ಪ್ರಯಾಣಿಕರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ನಮ್ಮ ಮೆಟ್ರೊ
ಅಪರ್ಣಾ.ಎ.ಎಸ್ ಬೆಂಗಳೂರು
ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವವರು ಅಲ್ಲಿಂದ ಇಳಿದು ತಮ್ಮ ಮನೆ ಅಥವಾ ಕಚೇರಿಗೆ ಹೋಗಲು ಆಟೋ ಹಿಡಿಯುವುದು ಹೇಗಪ್ಪಾ ಎಂಬುದೇ ದೊಡ್ಡ ಚಿಂತೆ. ಆದರೆ, ಡಿ.೧ರಿಂದ ಆ ಚಿಂತೆ ದೂರವಾಗಲಿದೆ.
ಮೆಟ್ರೋದಲ್ಲಿ ಪ್ರಯಾಣಿಸುವವರ ಬಹುದೊಡ್ಡ ತಲೆಬಿಸಿ ತಗ್ಗಿಸುವ ಯೋಜನೆ ಆರಂಭಿಸಲು ಬಿಎಂ ಆರ್ಸಿಎಲ್ ಸಿದ್ಧತೆ ನಡೆಸಿಕೊಂಡಿದ್ದು, ಡಿ.೧ರಿಂದ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರು ತಲುಪಬೇಕಾದ ಸ್ಥಳಕ್ಕೆ ಪ್ರಿಪೇಯ್ಡ್ ಆಟೋ ಒದಗಿಸಲಿದೆ. ಹಾಗೆಂದು ಮೊದಲೇ ಹಣ ಪಾವತಿಸಬೇಕು ಎಂದೇನೂ ಇಲ್ಲ. ಬುಕಿಂಗ್ ಮಾತ್ರ ಇರು ತ್ತದೆ. ಆಟೋ ಇಳಿಯುವಾಗ ಚಾಲಕರಿಗೆ ಹಣ ಪಾವತಿಸಿದರೆ ಸಾಕು.
ಮೆಟ್ರೋ ಪ್ರಯಾಣಿಕರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ನಮ್ಮ ಮೆಟ್ರೊ ಕಾರ್ಯ ಪ್ರವೃತ್ತರಾಗಿದ್ದು, ತಿಂಗಳಿನಿಂದ ಈ ಯೋಜನೆಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಇದಕ್ಕೆ ಸಂಚಾರ ವಿಭಾಗದ ಪೊಲೀಸರು ಮತ್ತು ಆಟೋ ಚಾಲಕರು ಕೈಜೋಡಿಸು ತ್ತಿದ್ದಾರೆ. ಮೆಟ್ರೋ ನಿಲ್ದಾಣದಿಂದ ಗಮ್ಯಸ್ಥಾನವನ್ನು ತಲುಪುವ ಸಲುವಾಗಿ ಆಟೋ ದಲ್ಲಿ ಸಂಚರಿಸುವವರಿಗೆ ಒಂದಲ್ಲೊಂದು ಸಂಕಷ್ಟಗಳು ಇದ್ದಿದ್ದೆ.
ಒಂದೋ ಪ್ರಯಾಣಿಕರು ಹೇಳುವ ಸ್ಥಳಕ್ಕೆ ಆಟೋದವರು ಬರುವುದಿಲ್ಲ. ಅಥವಾ ದುಪ್ಪಟ್ಟು ದರ ಕೇಳುತ್ತಾರೆ. ಈ ಸಮಸ್ಯೆ ಬಗೆಹರಿಸಲು ಬಿಎಂಆರ್ಸಿಎಲ್ ಹೊಸ ಯೋಜನೆಯೊಂದಕ್ಕೆ ಕೈ ಹಾಕಿದ್ದು, ಈ ಮೂಲಕ ಮೀಟರ್ ಹಾಕಲು ಹಿಂಜರಿಯುವ ಆಟೋ ಚಾಲಕರನ್ನು ನಿಯಂತ್ರಿಸಲು ಮುಂದಾಗಿದೆ.
ಪ್ರೀಪೇಯ್ಡ್ ಆಟೋ ಸೇವೆ ಹೇಗೆ?: ಮೆಟ್ರೋ ಪ್ರಯಾಣಿಕರು ರೈಲು ನಿಲ್ದಾಣದಿಂದ ಹೊರ ಬಂದಾಗ ಹತ್ತಾರು ಆಟೋಗಳು ಕಾಯುತ್ತಿರುತ್ತವೆಯಾದರೂ ಕೇಳಿದ ಸ್ಥಳಕ್ಕೆ ಬರಲು ನಿರಾಕರಿಸುತ್ತಾರೆ ಇಲ್ಲವೇ ಹೆಚ್ಚು ಹಣ ಕೇಳುತ್ತಾರೆ. ಇದಕ್ಕಾಗಿ ಪ್ರೀ ಪೇಯ್ಡ್ ಆಟೋ ಸೇವೆ ಪ್ರಾರಂಭಿಸುತ್ತಿದೆ. ಡಿ. ೧ರಿಂದ ಬನಶಂಕರಿ, ಬೈಯ್ಯಪ್ಪನಹಳ್ಳಿ, ನಾಗಸಂದ್ರ, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಗಳ ಬಳಿಯಿಂದ ಈ ಸೇವೆ ಆರಂಭವಾಗಲಿದೆ.
ಜನರ ಪ್ರತಿಕ್ರಿಯೆ ಗಮನಿಸಿ, ಇತರೆ ನಿಲ್ದಾಣಗಳಲ್ಲಿ ವಿಸ್ತರಿಸುವ ಉದ್ದೇಶವನ್ನು ನಮ್ಮ ಮೆಟ್ರೋ ಹೊಂದಿದೆ. ಅದಕ್ಕಾಗಿ ಮೆಟ್ರೋ ನಿಲ್ದಾಣದ ನಿರ್ಗಮನ ಗೇಟ್ ಬಳಿ ಟೋಕನ್ ಕೌಂಟರ್ ಪ್ರಾರಂಭಿಸಲಾಗುತ್ತದೆ. ಅಲ್ಲಿ ಆಟೋ ಚಾಲಕರು ಬಂದು ತಮ್ಮ ಆಟೋವನ್ನು ದಾಖಲಿಸಿಕೊಳ್ಳುತ್ತಾರೆ. ಅವರ ಆಟೋ ನಂಬರ್ನ್ನು ಹಾಗೂ ಪ್ರಯಾಣಿಸ ಲಾಗುವ ಸ್ಥಳವನ್ನು ಪ್ರಯಾಣಿಕರಿಗೆ ಕೊಡುವ ಚೀಟಿಯಲ್ಲಿ ನಮೂದಿಸಲಾಗುತ್ತದೆ. ಈ ಚೀಟಿಯೊಂದಿಗೆ ಪ್ರಯಾಣಿಕರು ಮೆಟ್ರೋ ನಿಲ್ದಾಣದಿಂದ ಪ್ರಯಾಣಿಸ ಬಹುದು. ಇಳಿದ ಬಳಿಕ ಚಾಲಕನಿಗೆ ಹಣ ಪಾವತಿಸಬಹುದು.
ಪ್ರೀಪೇಯ್ಡ್ ಆಟೋ ದರಪಟ್ಟಿ
ಆರ್ಟಿಒ ನಿಗದಿ ಮಾಡಲಾದ ದರವನ್ನೇ ಪ್ರೀಪೇಯ್ಡ್ ಆಟೋಗಳಿಗೂ ಅಳವಡಿಸಲಾಗಿದೆ. ಆರ್ಟಿಒ ಮೊದಲ ೧.೮ ಕಿ.ಮೀ ೩೦ ರು. ಸಾಮಾನ್ಯ ದರ ನಿಗದಿ ಮಾಡಿದ್ದು, ನಂತರದ ಪ್ರತಿ ಕಿ.ಮೀ. ೧೫ ರು. ದರ ನಿಗದಿಪಡಿಸಲಾಗಿದೆ. ಮೊದಲ ೫ ನಿಮಿಷಗಳ ಕಾಲ ಕಾಯುವಿಕೆ ಉಚಿತವಾಗಿದ್ದು, ೫ ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ ೫ ರು. ಪಾವತಿಸಬೇಕು. ೨೦ ಕೆಜಿವರೆಗೆ ಲಗೇಜ್ ಸಾಗಣೆ ಉಚಿತ ವಾಗಿದ್ದು, ಬಳಿಕ ೫೦ ಕೆಜಿ ವರೆಗೆ ೫ ರು. ದರ ನಿಗದಿ ಮಾಡಲಾಗಿದೆ. ರಾತ್ರಿ ವೇಳೆ ಒಂದೂವರೆ ಪಟ್ಟು ದರ ಇರಲಿದ್ದು, ಈ ಪ್ರೀ ಪೈಯ್ಡ್ ಆಯೋಗಳಿಗೂ ಅದೇ ದರ ಅನ್ವಯವಾಗುತ್ತದೆ.
***
ಪ್ರಯಾಣಿಕರ ಅನುಕೂಲಕ್ಕಾಗಿ ಪ್ರೀಪೇಯ್ಡ್ ವ್ಯವಸ್ಥೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ. ಪ್ರಯಾಣಿಕರು ಪ್ರಯಾಣದ ಬಳಿಕ ಪ್ರಯಾಣ ದರ ಪಾವತಿಸಬೇಕಾಗುತ್ತದೆ. ಈ ವ್ಯವಸ್ಥೆಯಲ್ಲಿ ಮೆಟ್ರೊದೊಂದಿಗೆ ಸಂಚಾರ ವಿಭಾಗದ ಪೊಲೀಸರು ಕೈ ಜೋಡಿಸಿದ್ದು, ಆಟೋದವರಿಗೆ ಮಾಹಿತಿ ಮತ್ತಿತರ ಜವಾಬ್ದಾರಿ ಅವರೇ ನಿರ್ವಹಿಸಲಿದ್ದಾರೆ. ಆಟೋ ಚಾಲಕರು ಬಂದು ಕೌಂಟರ್ನಲ್ಲಿ ತಮ್ಮ ಆಟೋ ಸಂಖ್ಯೆಯನ್ನು ನಮೂದಿಸುತ್ತಾರೆ.
-ಅಂಜುಮ್ ಪರ್ವೇಝ್,
ವ್ಯವಸ್ಥಾಪಕ ನಿರ್ದೇಶಕ , ಬಿಎಂಆರ್ಸಿಎಲ್