ಬೆರಳ ದನಿ
ನಾಗಶ್ರೀ ತ್ಯಾಗರಾಜ ಎನ್.
ದೇವರಿಗೆ ತೊಡಿಸುವ ಆಭರಣಗಳ ಮೇಲೆಲ್ಲ ಇಂಥ ‘ದಾನಿಗಳ’ ಹೆಸರು ರಾರಾಜಿಸುತ್ತಿರುತ್ತದೆ. ಲೋಕೋದ್ಧಾರಕ
ಭಗವಂತನಿಗೇ ಹೀಗೆ ದಾನಮಾಡುವವರನ್ನು ಕಂಡಾಗ, ‘ಭಗವಂತನೇನು ಬೇಡುತ್ತ ನಿಂತಿರುವನೇ?’ ಎಂಬ ಪ್ರಶ್ನೆ ಮೂಡುತ್ತದೆ.
‘ಬೀಸಿ ತಾ ಕಂಪೆರೆದೆ ಎನುವುದೇ ತಂಗಾಳಿ? ನಾವೆ ನಾ ಒಯ್ದೆನೆಂದುಬ್ಬುವುದೆ ಕಡಲು? ಕೊಳಲ ಕೊಟ್ಟೆನು ಎನುತ ಬೀಗಿ ಕುಣಿವುದೆ ಬಿದಿರು? ಕೊಡುತ ಮರೆವುದ ಕಲಿಯೊ- ಮುದ್ದುರಾಮ’ ಎಂಬುದು ಕವಿವಾಣಿ. ಕೊಡುಗೆ ಎಂಬುದು
ಜೀವನಧರ್ಮ ಎನಿಸಿಕೊಂಡರೂ, ಏನು, ಎಷ್ಟು ಮತ್ತು ಹೇಗೆ ಕೊಡುವೆವು? ಎಂಬುದು ಮುಖ್ಯವಾಗುತ್ತದೆ.
ಹಸಿದವರು ಬೇಡಿದಾಗ ಹೊಟ್ಟೆ ತುಂಬುವಷ್ಟು ಮತ್ತು ತಿನ್ನಲರ್ಹವಾದ ಆಹಾರವನ್ನು ಒದಗಿಸಿದರೆ ಕೊಡುಗೆಗೂ ಒಂದು ನ್ಯಾಯ; ಬದಲಿಗೆ ಹಳಸಿದ ಆಹಾರ ನೀಡಿದರೆ ಅದು ‘ಕೊಡುಗೆ’ ಎನಿಸಿಕೊಂಡೀತೇ? ವಿದ್ಯಾರ್ಥಿಯೊಬ್ಬ ನಿಗೆ ಅವನು ಓದುತ್ತಿರುವ ಕೋರ್ಸ್‌ಗೆ ಸಂಬಂಧಿಸಿದ ಪಠ್ಯಪುಸ್ತಕಗಳನ್ನು ನೀಡಿದಲ್ಲಿ ಒಂದು ಮಟ್ಟಿನ ಉಪಯೋಗವಾಗುತ್ತದೆ.
ಅದು ಬಿಟ್ಟು, ಉತ್ಕೃಷ್ಟವಾಗಿದೆಯೆಂಬ ಒಂದೇ ಕಾರಣಕ್ಕೆ ಅನ್ಯಭಾಷೆಯ, ತಿಳಿಯದ ವಿಚಾರವಿರುವ ಪುಸ್ತಕವನ್ನು ನೀಡಿದರೆ ಅದಕ್ಕೆ ಅರ್ಥವಿರು ತ್ತದೆಯೇ? ಯಾರಿಗಾದರೂ ಓದಿನ ಬಗ್ಗೆ ಆಸಕ್ತಿಯಿಲ್ಲ ಎನ್ನುವುದಾದರೆ, ಅವರಿಗೆ ಇದುವರೆಗೂ ಒಂದೊ ಳ್ಳೆಯ ಪುಸ್ತಕ ದೊರೆತಿಲ್ಲ ಎಂದೇ ಹೇಳಬೇಕು. ಹೀಗೆ, ಯಾರೇನೇ ಕೊಡಲಿ ಯಾರೇನೇ ಸ್ವೀಕರಿಸಲಿ, ಈ ಕೊಡುವವರ ಮತ್ತು ಸ್ವೀಕರಿಸುವವರ ಮನದೊಳಗೆ ಏನಿರಬೇಕು? ಎಂಬ ಪ್ರಶ್ನೆ ಮೂಡಿದರೆ, ಕೊಡುವವರ ಬುದ್ಧಿಯಲ್ಲಿ ‘ಮರೆವು’, ಸ್ವೀಕರಿಸು ವವರ ಹೃದಯದಲ್ಲಿ ‘ಕೃತಜ್ಞತಾ ಭಾವ’ ಇರಬೇಕು ಎಂಬುದು ಅಪೇಕ್ಷಣೀಯವಾಗುತ್ತದೆ.
ಆದರೆ ಇಂದಿನ ಪರಿಸ್ಥಿತಿಯಲ್ಲಿ, ಕೊಡುವವರ ಬುದ್ಧಿಯಲ್ಲಿ ‘ಅಹಂ’ ಮೆರೆಯುತ್ತಿದೆ, ಸ್ವೀಕರಿಸುವವರ ಹೃದಯದಲ್ಲಿ ಅದು ‘ಕೀಳರಿಮೆ’ ತುಂಬುವಂತೆ ಮಾಡುತ್ತಿದೆ. ಹೀಗಾದಾಗ ಮನಸ್ಥಿತಿಗಳು ವಿಕೋಪಕ್ಕೆ ತಿರುಗಿ ಪರಿಸ್ಥಿತಿಗಳು ಏರುಪೇರಾಗುತ್ತವೆ. ಬಡವ-ಬಲ್ಲಿದ, ಮೇಲರಿಮೆ-ಕೀಳರಿಮೆ ಎಂಬೆಲ್ಲ ಭಾವಗಳು ಮೂಡುತ್ತವೆ. ಆದರೆ ಪ್ರಕೃತಿಯು ಉತ್ತಮೋತ್ತಮ ಉದಾ ಹರಣೆಗಳ ಮೂಲಕ ನಿದರ್ಶನವಾಗಿ ನಿಂತಿದೆ. ಪ್ರಕೃತಿಯ ಕಂಪು ಅದೊಮ್ಮೆ ಬೀಸಿದಾಗ ‘ಆಹಾ’ ಎಂಬ ಆಹ್ಲಾದಕರ ಉದ್ಗಾರ ನಮ್ಮಿಂದ ಹೊಮ್ಮುತ್ತದೆ. ಈ ಕಂಪಿನ ತಂಪು ಮೂಡಿಸಿದ್ದು ತಂಗಾಳಿ, ಅನುಭವಿಸಿದ್ದು ಮನುಷ್ಯ.
ಆದರೆ ತಂಗಾಳಿಯು ‘ಇದು ನನ್ನಿಂದ ಆದದ್ದು’ ಎಂಬ ಕಿಂಚಿತ್ತೂ ಅಹಂ ಇಲ್ಲದೆ ನಿಶ್ಶಬ್ದವಾಗಿ ಇರುತ್ತದೆ. ಅಂತೆಯೇ ಉಬ್ಬೇರಿ ಇಳಿದು ನಿಲ್ಲುವ ಅಲೆಗಳು ನಾವೆಯನ್ನು ಮುನ್ನಡೆಸುತ್ತವೆಯಾದರೂ, ಪ್ರತಿಯಾಗಿ ಅವೆಂದೂ ಶುಲ್ಕವನ್ನು ಕೇಳಿಲ್ಲ. ಇನ್ನು ಪ್ರಕೃತಿಯ ಸೋಜಿಗವೇ ಆಗಿರುವ ‘ಬಿದಿರು’ ಎಂಬ ಸಂಕುಲವಂತೂ ಮನುಷ್ಯನಿಗಾಗಿ ತನ್ನನ್ನೇ ತೇಯ್ದುಕೊಂಡಿದೆ. ಹುಟ್ಟಿ ದಾಗ ಒದಗುವ ತೊಟ್ಟಿಲಿಗೆ, ಮಧ್ಯದಲ್ಲಿ ಸಂಗೀತ ಹೊಮ್ಮಿಸುವ ಕೊಳಲಿಗೆ, ಕೊನೆಗೆ ಶವವಾಗಿ ತೆರಳುವಾಗಿನ ಚಟ್ಟದ ನಿರ್ಮಾಣಕ್ಕೂ ಬೇಕಾಗಿರುವ ಬಿದಿರು, ‘ಎಲ್ಲವೂ ನನ್ನಿಂದಲೇ, ನನ್ನಿಂದಲೇ ನೀವೆಲ್ಲಾ’ ಎಂದು ಬೀಗಿ ಕುಣಿಯುವುದಿಲ್ಲ.
ಹೀಗೆ ಕೊಡುತ್ತ ಮರೆಯುವ ಪ್ರಕೃತಿಯ ಗುಣವನ್ನೇ ನಾವೂ ಕಲಿಯಬೇಕು ಎಂಬುದು ಮೇಲೆ ಉಲ್ಲೇಖಿಸಿರುವ ಕವನದ ಆಶಯ. ಹಾಗಂತ, ಮಾನವರೆಲ್ಲ ಕೊಡುಗೆಯನ್ನು ಅತಿಶಯವಾಗಿ ಮಾಡಿಕೊಂಡಿದ್ದಾರೆಂದಲ್ಲ; ತಾವು ಕೊಡುಗೆ ನೀಡಿದ್ದನ್ನು
ಯಾರಲ್ಲೂ ಹೇಳಬೇಡಿ ಎಂದು ಹೇಳಿಯೇ ನೀಡುವವರು ಸಾಕಷ್ಟಿದ್ದಾರೆ. ಅವರೆಲ್ಲಾ ನಿಸ್ವಾರ್ಥಿ ಕೊಡುಗೈವೀರರು. ಮತ್ತೆ ಕೆಲವರು, ‘ನೀಡಿದ್ದು ನೀಡಿ ಆಯ್ತು; ಇನ್ನು ಮುಂದಿ ನದು ನಿಮ್ಮ ಪ್ರಯತ್ನ ಹಾಗೂ ಪರಿಶ್ರಮ’ ಎನ್ನುವವರು.
ಇವರನ್ನು ಪ್ರತಿ-ಲಾಪೇಕ್ಷೆ ಇಲ್ಲದವರು ಎನ್ನಬಹುದು. ಮತ್ತೆ ಕೆಲವರು, ತಾವು ನೀಡುವ ಒಂದೊಂದು ಅಗುಳಿಗೂ ಲೆಕ್ಕವಿ ಡುತ್ತಾರೆ, ತಮ್ಮಿಂದಾಗುವ ಒಂದೊಂದು ಕಾರ್ಯಕ್ಕೂ ಫಲವನ್ನು ನಿರೀಕ್ಷಿಸುತ್ತಾರೆ. ಪಾಪ-ಪುಣ್ಯಗಳ ಲೆಕ್ಕಾಚಾರ
ದಲ್ಲೇ ಜೀವನವನ್ನು ವಿರಮಿಸಿರುತ್ತಾರೆ. ಎಷ್ಟರಮಟ್ಟಿಗೆ ಎಂದರೆ, ದೇವಾಲಯವೊಂದಕ್ಕೆ ನೀಡುವ ಪ್ರತಿವಸ್ತುವಿನಲ್ಲೂ ತಮ್ಮ ಹೆಸರನ್ನು ಬರೆಸಿ ನೀಡುವಿಕೆ. ದೇವರಿಗೆ ತೊಡಿಸುವ ಆಭರಣಗಳ ಮೇಲೆಲ್ಲ ಇಂಥ ‘ದಾನಿಗಳ’ ಹೆಸರು ರಾರಾಜಿಸುತ್ತಿರುತ್ತದೆ. ಆಪದ್ಬಾಂಧವ, ಲೋಕೋದ್ಧಾರಕನಾಗಿರುವ ಆ ಭಗವಂತನಿಗೇ ದಾನಮಾಡುವ ಈ ಮನುಷ್ಯನನ್ನು ನೋಡಿದರೆ, ‘ಭಗವಂತನೇನು ದೀನನೇ, ಕೈಚಾಚಿ ಬೇಡುತ್ತ ನಿಂತಿರುವನೇ?’ ಎಂಬ ಪ್ರಶ್ನೆ ಮೂಡುತ್ತದೆ ಎಂದು ಹಿರೇಮಗಳೂರಿನ ‘ಕನ್ನಡ ಪೂಜಾರಿ’ಕಣ್ಣನ್ ಮಾಮರವರು ಹಲವು ಬಾರಿ ಹೇಳಿದ್ದುಂಟು!
ನಮಗಿಂತ ಹಿರಿಯರಿಗೆ ನಾವು ದಾನಮಾಡಲು ಸಾಧ್ಯವೇ? ಸ್ವತಃ ನಾವೇ ‘ಅದನ್ನು ನೀಡು, ಇದನ್ನು ದಯಪಾಲಿಸು’
ಎಂದು ಬೇಡುತ್ತ ಕೈಚಾಚಿ ನಿಂತಿರುವ ಭಿಕ್ಷುಕರು. ಒಮ್ಮೆ ಯೋಚಿಸಿ ನೋಡಿ- ದೇವಾಲಯದ ಹೊರಗೆ ಆರ್ಥಿಕ ಸಂಕಷ್ಟ ದಿಂದ ಕುಳಿತ ಭಿಕ್ಷುಕರಿದ್ದರೆ, ಒಳಗೆ ದೇವರ ಮುಂದೆ ಬೇಡುತ್ತಿರುವ ಶ್ರೀಮಂತ ಭಿಕ್ಷುಕರು. ಹೀಗೆ ಎಲ್ಲರೂ ಬೇಡುವ ಹಂತದಲ್ಲೇ ಇರುವಾಗ, ದೇಗುಲಕ್ಕೆ ನೀಡಿದ ವಸ್ತುಗಳ ಮೇಲೆ ದಾನಿಗಳ ಹೆಸರನ್ನು ಬರೆಸುವುದು ಎಂಥ ವಿಪರ್ಯಾಸವಲ್ಲವೇ?!
ದೇವಾಲಯಕ್ಕೆ ನಾವು ಏನನ್ನೇ ನೀಡಲಿ ಅದು ದಾನವಲ್ಲ, ಬದಲಿಗೆ ಅದು ಸಮರ್ಪಣೆ. ಏಕೆಂದರೆ ಕೊಡುವುದಕ್ಕೆ ನಾವು
ಏನನ್ನೂ ಸೃಷ್ಟಿಸಿಲ್ಲ, ಎಲ್ಲವೂ ಪ್ರಕೃತಿಮಾತೆಯ ಸ್ವತ್ತುಗಳೇ. ಸಮರ್ಪಣೆ ಎಂಬ ಭಾವ ಮನದಲ್ಲಿ ಮೂಡುತ್ತಿದ್ದಂತೆ ದಾನವೆಂಬ ಅಹಂಗೆ ಅಲ್ಲಿ ಜಾಗವಿರುವುದಿಲ್ಲ. ಸಮರ್ಪಿಸುವ ಭಾಗ್ಯ ಕೂಡ ದೊರೆಯುವುದು ಅಲ್ಲಿ ಪಡೆಯುವ ಅವಶ್ಯಕತೆ ಇದ್ದಾಗ ಮಾತ್ರ; ಇಲ್ಲವಾದರೆ ಸಮರ್ಪಿಸುವ ವಸ್ತು ಮತ್ತು ವ್ಯಕ್ತಿ ಎರಡೂ ನಿಷ್ಪ್ರಯೋಜಕ.
ಮಂತ್ರಾಲಯದ ಶ್ರೀ ಗುರುರಾಘವೇಂದ್ರರ ಸನ್ನಿಧಿಗೆ ಸಹೃದಯಿಗಳ ಜತೆ ಭೇಟಿ ನೀಡುವ ಅವಕಾಶ ಇತ್ತೀಚೆಗೆ ಒದಗಿತ್ತು. ಪೂಜೆ-ಪ್ರದಕ್ಷಿಣೆಯ ನಂತರ ಅಲ್ಲಿ ಲೋಕಾಭಿರಾಮವಾಗಿ ನಡೆದ ಮಾತುಕತೆಯಲ್ಲಿ ‘ದಾನ’ ಮತ್ತು ‘ದಾನಿ’ ಎಂಬ ಪರಿಕಲ್ಪನೆ ಗಳ ವಿಶ್ಲೇಷಣೆ ನಡೆದು ಹೀಗೊಂದು ನಿದರ್ಶನದ ಪ್ರಸ್ತಾಪವೂ ಆಯಿತು: ಮಠದ ಭಕ್ತರೊಬ್ಬರು ಮೂರು ರೆಕ್ಕೆಯಿರುವ ವಿದ್ಯುತ್ ಪಂಖವೊಂದನ್ನು (ಫೋನ್) ದಾನವಾಗಿ ನೀಡಿದ್ದರಂತೆ.
ಮೂರು ವರ್ಷಗಳ ನಂತರ ಮತ್ತೆ ಬಂದ ಅವರು, ‘ಆ ಪಂಖವನ್ನು ವಾಪಸ್ ಕೊಡಿ, ಬೇರೊಂದನ್ನು ಹಾಕಿಸಿಕೊಡುವೆ’ ಎಂದರಂತೆ. ಅದಕ್ಕೆ ವ್ಯವಸ್ಥಾಪಕರು, ‘ಈ ಪಂಖವೇ ಚೆನ್ನಾಗಿದೆ, ಬೇರೆಯದೇನೂ ಬೇಡ’ ಎಂದರೂ ಭಕ್ತರು ಹಿಡಿದ ಹಠ ಬಿಡದೆ ಪಂಖವನ್ನು ಬದಲಾಯಿಸಿದರಂತೆ. ನಂತರ ಕಾರಣ ಹುಡುಕಿದಾಗ, ಮುಂಚೆ ಆ ಭಕ್ತರ ಮನೆಯಲ್ಲಿ ಮೂರು ಜನರಿದ್ದ ಕಾರಣ ಆ ಮೂವರ ಹೆಸರುಗಳನ್ನು ಪಂಖದ ಮೂರು ರೆಕ್ಕೆಗಳ ಮೇಲೆ ಬರೆಸಿದ್ದರು; ಆದರೀಗ ಮನೆಗೆ ಮತ್ತೊಂದು ಮಗುವಿನ ಆಗಮನವಾದ ಕಾರಣ ನಾಲ್ಕು ರೆಕ್ಕೆಗಳ ಹೊಸಪಂಖವನ್ನು ಖರೀದಿಸಿ, ರೆಕ್ಕೆಗಳ ಮೇಲೆ ನಾಲ್ಕೂ ಜನರ ಹೆಸರು ಬರೆಸಿ ಮಠಕ್ಕೆ ನೀಡಿದ್ದರು.
ಸಾಲದೆಂಬಂತೆ, ‘ಇದನ್ನು ಹೆಚ್ಚು ಓಡಿಸಬೇಡಿ, ಏಕೆಂದರೆ ಪಂಖ ಓಡುವಾಗ ನಮ್ಮ ಹೆಸರುಗಳು ಕಾಣಿಸೋಲ್ಲ. ಹಾಗೇ ನಿಶ್ಶಬ್ದವಾಗಿದ್ದಾಗ ಕಾಣಿಸುತ್ತದೆ. ಆದ್ದರಿಂದ ಪಂಖ ಯಥಾಸ್ಥಾನದಲ್ಲಿರಲಿ’ ಎಂದು ನಿರ್ದೇಶನವನ್ನೂ ನೀಡಿದರಂತೆ! ಈ ಅನುಭವವಾದ ನಂತರ ಮಠದ ವ್ಯವಸ್ಥಾಪಕರು, ಹೆಸರನ್ನು ಉಲ್ಲೇಖಿಸಿರುವ ಯಾವುದೇ ವಸ್ತುಗಳನ್ನು ಮಠವು ಪಡೆಯು ವುದಿಲ್ಲ ಎಂದು ಸೂಚಿಸಿಬಿಟ್ಟರಂತೆ.
ಎಂಥ ದಿಟ್ಟ ಹಾಗೂ ಉತ್ತಮ ನಿರ್ಧಾರವಿದು, ಅಲ್ಲವೇ? ನಿಜಕ್ಕೂ ಅಂಥದೊಂದು ನಿರಪೇಕ್ಷ ಭಾವ ಭಕ್ತರಿಗೇ ಬಂದುಬಿಟ್ಟರೆ ಸಮಸ್ಯೆಯೇ ಉದ್ಭವಿಸುವುದಿಲ್ಲ. ಕೆಲವರಂತೂ, ಮಠ ಅಥವಾ ದೇಗುಲಗಳಿಗೆ ತಾವು ನೀಡುವ ಟ್ಯೂಬ್‌ಲೈಟ್ ಉದ್ದಕ್ಕೂ
ತಮ್ಮ ಹೆಸರನ್ನು ಹಾಕಿಸಿರುತ್ತಾರೆ. ಎಷ್ಟರಮಟ್ಟಿಗೆ ಎಂದರೆ ಅದರಿಂದ ಬೆಳಕು ಹೊಮ್ಮಲು ಜಾಗವೇ ಇರುವುದಿಲ್ಲ! ಹೀಗೆ ಮಂತ್ರಾಲಯದ ಶ್ರೀ ಗುರುರಾಯರ ಅನುಗ್ರಹದಿಂದ ವಿಚಾರವೊಂದರ ಸ್ಪಷ್ಟತೆಯೂ ಜ್ಞಾನಯೋಗದ ಮೂಲಕ ಉಪಕೃತ ವಾಯಿತು.
ಎಲ್ಲ ಧಾರ್ಮಿಕ ಕ್ಷೇತ್ರಗಳು ಈ ‘ದೀನ-ದಾನಿ’ಯ ಭಾವವನ್ನು ಹೊಡೆದೋಡಿಸಿ, ನಿಷ್ಕಲ್ಮಶ-ನಿಸ್ವಾರ್ಥ ಭಾವವನ್ನು, ಪ್ರತಿ-ಲಾಪೇಕ್ಷೆಯಿಲ್ಲದ ಸಮರ್ಪಣಾಭಾವವನ್ನು ಮೂಡಿಸಿದ್ದೇ ಆದಲ್ಲಿ, ನಿಜಕ್ಕೂ ಒಂದು ಧಾರ್ಮಿಕ ಕ್ರಾಂತಿ ಆದಂತೆಯೇ ಸರಿ. ಅದಕ್ಕೆ ಮೊದಲ ಹೆಜ್ಜೆ ಓದುಗ ಭಕ್ತರೇ ಇಡುವಂತಾಗಲಿ. ತಾವು ಭೇಟಿ ನೀಡಿದ ಮಠ-ಮಂದಿರದ ಕಡೆಯೆಲ್ಲ ಇಂಥದೊಂದು
ವಿಚಾರವನ್ನು ಅಲ್ಲಿನ ಅರ್ಚಕರ/ವ್ಯವಸ್ಥಾಪಕರ ಗಮನಕ್ಕೆ ತಂದರೆ, ಸಾಧ್ಯವಾದಷ್ಟು ಸಾಮಾಜಿಕ ಪರಿವರ್ತನೆ ಮೂಡಿಸಲು ಸಾಧ್ಯ.
‘ನೀ ಬದಲಾದರೆ’ ಎಂದು ಹೇಳುವುದಕ್ಕಿಂತ ‘ನಾ ಬದಲಾದರೆ’ ಎಂದು ಹೇಳೋಣ. ಹೌದಲ್ಲವೇ?