Sunday, 24th November 2024

ಕ್ಷೇತ್ರಪಾಲ ದೇವರ ಮೊಸಳೆಗೆ ವಿದಾಯ

ಪವನ್‌ ಕುಮಾರ ಆಚಾರ್ಯ

ಕ್ಷೇತ್ರಪಾಲನ ಅಬ್ಬರ ನೋಡಿ ಬೆಚ್ಚಿಬಿದ್ದ ರೋಮಾಂಚನದ ಅನುಭವ ಕಾಂತಾರ ಸಿನೆಮಾದಲ್ಲಿದೆ. ಕ್ಷೇತ್ರಪಾಲನ ಮಹತ್ವ, ಶಕ್ತಿಯನ್ನು ಇಂದಿಗೂ ಅರಿಯುತ್ತಲೇಇದ್ದೇವೆ. ತುಳುನಾಡಿನ ಮೂಲೆ ಮೂಲೆಗಳಲ್ಲಿ ಕೇಳಿ ಬರುವ ‘ಪಂಜುರ್ಲಿ ಬುಡುಂಡಲಾ, ಗುಳಿಗೆ ಬುಡಯೆ’ ಎಂಬ ಮಾತಿನ ವಿಸ್ಮಯ ಹುಟ್ಟು ಹಾಕಿ ವಿಶ್ವದೆಲ್ಲಡೆ ಪಸರಿಸಿದಕ್ಕಾಗಿ ನಿರ್ದೇಶಕ ರಿಷಾಬ್ ಹಾಗು ತಂಡಕ್ಕೆ ಅಭಿನಂದಿಸಲೇ ಬೇಕು.

ದೇವರ ಗರ್ಭಗುಡಿಯೊಳಗಿನ ಸಮಸ್ಯೆಯನ್ನು ಜಾತ್ರೆಯ ಅಂತ್ಯದಲ್ಲಿ ಕೋಲದಲ್ಲಿ ದೈವಗಳು ಪ್ರಶ್ನೆ ಮಾಡಿದ ಉದಾಹರಣೆಗಳು ಬಹಳಷ್ಟಿವೆ.ಇದೇ ರೀತಿ ವಿಷ್ಣುಮೂರ್ತಿ ದೈವವನ್ನು ಕಾಣುವ ವಾಡಿಕೆ ಕಾಸರಗೋಡು ಮುಂತಾದ ಪ್ರದೇಶಗಳಲ್ಲಿ ನೋಡಬಹುದು. ಇಂಥ ಶಕ್ತಿಗಳು ಕ್ಷೇತ್ರದ ಸಮಗ್ರ
ಅಭಿವೃದ್ಧಿಯ ಹರಿಕಾರರು ಎಂದೂ ಹೇಳಬಹುದು. ಇಂಥ ಘನ ಹೊಣೆಗಾರಿಕೆ ಹೊತ್ತು ಕಳೆದ  ಏಳೆಂಟು ದಶಕಗಳಿಂದ ಸರೋವರ ಪುಣ್ಯಕ್ಷೇತ್ರವನ್ನು ಕಾಪಿಡುತ್ತಾ ಬಂದ ಅಪರೂಪದ ಶಕ್ತಿ ಇದೇ ಆದಿತ್ಯವಾರ ಇಹಲೋಕ ತ್ಯಜಿಸಿತು. ಅದೇ ನಿಮಗೆಲ್ಲ ಈಗಾಗಲೇ ಗೊತ್ತಿರುವ, ಇತಿಹಾಸ ಪ್ರಸಿದ್ಧ ಸರೋವರ ಕ್ಷೇತ್ರ ಕಾಸರಗೋಡಿನ ಅನಂತಪುರ ದೇವಸ್ಥಾನದ ‘ಬಬಿಯಾ’ ಮೊಸಳೆ.

ಪೆಟ್ ಮೊಸಳೆ

ಸಾವಿರಾರು ಭಕ್ತರು ಬಬಿಯಾಳ ಬಳಿಗೆ ಹೋದರೂ ಯಾರಿಗೂ ತೊಂದರೆ ಕೊಟ್ಟಿಲ್ಲ. ಕೆರೆಯ ಜಲಚರಗಳಿಗಾಗಲಿ, ಪ್ರಾಣಿ ಪಕ್ಷಿಗಳಿಗೆ ಹಲ್ಲೆ ಮಾಡಿಲ್ಲ ಎಂಬುವುದು ವಿಶೇಷ. ಬೆಳಗ್ಗೆ, ಸಂಜೆ ದೇವರ ಪ್ರಸಾದವನ್ನು ಕೈಯಾರೆ ಅರ್ಚಕರೇ ನೀಡುತ್ತಾರೆ. ಅರ್ಚಕರು ಬಾ ಎಂದು ಕರೆದಾಗ ಬರುವ, ಹೋಗು ಎಂದು ಹೇಳಿದಾಗ ಅದೇ ಧನ್ಯತಾ ಭಾವದಿಂದ ನೀರಿಗಿಳಿಯುತ್ತಿತ್ತು. ಈ ಮೊಸಳೆ ಇತರ ಮೊಸಳೆಗಿಂತ ವಿಭಿನ್ನ ಎನ್ನುವುದಕ್ಕೆ ಇದೊಂದು ಉದಾಹರಣೆ ಸಾಕು. ಒಂದೂವರೆ ವರ್ಷದ ಹಿಂದೆಯೂ ಬಬಿಯಾ ಸತ್ತಿದ್ದಾಳೆ ಎಂದು ಫೇಕ್ ನ್ಯೂಸ್ ಹರಿದಾಡಿತ್ತು. ಆದರೆ ಈಗಿನ ಸುದ್ದಿ ಬಬಿಯಾಳ ವಿದಾಯವನ್ನು ಧೃಡಪಡಿಸಿದೆ. ಮತ್ತೆ ಸರೋವರದಲ್ಲಿ ಬಬಿಯಾಳ ಪುನರ್ ಜನ್ಮ ಯಾವಾಗ ಎಂಬುದೀಗ ಭಕ್ತರ ಕಾತುರ, ಪ್ರಾರ್ಥನೆ.

ದೇವಸ್ಥಾನದ ವಿಶೇಷತೆ
ಅನಂತಪುರ ದೇವಸ್ಥಾನವು ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಿಂದ ಸ್ವಲ್ಪವೇ ದೂರದಲ್ಲಿದೆ. ಇದು ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದಿದೆ. ಆದರಿದು ಮಾನವ ನಿರ್ಮಿತ ಕೆರೆಯಲ್ಲ ಎಂಬುದೇ ವಿಶೇಷ. ಇಲ್ಲಿ ಶ್ರೀ ಅನಂತ ಪದ್ಮನಾಭ ಸ್ವಾಮಿ ವಿರಾಜಮಾನ. ಶ್ರೀಮಂತ ದೇವಸ್ಥಾನ ವೆಂದೇ ಪ್ರಖ್ಯಾತಗೊಂಡ ತಿರುವನಂತಪುರ ಪದ್ಮನಾಭಸ್ವಾಮಿ ದೇವಸ್ಥಾನದ ಮೂಲ ಸ್ಥಾನವೂ ಇದೇ ಅನಂತಪುರ ಎಂಬ ಮಾತಿದೆ. ಅನೇಕ ವರ್ಷಗಳ ಹಿಂದೆ ಇಲ್ಲಿ ಪೂಜೆ ಮಾಡುತ್ತಿರುವ ಪುರೋಹಿತರಿಂದ ಕುಪಿತನಾದ ದೇವರು ಜ್ಯೋತಿ ರೂಪವಾಗಿ ಸುರಂಗ ಮಾರ್ಗದಿಂದ ತಿರುವನಂತಪುರ ಸೇರಿದ ಎಂಬ ಪುರಾಣವಿದೆ. ಅನಂತಪುರದಲ್ಲಿ ದೇವರು ಪದ್ಮಾಸನದಲ್ಲಿ ಕುಳಿತದ್ದು, ತಿರುವನಂತಪುರದಲ್ಲಿ ಶಯನಾವಸ್ಥೆಯಲ್ಲಿದ್ದಾಣೆ. ಅನಂತಪುರ ದೇವಸ್ಥಾನಕ್ಕೆ ೩೫೦೦ ವರ್ಷದ ಇತಿಹಾಸವಿದೆ.

ಮತ್ತೆ ಹುಟ್ಟಿಬಂದ ಮಕರ
ಅನಂತಪುರ ಬಬಿಯಾಳ ಬಗ್ಗೆ ಹೇಳಲು ಬಹಳಷ್ಟಿದೆ. ಅಂದೊಮ್ಮೆ ೧೯೪೫ರಲ್ಲಿ ಬ್ರಿಟೀಷ್ ಅಧಿಕಾರಿಯಿಂದ ದೇವಸ್ಥಾನದಲ್ಲಿದ್ದ ಮೊಸಳೆಯನ್ನು ಗುಂಡಿಟ್ಟು ಕೊಲ್ಲಲಾಗಿತ್ತಂತೆ. ಅದಾದ ಎರಡು ಮೂರು ದಿನಗಳ ಬಳಿಕ ಇದೇ ಚಿಕ್ಕ ಬಬಿಯಾ ಅದೇ ಸ್ಥಾನದಲ್ಲಿ ಮತ್ತೆ ಪ್ರತ್ಯಕ್ಷಗೊಂಡಳು ಎಂದು ಹೇಳುತ್ತಾರೆ. ಹೆಚ್ಚಾಗಿ ಬಬಿಯಾ ನೀರಿನಲ್ಲೇ ಇರುತ್ತಿದ್ದರೂ, ನಿವಾಸಿಗಳು ಭಕ್ತರು ಆವಾಗ  ಮೇಲೆದ್ದು ಬಂದು, ದೇವಸ್ಥಾನದ ಗರ್ಭಗುಡಿಯ ದ್ವಾರ ದಲ್ಲೋ, ಅದರ ಸುತ್ತಲೂ ಓಡಾಡುತ್ತಿದ್ದಳು. ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಮೇಲೆ ಬಂದು ಮಲಗುವುದು ಹಲವರು ನೋಡಿದ್ದಿದೆ.

ದೈವತ್ವ ಪ್ರಭಾವ!?
ಸಹಜವಾಗಿ ಕ್ರೂರ ಪ್ರಾಣಿಯ ಪಟ್ಟಿಗೆ ಸೇರುವ ಮಾಂಸಾಹಾರಿ ಮೊಸಳೆಗಳ ಪೈಕಿ ಬಬಿಯಾ (ಸಸ್ಯಾಹಾರಿ ಮೊಸಳೆ) ನಿಜಕ್ಕೂ ದೈವಿಕ ಶಕ್ತಿ ಸಂಪನ್ನಳು. ದೇವಸ್ಥಾನದ ಅನ್ನಪ್ರಸಾದ ಸ್ವೀಕರಿಸಿಕೊಂಡೇ ಬ್ರಿಟೀಷರ ಕಾಲದಿಂದಲೂಅನಂತಪುರ ಕ್ಷೇತ್ರದ ಕ್ಷೇತ್ರಪಾಲನಂತೆ ವಿಜೃಂಭಿಸಿ, ‘ದೇವರ ಮೊಸಳೆ’ ಎಂದೇ
ಖ್ಯಾತಿ ಪಡೆದಿತ್ತು.

ಮಾಂಸಾಹಾರಿ/ ಸಸ್ಯಾಹಾರಿ?
ಬಬಿಯಾಳ ಮರಣಾ ನಂತರ ಸಾಮಾಜಿಕ ಜಾಲತಣಗಳಲ್ಲಿ ಈ ಮೊಸಳೆ ಶುದ್ಧ ಸಸ್ಯಹಾರಿಯೇ, ಮಾಂಸಹಾರಿಯೇ ಎಂದು ಚರ್ಚೆ ನಡೆಯುತ್ತಿದೆ. ಹಿಂದೆ ಹರಕೆಯ ಕೋಳಿ ನೀಡುತ್ತಿದ್ದರು ಎಂಬ ಮಾತುಗಳು ಕೇಳಿ ಬರುತ್ತಿದೆ. ಏನೇ ಆದರೂ ಈ ಶುದ್ಧ ಸಸ್ಯಹಾರಿಯಾಗಿತ್ತು ಎಂಬ ಸತ್ಯವನ್ನು ಯಾರಿಂದಲೂ ಅಲ್ಲಗಳೆಯಲಾಗದು. ಯಾವುದೇ ಜೀವಿಗೂ ತೊಂದರೆ ಕೊಡದೆ ಏಳೆಂಟು ದಶಕಗಳಿಂದ ಸರೋವರದಲ್ಲಿ ವಿಹರಿಸುತ್ತಿದ್ದವಳು ಬಬಿಯಾ. ಈ ಬಗ್ಗೆ ಕ್ಷೇತ್ರ ಸಮೀಪವೇ ಇದ್ದಂತವರು, ಕ್ಷೇತ್ರದ ಭಕ್ತರಿಗೆ ಯಾವುದೇ ಅನುಮಾನವಿಲ್ಲ, ಉಳಿದವರದ್ದೇ ಕೊಂಕು!