ಹಂಪಿ ಎಕ್ಸ್’ಪ್ರೆಸ್
1335hampiexpress1509@gmail.com
ರಿಷಿ ಸುನಕ್ ಈಗ ಇಂಗ್ಲೆಂಡಿನ ಹುಟ್ಟುಪ್ರಜೆಯಾದರೂ ಹಿಂದೂಧರ್ಮವನ್ನೇ ತನ್ನ ‘ಅಸ್ಮಿತೆ’ಯಾಗಿ ಉಳಿಸಿಕೊಂಡಿರುವುದು ಒಂದು ತಪಸ್ಸೇ ಸರಿ. ಭಗವದ್ಗೀತೆಯ ಮೇಲೆ ಪ್ರಮಾಣವಚನ, ಗೋಪೂಜೆಯಂಥ ಧಾರ್ಮಿಕ ವೈಚಾರಿಕತೆಯುಳ್ಳ ಸ್ವಾಭಿಮಾನಿಯಾಗಿ ಹೆಮ್ಮೆಯಿಂದ ಬೆಳೆದುಬಂದಿದ್ದಾರೆ ರಿಷಿ.
ಮಗು ಜನಿಸುತ್ತದೆ, ತಾಯಿ ಮೊಲೆಯುಣಿಸುತ್ತಾಳೆ. ಆ ಕಂದಮ್ಮನಿಗೆ ಆಕೆಯ ಒಟ್ಟಾರೆ ಸ್ವರೂಪಕ್ಕಿಂತ ಆಕೆ ಹೀಗೆ ಸುರಿಸುವ ಅಮೃತ ಧಾರೆಯೇ ದೈವಸಮಾನ. ಬೇರಾವುದರ ಅರಿವೂ ಅದಕ್ಕಿರುವುದಿಲ್ಲ. ಇನ್ನು ಆಡಲು ಬಿಟ್ಟಾಗ ಮಗುವು ಮಣ್ಣನ್ನೂ ಇಷ್ಟಪಟ್ಟು ತಿನ್ನಲಾರಂಭಿಸುತ್ತದೆ. ಅದು ಅಂಬೆಗಾಲಿಡುತ್ತಲೇ ಅಮ್ಮ ಒಂದೊಂದಾಗಿ ತನ್ನ ಸುತ್ತಲಿನ ವಸ್ತುಗಳ ಬಗ್ಗೆ ಅರಿವು ಮೂಡಿಸುತ್ತಾಳೆ.
ಮಣ್ಣು, ಕಲ್ಲು, ಅನ್ನ, ಸ್ಲೇಟು, ಬಳಪ, ಪುಸ್ತಕಗಳನ್ನೆಲ್ಲ ತೋರಿಸಿ ಅವು ‘ದೈವ’ ಎಂದು ಪೂಜ್ಯತೆಯ ಭಾವ ಮೂಡಿಸುತ್ತಾಳೆ. ‘ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಎಂಬ ಮಾತಿಗೆ ಸಾರ್ಥಕ್ಯ ಒದಗುವುದು ಆಗಲೇ. ನಂತರ ಮಗುವನ್ನು ಶಾಲೆಗೆ ಸೇರಿಸಿದಾಗ, ಗುರುಗಳು ಅಕ್ಷರಜ್ಞಾನದ ಜತೆಗೆ ನಾಗರಿಕತೆಯ ರೂಪ ನೀಡುತ್ತಾ ಅದನ್ನು ವಿಕಸನಗೊಳಿಸುತ್ತಾರೆ.
ಇದಕ್ಕಾಗಿಯೇ ‘ಮಾತೃದೇವೋಭವ, ಪಿತೃ ದೇವೋಭವ, ಆಚಾರ್ಯದೇವೋಭವ’ ಎನ್ನಲಾಗುತ್ತದೆ. ಅಲ್ಲಿಂದ ಸಮಾಜಕ್ಕೆ ತೆರೆದುಕೊಳ್ಳುವ ಮಗು, ಸಾವಿರಾರು ವ್ಯಕ್ತಿಗಳಿಂದ ಸಾವಿರಾರು ರೀತಿಯ ಜ್ಞಾನವನ್ನು ದಕ್ಕಿಸಿಕೊಂಡು ಪ್ರಬುದ್ಧನಾಗಿ ಬೆಳೆದು ನಿಲ್ಲುತ್ತದೆ. ಪ್ರಾಥಮಿಕ ಶಾಲೆಯಲ್ಲಿ ಪಾಠ ಹೇಳಬೇಕಾದ ಗುರುಗಳೂ ಹತ್ತಾರು ಕಡೆಗಳಲ್ಲಿ ಅಲೆದು ಜ್ಞಾನವನ್ನು ಸಂಪಾದಿಸಿ ಪದವಿ ಪಡೆದು ಇನ್ನಾವುದೋ ಊರಿಗೆ ಬಂದು ಶಾಲೆಯೊಂದರಲ್ಲಿ ವೃತ್ತಿ ಆರಂಭಿಸಿ, ಯಾರ‍್ಯಾರೋ ಜನ್ಮವಿತ್ತ ಮಕ್ಕಳಿಗೆ
ಪಾಠ ಮಾಡಿ ಅವರನ್ನು ಸುಶಿಕ್ಷಿತರನ್ನಾಗಿಸುತ್ತಾರೆ.
ಹಾಗಂತ, ತೊದಲುನುಡಿ ಕಲಿಸುವ ತಾಯಿ, ವಿಕಸನಗೊಳಿಸುವ ಶಾಲೆ ಮತ್ತು ಶಿಕ್ಷಕರು ‘ತಮ್ಮ ಅಸ್ತಿತ್ವವನ್ನು ಭದ್ರಗೊಳಿಸಿ ಕೊಳ್ಳುವುದಕ್ಕಾಗಿ ಆ ಮುಗ್ಧಮಗುವನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದರೆ ಎಂಥ ಅವಿವೇಕವಲ್ಲವೇ? ಈಗ ೫ಜಿ ಮೊಬೈಲ್ ಕಾಲ ಶುರುವಾಗಿದೆ. ಆದರೆ ಅನೇಕ ಹಳ್ಳಿಗಳಲ್ಲಿ, ಕಾಡುಗುಡ್ಡಗಳಲ್ಲಿ ಇಂದಿಗೂ 2ಜಿ ಸೇವೆಯೂ ಇರದೆ ಮೊಬೈಲ್
ಬಳಸ ಲಾಗದಂಥ ಪರಿಸ್ಥಿತಿಯಿದೆ. ಅಂಥ ಕಡೆಗಳಲ್ಲಿ ಮುಖೇಶ್ ಅಂಬಾನಿ ಹೋಗಿ ೫ಜಿ ನೆಟ್‌ವರ್ಕ್ ಸಿಗುವಂತೆ ಮಾಡಿ ಬರುತ್ತಾರೆ ಅಂದುಕೊಳ್ಳಿ; ಆಗಲೂ ಈ ವಿಕೃತ ಮನಸ್ಥಿತಿಯವರು “ಅಂಬಾನಿ ತಮ್ಮ ಅಸ್ತಿತ್ವವನ್ನು ಬಲಪಡಿಸಿಕೊಳ್ಳುವು ದಕ್ಕಾಗಿ ಹಳ್ಳಿಯ ಜನರನ್ನು ‘ನಮ್ಮ ಗ್ರಾಹಕರು’ ಎಂದು ಹೇಳಿಕೊಳ್ಳುತ್ತಿದ್ದಾರೆ” ಎಂದು ಮಾತನಾಡಿದರೆ ಹೇಗಿರುತ್ತದೆ ಹೇಳಿ?! ಸಮುದ್ರದೊಳಗಿರುವ ಮೊದಲ ಮೀನು ಆದಿವಾಸಿಯಾಗಿರಬಹುದು; ಆದರೆ ಇಡೀ ಸಮುದ್ರವೇ ಸನಾತನ ಧರ್ಮವೆಂಬುದು ಬೌದ್ಧಿಕ ಸತ್ಯ.
ಮಗುವಿಗೆ ಎದೆಹಾಲುಣಿಸುವ ತಾಯಿ, ಜ್ಞಾನ ನೀಡುವ ಗುರು, ನಮ್ಮ ಸುತ್ತಲೂ ಆವರಿಸುವ ‘ನೆಟ್‌ವರ್ಕ್’ ಇವೆಲ್ಲವೂ ಆಸ್ತಿಕನನ್ನು ನಡೆಸುವ ಹಿಂದೂಧರ್ಮದ ‘ಬೌದ್ಧಿಕ ಸಾಧನಗಳು’. ಆದರೆ ಇತ್ತೀಚೆಗೆ ಕೆಲ ವಿಕ್ಷಿಪ್ತರು ಸಮಾಜದಲ್ಲಿ ವೈರಸ್
ನಂತೆ ಹುಟ್ಟಿಕೊಂಡು ತಿಕ್ಕಲು ಸಿದ್ಧಾಂತವನ್ನು ಹಬ್ಬಿಸುತ್ತಿದ್ದಾರೆ. ಮೊಲೆಯುಣ್ಣುವ ಕಂದಮ್ಮನೇ ಮೊದಲು ಅಸ್ತಿತ್ವ ಕಂಡು ಕೊಂಡಿದ್ದು, ಆ ನಂತರವೇ ತಾಯಿ ‘ಹುಟ್ಟಿಕೊಂಡಿದ್ದು’, ಆದ್ದರಿಂದ ಮಗು ವಿಕಸನಗೊಳ್ಳದೆಯೇ ಶಿಶು ಅವಸ್ಥೆಯಲ್ಲಿರು ವುದೇ ಸತ್ಯ, ಆ ತಾಯಿಗೂ ಮಗುವಿಗೂ ಸಂಬಂಧವೇ ಇರಕೂಡದು.
ಇನ್ನು ಆ ಮಗುವಿನ ವಿಕಸನಕ್ಕೆ ಕಾರಣವಾಗುವ ಶಿಕ್ಷಕರು, ಆ ಮಗುವಿದ್ದ ಊರಿಗೆ ಎಲ್ಲಿಂದಲೋ ಬಂದ ಪರದೇಸಿಗಳು.
ಎಲ್ಲಿಂದಲೋ ಬಂದು ಅಂಗಡಿ ತೆರೆದ ಕ್ಷೌರಿಕರು, ಅದೆಲ್ಲಿಂದಲೋ ಜಿಗಿದುಬಂದ ವೈದ್ಯರು- ಹೀಗೆ ಆ ಮಗುವಿನ ಬೆಳವಣಿಗೆಗೆ ಸೇವೆಯನ್ನಿತ್ತು ಸಮಾಜವನ್ನು ಕಟ್ಟಿದ ಎಲ್ಲರೂ ಇವರ ಪಾಲಿನ ವಲಸಿಗರು. ಆ ಮಗು ಮಾತ್ರ ಮೂಲವಾಸಿ, ಆದಿವಾಸಿ!
ತಮಗಿರುವ ಅರಿವಿನಲ್ಲಿ ಕಲ್ಲುಗಳಲ್ಲೇ ದೈವವನ್ನು ಕಂಡು ಪೂಜಿಸುತ್ತಿದ್ದವರಿಗೆ, ಅದೇ ಕಲ್ಲುಗಳನ್ನು ಕೆತ್ತಿ ದೇವರ ಸುಂದರ ಮೂರ್ತಿಗಳನ್ನು ಮಾಡಿಕೊಡುವ ವಿಶ್ವಕರ್ಮ ಶಿಲ್ಪಿಗಳಿಂದ ಆರಂಭಿಸಿ, ಆ ಮಗು ಬೆಳೆದು ದೊಡ್ಡ ಮನುಷ್ಯನಾಗುವ ತನಕ ವಿವಿಧ ‘ಕರ್ಮಚಾರಿ’ಗಳ ನೆರವನ್ನು ಪಡೆದರೂ, ‘ಆ ಮಗು ಮಾತ್ರ ಯಾರನ್ನೂ ಸ್ಮರಿಸಬಾರದು, ಯಾರೂ ಆ ಮಗುವಿಗೆ
ಉತ್ತರದಾಯಿಯಾಗಕೂಡದು’ ಎಂಬುದು ಇಂಥ ವಿಕ್ಷಿಪ್ತರ ತಲೆಬುಡವಿಲ್ಲದ ತರ್ಕ.
ಇದೊಂಥರ ‘ಗಾಂಧಿ ಮತ್ತು ನೆಹರು ಕುಟುಂಬ ಮಾತ್ರವೇ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದು’ ಎಂದು ಕಾಂಗ್ರೆಸ್ ಪಕ್ಷವು ವಾದಿಸಿದಂತೆ. ಮಾತೆತ್ತಿದರೆ ಜಾತ್ಯತೀತ ಸಮಾನತೆಯ ಬಗ್ಗೆ ಎದೆಬಡಿದುಕೊಳ್ಳುವ ಇವರು, ಮತ್ತದೇ ಜಾತಿಗಳ ಮೂಲಕವೇ ಸಮಾಜವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಮಾತಿನಂತೆ ಯಾರು ತಮ್ಮ ಹುಟ್ಟಿದ ಧರ್ಮಕ್ಕೆ ಬದ್ಧರಾಗಿ ಕೃತಾರ್ಥರಾಗಿ ಬದುಕುತ್ತಾರೋ ಅಂಥವರ ಕರ್ಮಫಲಕ್ಕೆ ತಕ್ಕ ಪ್ರತಿಫಲವನ್ನು ದೇವರು ಕೊಟ್ಟೇ
ಕೊಡುತ್ತಾನೆ ಎಂಬುದಕ್ಕೆ ಇತ್ತೀಚಿನ ‘ಕಾಂತಾರ’ ಸಿನಿಮಾದ ರಿಷಭ್ ಶೆಟ್ಟಿಯೇ ಸಾಕ್ಷಿ.
ಇಂಥ ಸಿನಿಮಾ ಮಾಡಿ ಸಿನಿಮಾರಂಗದಲ್ಲಿ ಯಾವ ಎತ್ತರಕ್ಕೆ ತಲುಪಬೇಕೋ ಆ ಎತ್ತರಕ್ಕೆ ತಲುಪುತ್ತಿದ್ದಾರೆ ರಿಷಭ್. ಆದರೆ ಧರ್ಮದ ವಿರುದ್ಧ ನಿಂತ ಎಡವಟ್ಟು ಜನರು ಚಿತ್ರರಂಗದಲ್ಲಿ ಯಾವ ಮಟ್ಟಕ್ಕೆ ಇಳಿಯಬೇಕೋ ಅಲ್ಲಿಗೆ ಇಳಿಯುತ್ತಿದ್ದಾರೆ. ಧರ್ಮವನ್ನು ಉಳಿಸುವ ಧ್ಯೇಯ ಹೊಂದಿರುವ ಪಕ್ಷವು ದೇಶದೆಲ್ಲೆಡೆ ಅಧಿಕಾರಕ್ಕೆ ಬಂದು ‘ವಿಶ್ವಗುರು’ ಎನಿಸಿ ವಿಜೃಂಭಿಸು ತ್ತಿದ್ದರೆ, ಧರ್ಮದ್ರೋಹಿ ಪಕ್ಷಗಳ ಜೋಕರ್‌ಗಳು ತಮ್ಮ ಭವಿಷ್ಯದ ಅಸ್ತಿತ್ವಕ್ಕಾಗಿ ರಸ್ತೆ-ಬೀದಿಗಳಲ್ಲಿ ಅಲೆಯುತ್ತಿದ್ದಾರೆ. ಇನ್ನು
ಹಿಂದೂಧರ್ಮದಲ್ಲಿನ ಗ್ರಹಣ, ಸ್ಮಶಾಣದ ನಂಬಿಕೆ, ಆಚಾರ-ವಿಚಾರಗಳನ್ನು ಧಿಕ್ಕರಿಸಿ ಅವಮಾನಿಸಿದ ‘ಕಾವಿಮುಖಿ’ ಕಾಮಿಗಳು ಜೈಲುಸೇರುವಂತಾಗಿರುವುದು ಧರ್ಮದೃಷ್ಟಾಂತ.
ಅದನ್ನೇ ಶ್ರೀಕೃಷ್ಣ ಪರಮಾತ್ಮ ‘ನೀನು ಯಾವ ರೂಪದಲ್ಲಿ ಕರೆವೆಯೋ ಅದೇ ರೂಪದಲ್ಲಿ ನಾನು ಬರುತ್ತೇನೆ’ ಎಂದು ಹೇಳಿರುವುದು. ಈ ಎಡವಟ್ಟರು ಹಿಂದೂಧರ್ಮವನ್ನು ಪೀಡೆ-ಪಿಶಾಚಿಗಳಾಗಿ ಕರೆದರೆ, ಅದು ಅದೇ ರೂಪದಲ್ಲಿ ಬಂದು
‘ದರ್ಶನ’ ನೀಡುವುದರಲ್ಲಿ ಸಂಶಯವೇ ಇಲ್ಲ. ಅವೆಲ್ಲದರ ಅನುಭೂತಿ ಹೊಂದುವ ಜ್ಞಾನವಿರಬೇಕಷ್ಟೇ! ಆ ಕಾಲ ಬಂದೇ ಬರುತ್ತದೆ,
ಕಾಯಬೇಕಷ್ಟೇ! ಹೀಗೆ ಇಲ್ಲಿನ ‘ಮೂಲ’ವ್ಯಾಧಿಗಳು ಸ್ವಧರ್ಮದ್ವೇಷಿಗಳಾಗಿ, ಧರ್ಮಹಿಂಸಕ ವ್ಯಾಧಿಗಳಾಗಿ ಭೂತಕಾಲಕ್ಕೆ ಹಿಮ್ಮುಖವಾಗಿ ಹೋಗುತ್ತಿದ್ದರೆ, ಸಮುದ್ರದಾಚೆ ತನ್ನ ಹುಟ್ಟುಧರ್ಮದ ಮೇಲೆ ಶ್ರದ್ಧೆ-ಭಕ್ತಿ-ಅಭಿಮಾನ ಹೊಂದಿರುವ ಇಂಗ್ಲೆಂಡಿನ ರಿಷಿ ಸುನಕ್ ಇಂದು ಜಗತ್ತಿನ ಪ್ರಬಲ ರಾಷ್ಟ್ರವೊಂದನ್ನು ಆಳುವ ಮಟ್ಟಕ್ಕೆ ತಲುಪಿದ್ದಾರೆ. ರಿಷಿ ಸುನಕ್ ಅವರ ಹುಟ್ಟು ಮತ್ತು ಬೆಳವಣಿಗೆಯನ್ನೇ ನೋಡಿ. ಹಿಂದೂಗಳಾದ ಅವರ ಪೂರ್ವಜರ ಮೂಲ ಇದ್ದದ್ದು ಭಾರತದಲ್ಲಿ.
ಅವರ ತಂದೆ ಯಶ್ವೀರ್ ಸುನಕ್ ಕೀನ್ಯಾದವರು, ತಾಯಿ ಉಷಾ ಸುನಕ್ ತಾಂಜಾನಿಯಾದವರು. ರಿಷಿ ಸುನಕ್ ಅವರ ಅಜ್ಜ ಪಂಜಾಬಿನ ಮೂಲದವರಾಗಿದ್ದು ಅಲ್ಲಿಂದ ಪೂರ್ವ ಆಫ್ರಿಕಾಕ್ಕೆ ವಲಸೆಹೋಗಿ 1960ರಲ್ಲಿ ಇಂಗ್ಲೆಂಡ್‌ಗೆ ಬಂದು ನೆಲೆಗೊಂಡ ವರು. ರಿಷಿ ಸುನಕ್ ಅವರ ತಂದೆ ಯಶ್ವೀರ್ ಸುನಕ್ ಅವರ ಅಜ್ಜ ರಾಮದಾಸ್ ಸುನಕ್ ಅವರು ಅಂದಿನ ಭಾರತದ ಗುಜ್ರನ್ವಾಲಾ ದವರಾಗಿದ್ದು (ಇಂದು ಪಾಕಿಸ್ತಾನದಲ್ಲಿದೆ), 1935ರಲ್ಲಿ ನೈರೋಬಿಗೆ ವಲಸೆ ಹೋಗಿ ಅಲ್ಲಿಯೇ
ಸುಹಾಗ್ರಾಣಿ ಸುನಕ್ ಅವರೊಂದಿಗೆ 1937ರಲ್ಲಿ ವಿವಾಹವಾದರು.
ರಿಷಿ ಸುನಕ್ ಅವರ ತಾಯಿಯ ಅಜ್ಜ ರಘುಬೀರ್ ಸೇನ್ ಅವರು ಸ್ರಾಕ್ಷಾ ಎಂಬಾಕೆಯನ್ನು ವಿವಾಹವಾಗಿ, ಮುಂದೆ ಅವರೂ
ಇಂಗ್ಲೆಂಡ್‌ಗೆ ವಲಸೆಹೋಗಿ ನೆಲೆಸಿ ಬ್ರಿಟಿಷ್ ಪೌರತ್ವ ಪಡೆಯುತ್ತಾರೆ. ಹೀಗೆ ರಿಷಿ ಸುನಕ್ ಅವರ ತಂದೆ ಮತ್ತು ತಾಯಿಯ ಪೂರ್ವಜರು ಭಾರತವನ್ನು ಬಿಟ್ಟು ತಮ್ಮ ಧರ್ಮಕ್ಕೆ ಬಲವಾದ ನೆಲೆಯಿಲ್ಲದ ದೇಶ, ಊರುಗಳಲ್ಲಿ ಜೀವನ ಕಂಡುಕೊಂಡು
ಶತಮಾನಗಳನ್ನು ಕಳೆದರೂ ಅವರ ವಂಶಸ್ಥನಾದ ಇಂದಿನ ರಿಷಿ ಸುನಕ್ ಈಗ ಇಂಗ್ಲೆಂಡಿನ ಹುಟ್ಟುಪ್ರಜೆಯಾದರೂ ಹಿಂದೂಧರ್ಮವನ್ನೇ ತನ್ನ ‘ಅಸ್ಮಿತೆ’ಯಾಗಿ ಉಳಿಸಿಕೊಂಡಿರುವುದು ಒಂದು ತಪಸ್ಸೇ ಸರಿ.
ಭಗವದ್ಗೀತೆಯ ಮೇಲೆ ಪ್ರಮಾಣವಚನ, ಗೋಪೂಜೆಯಂಥ ಧಾರ್ಮಿಕ ವೈಚಾರಿಕತೆಯುಳ್ಳ ಸ್ವಾಭಿಮಾನಿಯಾಗಿ ಹೆಮ್ಮೆ
ಯಿಂದ ಬೆಳೆದುಬಂದಿದ್ದಾರೆ ರಿಷಿ. ಯಾವ ಬ್ರಿಟಿಷರು ಹಿಂದೂ ಧರ್ಮದ ಅಗಾಧತೆ, ಅನಂತತೆಯನ್ನು ನಾಶಮಾಡಲು ಯತ್ನಿಸಿ
ಭಾರತವನ್ನು ಎರಡೂವರೆ ಶತಮಾನ ಆಳಿದರೋ, ಅದೇ ಬ್ರಿಟಿಷರನ್ನು ಇಂದು ಹಿಂದೂಧರ್ಮಿಯೊಬ್ಬ ಆಳುವ ಕಾಲ ಬಂದಿದೆಯಲ್ಲ, ಅದೇ ಹಿಂದುತ್ವಕ್ಕಿರುವ ಧಿಃಶಕ್ತಿ.
ದುರಂತ ನೋಡಿ, ನಮ್ಮ ದೇಶದಲ್ಲಿ ಹಿಂದೂಗಳಾಗೇ ಹುಟ್ಟಿದರೂ, ಅಧಿಕಾರ- ಪದವಿಗಾಗಿ ಗುಲಾಮಗಿರಿಯ ಸಂತುಷ್ಟತೆ ಗಾಗಿ ತಮ್ಮ ಧರ್ಮದ ಅಸ್ಮಿತೆಯನ್ನೇ ಕಳೆದುಕೊಂಡು, ಕೇವಲ ಜಾತಿ ಬಳಸಿ ಪರದೇಶಿಗಳಿಗೆ ಬಕೇಟು ಹಿಡಿದು, ಕೆಲಸಕ್ಕೆ ಬಾರದವರನ್ನೆಲ್ಲ ಪಲ್ಲಕ್ಕಿ ಮೇಲೆ ಕೂರಿಸಿ ಮೆರವಣಿಗೆ ಮಾಡಿ ರಾಜಕಾರಣ ಮಾಡುವ ಪುಢಾರಿಗಳು ಒಂದೆಡೆಯಿದ್ದರೆ, ತಮ್ಮ
ಅಸ್ತಿತ್ವಕ್ಕಾಗಿ ಭಯೋತ್ಪಾದಕರನ್ನೂ ಬೆಂಬಲಿಸಲು ಹಿಂದು-ಮುಂದು ನೋಡದ ಮತ್ತು ಜಾತಿಗಳನ್ನು ಬಳಸಿಕೊಂಡು ಹಿಂದೂಧರ್ಮವನ್ನೇ ಛಿದ್ರಗೊಳಿಸುವ ಧರ್ಮಭಂಜಕರು ಮತ್ತೊಂದೆಡೆಯಿದ್ದಾರೆ.
ಭಾರತದಲ್ಲಿ ‘ಬುದ್ಧಿಜೀವಿ’, ’ವಿಚಾರವಾದಿ’ ಎನಿಸಿಕೊಳ್ಳಲು ಪಾಂಡಿತ್ಯ ಹೊಂದುವುದನ್ನು ಬಿಟ್ಟು, ಮತ್ತದೇ ಹಿಂದೂ ಧರ್ಮ ವನ್ನು, ಸಂಸ್ಕೃತಿಯನ್ನು ಅವಹೇಳನ ಮಾಡುತ್ತಲೇ ತಮ್ಮ ತೀಟೆ ತೀರಿಸಿಕೊಳ್ಳುತ್ತಿದ್ದಾರೆ. ದೈವಾರಾಧನೆಯು ಹಿಂದೂ ಧರ್ಮದ ಭಾಗವಲ್ಲ ಎನ್ನುವ ಎಡವಟ್ಟರಿಗೆ ತಲೆಯೊಳಗೆ ಮಿದುಳೇನಾದರೂ ಇದ್ದರೆ, ಹಿಂದೂಗಳನ್ನು ಮತಾಂತರಿಸಿ ಏಸುವಿನ ಶಿಲುಬೆಯೊಂದಿಗೆ ದಸರಾ, ದೀಪಾವಳಿ, ಯೋಗಾಭ್ಯಾಸ, ಅಕ್ಷರಾಭ್ಯಾಸ ಮಾಡಿಸುವ ಪಾದ್ರಿಗಳ ಬಳಿ ಹೋಗಿ ಪ್ರಶ್ನಿಸುವ ಗಂಡಸುತನ ತೋರಿಸಲಿ.
ಅದನ್ನು ಬಿಟ್ಟು, ‘ಹೋಗಿ ಬಂದು ಮೂಗಿಯನ್ನು ಕಾಡಿದ’ ಎಂಬಂತೆ ‘ಎಲ್ಲವನ್ನೂ ದೇವರ ಮೇಲೆ ಭಾರಹಾಕಿ ಕೂರುವ ಹಿಂದೂಗಳನ್ನೇ’ ಕಾಡುತ್ತಿದ್ದರೆ, ಅದರ ಪ್ರತಿಫಲವನ್ನು ತಡವಾಗಿಯಾದರೂ ಅನುಭವಿಸುವುದಂತೂ ಪಕ್ಕಾ! ಆದ್ದರಿಂದ ಈ ‘ಮೂಲ’ವ್ಯಾಧಿಗಳು ‘ಕಾಲಾಯ ತಸ್ಮೈ ನಮಃ’ ಎಂಬ ಮಾತಿನಲ್ಲಿ ಇನ್ನಾದರೂ ನಂಬಿಕೆಯಿಟ್ಟು, ‘ಮಾಡಬಾರದ್ದನ್ನು ಮಾಡಿ ದರೆ ಆಗಬಾರದ್ದು ಆಗುತ್ತದೆ’ ಎನ್ನುವುದನ್ನು ಅರಿತು ಬದಲಾಗುವುದು ಸಮಾಜಕ್ಕೆ ಆರೋಗ್ಯಕರ.