ಸುರೇಂದ್ರ ಪೈ, ಭಟ್ಕಳ
ಚೌತಿ ಹಬ್ಬದಂದು ಗಣಪನಿಗೆ ವಿವಿಧ ಭಕ್ಷ್ಯ ಭೋಜನಗಳನ್ನು ನೈವೇದ್ಯ ಮಾಡಲಾಗುತ್ತದೆ. ಜತೆಗೆ, ಮಲೆನಾಡು, ಉತ್ತರ ಕನ್ನಡ, ದಕ್ಷಿಣ ಕನ್ನಡದ ಭಾಗದಲ್ಲಿ ಹಲಸಿನ ಎಲೆಯ ಕೊಟ್ಟೆಯನ್ನು ತಯಾರಿಸಲಾಗುತ್ತದೆ. ಹಲಸಿನ ಎಲೆಯ ಕೊಟ್ಟೆ (ದೊನ್ನೆಯ ಹೋಲಿಕೆ) ಯನ್ನು ತಯಾರಿಸಿ ಅದರೊಳಗೆ ಉದ್ದಿನ ಹಿಟ್ಟನ್ನು ತುಂಬಿಸಿ, ಒಲೆಯ
ಮೇಲೆ ಬೇಯಿಸಿ ಸಿದ್ದಪಡಿಸುವ ನಮ್ಮ ಸಾಂಪ್ರದಾಯಿಕ ಖಾದ್ಯವೇ ಈ ಹಲಸಿನ ಎಲೆಯ ಕೊಟ್ಟೆ ಕಡಬು.
ಒಂದು ಹಲಸಿನ ಕೊಟ್ಟೆ ತಯಾರಿಸಲು ನಾಲ್ಕು ಹಲಸಿನ ಎಲೆ ಹಾಗೂ ತೆಂಗಿನ ಕಡ್ಡಿ ಅಥವಾ ಬಿದಿರಿನ ಕಡ್ಡಿ ಇದ್ದರೆ ಸಾಕು. ಮೊದಲು ಎರಡು ಎಲೆಗಳನ್ನು ಎದುರು ಬದುರಾಗಿ ಇಟ್ಟು ಅದರ ಕೆಳಭಾಗವನ್ನು ಕಡ್ಡಿಯಿಂದ ಸೇರಿಸಿ ಕೊಳ್ಳಬೇಕು. ಅನಂತರ ಇನ್ನುಳಿದ ಎರಡು ಎಲೆಗಳನ್ನು ಅಕ್ಕಪಕ್ಕದಲ್ಲಿ ನಾಲ್ಕು ಮೂಲೆಗಳಿಗೆ ಸರಿಹೊಂದುವಂತೆ ಇಟ್ಟು ಕಡ್ಡಿಯಿಂದ ‘ಪತ್ರಾವಳಿ’ (ಊಟಕ್ಕೆ ಬಳಸುವ ಎಲೆಯ ತಟ್ಟೆ) ಸಿದ್ದಪಡಿಸಿಕೊಳ್ಳಬೇಕು. ಅನಂತರ ಎಲೆಯ ಪತ್ರಾವಳಿಯ ನಾಲ್ಕು ಚೊಟ್ಟಿನ ಭಾಗವನ್ನು ಮೇಲ್ಮುಖವಾಗಿ ಕಡ್ಡಿಯ ಸಹಾಯದಿಂದ ಚುಚ್ಚಬೇಕು. ಆಗ ಅದು ದೊನ್ನೆಯ ಆಕಾರವನ್ನು ತಾಳುತ್ತದೆ.
ಬುಡ(ತಳ) ಭಾಗವು ನೆಲಕ್ಕೆ ನಿಲ್ಲುವಂತಾಗುತ್ತದೆ. ಸಿದ್ಧವಾದ ಕೊಟ್ಟೆಯೊಳಗೆ ರುಬ್ಬಿದ ಉದ್ದಿನ ಹಿಟ್ಟನ್ನು ಹಾಕಿ ಬೇಯಿಸಿದರೆ ರುಚಿ ರುಚಿಯಾದ ಹಲಸಿನ ಕೊಟ್ಟೆ ಕಡಬು ಸವಿಯಲು ಸಿದ್ದ. ಎಲೆಗಳ ಮೂಲಕ ಹಬೆ ಹಾದು ವಿಶಿಷ್ಟವಾಗಿ ಬೇಯುವುದರಿಂದ, ಇಡ್ಲಿಗಿಂತ ಭಿನ್ನವಾದ ರುಚಿ, ಮೃದುತ್ವ ಇದಕ್ಕೆ ಲಭ್ಯವಾಗುತ್ತದೆ. ಕರಾವಳಿ ಭಾಗದಲ್ಲಿ ಚೌತಿಯಂದು ಎಲ್ಲರ ಮನೆಯಲ್ಲೂ ಕೊಟ್ಟೆ ಕಡಬು ಮಾಡಲಾಗುತ್ತದೆ. ಮುಂಡುಕನ ಓಲಿಯಲ್ಲೂ ಇದನ್ನು ಹೋಲುವ ಮೂಡೆ ತಯಾರಿಸುವುದುಂಟು.
ಹಲಸಿನ ಎಲೆಯ ಕೊಟ್ಟೆ ಕಡುಬು ನಗರದಲ್ಲೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ; ಆನ್‌ಲೈನ್ ವ್ಯಾಪಾರೀ ಸಂಸ್ಥೆಗಳು ಈ ಜನಪ್ರಿಯತೆ ಕಂಡು, ಒಂದು ಹಲಸಿನ ಖಾಲಿ ಕೊಟ್ಟೆಗೆ ಐದು ರುಪಾಯಿಯಂತೆ ಸರಬರಾಜು ಮಾಡುವುದನ್ನು ಕಾಣಬಹುದು! ಇದಕ್ಕೆ ಕಾರಣ, ಹಲಸಿನ ಎಲೆಗಳ ನಡುವೆ ಹಬೆಯಲ್ಲಿ ಬೇಯುವ ಇಡ್ಲಿ ಹಿಟ್ಟಿನ ರುಚಿ. ಇದನ್ನು ಚಟ್ನಿ, ಸಾಂಬಾರು ಅಥವಾ ಪಾಯಸದೊಂದಿಗೆ ಸೇವಿಸುವ ಪದ್ಧತಿ ಇದೆ. ಕರಾವಳಿಯಲ್ಲಿ, ಹಬ್ಬದ ದಿನ ಮನೆಗೆ ಬಂದವರಿಗೆ ಹಲಸಿನ ಕೊಟ್ಟೆ ಕಡುಬನ್ನು ನೀಡುವುದುಂಟು.