Sunday, 8th September 2024

ಇದು ಮಂಡೆಬಿಸಿ ಕೆಲಸ!

 ವಿಶ್ವೇಶ್ವರ ಭಟ್ 
ಒಂದು ದೇಶ ಅಥವಾ ಒಂದು ಊರನ್ನು ತಕ್ಷಣ ಅರ್ಥ ಮಾಡಿಕೊಳ್ಳಬೇಕು  ಅಂದರೆ ಅಲ್ಲಿನ ನೀರು ಕುಡಿಯಬೇಕಂತೆ ಮತ್ತು ಅಲ್ಲಿನ ಪತ್ರಿಕೆಗಳನ್ನು ಓದಬೇಕಂತೆ. ಈ ಕೆಲಸವನ್ನು ನಾನು ಯಾವುದೇ ಊರಿಗೆ ಹೋದರೂ ಮಾಡುತ್ತೇನೆ.
ಈಗ ಲಾಕ್ ಡೌನ್ ಇರುವುದರಿಂದ  ಬೇರೆ ಊರುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆದರೆ ಅಲ್ಲಿನ ಪತ್ರಿಕೆಗಳನ್ನಂತೂ ಓದುವುದು ಸಾಧ್ಯವಾಗುತ್ತಿದೆ. ನಿಮ್ಮ ಬಳಿ ‘ಪ್ರೆಸ್ ರೀಡರ್’ ಎಂಬ ಆಪ್ ಇದ್ದರೆ, ಪ್ರತಿದಿನ ಸುಮಾರು ನಾಲ್ಕು ಸಾವಿರ ಪತ್ರಿಕೆಗಳನ್ನು ಓದಬಹುದು. ಆದರೆ ನಿಮ್ಮಲ್ಲಿ ಇಂಟರ್ನೆಟ್ ಡಾಟಾ ಮತ್ತು ಸಮಯ ಇರಬೇಕಷ್ಟೆ.
ನಾನು ಪ್ರತಿದಿನ ಬೇರೆ ಬೇರೆ ದೇಶಗಳ ಕೆಲವು ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಂಡಿದ್ದೇನೆ. ನಮ್ಮಲ್ಲಿ ಸುದ್ದಿಯಲ್ಲದ ಅನೇಕ ಸಂಗತಿಗಳು ಅವರಿಗೆ ಸುದ್ದಿಯಾಗುತ್ತವೆ.
ಇಂಗ್ಲೆಂಡಿನ ರಾಣಿ ಏನೇ ಹೇಳಲಿ, ಏನೇ ಮಾಡಲಿ, ಅಲ್ಲಿನ ಪತ್ರಿಕೆಗಳಿಗೆ ಅದು ಸುದ್ದಿ. ರಾಣಿ ಈಗಲೂ ಮುಖಪುಟದ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾಳೆ. ರಾಣಿಯ ಡ್ರೆಸ್ ಸಹಜ ಆಕರ್ಷಣೆ. ಆದರೆ ಈಗ ಅವಳು ಯಾವ ಮಾಸ್ಕ್ ನಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂಬುದೇ ಆಸಕ್ತಿ.
ಇತ್ತೀಚೆಗೆ ಅಮೆರಿಕದ ಪ್ರಮುಖ ದೈನಿಕವಾದ ‘ಫಿಲಡೆಲ್ಫಿಯ ಇನ್ಕ್ವಾಯಿರರ್’ ಪತ್ರಿಕೆ ಒಂದು ಪುಟದ ಲೇಖನ ಪ್ರಕಟಿಸಿತ್ತು. ಆ ಲೇಖನದ ಶೀರ್ಷಿಕೆ – How to give yourself a buzz cut during the shutdown. ಅಂದರೆ, ಲಾಕ್ ಡೌನ್ ಕಾಲದಲ್ಲಿ ಸಲೂನ್ ಶಾಪ್ ಗಳೆಲ್ಲ ಮುಚ್ಚಿರುವುದರಿಂದ, ಜನರಿಗೆ ತೀವ್ರ ಸಮಸ್ಯೆ ಆಗಿರುವುದರಿಂದ, ಮನೆಯಲ್ಲಿಯೇ ಹೇರ್ ಕಟ್ ಮಾಡಿಕೊಳ್ಳುವುದು ಹೇಗೆ ಎಂಬುದು ಲೇಖನದ ಸಾರಾಂಶ.
ಹಾಗೆ ನೋಡಿದರೆ, ಇದು ಉಪಯುಕ್ತ ಲೇಖನ. ಯಾರಿಗೂ ಸಹ ತಮ್ಮ ತಲೆಕೂದಲನ್ನು ಕತ್ತರಿಸಿಕೊಂಡು ಅಭ್ಯಾಸ ಇರುವುದಿಲ್ಲ. ಎರಡು ತಿಂಗಳು ತಲೆಗೂದಲನ್ನು  ಕತ್ತರಿಸದೇ ಹಾಗೆ ಬಿಟ್ಟುಕೊಂಡರೆ ತೀವ್ರ ಕಿರಿಕಿರಿಯಾಗುವುದು ಸಹಜ.
ಹಾಗಂತ ಸ್ವಕ್ಷೌರ ಮಾಡಿಕೊಳ್ಳುವುದು ಸುಲಭವಲ್ಲ. ಬೇರೆಯವರ ತಲೆಗೂದಲನ್ನು ಕತ್ತರಿಸಬಹುದು. ಆದರೆ ನಮ್ಮದನ್ನು ಕತ್ತರಿಸಿಕೊಳ್ಳುವುದು ಕಷ್ಟ. ಅದರಲ್ಲೂ ಬಹಳ ಜನ ತಮ್ಮ ತಲೆಗಿಂತ (ಬುದ್ಧಿ ಅಥವಾ ಮಿದುಳು) ಹೆಚ್ಚಿನ ಮಹತ್ವ ಮತ್ತು ಗಮನವನ್ನು  ತಲೆಗೂದಲಿಗೆ ಕೊಡುತ್ತಾರೆ.
ಅಂಥವರು ತಮ್ಮ ಬುದ್ಧಿಯನ್ನು ಬಾಚಿಕೊಳ್ಳುವುದಿಲ್ಲ, ಆದರೆ ತಲೆಗೂದಲನ್ನು ನಿತ್ಯ ಐದಾರು ಬಾರಿ ಬಾಚಿಕೊಳ್ಳುತ್ತಾರೆ. ಅಂಥವರು ತಾವೇ ಹೇಗೆ ಕ್ಷೌರ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಡುವ ಲೇಖನವದು.
ಈ ಲೇಖನದಲ್ಲಿ ಸರಿಯಾದ ಸಾಮಗ್ರಿ, ಉಪಕರಣಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು, ಮನೆಯ ಯಾವ ಜಾಗದಲ್ಲಿ ತಲೆಗೂದಲನ್ನು ಕತ್ತರಿಸಿಕೊಳ್ಳಬೇಕು, ಕತ್ತರಿ ಆಡಿಸುವುದಕ್ಕಿಂತ ಮುನ್ನ ಎಷ್ಟುದ್ದ ಕತ್ತರಿಸಬೇಕು ಎಂಬುದನ್ನು ನಿರ್ಧರಿಸುವುದು ಹೇಗೆ, ಮುಂದೆ ಮತ್ತು ಹಿಂದೆ ಒಂದೇ ಅಳತೆಯಲ್ಲಿ ಕತ್ತರಿಸುವುದು ಹೇಗೆ, ಎರಡೂ ಬದಿಗಳಲ್ಲಿ ಯಾವ ಅಳತೆ ಕಾಯ್ದುಕೊಳ್ಳಬೇಕು, ಪೂರ್ತಿ ಕತ್ತರಿಸಿದ ನಂತರ ಸುತ್ತಲೂ ಬ್ಲೇಡ್ ನಲ್ಲಿ ಕೂದಲು ಕತ್ತರಿಸುವುದು ಅಥವಾ ಟ್ರಿಮ್ ಮಾಡುವುದು ಹೇಗೆ, ಗಾಯವಾದರೆ ಏನು ಮಾಡಬೇಕು, ಕೂದಲನ್ನು ಸ್ವಚ್ಛ ಮಾಡುವುದು ಹೇಗೆ, ಕೂದಲಿಗೆ ಹೇಗೆ ಬಣ್ಣ ಹಚ್ಚಿಕೊಳ್ಳಬೇಕು.. ಈ ಎಲ್ಲಾ ಸಂಗತಿಗಳನ್ನೂ ಹಂತ ಹಂತವಾಗಿ ವಿವರಿಸಲಾಗಿದೆ.
ಕೊನೆಯಲ್ಲಿ ಒಂದು ವಿಶೇಷ ಸೂಚನೆ ಇದೆ. ಅದೇನೆಂದರೆ, ‘ಈ ಲೇಖನ ಓದಿ, ನೀವೇ ನಿಮ್ಮ ತಲೆಗೂದಲನ್ನು ಕಟ್ ಮಾಡಿಕೊಂಡು ಅಧ್ವಾನವಾದರೆ, ಬೇಸರಿಸಿಕೊಳ್ಳಬೇಡಿ, ಹತ್ತು ದಿನಗಳ ನಂತರ ಕೂದಲು ಬೆಳೆದು ಎಲ್ಲಾ ಸರಿ ಹೋಗುತ್ತದೆ.’
ಒಂದು ವೇಳೆ ಈ ಲೇಖನವನ್ನು ನಾನೇನಾದರೂ ಪ್ರಕಟಿಸಿದರೆ, ‘ಭಟ್ರಿಗೆ ತಲೆಕೂದಲು ಉದುರುವ ದಿನಗಳಾದರೂ, ಮಂಡೆ  ಬೆಳೆದಿಲ್ಲವಲ್ಲ’ ಎಂದು ಕೆಲವರಾದರೂ ಅಂದುಕೊಳ್ಳದೇ ಹೋಗುತ್ತಿರಲಿಲ್ಲ !
(ಸಂಪಾದಕರ ಸದ್ಯಶೋಧನೆ ಅಂಕಣದಿಂದ)

Leave a Reply

Your email address will not be published. Required fields are marked *

error: Content is protected !!