ಶಶಾಂಕಣ
shashidhara.halady@gmail.com
ಹಳ್ಳಿಯಲ್ಲಿ ವಾಸ ಎಂದರೆ, ಕ್ರಿಮಿ ಕೀಟಗಳ ಸಹವಾಸ, ಅವುಗಳಿಂದ ಕಚ್ಚಿಸಿಕೊಳ್ಳುವುದು ಇದ್ದದ್ದೇ. ಇರುವೆ, ಕೆಂಜಿಗ, ಚೌಳಿ, ಕಡ್ಜುಳ, ಕುಂಬಾರ ಹುಳ, ಚೇಳು, ಜೇನು, ಜೇಡ ಇವೆಲ್ಲವೂ ಕಚ್ಚುವ ಅಭ್ಯಾಸದವು. ಅವುಗಳ ದಿನಚರಿಯ ಭಾಗ ಅದು. ಅದರಲ್ಲಿ ಅಕಸ್ಮಾತ್ ಮನುಷ್ಯ ಕೈ ಹಾಕಿದರೆ, ಅವುಗಳಿಂದ ಕಚ್ಚಿಸಿಕೊಳ್ಳುವುದು ಅನಿವಾರ್ಯ.
ಜೇಡಗಳು ಸಹ ಮನುಷ್ಯನಿಗೆ ಕಚ್ಚುವುದುಂಟು. ನಮ್ಮ ಹಳ್ಳಿ ಮನೆಗೆ ಸಾಗುವ ಗದ್ದೆ ದಾರಿಯಲ್ಲಿ ನಡೆದುಕೊಂಡು ಬರುತ್ತಿ ದ್ದಾಗ, ಒಮ್ಮೆ ನನ್ನ ತಂಗಿಯ ಕಾಲಿನಲ್ಲಿ ಸಣ್ಣದೇನೋ ಗಾಯವಾಗಿತ್ತು. ಯಾವುದೋ ಕೀಟ ಕಚ್ಚಿರಬೇಕು ಎಂಬ ಊಹೆ. ನಾಲ್ಕಾರು ದಿನಗಳಾದರೂ ಆ ಗಾಯ ವಾಸಿಯಾಗಲಿಲ್ಲ. ಆಗ ಆ ಜಾಗವನ್ನು ನೋಡಿ, ನಮ್ಮ ಅಮ್ಮಮ್ಮ ಹೇಳಿದರು ‘ಅದು ಬಸುರಿ ಸಾಲೆ ಕಚ್ಚಿದ್ದು. ನಂಜು ಇರುತ್ತೆ, ವಿಷವೂ ಹೌದು.
ಚೆನ್ನಾಗಿ ಅರಸಿನ ಹಚ್ಚಿ ಕಾಂಬ’. ತಮ್ಮ ಹಿಂದಿನ ತಲೆಮಾರಿನ ಅನುಭವದ ಆಧಾರದ ಮೇಲೆ ಅರಸಿನ ಹಚ್ಚಿಸಿ, ನಾಲ್ಕಾರು ದಿನಗಳಲ್ಲಿ ಗಾಯವನ್ನು ವಾಸಿ ಮಾಡಿದರು. ಆಗಲೇ ನನಗೆ ಗೊತ್ತಾದದ್ದು, ಜೇಡ ಅಥವಾ ಸಾಲೆ ಕಚ್ಚಿದರೆ ಮನುಷ್ಯನಿಗೂ ಸ್ವಲ್ಪ ಮಟ್ಟಿಗಿನ ವಿಷ ಆಗಬಹುದು ಎಂದು. ನಮ್ಮ ಹಳ್ಳಿಯಲ್ಲಿರುವ ಸುಮಾರು ಅರ್ಧ ಇಂಚು ಗಾತ್ರದ ಹಸಿರು ಬಣ್ಣದ ಒಂದು ಜೇಡ, ಕೆಲವು ಸಲ ತನ್ನ ಮೊಟ್ಟೆಯನ್ನು ಹೊತ್ತುಕೊಂಡು ಓಡುವುದನ್ನು ಕಂಡಿದ್ದೆ.
ಅದರ ಗಾತ್ರ ಅರ್ಧದಿಂದ ಮುಕ್ಕಾಲು ಇಂಚು; ಆದರೆ ಅದರ ವೃತ್ತಾಕಾರದ ಬಿಳಿ ಮೊಟ್ಟೆಯ ಗಾತ್ರ ಒಂದು ಇಂಚು! ರುಪಾಯಿ ನಾಣ್ಯದಷ್ಟು ದೊಡ್ಡದಾದ, ಶುದ್ಧ ಬಿಳಿ ಬಣ್ಣದ ಮೊಟ್ಟೆಯನ್ನು ಹೊತ್ತುಕೊಂಡು, ಆ ಜೇಡ ಚುರುಕಾಗಿ ಓಡುವುದನ್ನು ನೋಡು ವುದೇ ಚಂದ. ‘ಬಸುರಿ ಸಾಲೆ ಕಚ್ಚಿದರೆ ವಿಷ ಮಾರಾಯ್ರೆ’ ಎಂಬ ನಂಬಿಕೆಯನ್ನು ನಮ್ಮೂರಿನವರು ಮಾತಿನ ಮಧ್ಯೆ ಹೇಳಿ ದಾಗ, ನನಗೆ ನೆನಪಾಗುವುದು, ತನಗಿಂತಲೂ ದೊಡ್ಡ ಗಾತ್ರದ ಮೊಟ್ಟೆಯನ್ನು ಹೊತ್ತುಕೊಂಡು ಓಡುತ್ತಿದ್ದ ಆ ಜೇಡ!
ಜೇಡಗಳನ್ನು ನಮ್ಮ ಹಳ್ಳಿಯವರು ಕೊಲ್ಲುವುದಿಲ್ಲ! ಅವು ತಮ್ಮ ಪಾಡಿಗೆ ಮನೆಯ ಮಾಡಿನ ಮೂಲೆಗಳಲ್ಲಿ, ಸಂದಿಗೊಂದಿ ಗಳಲ್ಲಿ ಬಲೆ ಕಟ್ಟಿಕೊಂಡು ವಾಸಿಸುತ್ತಿದ್ದರೆ, ನಮ್ಮ ಹಳ್ಳಿಜನ ಚಿಂತಿಸರು. ಮನೆಯ ನಿವಾಸಿಗಳಂತೆ, ಈ ಜೇಡಗಳೂ ನಿವಾಸಿ ಗಳು! ಅದು ಅತ್ತಿತ್ತ ಓಡಾಡುತ್ತಾ, ಮೈಮೇಲೆ ಬಿದ್ದರೂ, ಅತ್ತ ತಳ್ಳುತ್ತಾರೆಯೇ ಹೊರತು ಸಾಯಿಸರು. ಜೇಡ ಮತ್ತು ಹಲ್ಲಿಗಳನ್ನು ಸಾಯಿಸಬಾರದು ಎಂಬ ನಂಬಿಕೆ ನಮ್ಮೂರಿನಲ್ಲಿ ಇಂದಿಗೂ ಇದೆ.
ಕೀಟಗಳನ್ನು, ಉಪದ್ರವ ನೀಡುವ ಹಾತೆಗಳನ್ನು ಅವು ಹಿಡಿದು ತಿನ್ನುತ್ತಾವೆಂದು ಗುರುತಿಸಿದ್ದರಿಂದಲೇ, ಜೇಡಗಳಿಗೆ ಇಂತಹ ಶ್ರೀರಕ್ಷೆ ದೊರೆತಿರಬಹುದು. ಆದ್ದರಿಂದ, ಹಿಂದೆ ಇದ್ದ ನಮ್ಮ ಹೆಂಚಿನ ಮನೆಯ ಹೊರಭಾಗದಲ್ಲಿ, ಪಕಾಸಿ, ತೊಲೆಗಳ ನಡುವೆ ಸಾಕಷ್ಟು ಜೇಡರ ಬಲೆಗಳು. ನಮ್ಮ ಮನೆ ಎದುರಿದ್ದ, ಗಂಟಿ ಕಟ್ಟುವ ಹಟ್ಟಿಯಲ್ಲಂತೂ ಜೇಡರ ಬಲೆಯ ಸಾಲು ಸಾಲು!
ಅದೇಕೋ, ನಮ್ಮಪ್ಪನಿಗೆ ಜೇಡರ ಬಲೆ ಕಂಡರೆ ಅಷ್ಟಕ್ಕಷ್ಟೆ. ಹಟ್ಟಿಯ ಮಾಡಿನ ಸುತ್ತಲೂ, ಹೊರಭಾಗದಲ್ಲಿ ಕಟ್ಟಿಕೊಂಡಿದ್ದ ಜೇಡರ ಬಲೆಯನ್ನು ತೆಗೆಯುವುದು, ವಿದ್ಯಾರ್ಥಿಯಾಗಿದ್ದ ನನ್ನ ಕೆಲಸ ಎಂದು ಅವರು ನಿರ್ಧರಿಸಿದ್ದರು. ರಜಾ ದಿನಗಳಲ್ಲಿ ನನ್ನ
ಪ್ರಮುಖ ಕೆಲಸಗಳಲ್ಲಿ ಒಂದೆಂದರೆ ಹಟ್ಟಿ ಮಾಡಿನ ಸುತ್ತಲೂ ಜೋತುಬಿದ್ದಿದ್ದ ಜೇಡರ ಬಲೆಗಳನ್ನು ತೆಗೆಯುವುದು. ತೆಗೆಯದಿದ್ದರೆ ಅವರು ಒಂದೇ ಸಮನ ವರಾತ ಮಾಡುತ್ತಿದ್ದರು.
‘ಒಂದು ಉದ್ದನೆಯ ಕೋಲನ್ನು ಹಿಡಿದು, ಅದರ ಒಂದು ತುದಿಯನ್ನು ಜೇಡರ ಬಲೆಗೆ ತಾಗಿಸಿ, ಸುತ್ತಿದರೆ ಬಲೆ ಪೂರ್ತಿ ಕೋಲಿನ ತುದಿಗೆ ಅಂಟಿಕೊಳ್ಳುತ್ತದೆ ನೋಡು’ ಎಂದು, ಜೇಡರ ಬಲೆ ತೆಗೆಯುವ ವಿದ್ಯೆಯನ್ನು ನನಗೆ ಅವರು ಹೇಳಿ ಕೊಟ್ಟಿದ್ದರು. ಒಂದರ್ಧ ಗಂಟೆ ಆ ಕೋಲನ್ನು ಜೇಡರ ಬಲೆಗಳಿಗೆ ಸುತ್ತಿದಾಗ, ಕೋಲಿನ ತುದಿಯು ಬಲೆಯ ರೇಷ್ಮೆಯಂತಹ ದಾರಗಳಿಂದ ತುಂಬಿ, ಉಂಡೆಯಂತಾಗುತ್ತಿತ್ತು. ಅಷ್ಟೊಂದು ಜೇಡರ ಬಲೆಗಳು ನಮ್ಮ ಹಟ್ಟಿಯ ಮಾಡಿನಲ್ಲಿ ಇರುತ್ತಿದ್ದವು. ಅಷ್ಟು ತೆಗೆದರೂ, ಇನ್ನಷ್ಟು ಜೇಡರ ಬಲೆಗಳು ಅಲ್ಲಿ ಜೋತಾಡುವುದು ಇದ್ದದ್ದೇ!
ತೋಟಕ್ಕೆ ಹತ್ತಿರವಾಗಿದ್ದ ಆ ಹಟ್ಟಿಯ ಮಾಡಿನಲ್ಲಿ, ವಿಪರೀತ ದಟ್ಟಣೆಯಿಂದ ಜೋತಾಡುತ್ತಿದ್ದ ಆ ಜೇಡರ ಬಲೆಗಳಲ್ಲಿರುವ ಮೊಟ್ಟೆಗಳ ವಿನ್ಯಾಸ ತುಸು ವಿಚಿತ್ರ. ಆರೆಂಟು ಮೊಟ್ಟೆಗಳನ್ನು ಒಂದರ ಪಕ್ಕ ಒಂದರಂತೆ, ದಾರ ಗಂಟು ಹಾಕಿದ ರಿತಿಯಲ್ಲಿ ಆ
ಜೇಡ ಮೊಟ್ಟೆಯಿಡುತ್ತಿತ್ತು. ನಾನು ಒಂದು ಕೋಲಿನ ತುದಿಗೆ ಅವುಗಳನ್ನು ಅಂಟಿಸಿದಷ್ಟೂ, ಮರುದಿನ ಅಷ್ಟೇ ಪ್ರಮಾಣದ ಜೇಡರ ಬಲೆಗಳು ಅಲ್ಲಿ ಪ್ರತ್ಯಕ್ಷವಾಗುತ್ತಿದ್ದವು!
ಬಲೆ ತೆಗೆದರೂ, ಆ ನಿರುಪದ್ರವಿ ಜೀವಿಗಳನ್ನು ನಾನು ಸಾಯಿಸುತ್ತಿರಲಿಲ್ಲ. ಆದ್ದರಿಂದ ಅವುಗಳ ದಿನಚರಿ ಮುಂದು ವರಿಯುತ್ತಿತ್ತು ಎನ್ನಬಹುದು. ಆದರೆ ಈಚಿನ ದಶಕಗಳಲ್ಲಿ, ನಮ್ಮ ಹಳ್ಳಿಯೂ ಸೇರಿದಂತೆ ಎಲ್ಲಾ ಕಡೆ ಕ್ರಿಮಿನಾಶಕಗಳ ಬಳಕೆ
ಹೆಚ್ಚಾಗಿದ್ದುದರಿಂದ, ಜೇಡಗಳ ಸಂತತಿಗೆ ತುಸು ತೊಡಕು ಎದುರಾಗಿರಲೇಬೇಕು.
ಜೇಡ ಬಲೆ ಕಟ್ಟುವ ಕೌಶಲವನ್ನು ನೋಡಿಯೇ ನಂಬಬೇಕು. ಕೆಲವು ಜೇಡಗಳಂತೂ ತಾವೇ ಸ್ರವಿಸುವ ರೇಷ್ಮೆಯಂತಹ ಸೂಕ್ಷ್ಮ ದಾರವನ್ನು ಅದೆಷ್ಟು ಕರಾರುವಕ್ಕಾಗಿ ಬಲೆಯ ರೂಪಕ್ಕೆ ತಂದಿರುತ್ತವೆಂದರೆ, ಇಂತಹ ಅದ್ಭುತ ಕಲೆಯನ್ನು ಅವುಗಳಿಗೆ ಕಲಿಸಿದ್ದಾದರೂ ಯಾರು ಎಂಬ ವಿಸ್ಮಯ ಮೂಡುತ್ತದೆ. ಜೇಡಗಳಲ್ಲಿ ಸಾಕಷ್ಟು ಪ್ರಭೇದಗಳಿವೆ. ಜಗತ್ತಿನಲ್ಲಿ ಸುಮಾರು ೫೦,೦೦೦ಕ್ಕೂ ಹೆಚ್ಚಿನ ಪ್ರಭೇದದ ಜೇಡಗಳಿವೆ. ನಮ್ಮ ದೇಶದಲ್ಲಿ ಸುಮಾರು 1923 ಪ್ರಭೇದದ ಜೇಡಗಳಿವೆ ಎಂದು
ಅಂದಾಜಿಸಲಾಗಿದೆ. ‘ಇಂಡಿಯನ್ ಸ್ಪೈಡರ್ಸ್.
ಇನ್’ ವೆಬ್ ಸೈಟ್ ಒಂದು ಮಾಹಿತಿ ಕುತೂಹಲ ಹುಟ್ಟಿಸುತ್ತದೆ. 1987ರಲ್ಲಿ ನಮ್ಮ ದೇಶದಲ್ಲಿ ಗುರುತಿಸಲಾಗಿದ್ದ ಜೇಡ ಪ್ರಭೇದಗಳ ಸಂಖ್ಯೆ ಕೇವಲ 1067. ಹೊಸ ಅಧ್ಯಯನಗಳು ನಡೆದ ನಂತರ, ನಮ್ಮ ದೇಶದ ಜೇಡ ಪ್ರಭೇದಗಳ ಸಂಖ್ಯೆ
ಹೆಚ್ಚಳಗೊಂಡಿದೆ. 2005ರಲ್ಲಿ 1442 ಪ್ರಭೇದಗಳು, 2009ರಲ್ಲಿ 1520 ಪ್ರಭೇದಗಳು, 2012ರಲ್ಲಿ 1686
ಪ್ರಭೇದಗಳ ಜೇಡಗಳನ್ನು ದಾಖಲಿಸಲಾಗಿದೆ. ಈ ಜೇಡಗಳು ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿದ್ದರೂ, ಈಚಿನ ಅಧ್ಯಯನಗಳಿಂದಾಗಿ, ಅವುಗಳನ್ನು ಗುರುತಿಸಲು ಸಾಧ್ಯವಾಗಿದೆ.
ಈ ಅಧ್ಯಯನಗಳಿಂದ ಗೊತ್ತಾಗುವ ಒಂದು ವಿಶೇಷವಿದೆ. ಕಳೆದ ೨೫ ವರ್ಷಗಳಲ್ಲಿ, ನಮ್ಮ ದೇಶದಲ್ಲಿ 519 ಹೊಸ ಪ್ರಭೇದದ ಜೇಡಗಳನ್ನು ನಮ್ಮ ವಿಜ್ಞಾನಿಗಳು ಗುರುತಿಸಿದ್ದಾರೆ. ಅಂದರೆ, ಇನ್ನೂ ಗುರುತಿಸದೇ ಇರುವ ಜೇಡಗಳು ನಮ್ಮ
ದೇಶದಲ್ಲೂ ಇವೆ ಎಂಬುದು ಸ್ಪಷ್ಟ. ಇದರಲ್ಲೇನು ಅಚ್ಚರಿಯಿಲ್ಲ. ಜಗತ್ತಿನಲ್ಲಿ ಇಂದಿಗೂ ಗುರುತಿಸಬೇಕಾಗಿರುವ ಸಾವಿರಾರು ಪ್ರಭೇದದ ಜೇಡ ಮತ್ತು ಕೀಟಗಳಿವೆ ಎಂದು ತಜ್ಞರು ಹೇಳುತ್ತಲೇ ಇದ್ದಾರೆ.
ಹೆಚ್ಚಿನ ಅಧ್ಯಯನದಿಂದ ಅವುಗಳನ್ನು ಪತ್ತೆ ಮಾಡಬಹುದು. ಜೇಡಗಳ ಆಕಾರ, ಗಾತ್ರ ಮತ್ತು ಬಣ್ಣದ ವಿಚಾರ ಬಂದರೆ, ಇಂಡಿಯನ್ ಆರ್ನಮೆಂಟಲ್ ಟರಂಟುಲಾ (ಪೋಸಿಲೋತೇರಿಯಾ ರೆಗಾಲಿಸ್) ಎಂಬ ದೊಡ್ಡ ಗಾತ್ರದ ಜೇಡದ ಕುರಿತು
ಹೇಳಲೇಬೇಕು. ನಮ್ಮ ರಾಜ್ಯದಲ್ಲಿ ಅಲ್ಲಲ್ಲಿ ಕಾಣಸಿಗುವ ಇದರ ಉದ್ದ ಸುಮಾರು ಎಂಟು ಇಂಚು! ಅಂಗೈ ಮೇಲೆ ಇಟ್ಟುಕೊಂಡರೆ, ಇದರ ದೇಹ ಪೂರ್ತಿ ಅಂಗೈಯನ್ನು ಮುಚ್ಚಬಲ್ಲದು. ಇದು ಕಚ್ಚಿದರೆ ಅಲ್ಪ ಪ್ರಮಾಣದ ವಿಷ ಎನ್ನುತ್ತಾರೆ ತಜ್ಞರು.
ಜೀವಕ್ಕೆ ಅಪಾಯವಿಲ್ಲ. ಆದರೆ ಇದು ಕಚ್ಚಿದ ಜಾಗದಲ್ಲಿ ತರಚು ರೀತಿಯ ಗಾಯವಾಗಬಲ್ಲದು. ಇದನ್ನು ಅಲಂಕಾರಿಕ ಸಾಕುಪ್ರಾಣಿಯ ರೂಪದಲ್ಲಿ ಸಾಕುವ ಹವ್ಯಾಸವೂ ನಮ್ಮಲ್ಲಿದೆ! ಆದರೆ ಟರಂಟುಲಾ ಎಂದು ಕರೆಯಲಾಗುವ, ಆಸ್ಟ್ರೇಲಿಯಾ, ಬ್ರೆಜಿಲ್‌ನಲ್ಲಿ ಕಾಣಸಿಗುವ ದೊಡ್ಡ ಗಾತ್ರದ ಕೆಲವು ಜೇಡಗಳು ಕಚ್ಚಿದಾಗ ಬಿಡುಗಡೆಯಾಗುವ ವಿಷವು ಮನುಷ್ಯನ ಜೀವವನ್ನು
ತೆಗೆಯಬಲ್ಲವು! ತೀರಾ ಅಪರೂಪಕ್ಕೆ ಆ ದೇಶಗಳಲ್ಲಿ ಟರಂಟುಲಾ ಕಚ್ಚಿ, ಮನುಷ್ಯ ಮೃತಪಟ್ಟ ಘಟನೆ ವರದಿಯಾಗಿದೆ. ಆದರೆ, ನಮ್ಮ ದೇಶದ ಆರ್ನಮೆಂಟಲ್ ಟರಂಟುಲಾದ ವಿಷ ಅಷ್ಟು ತೀವ್ರವಾಗಿಲ್ಲ ಎನ್ನುತ್ತಾರೆ ತಜ್ಞರು.
ನಮ್ಮ ರಾಜ್ಯದಲ್ಲಿ ಕಾಣಸಿಗುವ ಇಂಡಿಯನ್ ಆರ್ನಮೆಂಟಲ್ ಟರಂಟುಲಾದಷ್ಟೇ ದೊಡ್ಡದಾದ ಆರೇಳು ಜೇಡ ಪ್ರಭೇಧಗಳು ನಮ್ಮ ದೇಶದಲ್ಲಿವೆ. ಇದರ ಹತ್ತಿರದ ಸಂಬಂಧಿ ಮೈಸೂರು ಆರ್ನಮೆಂಟಲ್ ಟರಂಟುಲಾ (ಪೋಸಿಲೋತೇರಿಯಾ
ಸ್ಟ್ರೈಟಾ) ನಮ್ಮ ರಾಜ್ಯದ ಮಲೆನಾಡು ಪ್ರದೇಶದಲ್ಲಿದೆ. ಆಂಧ್ರ ಪ್ರದೇಶದ ಕೆಲವು ಕಡೆ ಕಾಣಸಿಗುವ ‘ಪೋಸಿಲೋತೇರಿಯಾ ಟೈಗ್ರಿನಾವೆಸ್ಸೆಲಿ’ ಜೇಡ (ವೆಸಲ್ಸ್ ಟೈಗರ್ ಆರ್ನಮೆಂಟಲ್), ಎಂಟು ಇಂಚು ಗಾತ್ರಕ್ಕೆ ಬೆಳೆಯಬಲ್ಲದು!
ಇದು ಆಂಧ್ರಪ್ರದೇಶದ ಪೂರ್ವಘಟ್ಟ ಪ್ರದೇಶದ ಆರೇಳು ಜಾಗಗಳಲ್ಲಿ ಕಂಡು ಬಂದಿದೆ. ಮರದ ಪೊಟರೆ, ತೊಗಟೆಯ
ಚಡಿ, ಕಲ್ಲುಗಳ ನಡುವಿನ ಸಂದಿಗಳೇ ಇವುಗಳ ವಾಸಸ್ಥಳ; ಮನುಷ್ಯನ ವಸತಿ ಹತ್ತಿರ ಕಡಿಮೆ. ಇವುಗಳ ಜೀವನ ಕ್ರಮ, ವಿಷದ ಪ್ರಮಾಣ ಮತ್ತು ಇತರ ವಿವರಗಳು ಹೆಚ್ಚು ಲಭ್ಯವಿಲ್ಲ. ಎಂಟು ಇಂಚು ಗಾತ್ರದ ಈ ಜೇಡ ಕಚ್ಚಿದರೆ ಮನುಷ್ಯನಿಗೆ ವಿಷ
ಏರುತ್ತದೆಯೇ ಇಲ್ಲವೇ ಎಂಬುದರ ಕುರಿತಾದ ಮಾಹಿತಿಯೂ ವ್ಯಾಪಕವಾಗಿ ದಾಖಲಾಗಿಲ್ಲ.
ಹೆಚ್ಚಿನ ಜೇಡಗಳು ತಮ್ಮ ಬಲೆಯಲ್ಲಿ ಸಿಕ್ಕಿಬಿದ್ದ ಕೀಟಗಳನ್ನು ಕಚ್ಚಿ, ವಿಷವುಣಿಸಿ, ನಿಷ್ಕ್ರಿಯಗೊಳಿಸಿ, ನಂತರ ಅವನ್ನು ತಿನ್ನುತ್ತವೆ ಎಂಬ ವಿಚಾರ ಎಲ್ಲರಿಗೂ ಗೊತ್ತಿರುವಂತಹದ್ದೇ. ದೊಡ್ಡ ಗಾತ್ರದ ಜೇಡಗಳ ವಿಷ ಸಾಕಷ್ಟು ಉರಿ, ನಂಜು ಉಂಟುಮಾಡ ಬಲ್ಲದು. ಆಸ್ಟ್ರೇಲಿಯಾದ ಫೈನೆಲ್ ವೆಬ್ ಸ್ಪೈಡರ್, ದಕ್ಷಿಣ ಅಮೆರಿಕಾದ ಟರಂಟುಲಾಗಳು ಕಚ್ಚಿದಾಗ ಮನುಷ್ಯ ಮೃತಪಟ್ಟ ಘಟನೆಗಳು ವರದಿಯಾಗಿವೆ. ನಮ್ಮ ದೇಶದಲ್ಲೂ ಅಂತಹ ಜೇಡಗಳಿರುವ ಸಾಧ್ಯತೆ ಇದೆಯೆ? ತಜ್ಞರನ್ನು ವಿಚಾರಿಸಿದಾಗ, (ಇದುವರೆಗೆ) ಅಂತಹ ವಿಷಕಾರಿ ಜೇಡಗಳು ನಮ್ಮ ದೇಶದಲ್ಲಿ ದಾಖಲಾಗಿಲ್ಲ ಎಂದೇ ಹೇಳುತ್ತಾರೆ. ಇದೇ ಸಮಯದಲ್ಲಿ, ಆಂಧ್ರಪ್ರದೇಶದ ‘ಪೊಸಿಲೋತೇರಿಯಾ ಟೈಗ್ರಿನಾ ವೆಸ್ಸೆಲಿ’ ಯಂತಹ, ಎಂಟು ಇಂಚು ಗಾತ್ರದ ಜೇಡದ ಜೀವನ ಕ್ರಮ ಮತ್ತು ವಿಷದ ಪ್ರಮಾಣದ ಪೂರ್ಣ ಅಧ್ಯಯನ ನಡೆದಿಲ್ಲ ಎಂಬುದೂ ವಾಸ್ತವವೇ.
ಹಾಗಿದ್ದ ಪಕ್ಷದಲ್ಲಿ, ನಮ್ಮ ದೇಶದಲ್ಲಿ ತೀವ್ರ ವಿಷದ ಜೇಡಗಳು ಪತ್ತೆಯಾಗುವ ಸಾಧ್ಯತೆ ಇದೆಯೆ? ಈ ವಿಚಾರದಲ್ಲಿ, ನಮ್ಮ ರಾಜ್ಯದ ಹೊಸದುರ್ಗ, ಅರಸಿಕೆರೆ, ಕಡೂರು ಮೊದಲಾದ ಒಣಪ್ರದೇಶಗಳಲ್ಲಿ ವಿಷಕಾರಿ ಜೇಡದ ಕುರಿತು ಇರುವ ನಂಬಿಕೆಯ
ಕುರಿತು ಪ್ರಸ್ತಾಪಿಸಬಹುದು. ದೊಡ್ಡ ಗಾತ್ರದ, ಮೈತುಂಬಾ ರೋಮ ಹೊಂದಿದ, ಹೊಲದಲ್ಲಿ ಕಾಣಸಿಗುವ ‘ಅಬ್ಬೆ’ ಎಂಬ ಜೇಡ ಕಚ್ಚಿದರೆ, ಮನುಷ್ಯನು ಮೃತನಾಗಬಹುದು ಎಂದೇ ಅಲ್ಲಿನ ಗ್ರಾಮೀಣ ಪ್ರದೇಶದ ಜನರು ಹೇಳುತ್ತಾರೆ.
‘ಅಬ್ಬೆ ಕಚ್ಚಿದರೆ ಹೆಬ್ಬಾಗಿಲ ತನಕ ಬರುವಷ್ಟು ಸಮಯವಿಲ್ಲ’ ಎಂಬ ಗಾದೆಯೇ ಅರಸಿಕೆರೆ, ಹೊಸದುರ್ಗ ಮೊದಲಾದ ಪ್ರದೇಶಗಳಲ್ಲಿದೆ. ಹೊಲಕ್ಕೆ ಹೋದಾಗ, ಅಕಸ್ಮಾತ್ ಅಬ್ಬೆ ಕಚ್ಚಿದರೆ, ಅಂತಹ ವ್ಯಕ್ತಿಯನ್ನು ಊರಿನ ಹೆಬ್ಬಾಗಿಲಿಗೆ ತರುವಷ್ಟರಲ್ಲಿ ಮೃತನಾಗಬಹುದು ಎನ್ನುವ ಗಾದೆ ಅದು. ಹೊಲಗಳಲ್ಲಿ, ಹುಲ್ಲುಗಾವಲಿನಂತಹ ಮಟ್ಟಸ ಜಾಗಗಳ ನೆಲದ ಮೇಲೆ ಇರುವ ಬಿಲದಂತಹ ಚಿಕ್ಕ ತೂತುಗಳಲ್ಲಿ ಅವುಗಳ ವಾಸ ಎಂಬ ನಂಬಿಕೆ; ಕುರಿಗಾಹಿಗಳು ‘ಅಬ್ಬೆ’ ಜೇಡವನ್ನು ಕಂಡ ತಕ್ಷಣ, ಕಲ್ಲು ತೆಗೆದುಕೊಂಡು ಚಚ್ಚಿಹಾಕುತ್ತಾರೆ!
ಒಂದೆರಡು ಇಂಚು ಗಾತ್ರ ಇರಬಹುದಾದ ‘ಅಬ್ಬೆ’ ಜೇಡದ ಕುರಿತು ಇರುವ ಈ ರೀತಿಯ ವಿಪರೀತ ಭಯದಿಂದಾಗಿ, ಆ ಪ್ರದೇಶದವರೆಲ್ಲರೂ ಅಂತಹ ಜೇಡಗಳನ್ನು ನಿರಂತರವಾಗಿ ಚಚ್ಚಿ ಸಾಯಿಸುತ್ತಿರುವುದರಿಂದ, ಈಗಾಗಲೇ ಅವು ನಿರ್ನಾಮ ವಾಗುವ ಹಂತಕ್ಕೆ ಬಂದಿರಲೂ ಬಹುದು! ಅಥವಾ ‘ಅಬ್ಬೆ’ ಮನುಷ್ಯನ ಪ್ರಾಣ ತೆಗೆಯಬಲ್ಲಷ್ಟು ವಿಷ ಹೊಂದಿದೆ ಎಂಬುದು ಕೇವಲ ನಂಬಿಕೆ (ಮೂಢನಂಬಿಕೆ)ಯೂ ಆಗಿರಬಹುದು!
ಏಕೆಂದರೆ, ನಮ್ಮ ರಾಜ್ಯದ ಬಯಲು ಸೀಮೆಯಲ್ಲಿ ಕಾಣಸಿಗುವ ‘ಅಬ್ಬೆ’ ಜೇಡದ ಕುರಿತು ಹೆಚ್ಚಿನ ಮಟ್ಟದ ವೈಜ್ಞಾನಿಕ ಅಧ್ಯಯನ ನಡೆದಂತಿಲ್ಲ. ಆದರೆ, ಅರಸಿಕೆರೆ, ಕಡೂರು ಮೊದಲಾದ ಪ್ರದೇಶಗಳಲ್ಲಿನ ಜನರು ‘ಅಬ್ಬೆ’ ಎಂದರೆ ತೀವ್ರ ವಿಷಕಾರಿ ಜೇಡ ಎಂದು ನಂಬಿರುವುದಂತೂ ನಿಜ. ನೀವು ‘ಅಬ್ಬೆ’ (ಅಥವಾ ಅಬ್ಬ) ಜೇಡದ ವಿಷದ ಕುರಿತು ಏನಾದರೂ ವಿಚಾರ
ಕೇಳಿದ್ದೀರಾ? ಗೊತ್ತಿದ್ದರೆ, ಮಾಹಿತಿ ಹಂಚಿಕೊಳ್ಳಲು ಸ್ವಾಗತ.
(ಚಿತ್ರ : ಇಂಡಿಯನ್ ಮತ್ತು ಮೈಸೂರು ಆರ್ನಮೆಂಟಲ್ ಟರಂಟುಲಾ)