ದಾಸ್ ಕ್ಯಾಪಿಟಲ್
dascapital1205@gmail.com
ರಾಜ್ಯದ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾದ ಉತ್ತರ ಕನ್ನಡವು ಸಮೃದ್ಧ ಪ್ರಾಕೃತಿಕ ಸಂಪತ್ತು, ಸಾರ್ವಕಾಲಿಕ ನದಿಗಳು ಮತ್ತು ವೈವಿಧ್ಯಮಯ ಜೀವಸಂಕುಲವನ್ನು ಹೊಂದಿದೆ. ಸುಮಾರು 140 ಕಿ.ಮೀ. ಉದ್ದದ ಕರಾವಳಿ ತೀರ ಇದರ ವೈಶಿಷ್ಟ್ಯ.
ಜಿಲ್ಲೆಯ 10.25 ಲಕ್ಷ ಹೆಕ್ಟೇರ್ ಭೂಭಾಗದಲ್ಲಿ 8.28 ಲಕ್ಷ ಹೆಕ್ಟೇರ್ ಅರಣ್ಯ, ೧.೨ ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕಾ ಪ್ರದೇಶವಿದೆ. ಈ ಜಿಲ್ಲೆಯಲ್ಲಿ ೬ ವಿಧಾನಸಭಾ ಕ್ಷೇತ್ರಗಳಿದ್ದು, ಕನ್ನಡ ಮತ್ತು ಕೊಂಕಣಿ ಪ್ರಧಾನ ಆಡುಭಾಷೆಗಳಾಗಿವೆ. ಇಲ್ಲಿನ ಸೂಪಾ, ಕದ್ರಾ, ಕೊಡಸಳ್ಳಿ, ಗೇರುಸೊಪ್ಪ ಅಣೆಕಟ್ಟುಗಳು ವಿದ್ಯುತ್ ಉತ್ಪಾದನಾ ಘಟಕಗಳಾಗಿವೆ.
ಅಣುವಿದ್ಯುತ್ ಯೋಜನೆಯಲ್ಲಿ ಕೈಗಾ ಸ್ಥಾವರ ಹೆಸರುವಾಸಿ. ಬನವಾಸಿಯ ಮಧು ಕೇಶ್ವರ, ಶಿರಸಿಯ ಮಾರಿಕಾಂಬ, ಮಂಜಗುಣಿ ವೇಂಕಟೇಶ್ವರ, ಸಂತ ಶ್ರೀಧರಾಶ್ರಮ, ಉಳವಿ ಚೆನ್ನಬಸವೇಶ್ವರ, ಇಡಗುಂಜಿಯ ಸಿದ್ಧಿವಿನಾಯಕ, ಗೋಕರ್ಣದ ಮಹಾ ಬಲೇಶ್ವರ, ಮುರುಡೇಶ್ವರ, ಜೈನ ಬಸದಿ, ಸ್ವರ್ಣವಲ್ಲಿ ಮಠದಂಥ ಪುಣ್ಯಕ್ಷೇತ್ರಗಳಿಗೆ, ಸೋಂದಾ ಕೋಟೆ, ಮಿರ್ಜಾನ ಕೋಟೆಯಂಥ ಐತಿಹಾ ಸಿಕ ಸ್ಮಾರಕಗಳಿಗೆ, ಯಕ್ಷಗಾನ ದಂಥ ಶಾಸ್ತ್ರೀಯ ಕಲೆಗೆ, ಸುಗ್ಗಿಕುಣಿತ, ಹೋಳಿನೃತ್ಯ, ಹುಲಿವೇಷ, ಸಿದ್ದಿನೃತ್ಯದಂಥ ಜಾನಪದ ಮತ್ತು ಸಾಂಪ್ರದಾಯಿಕ ಕಲೆ ಗಳಿಗೆ ಈ ಜಿಲ್ಲೆ ಮಡಿಲು.
ಜಿಲ್ಲೆಯು ಕರಾವಳಿ ತೀರವನ್ನು ಹೊಂದಿದ್ದರೂ, ಕಡಲಿನ ಉತ್ಪನ್ನದ ವಿಷಯದಲ್ಲಿ ಅಷ್ಟೊಂದು ಪ್ರಸಿದ್ಧಿ ಪಡೆದಿಲ್ಲ; ಮೀನು ಗಾರಿಕಾ ಚಟುವಟಿಕೆಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಾಯದೊಂದಿಗೆ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿವೆ.
ಜಿಲ್ಲೆಯ ಪ್ರಮುಖ ಸಾಂಪ್ರದಾಯಿಕ ಉದ್ಯೋಗಗಳಲ್ಲಿ ಕೃಷಿ, ಮೀನುಗಾರಿಕೆ, ಪಶು ಸಂಗೋಪನೆ, ರೇಷ್ಮೆ ತೋಟಗಾರಿಕೆ, ಜೇನು ಸಾಕಣೆ, ಚರ್ಮೋದ್ಯಮ ಸೇರಿದ್ದರೆ, ಬುಡಕಟ್ಟುಗಳಲ್ಲಿ ಸಿದ್ದಿ, ಕುಣಬಿ, ಹಾಲಕ್ಕಿ ಒಕ್ಕಲಿಗ, ಗೊಂಡ ಮತ್ತು ಗೌಳಿ ಸೇರಿವೆ. ಸುಮಾರು 400 ವರ್ಷಗಳ ಹಿಂದೆ ಆಫ್ರಿಕಾದಿಂದ ಪೋರ್ಚುಗೀಸರ ಗುಲಾಮರಾಗಿ ಬಂದವರೆಂದು ಹೇಳಲಾಗುವ ಸಿದ್ದಿ ಜನರು 10000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು ಹಳಿಯಾಳ, ಯಲ್ಲಾಪುರ ಮತ್ತು ಅಂಕೋಲಾಗಳಲ್ಲಿ ಗಮನಾರ್ಹವಾಗಿ ಕಂಡು ಬರುತ್ತಾರೆ.
ಕಾಲಕ್ರಮೇಣ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡ ಇವರಲ್ಲಿ ಬಹುತೇಕರು ಹಿಂದೂ ಧರ್ಮವನ್ನು ಅನುಸರಿಸು ತ್ತಿದ್ದರೆ, ಮತ್ತೆ ಕೆಲವರು ಮುಸ್ಲಿಂ ಮತ್ತು ಕ್ರೈಸ್ತ ಮತದ ಅನುಯಾಯಿಗಳಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಇವರು ಹವ್ಯಕ ಬ್ರಾಹ್ಮಣರ ತೋಟಗಳಲ್ಲಿ ಕೃಷಿಕಾರ್ಯದಲ್ಲಿ ವ್ಯಸ್ತರು. ಪಶ್ಚಿಮಘಟ್ಟದ ತಪ್ಪಲಿನಲ್ಲಿ ವಾಸಿಸುವ ಹಾಲಕ್ಕಿ ಒಕ್ಕಲಿಗರು ಉತ್ತರ ಕನ್ನಡದ ಮೂಲನಿವಾಸಿಗಳು.
ಇವರ ಸಾಂಪ್ರದಾಯಿಕ ಜೀವನಶೈಲಿ ಮತ್ತು ಸಾಮಾಜಿಕ ಆಡಳಿತ ಪದ್ಧತಿ ವಿಭಿನ್ನ ಮತ್ತು ವಿಶಿಷ್ಟ. ಸಮಾಜದ ಮುಖ್ಯಸ್ಥನನ್ನು ‘ಗೌಡ’ ಎಂದು ಕರೆಯುವ ಇವರು ಇಂದಿಗೂ ಪರಂಪರೆಯ ಜೀವನ ಪದ್ಧತಿಯನ್ನು ಅನುಸರಿಸುತ್ತಿದ್ದು ಸಮಾಜದ ಮುಖ್ಯ ವಾಹಿನಿಗೆ ಇವರನ್ನು ತರುವ ಅವಶ್ಯಕತೆಯಿದೆ. ದೊಡ್ಡ ಮೂಗುತಿಯನ್ನೂ ಕತ್ತಿನ ತುಂಬ ಮಣಿಸರವನ್ನೂ ಧರಿಸುತ್ತಾರೆ. ಮಹಾರಾಷ್ಟ್ರದಿಂದ ವಲಸೆ ಬಂದ ಗೌಳಿಗಳು ಆಕಳು, ಕುರಿಸಾಕಣೆಯಲ್ಲಿ ವ್ಯಸ್ತರು, ಕಾಡಿನಂಚಿನಲ್ಲಿ ವಾಸಿಸುತ್ತಿರುವವರು. ಈ ಪೈಕಿ ಕೆಲವರು ಕೃಷಿಕಾರ್ಯದ ಅವಲಂಬಿತರು.
ಜಿಲ್ಲೆಯ ಅತಿ ಹಿಂದುಳಿದ ಬುಡಕಟ್ಟು ಜನಾಂಗವಾದ ಕುಣಬಿಗಳು ಕಾಡಿನ ಮಧ್ಯದಲ್ಲಿ ಸಣ್ಣಸಣ್ಣ ಗುಂಪುಗಳಾಗಿ ಬಿದಿರಿನ ಗುಡಿಸಲಿನಲ್ಲಿ ವಾಸಿಸುತ್ತಾರೆ. ಉತ್ತಮ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಇಲ್ಲಿ ಮರಣಪ್ರಮಾಣವು ಹೆಚ್ಚು. ಭಟ್ಕಳ ತಾಲೂಕಿನ ಕಾಡಿನ ಮಧ್ಯೆ ವಾಸಿಸುವ ಗೊಂಡರು ಜೀವನೋಪಾಯಕ್ಕಾಗಿ ಅರಣ್ಯ ಉತ್ಪನ್ನಗಳನ್ನು ಅವಲಂಬಿಸಿದ್ದಾರೆ. ಇವರ ಸಾಂಪ್ರದಾಯಿಕ ಬುಡಕಟ್ಟು ನೃತ್ಯಕಲೆಯು ಶ್ರೀಮಂತವಾಗಿದೆ.
ಇದು ಉತ್ತರಕನ್ನಡ ಜಿಲ್ಲೆಯ ಸ್ಥೂಲನೋಟ. ಅಧಿಕಾರಸ್ಥರು ಅಭಿವೃದ್ಧಿ ಮಂತ್ರವನ್ನು ಯಾವಾಗಲೂ ಪಠಿಸಬೇಕೆಂಬುದನ್ನು ಯಾರೂ ಅಲ್ಲಗಳೆಯಲಾರರು, ಅಲ್ಲಗಳೆಯಲಾಗದು. ಒಬ್ಬ ಸಂಸದರು ಹಾಗೂ 12 ಶಾಸಕರು ಸೇರಿ ಉತ್ತರ ಕನ್ನಡ ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿಯ ನೆಲೆಗೆ ಕೊಂಡೊಯ್ಯಲು ಸಾಧ್ಯವಿತ್ತು, ಈಗಲೂ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಿತವನ್ನು, ಪ್ರಗತಿ ಯನ್ನು ಹಂಬಲಿಸಿ ಯಾರೇ ಬಹಿರಂಗವಾಗಿ ಮಾತಾಡಿದರೂ ಅದನ್ನು ತಪ್ಪು ಎನ್ನಲಾಗದು.
ಜಿಲ್ಲೆಯ ಪ್ರತಿಯೊಬ್ಬರ ಅಭೀಪ್ಸೆಯೂ ಇದೇ ಆಗಿರಬೇಕು ತಾನೆ? ಪಕ್ಕದ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಿಗೆ
ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಗುಣಮಟ್ಟದ ಎಂಜಿನಿಯರಿಂಗ್, ಎಂಬಿಎ, ಕಾನೂನು ಕಾಲೇಜು ಇಲ್ಲ ಎಂಬ ಕೊರಗಿದೆ (ಶಿರಸಿಯಲ್ಲಿ ಎಂಜಿನಿಯರಿಂಗ್, ಕಾನೂನು ಕಾಲೇಜು, ಕಾರವಾರದಲ್ಲಿ ವೈದ್ಯಕೀಯ ಕಾಲೇಜು ಮಂಜೂರಾಗಿ ಕಟ್ಟಡ ನಿರ್ಮಾಣ ವಾಗುತ್ತಿದೆ ಎಂಬ ಸುದ್ದಿಯಿದೆ; ಪ್ರಾಯಶಃ ಮುಗಿಯುವ ಹಂತಕ್ಕೂ ಬಂದಿರಬಹುದು).
ಹೀಗಾಗಿ ಉನ್ನತ ಶಿಕ್ಷಣಕ್ಕೆ ಬೇರೆ ಜಿಲ್ಲೆಗೆ ಹೋಗಬೇಕಾದ ಸ್ಥಿತಿಯಲ್ಲಿದ್ದಾರೆ ಜಿಲ್ಲೆಯ ವಿದ್ಯಾರ್ಥಿಗಳು. ಉಳ್ಳವರು ಹೋಗಬಹುದು, ಆದರೆ ಹಣಕಾಸಿನ ತೊಂದರೆಯಿರುವವರಿಗೆ ಇದು ಸಾಧ್ಯವಿಲ್ಲ. ಪ್ರವಾಸೋದ್ಯಮವನ್ನೂ ಸಾಕಷ್ಟು ಎತ್ತರಕ್ಕೊಯ್ಯುವ ಅವಕಾ ಶವೂ ಜಿಲ್ಲೆಯಲ್ಲಿ ವಿಪುಲವಾಗಿದೆ, ಮಾಡಬಹುದಾದ ಅಭಿವೃದ್ಧಿ ಕಾರ್ಯಗಳು ಬೇಕಾದಷ್ಟಿವೆ.
ಅನಂತಕುಮಾರ ಹೆಗಡೆಯವರು ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಆರ್.ವಿ.ದೇಶಪಾಂಡೆಯವರು ಕೆಲವರ್ಷ ರಾಜ್ಯ ಸರಕಾರ ದಲ್ಲಿ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿದ್ದರು. ಶಿಕ್ಷಣ ಮಂತ್ರಿಗಳಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈಗ ವಿಧಾನಸಭಾ ಸ್ಪೀಕರ್ ಆಗಿದ್ದಾರೆ. ಇದೇ ರೀತಿಯಲ್ಲಿ ಸಾಕಷ್ಟು ಶಾಸಕರಿದ್ದರು, ಈಗಲೂ ಇದ್ದಾರೆ. ಅವರವರ ಕಾಲದಲ್ಲಿ ಏನೇನು ಅಭಿವೃದ್ಧಿಯಾಗಿದೆಯೆಂಬುದು ಜಿಲ್ಲೆಯ ಬಹುತೇಕ ಜನರಿಗೆ ಗೊತ್ತಿದೆ ಎಂಬುದನ್ನು ಇವರೆಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಈ ಎಲ್ಲ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ತಾವು ಮಾಡಿದ, ಮಾಡಬೇಕಾಗಿದ್ದ, ಮಾಡಬಹುದಾಗಿದ್ದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಆತ್ಮವಿಮರ್ಶೆ ಮಾಡಿಕೊಂಡು ಕಾರ್ಯ ಪ್ರವೃತ್ತರಾಗಬೇಕಿತ್ತು ಎಂಬ ನೆಲೆಯಲ್ಲಿ ಹಿಂದೊಮ್ಮೆ ಚಕ್ರವರ್ತಿ ಸೂಲಿಬೆಲೆಯವರು ಆಡಿದ ಮಾತುಗಳು ಗಮನಾರ್ಹವಾಗಿದ್ದವು.
ಇತ್ತೀಚೆಗೆ ಕೂಡ ಅವರು ಗುಣಮಟ್ಟದ ಆಸ್ಪತ್ರೆಗೆ ಆಗ್ರಹಿಸಿದ್ದರು. ಇಂಥಲ್ಲಿ ನಕಾರಾತ್ಮಕ ಆಲೋಚನೆಗಳಿಗೆ ಅವಕಾಶವೀಯದೆ ಜನಪ್ರತಿನಿಧಿಗಳು ಇಂಥ ಮಾತುಗಳನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಬೇಕು. ಏಕೆಂದರೆ, ತಮ್ಮ ಕ್ಷೇತ್ರದ ಜನರ ಕುರಿತಾದ ಚಿಂತನೆಯೇ ಅವರಿಗೆ ಸದಾಕಾಲವೂ ಮುಖ್ಯವಾಗಬೇಕು. ಜಿಲ್ಲೆಯ ಸಂಸದರು, ಶಾಸಕರು ಪಕ್ಷಾತೀತವಾಗಿ ಜನಪ್ರೀತಿ ಗಳಿಸಿ ದವರೇ ಆಗಿರುವುದರಿಂದ, ಎಲ್ಲರೂ ಎಲ್ಲ ಸಂದರ್ಭಗಳಲ್ಲೂ ಬೇಕಾಗುತ್ತಾರೆಂಬ ಹಿನ್ನೆಲೆಯಲ್ಲಿ ಚಕ್ರವರ್ತಿಯವರ ಮಾತುಗಳು ಜಿಲ್ಲೆಯ ಜನರ ಬಯಕೆಯ ಪ್ರತಿಬಿಂಬವೇ ಆಗಿರುವಂಥವು ಎಂಬುದರಲ್ಲಿ ಎರಡು ಮಾತಿಲ್ಲ.
ಜಿಲ್ಲೆಯ ಸಮಗ್ರ ಹಿತಚಿಂತನೆಯಿರುವ ಇಂಥ ಮಾತುಗಳಲ್ಲಿ ಕೊಂಕು ಹುಡುಕುವುದು ಸಮುದಾಯದ ದೃಷ್ಟಿಯಿಂದ ಹಿತವಲ್ಲ. ಪ್ರತಿಯೊಂದನ್ನೂ ದೋಷಪೂರಿತವಾಗಿ ನೋಡುತ್ತ ಹೋದರೆ ಒಳ್ಳೆಯದು ಹೇಗೆ ಕಂಡೀತು? ಚುನಾವಣೆ ಮತ್ತು ಚುನಾವಣೋ ತ್ತರ ಸಂದರ್ಭದಲ್ಲಿ ಜಾತಿ-ಮತದ ವಿಚಾರಗಳು ಮುಖ್ಯವಾಗದೆ ಅಭಿವೃದ್ಧಿಯ ಚಿಂತನೆ ಒಳ್ಳೆಯದೆಂಬ ಮಾತುಗಳು ರಾಷ್ಟ್ರದ
ಎಲ್ಲ ಜನಪ್ರತಿನಿಧಿಗಳಿಗೂ ಅನ್ವಯವಾಗುವಂಥವು.
ತಾನು ಪ್ರತಿನಿಧಿಸುವ ಕ್ಷೇತ್ರವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕಾದ್ದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ. ಅದು ಅವರ
ಹಂಬಲವಾಗಿರಬೇಕು. ಅಭಿವೃದ್ಧಿಯಲ್ಲಿ ಹಿಂದುಳಿದ ತಾಲೂಕು-ಜಿಲ್ಲೆಯ ಪ್ರಗತಿಯ ಕುರಿತಾಗಿ ಅಧಿಕಾರಸ್ಥರನ್ನು ಎಚ್ಚರಿಸಲು ಅವಕಾಶವಿರುವುದೇ ಪ್ರಜಾಪ್ರಭುತ್ವದ ನಿಜ ತಾಕತ್ತು. ಇದರಲ್ಲಿ ಯಾರೂ ಅಪಾರ್ಥವನ್ನೆಣಿಸಲಾಗದು. ಕರಾವಳಿ ಮತ್ತು ಮಲೆ ನಾಡನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯನ್ನು ಪ್ರಗತಿಪಥದತ್ತ ಕೊಂಡೊಯ್ದು ಪ್ರವಾಸೋದ್ಯಮ ತಾಣವನ್ನಾಗಿಸಿ, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ಸ್ಥಳೀಯ ಆರ್ಥಿಕತೆಯನ್ನು ಉದ್ಧರಿಸುವ ಕುರಿತು ಜಿಲ್ಲೆಯ ಜನರೆಲ್ಲರೂ ಪರಾಮರ್ಶಿಸ ಬೇಕಾದ ಅಗತ್ಯದ ಬಗ್ಗೆಯೂ ಚಕ್ರವರ್ತಿಯವರು ಹಿಂದೆ ಮಾತಾಡಿದ್ದರು, ಈಗಲೂ ಮಾತಾಡುತ್ತಿದ್ದಾರೆ.
ಹಾಗಂತ ಇದನ್ನೇ ರಾಜಕೀಯದ ಕನ್ನಡಕದಲ್ಲಿ ನೋಡುವುದು ಅತಿಬುದ್ಧಿವಂತಿಕೆ ಎನಿಸಿಕೊಳ್ಳುತ್ತದೆ! ಜಿಲ್ಲೆಯ ಅಭಿವೃದ್ಧಿಯ ಕುರಿತಾಗಿ ಜನಪ್ರತಿನಿಧಿಗಳು ಇನ್ನಷ್ಟು ಯತ್ನಿಸಬಹುದಿತ್ತು. ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಯಕ್ಷಗಾನಕ್ಕೆ ಅಪಾರ ಕೊಡುಗೆ ನೀಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ 40 ವರ್ಷಗಳ ಹಿಂದಿದ್ದ ಕಲೆಯ ವ್ಯಾಪ್ತಿಗೂ ಈಗಿರುವುದಕ್ಕೂ ವ್ಯತ್ಯಾಸವಿದೆ.
ಅಂದಿಗಿಂತ ಇಂದು ಎಲ್ಲೆಲ್ಲೂ ಸಂಗೀತದ ಗುಂಗಿದೆ. ಸಂಗೀತದಿಂದ ನಾವು ಬೆಳೆಯುವುದಷ್ಟೇ ಅಲ್ಲ, ಸರ್ವಾಂಗೀಣವಾಗಿ ಏಕತೆ ಯನ್ನು ಹೊಂದಬಹುದು; ಯುವಜನತೆ ಇಂಥದ್ದರ ಕಡೆಗೆ ಒಲವು ತೋರಬೇಕೆಂದು ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಹರೀಶ ಹಂದೆ ಹಿಂದೊಮ್ಮೆ ಹೇಳಿದ್ದರು. ಜಿಲ್ಲೆಯನ್ನು ಸರಿಹೊತ್ತಿನ ರಾಜಕೀಯದ ಕಪಿಮುಷ್ಠಿಯಿಂದ ಹೊರತರಬೇಕೆನ್ನುವ ಮಾತು, ಜಿಲ್ಲೆ ಯನ್ನು ಯಾವ ದಿಕ್ಕಿನೆಡೆಗೆ ಒಯ್ಯಬೇಕೆಂಬುದನ್ನು ನಿರ್ದೇಶಿಸುತ್ತದೆ.
ಪರಂಪರೆಯಂತೆ ಎಲ್ಲ ಜಾತಿ-ಮತದವರು ಮನುಷ್ಯರೆಂಬ ನೆಲೆಯಲ್ಲಿ ಬಾಳಬೇಕಿರುವುದು ಜಿಲ್ಲೆಯ ತುರ್ತಾಗಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದ ವಾತಾವರಣ ರೂಪುಗೊಂಡು ಔನ್ನತ್ಯ ಕಾಣಲೆಂಬ ಆಶಯದೊಂದಿಗೆ ಜಿಲ್ಲೆಯ ಜನರೆಲ್ಲ ಒಟ್ಟಾಗಿ ಶ್ರಮಿಸಬೇಕಿದೆ. ಜನಪ್ರತಿನಿಧಿಗಳು ಸರಕಾರದಿಂದ ಸಾಕಷ್ಟು ಅನುದಾನ ತಂದು ಅಭಿವೃದ್ಧಿಗೆ ಕಂಕಣಬದ್ಧರಾಗಬೇಕಿದೆ; ಉತ್ತಮ ಆಸ್ಪತ್ರೆ, ಎಂಜಿನಿಯರಿಂಗ್-ವೈದ್ಯಕೀಯ ಕಾಲೇಜು, ವೈವಿಧ್ಯಮಯ ಉನ್ನತ ವ್ಯಾಸಂಗದ ಕೋರ್ಸುಗಳಿಗೆ ಬೇಕಾದ ಸೌಲಭ್ಯಗಳನ್ನು ಅವರು ಸೃಷ್ಟಿಸಬೇಕಿದೆ.
ಒಟ್ಟಾರೆಯಾಗಿ, ಒಂದು ಮಾದರಿ ಜಿಲ್ಲೆಯಾಗುವತ್ತ ಉತ್ತರ ಕನ್ನಡ ಅಭಿವೃದ್ಧಿ ಹೊಂದಲೆಂಬ ಕನವರಿಕೆ ಜಿಲ್ಲೆಯ ಜನರದ್ದು.