ್ದೇ, ನಂಬಿದ್ದೇ, ಭಾವಿಸಿದ್ದೇ ಸರಿ ಎಂದು ಸಾಧಿಸುವ ಹಪಾಹಪಿ.

ಹಾಗಾಗಿ ಮೊದಲು ಸಮಯವಿಲ್ಲ ಎಂದು ನಮಗೆ ನಾವೇ ಹೇಳಿಕೊಳ್ಳುವುದನ್ನು, ಬೇರೆಯವರಿಗೆ ಹೇಳುವುದನ್ನು- ಈ ಎರಡನ್ನೂ ನಿಮ್ಮ ಮಾತಿನಲ್ಲಿ ನಿಷೇಧಿಸಬೇಕು. ಸಮಯವಿಲ್ಲವೆನ್ನುವುದು ನಮ್ಮ ಸಾಮರ್ಥ್ಯದ, ಸಾರ್ಥಕ್ಯದ ಮಾತು ಅಲ್ಲ, ಬದಲಿಗೆ ಅದೊಂದು ದೌರ್ಬಲ್ಯ ಎನ್ನುವ ಸರಿಗ್ರಹಿಕೆ ನಮ್ಮದಾಗಬೇಕು. ಹಾಗಂತ ಈ ಸಮಯವಿಲ್ಲವೆನ್ನುವವರಿಗೆ ತಮ್ಮ ನೆಚ್ಚಿನ ಹವ್ಯಾಸ ಬಿಟ್ಟ ಬಗ್ಗೆ ಬೇಸರವೂ ಇರುತ್ತದೆ. ಆದರೆ ಅದಕ್ಕೆ ಸಮಯವಿಲ್ಲವೆನ್ನುವ ಸಬೂಬನ್ನು ಅವರೇ ಗಟ್ಟಿಯಾಗಿ ಸ್ವಗತದಲ್ಲಿ ಹೇಳಿಕೊಂಡು, ಅದೇ ಸತ್ಯವೆಂದು ಒಪ್ಪಿಕೊಂಡಿರುತ್ತಾರೆ.

ಇನ್ನು ಕೆಲವರು ‘ಅಬ್ಬಾ ನನ್ನ ದುಡಿಮೆಯ ಕೆಲಸ, ವೃತ್ತಿ ಅತಿಯೆನಿಸುವಷ್ಟಿದೆ, ಸ್ವಲ್ಪ ದಿನದ ನಂತರ ಒಂದಿಷ್ಟು ದಿನ ರಜೆ ಹಾಕಬೇಕು. ಆಗ ಹವ್ಯಾಸಕ್ಕೆ ಅಥವಾ ಇನ್ನೊಂದಕ್ಕೆ ಸಮಯ ಕೊಡಬಹುದು’ ಎಂದು ದಿನದೂಡುತ್ತ ಹೋಗುತ್ತಾರೆ.
ಅಂಥವರಿಗೆ ಆ ಮುಕ್ತ ಸಮಯ ಎಂದಿಗೂ ಬರುವುದೇ ಇಲ್ಲ. ಇನ್ನು ಕೆಲವರಿದ್ದಾರೆ, ಅವರು ಹವ್ಯಾಸವನ್ನು ರಿಟೈರ್ಡ್ ಆದಮೇಲೆ ಕೈಗೆತ್ತಿಕೊಳ್ಳಬೇಕು ಎಂದು ನಿರ್ಧರಿಸಿದವರು. ಇದೊಂದು ಮರೀಚಿಕೆಯ ಬದುಕು.

ಮುಂದೊಂದು ಬಿಡುವಿನ ದಿನಕ್ಕೆ ಇಂದು ಕಾಯುತ್ತ ಬದುಕುವುದಕ್ಕಿಂತ ದುರಂತ ಇನ್ನೊಂದಿಲ್ಲ. ಏಕೆಂದರೆ ಆ ದಿನ
ಅಂಥವರಿಗೆ ಎಂದಿಗೂ ಬರುವುದೇ ಇಲ್ಲ. ಬಂದಾಗ ಅವರಲ್ಲಿ ಮೊದಲಿನ ಆಸಕ್ತಿ, ಪ್ರೀತಿ ಉಳಿದಿರುವುದೂ ಇಲ್ಲ. ಯಾರಾದರೂ ‘ನಾನು ಸಮಯವನ್ನು ಒಂಚೂರೂ ವ್ಯರ್ಥಮಾಡುವುದಿಲ್ಲ, ನಾನು ಮಾಡುವುದೆಲ್ಲ ಮುಖ್ಯ. ಹಾಗಾಗಿ ನನಗೆ ನನ್ನಿಷ್ಟದ ಕೆಲಸಕ್ಕೆ, ಹವ್ಯಾಸಕ್ಕೆ ಸಮಯ ಉಳಿಯುವುದಿಲ್ಲ’ ಎಂದರೆ ಅವರು ಹಸಿಸುಳ್ಳು ಹೇಳುತ್ತಿದ್ದಾರೆ ಎಂದೇ ಅರ್ಥ. ನರೇಂದ್ರ ಮೋದಿ ಬಿಡುವು ಮಾಡಿಕೊಂಡು ಫೋಟೋಗ್ರಫಿ ಮಾಡುತ್ತಾರೆ.

ಭಾರತದಲ್ಲಿಯೇ ಅತ್ಯಂತ ಬಿಡುವಿಲ್ಲದ ನಟ ಅಮಿತಾಭ್ ಬಚ್ಚನ್ ಕಳೆದ ಐದೂವರೆ ಸಾವಿರ ದಿನದಿಂದ ಒಂದೇ ಒಂದು ದಿನ ಬಿಡುವು ಕೊಡದೆ ನಿರಂತರ ಬ್ಲಾಗ್ ಬರೆಯುತ್ತಿದ್ದಾರೆ. ಬರಾಕ್ ಒಬಾಮ ಅತ್ಯಂತ ಹೆಚ್ಚಿಗೆ ಕೆಲಸ ಮಾಡುತ್ತಿದ್ದ ಅಮೆರಿಕನ್ ಅಧ್ಯಕ್ಷ. ಅವರು ಅಧ್ಯಕ್ಷರಾಗಿzಗ ಕೂಡ, ಪ್ರತಿದಿನ ಪುಸ್ತಕ ಓದಲು ಮತ್ತು ಬರೆಯಲು ಒಂದಿಷ್ಟು ಸಮಯವನ್ನು ತೆಗೆದಿಡು
ತ್ತಿದ್ದರು. ಅವರು ವಿದೇಶ ಪ್ರವಾಸದಲ್ಲಿರಲಿ ಅಥವಾ ಇಲೆಕ್ಷನ್ ಪ್ರಚಾರದಲ್ಲಿರಲಿ, ಅವರ ಹವ್ಯಾಸಕ್ಕೆ ಒಂದಿಷ್ಟು ಸಮಯ ಇಟ್ಟೇ ಅವರ ದಿನಚರಿ ನಿಗದಿಯಾಗುವಂತೆ ನೋಡಿಕೊಳ್ಳುತ್ತಿದ್ದರು.

ಇನ್ನು ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಕೂಡ ಪುರುಸೊತ್ತು ಮಾಡಿಕೊಂಡು ವಾರಕ್ಕೊಮ್ಮೆಯಾದರೂ ಗಾಲ್ಫ್ ಆಡಲು ಹೊರಟುಬಿಡುತ್ತಿದ್ದರು. ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ವೃತ್ತಿಯ ಉತ್ತುಂಗದಲ್ಲಿದ್ದಾಗ ಕೂಡ ಬೈಕ್ ಓಡಿಸೋಕೆ ಅದು ಹೇಗೋ ಒಂದಿಷ್ಟು ಸಮಯ ಹೊಂದಿಸಿಕೊಳ್ಳುತ್ತಿದ್ದರು. ಇಂದಿರಾ ನೂಯಿ, ಪೆಪ್ಸಿಕೊ ಸಿಇಒ ಆಗಿದ್ದಾಗಲೂ ಬೇಸ್‌ಬಾಲ್ ಆಟಕ್ಕೆ, ಫಿಶಿಂಗ್‌ಗೆ ಒಂದಿಷ್ಟು ಸಮಯ ಮಾಡಿಕೊಳ್ಳುತ್ತಿದ್ದರು. ಸುಮ್ಮನೆ ಯಾವುದೇ ಫೇಮಸ್ ವ್ಯಕ್ತಿಯ ಹೆಸರು ಹಾಕಿ ಅವರ ಹವ್ಯಾಸವನ್ನು ಗೂಗಲ್‌ನಲ್ಲಿ ಹುಡುಕಿ ನೋಡಿ.

ಅವರಿಗೆಲ್ಲ ಹವ್ಯಾಸಕ್ಕೆ, ಬಿಡುವಿನ ಸ್ವಂತಿಕೆಯ ಸೃಜನಶೀಲತೆಗೆ ಸಮಯವಿದ್ದೇ ಇದೆ. ಅಲ್ಲಿ ಹವ್ಯಾಸವು ಅವರ ಬದುಕಿನ ಆದ್ಯತೆಗಳಲ್ಲಿ ಮೊದಲಿನಲ್ಲಿದೆ- ಹಾಗಾಗಿ ಅದಕ್ಕೆ ಸಮಯವಿದೆ. ಅಮೆರಿಕದ ಅಧ್ಯಕ್ಷರಿಗೇ ಹವ್ಯಾಸಕ್ಕೆ, ವ್ಯಾಯಾಮಕ್ಕೆ, ಆಟಕ್ಕೆ, ಓದಲು, ಬರೆಯಲು ಸಮಯವಿರುತ್ತದೆಯೆಂದರೆ ಇನ್ನು ನಾವೆಲ್ಲ ಯಾವ ಕಿಸು ಬೊಕ್ಕೆ ದಾಸರು! ಸಮಯವಿಲ್ಲವೆನ್ನುವವರು ಪೊಂಕುಗಳು ಕೂಡ ಹೌದು. ಅದೊಂದು ಸುಲಭಕ್ಕೆ ಕೈಗೆ ಸಿಗುವ ಕಾರಣ.

ಕೆಲವರಿಗೆ ತಾವೆಷ್ಟು ಬ್ಯುಸಿ ಎಂದು ಹೇಳಿಕೊಳ್ಳುವುದೇ ಒಂದು ಶೋಕಿಯಂತಾಗಿಬಿಟ್ಟಿರುತ್ತದೆ. ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ‘ಅಯ್ಯೋ ಬ್ಯುಸಿ, ಆದರೂ ಬಂದೆ’ ಎಂದೇ ಎಂಟರ್ ಕೊಡುವುದು. ಅಂಥವರನ್ನು ಇನ್ನಷ್ಟು ಪ್ರಶ್ನಿಸಿದರೆ
ನನಗೆ ‘ನಿಜವಾಗಿ’ ಯಾವ ಮುಖ್ಯ ಕೆಲಸಕ್ಕೂ ಸಮಯವಿಲ್ಲ ಎಂದು ಹೇಳಿ ಪಟ್ಟಿಕೊಡುತ್ತಾರೆ. ಅಸಲಿಗೆ ಅಲ್ಲಿ ಅವರು ಹೇಳುವ ಯಾವ ಕೆಲಸವೂ ಅವರಿಗೆ ಮುಖ್ಯವೇ ಆಗಿರುವುದಿಲ್ಲ.

ಅದನ್ನು ಕೇಳಿದವರೆಲ್ಲ ಸೌಜನ್ಯಕ್ಕೆ ಅದು ನಿಜವೆನ್ನುವಂತೆ ಗೋಣು ಅಡಿಸುತ್ತಾರೆ. ನೀವು ಸಮಯವೇ ಇಲ್ಲ ಎನ್ನುವುದನ್ನೇ ನಂಬಿಕೊಂಡವರಾದರೆ, ಮೊದಲು ನಿಮ್ಮ ಸಮಯ, ಶ್ರಮ ಎಲ್ಲಿ ಹೋಗುತ್ತಿದೆ ಎನ್ನುವ ಮೂಲ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ದಿನಚರಿ ಬರೆಯುವುದರ ಉಪಯೋಗದಲ್ಲಿ ಇದು ಕೂಡ ಒಂದು. ಸಮಯ ಎಲ್ಲಿ ವ್ಯಯವಾಗುತ್ತಿದೆ, ವ್ಯರ್ಥವಾಗುತ್ತಿದೆ ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳುವ ಧೈರ್ಯ ಮಾಡಿದರೆ ಹೆಚ್ಚುಕಡಿಮೆ ಈ ಸಮಯವಿಲ್ಲವೆನ್ನುವ ಸಾಂಕ್ರಾಮಿಕಕ್ಕೆ ಲಸಿಕೆ ಸಿಕ್ಕಂತೆ. ಏಕೆಂದರೆ ದಿನದ ಅದೆಷ್ಟೋ ಭಾಗ ನಮಗರಿವಿಲ್ಲದಂತೆ ಅನವಶ್ಯಕ, ವ್ಯರ್ಥ ಕೆಲಸಗಳಲ್ಲಿ ಪೋಲಾಗುತ್ತಿರುತ್ತದೆ.

ಅದನ್ನು ಗುರುತಿಸಿ ಬೇರೆಯದಕ್ಕೆ ಬಳಸಿಕೊಳ್ಳುವುದೇ ಎಲ್ಲವುದಕ್ಕೂ ಉತ್ತರ. ಇನ್ನೊಂದೆಂದರೆ ಔZhಟ್ಛಠಿಜಿಞಛ್ಟಿ Sಛ್ಞಿbo ಸಮಯದ ಪ್ರಜ್ಞೆಯಿಲ್ಲದೆ ಏನೋ ಒಂದನ್ನು ಮಾಡುವುದು ಕೂಡ ಈ ಸಮಯವಿಲ್ಲದ ಸ್ಥಿತಿಗೆ ಕಾರಣವಾಗುತ್ತದೆ. ಟಿವಿ ನೋಡುವಾಗ ಈಗೀಗ ‘ಬಿಂಜ್ ವಾಚಿಂಗ್’ ಎನ್ನುವುದು ಹೊಸ ಟ್ರೆಂಡ್. ನೋಡಲು ಶುರುಮಾಡಿದ್ದನ್ನು ಸಮಯದ ಪರಿವೆಯೇ ಇಲ್ಲದಂತೆ ನೋಡುತ್ತಲೇ ಹೋಗುವುದು.

ಸೋಷಿಯಲ್ ಮೀಡಿಯಾದಲ್ಲಿ ಸಮಯ ವ್ಯಯಿಸುವಾಗ ಕೂಡ ಇದೇ ಸಮಸ್ಯೆ ಹಲವರಲ್ಲಿದೆ. ಯುಟ್ಯೂಬಿನಲ್ಲಿ, ಟಿಕ್
ಟಾಕ್‌ನಲ್ಲಿನ ರೀಲ್‌ಗಳನ್ನು ಪುಂಖಾನುಪುಂಖ ನೋಡುತ್ತಲೇ ಹೋಗುವುದು, ಇಂತಿಷ್ಟು ಹೊತ್ತು ಕಳೆದ ಮೇಲೆ ಸಮಯ
ಪೋಲಾಗುತ್ತಿದೆ ಎನ್ನುವ ಪರಿವೆಯೇ ಇಲ್ಲದಿರುವುದು. ಈ ‘ಸಮಯವಿಲ್ಲ’ ಎಂದು ನಂಬಿಕೊಂಡವರ ಇನ್ನೊಂದು ಸಮಸ್ಯೆ ಯೆಂದರೆ, ಅವರು ಕ್ರಮೇಣ ಮಾನವೀಯತೆಯಿಂದ, ಕೌಟುಂಬಿಕ ಬದುಕಿನ ಖುಷಿಯಿಂದ ದೂರವಾಗುತ್ತ ಹೋಗುತ್ತಾರೆ. ಸಂಬಂಽಕರಲ್ಲಿ ಹುಡುಕಿದರೆ ಅಂಥವರು ಒಬ್ಬರಾದರೂ ಸಿಗುತ್ತಾರೆ.

ರಸ್ತೆಯ ಬದಿಯಲ್ಲಿ ಯಾರೋ ಗಾಯವಾಗಿ ಬಿದ್ದಿದ್ದರೆ ನಿಲ್ಲದೆ ಮುಂದೆ ಹೋಗುವವರು ಕೊಟ್ಟುಕೊಳ್ಳುವ ಕಾರಣವೂ ‘ಸಮಯವಿಲ್ಲ’ ಎನ್ನುವುದೇ. ಮಕ್ಕಳ ಜತೆ, ಪತಿ/ಪತ್ನಿಯ ಜತೆ ಸಮಯ ವ್ಯಯಿಸದಿರುವವರದ್ದೂ ಇದೇ ಕಾರಣ. ಅಸಲಿಗೆ ಇದೆಲ್ಲ ಆಯ್ಕೆಗೆ ಸಂಬಂಧಿಸಿದ್ದು. ಸಮಯವಿಲ್ಲವೆಂದು ಅಂದುಕೊಳ್ಳುವವರು ಸಾಮಾನ್ಯವಾಗಿ ಇನ್ನೊಬ್ಬರ ಸಹಾಯಕ್ಕೆ ಆಗಿಬರುವುದಿಲ್ಲ ಕೂಡ.

ಸಮಯವನ್ನು ಸರಿಯಾಗಿ ಬಳಸಿಕೊಳ್ಳದವರ ಇನ್ನೊಂದು ಸಮಸ್ಯೆಯೆಂದರೆ ಅಂಥವರು ತಮ್ಮ ಬಹುತೇಕ ಆಯ್ಕೆಗಳನ್ನು, ಆದ್ಯತೆಗಳನ್ನು ಆರಿಸಿಕೊಳ್ಳುವಲ್ಲಿ ಎಡವುತ್ತಾರೆ. ಇದೊಂದು ವಿಷವರ್ತುಲ. ಆಯ್ಕೆಗಳು ತಪ್ಪಿದಲ್ಲಿ ಇನ್ನಷ್ಟು ಸಮಯ ಪೋಲಾಗುತ್ತದೆ. ಸಮಯದ ಪೋಲು ಹೆಚ್ಚಿದಂತೆ ಆಯ್ಕೆಗಳಲ್ಲಿ ಇನ್ನಷ್ಟು ತಪ್ಪಾಗುತ್ತದೆ. ಇದು ಕ್ರಮೇಣ ಖಿನ್ನತೆ, ಕೌಟುಂಬಿಕ ಒಡಕು ಇತ್ಯಾದಿಗಳಿಗೆ ಹೆದ್ದಾರಿ ಮಾಡಿಕೊಡುತ್ತದೆ ಕೂಡ. ಈ ಸಮಯವಿಲ್ಲವೆನ್ನುವವರ ಇನ್ನೊಂದು ಸಮಸ್ಯೆಯೆಂದರೆ ಅವರು ಎಂದಿಗೂ ವರ್ತಮಾನದಲ್ಲಿ ಬದುಕುವುದೇ ಇಲ್ಲ.

ಒಂದನ್ನು ಮಾಡುವಾಗ ಮುಂದಿನದರ ಬಗ್ಗೆ ಯೋಚಿಸುತ್ತಿರುತ್ತಾರೆ. ಅಂಥವರು ಮುಂದೊಂದು ದಿನದ ಪ್ರವಾಸಕ್ಕೆ ಅಥವಾ ದೀರ್ಘರಜೆಗೆ ಹಪಹಪಿಸುತ್ತಿರುತ್ತಾರೆ. ಸಮಯ ಮತ್ತು ಹಣದಲ್ಲಿ ಒಂದು ಸಾಮ್ಯತೆಯಿದೆ. ಎರಡೂ ಎಷ್ಟಿದ್ದರೂ ಸಾಕಾಗುವು ದಿಲ್ಲ. ಹಾಗಂತ ಅನುಭವಿಸುವ ಮಿತಿ ಮೀರಿದಾಗ ಅದು ಸಂತೋಷ ಕೊಡುವುದನ್ನು ನಿಲ್ಲಿಸಿ ಬಿಡುತ್ತದೆ. ತೀರಾ ಬಿಡುವು ಮಾಡಿಕೊಂಡು ರಿಲ್ಯಾಕ್ಸ್ ಮಾಡುತ್ತೇನೆ ಎಂದು ಅಂದುಕೊಂಡರೆ ಮನಸ್ಸು ಅದಕ್ಕೂ ತಯಾರಿರುವುದಿಲ್ಲ. ಏನೂ ಮಾಡದ ಬಿಡುವಿನ ಖುಷಿ ಒಂದು ಹಂತದಾಚೆ ಕಿರಿಕಿರಿಯೆನ್ನಿಸುತ್ತದೆ.

ಟೈಮ್ ಮ್ಯಾನೇಜ್ಮೆಂಟ್ ಬಗ್ಗೆ ಅದೆಷ್ಟೋ ಸಾವಿರ ಪುಸ್ತಕಗಳಿವೆ, ಯುಟ್ಯೂಬಿನಲ್ಲಿ ಲಕ್ಷಗಟ್ಟಲೆ ವಿಡಿಯೋಗಳು ತುಂಬಿ
ಹೋಗಿವೆ. ಆದರೆ ಒಂದು ಮಾತು. ಅದೆಲ್ಲದರಿಂದ ನಿಮಗೊಂದಿಷ್ಟು ಒಗ್ಗಿಸಿಕೊಳ್ಳಲಾಗದ ಸಲಹೆಗಳು ಸಿಗಬಹುದು.
ಆದರೆ ಸಮಯ ನಿರ್ವಹಣೆಯನ್ನು ಮಾತ್ರ ನೀವೇ ಮಾಡಿಕೊಳ್ಳಬೇಕು. ಅದು ನಿಮ್ಮ ತೀರಾ ಖಾಸಗಿ ಆದ್ಯತೆಯ ಪ್ರಶ್ನೆ.
ಬೇರೆಯವರು ಅದನ್ನು ಹೇಗೆ ನಿರ್ಧರಿಸಿಯಾರು? ಆದ್ಯತೆಯ ಆಯ್ಕೆಗೆ ಮತ್ತು ವಯಸ್ಸಿಗೆ ಸಂಬಂಧವಿಲ್ಲ.

ಸಮಯವನ್ನು ಹೊಂದಿಸಿಕೊಳ್ಳುವುದು ಹೇಗೆ ಎನ್ನುವುದಕ್ಕಿಂತ ಎಲ್ಲಿ ಪೋಲಾಗುತ್ತಿದೆ ಎನ್ನುವುದನ್ನು ಗುರುತಿಸಬೇಕು, ಮೋಹವಿಲ್ಲದೇ ಅದನ್ನು ಬಿಡಬೇಕು. ಅದರ ಜತೆಗೆ, ‘ಹೇಗೆ ಸಮಯ ಹೊಂದಿಸಿಕೊಳ್ಳುತ್ತೀರಿ?’ ಎಂದು ಬೇರೆಯವರಿಗೆ ಕೇಳುವುದನ್ನು ಕೂಡ ನಿಲ್ಲಿಸಬೇಕು. ಏಕೆಂದರೆ ಆ ಉತ್ತರವನ್ನು ನೀವು ಬೇರೆಯವರಿಂದ ಪಡೆಯಲು ಸಾಧ್ಯವೇ ಇಲ್ಲ. ಅವಶ್ಯವಿರುವುದಕ್ಕೆ ಸಮಯ ಬೇಕೆಂದರೆ ಅನವಶ್ಯಕವಾದುದಕ್ಕೆ ಸಮಯ ಕೊಡದಿರುವುದು ಮಾತ್ರ ಪರಿಹಾರ. ಎಲ್ಲವೂ ಅವಶ್ಯಕವೇ ಆಗಿದ್ದರೆ ನೀವು ಸಮಯವಿಲ್ಲ ಎಂದು ಪುಕಾರು ಮಾಡುವುದಿಲ್ಲ.

ಹಾಗೆ ಪುಕಾರು ಮಾಡುತ್ತಿದ್ದೀರಿ ಎಂದಾದರೆ ನೀವು ಸಮಯವನ್ನು ನಿಮಗಿಷ್ಟದಂತೆ ಬಳಸಿಕೊಳ್ಳುತ್ತಿಲ್ಲವೆಂದೇ ಅರ್ಥ. ಬದುಕಿನ ಸಾರ್ಥಕತೆ ಇರುವುದೇ ಸಮಯವನ್ನು ಬೇಕಾದುದಕ್ಕೆ ಹೊಂದಿಸಿಕೊಳ್ಳುವುದರಲ್ಲಿ. ಮಾಡುವ ಕೆಲಸವನ್ನು ಪೂರ್ಣ ಮನಸ್ಸಿನಿಂದ ಮಾಡುವಲ್ಲಿ. ಸಮಯವೊಂದನ್ನು ಸರಿಯಾಗಿ ನಿರ್ವಹಿಸಿಕೊಂಡರೆ ಯಶಸ್ಸು, ಖುಷಿ ಇತ್ಯಾದಿ ಬದುಕಿನ ಬಜ್ ಶಬ್ದಗಳು ತಾವಾಗಿಯೇ ಸಾಲಿನಲ್ಲಿ ಬಂದು ನಿಲ್ಲುತ್ತವೆ. ಜಂಜಾಟದ ಬದುಕಿನಲ್ಲಿ ಸಮಯ ನಿರ್ವಹಣೆ, ಆಯ್ಕೆ ಇವೆರಡೂ ಅತಿಮುಖ್ಯ. ಒಂದಕ್ಕೊಂದು ಕೊಂಡಿ. ನಿಮಗೆ ಸಮಯವಿಲ್ಲವೆಂದರೆ ಅದು ಕೇವಲ ನಿಮ್ಮ ಆಯ್ಕೆಯ ಪ್ರಶ್ನೆ ಅಷ್ಟೆ.