Sunday, 24th November 2024

ನಾವೇಕೆ ಮಕ್ಕಳಿಗೆ ಅಷ್ಟೊಂದು ಬಯ್ಯುತ್ತೇವೆ ?

ಶಿಶಿರ ಕಾಲ

shishirh@gmail.com

ಬಯ್ಯುವುದು, ಹೊಡೆಯುವುದು ಇವೆಲ್ಲ ಪಾಲಕರಾದವರ ಪ್ರೀತಿಯ, ಕರ್ತವ್ಯದ ಸಂಕೇತವೆಂದು ನಂಬಿಕೊಂಡ ದೊಡ್ಡ ವರ್ಗವೇ ಇದೆ. ಆದರೆ ಶಿಕ್ಷಿಸುವುದು- ಪ್ರೀತಿಯ, ಜವಾಬ್ದಾರಿಯ ಹೆಸರಿನಲ್ಲಿ ಬಹುತೇಕ ಪಾಲಕರು ಮಾಡುವ ಶೋಷಣೆ. ಇದು ದಾಂಡಿಗನು ಕೃಶಕಾಯದವನ ಮೇಲೆ ಮಾಡುವ ದೌರ್ಜನ್ಯಕ್ಕಿಂತ ಭಿನ್ನವಾದದ್ದೇನಲ್ಲ.

Your children are not your children. They are sons and daughters of Life’s longing for itself. They come through you but not from you, and though they are with you yet they belong not to you. -Kahlil Gibran.

ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, ಅವರು ನಿಮ್ಮಿಂದಲೇ ಬಂದಿರಬಹುದು ಆದರೆ ನೀವು ಅವರ ಮಾಲೀಕರಲ್ಲ. ನೀವು ನಿಮ್ಮ ಮಕ್ಕಳಿಗೆ ಪ್ರೀತಿಯನ್ನು ಕೊಡಬಹುದು ಆದರೆ ವಿಚಾರಗಳನ್ನಲ್ಲ. ವಿಚಾರ ಅವರದೇ ಸ್ವಂತದ್ದು. ಅದರ ಒಡೆತನ ಅವರಲ್ಲಿಯೇ ಇರಬೇಕು. ನೀವು ಮಕ್ಕಳ ದೇಹವನ್ನು ಸಾಕುತ್ತಿರಬಹುದು, ಆದರೆ ಅವರ ಆತ್ಮಕ್ಕೆ ನಿಮ್ಮ ಹಂಗಿಲ್ಲ. ಅದು ಸ್ವತಂತ್ರ. ಅವರ ಆತ್ಮ ನಾಳಿನ ಮನೆಯಲ್ಲಿ ಬದುಕುತ್ತಿರುತ್ತದೆ.

ನೀವು ಅದರೊಳಕ್ಕೆ ಹೊಕ್ಕಲು ನಿಮ್ಮ ಕನಸಿನಲ್ಲೂ ಸಾಧ್ಯವಿಲ್ಲ. ನೀವು ಮಕ್ಕಳಾಗಬಹುದು, ಅವರಂತೆ ಬದುಕಬಹುದು, ಆದರೆ ನಿಮ್ಮಂತೆ, ನೀವಂದುಕೊಂಡಂತೆ ಅವರಾಗಬೇಕೆಂದು ಬಯಸುವಂತಿಲ್ಲ. ನೀವು ಬಿಲ್ಲಿನಂತೆ, ಮಕ್ಕಳು ಬಿಟ್ಟ ಬಾಣದಂತೆ. ಬಾಣ ಬಿಲ್ಲಿಗೆ ಅಂಟಿಕೊಂಡಿದ್ದರೆ ಅದೊಂದು ಕೋಲು ಮಾತ್ರ. ಕೋಲು ಬಾಣವಾಗಿ ಗುರಿ ಮುಟ್ಟುವಾಗ ಬಿಲ್ಲು ಬಾಗಲೇಬೇಕು. ಕಹ್ಲಿಲ್ ಗಿಬ್ರಾನ್‌ರ ಈ ಮಾತುಗಳು ಬದುಕಿನೆಡೆಗೆ, ಮಕ್ಕಳನ್ನು ನಾವು ನೋಡುವ ರೀತಿಯನ್ನೇ ಬದಲಿಸಿಬಿಡುತ್ತವೆ.

ಮಕ್ಕಳನ್ನು ನಾವೇಕೆ ಬಯ್ಯುತ್ತೇವೆ? ಪ್ರಶ್ನೆ, ಉತ್ತರ ಎರಡೂ ಬಹಳ ಸರಳ ಅಲ್ಲವೇ? ಅವರಿಗೆ ಒಳ್ಳೆಯದಾಗಲಿ, ಒಳ್ಳೆಯ ಹಾದಿ ಹಿಡಿಯಲಿ ಇತ್ಯಾದಿ. ‘ಆತ್ಮಾವೈ ಪುತ್ರನಾಮಾಸಿ’ ಎನ್ನುವ ಮಾತಿದೆ. ಪುತ್ರನೆಂದರೆ ಕೇವಲ ಗಂಡುಮಗುವೇ ಆಗಬೇಕೆಂದಿಲ್ಲ, ಮಗಳೂ ಆಗಿರಬಹುದು ಎನ್ನುವ ಪ್ರಬುದ್ಧತೆ ಈಗ ನಮ್ಮಲ್ಲಿದೆ. ಆದರೆ ಈ ಮಾತನ್ನು ‘ತನ್ನ ಆತ್ಮವೇ ತನ್ನ ಮಗ, ಮಗಳು’ ಎನ್ನುವ ಮಾಲೀಕತ್ವದ ಧೋರಣೆಯಲ್ಲಿ ನೋಡುವುದು ತಪ್ಪು. ಇಲ್ಲಿ ತಂದೆ ತಾಯಿ ಸ್ವಂತ ಆತ್ಮಕ್ಕೆ, ಅದರಾಚೆ ಪರಮ ಆತ್ಮಕ್ಕೆ ಕೊಡುವ ಸ್ಥಾನವನ್ನು ಮಕ್ಕಳಿಗೆ ಕೊಡಬೇಕು ಎನ್ನುವುದು ಸೂಕ್ಷ್ಮತೆ.

‘ಲಾಲಯೇತ್ ಪಂಚವರ್ಷಾಣಿ, ದಶವರ್ಷಾಣಿ ತಾಡಯೇತ್, ಪ್ರಾಪ್ತೇಷು ಷೋಡಶೇ ವರ್ಷೇ ಪುತ್ರಂ ಮಿತ್ರ ವದಾಚರೇತ್’ ಹೀಗೊಂದು ಸಂಸ್ಕೃತ ಸುಭಾಷಿತವಿದೆ. ಸುಭಾಷಿತ ಯಾವತ್ತೂ ಸತ್ಯ, ಆದರೆ ಈ ಸುಭಾಷಿತ ಇಂದು ಔಟ್‌ಡೇಟೆಡ್ ಎಂದೆನಿಸುತ್ತದೆ. ಏಕೆಂದರೆ ಇಂದಿನ ಮಕ್ಕಳು ಬೆಳೆಯುವ, ತಮ್ಮ ಪರಿಸರವನ್ನು ಅರಿಯುವ ವೇಗ ಜಾಸ್ತಿ. ಮೊದಲೆಲ್ಲ ಪ್ರಬುದ್ಧತೆಗೆ 16 ಆದರೂ ದಾಟಬೇಕಿತ್ತು. ಆದರೆ ಅಂಥ ಪ್ರಬುದ್ಧತೆಯನ್ನು ಇಂದು ೧೦ ವರ್ಷಕ್ಕೇ ಮಕ್ಕಳು ಸಾಽಸಿ ಬಿಡು ತ್ತಾರೆ. ಇಂದಿನ ದಿನದಲ್ಲಿ ಜನರೇಷನ್ ಗ್ಯಾಪ್- ಪೀಳಿಗೆಯ ಅಂತರ ಹಿಂದೆಂದಿಗಿಂತ ಹೆಚ್ಚು.

ಒಂದೂವರೆ ದಶಕದ ಲೆಕ್ಕದಲ್ಲಿ ಜನರೇಷನ್ ಅನ್ನು ವಿಂಗಡಿಸುವುದಿದೆ. 1946-64ರ ನಡುವೆ ಹುಟ್ಟಿದವರು ಬೂಮರ್ ಜನರೇಷನ್. 1965-79 ಜನರೇಷನ್ ಎಕ್ಸ್. 1980-94 ಜನರೇಷನ್ ವೈ.1995-2009 ಜನರೇಷನ್ ಝಡ್, ನಂತರದ್ದು ಜನರೇಷನ್ ಅಲಾ. ಸಾಮಾನ್ಯವಾಗಿ ಒಂದಿಡೀ ಪೀಳಿಗೆಯನ್ನು ಉದ್ದೇಶಿಸಿ ಹೇಳುವಾಗ ‘ಈ ಜನರೇಷನ್‌ನವರು ಹೀಗೆ, ಹೀಗಿದ್ದಾರೆ, ಈ ರೀತಿ ವಿಚಾರ ಮಾಡುತ್ತಾರೆ’ ಎಂಬಿತ್ಯಾದಿ ಬಳಕೆಯಿದೆ.

ಇದೊಂದು ತೀರಾ ಸ್ಥೂಲವಾಗಿ ನೋಡುವ ಕೆಲಸ. ಹಾಗಂತ ಈ ಜನರೇಷನ್‌ಗಳನ್ನು ಹೀಗೆಯೇ ಎಂದು ಅದೇ ತಕ್ಕಡಿಯಲ್ಲಿ ಹಾಕಿ ತೂಗುವುದು ಬಹುತೇಕ ಬಾರಿ ಎಡವಟ್ಟಾಗುತ್ತದೆ. ೧೯೦೧-೨೪ರ ನಡುವೆ ಹುಟ್ಟಿದ್ದ ತಲಗಳಿಯನ್ನು ಗ್ರೇಟೆಸ್ಟ್ ಜನರೇಷನ್ ಎಂದು ಕರೆಯಲಾಗುತ್ತದೆ. ನಂತರ ೧೯೨೫-೪೫ ಸೈಲೆಂಟ್ ಜನರೇಷನ್. ಗ್ರೇಟೆಸ್ಟ್ ಜನರೇಷನ್‌ನವರು ಪಾಶ್ಚಾತ್ಯದಲ್ಲಿ ಹುಟ್ಟಿದವರಾಗಿದ್ದರೆ ಅವರೆಲ್ಲ ಮಹಾಯುಧ್ಧಗಳ ದೊಂಬರಾಟದಲ್ಲಿ ಒದ್ದಾಡಿದವರು.

ನಂತರ ಬಂದ ಸೈಲೆಂಟ್ ಜನರೇಷನ್‌ನವರು ಮಹಾಯುದ್ಧದ ನಂತರದಲ್ಲಿ ಪ್ರಾಯಕ್ಕೆ ಬಂದವರು. ಅವರದು ಯುದ್ಧದ ನಂತರದ ಜಗತ್ತು, ಸ್ಪ್ಯಾನಿಷ್ – ಮೊದಲಾದ ಸಾಂಕ್ರಾಮಿಕ, ಗ್ರೇಟ್ ಡಿಪ್ರೆಶನ್ ಎಂಬ ಜಾಗತಿಕ ಆರ್ಥಿಕ ಹಿನ್ನಡೆ ಇವೆಲ್ಲದರಲ್ಲಿ
ಒzಡಿದ ತಲೆಮಾರು. ಹೀಗೆ ಹಿಂದೆ ಒಂದು-ಒಂದೂವರೆ ದಶಕದ ತಲಗಳಿಯನ್ನು ಒಂದೇ ಆಗಿ ನೋಡುವುದರಲ್ಲಿ ಅರ್ಥವಿತ್ತು.
ಏಕೆಂದರೆ ಅವರು ಆ ಸಮಯದಲ್ಲಿ ಯಾವುದೇ ವರ್ಷದಲ್ಲಿ ಹುಟ್ಟಿದರೂ ಅವರ ಜೀವನ, ಅನುಭವ, ಪರಿಸರ, ವ್ಯವಸ್ಥೆ ಹೆಚ್ಚು ಕಡಿಮೆ ಒಂದೇ ಇತ್ತು. ಇತ್ತ ಭಾರತ ಮೊದಲಾದ ಬ್ರಿಟಿಷ್ ಆಡಳಿತವಿದ್ದ ದೇಶಗಳಲ್ಲಿ ಅವಸ್ಥೆ ಬೇರೆಯದೇ ಇದ್ದರೂ ಅಷ್ಟಾಗಿ ಜನರೇಷನ್ ಗ್ಯಾಪ್ ಅನ್ನಿಸುವಷ್ಟು ವ್ಯತ್ಯಾಸವಿರಲಿಲ್ಲ. ಆದರೆ ಈಗ ಹಾಗಲ್ಲ.

ಪ್ರತಿ ಮೂರು ವರ್ಷಕ್ಕೆ ಒಂದು ತಲೆಮಾರು ಬದಲಾಗುತ್ತದೆ. ೬ನೇ ಕ್ಲಾಸಿನಲ್ಲಿರುವ ಮಕ್ಕಳನ್ನು ನೋಡಿ ೨ನೇ ಕ್ಲಾಸಿನ ಮಕ್ಕಳು ‘ಅವರು ಬೇರೆ ತಲೆಮಾರಿನವರು’ ಅಂತ ಅಂದುಕೊಳ್ಳುವಷ್ಟು ಜೀವನಾನುಭವದ ಬದಲಾವಣೆ ಈಗ ಇದೆ. ಹಾಗಾಗಿ ಈಗ ಪಾಲಕರಾಗಿ ನೀವೆಷ್ಟೇ ತಿಪ್ಪರಲಾಗ ಹಾಕಿದರೂ ಜನರೇಷನ್ ಗ್ಯಾಪ್ ಮಾತ್ರ ಖಂಡಿತ. ಅದಲ್ಲದೆ ಇಂದು ಪೀಳಿಗೆಯ
ನಡುವಿನ ಅಂತರ ಕೂಡ ಜಾಸ್ತಿಯಾಗುತ್ತಿದೆ. ಈಗ ಜನರೇಷನ್ ವೈ ಮತ್ತು ಝೆಡ್‌ನವರು ಮಕ್ಕಳನ್ನು ಪಡೆಯುತ್ತಿದ್ದಾರೆ.

ಈ ಜನರೇಷನ್‌ನ ಸಮಸ್ಯೆಯೆಂದರೆ ಅವರು ಬೆಳೆಸುವ ಅವರದೇ ಮಕ್ಕಳು ನಾಲ್ಕೈದು ಜನರೇಷನ್‌ನಷ್ಟು ಅಂತರ ಹೊಂದಿರುತ್ತಾರೆ. ಆ ಕಾರಣಕ್ಕೆ ಇಂದು ಮಗುವನ್ನು ಬೆಳೆಸುವುದು ಹಿಂದೆಲ್ಲದಕ್ಕಿಂತ ಹೆಚ್ಚು ಸವಾಲಿನದು. ಅಜ್ಜ ಅಜ್ಜಿ ಮೊಮ್ಮಕ್ಕಳನ್ನು ಬೆಳೆಸುವ ಇಂದಿನ ತಲಗಳಿಯನ್ನು ಕಂಡು ‘ನಾವೇನು ಮಕ್ಕಳನ್ನು ಬೆಳೆಸಲಿಲ್ಲವೇ’ ಎಂದು ಮೂಗು ಮುರಿಯುವುದಿದೆ. ಆದರೆ ಕಾಲ ಹಾಗೆಯೇ ಉಳಿದಿಲ್ಲ. ಈ ಸವಾಲಿಗೆ ಮೊದಲ ಕಾರಣ ಕಾಲದ ಅಂತರವಾಯಿತಲ್ಲ. ಎರಡನೆಯದು ಈ ಹೊಸ ತಂದೆ-ತಾಯಿ ಬೆಳೆದುಬಂದ ಕಾಲ ಮತ್ತು ಒಗ್ಗಿಸಿಕೊಂಡ ಹೊಸ ತಂತ್ರಜ್ಞಾನದ ಜೀವನ.

ಕೆಲವು ಹಿರಿಯರು, ‘ಇಂದಿನ ತಂದೆ-ತಾಯಂದಿರು ಮಕ್ಕಳನ್ನು ತೀರಾ ನಾಜೂಕಿನಲ್ಲಿ ಬೆಳೆಸುತ್ತಾರೆ’ ಅನ್ನುತ್ತಿರುತ್ತಾರೆ. ‘ಅಷ್ಟಾಗಿ ಬಯ್ಯುವುದಿಲ್ಲ, ಹೊಡೆಯುವುದಿಲ್ಲ. ಮೊದಲೆಲ್ಲ ನಾವು ಚಿಕ್ಕವರಿರುವಾಗ ಒಂದೇ ಎದುರು ಮಾತಾಡಿದರೂ ಬುಡದ ಮೇಲೆ ಎರಡು ಪೆಟ್ಟು ಮೊದಲು ಬಿದ್ದಿರುತ್ತಿತ್ತು. ಆ ಕಾರಣಕ್ಕೆ ನಾವು ಇಷ್ಟೆಲ್ಲ ಶಿಸ್ತಿನಿಂದ ಬೆಳೆದೆವು’ ಎಂಬಿತ್ಯಾದಿ. ಆದರೆ ನಿಜವೇನೆಂದರೆ ಇಂದು ಹಿಂದೆಲ್ಲದಕ್ಕಿಂತ ಮಕ್ಕಳನ್ನು ಬಯ್ಯುವ ಪ್ರಮಾಣ ಕೂಡ ಜಾಸ್ತಿಯಾಗಿದೆ.

ಕೆಲ ದಿನದ ಹಿಂದೆ Gloria DeGuetano ಬರೆದ ’’Parenting well in a media age’- Keeping our kids Human ಎನ್ನುವ ಪುಸ್ತಕವನ್ನು ಓದುತ್ತಿದ್ದೆ. ಆಕೆ ಈ ಹೆಚ್ಚು ಕೂಗಾಡುವ ಹೊಸ ಕಾಲಮಾನದ ಬದಲಾವಣೆಗೆ ಒಂದಿಷ್ಟು
ಪುರಾವೆಗಳನ್ನು ತನ್ನ ಪುಸ್ತಕದಲ್ಲಿ ನಮೂದಿಸಿದ್ದಾಳೆ. ಅದಕ್ಕೆ ಬದುಕಿನಲ್ಲಿನ ಹೆಚ್ಚಿದ ಒತ್ತಡ ಕಾರಣ ಎಂದು ಒಂದು
ಅಧ್ಯಾಯದಲ್ಲಿ ವಿವರಿಸುತ್ತಾಳೆ. ಇಂದಿನದು ಒತ್ತಡದ ಬದುಕು ನಿಜ, ಆದರೆ ಎಲ್ಲರೂ ಒತ್ತಡದಲ್ಲಿಯೇ ಕೆಲಸಮಾಡುತ್ತಾರೆ ಎಂದು ಕಲ್ಪಿಸಿ ಹೇಳುವುದು ಸರಿಯಲ್ಲ.

ಯಾವುದೇ ಉದ್ಯೋಗವಿರಲಿ, ಹೊಟ್ಟೆಪಾಡಿರಲಿ- ಕೆಲಸದ ಒತ್ತಡ ಒಂದು ಮಟ್ಟಿಗೆ ಇದ್ದೇ ಇರುತ್ತದೆ. ಹಾಗಂತ ಎಲ್ಲರ
ಬದುಕಿನ ಒತ್ತಡಗಳೂ ಮಕ್ಕಳ ಜತೆ ವ್ಯವಹರಿಸುವ ರೀತಿಯನ್ನೇ ಬದಲಾಯಿಸುವ ಮಟ್ಟಿಗಿರುವುದಿಲ್ಲ. ಅಲ್ಲದೆ, ಒತ್ತಡವನ್ನು ತಡೆದುಕೊಳ್ಳುವ ಶಕ್ತಿಯೂ ವೃದ್ಧಿಸಿದೆ. ಎಲ್ಲಾ ಒಂದೈದು ಪ್ರತಿಶತ ಜನರಿಗಷ್ಟೇ ಅಂಥ ಒತ್ತಡವಿರಬಹುದು. ಉಳಿದವರದ್ದು ಸಾಮಾನ್ಯ ಒತ್ತಡ.

ಈ ಹೆಚ್ಚು ಬಯ್ಯುವ ಬಗ್ಗೆ ಆಕೆ ಕೊಡುವ ಇನ್ನೊಂದು ಕಾರಣ, ಇಂದಿನ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲ ಮೀಡಿಯಾ. ಇಂದು ನಾವು ಹೊರ ಜಗತ್ತನ್ನು ಸಂಧಿಸುವ ರೀತಿ ಬದಲಾಗಿದೆ. ಟಿವಿ, ಸೋಷಿಯಲ್ ಮೀಡಿಯಾಗಳಾದ -ಸಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಇತ್ಯಾದಿ ನಮ್ಮ ಮೇಲೆ ಬೀರುತ್ತಿರುವ ಪರಿಣಾಮಗಳಲ್ಲಿ ಅಡ್ಡವಾದದ್ದು ಇದು ಕೂಡ ಒಂದು. ಇದನ್ನೇ ಇನ್ನಷ್ಟು ವಿಶ್ಲೇಷಿಸೋಣ, ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ನೋಡೋಣ. ಅದಕ್ಕೆ ಈ ಮೇಲೆ ಹೇಳಿದ ಮೀಡಿಯಾಗಳು ಇಂದು ನಮ್ಮನ್ನು ಅವುಗಳ ಜತೆ ತೊಡಗಿಸಿಕೊಳ್ಳುವ ರೀತಿ, ಪರಿಣಾಮವನ್ನು ಗ್ರಹಿಸಬೇಕಾಗುತ್ತದೆ. ಇವೆಲ್ಲ ಇಂದು ಕೇವಲ ಹೊರಜಗತ್ತನ್ನು ನಮ್ಮೆದುರಿಗೆ ತಂದಿಡುವ ಕೆಲಸವನ್ನಷ್ಟೇ ಮಾಡುತ್ತಿಲ್ಲ.

ಬದಲಾಗಿ ಇವು ನಮ್ಮ ದಿನಚರಿಯ ಸಮಯದ ಜತೆ ಪೈಪೋಟಿಗಿಳಿದಿವೆ. ಇವು ಹೆಚ್ಚು ಕಾಲ ಕಳೆಯಬೇಕೆಂದು ನಿರಂತರ ಮಾನಸಿಕ ಪ್ರಚೋದಕಗಳಾಗಿವೆ. ಸೋಷಿಯಲ್ ಮೀಡಿಯಾ ನಮಗೇಕೆ ಅಷ್ಟು ಇಷ್ಟವಾಗುತ್ತದೆ? ಇಲ್ಲಿ ಕ್ಷಣಮಾತ್ರದಲ್ಲಿ, ಸ್ವೈಪ್ ಮಾಡಿದಂತೆ ಖುಷಿಯಾಗುವ, ಬೇಸರವಾಗುವ, ಸಿಟ್ಟುಬರುವ, ನಗುವ, ತಮಾಷೆಯಾಗಿರುವ, ಹೆದರಿಕೆ ಹುಟ್ಟುವ ಹೀಗೆ ಹತ್ತಾರು ಮಾನಸಿಕ ಏರಿಳಿತಗಳ ಅನುಭವವಾಗುತ್ತದೆ.

ಇದು ನಾವು ಯಕ್ಷಗಾನ, ನಾಟಕ, ಸಿನಿಮಾ ನೋಡಿದಾಗ ಆಗುವ ಅನುಭವವೇ ಆದರೂ ಇದು ಕ್ಷಣಕ್ಕೊಮ್ಮೆ ಹೊರಳಿ ಕೊಳ್ಳುವ ತೀವ್ರ ಮಾನಸಿಕತೆಯ ಅನುಭವ. ಇದು ನಿರಂತರ ಭಾವನಾತ್ಮಕ ಮನಸ್ಸನ್ನು ಜಾಗ್ರತಾವಸ್ಥೆಯಲ್ಲಿರಿಸು ತ್ತವೆ. ನಾಟಕ, ಯಕ್ಷಗಾನ ಇವೆಲ್ಲ ಮೊದಲು ತಿಂಗಳಿಗೋ, ವರ್ಷಕ್ಕೆರಡೋ ನೋಡಿ ಇಂಥ ಮೆಂಟಲ್ ಟ್ರಿಪ್‌ನ ಅನುಭವವನ್ನು ಪಡೆಯುವುದು ಬೇರೆ. ಇಂದಿನ ಸೋಷಿಯಲ್ ಮೀಡಿಯಾ ಈ ಕೆಲಸವನ್ನು ನಿರಂತರ, ಗಂಟೆಗೊಮ್ಮೆ, ದಿನಕ್ಕೆ ಹಲವು ಬಾರಿ ಅನುಭವಕ್ಕೆ ತರುತ್ತವೆ. ಇದರಿಂದಾಗಿ ಮನಸ್ಸು ಯಾವೊಂದು ಭಾವನೆಗೂ ತಕ್ಷಣದಲ್ಲಿ ಸ್ಪಂದಿಸುತ್ತದೆ.

ಇದರ ನೇರ ಪರಿಣಾಮ ದೈಹಿಕ ಮತ್ತು ಮಾನಸಿಕವಾಗಿ ನಮ್ಮನ್ನೇ ಅವಲಂಬಿಸಿರುವ, ಬೆಳೆಯುತ್ತಿರುವ ಚಿಕ್ಕ ಮಕ್ಕಳ ಮೇಲಿನ ವ್ಯವಹಾರದ ಮೇಲೆ. ಹಾಗಾಗಿಯೇ ಸೋಷಿಯಲ್ ಮೀಡಿಯಾವನ್ನು ಮಿತಿಯಾಚೆ ಬಳಸುವವರು, ಕ್ಷಣಕ್ಕೊಮ್ಮೆ ಹೊಸ ಭಾವನೆಯನ್ನು ಕೆರಳಿಸುವ ಇಂದಿನ ಧಾರಾವಾಹಿಗಳನ್ನು ಅತಿಯಾಗಿ ನೋಡುವವರು ಚಿಕ್ಕ ಮಕ್ಕಳನ್ನು ಅತಿಯಾಗಿ
ಬಯ್ಯುತ್ತಾರೆ. ಕಾರಣ ಈ ಭಾವನೆಯನ್ನು ಕೆರಳಿಸುವ ಮಾಧ್ಯಮಗಳು ನಮ್ಮನ್ನು ಅತಿಯಾಗಿ ಪ್ರತಿಕ್ರಿಯಿಸುವಂತೆ, ಕೆರಳು ವಂತೆ ಮಾಡುತ್ತವೆ.

ಅಯಾಚಿತವಾಗಿ ಅಲ್ಲಿ ಕಂಡಂತೆ ವ್ಯವಹರಿಸುವುದನ್ನು ಕಲಿತುಕೊಂಡುಬಿಡುತ್ತೇವೆ. ನೀವು ಇದೆಲ್ಲ ಅದೆಷ್ಟೇ ಪರಿಣಾಮ ಬೀರುವುದಿಲ್ಲವೆಂದರೂ ಅದು ಅದರ ಕೆಲಸವನ್ನು ಸುಪ್ತವಾಗಿ ಮಾಡುತ್ತಲೇ ಇರುತ್ತದೆ (ಪ್ರಿಂಟ್ ಮೀಡಿಯಾ ಹೊರತುಪಡಿಸಿ).
ಇಂದಿನ ಮಕ್ಕಳ ಮೇಲೆ ಒತ್ತಡ ಜಾಸ್ತಿ. ಆದರೆ ಅದು ಕೇವಲ ಓದಿನದಲ್ಲ, ಅದು ತಡೆದುಕೊಳ್ಳುವಷ್ಟು ಇದ್ದೇ ಇರುತ್ತದೆ. ಆದರೆ ಅನ್ಯ ಒತ್ತಡಗಳು ಹಾಗಲ್ಲ.

ಹದಿಹರೆಯಕ್ಕಿಂತ ಮೊದಲೇ ಜತೆಯಾಗುವ ಸೌಂದರ್ಯದ ಒತ್ತಡ, ಇನ್ನೊಬ್ಬರ ಜತೆ ಹೋಲಿಸಿಕೊಂಡು ನೋಡುವಾಗ
ಅಲ್ಲಿರುವ ಹಲವಾರು ರೀತಿಯ ಮೇಲು ಕೀಳಿನ ಭಾವನೆಯಲ್ಲಿ ಹುಟ್ಟುವ ಒತ್ತಡ ಇತ್ಯಾದಿ. ಮಗ, ಮಗಳಿಗೆ ಓದಿನ ಜತೆ ಇನ್ನೆಲ್ಲ ಉಳಿದ ಒತ್ತಡಗಳನ್ನು ತಾನಾಗಿಯೇ, ಒಬ್ಬಂಟಿಯಾಗಿ ಸಂಭಾಳಿಸಿಕೊಂಡು ಹೋಗಬೇಕು. ಆದರೆ ಪಾಲಕರಿಗೆ ಅದೆಲ್ಲ ಗೌಣ- ಕೇವಲ ಓದಿನಲ್ಲಷ್ಟೇ ಮಕ್ಕಳ ಗಮನವಿರಬೇಕು. ಇದು ಅಲ್ಲಿ ಅರಿವಿಗೇ ಬರದಂತೆ ಕಂದಕವನ್ನು ನಿರ್ಮಿಸುತ್ತ ಸಾಗುತ್ತದೆ. ಇದು ಮುಂದೆ ಕೂಗಾಟಕ್ಕೆ, ಬಯ್ಯುವುದಕ್ಕೆ, ಮನಸ್ತಾಪಕ್ಕೆ ಕಾರಣವಾಗುತ್ತದೆ.

ಅಷ್ಟೇ ಅಲ್ಲದೆ ಇಂದಿನ ಮೈಕ್ರೋ ಕುಟುಂಬಗಳು ತಂದೆ ತಾಯಿಗೆ ಮಕ್ಕಳನ್ನು ಹೆಚ್ಚಿಗೆ ಬಯ್ಯುವ, ಹೊಡೆಯುವ ಸ್ವಾತಂತ್ರ್ಯ ವನ್ನು ಕೊಟ್ಟಿವೆ. ಬೆಳೆಯುವ ಮಕ್ಕಳಿಗೆ ಪಾಲಕರು ಹೇಗೆ ಸಹಾಯ ಮಾಡಬೇಕು ಎನ್ನುವ ಪ್ರಶ್ನೆಯನ್ನು ಒಬ್ಬಳು ಓಶೋಗೆ ಕೇಳುತ್ತಾಳೆ. ‘ಈ ಬೆಳೆಯಲು ಸಹಾಯ ಮಾಡುವುದು, ಬೆಳೆಸುವುದು ಎನ್ನುವ ಕಲ್ಪನೆಯೇ ತಪ್ಪು. ನಿಮ್ಮಿಂದ ಮಕ್ಕಳಿಗೆ ಯಾವ ಸಹಾಯವೂ ಬೇಕಾಗುವುದಿಲ್ಲ.

ಅವರಿಗೆ ಬೇಕಾದದ್ದು ಪ್ರೀತಿ ಮತ್ತು ಅವರು ಹೇಳುವುದನ್ನು ಕೇಳುವ, ಸಮಾಧಾನಿಸುವ ಮನಸ್ಸು ಮನೆತುಂಬ’ ಎಂದು ಸೂಕ್ಷ್ಮದಲ್ಲಿ ಹೇಳಿ ಮುಗಿಸುತ್ತಾರೆ ಓಶೋ. ಬಯ್ಯುವುದು, ಹೊಡೆಯುವುದು ಇವೆಲ್ಲ ಪಾಲಕರಾದವರ ಪ್ರೀತಿಯ, ಕರ್ತವ್ಯದ ಸಂಕೇತವೆಂದು ನಂಬಿಕೊಂಡ ದೊಡ್ಡ ವರ್ಗವೇ ಇದೆ. ಆದರೆ ಶಿಕ್ಷಿಸುವುದು- ಪ್ರೀತಿಯ, ಜವಾಬ್ದಾರಿಯ ಹೆಸರಿನಲ್ಲಿ ಬಹುತೇಕ ಪಾಲಕರು ಮಾಡುವ ಶೋಷಣೆ.

ಮಕ್ಕಳೆಂದರೆ ಪ್ರೀತಿ ಇದ್ದೇ ಇರುತ್ತದೆ, ಓದಲು, ಜೀವನದ ಆದ್ಯತೆಗಳನ್ನು ಆರಿಸಿಕೊಳ್ಳುವಲ್ಲಿ ಒಂದಿಷ್ಟು ಮಾರ್ಗದರ್ಶನ ಬೇಕು ನಿಜ. ಆದರೆ ಆ ಹಿನ್ನೆಲೆಯಲ್ಲಿ ಶಿಕ್ಷಿಸುವುದು, ದಾಂಡಿಗನು ಕೃಶಕಾಯದವನ ಮೇಲೆ ಮಾಡುವ ದೌರ್ಜನ್ಯಕ್ಕಿಂತ ಭಿನ್ನವಾದದ್ದೇನಲ್ಲ. ಇದರ ಬದಲಿಗೆ ತೀರಾ ಅವಶ್ಯವಿರುವ, ಇಂದಿನ ಶಾಲೆಯಲ್ಲಿ ಅಷ್ಟಾಗಿ ಕಲಿಸದ ದೇಶಪ್ರೇಮ, ಪ್ರಾಮಾಣಿಕತೆ, ಆತ್ಮವಂಚನೆ ಮಾಡಿಕೊಳ್ಳದಿರುವುದು ಇವೆಲ್ಲವನ್ನು ಕಲಿಸುವ, ತಿಳಿಹೇಳುವ, ವ್ಯಕ್ತಿತ್ವ ರೂಪಿಸುವ ಶಾಲೆ ಮನೆಯಾಗಬೇಕು.

ಈ ವಿಚಾರಗಳನ್ನು ಮಕ್ಕಳ ಜತೆ ಮಾತಾಡಿಕೊಂಡಷ್ಟೂ ಶಿಕ್ಷಿಸುವ ಪ್ರಮಾಣ ಕಡಿಮೆಯಾಗುತ್ತದೆ. ಇಂಥ ವಿಚಾರಗಳು
ಮಾತ್ರ ಪಾಲಕರನ್ನು ಮಕ್ಕಳೊಂದಿಗೆ ಜೋಡಿಸುತ್ತವೆ. ಗಣಿತ, ವಿಜ್ಞಾನ ಇವನ್ನೆಲ್ಲ ಕಲಿಸಲು ಶಾಲೆ ಇದ್ದೇ ಇದೆ. ಮಕ್ಕಳಿಗೆ
ಪಾಲಕರ ಮೇಲೆ ನಂಬಿಕೆ ಹುಟ್ಟಿರಬೇಕು. ಅದನ್ನು ಪಾಲಕರೇ ಹುಟ್ಟಿಸಬೇಕು. ಪಾಲಕರಾದವರು ‘ನೋ’ ಅನ್ನುವ ಶಬ್ದವನ್ನು ತೀರಾ ಅವಶ್ಯಕವಿzಗಲಷ್ಟೇ ಬಳಸುವುದನ್ನು ಮೊದಲು ಅಭ್ಯಾಸ ಮಾಡಿಕೊಳ್ಳಬೇಕು.

ಏನನ್ನು ಕೇಳಿದರೂ ಸಲಹೆಯೇ ನಿಮ್ಮ ಪ್ರತಿಕ್ರಿಯೆಯಾಗಿರಬಾರದು. ಮಕ್ಕಳು ತಂದೆ-ತಾಯಂದಿರ ಅಧಿಕಾರದ ಸ್ವತ್ತಲ್ಲ.
ಬೇಕೆಂದಾಗ ಬಳಕೆಗೆ ಬಂದೀತು ಎನ್ನುವ ನಂಬಿಕೆಯ, ಆದರೆ ಯಾವತ್ತೂ ಬಳಸದೇ ಇದ್ದುಬಿಡಬಹುದಾದ ಹೆಚ್ಚಿನ ಆಸ್ತಿ
ಅಷ್ಟೆ. ಹಾಗಾಗಿಯೇ ಕಹ್ಲಿಲ್ ಗಿಬ್ರಾನ್ ಹೇಳಿದ ಆ ಮಾತುಗಳು ಪ್ರಸ್ತುತವೆನ್ನಿಸುತ್ತದೆ. ಸಾಧ್ಯವಾದಲ್ಲಿ ‘”The Danish way of Parenting’ ಎನ್ನುವ ಪುಸ್ತಕವನ್ನು ಓದಿ. ಡೆನ್ಮಾರ್ಕ್ ದೇಶ ಜಗತ್ತಿನ ಸಂತೋಷದ ಮಾಪಕದಲ್ಲಿ ಮೊದಲ ಸ್ಥಾನ ದಲ್ಲಿರುತ್ತದೆ. ಅಲ್ಲಿನ ಪಾಲಕರು ಮಕ್ಕಳನ್ನು ಹೇಗೆ ಬೆಳೆಸುತ್ತಾರೆ ಎನ್ನುವ ಬಗ್ಗೆ. Happy parenting!