Saturday, 23rd November 2024

Narayana Yaji: ಕಲೆಗಾಗಿ ಸೋಲು ಜೀವನದಲ್ಲಿ ಸೋಲು

ನಾರಾಯಣ ಯಾಜಿ

ಯಕ್ಷಗಾನ ಪ್ರದರ್ಶನದಲ್ಲಿ ಹೊಸ ಸಾಹಸಗಳನ್ನು ನಡೆಸಿದ ಸಂತೆಗುಳಿ ನಾರಾಯಣ ಭಟ್ಟರ ಆತ್ಮಕಥೆಯು ಹಲವು ಆಯಾಮಗಳಲ್ಲಿ ಪ್ರಮುಖ ಎನಿಸಿದೆ.

ಸಂತೆಗುಳಿ ನಾರಾಯಣ ಭಟ್ಟರು ಯಕ್ಷಗಾನ ವಲಯದಲ್ಲಿ ಪರಿಚಿತವಾದ ಹೆಸರು. ಆದರೆ ಅವರು ಉತ್ತರ ಕನ್ನಡ
ಜಿಲ್ಲೆಯ ಯಕ್ಷಗಾನದ ಚರಿತ್ರೆಯ ಭಾಗವೂ ಆಗಿದ್ದಾರೆ ಎನ್ನುವುದು ಕೆಲವೇ ಜನರಿಗೆ ತಿಳಿದ ಸಂಗತಿ. ಕಾಲವೇ ಹಾಗೇ, ಹೊಸ ನೀರು ಬಂದಾಗ ಹಳೇಯ ನೀರು ಕೊಚ್ಚಿಹೋಗುತ್ತದೆ. ನಾರಾಯಣ ಭಟ್ಟರಂಥವರು ಯಕ್ಷಗಾನ ಕಲೆಯ ಮೇಲಿನ ಅವಿನಾಭಾವ ಸಂಬಂಧದಿಂದ ರಂಗದ ಹಿಂದಿನ ಮಹಾನ ಶಕ್ತಿಯಾಗಿ ಅನೇಕ ಪ್ರಸಿದ್ಧ ಕಲಾವಿದರಿಗೆ ಹೆಗಲೇಣಿಯಾದವರು, ಆ ಕಾರಣಕ್ಕಾಗಿ ತಾವು ಗಳಿಸಿದ ಸಂಪತ್ತಗಳನ್ನೆಲ್ಲಾ ಕಳೆದುಕೊಂದರೂ ಅದಕ್ಕಾಗಿ ಬೇಸರಿಸದೇ ಈ ಕಲೆಯ ಗೀಳಿನಿಂದಾಗಿ ಅದರೊಂದಿಗೆ ನಿರಂತರವಾಗಿ ಸಾಗುತ್ತಾ ಬಂದವರು. ಇದೀಗ ಅವರಿಗೆ ಎಂಭತ್ತರ ಹರೆಯ. ಈ ಹಂತದಲ್ಲಿ ಅವರ ಬದುಕಿನ ಪಥದ ಅನುಭವವನ್ನು ತಮ್ಮ ಆತ್ಮಚರಿತ್ರೆ ‘ಆಟದ ಮೇಳ’ ದಲ್ಲಿ ತೆರೆದಿರಿಸಿದ್ದಾರೆ.

‘ಆಟದ ಮೇಳ’ ಮುಖ್ಯವಾಗುವುದು ನಾರಾಯಣ ಭಟ್ಟರ ಜೀವನದ ಸಂಗಡವೇ ಯಕ್ಷಗಾನ ನಡೆದು ಬಂದ ಅನೇಕ ಸ್ಥಿತ್ಯಂತರಗಳಿಂದಾಗಿ. ಒಂದರ್ಥದಲ್ಲಿ ಬಡಗಿನ ಯಕ್ಷಗಾನದ ಚರಿತ್ರೆಯೂ ಇವರ ಮೂಲಕವಾಗಿ ಅನಾವರಣ ಗೊಂಡಿದೆ. ಯಕ್ಷಗಾನದ ದಂತಕತೆ ಎಂದು ಪ್ರಖ್ಯಾತರಾದ ಮೂಡ್ಕಣಿ ನಾರಾಯಣ ಹೆಗಡೆಯವರ ಲಾಲಿತ್ಯದ ಕುಣಿತ, ಡಾ. ಪದ್ಮನಾಭಯ್ಯನವರ ಅರ್ಥಗಾರಿಕೆ, ಕೆರಮನೆ ಶಿವರಾಮ ಹೆಗಡೆಯವರ ಸಮಗ್ರ ಅಭಿನಯ ಮತ್ತು ಉತ್ತರಕನ್ನಡದಲ್ಲಿ ಪ್ರಪ್ರಪಥಮ ಬಾರಿಗೆ ಟೆಂಟಿನ ಮೇಳ ಮಾಡಿದ ಅನುಭವ, ಕರ್ಕಿ ಮೇಳದ ಕಲಾವಿದರ, ಕೆರಮನೆ ಶಂಭುಹೆಗಡೆಯವರೊ ಒಡನೆಯ ದೀರ್ಘಕಾಲದ ಅನುಬಂಧ, ಚಿಟ್ಟಾಣಿ ಮತ್ತು ಕಡತೋಕಾ ಭಾಗವತರ
ಹೊಂದಾಣಿಕೆಯಲ್ಲಿ ನಡೆದ ಆಟ ವೈಭವಗಳು, ಇವೆಲ್ಲವನ್ನೂ ಇದ್ದದ್ದನ್ನು ಇದ್ದ ಹಾಗೇ ನಮ್ಮ ಎದುರು ನಾರಾಯಣ ಭಟ್ಟರು ಕಟ್ಟಿಕೊಟ್ಟಿದ್ದಾರೆ.

೧೯೪೦ರಿಂದ ಇದು ತನಕದ ನಡೆಯಲ್ಲಿ ಪ್ರೇಕ್ಷಕರು ಆಟಗಳನ್ನು ನೋಡುವ ಕ್ರಿಯೆಯಲ್ಲಿ ‘ಭಾವನಾತ್ಮಕವಾಗಿ ಪಾತ್ರಗಳನ್ನು ನೋಡಲು ಇಷ್ಟಪಡುತ್ತಿದ್ದರು, ಇಂದು ವಾಕ್ಚಾತುರ್ಯ ಮತ್ತು ವಿಪರೀತ ಕುಣಿತ ರಂಗವನ್ನು ಆವರಿಸಿ ಕೊಂಡಿದೆ, ಪ್ರೇಕ್ಷಕರಿಗೂ ಇದೇ ಯಕ್ಷಗಾನ ಎಂದು ಅನಿಸಿದೆ’ ಎನ್ನುವ ಬದಲಾವಣೆಗಳನ್ನು ಈ ಕೃತಿಯಲ್ಲಿ
ಕಾಣಬಹುದಾಗಿದೆ. ನಾರಾಯಣ ಭಟ್ಟರು ಪ್ರಾರಂಭದಲ್ಲಿ ಸಾಮವೇದವನ್ನು ಮತ್ತು ಪೌರೋಹಿತ್ಯಕ್ಕೆ ಬೇಕಾದ ಎಲ್ಲಾ ಮಂತ್ರಗಳನ್ನು ಕಲಿತು ಉತ್ತಮ ಪುರೋಹಿತರಾಗಿ ಬೆಳೆಯುತ್ತಿದ್ದರು. ವ್ಯಾಪಾರ, ರಾಜಕೀಯ, ಧಾರ್ಮಿಕ
ಹೀಗೆ ಈ ವಿಭಾಗಗಳಲ್ಲಿ ಮುಖಂಡರೂ ಆಗಿದ್ದವರಿಗೆ ಅಂತರಂಗದಲ್ಲಿ ‘ಇದಲ್ಲ ನಿನ್ನ ಕ್ಷೇತ್ರ’ ಎನ್ನುವ ಕೂಗು ಕೇಳಿಸಿತು. ಅವರೇ ಹೇಳಿಕೊಂಡಂತೆ ವ್ಯಾಪಾರಕ್ಕಿಂತ ತನಗೆ ‘ಸವಂ ಯಕ್ಷಗಾನಮಯಂ’ ಎನ್ನುವ ಮಟ್ಟಿಗೆ
ಮನಸ್ಸು ಸೋತಿತು. ಉತ್ತರ ಕನ್ನಡದ ಎಲ್ಲಾ ಪ್ರಸಿದ್ಧ ಮೇಳದ ಕಲಾವಿದರನ್ನೂ ಸೇರಿಸಿ ಸಂಘಟಿಸಿದ ‘ಶ್ರೀ
ಇಡಗುಂಜಿ ಮಹಾಗಣಪತಿ ಪ್ರಾಸಾದಿತ ಯಕ್ಷಗಾನ ಮಂಡಳಿ ಸಂಯುಕ್ತ ಉತ್ತರಕನ್ನಡ’ ಒಂದು ದಾಖಲೆ ಮತ್ತು ಅವರಿಗೆ ಸಂಕಟವನ್ನು ತಂದುಕೊಟ್ಟ ಘಟನೆಗಳೂ ಇಲ್ಲಿವೆ.

ಎತ್ತರದಲ್ಲಿದ್ದ ವ್ಯಕ್ತಿ ಕಲಾವಿದರನ್ನು ಸಂಭಾಳಿಸಿಕೊಳ್ಳಲೂ ಏನೆಲ್ಲಾ ಕಷ್ಟಪಡಬೇಕಾಯಿತು ಎನ್ನುವುದನ್ನು ಇಲ್ಲಿ
ನೋಡಬಹುದಾಗಿದೆ. ನಾರಾಯಣ ಭಟ್ಟರು ತಮಗೆ ಕಲಾವಿದರಿಂದ ಆದ ನೋವಿನ ಕುರಿತು ಯಾವ ಆಪಾದನೆ ಯನ್ನೂ ಮಾಡಿವುದಿಲ್ಲ. ಎಲ್ಲವೂ ತನ್ನ ಹಣೆಯ ಬರಹ ಎನ್ನುವುದಾಗಿ ಹೇಳಿಕೊಳ್ಳುವ ಸಜ್ಜನಿಕೆ ಅವರದು. ಮೊದಲ ಬಾರಿ ಗ್ಯಾಸ್ ಲೈಟ್ ಇವರ ಮೇಳವನ್ನು ಗಜಮೇಳವೆಂದು ಕರೆಯುತ್ತಿದ್ದರು. ಗ್ಯಾಸ್ ಲೈಟ್ ಮೂಲಕ ಆತ ನಡೆಯುವ ಕಾಲದಲ್ಲಿ ಅದನ್ನು ಬಿಟ್ಟು ಮೊತ್ತಮೊದಲ ಬಾರಿಗೆ ವಿದ್ಯುತ್ ದೀಪದ ಬಳಕೆಯನ್ನು ಅದಕ್ಕಾಗಿ ಜನರೇಟರ್ ಖರೀದಿ ಮಾಡಿದವರು. ಟೆಂಟ್ ಮೇಳದಲ್ಲಿ ಅನೇಕ ಸೌಲಭ್ಯಗಳನ್ನು ಕಲಾವಿದರಿಗೆ, ಪ್ರೇಕ್ಷಕರಿಗೆ ಮೊದಲಬಾರಿಗೆ ಒದಗಿಸಿದರು.

ವ್ಯಾಪಾರದಲ್ಲಿ ಗಣ್ಯರಾಗಿ ಮೆರೆದವರು ಯಕ್ಷಗಾನ ಮೇಳದಿಂದಾಗಿ ಕಷ್ಟ ನಷ್ಟಗಳಿಗೆ ತುತ್ತಾಗಬೇಕಾಯಿತು. ಮನೆಯ ಚಿನ್ನವನ್ನು, ಪಾತ್ರೆ ಪಗಡೆಗಳನ್ನು ಮಾರಿ ಮೇಳದಿಂದಾದ ಸಾಲವನ್ನು ತೀರಿಸಬೇಕಾಗಿ ಬಂದಾಗ ಇವರ ಬೆನ್ನ ಹಿಂದೆ ನಿಂತವರು ಇವರ ಸಹೋದರರು. ಕೆರಮನೆ ಶಂಭು ಹೆಗಡೆಯವರ ಮೇಳದಲ್ಲಿ ನಾರಾಯಣ ಭಟ್ಟರು
ತೊಡಗಿಕೊಂಡು ಶಂಭುಹೆಗಡೆಯವರಿಗೆ ಹೆಚ್ಚಿನ ಸಂದರ್ಭದಲ್ಲಿ ತಮ್ಮ ಅನುಭವವನ್ನು ಹಂಚಿ ಇಡಗುಂಜಿ ಮೇಳದ ಮ್ಯಾನೇಜರರಾಗಿ ಕೊನೆಯವರೆಗೂ ಇದ್ದ ಸಂಗತಿ ಅವರ ಜೀವನದ ಮತ್ತೊಂದು ಘಟ್ಟ. ಯಕ್ಷಗಾನದ ಕುತೂಹಲಕಾರಿ ಅನೇಕ ಸಂಗತಿಗಳಿಗೆ ಇಲ್ಲಿ ಉತ್ತರ ಸಿಗುತ್ತದೆ. ಚಿಟ್ಟಾಣಿಯವರು ಕೆರಮನೆ ಮೇಳಕ್ಕೆ ಬರುತ್ತೇನೆಂದು ಒಪ್ಪಿ ನಂತರ ಯಾವುದೋ ಕಾರಣಕ್ಕೆ ಬರದೇ ಇರುವ ಘಟನೆ ಯಕ್ಷಗಾನ ವಲಯದಲ್ಲಿ ಇಂದಿಗೂ ಚರ್ಚೆಗೆ ಒಳಗಾದ ವಿಷಯ.

ಲಾಭ ನಷ್ಟ ಎರಡೂ ವ್ಯವಹಾರದಲ್ಲಿ ಇದ್ದಿರುವುದೇ. ಅಷ್ಟೇ ಆಗಿದ್ದರೆ ಆತ್ಮಕತೆಗೆ ಮಹತ್ವವಿರುತ್ತಿರಲಿಲ್ಲ. ಈ ಕೃತಿಯಲ್ಲಿ ಗಮನ ಸೆಳೆಯುವುದು ನಾರಾಯಣ ಭಟ್ಟರು ತಮ್ಮ ಪ್ರಯೋಗ ಮತ್ತು ಮೇಳದ ಕಾರಣದಿಂದ
ಉತ್ತರ ಕನ್ನಡ ಜಿಲ್ಲೆಯಲ್ಲಿ ವೃತ್ತಿಮೇಳಕ್ಕೆ ಒಂದು ಘನತೆಯನ್ನು ಯಕ್ಷಗಾನ ರಂಗದಲ್ಲಿ ಕೊಟ್ಟವರಿವುದು. ನಾಲ್ಕಾಣೆ ದಕ್ಷಿಣೆ ಕೊಡುವಾಗ ಆದ ಅವಮಾನ ತನ್ನನ್ನು ವೈದಿಕ ವೃತ್ತಿಯಿಂದ ವಿಮುಖನಾಗುವಂತೆ ಮಾಡಿತು ಎನ್ನುವ ನಾರಾಯಣ ಭಟ್ಟರಿಗೆ ಮೇಳದ ಸಂಘಟೆನೆಯಿಂದಾಗಿ ಅನುಭವಿಸಿದ ಅವಮಾನ ಅವರನ್ನು ಅದರ ಹತ್ತುಪಾಲು
ಹೆಚ್ಚಿನದ್ದು. ಕಲೆಯೆನ್ನುವುದು ಭಾವ ಪ್ರಪಂಚ. ರಂಗದಲ್ಲಿ ಇನ್ನೊಬ್ಬರನ್ನು ದೊಡ್ಡ ಕಲಾವಿದರನ್ನಾಗಿಸಿ ತಾವು ಅವರ ಶ್ರೇಯಸ್ಸಿನಲ್ಲಿ ಆನಂದಪಡೆಯುವ ಭಾವನಾ ಜೀವಿಯಾದ ಕಾರಣ ಅವರಿಗೆ ಮೇಳಗಳಲ್ಲಿ ನಡೆದ ಕೆಲ ಬೇಸರದ ಸಂಗತಿಗಳು ಅವಮಾನವೆನಿಸಲಿಲ್ಲ.

ಕಲೆ ದೊಡ್ಡದು, ಕಲಾವಿದನಿಗಿಂತಲೂ ಕಲೆ ದೊಡ್ಡದು ಎನ್ನುವದನ್ನು ಅವರ ಜೀವನ ಚರಿತ್ರೆಯನ್ನು ಓದಿದಾಗ ಅನಿಸುತ್ತದೆ. ಯಕ್ಷಗಾನದಲ್ಲಿ ಬಂದ ಕೆಲವೇ ಅತ್ಯುತ್ತಮ ಆತ್ಮಕಥೆಯಲ್ಲಿ ಇದು ಒಂದು ಎಂದು ಗುರುತಿಸಬಹುದು.