ವಾರೆ ನೋಟ
ನಾರಾಯಣ ರಾಯಚೂರ್
ಗಿರೀಶ್ ಕಾರ್ನಾಟ್, ಅನಂತ್‌ನಾಗ್, ಶಂಕರ್‌ನಾಗ್, ರಮೇಶ್ ಭಟ್, ಬಿ.ವಿ. ಕಾರಂತ್, ಜಿ.ವಿ. ಅಯ್ಯರ್, ಸಿಂಹ, ವಿಶ್ವೇಶ್ವರ ಭಟ್, ಜೋಗಿ ಹೀಗೆ ಅನೇಕ ಪ್ರತಿಭಾಪುಂಜಗಳ ಪ್ರೇರಕಶಕ್ತಿ ವೈಎನ್‌ಕೆ ಎಂಬ ವಂಡರ್! ಮೇ ತಿಂಗಳಲ್ಲಿ ಜನಿಸಿದ ಈ ‘ಮೇ’ಧಾವಿಯನ್ನು ನೆನೆದಾಗ ರೋಮಾಂಚನವಾಗು ತ್ತದೆ.
‘ಕ್ಯಾನ್ ಫೆಬ್ರವರಿ ಮಾರ್ಚ್?’ ಎಂದರೆ, ‘ನೋ, ಏಪ್ರಿಲ್ ಮೇ’ ಎಂದು ಚತುರೋತ್ತರ ನೀಡುವವರಿದ್ದಾರೆ. ಇಂತಹ ಅನೇಕಾನೇಕ ಚತುರೋಕ್ತಿ, ವ್ಯಂಗ್ಯ, ಶ್ಲೇಷೆ (ಪನ್) ಗಳಿಂದ ರಂಜಿಸುತ್ತಲೇ ಕೇಳುಗರಲ್ಲಿ ಮಿಂಚಿನ ಸಂಚಾರ ಮಾಡಿ ಹೊಸಹೊಳಹು ಮೂಡಿಸುತ್ತಿದ್ದವರು ವೈಎನ್‌ಕೆ. ನಿಜಕ್ಕೂ ಅವರೊಂದು ವಿಸ್ಮಯ! ಬದುಕು-ಸಾವು ಎರಡ ರಲ್ಲೂ!
ಅವರ ಸಾವು ಸಂಭವಿಸಿದ್ದು ೧೫ ಅಕ್ಟೋಬರ್, ೧೯೯೯ರಂದು. ನ್ಯೂಯಾರ್ಕ್‌ನಿಂದ ಬೆಂಗಳೂರಿಗೆ ಮರಳುತ್ತಿದ್ದಾಗ ವಾಯುಮಾರ್ಗದ ಅವರು ಅಸುನೀಗಿದ್ದು… ಭೂಮಿಯ ಮೇಲೂ ಅಲ್ಲ, ಆಗಸದಲ್ಲೂ ಅಲ್ಲ- ಅಂತರಿಕ್ಷದಲ್ಲಿ! ಇನ್ನು ಬದುಕು?- ಬಹು ರೋಚಕ, ವಿಸ್ಮಯ್ಮಯ! ಹುಟ್ಟಿದ್ದು ದೂರದ ಎಳಂದೂರು ಮೇ ೧೬, ಸಾವಿರದ ಒಂಭೈನೂರಾ ಇಪ್ಪತ್ತಾರು. ಬದುಕಿದ್ದರವರಿಗೀಗ ತೊಂಭತ್ತಾರು. ಇನ್ನು ನಾಲ್ಕು ವರ್ಷಕ್ಕೆ ನೂರು- ಜನ್ಮಶತ ಮಾನೋತ್ಸವ ಜೋರು!
ನಾನವರನ್ನು ಮೊದಲ ಭೇಟಿ ಮಾಡಿದ್ದು ೧೯೮೪-೮೫ರಲ್ಲಿ ಇರಬೇಕು. ಅದೇ ಆಗ ಕನ್ನಡ ಪತ್ರಿಕೋದ್ಯಮ ಡಿಪ್ಲೊಮಾ ಮುಗಿಸಿ, ರವೀಂದ್ರ ಕಲಾಕ್ಷೇತ್ರ ದಲ್ಲಿ ಹೊಸಹೆಜ್ಜೆಗಳನ್ನು ಹಾಕುತ್ತ ‘ಸೂತ್ರಧಾರ ವಾರ್ತಾಪತ್ರ’ ಎಂಬ ಪುಟ್ಟ ಮಾಸ ಪತ್ರಿಕೆಯನ್ನು ತರುತ್ತಿದ್ದ ದಿನಗಳವು. ಹೆಚ್ಚು ಮಾತೇನೂ ಇಲ್ಲ. ಕೈಗಿತ್ತ ಪತ್ರಿಕೆಯನ್ನು/ನನ್ನನ್ನು ನೋಡಿ, ಅದರಂದು ಅಂಕಣ ‘ಸುದ್ದಿ ಜೀವಿಗಳು’ ಅಂತ, ಅದನ್ನೊಮ್ಮೆ ಗಮನಿಸಿ ಮುಗುಳ್ ನಕ್ಕರಷ್ಟೆ. ಮುಂದೆ ನಮ್ಮ ಭೇಟಿ ಬ್ಯೂಗಲ್‌ರಾಕ್ ರಸ್ತೆಯ ‘ಲಿಪಿ’ ಮುದ್ರಣ ತಾಣದಲ್ಲಿ.
ಬಾ.ಕಿ.ನ ತರುತ್ತಿದ್ದ ವೈಎನ್‌ಕೆ ಪ್ರೇರಿತ/ಪ್ರಚೋದಿತ ‘ಗಾಂಧಿ ಬಜಾರ್’ ವಾರಪತ್ರಿಕೆಯಾಗಿ ಆರಂಭಗೊಂಡು ಮುಂದೆ ಮಾಸಿಕವಾದ ಬಲು ತಮಾಷೆಯ
ಪತ್ರಿಕೆ. ಅದರಲ್ಲ ಇರುತ್ತಿತ್ತು ಗಂಭೀರ ಲೇಖನ, ಹಾಸ್ಯ, ವಿಡಂಬನೆ, ‘ಕವಿ-ತೆಗಳು’ ಎಂಬ ಹಾಸ್ಯ ಹನಿಕಾವ್ಯ ಸಿಂಚನ. ಮುಂದೆ ಅದೇ ‘ಪದ್ಯ ಇಷ್ಟು ಲೈಟಾದರೆ ಹೇಗೆ ಸ್ವಾಮಿ’ ಆಗಿ ಪುಸ್ತಕ ರೂಪದಲ್ಲಿ ಬಂದು ಹೊಸ ಸಂಚಲನ ಮೂಡಿಸಿ ‘ಕವಿತೆ, ನೀನೇಕೆ ಪದಗಳಲ್ಲಿ ಅವಿತೆ?’ ಎಂಬ ಕಾವ್ಯದ
ಸುಂದರ ವ್ಯಾಖಾನಕ್ಕೆ ಮುನ್ನುಡಿಯಾಯಿತು!
ಆಗೆ ಬ್ಯಾಂಕುಗಳಿಗೆ ಶನಿವಾರ ಅರ್ಧದಿನ. ಮಧ್ಯಾಹ್ನ/ ಸಂಜೆ ವೈಎನ್‌ಕೆ ಜತೆ ಸಾಹಿತ್ಯ, ನಾಟಕ, ಸಿನಿಮಾ, ಸಭೆ, ಒಂದಷ್ಟು ವಾಕ್! ಜತೆಗಿಷ್ಟು ಚೇತೋ ಹಾರಿ ಟಾಕ್. ಒಮ್ಮೆ ಎಂಟಿಆರ್‌ಗೆ ವೈಎನ್‌ಕೆ ಜತೆ ಹೋದಾಗ ನಡೆದ ಪ್ರಸಂಗ. ರವೆ ಇಡ್ಲಿ, ಪೂರಿ ತಿಂದಾದ ಮೇಲೆ ವೇಟರ್ (ಎಂಟಿಆರ್‌ನಲ್ಲಿ
ಕಸ್ಟಮರ್ಸ್ ಅರ್ ದಿ ರಿಯಲ್ ವೇಟರ‍್ಸ್!- ಇದು ವೈಎನ್‌ಕೆ ಮಾಡಿದ ಜನಜನಿತ ಜೋಕ್!) ಮತ್ತೇನು ಕೊಡ್ಲಿ ಸಾರ್? ಎಂದು ಕೇಳಿದ್ದಕ್ಕೆ ವೈಎನ್‌ಕೆ ‘ಕಾಫಿ… ಬಿಸಿಬಿಸಿ ಆಗಿ ಚೆನ್ನಾಗಿರಬೇಕು’ ಅಂದ್ರು. ಮಾಣಿ ‘ಎ-ಒನ್, ಸಾರ್’ ಎಂದ. ಅದಕ್ಕೆ ವೈಎನ್‌ಕೆ ‘ಎ-ಒನ್ ಆಗಿರದಿದ್ದರೆ ಎ-ಟು!’ ಅಂದರು ಅಂತಹ ಪ್ರತ್ಯುತ್ಪನ್ನಮತಿ ಅವರು.
ಅವರೇ ಸೃಷ್ಟಿಸಿದ ಅವರ ಪ್ರಿಯಪಾತ್ರ- ಘಾ! ‘ಶೆಡ್ ನಲ್ಲಿದ್ದಾನೆ ಘಾ, ಅವನಿಗೇನೋ ರೋ-ಘಾ’. ಈ ಘಾ ಅಂದರೆ ಇಂಗ್ಲಿಷಿನ ಜಿಎಚ್‌ಎ ಎಏಅ ಅರ್ಥಾತ್ ೧) ಗುಂಡು ಹಾಕುವ ಆಸಾಮಿ ೨) ಗುಂಡು ಹಾಕದ ಆಸಾಮಿ. ನಾನು ಎರಡನೇ ‘ಘಾ’ ಆಗಿರುವುದರಿಂದ ಅವರ ಗುಂಡಾನುಭವಗಳ ಪರಿಚಯ ನನಗೆ ಕಡಿಮೆ, ಕ್ಷಮೆಯಿರಲಿ. ಅವರ ‘ಪದ್ಯ ಇಷ್ಟು ಲೈಟಾದರೆ ಹೇಗೆ ಸ್ವಾಮಿ’ ಕವನ ಸಂಕಲನದ ಬಿಡುಗಡೆಯಾಗಿದ್ದು ಕಲಾಕ್ಷೇತ್ರದ ವಿಶ್ರಾಂತಿ ಕೊಠಡಿಯಲ್ಲಿ. ಸಿ.ಆರ್. ಸಿಂಹ ವಿಶಿಷ್ಟ ಕಾವ್ಯವಾಚನದಲ್ಲಿ ಆಪ್ತ-ಸಮಾರಂಭದ ಮೂಲಕ ಬಿಡುಗಡೆ ಮಾಡಲು ನಾವೆ ಶ್ರಮವಹಿಸಿದ್ದು, ವೈಎನ್‌ಕೆ ಮೆಚ್ಚಿಕೊಂಡಿದ್ದು
ನೆನಪಾಗುತ್ತದೆ.
ಅದರಲ್ಲಿನ ಹಲವು ಕವನಗಳಿಗೆ ನಾನು ರಾಗ ಸಂಯೋಜನೆ ಮಾಡಿ ಅವರ ರೂಮಿನ- ಚೌಕ್ ರೂಮಿನ (ವೈಎನ್‌ಕೆ ಪ್ರಕಾರ ಹಗಲು ಅದು ‘ಚೌಕ್’
ರೂಮು, ರಾತ್ರಿಯಾದರೆ ‘ಗುಂಡು’ ರೂಮು) ಕೇಳಿಸಿದ್ದೆ, ಖುಷಿಯ ಮೆಚ್ಚುಗೆಯನ್ನೂ ಪಡೆದಿದ್ದೆ. ಬೀಚಿ ‘ಸುಧಾ’ದಲ್ಲಿ ಉತ್ತರಭೂಪ ಹೆಸರಿನಲ್ಲಿ ಬರೆಯು
ತ್ತಿದ್ದ ‘ನೀವು ಕೇಳಿದಿರಿ’ಯಂತೆ, ಬಿ.ವಿ. ವೈಕುಂಠರಾಜು ಅವರ ‘ವಾರಪತ್ರಿಕೆ’ಗೆ ವೈಎನ್‌ಕೆ ಮೂರ್ನಾಲ್ಕು ವರ್ಷ ‘ಉತ್ತರಕಾಂಡ’ ಅಂಕಣ ಬರೆದರು.
ಬಲು ಜನಪ್ರಿಯವಾದ ಅಂಕಣವದು. ಕಾರಣಾಂತರದಿಂದ ಬಿಡಬೇಕಾಗಿ ಬಂದಾಗ ಆ ಅವಕಾಶ ದೊರೆತದ್ದು ನನಗೆ. ಖುಷಿಯ ಜತೆ ಆತಂಕ ನನಗೆ-
ಮೊದಲಿನ ಜನಪ್ರಿಯತೆ ಉಳಿಸಿಕೊಳ್ಳಬನೇ? ಅಂತ. ಮುಂದೆ ಏಳೆಂಟು ವರ್ಷ ಆ ಅಂಕಣ ಎಂದಿನ ಪ್ರೀತಿ ಬೆಳೆಸಿಕೊಂಡು ಬಂದಾಗ ನೆಮ್ಮದಿ. ಪ್ರಜಾವಾಣಿಯಲ್ಲಿ ಸುಮಾರು ೪ ದಶಕ ಸೇವೆ ಸಲ್ಲಿಸಿದ್ದ ವೈಎನ್‌ಕೆ ‘ಬರೆದದ್ದಕ್ಕಿಂತಲೂ ಬರೆಸಿದ್ದೇ ಹೆಚ್ಚು’ ಎಂಬುದನ್ನು ಸುಳ್ಳಾಗಿಸಿದ್ದು ಉದಯವಾಣಿಯಲ್ಲಿ ಅವರ ‘ವಂಡರ್ ಕಣ್ಣು’ ಅಂಕಣ ಆರಂಭವಾದ ಮೇಲೆಯೇ. ಮುಂದೆ ಅವರು ಕನ್ನಡಪ್ರಭದ ಸಂಪಾದಕರಾಗಿ ಸುಮಾರು ಹತ್ತು ವರ್ಷಗಳ ಕಾಲ ನಿರಂತರವಾಗಿ ಈ ಅಂಕಣವನ್ನು ವ್ರತದಂತೆ ಬರೆದರು.
ವಿಶ್ವ, ರಾಷ್ಟ್ರ, ರಾಜ್ಯ ಎಲ್ಲಿ ಒಳ್ಳೆಯದು ಕಾಣುತ್ತದೋ ಅದನ್ನು ಪರಿಚಯಿಸುತ್ತ, ವಿಶ್ಲೇಷಿಸುತ್ತ, ಕಚಗುಳಿಯಿಡುತ್ತಲೇ ಅರಿವು ಹೆಚ್ಚಿಸುತ್ತ
ಸಾಗಿದರು. ಅದರ ಫಲವೇ ಇಂದು ‘ವಂಡರ್’ ಸರಣಿಯ ಹತ್ತಾರು ಪುಸ್ತಕಗಳು eನದಾಹಿಗಳಿಗೆ ಸಿಗುವಂತಾಗಿರುವುದು. ಹೊಸ ಕಾವ್ಯ, ಹೊಸ ನಾಟಕ, ಹೊಸ ಅಲೆಯ ಚಿತ್ರ, ಹೊಸ ಕಲಾಕೃತಿ, ಹೊಸ ಸಂಗೀತ ಹೀಗೆ ಹಲವು ಹೊಸತುಗಳ ಹಿಂದಿನ ಹರಿಕಾರ ವೈಎನ್‌ಕೆ ಎಂದು ನಿರ್ವಿವಾದವಾಗಿ,
ನಿಸ್ಸಂಶಯವಾಗಿ ಹೇಳಬಹುದು. ಅವರ ಅಪಾರ ಓದು, ಅಪರಿಮಿತ ಗ್ರಹಿಕೆ, ನೆನಪಿನ ಶಕ್ತಿ, ಚತುರಮತಿ ಇವು ಸಾಹಿತ್ಯ-ಸಾಂಸ್ಕೃತಿಕ ಲೋಕದಲ್ಲಿ ಅತಿವಿಶಿಷ್ಟ ಸ್ಥಾನವನ್ನು ಕಲ್ಪಿಸಿದ್ದುಂಟು.
ಅವರಿಗೆ ಹಾಸ್ಯ, ಜೋಕು, ರಸಪ್ರಸಂಗ, ಪನ್‌ಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವರ ಪ್ರಿಯ ಅಂಕಣ ಕೊನೆಗೊಳ್ಳುತ್ತಿದ್ದುದು ‘ಕೊನೆ ಸಿಡಿ’ ಎಂಬ ಹಾಸ್ಯ ತುಣುಕಿನಿಂದ. ಅವರದೇ ಆದ ಒಂದಷ್ಟು ಕೊನೆಸಿಡಿಯ ತುಣುಕುಗಳು ಈಗ ನಿಮ್ಮ ಮಡಿಲಿಗೆ: ಶತಾಯುಷಿಯನ್ನು ಸಂದರ್ಶಿಸಿದ ಒಬ್ಬ ‘ನಿಮ್ಮ
ದೀರ್ಘಾಯುಷ್ಯದ ಗುಟ್ಟೇನು?’ ಎಂದ. ಅದಕ್ಕೆ ಶತಾಯುಷಿ, ‘ನಾನು ನೂರು ವರ್ಷದ ಹಿಂದೆ ಹುಟ್ಟಿದ್ದು’ ಎನ್ನುವುದೇ!
ಒಬ್ಬ ವ್ಯಕ್ತಿ ಬೆಂಗಳೂರಲ್ಲಿ ಟ್ರೈನ್ ಹತ್ತಿ ಮುಂದಿನ ಸ್ಟೇಷನ್‌ಗೆ ಟಿಕೆಟ್ ತಗೊಂಡ. ಅಲ್ಲಿ ಇಳಿದು ಮುಂದಿನ ಸ್ಟೇಷನ್‌ಗೆ… ಅಲ್ಲಿ ಇಳಿದು ಮುಂದಿನ ಸ್ಟೇಷನ್‌ಗೆ… ಹೀಗೇ ಮಾಡ್ತಿದ್ದ. ಪಕ್ಕದವನು ಕೇಳಿದ ‘ಇದೇನು ಹೀಗೆ?’. ಅದಕ್ಕೆ ಆತ, ‘ನಾನು ಹಾರ್ಟ್ ಪೇಶೆಂಟು, ಯಾವಾಗ ಟಿಕ್‌ಟಿಕ್ ಸ್ಟಾಪ್ ಆಗುತ್ತೋ ಗೊತ್ತಿಲ್ಲ. ಸುಮ್ಮನೆ ಮೈಸೂರಿಗೇ ಅಂತ ಟಿಕೆಟ್ ತಗೊಂಡು ಯಾಕೆ ವೇಸ್ಟ್ ಮಾಡ್ಬೇಕೂಂತ’!!
ಮೃಗಾಲಯದಲ್ಲಿ ಭಾರಿ ನೀರಾನೆಯನ್ನ ಕಂಡ ಮಹಿಳೆಯೊಬ್ಬಳು ‘ಈ ನೀರಾನೆ ಗಂಡೋ? ಹೆಣ್ಣೋ?’ ಅಂದಳು. ಅದಕ್ಕೆ ಮೃಗಾಲಯದ ಆಸಾಮಿ ‘ಅದೆಲ್ಲ ನಿಮಗ್ಯಾಕೆ? ನೀವೇನು ನೀರಾನೆಯಲ್ಲವಲ್ಲ?’ ಎನ್ನೋದೇ! ಈತ: ‘ಏನು ಹನುಮಂತರಾಯರೇ ಬಹಳ ಬದಲಾಯಿಸಿದ್ದೀರಿ?’. ಆತ: ‘ರೀ ನಾನು ಹನುಮಂತರಾಯ ಅಲ್ಲ’. ಈತ: ‘ಅರೆ, ಹಾಗಾದರೆ ಹೆಸರೂ ಬದಲಾಯಿಸಿದ್ದೀರಿ?! ವಯಸ್ಸಾದರೂ ಯುವಕನಂತೆ ಕಾಣಿಸಲೆತ್ನಿಸುತ್ತಿದ್ದ ವ್ಯಕ್ತಿಯನ್ನು ಕುರಿತು ಒಬ್ಬ ‘ನಿಮ್ಮ ಯೌವನದ ಗುಟ್ಟೇನು?’ ಎಂದು ಕೇಳಿದ.
ಅದಕ್ಕೆ ಆತ ‘ವಯಸ್ಸು’ ಎಂದ. ಈತ ‘ಎಷ್ಟು ವಯಸ್ಸು?’ ಎಂದು ಕೇಳಿದ್ದಕ್ಕೆ ಆತ ‘ಅದೇ ಗುಟ್ಟು’ ಎಂದ! ರಷ್ಯಾ, ಕೆನಡ, ಅಮೆರಿಕ, ಯುರೋಪ್ ದೇಶಗಳಿಗೆ 70-80ರ ದಶಕಗಳಲ್ಲಿಯೇ ಭೇಟಿಕೊಟ್ಟಿದ್ದ ವೈಎನ್‌ಕೆ ‘ಹೈಡ್ ಪಾರ್ಕ್’ ಎಂಬ ಸುಂದರ ಪ್ರವಾಸ ಕಥನ, ‘ಇದು ಸುದ್ದಿ, ಇದು ಸುದ್ದಿ’, ‘ಕಾಲಕ್ರೀಡೆ’ ನಾಟಕ, ‘ಮೊಮ್ಮಗಳ ಮುಯ್ಯಿ’, ‘ವಂಡರ್’ ಸರಣಿಯ ಹತ್ತು ಕೃತಿಗಳು ಹಾಗೂ ‘ಪದ್ಯ ಇಷ್ಟು ಲೈಟಾದರೆ ಹೇಗೆ ಸ್ವಾಮಿ’ ಕವನ ಸಂಕಲನ
ನೀಡಿದ್ದಾರೆ. “ವಿನೋದ ಪ್ರಜ್ಞೆ, ಕಾವ್ಯಪ್ರೌಢಿಮೆಯ ಗುಣ ಹೊಂದಿದ್ದ ವೈಎನ್‌ಕೆ ಎಂದೋ ಕವನಗಳನ್ನು ಬರೆಯಬಹುದಿತ್ತು.
ತಡವಾಗಿಯಾದರೂ ಸರಿ ಅವರು ‘ಪದ್ಯ ಇಷ್ಟು….’ ಸಂಕಲನದ ಮೂಲಕ ಆ ಕೊರತೆ ನೀಗಿಸಿದ್ದಾರೆ. ರಸಿಕರನ್ನು ಕವಿತ್ವಕ್ಕೆ ಎಳೆಯುವುದೇ ಇಲ್ಲಿನ ಕವಿತೆಗಳ ಶ್ರೇಷ್ಠ ಸಾಧನೆಯಾಗಿದೆ” ಎನ್ನುತ್ತಾರೆ ಗಿರೀಶ್ ಕಾರ್ನಾಡರು. ಕಾರ್ನಾಡರ ಜನ್ಮದಿನವೂ ಮೇ ತಿಂಗಳ- ಮೇ ೧೯, ಸಾವಿರದ ಒಂಭೈನೂರಾ ಮೂವತ್ತೆಂಟು. ಗಿರೀಶ್, ಅನಂತ್‌ನಾಗ್, ಶಂಕರ್‌ನಾಗ್, ರಮೇಶ್‌ಭಟ್, ಬಿ.ವಿ. ಕಾರಂತ್, ಜಿ.ವಿ. ಅಯ್ಯರ್, ಸಿಂಹ, ಎಸ್.ಜಿ. ವಾಸುದೇವ್, ವಿಶ್ವೇಶ್ವರ ಭಟ್, ಜೋಗಿ ಹೀಗೆ ಅನೇಕಾನೇಕ ಪ್ರತಿಭಾಪುಂಜಗಳ ಪ್ರೇರಕಶಕ್ತಿ ವೈಎನ್‌ಕೆ ಎಂಬ ವಂಡರ್!
ಮೇ ತಿಂಗಳಲ್ಲಿ ಜನಿಸಿದ ಈ ‘ಮೇ’ಧಾವಿಯನ್ನು ನೆನೆದಾಗ ಈ ಎಲ್ಲ ನೆನಪುಗಳು ಧಾವಿಸಿ ನುಗ್ಗಿದವು! ಅಂದಿಗೂ, ಇಂದಿಗೂ, ಎಂದಿಗೂ ಪ್ರಸ್ತುತರಾಗಬಲ್ಲ
ವೈಎನ್‌ಕೆ, ಬದುಕಿನ ಚೇತೋಹಾರಿ ಕ್ಷಣಗಳಲ್ಲ ಎದುರಾಗುತ್ತಲೇ ಇರುತ್ತಾರೆ.