Monday, 28th October 2024

Siddesh Haranahalli column: ನಿರುದ್ಯೋಗಿಯೆಂದು ಕೊರಗಬೇಡಿ ಗುತ್ತಿಗೆಗಾರರಾಗಿ !

ಸಿದ್ದೇಶ್ ಹಾರನಹಳ್ಳಿ

ಉತ್ತಮ ಉದ್ಯೋಗ ದೊರಕದೇ ಹತಾಶರಾಗುವ ಯುವ ಜನತೆಗೆ ಒಂದು ಆಶಾಕಿರಣ ಎಂದರೆ ಗುತ್ತಿಗೆ ದಾರರ ವೃತ್ತಿ! ನಿಮ್ಮಲ್ಲಿ ನಾಯಕತ್ವ ಗುಣವಿದ್ದರೆ, ಈ ಹಾದಿಯಲ್ಲಿ ಮುಂದುವರಿಯುವ ಅವಕಾಶಗಳಿವೆ.

ನಿರುದ್ಯೋಗ ವಿಶ್ವದ ಜ್ವಲಂತ ಸಮಸ್ಯೆ. ಈ ನಿರುದ್ಯೋಗ ಸಮಸ್ಯೆಯಿಂದಾಗಿಯೇ ಹಲವು ದೇಶದಲ್ಲಿ ಸರಕಾರಗಳೇ ಉರುಳು ಹೋಗಿವೆ. ಭಾರತದಲ್ಲಿ ನಿರುದ್ಯೋಗ ಎನ್ನುವುದು ಇಂದು ನಿನ್ನೆಯ ಸಮಸ್ಯೆಯೇನಲ್ಲ. ನಿರುದ್ಯೋಗ ನಿರ್ಮೂಲನೆಗೆ ಸರಕಾರಗಳು ಅಗತ್ಯ ಕ್ರಮವಹಿಸಬೇಕು ಎನ್ನುವುದು ಎಷ್ಟು ಸತ್ಯವೋ, ಸರಕಾರದಿಂದಲೇ ಶೇ.100 ರಷ್ಟು ನಿರುದ್ಯೋಗ ನಿರ್ಮೂಲನೆ ಅಸಾಧ್ಯ ಎನ್ನುವುದು ಎಷ್ಟೇ ಸತ್ಯ.

ಇಂತಹ ಸಮಯದಲ್ಲಿ ಯುವಕರು ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡುವುದಕ್ಕೆ ಸರಕಾರಗಳು ಹತ್ತು ಹಲವು ಯೋಜನೆಗಳನ್ನು ರೂಪಿಸಿದರೂ ನಮಗೆ ಕೆಲಸ ಸಿಗುತ್ತಿಲ್ಲವೆಂದು ಯುವಕರು ‘ಆರೋಪಿಸುವ’ ಬದಲು ಈ ಸಮಸ್ಯೆ ಯನ್ನು ಮೀರಿ ಸ್ವ ಉದ್ಯೋಗ ಮಾಡುವುದು ಹೇಗೆ ಎನ್ನುವುದು ಮುಖ್ಯವಾಗುತ್ತದೆ. ಯುವಕರು ಈ ನಿಟ್ಟಿನಲ್ಲಿ ಕೊಂಚ ಆಲೋಚನೆ ಮಾಡಿದರೆ ಪರಿಹಾರ ಸಿಗುವುದರಲ್ಲಿ ಅನುಮಾನವಿಲ್ಲ. ಸರಕಾರಿ ಕೆಲಸವಿಲ್ಲ ದಿದ್ದರೂ ಸರಕಾರದ ಭಾಗವಾಗಿರುವ ಬದುಕು ಕಟ್ಟಿಕೊಳ್ಳಬಹುದು ಎನ್ನುವ ಬಗ್ಗೆ ಅನೇಕ ಯುವಕರು ಯೋಚಿಸು ವುದಿಲ್ಲ. ಈ ದಿಕ್ಕಿನಲ್ಲಿ ಯೋಚಿಸಿದರೆ, ನಿರುದ್ಯೋಗಿ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಯುವಕರು ‘ಸ್ವಾವಲಂಬಿ’ ಗಳಾಗುವುದರೊಂದಿಗೆ ಹತ್ತಾರು ಜನರಿಗೆ ಉದ್ಯೋಗ ನೀಡಬಹುದು. ಹಾಗಾದರೆ, ಈ ಕೆಲಸವಾದರೂ ಯಾವುದು ಎನ್ನುವ ಬಗ್ಗೆ ಯೋಚಿಸುತ್ತಿರಬಹುದು. ಅದಕ್ಕೆ ಉತ್ತರವಾಗಿ ಬರುವ ಕೆಲಸವೆಂದರೆ ಅದು ‘ಗುತ್ತಿಗೆದಾರರು’!

ಹೌದು, ಕೇಂದ್ರ ಅಥವಾ ರಾಜ್ಯ ಸರಕಾರ ಸೇರಿದಂತೆ ಸರಕಾರದಲ್ಲಿ ಬರುವ ಎಲ್ಲಾ ಆರ್ಥಿಕ ಸಂಸ್ಥೆಗಳು ತಾವು
ನಿರ್ವಹಿಸಬೇಕಾಗಿರುವ ಯಾವುದೇ ಕಾಮಗಾರಿ, ಸರಕು ಖರೀದಿ ಹಾಗೂ ಸೇವೆಗಳ ಪರಭಾರೆಗೆ ಗುತ್ತಿಗೆದಾರರನ್ನು ಅವಲಂಬಿಸಿದೆ. ಈ ರೀತಿ ಯಾವುದೇ ಕಾರ್ಯಕ್ಕೆ ಟೆಂಡರ್ ಎನ್ನಲಾಗುವುದು. ಈ ಸೇವೆಯನ್ನು ಒದಗಿಸುವವರನ್ನು ಗುತ್ತಿಗೆದಾರರು ಎಂದು ಕರೆಯಬಹುದು.

ಪಾರದರ್ಶಕವಾಗಿರಲು ಕೆಟಿಪಿಪಿ ಕಾಯಿದೆ

ಈ ಪ್ರಕ್ರಿಯೆಯನ್ನು ಸ್ಪರ್ಧಾತ್ಮಕವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ರಾಜ್ಯ ಸರಕಾರ ‘”Karnataka Transparency in public procurement Act-1999’ ಎನ್ನುವ ಕಾಯಿದೆಯನ್ನು ಜಾರಿಗೊಳಿ ಸಿದ್ದು, ಇದು ಕಾಲಕಾಲಕ್ಕೆ ತಿದ್ದುಪಡಿಯಾಗಿ ಇದರ ಸುಗಮವಾದ ಅನುಷ್ಠಾನ ಕ್ಕೆಂದೇ ಅಧಿಸೂಚನೆಗಳು, ನಿಯಮ ಗಳನ್ನು ಪ್ರಕಟಿಸಲಾಗುತ್ತಿದೆ. ಯುವಕರು ಗುತ್ತಿಗೆದಾರಾಗಲು ಬಯಸಿದರೆ ಅಥವಾ ಕನಸನ್ನು ಕಂಡಿದ್ದರೆ ಈ ಕೆಟಿಪಿಪಿ ಕಾಯಿದೆಯನ್ನು ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ಇನ್ನೊಂದು ಮಾತಲ್ಲಿ ಹೇಳುವುದಾದರೆ, ಗುತ್ತಿಗೆದಾರರಿಗೆ ಈ ಕಾಯಿದೆಯೆ ‘ಧರ್ಮಗ್ರಂಥ’ ವೆಂದರೂ ತಪ್ಪಾಗುವುದಿಲ್ಲ. ಈ ಕಾನೂನು ಮತ್ತು ಅದರ ಅಧಿಸೂಚನೆಗಳ ಬಗ್ಗೆ ತಿಳಿಯಬೇಕೆಂದರೆ ಕರ್ನಾಟಕ ಸರಕಾರದ ಆರ್ಥಿಕ ಇಲಾಖೆಯ ಜಾಲತಾಣದಲ್ಲಿ ಇದರ ಪ್ರತಿಯು ಲಭ್ಯವಿದ್ದು, ಆಸಕ್ತರು ಡೌನ್‌ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.

ಗುತ್ತಿಗೆದಾರರು ಎಂದರೆ ಯಾರು?
ಸರಕಾರವು ಅದರ ದೈನಂದಿನ ನಿರ್ವಹಣೆಗೆ ಮತ್ತು ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಗುತ್ತಿಗೆ ಎಂಬ ಪ್ರಕ್ರಿಯೆ ಯನ್ನು ಅವಲಂಬಿಸಿದೆ. ಈ ಸೇವೆ ಒದಗಿಸುವವರನ್ನು ಗುತ್ತಿಗೆದಾರರು ಎಂದು ಕರೆಯಬಹುದು. ನಮಗೆಲ್ಲ ಸಾಮಾನ್ಯವಾಗಿ ತಿಳಿದಿರುವುದು, ರಸ್ತೆ ಕಾಮಗಾರಿ, ಕಟ್ಟಡ ನಿರ್ಮಾಣ ಮತ್ತು ಕಾಲುವೆ ನಿರ್ಮಾಣ ಮಾಡುವವ ರನ್ನು ‘ಕಾಂಟ್ರಾಕ್ಟರ್’ ಅಥವಾ ‘ಗುತ್ತಿಗೆದಾರ’ ಎಂದು ಕರೆಯುತ್ತಾರೆ. ಇವರೂ ಗುತ್ತಿಗೆದಾರರೇ, ಆ ಸೇವೆಗಳು ಎನ್ನುವ ಮೂರು ವಿಧಗಳಿವೆ.

ಕಾಮಗಾರಿ
ರಸ್ತೆ, ಕಟ್ಟಡ, ಸೇತುವೆ ಅಥವಾ ಕಾಲುವೆಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆಯ ಕೆಲಸಗಳನ್ನು ‘ಕಾಮಗಾರಿ’ ಎನ್ನಬಹುದು. ಇದರಲ್ಲಿ ಎರಡು ವಿಧಗಳಿವೆ, ಸಿವಿಲ್ ಮತ್ತು ವಿದ್ಯುತ್ (ಎಲೆಕ್ಟ್ರಿಕಲ್) ಕಾಮಗಾರಿ. ರಸ್ತೆ ಮತ್ತು ಕಟ್ಟಡಗಳನ್ನು ಸಿವಿಲ್ ಗುತ್ತಿಗೆದಾರರು ಹಾಗೂ ವಿದ್ಯುತ್ ಸಂಬಂಧಿತ ಕಾಮಗಾರಿಗಳನ್ನು ವಿದ್ಯುತ್ ಗುತ್ತಿಗೆದಾರರು ನಿರ್ವಹಿಸುತ್ತಾರೆ. ಈ ತರಹದ ಕಾಮಗಾರಿಗಳನ್ನು ನಿರ್ವಹಿಸಲು ಗುತ್ತಿಗೆದಾರರು ಸರಕಾರದಿಂದ
ಪರವಾನಗಿ ಪಡೆಯಬೇಕು. ಸಿವಿಲ್ ಕಾಮಗಾರಿಗೆ ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆ ಹಾಗೂ ವಿದ್ಯುತ್ ಕಾಮಗಾರಿಗೆ ವಿದ್ಯುತ್ ಪರಿವೀಕ್ಷಣಾಲಯದಿಂದ ಪರವಾನಗಿ ಪಡೆಯಬೇಕು.

ಸೇವೆಗಳು
ಸರಕಾರ ಹಣಕಾಸಿನ ಕೊರತೆಯಿಂದಾಗಿ ಕೆಲವು ಸರಕುಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಆ ಸಮಯ ದಲ್ಲಿ ನಿರ್ದಿಷ್ಠ ಅವಧಿಗೆ ಸರಕನ್ನು ಎರವಲು ಪಡೆದು ಇಂತಿಷ್ಟು ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗುತ್ತದೆ. ಈ ರೀತಿಯ ಸೇವೆಗಳನ್ನು ಒದಗಿಸುವವರನ್ನು ಸೇವಾ ಗುತ್ತಿಗೆದಾರರು ಎನ್ನಬಹುದು. ನೀವು ಈ ರೀತಿಯ ಸೇವೆ ಯನ್ನು ಒದಗಿಸಬೇಕೆಂದರೆ ಆ ಸರಕಿನ ಒಡೆತನ ನಿಮ್ಮಲ್ಲಿರಬೇಕು. ಉದಾಹರಣೆಗೆ ನಿಮ್ಮಲ್ಲಿ ಹಳದಿ ಬೋರ್ಡಿನ ಒಂದು ಕಾರಿದ್ದರೆ ವರ್ಷದ ಮಟ್ಟಿಗೆ ಯಾವುದಾದರೂ ಸರಕಾರ ಕಚೇರಿಗೆ ಅದರ ಸೇವೆಯನ್ನು ಒದಗಿಸಬಹುದು. ಇದಕ್ಕೆ ಸರಕಾರ ನಿಮಗೆ ತಿಂಗಳಿಗೆ 30-40 ಸಾವಿರ ವೇತನ ಸಹಿತ ಸೇವಾವೆಚ್ಚವನ್ನು ನೀಡುತ್ತದೆ. ಗುತ್ತಿಗೆ ಮುಗಿದ ನಂತರ ಆ ಕಾರನ್ನು ನೀವು ಸೇವೆಯಿಂದ ಹಿಂಪಡೆಯಬಹುದು. ಇದರೊಂದಿಗೆ ಸರಕಾರದ ನಿರ್ವಹಣೆಗೆ ಬೇಕಾಗುವ ಮಾನವ ಸಂಪನ್ಮೂಲವನ್ನು ಸಹ ಗುತ್ತಿಗೆ ಆಧಾರದಲ್ಲಿ ಪಡೆಯುತ್ತದೆ. ಸಾಮಾನ್ಯವಾಗಿ ಡಾಟಾ ಎಂಟ್ರಿ ಆಪರೇಟರು ಗಳು, ವಾಚ್‌ಮ್ಯಾನ್ ಮತ್ತು ‘ಡಿ’ ವೃಂದದ ನೌಕರರನ್ನು ಸಾಮಾನ್ಯವಾಗಿ ಸರಕಾರವು ಹೊರಗುತ್ತಿಗೆಯ ಮೂಲಕ ಪಡೆಯುವುದು ರೂಢಿ.

ಸರಕು
ಸರಕಾರ ತನ್ನ ಸುಗಮ ನಿರ್ವಹಣೆಗೆ ಹಲವಾರು ವಸ್ತುಗಳ ಮೇಲೆ ಅವಲಂಬಿತವಾಗಿರುತ್ತರೆ. ಗುಂಡು ಪಿನ್‌ನಿಂದ ಹಿಡಿದು ಅತ್ಯಾಧುನಿಕ ಕಂಪ್ಯೂಟರ್‌ಗಳು ಸರಕಾರಕ್ಕೆ ಅಗತ್ಯವಾಗಿರುತ್ತದೆ. ತಯಾರಕರಿಂದ ಅಥವಾ ವಿತರಕರಿಂದ ಒಂದು ನಿಗದಿತ ಬೆಲೆಗೆ ಯಾವುದಾದರು ವಸ್ತುವನ್ನು ಸರಕಾರವು ಖರೀದಿಸುವ ಪ್ರಕ್ರಿಯಗೆ ಸರಕು ಗುತ್ತಿಗೆದಾರಿಕೆ
ಅನ್ನಬಹುದು, ನೀವು ಈ ತರಹದ ಗುತ್ತಿಗೆದಾರರಾಗಬೇಕೆಂದರೆ ಸಿವಿಲ್ ಅಥವಾ ವಿದ್ಯುತ್ ಗುತ್ತಿಗೆದಾರರಿಗೆ ಬೇಕಾ ಗುವ ಸರಕಾರದ ಪರವಾನಗಿಯ ಅವಶ್ಯಕತೆ ಇಲ್ಲ, ನೀವು ಆ ವಸ್ತುವಿನ ತಯಾರಕಾರಾಗಿರಬೇಕು ಅಥವಾ ವಿತರಕ ರಾಗಿರಬೇಕು.

ಮುಂದೇನು?
ನೀವೂ ಸಹ ಗುತ್ತಿಗೆದಾರರಾಗಬೇಕೆಂಬ ಕನಸನ್ನು ಹೊಂದಿದ್ದರೆ ಈ ಮೇಲಿನ ಯಾವುದಾದರೊಂದು ಕಾರ್ಯ ಕ್ಷೇತ್ರ ವನ್ನು ಆರಿಸಿಕೊಳ್ಳಿ. ಸಿವಿಲ್ ಅಥವಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ ‘ಕಾಮಗಾರಿ’, ವಸ್ತುಗಳ ತಯಾರಕ, ವಿತರಕರಾಗಿದ್ದರೆ ಸರಕುಗಳ ಒಡೆತನವಿದ್ದರೆ ‘ಸೇವೆ’ ನಿಮಗೆ ಹೊಂದುವಂತಹ ಕಾರ್ಯಕ್ಷೇತ್ರ. ಈ ಸದರಿ ಕಾರ್ಯಕ್ಷೇತ್ರಗಳಲ್ಲಿ ಟೆಂಡರ್‌ಗಳನ್ನು ಪಡೆಯಲು ಮತ್ತು ನಿರ್ವಹಿಸಲು ಆಯಾಯ ಕ್ಷೇತ್ರಕ್ಕೆ ಸಂಬಂಧಿ ಸಿದ ವಿಧಿ ವಿಧಾನಗಳಿವೆ, ಕಾನೂನುಗಳಿವೆ ಮತ್ತು ಇತಿಮಿತಿಗಳಿವೆ. ಗುತ್ತಿಗೆದಾರರಾಗಬೇಕೆ ಅಥವಾ ಬೇಡವೆ ಎಂಬು ದನ್ನು ನಿರ್ಧರಿಸಿ; ಮನಸ್ಸಿದ್ದರೆ ಮಾರ್ಗವಿದೆ. ಮತ್ತು ಸರಿಯಾದ ಮಾರ್ಗದಲ್ಲಿ ನಡೆದರೆ ಗುರಿ ತಲುಪಲು ಸಾಧ್ಯವಿದೆ.

ನಿತ್ಯ ೩೦೦ರಿಂದ ೫೦೦ ಟೆಂಡರ್
ಕರ್ನಾಟಕ ಪ್ರಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಸರಕಾರದ ಮತ್ತು ಅದರ ಅಧೀನ ಸಂಸ್ಥೆಗಳಿಂದ ಕರೆಯಲ್ಪಡುವ ಟೆಂಡರುಗಳನ್ನು ಪ್ರಕಟಿಸಲಾಗುತ್ತದೆ. ಈ ಜಾಲತಾಣದಲ್ಲಿ ನೋಂದಣಿಯಾಗಿ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಪಡೆದರೆ ಯಾವುದಾದರೂ ಟೆಂಡರಿನಲ್ಲಿ ಭಾಗವಹಿಸಲು ಅವಕಾಶ ಲಭಿಸುತ್ತದೆ. ವರ್ಷದ ಯಾವುದೇ ದಿನದಲ್ಲಿ ನೀವು ಈ ಜಾಲತಾಣವನ್ನು ವೀಕ್ಷಿಸಿದರೆ ಅದರಲ್ಲಿ ಕನಿಷ್ಠ ಆರು ಸಾವಿರ ಟೆಂಡರುಗಳಿರುತ್ತವೆ. ದಿನಂಪ್ರತಿ ಸುಮಾರು 300-500 ಟೆಂಡರುಗಳು ಮುಕ್ತಾಯಗೊಂಡರೆ ಸರಿಸುಮಾರು ಅಷ್ಟೇ ಸಂಖ್ಯೆಯಷ್ಟು ಟೆಂಡರು
ಗಳು ಸೇರ್ಪಡೆಗೊ ಳ್ಳುತ್ತವೆ. ಈ ಸಂಖ್ಯೆಗಳ ಆಧಾರದಲ್ಲಿ ನೋಡುವುದಾದರೆ ಗುತ್ತಿಗೆದಾರಿಕೆ ಎಂಬುದು ಅವಕಾಶಗಳ ಸಾಗರ.

ಇದನ್ನೂ ಓದಿ: Rangaswamy Mookanahalli Column: ಸ್ವಾತಂತ್ರ್ಯವೇ ಜಗತ್ತಿನಲ್ಲಿ ಬೆಲೆ ಬಾಳುವ ಆಸ್ತಿ !