Sunday, 24th November 2024

ಪ್ರಾಣಿಗಳೇಕೆ ಕಾನೂನು ಪಾಲಿಸುವುದಿಲ್ಲ ?

ಶಿಶಿರ ಕಾಲ

shishirh@gmail.com

ಒಬ್ಬ ವ್ಯಕ್ತಿಯನ್ನು, ಬಂಧಿಸುವಾಗ ಕೂಡ ಅದಕ್ಕೆ ಮುನ್ನ ಕಾರಣ ಹೇಳಲಾಗುತ್ತದೆ. ಪ್ರಾಣಿಗಳಿಗೆ ಕಾರಣ ಹೇಳುವವರಾರು? ಕಾರಣವನ್ನೇ ಹೇಳದೆ, ಅಪರಾಧ ದೃಢಪಡದೆ, ಕೊಲೆಗಾರನ ಗುರುತಿಸದೆ, ಪುರಾವೆಗಳನ್ನೊದಗಿಸದೆ ಪ್ರಾಣಿಯೊಂದನ್ನು ಕೊಲ್ಲುವುದು ಎಷ್ಟು ಸರಿ? ಪ್ರಾಣಿಗಳ ಬಗೆಗಿನ ನೈತಿಕತೆ, ಕಾನೂನು ಬಂದಾಗ ನಾವು ಆಸ್ಥೆಯಿಂದ ವ್ಯವಸ್ಥೆಯನ್ನು ರೂಪಿಸುವುದಿಲ್ಲವೇಕೆ? ನಮಗೇಕೆ ಅಷ್ಟು ಅಸಡ್ಡೆ?

ನಮ್ಮ ಮನೆಯ ಹಿತ್ತಲಿನ ಹಿಂದೆಲ್ಲ ಪಶ್ಚಿಮಘಟ್ಟ (ಇದನ್ನು ಹಿಂದೆ ಸಾಕಷ್ಟು ಬಾರಿ ಹೇಳಿದ್ದೇನೆ). ನಮ್ಮೂರಿಗೆ ಕೆಲಸಕ್ಕೆ ಬರುವ ಕೃಷಿ ಕಾರ್ಮಿಕರೆಲ್ಲ ಪಕ್ಕದೂರಿನವರು. ಆ ಊರಿಗೆ ರಸ್ತೆಯಲ್ಲಿ ನಡೆದರೆ ೬-೭ ಕಿ.ಮೀ. ಆದರೆ ನಮ್ಮ ಮನೆಯ ಹಿಂದಿನ ಗುಡ್ಡ ಹತ್ತಿ ಪಕ್ಕಕ್ಕಿಳಿದರೆ ೧ ಕಿ.ಮೀ.ಗಿಂತ ಕಡಿಮೆಯ ಕಾಡುದಾರಿ.

ನಮ್ಮೂರಲ್ಲಿ ಕಾಡುದಾರಿ, ಗದ್ದೆದಾರಿ, ತೋಟದದಾರಿ, ಬೇಣದದಾರಿ ಮೊದಲಾದ ಹಾದಿಗಳಲ್ಲೇ ಅತಿಹೆಚ್ಚು ಜನ ಭೂಗತ ವಾಗಿಯೇ ಸಂಚರಿಸು ವುದು. ಡಾಂಬರು ರಸ್ತೆಯಲ್ಲಿ ನಡೆದುಹೋಗುವ ಸೀನ್ ಕಡಿಮೆ. ಪಕ್ಕದೂರು ಮತ್ತು ನಮ್ಮೂರಿಗೆ ವಿಮುಖವಾಗಿ ಇನ್ನೊಂದು ಕಡೆ ಗುಡ್ಡ ಹತ್ತಿದರೆ ಪಶ್ಚಿಮಘಟ್ಟ ದಾಟಿ ಬಯಲುಸೀಮೆವರೆಗೂ ಕಾಡಿನಲ್ಲೇ ನಡೆಯಬಹುದು. ಆದರೆ ಹಾಗೆ ಕಾಡಲ್ಲಿ ಹೋಗಲಿಕ್ಕಾಗುವುದಿಲ್ಲ, ಅದು ಬೇರೆ ವಿಷಯ. ಹೀಗಿರುವ ಮನೆಯ ಹಿಂದಿನ ಗುಡ್ಡದಲ್ಲಿ ಕಾಡುಪ್ರಾಣಿ ಗಳಿಗೆ ಕೊರತೆಯಿಲ್ಲ.

೨ ದಶಕದ ಹಿಂದೆ, ಪಕ್ಕದೂರಿನ ಕೃಷಿಕಾರ್ಮಿಕರಿಗೆ ಬೇಟೆ ವಾರ್ಷಿಕ ರಿವಾಜಿನಲ್ಲಿ ಒಂದಾಗಿತ್ತು. ಸಾಮಾನ್ಯವಾಗಿ ಹಬ್ಬದ
ಮಾರನೇ ದಿನ ಇವರೆಲ್ಲ ಬೇಟೆಗೆಂದು ಗುಂಪಾಗಿ ಕಾಡಿಗೆ ಹೋಗಿ, ಸುಮಾರು ೧೫೦ ಮೀ. ಉದ್ದದ ಬಲೆಯನ್ನು ಅಲ್ಲಿ
ನೆಟ್ಟು ಸರಳರೇಖೆಯಲ್ಲಿ ನಿಲ್ಲಿಸುತ್ತಿದ್ದರು. ನಂತರ ಇನ್ನೊಂದು ಕಡೆ ಗದ್ದಲವಿಲ್ಲದೆ ದೊಡ್ಡ ಗುಂಪು ಹೋಗುವುದು, ಅಲ್ಲಿಂದ ಒಮ್ಮಿಂದೊಮ್ಮೆಲೇ ಎಲ್ಲರೂ ಕೂಗುತ್ತ, ತೆಂಗಿನ ಹೆಡೆಪೆಂಟೆ ಮತ್ತು ಅಡಿಕೆ ಸೋಗೆಯಿಂದ ಮಾಡಿದ ಗದೆಯಂಥ
ಆಕಾರವನ್ನು ಕಲ್ಲಿಗೆ ಗಟ್ಟಿಯಾಗಿ ಬಡಿಯುವುದು, ಪಟಾಕಿ ಹೊಡೆಯುವುದು, ಕಿರುಚುವುದು. ಹೀಗೆ ಶಬ್ದ ಮಾಡಿದಾಗ
ಪ್ರಾಣಿಗಳು, ಅದರಲ್ಲೂ ಹಗಲಲ್ಲಿ ಮಲಗುವ ಕಾಡುಹಂದಿಗಳು ಹೆದರಿ ಬಲೆಯತ್ತ ಓಡಿ ಸಿಕ್ಕಿಹಾಕಿಕೊಳ್ಳುತ್ತಿದ್ದವು.

ಹೀಗೆ ಬೇಟೆಯ ವೇಳೆ ಓಡುವಾಗ ಬೇಟೆಗಾರರು ಬೀಳುವುದು, ಪೆಟ್ಟು ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಅಂಥವರು ಸುಧಾರಿಸಿಕೊಳ್ಳಲು, ಮಜ್ಜಿಗೆ ಕುಡಿಯಲು ನಮ್ಮ ಮನೆಗೆ ಬರುತ್ತಿದ್ದರು. ಅವರು ನಡೆದ ಘಟನೆಗೆ ಬಣ್ಣಹಚ್ಚಿ ವಿವರಿಸುತ್ತಿದ್ದರೆ ಮಕ್ಕಳಾದ ನಾವು ಬಾಯ್ತೆರೆದು ಕೇಳುತ್ತಿದ್ದೆವು. ಅದನ್ನು ವಿವರಿಸುವಾಗ ‘ಹಾಗಾಯ್ತು, ಇಲ್ಲ ಹೀಗಾಯ್ತು’ ಎಂದು ಅವರಲ್ಲಿಯೇ ವಾಗ್ವಾದಗಳೂ ನಡೆಯುತ್ತಿದ್ದವು. ಎಲ್ಲ ಆಯಾಮಗಳೂ ಅಷ್ಟೇ ಅತಿರಂಜಿತವಾಗಿರುತ್ತಿದ್ದವು.

ಬೇಟೆ ಬಲೆಗೆ ಬಿದ್ದಾಗಿನ ಹರ್ಷೋದ್ಗಾರ ಕೇಳಿದಾಕ್ಷಣ ನೋಡಲು ಗುಡ್ಡ ಹತ್ತಿ ಓಡುತ್ತಿದ್ದೆವು. ಬಲೆಗೆ ಬಿದ್ದ ಹಂದಿಯನ್ನು ಈಟಿ ಚುಚ್ಚಿ ಕೊಲ್ಲುವ ವಿಶೇಷ ಕೌಶಲ ಒಂದಿಬ್ಬರಿಗಷ್ಟೇ ಇರುತ್ತಿತ್ತು. ಬೇಟೆಯ ಗುಂಪಿನಲ್ಲಿ ಎಳಸು ಬೇಟೆಗಾರರಿಗೆ ಈ ಗದ್ದಲ ವೆಬ್ಬಿಸುವ ಕೆಲಸ. ಅದರಲ್ಲಿ ಕೋವಿಯ ಕಸುಬು ಬಲ್ಲವರೊಂದಿಷ್ಟು ಮಂದಿ ಬಲೆಯ ಇನ್ನೊಂದು ಕಡೆ ಕೋವಿ ಹಿಡಿದು ಮರ ಹತ್ತಿ ಕೂರುತ್ತಿದ್ದರು.

ಓಡಿಬರುವ ಹಂದಿಯ ರಭಸಕ್ಕೆ ಕೆಲವೊಮ್ಮೆ ಬಲೆ ಹರಿದುಹೋಗುತ್ತಿತ್ತು. ಹಾಗಾದಲ್ಲಿ ಅದಕ್ಕೆ ಮರದ ಮೇಲೆ ಕೂತವರು ಗುಂಡು ಹಾರಿಸುತ್ತಿದ್ದರು. ಕೊಂದ ಹಂದಿಯನ್ನು ಪಾಲು ಹಂಚುವಾಗ ಗುಂಪಿನ ಮುಖ್ಯಸ್ಥನಿಗೆ ೪ ಪಾಲು, ಕೊಂದವನಿಗೆ ೨ ಪಾಲು- ಅದರಂದು ತೊಡೆಯ ಭಾಗ, ಉಳಿದವರಿಗೆ ಏಕಪಾಲು. ಅದರಲ್ಲಿ ಅವರು ಪೂಜಿಸುವ ಹುಲಿದೇವರಿಗೂ ೧ ಪಾಲಿತ್ತು. ಇದು ಅಲ್ಲಿನ ಸೂಕ್ಷ್ಮ. ಅಂತೆಯೇ ನೋಡಲು ಹೋದ ನಮಗೆ ಹಂದಿಯ ಜೋಮೆಯನ್ನು (ರೋಮ ಗ್ರಾಮ್ಯವಾಗಿ ಜೋಮೆ) ದೇವರ ವಿಗ್ರಹ ಸ್ವಚ್ಛಗೊಳಿಸಲು ಕೊಡುತ್ತಿದ್ದರು.

ಇದು ಸಮಬಾಳ್ವೆ. ಹಂದಿಗಳು ರಾತ್ರಿ ಸಿಕ್ಕಾಪಟ್ಟೆ ಆಕ್ಟಿವ್. ಅವು ತೋಟಕ್ಕೆ ಲಗ್ಗೆಯಿಟ್ಟು ದಾಂಧಲೆ ಎಬ್ಬಿಸುವುದು ಇವೆಲ್ಲ ಇತ್ತು. ಇಂಥ ಹಂದಿಯ ಬೇಟೆ ಸುಲಭವಲ್ಲ. ರಾತ್ರಿ ಬೇಟೆಗೆ ನಾಲ್ಕಾರು ಮಂದಿ ಹಣೆಗೆ ಬ್ಯಾಟರಿ ಕಟ್ಟಿಕೊಂಡು ಬರುವುದು, ಕೋವಿಗೆ
ಗುಂಡು ತುಂಬಿ ಹೊಡೆಯುವುದು ಹೀಗೆ. ಕತ್ತಲಲ್ಲಿ ಬೇಟೆಗೆ ಹೋಗುವುದು ಥೇಟ್ ‘ಕಾಂತಾರ’ ಸಿನೆಮಾದಲ್ಲಿ ರಿಷಬ್ ಶೆಟ್ಟಿ- ಶಿವ ಮತ್ತು ಗುಂಪು ಹೊರಟಂತೆಯೇ.

ಅದರಲ್ಲಿ ರಿಷಬ್ ಓಡುತ್ತ ಕೋವಿಗೆ ಗುಂಡು ತುಂಬಿಸುವ ಸೀನ್ ಇದೆಯಲ್ಲ, ಅದು ಈ ರಾತ್ರಿಬೇಟೆಯಲ್ಲಿ ಸಾಮಾನ್ಯ. ಈ
ಬೇಟೆಗಳನ್ನು ಅವರು ಕರೆಯುತ್ತಿದ್ದುದು ‘ಹೊಲ’ ಎಂದು. ಅದು ‘ಹೊಲ ಕಾಯುವುದು’ ಎನ್ನುವುದು ಚಿಕ್ಕದಾಗಿ ‘ಹೊಲ’ ಅಷ್ಟೆ ಉಳಿದುಕೊಂಡು ರೂಢಿಯಲ್ಲಿ ಬೇರೆಯದೇ ಅರ್ಥ ಕೊಡುವಂತಾಗಿತ್ತು. ಬಹುಶಃ ಮಾಂಸದ ಸಲುವಾಗಿ ಇರುವುದು ಬೇಟೆ, ಹೊಲ ಕಾಪಾಡಲು ಬೇಟೆಯಾಡುವುದು ‘ಹೊಲ’ ಎಂದಾಗಿರಬೇಕು. ಒಮ್ಮೆ ಹೀಗೆ ಬೇಟೆಗೆ ಬಂದಾಗ ಒಂದು ಹಂದಿಗೆ ಗುಂಡಿನ ಪೆಟ್ಟು ಬಿತ್ತು. ಗಾಯಗೊಂಡ ಹಂದಿ ತೀರಾ ಅನಿರೀಕ್ಷಿತವಾಗಿ ವರ್ತಿಸುತ್ತದೆ.

ಕೆಲವೊಮ್ಮೆ ಬೇಟೆಗಾರರತ್ತ ಧಾವಿಸಿ ಕೋರೆಹಲ್ಲಿನಿಂದ ತಿವಿಯುವುದಿದೆ. ಹೀಗೆ ನುಗ್ಗುವ ಹಂದಿಯಿಂದ ತಪ್ಪಿಸಿಕೊಳ್ಳುವುದು ಒಂದು ಸ್ಕಿಲ್. ಹಂದಿಗೆ ಬೆನ್ನುಹುರಿ ಅಡ್ಡಕ್ಕೆ ಬಾಗುವುದಿಲ್ಲ. ಹಾಗಾಗಿ ಅವು ನೇರ ಓಡುತ್ತವೆ. ಹಾಗೆ ಓಡಿ ನಮ್ಮತ್ತ ಬರುವಾಗ,
ತೀರಾ ಹತ್ತಿರ ಬಂದಾಗ ಆಚೆ ಹಾರಿಕೊಂಡರೆ ಹಂದಿಗೆ ಥಟ್ಟನೆ ತಿರುಗಲಿಕ್ಕೆ ಆಗುವುದಿಲ್ಲ. ಆ ರಾತ್ರಿ ಪೆಟ್ಟುಬಿದ್ದ ಹಂದಿ ಓಡಿ ಬಂದು ತಿವಿದಿದ್ದಕ್ಕೆ ಬೇಟೆಗಾರನ ತೊಡೆಭಾಗದಲ್ಲಿ ಪೆಟ್ಟಾಗಿ ರಕ್ತಮಯವಾಗಿತ್ತು. ನಮ್ಮ ಮನೆಗೆ ಬಂದ ಅವರನ್ನು ಆಸ್ಪತ್ರೆಗೆ ಒಯ್ದದ್ದಾಯಿತು.

ನಂತರ ಆ ಹಂದಿಯ ವಿರುದ್ಧ ಊರಿನವರೆಲ್ಲ ಸಿಟ್ಟಿಗೆದ್ದು ಒಂದಾದರು. ಅದನ್ನು ಹುಡುಕಿ ಕೊಲ್ಲಲು ಹಲವು ಯತ್ನಗಳಾದವು. ಕೊನೆಗೆ ಒಂದು ಹಂದಿಯನ್ನು ಈಡು ಮಾಡಿದ್ದಾಯಿತು. ಆದರೀಗ ಅವರಲ್ಲೇ ಭಿನ್ನಮತ- ‘ಇದು ಅದೇ ಹಂದಿ’ ಎಂದು ಒಂದಿಬ್ಬರು, ‘ಇದು ಅದಲ್ಲ, ಬೇರೆ’ ಅಂತ ಇನ್ನೊಂದಿಬ್ಬರು. ವಾದ ತಾರಕಕ್ಕೇರಿ ೨ ಗುಂಪಾಗಿ ಗಲಾಟೆಗಳಾದವು. ಯಾವುದೋ ಒಂದು ಹಂದಿ ಸಿಕ್ಕಿತು ಎಂದು ಉಳಿದವರಿಗೆ ಖುಷಿಯಾದರೂ ಅದನ್ನು ಬಾಯಿಬಿಟ್ಟು ಹೇಳುವಂತಿಲ್ಲ. ಅದು ಪೆಟ್ಟುಮಾಡಿದ ಅಪರಾಧಿ ಹಂದಿಯೋ, ಅಲ್ಲವೋ ಕೊನೆಗೂ ತಿಳಿಯಲಿಲ್ಲ.

ಪ್ರಾಣಿ-ಮನುಷ್ಯನ ನಡುವಿನ ಸಂಘರ್ಷ ಹಲವು ಬಾರಿ ಮನುಷ್ಯರ ನಡುವಿನ ಗಲಾಟೆಗೆ ಹೋಗಿ ನಿಂತದ್ದಿದೆ. ಪ್ರಾಣಿಗಳು ಕೃಷಿಕರ ತೋಟಕ್ಕೆ ಹಾನಿಮಾಡುವ ಹಂತಕ್ಕೆ ತಲುಪದಂತೆ ಅವುಗಳ ಸಂಖ್ಯೆಯನ್ನು ಬೇಟೆಯ ಮೂಲಕ ನಿಯಂತ್ರಿಸುವ ಅವಶ್ಯಕತೆ ಕೆಲವೆಡೆಯಿದೆ. ಅಂತೆಯೇ ಪರಭಕ್ಷಕ ಪ್ರಾಣಿಗಳಿರದಿದ್ದಲ್ಲಿ ಅಲ್ಲಿನ ಸರಕಾರವೇ ಬೇಟೆಗೆ ಅನುಮತಿಸುವ ರೂಢಿಯೂ ಇದೆ. ಉದಾಹರಣೆಗೆ ಅಮೆರಿಕದ ನ್ಯೂಜರ್ಸಿ ಮೊದಲಾದ ರಾಜ್ಯಗಳಲ್ಲಿ ಜಿಂಕೆಗಳಿವೆ, ಆದರೆ ಅವನ್ನು ಹಿಡಿದು ತಿನ್ನುವ ತೋಳ ಅಥವಾ ಇನ್ನೊಂದು ಭಕ್ಷಕ ಇಲ್ಲವೇ ಇಲ್ಲ.

ಹಾಗಾಗಿ ಅಲ್ಲಿ ಸಂಖ್ಯೆ ಮಿತಿಮೀರದಿರಲಿ ಎಂದು ವರ್ಷದ ಒಂದಿಷ್ಟು ಸಮಯ ಸಾರ್ವಜನಿಕರಿಗೆ ಬೇಟೆಯಾಡಲು ಸರಕಾರ ಅನುಮತಿಸುತ್ತದೆ. ಇದೊಂದು ನಿರಂತರ ಸಂಘರ್ಷ, ಮನುಷ್ಯ- ಪ್ರಾಣಿಗಳ ನಡುವಿನ ಜಾಗದ ವ್ಯಾಜ್ಯ. ಇದು ಅನಾದಿ
ಕಾಲದಿಂದ ನಡೆದುಬಂದದ್ದು. ಇದಕ್ಕೆ ಆಯಾ ಕಾಲಘಟ್ಟದಲ್ಲಿ ಮನುಷ್ಯ ವ್ಯವಹರಿಸಿದ ರೀತಿ ಮಾತ್ರ ಬೇರೆ ಬೇರೆ. ಜೂನ್ ೧೬, ೧೬೫೯. ಉತ್ತರ ಇಟಲಿಯ ಒಂದಿಷ್ಟು ಕೃಷಿಕರು ಕೋರ್ಟಿನಲ್ಲಿ ಒಂದು ದಾವೆ ಹೂಡಿದ್ದರು.

ತೋಟದ ಪಕ್ಕದ ಮರದಿಂದ ಇಳಿದುಬರುವ ಕಂಬಳಿಹುಳಗಳು ಅವರ ಬೆಳೆಗಳನ್ನೆಲ್ಲ ತಿಂದುಹಾಕುತ್ತಿದ್ದವು, ಇದಕ್ಕೆ ಪರಿಹಾರ
ಒದಗಿಸಬೇಕೆನ್ನುವುದು ಅವರ ಅರಿಕೆಯಾಗಿತ್ತು. ಈ ಕೇಸನ್ನು ಕೈಗೆತ್ತಿಕೊಂಡ ಕೋರ್ಟು, ತನ್ನ ಸಮ್ಮುಖ ಹಾಜರಾಗುವಂತೆ
ಆರೋಪಿಗಳಿಗೆ ಸಮನ್ಸ್ ಜಾರಿಮಾಡಿತು. ಇಲ್ಲಿ ಹೇಳಿಕೇಳಿ ಕಂಬಳಿಹುಳಗಳೇ ಆರೋಪಿಗಳು, ಅದಕ್ಕೆ ಸಮನ್ಸ್ ನೀಡುವುದು ಹೇಗೆ? ಅದನ್ನು ಕಾಡಿನ ಮರಗಿಡಗಳಿಗೆ ಅಂಟಿಸಲಾಯಿತು. ವಿಚಾರಣೆಯ ದಿನ ಬಂತು, ಸಮನ್ಸ್‌ಗೆ ಮರ್ಯಾದೆ ಕೊಟ್ಟು ಕಂಬಳಿಹುಳಗಳು ಕೋರ್ಟಿಗೆ ಹಾಜರಾಗಲಿಲ್ಲ.

ಅವುಗಳ ಪರ ವಾದಕ್ಕೆ ವಕೀಲರೂ ಬರಲಿಲ್ಲ. ಕೊನೆಗೆ ತೀರ್ಪು ಹೊರಬಂತು. ಅದರ ಪ್ರಕಾರ, ಕಂಬಳಿಹುಳಗಳು ತೋಟಕ್ಕೆ ಬರಬಾರದು ಮತ್ತು ಕೃಷಿಕರು ಅವನ್ನು ಬದುಕಲು ಬಿಡಬೇಕು, ಕೊಲ್ಲಬಾರದು. ತೀರ್ಪು ಹೊರಬರುವ ಹೊತ್ತಿಗಾಗಲೇ ಕಂಬಳಿಹುಳಗಳು ಚಿಟ್ಟೆಗಳಾಗಿ ಹಾರಿಹೋಗಿದ್ದವು. ಇದೇನು ಕಲ್ಪನೆಯ ಲಾಟ್‌ಪೂಟ್ ಕಥೆಯಲ್ಲ.

೧೯೦೬ರಲ್ಲಿ ಪ್ರಕಟವಾದ “The Criminal Prosecution Capital Punishment’ ಎಂಬ ಪುಸ್ತಕದಲ್ಲಿ ತೀರ್ಪಿನ ಪ್ರತಿಯ ಜತೆಗೆ ನಮೂದಾಗಿದೆ. ಇಂಥ ಅದೆಷ್ಟೋ ಕಥೆಗಳು ಈ ಪುಸ್ತಕದಲ್ಲಿವೆ. ಒಂದೊಂದೂ ಮಜಾ ಕೊಡುವಂಥದ್ದು, ‘ಹೀಗೂ ಉಂಟೇ’ ಎನ್ನುವಂಥದ್ದು. ಅಮೆರಿಕ ಮತ್ತಿತರ ದೇಶಗಳಲ್ಲಿ ಮನುಷ್ಯನನ್ನು ಯಾವ ಪ್ರಾಣಿ ಕೊಂದರೂ ಅದನ್ನು ಕೊಲ್ಲುವ, ಅದಕ್ಕೆ ಮರಣ ದಂಡನೆ ನೀಡುವ ಹಕ್ಕನ್ನು ಅರಣ್ಯ ಇಲಾಖೆಗೆ ಸರಕಾರ ಕೊಟ್ಟಿದೆ. ಭಾರತದಲ್ಲೂ ಇಂಥ ಮರಣದಂಡನೆಯನ್ನು ರಾಜ್ಯ ಸರಕಾರ ಕೊಡುವುದಿದೆ.

ವಿಶ್ವವಾಣಿ ಪತ್ರಿಕೆಯಲ್ಲಿ (ಸಂಚಿಕೆ ಅ.೧೨, ಪುಟ ೧೫) ಸ್ನೇಹಿತ ಸಂತೋಷ್ ಮೆಹಂದಳೆ ಯವರು ‘ಕಾಡಿನ ರಾಜನಿಗೆ ಮರಣದಂಡನೆ’ ಎಂಬ ಶೀರ್ಷಿಕೆಯಡಿ ಲೇಖನವೊಂದನ್ನು ಬರೆದಿದ್ದರು. ಬಿಹಾರದ ವಾಲ್ಮೀಕಿ ಅರಣ್ಯದಲ್ಲಿನ ನರಭಕ್ಷಕ ಹುಲಿಗೆ ಮರಣದಂಡನೆ ಜಾರಿಯಾದ, ಅದಾದ ಮೇಲೆ 400 ಮಂದಿ ಸೇರಿ 28 ದಿನ ಸುಮಾರು 30 ಚ.ಕಿ.ಮೀ ಪ್ರದೇಶವನ್ನು ಜಾಲಾಡಿ ಅದನ್ನು ಗುಂಡಿಟ್ಟು ಕೊಂದ ವಿಷಯ ಅದರಲ್ಲಿತ್ತು.

ಇಲ್ಲಿ ಮೆಹಂದಳೆ ಯವರು, ‘ಆ ಹುಲಿಯನ್ನು ಕೊಲ್ಲಲು, ಪ್ರಾಣಿಯೊಂದಕ್ಕೆ ಮರಣದಂಡನೆ ನೀಡಲು ಮನುಷ್ಯನಿಗೆ ಹಕ್ಕು ಕೊಟ್ಟವರಾರು?’ ಎಂದು ಪ್ರಶ್ನಿಸಿದ್ದಾರೆ. ಇದರೊಂದಿಗೆ, ‘ಹೀಗೆ ಮನುಷ್ಯನನ್ನು ಕೊಂದ ಪ್ರಾಣಿ ಇದೇ ಎಂದು ಗುರುತಿಸದೆ
ತಪ್ಪಾಗಿ ಇನ್ನೊಂದನ್ನು ಕೊಂದರೆ ನಿರಪರಾಽಗೆ ಶಿಕ್ಷೆ ಕೊಟ್ಟಂತಾಗುತ್ತದೆಯಲ್ಲವೇ?’ ಎಂಬ ಪ್ರಶ್ನೆಯೂ ಏಳುತ್ತದೆ. ಅಪರಾಽ ತಪ್ಪಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಿರಪರಾಽ ಶಿಕ್ಷೆಗೊಳಗಾಗುವುದನ್ನು ಯಾವುದೇ ನೆಲದ ಕಾನೂನೂ ಸಹಿಸುವುದಿಲ್ಲ. ವಾಲ್ಮೀಕಿ ಅರಣ್ಯದಲ್ಲೂ ಅಷ್ಟೇ.

ಹುಲಿಯನ್ನು ಕೊಲ್ಲಬೇಕೆಂದು ಬಿಹಾರ ಸರಕಾರವೇನೋ ಆದೇಶಿಸಿಬಿಟ್ಟಿತು; ಆದರೆ ಅರಣ್ಯ ಇಲಾಖೆಗೆ ಅವರೆಲ್ಲರನ್ನು
ಕೊಂದದ್ದು ಅದೇ ಒಂದು ಹುಲಿ ಎಂಬ ಪುರಾವೆಯನ್ನು ಇನ್ನೂ ಒದಗಿಸಲಾಗಿಲ್ಲ. ಆ ಕಾರಣಕ್ಕೆ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆಗಳು ಜಂಟಿಯಾಗಿ ‘ಅನಿಮಲ್ ಕ್ರೈಮ್ ಸೀನ್ -ರೆನ್ಸಿಕ್ ಡಿಪಾರ್ಟ್‌ಮೆಂಟ್’
ಅಸ್ತಿತ್ವಕ್ಕೆ ಬಂದಿದೆ.

ಎಲ್ಲಿಯೇ ಮನುಷ್ಯನ ಕೊಲೆಯಾದಲ್ಲಿ, ಪ್ರಾಣಿಗಳ ಕೆಲಸವೆನ್ನುವ ಅನುಮಾನ ಬಂದರೆ ಆ ಕೇಸ್ ಅನ್ನು ಈ ಇಲಾಖೆಗೆ ವಹಿಸಲಾಗುತ್ತದೆ. ಈ ಸಂಸ್ಥೆ ಮೊದಲು ದಾಳಿಯ ರೀತಿಯನ್ನು ನೋಡುತ್ತದೆ. ಸಾಮಾನ್ಯವಾಗಿ ಹುಲಿ ದಾಳಿಮಾಡಿದರೆ ಕುತ್ತಿಗೆ ಅಥವಾ ಹಿಂಭಾಗ ಕಚ್ಚಿಹಿಡಿದು ಒಂದೇ ಜಪಾಟಿಗೆ ಕೊಲ್ಲುತ್ತದೆ- ಕ್ವಿಕ್ ಕಿಲ. ಆದರೆ ಆನೆದಾಳಿಯಲ್ಲಿ ರಕ್ತ ಹರಿಯುವುದಿಲ್ಲ. ದಶಕದ ಹಿಂದೆ, ಬಂಡೀಪುರದಿಂದ ಮೈಸೂರಿಗೆ ಬಂದ ಆನೆ ಒಬ್ಬರನ್ನು ಕೊಂದದ್ದರ ವಿಡಿಯೋ ನೋಡಿದ ನೆನಪಿರಬಹುದು.

ಇನ್ನು ಕರಡಿಗಳು ಪರಸ್ಪರ ಕಾದಾಡುವಾಗ ಮುಖವನ್ನು ಕಚ್ಚಿಕೊಳ್ಳುತ್ತವೆ. ಹಾಗಾಗಿ ಕರಡಿ ಕೊಲೆಗಾರನಾದಾಗ ಕೊಲೆ ಯಾದವನ ಮುಖಗುರುತೇ ಸಿಗದಂತಾಗಿರುತ್ತದೆ. ಹೀಗೆ ಒಂದೊಂದು ಪ್ರಾಣಿಯ ದಾಳಿಯ ರೀತಿ ಬೇರೆ ಬೇರೆ. ಹೀಗೆ ಯಾವ ಪ್ರಭೇದದ ಪ್ರಾಣಿ ದಾಳಿಮಾಡಿದೆ ಎಂದು ತಿಳಿಯಲಾಗುತ್ತದೆ. ಇದಾದ ಮೇಲೆ ಇಂಥದೇ ಹುಲಿ, ಕರಡಿ ಕೊಂದಿದೆ ಎಂದು ಕಂಡುಹಿಡಿಯುವುದು ಹೇಗೆ? ಅದಕ್ಕೆ ಮೃತನ ಮೇಲಿನ ಡಿಎನ್‌ಎ ಸ್ಯಾಂಪಲ್ ಪಡೆದು ನಂತರ ಅದು ಆ ಕಾಡಿನ ನಮೂದಾದ ಯಾವ ಪ್ರಾಣಿಯ ಡಿಎನ್‌ಎ ಜತೆ ಹೊಂದುತ್ತದೆ ಎಂದು ನೋಡುವ ಮೂಲಕ ಇಂಥದ್ದೇ ಪ್ರಾಣಿ ಕೊಲೆಗಾರ ಎಂದು ತೀರ್ಮಾನಿಸಲಾಗುತ್ತದೆ.

ಅದು ರಕ್ಷಿತಾರಣ್ಯವಲ್ಲದಿದ್ದಲ್ಲಿ ಇಂಥ ಡಿಎನ್‌ಎ ಡೇಟಾಬೇಸ್ ಅಲ್ಲಿರುವುದಿಲ್ಲವಲ್ಲ, ಅಂಥ ವೇಳೆ ಅದೇ ಪ್ರಾಣಿ/ಜೀವಿ
ಮನುಷ್ಯನನ್ನು ಕೊಂದದ್ದು ಎಂಬುದು ಸಾಕ್ಷಿಸಮೇತ ದೃಢ ಪಡುವ ತನಕ ಯಾವುದೇ ಪ್ರಾಣಿಯನ್ನು ಕೊಲ್ಲಲು ಆಡಳಿತ
ಅನುಮತಿಸುವುದಿಲ್ಲ. ಆಗ ಆ ಪ್ರದೇಶದ ಪ್ರಾಣಿಗಳ ಡಿಎನ್ ಎಯನ್ನು, ಒಂದಾದ ನಂತರ ಒಂದಕ್ಕೆ ಅರಿವಳಿಕೆ ಕೊಟ್ಟು,
ಪಡೆದು ಪರಾಮರ್ಶಿಸುವುದಿದೆ. ಇದು ಬಹಳ ಕಷ್ಟದ ಕೆಲಸ.

ನಮ್ಮಲ್ಲೂ ಇಂಥದೊಂದು ಕಾನೂನು ಮತ್ತು ಇಲಾಖೆಯ ಅವಶ್ಯಕತೆಯಿದೆ ಎನಿಸುತ್ತದೆ. ಏಕೆಂದರೆ ಬಿಹಾರದ ಹುಲಿಯ
ಕಥೆಯಂತೆ ಅದೆಷ್ಟೋ ನಡೆಯುತ್ತಿರುತ್ತವೆ, ಮುಂದೆಯೂ ಇದ್ದದೇ. ಇದು ಹೆಚ್ಚಾಗುತ್ತಲೇ ಹೋಗುವ ಸಮಸ್ಯೆ. ತಗ್ಗಿಸ ಬೇಕೆಂದರೆ ಆ ಪ್ರಭೇದವನ್ನೇ ದಮನಿಸಬೇಕು, ಹೆಚ್ಚಾಗಲು ಬಿಡಬಾರದು ಇತ್ಯಾದಿಗಳು ಒಪ್ಪುವಂಥವಲ್ಲ. ಇಂದಿಗೂ ಬಿಹಾರದಲ್ಲಿ ಇವರು ಕೊಂದ ಹುಲಿಯೇ ಅಪರಾಧಿಯೋ ಅಲ್ಲವೋ ಗೊತ್ತಿಲ್ಲ. ಹಾಗಾದರೆ ಅಲ್ಲಿ ನಿರಪರಾಧಿಗೆ ಶಿಕ್ಷೆಯಾ ದದ್ದಾಗಿದ್ದರೆ? ಅಥವಾ ಅಷ್ಟೊಂದು ದಾಳಿಯಲ್ಲಿ ಕೆಲವನ್ನು ಅನ್ಯಹುಲಿ ಮಾಡಿದ್ದಾಗಿದ್ದರೆ? ಇತ್ಯಾದಿ ಪ್ರಶ್ನೆಗಳು ಏಳುತ್ತವೆ. ಇನ್ನೊಬ್ಬರನ್ನು ಕೊಲ್ಲಬಾರದು ಎಂಬುದು ಮನುಷ್ಯ ಮಾಡಿಕೊಂಡ ಕಾನೂನು.

ಇದು ಹುಲಿ ಮೊದಲಾದ ಪ್ರಾಣಿಗಳ ಮೇಲಿನ ಅನೈತಿಕ, ಜೀವಸಹಜ ಗುಣಕ್ಕೇ ವಿರುದ್ಧವಾದ ಕಾನೂನು. ಇಲ್ಲಿ ಹುಲಿ ಅಥವಾ
ಇನ್ನೊಂದು ಪ್ರಾಣಿ ಮನುಷ್ಯನನ್ನು ಕೊಲ್ಲುವುದನ್ನು ನಾನು ಸಮರ್ಥಿಸುತ್ತಿಲ್ಲ. ಆದರೆ ಇಲ್ಲಿ ಹುಲಿಗೆ ತಿಳಿಸಿ ಹೇಳುವವರಾರು? ಒಬ್ಬ ವ್ಯಕ್ತಿಯನ್ನು ಕೊಲ್ಲುವುದು ಬಿಡಿ, ಬಂಧಿಸುವಾಗ ಕೂಡ ಅದಕ್ಕೆ ಮುನ್ನ ಕಾರಣ ಹೇಳಲಾಗುತ್ತದೆ.

ಆದರೆ ಹುಲಿ ಅಥವಾ ಇನ್ನೊಂದಕ್ಕೆ ಕಾರಣ ಹೇಳುವವರಾರು? ಕಾರಣವನ್ನೇ ಹೇಳದೆ, ಅಪರಾಧ ದೃಢಪಡದೆ, ಇವನೇ ಕೊಲೆಗಾರನೆಂದು ಗುರುತಿಸದೆ, ಪುರಾವೆಗಳನ್ನೊ ದಗಿಸದೆ ಪ್ರಾಣಿಯೊಂದನ್ನು ಕೊಲ್ಲುವುದು ಎಷ್ಟು ಸರಿ? ಪ್ರಾಣಿಗಳ ಬಗೆಗಿನ ನೈತಿಕತೆ, ಕಾನೂನು ಮೊದಲಾದವು ಬಂದಾಗ ನಾವು ಅಷ್ಟೊಂದು ಆಸ್ಥೆಯಿಂದ ವ್ಯವಸ್ಥೆಯನ್ನು ರೂಪಿಸುವುದಿಲ್ಲವೇಕೆ? ನಮಗೇಕೆ ಅಷ್ಟು ಅಸಡ್ಡೆ? ಸಂಘರ್ಷ ನಿರಂತರವಾದ್ದರಿಂದ ಅದನ್ನು ನಿಭಾಯಿಸಲು ಇನ್ನಷ್ಟು ವೈಜ್ಞಾನಿಕವಾದ, ಪ್ರಾಯೋಗಿಕ ವಾಗಿ ಕಾರ್ಯಸಾಧ್ಯವಾದ ವಿಧಾನಗಳ ಅಳವಡಿಕೆಯಾಗಬೇಕಿದೆ.

ವ್ಯವಸ್ಥೆ, ಅರಣ್ಯ ಇಲಾಖೆ ಇನ್ನಷ್ಟು ಆಧುನೀಕರಣವಾಗಬೇಕಿದೆ. ಅಂದಹಾಗೆ ‘ವಿಶ್ವವಾಣಿ’ ಅಂಕಣಕಾರ ಶಶಿಧರ ಹಾಲಾಡಿ
ಯವರ ಕಾದಂಬರಿಯೊಂದು ಸಿದ್ಧವಾಗಿದೆಯಂತೆ. ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಮುಖಾಮುಖಿ ಇದರ
ಎಳೆಯಂತೆ. ಪ್ರಕಟವಾದ ಮೇಲೆ ಓದಿಯೇ ಬಿಡೋಣ.