ಹೃತಿಕ್ ಕುಲಕರ್ಣಿ
ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ತಳೆದವರೆಲ್ಲರಿಗೂ ಮನೋಹರ ಗ್ರಂಥಮಾಲೆ ಎಂಬ ಕನ್ನಡ ಪ್ರಕಾಶನ ಸಂಸ್ಥೆಯ ಪರಿಚಯ ಇದ್ದಿರಬೇಕು. ಕನ್ನಡದಲ್ಲಿ ಆಗಿ ಹೋಗಿರುವ ಪ್ರಮುಖ ಸಾಹಿತಿಗಳನೇಕರ ಉದಯೋನ್ಮುಖ ಕೃತಿಗಳನ್ನು ಹೊರತಂದದ್ದು ಇದೇ ಪ್ರಕಾಶನ.
ನಂತರ ಇವರೆಲ್ಲ ಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ ಮತ್ತು ಅನ್ಯಸಾಹಿತ್ಯ ಕ್ಷೇತ್ರಗಳಲ್ಲಿ ದಿಗ್ಗಜ ವ್ಯಕ್ತಿಗಳಾಗಿ ಹೊರ ಹೊಮ್ಮಿದರು, ಕನ್ನಡದ ಕಂಪನ್ನು ನಾಡಿನ ಮೂಲೆಮೂಲೆ ಯಲ್ಲೂ ಪಸರಿಸುವ ಕಾರ್ಯ ಮಾಡಿದರು. ಈ ಸಂಸ್ಥೆ ಇಂದಿಗೂ ಅಲುಗದೆ ನಿಂತಿದೆ, ಕನ್ನಡ ಸಾಹಿತ್ಯ ಲೋಕಕ್ಕೆ ಎಡೆಬಿಡದೆ ತನ್ನ ಸೇವೆ ಸಲ್ಲಿಸುತ್ತಿದೆ. ಹಾಗಾದರೆ ಯಾರು ಈ ಸಂಸ್ಥೆಯ
ನಿರ್ಮಾತೃ? ಅವರೇ ನಾಟಕಕಾರ, ಕಾದಂಬರಿಕಾರ ಮತ್ತು ಅಪ್ರತಿಮ ಕನಸುಗಾರರೂ ಆಗಿದ್ದ ಗೋವಿಂದ ಭೀಮಾಚಾರ್ಯ ಜೋಶಿ (ಜಿ.ಬಿ ಜೋಶಿ). ಅವರ ದೂರದೃಷ್ಟಿಯ ಪರಿಣಾಮ ಇಂದು ಮನೋಹರ ಗ್ರಂಥಮಾಲೆ ಕನ್ನಡ ಸಾರಸ್ವತ ಲೋಕದ ಹೆಮ್ಮೆಯ ಪ್ರಕಾಶನ ಸಂಸ್ಥೆಯಾಗಿ ಬೆಳೆದಿದೆ.
ಪದ್ಮಶ್ರೀ ಪುರಸ್ಕೃತ ಗೋವಿಂದ ಭೀಮಾಚಾರ್ಯ ಜೋಶಿ ಅವರು ೧೯೦೪ ಜುಲೈ ೨೯ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು. ಇವರ ತಾಯಿ ಭಾರತೀಬಾಯಿ, ತಂದೆ ಭೀಮಾಚಾರ್ಯರು. ಜಿ.ಬಿ.ಜೋಶಿಯವರು 1933ರಲ್ಲಿ ಮನೋಹರ ಗ್ರಂಥಮಾಲೆಯನ್ನು ಬೆಟಗೇರಿ ಕೃಷ್ಣಶರ್ಮ ಹಾಗು ಚುಳಕಿ ಗೋವಿಂದರಾವ ಅವರ ಜತೆಗೂಡಿ ಪ್ರಾರಂಭಿಸಿದರು.
ಈ ಪ್ರಕಾಶನ ಸಂಸ್ಥೆಯ ಮೂಲಕ ಅನೇಕ ಖ್ಯಾತ ಲೇಖಕರನ್ನು ಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಪರಿಚಯಿಸಿದರು. ಖ್ಯಾತ ನಾಟಕಕಾರ ಗಿರೀಶ ಕಾರ್ನಾಡ ಅವರಬ್ಬರು. ೧೯೫೯ರಲ್ಲಿ ಹೊರಬಂದ ರಜತ ವರ್ಷದ ಕಾಣಿಕೆಯಾದ ನಡೆದು ಬಂದ ದಾರಿ ಮೂರು ಸಂಪುಟಗಳಲ್ಲಿ ಪ್ರಕಟ ವಾಯಿತು. ಈ ಹೊತ್ತಿಗೆಯಲ್ಲಿ ಪ್ರಕಟವಾದ ಕೀರ್ತಿನಾಥ ಕುರ್ತಕೋಟಿಯವರ ಕನ್ನಡ ಸಾಹಿತ್ಯದ ಸಮಗ್ರ ವಿಮರ್ಶೆ, ವಿಮರ್ಶಾಲೋಕದಲ್ಲಿ ಹೊಸ ಆಯಾಮವನ್ನು ತೆರೆಯಿತು. ಆ ಬಳಿಕ ವಿಮರ್ಶೆಯ ನಿಯತಕಾಲಿಕ
ಮನ್ವಂತರವನ್ನು ಪ್ರಾರಂಭಿಸಿದರು. ಜಿ.ಬಿ.ಜೋಶಿಯವರು ಜಡಭರತ ಹಾಗು ಅನಾಮಧೇಯ ಕಾವ್ಯನಾಮದಲ್ಲಿ ಸಾಹಿತ್ಯ ರಚಿಸಿದ್ದಾರೆ.
ಮನೋಹರ ಗ್ರಂಥಮಾಲೆ ಶುರುವಾದ ಬಗೆ: ೧೯೩೩ರಲ್ಲಿ ಶಂ.ಬಾ ಜೋಶಿ, ರಾಯದುರ್ಗ, ಬೇಟಗೇರಿ ಕೃಷ್ಣಶರ್ಮ ಮತ್ತು
ಗೋವಿಂದರಾವ ಚುಳಕಿ ಮೊದಲಾದವರು ಸೇರಿ ಒಂದು ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸುವ ವಿಚಾರ ಮಾಡಿದರು. ಆ ಕ್ಷಣಕ್ಕೆ ಅವರ ಕೈಯಲ್ಲಿ ಪ್ರಕಟಿಸುವುದಕ್ಕೆ ಇದ್ದದ್ದು ಕೇವಲ ಒಂದು ಪುಸ್ತಕ ಮಾತ್ರ. ಅದೂ ಗ್ರಂಥಮಾಲೆಯ ಸದಸ್ಯರೇ ಆಗಿದ್ದ ಬೇಟಗೇರಿ ಕೃಷ್ಣಶರ್ಮರ ‘ಸುದರ್ಶನ’ ಕಾದಂಬರಿ. ಈ ಎಲ್ಲರ ಆಲೋಚನೆ ಇದ್ದದ್ದು ಕಾಯಂ ಚಂದಾದಾರಿಕೆಯ ಮೂಲಕ ವರ್ಷಕ್ಕೆ ಆರು ಪುಸ್ತಕಗಳನ್ನು ಪ್ರಕಟಿಸುವುದು.
ಪುಸ್ತಕ ಮುದ್ರಣಕ್ಕೂ ಸದಸ್ಯ ರಾಯದುರ್ಗರ ಮುದ್ರಣಾಲಯ ಸಿದ್ಧವಿತ್ತು. ಮುಂಬಯಿ ವ್ಯಾಪಾರಿಯೊಬ್ಬರು ಕಾಗದ ಒಗದಿಸಲು ಒಪ್ಪಿದ್ದರು. ಹೀಗೆ ಮೊಳಕೆಯೊಡೆದ ಈ ಕನ್ನಡ ಪ್ರಕಾಶನ ಸಂಸ್ಥೆ ಜೀವತಳೆದು ಕಾರ್ಯರೂಪಕ್ಕಿಳಿದ್ದದ್ದು ೧೯೩೩ರ ಅಗಸ್ಟ್ ೧೫ರಂದು. ಬೇಟಗೇರಿ ಕೃಷ್ಣಶರ್ಮರ ಸುದರ್ಶನ ಕಾದಂಬರಿ ಈ ಪ್ರಕಾಶನ ಸಂಸ್ಥೆ ಪ್ರಕಟಿಸಿ ಮುದ್ರಿ ಸಿದ ಮೊದಲ ಕಾದಂಬರಿ. ‘ಮನೋಹರ ಗ್ರಂಥಮಾಲೆ’ ಎಂಬ ಮನಸೂರೆ ಹಿಡಿಯುವ ಹೆಸರನ್ನು ಕೊಟ್ಟಿದ್ದೂ ಆನಂದಕಂದರೇ.
ಮಾಲೆ ಕಟ್ಟಿ ಬೆಳೆಸಿದ ಬಿ.ಜಿ.ಯವರ ಮಾತು: “ಸರಿ ಚುಳಕಿ ಅವರು ಆಫೀಸು ನೋಡಿ ಕೊಂಡರು. ನಾವು ಮೂವರು ಪುಸ್ತಕದ ಗಂಟು ಹೊತ್ತು ಮೂರು ದಿಕ್ಕುಗಳಿಗೆ ಹೊರಟೆವು. ನಾವು ಮುದ್ರಿಸಿದ್ದು ೧೦೦೦ ಪ್ರತಿ. ಅಷ್ಟು ಚಂದಾದಾರರನ್ನು ಕಲೆಹಾಕುವುದು ನಮ್ಮಿಂದಾಗಲಿಲ್ಲ. ಆದರೆ ವರ್ಷದ ಅಂತ್ಯದಲ್ಲಿ ಎಲ್ಲ ಕಲೆ ಹಾಕಿದಾಗ ಕಾಗದ ಮುದ್ರಣ ವೆಚ್ಚ ಕೊಟ್ಟು ನಮ್ಮ ಪ್ರಯಾಣದ ಖರ್ಚು ಕಳೆದು ತಲಾ ತಿಂಗಳಾ ಆರು ರುಪಾಯಿಗಳ ಘನ ಸಂಬಳ ನಮಗೆ ಪ್ರತಿಯೊಬ್ಬರಿಗೂ ಬಂದಿತ್ತು. ನಾವೆಲ್ಲರೂ ಆಗಲೇ ಲಗ್ನವಾಗಿ ಸಂಸಾರವಂದಿಗರಾಗಿದ್ದೆವು. ಇದರಲ್ಲಿ ನಾಲ್ಕು ಸಂಸಾರಗಳ ಹೊಟ್ಟೆ ನೆತ್ತಿ ಸಾಗುವುದು ಅಸಾಧ್ಯವೆಂದು ಖಚಿತವಾಗಿ ೨ನೇ ವರ್ಷದ ಅಂತ್ಯಕ್ಕೆ ನಾವು ಬೇರೆಯಾದೆವು. ಇದ್ದ ಪುಸ್ತಕದ ಸ್ಟಾಕು, ಕಪಾಟು, ಕುರ್ಚಿ ಎಲ್ಲವನ್ನೂ ಹಂಚಿಕೊಂಡೆವು. ಮಾಲೆಯನ್ನು ಮುನ್ನಡೆಸುವ ಜವಾಬ್ದಾರಿ ನಾನು ವಹಿಸಿಕೊಂಡೆ. ಬೇಂದ್ರೆ, ಮುಗಳಿ, ಗೋಕಾಕರನ್ನು ಸಾಹಿತ್ಯ ವಿಷಯ ಸಲಹೆ ಗಾರರಾಗಿರಲು ಒಪ್ಪಿಸಿ ಗ್ರಂಥಮಾಲೆ ಮುನ್ನಡೆಸಿದೆ.”
ಹಲವು ಪ್ರಪ್ರಥಮಗಳ ಜನಕ ಸಂಸ್ಥೆ: ಮನೋಹರ ಗ್ರಂಥಮಾಲೆ ಕನ್ನಡಿಗರಿಗೆ ಕೆಲ ಪ್ರಥಮ ಕೃತಿಗಳ ಪರಿಚಯ ಮಾಡಿಸಿ ಕೊಟ್ಟಿದೆ. ‘ನವಿಲು ಗರಿ’ ಕನ್ನಡದ ಪ್ರಪ್ರಥಮ ಸಣ್ಣ ಕಥೆಗಳ ಅಂಥಾಲಜಿ. ‘ಕೋಲ್ಮಿಂಚು’ ಎಂಬ ಪ್ರಥಮ ಏಕಾಂಕ ಅಂಥಲಾಜಿಗೆ ಪುಸ್ತಕ ರೂಪ ಕೊಟ್ಟಿದ್ದೂ ಇದೇ ಮಾಲೆ. ಶರತ್ಚಂದ್ರರ ಮನೋಹರ ಬಂಗಾಲಿ ಕಾದಂಬರಿಗಳನ್ನು ಕನ್ನಡದಲ್ಲಿ ಪ್ರಕಟಿಸಿದ್ದು
ಇದೇ ಸಂಸ್ಥೆ. ಸುಳಿವು ಹಳಿವು ಹಂಟೆ ಅಂಥಾಲಜಿಯನ್ನು ಓದುಗ ಜನರರಿಗೆ ಕೊಟ್ಟದ್ದು ಜಿ.ಬಿ ಜೋಶಿ ನೇತೃತ್ವದ ಮನೋಹರ ಗ್ರಂಥಮಾಲೆ.
ಕನ್ನಡದಲ್ಲೇ ಮೊಟ್ಟಮೊದಲ ಬಾರಿಗೆ ಕಾದಂಬರಿ ಮತ್ತು ಲೇಖನ ಸ್ಪರ್ಧೆ ಏರ್ಪಡಿಸಿದ ಹಿರಿಮೆ ಗರಿಮೆ ಗ್ರಂಥಮಾಲೆಗೆ
ಸಲ್ಲಬೇಕು. ಪ್ರಸಿದ್ಧ ಲೇಖಕ, ಸಾಹಿತಿಗಳನ್ನಷ್ಟೇ ನೆಚ್ಚಿಕೊಳ್ಳದ ಜೋಶಿಯವರು ತಮ್ಮ ಪ್ರಕಾಶನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ನವ ಪ್ರತಿಭೆಗಳನ್ನು ಅವರ ಕೃತಿಗಳನ್ನು ಪರಿಚಯಿಸಿ ಕೊಟ್ಟರು.
ಜಿ.ಬಿ ಜೋಶಿಯವರು ಕಾಲವಾಗಿ ವರ್ಷಗಳೇ ಕಳೆದರೂ ಮನೋಹರ ಗ್ರಂಥಮಾಲೆ ತನ್ನ ಮೂಲೋದ್ದೇಶವನ್ನು ಮರೆಯದೆ ಕಾರ್ಯತತ್ಪರವಾಗಿದೆ. ಧಾರವಾಡಕ್ಕೆ ಭೇಟಿ ನೀಡುವ ಎಲ್ಲ ಸಾಹಿತ್ಯಾಸಕ್ತರು ಗ್ರಂಥಮಾಲೆಗೆ ಭೇಟಿ ನೀಡಿ ಬರಬೇಕು.
ಜಿ.ಬಿ ಜೋಶಿ ಅವರ ನಾಟಕಗಳು
ಮೂಕಬಲಿ, ಸತ್ತವರ ನೆರಳು, ಕದಡಿದ ನೀರು, ಆ ಊರು ಈ ಊರು, ನಾನೇ ಬಿಜ್ಜಳ, ಪರಿಮಳದವರು, ಜರ್ಮನ್ ಬಂಗ್ಲೆ.