ಯುವಿಸಿಇ ವಿವಿ ಹಾಸ್ಟೆಲ್ಗೆ ೯ ಕೋಟಿ ರು. ಕಟ್ಟುವಂತೆ ನೋಟಿಸ್
೧೯ ವರ್ಷದಿಂದ ಜಲ ಮಂಡಳಿಗೆ ಬಿಲ್ ಪಾವತಿಸಿಯೇ ಇಲ್ಲ
ಅಪರ್ಣಾ ಎ.ಎಸ್ ಬೆಂಗಳೂರು
ದಶಕಗಳ ಇತಿಹಾಸವಿರುವ, ಬೆಂಗಳೂರಿನ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿರುವ ಯುವಿಸಿಎ ಕಳೆದ ೧೯ ವರ್ಷಗಳಿಂದ ನೀರಿನ ಬಿಲ್ ಪಾವತಿಸಿಯೇ ಇಲ್ಲ. ಕೋಟಿ ಕೋಟಿ ಬಾಕಿ ಉಳಿಸಿಕೊಂಡಿರುವ ಕಾಲೇಜು ಇದೀಗ ಕಟ್ಟಲು ಸಾಧ್ಯ ವಾಗದೇ ರಿಯಾಯಿತಿ ನೀಡುವಂತೆ ಮನವಿ ಸಲ್ಲಿಸಿದೆ.
ಬೆಂಗಳೂರು ವಿವಿಯ ಸುರ್ಪದಿಯಲ್ಲಿರುವ ಯುವಿಸಿಎ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ನಿಲಯದ ೯ ಕೋಟಿ ರು. ಬಾಕಿಯಿದ್ದು, ಕಳೆದ ೧೯ ವರ್ಷಗಳಿಂದ ಜಲ ಮಂಡಳಿಗೆ ಈ ಮೊತ್ತವನ್ನು ಕಟ್ಟಿಲ್ಲ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳು ನೊಟೀಸ್ ನೀಡಿದರೂ, ಅದಕ್ಕೆ ಸಕರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿರುವ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯ ರಿಂಗ್ ಕಾಲೇಜಿನ ಪುರುಷರ ಹಾಸ್ಟೆಲ್ ೧೯ ವರ್ಷಗಳಿಂದ ೯ ಕೋಟಿ ನೀರಿನ ಬಿಲ್ ಬಾಕಿ ಉಳಿಸಿಕೊಂಡಿದ್ದು, ಮೊತ್ತವನ್ನು ಪಾವತಿ ಸದ ಹಿನ್ನೆಲೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆರು ತಿಂಗಳಿನ ಹಿಂದೆ ಹಾಸ್ಟೆಲ್ಗೆ ನೀರಿನ ಸಂಪರ್ಕ ಕಡಿತಗೊಳಿಸಿದೆ. ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಈ ಹಾಸ್ಟೆಲ್ ನಲ್ಲಿ ಕಳೆದ ಆರು ತಿಂಗಳಿನಿಂದ ಜಲಮಂಡಳಿ ನೀರು ನೀಡದೇ ಇರುವುದರಿಂದ ಅನಿವಾರ್ಯವಾಗಿ ಬೋರ್ವೆಲ್ನ ನೀರನ್ನೇ ಬಳಸಲಾಗುತ್ತಿದೆ. ಇಷ್ಟಾದರೂ, ಆಡಳಿತ ಮಂಡಳಿ ಮಾತ್ರ ಎಚ್ಚೆತ್ತುಕೊಂಡಿಲ್ಲ.
ಕನಿಷ್ಟ ಬಡ್ಡಿ ಮೊತ್ತ ಮನ್ನಾಕ್ಕೆ ಮನವಿ: ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಬಿಲ್ ಮನ್ನಾ ಮಾಡುವಂತೆ ಜಲಮಂಡಳಿಗೆ ಮನವಿ ಮಾಡಲು ವಿವಿಧ ಪ್ರಯತ್ನಿಸಿದ್ದು, ದಂಡದ ಬಡ್ಡಿಯಾಗಿ ವಿಧಿಸಿರುವ ಸುಮಾರು ೧೫ ಲಕ್ಷ ರು. ಹಾಗೂ ವರ್ಷಗಳಲ್ಲಿ ಬಳಸಿದ ನೀರಿನ ಮೊತ್ತ ೮.೮ ಕೋಟಿ ರು. ವಿಧಿಸಲಾಗಿದೆ. ಈ ಭಾರೀ ಮೊತ್ತವನ್ನು ಕಟ್ಟುವುದು ಕಷ್ಟವಾಗಿದ್ದು, ಕನಿಷ್ಟ ಮೊತ್ತದ ಬಡ್ಡಿಯನ್ನಾದರೂ ಮನ್ನಾ ಮಾಡುವಂತೆ ಬೆಂಗಳೂರು ವಿಶ್ವವಿದ್ಯಾಲಯ ಜಲಮಂಡಳಿಗೆ ಮನವಿ ಮಾಡು ತ್ತಿದೆ. ಈ ಕುರಿತಂತೆ ಮಾಹಿತಿಯನ್ನು ಪರಿಶೀಲನಾ ಸಭೆಯಲ್ಲಿ ವಿವಿಯ ರಿಜಿಸ್ಟ್ರಾರ್ ಮಹೇಶ್ ಬಾಬು ಎನ್. ಪರಿಶೀಲಿಸುತ್ತಿದ್ದಾರೆ.
೩೫೦ ವಿದ್ಯಾರ್ಥಿಗಳಿರುವ ಹಾಸ್ಟೆಲ್
ಹಾಸ್ಟೆಲ್ನಲ್ಲಿ ೩೫೦ ವಿದ್ಯಾರ್ಥಿಗಳು ಇzರೆ. ಇದರಲ್ಲಿ ಕೆಲವು ಎಸ್ಸಿ,ಎಸ್ಟಿ, ಒಬಿಸಿ ಮತ್ತು ಮೀಸಲು ವರ್ಗಗಳಿಗೆ ಸೇರಿದವರೂ ಇದ್ದಾರೆ. ಹಾಸ್ಟೆಲ್ ವಿದ್ಯಾರ್ಥಿಗಳು ನೀರಿನ ಸಂಪರ್ಕ ಕಡಿತದಿಂದಾಗಿ ಬೋರ್ವೆಲ್ ನೀರನ್ನು ಬಳಸುತ್ತಿದ್ದು, ಎರಡು ಫಿಲ್ಟರ್ ಗಳು ಇವೆ. ಕೆಲವು ವಿದ್ಯಾರ್ಥಿಗಳು ಹೊರಗಿನಿಂದ ಖರೀದಿಸುವ ಕ್ಯಾನ್ ನೀರನ್ನು ಖರೀದಿಸಿ ಬಳಸುತ್ತಿದ್ದಾರೆ. ಇನ್ನು ಹಾಸ್ಟೆಲ್ ನಿಂದ ತಿಂಗಳಿಗೆ ೨೦ ಸಾವಿರ ಬಿಲ್ ಪಡೆಯಲಾಗುತ್ತಿದ್ದು, ಆದರೀಗ ಹಲವಾರು ವರ್ಷಗಳಿಂದ ಇದು ಬಾಕಿ ಉಳಿದಿದೆ. ಈ ವಿಚಾರ ವಾಗಿ ಮಧ್ಯಪ್ರವೇಶಿಸುವಂತೆ ಹಲವಾರು ಬಾರಿ ಹಾಸ್ಟೆಲ್ ಸಿಬ್ಬಂದಿ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಆದರೆ, ವಿವಿ ಈ ವಿಚಾರವನ್ನುಗಂಭೀರವಾಗಿ ಪರಿಗಣಿಸಿಲ್ಲ ಎಂದು ಯುವಿಸಿಇ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
*
ಸರಕಾರಕ್ಕೆ ಬಿಟ್ಟದ್ದು ಹಾಸ್ಟೆಲ್ ೨೦೦೩ರಿಂದ ನೀರಿನ ಬಿಲ್ ಪಾವತಿಸಿಲ್ಲ. ಯುವಿಸಿಇ ಈ ಮೊತ್ತವನ್ನು ಪಾವತಿಸುವ ಪ್ರಕ್ರಿಯೆ ಯಲ್ಲಿದೆ. ಮೊತ್ತ ಪಾವತಿಸದ ಕಾರಣ ನಾವು ಆರು ತಿಂಗಳ ಹಿಂದೆ ನೀರು ಸರಬರಾಜು ಕಡಿತಗೊಳಿಸಿದ್ದೇವೆ. ಬಡ್ಡಿ ಮನ್ನಾ ಮಾಡುವ ಅಧಿಕಾರ ನಮಗಿಲ್ಲ. ಅದರ ಬಗ್ಗೆ ನಿರ್ಧರಿಸುವುದು ಸರಕಾರಕ್ಕೆ ಬಿಟ್ಟದ್ದು. ಅವರು ಅಸಲು ಮೊತ್ತ ಪಾವತಿಸಿದರೆ, ನಾವು ಸರಕಾರಕ್ಕೆ ಮನ್ನಾ ಮಾಡಲು ಪ್ರಸ್ತಾಪಿಸಬಹುದು. ಆದರೆ, ಅದು ನಮ್ಮ ಕೈಯಲ್ಲಿಲ್ಲ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್ ಎಸ್ ವಿ ವೆಂಕಟೇಶ್ ಹೇಳಿದ್ದಾರೆ.