Friday, 22nd November 2024

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮತದಾನ ಆರಂಭ

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಮತದಾನ ಆರಂಭ ವಾಗಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ಕಾಂಗ್ರೆಸ್ ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯುತ್ತಿದೆ. 9,000 ಕ್ಕೂ ಹೆಚ್ಚು ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ(ಪಿಸಿಸಿ) ನಾಯಕರು ಸುಮಾರು 24 ವರ್ಷಗಳ ಬಳಿಕ ಗಾಂಧಿಯೇತರ ಅಭ್ಯರ್ಥಿಯನ್ನು ಚುನಾ ಯಿಸಲು ಮತ ಚಲಾಯಿಸುವ ನಿರೀಕ್ಷೆಯಿದೆ.

ಖರ್ಗೆ ಅವರು “ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವಿಕೆ” ನಲ್ಲಿ ನಂಬಿಕೆ ಹೊಂದಿದ್ದಾರೆ ಹಾಗೂ ಗಾಂಧಿ ಕುಟುಂಬದ “ಮಾರ್ಗದರ್ಶನ” ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ.

ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕೊನೆಯ ಕ್ಷಣದಲ್ಲಿ ರೇಸ್‌ನಿಂದ ಹಿಂದೆ ಸರಿದ ನಂತರ ಖರ್ಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದರು.

ಎಐಸಿಸಿ ಸಂವಹನ ಉಸ್ತುವಾರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುತ್ತಿರುವ ಏಕೈಕ ರಾಜಕೀಯ ಪಕ್ಷ ಕಾಂಗ್ರೆಸ್ ಎಂದು ಜೈರಾಮ್ ರಮೇಶ್ ಮತ ಚಲಾಯಿಸಿದ ನಂತರ ಹೇಳಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತದಾನ ಮಾಡಲಿದ್ದಾರೆ. ಛತ್ತೀಸ್‌ಗಢದಲ್ಲಿ ಮತದಾನ ಆರಂಭವಾಗಿದ್ದು, ಪಿಸಿಸಿ ಮುಖ್ಯಸ್ಥ ಮೋಹನ್ ಮಾರ್ಕಂ ಮೊದಲ ಮತ ಚಲಾಯಿಸಿದ್ದಾರೆ.