Friday, 20th September 2024

ಒಂದು ಘೋರ ಅಚಾತುರ್ಯವನ್ನು ಪ್ರತಿ ವರ್ಷ ನಗುತ್ತಾ ಆಚರಿಸುತ್ತಾರೆ ಹೇಗೆ ಗೊತ್ತಾ ?

ವಿಶ್ವೇಶ್ವರ ಭಟ್

ಅನೇಕರಿಗೆ ಗೊತ್ತಿಲ್ಲದಿರಬಹುದು, ಪ್ರತಿ ವರ್ಷ ಆಗಸ್ಟ್ 11ನ್ನು ಅಮೆರಿಕ ಅಧ್ಯಕ್ಷರ ಹಾಸ್ಯ ದಿನ (Presidential Joke Day) ಎಂದು ಆಚರಿಸುತ್ತಾರೆ. ಆ ದಿನ ಅಮೆರಿಕ ಅಧ್ಯಕ್ಷರ ಬಗ್ಗೆ ಜೋಕ್ ಮಾಡಬಹುದು ಎಂದಲ್ಲ, ಆದರೆ ಅದಕ್ಕೆ ವ್ಯತಿರಿಕ್ತವಾಗಿ, ಅಮೆರಿಕ ಅಧ್ಯಕ್ಷರೇ ಅಂದು ಕೆಲವು ಜೋಕುಗಳನ್ನು ಹೇಳುತ್ತಾರೆ.

ಈ ಸಂಪ್ರದಾಯ ಆರಂಭವಾಗಿದ್ದಕ್ಕೆ ಕಾರಣವಿದೆ. 1984 ರ ಆಗಸ್ಟ್ 11 ರಂದು, ತಮ್ಮ ಶನಿವಾರದ ರೇಡಿಯೋ ಭಾಷಣಕ್ಕೆ ಮುನ್ನ, ಅಧ್ಯಕ್ಷ ರೊನಾಲ್ಡ್ ರೇಗನ್ ಮೈಕ್ರೊಫೋನ್ ಪರೀಕ್ಷೆ ಮಾಡುತ್ತಿದ್ದರು.

ಆದರೆ ತಮ್ಮ ಮಾತು ಲೈವ್ ಪ್ರಸಾರವಾಗುತ್ತಿದೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಅವರು ಮೈಕ್ ಟೆಸ್ಟ್ ಮಾಡುತ್ತಾ, ‘ನನ್ನ ಪ್ರೀತಿಯ ಅಮೆರಿಕವಾಸಿಗಳೇ, ನಾನು ರಷ್ಯಾ ವಿರುದ್ಧ ದಾಳಿ ನಡೆಸಲು ನಿರ್ಧರಿಸಿದ್ದೇನೆ. ಇನ್ನು ಕೆಲ ಹೊತ್ತಿನಲ್ಲಿ ದಾಳಿ ಆರಂಭವಾಗಲಿದೆ’ ಎಂದು ಹೇಳಿದರು.

ಆದರೆ ಅವರ ಮಾತು ಹೊರ ಜಗತ್ತಿಗೆ ಲೈವ್ ಪ್ರಸಾರ ಆಗಿ ಬಹಳ ಮುಜುಗರವಾಯಿತು. ಅದನ್ನು ಮರೆಮಾಚಲು ‘ಇದೊಂದು ಜೋಕ್’ ಎಂದು ಹೇಳಲಾಯಿತು. ಅಮೆರಿಕ ಅಧ್ಯಕ್ಷರ ಕಾರ್ಯಾಲಯ ಸ್ಪಷ್ಟನೆ ನೀಡಿತು. ಅಷ್ಟೇ ಅಲ್ಲ, ಇನ್ನು ಪ್ರತಿ ವರ್ಷ ಆ ದಿನವನ್ನು ‘ಅಧ್ಯಕ್ಷರ ಹಾಸ್ಯ ದಿನ’ ವೆಂದು ಆಚರಿಸಲಾಗುವುದು ಎಂದು ಘೋಷಿಸಲಾಯಿತು.

ಈ ಘಟನೆಯೇ Presidential Joke Day ಆಚರಣೆಗೆ ಕಾರಣವಾಯಿತು. ಆ ದಿನ ಅಧ್ಯಕ್ಷರು ಜೋಕ್ ಹೇಳಬೇಕೆಂದು ನಿರೀಕ್ಷಿಸಲಾಗುತ್ತದೆ. ಆದರೆ ಎಲ್ಲರೂ ಹೇಳುವುದಿಲ್ಲ. ಅವರು ಹೇಳುತ್ತಾರೋ, ಇಲ್ಲವೋ , ಜನರಂತೂ ಅಮೆರಿಕ ಅಧ್ಯಕ್ಷರ ಬಗ್ಗೆ ಹಾಸ್ಯ ಚಟಾಕಿಗಳನ್ನು ಸಿಡಿಸಿ ಖುಷಿಪಡುತ್ತಾರೆ.

ಅದರ ಮುಂದಿನ ವರ್ಷ ‘ಅಧ್ಯಕ್ಷರ ಹಾಸ್ಯ ದಿನ’ದಂದು ರೊನಾಲ್ಡ್ ರೇಗನ್ ಒಂದು ಹಾಸ್ಯ ಚಟಾಕಿ ಹಾರಿಸಿದರು – Recession is when your neighbour loses his job. Depression is when you lose yours. And recovery is when Jimmy Carter loses his.

ಒಂದು ವೇಳೆ, ಈ ಘಟನೆ ಭಾರತದಲ್ಲಿ ನಡೆದಿದ್ದರೆ, ಪ್ರತಿಪಕ್ಷಗಳು ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತಿದ್ದರು. ಈ ಪ್ರಮಾದಕ್ಕೆ ತಲೆದಂಡವಾಗಿ ಪ್ರಸಾರ ಖಾತೆ ಸಚಿವರು ರಾಜೀನಾಮೆ ನೀಡಬೇಕೆಂಬ ಬೇಡಿಕೆ ಇಡುತ್ತಿದ್ದರು. ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು, ಆಕಾಶವಾಣಿಯ ಹಿರಿಯ ಅಧಿಕಾರಿಗಳನ್ನು ವಜಾ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಸಂಗ ಒಂದು ವಾರ ತೀವ್ರ ವಾದ-ವಿವಾದಕ್ಕೆ ಕಾರಣವಾಗುತ್ತಿತ್ತು.

ಪ್ರಧಾನಿಯವರು ಇಷ್ಟು ಬೇಜವಾಬ್ದಾರಿಯಿಂದ ವರ್ತಿಸಬಾರದು ಎಂದು ಎಳಸು, ಅವಿವೇಕಿ ಪತ್ರಕರ್ತ ಸ್ವಾಮಿಗೌಡನಿಂದ ಎನ್.ರಾಮ್ ವರೆಗೆ ಎಲ್ಲರೂ ಪ್ರಧಾನಿ ಅವರಿಗೆ ಬುದ್ಧಿಮಾತು ಹೇಳುತ್ತಿದ್ದರು. ಪ್ರಧಾನಿಯವರನ್ನು ಸಮರ್ಥಿಸಿಕೊಳ್ಳಲು ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಎರಡು ದಿನ ಹರಸಾಹಸಪಡಬೇಕಾಗುತ್ತಿತ್ತು.

ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಮೂರ್ನಾಲ್ಕು ದಿನ ರಾಡಿ. ಆದರೆ ಅಮೆರಿಕದಲ್ಲಿ ಇದನ್ನು ಅಧ್ಯಕ್ಷರ ಜೋಕ್ ದಿನ ಎಂದು ಆಚರಿಸಲು ನಿರ್ಧರಿಸಲಾಯಿತು. ಅಚಾತುರ್ಯದಿಂದ ಆದ ಒಂದು ಪ್ರಮಾದ, ಈ ರೀತಿ ಪರ್ಯವಸಾನ ಕಂಡಿತು.

ಅಮೆರಿಕದ ಅಧ್ಯಕ್ಷರ ಬಗ್ಗೆ ಹಾಸ್ಯ ಪ್ರಸಂಗ

ಅಮೆರಿಕ ಅಧ್ಯಕ್ಷರ ಬಗ್ಗೆ ಇರುವಷ್ಟು ಹಾಸ್ಯ ಪ್ರಸಂಗಗಳು ಮತ್ಯಾರ ಬಗೆಗೂ ಇರಲಿಕ್ಕಿಲ್ಲ. ಯಾರೇ ಅಧ್ಯಕ್ಷರಾಗಿ ಬರಲಿ, ತಕ್ಷಣ ಅವರ ಬಗ್ಗೆ ಒಂದಷ್ಟು ಜೋಕುಗಳು ಹುಟ್ಟಿಕೊಳ್ಳುತ್ತವೆ. ಕೆಲವು ಅಂಥ ಪ್ರಸಂಗಗಳು..

* ಒಬ್ಬ : ಒಂದು ಲೈಟ್ ಬಲ್ಬನ್ನು ಬದಲಿಸಲು ಅಮೆರಿಕ ಅಧ್ಯಕ್ಷರ ಎಷ್ಟು ಮಂದಿ ಸಹಾಯಕರು ಬೇಕು ?
ಮತ್ತೊಬ್ಬ : ಯಾರೂ ಬೇಕಿಲ್ಲ. ಕಾರಣ ಅವರೆಲ್ಲ ಅಧ್ಯಕ್ಷರನ್ನು ಕತ್ತಲೆಯಲ್ಲಿಡಲು ಪ್ರಯತ್ನಿಸುತ್ತಾರೆ!

* ಒಬ್ಬ : ಯಾರು ಬೇಕಾದರೂ ಅಮೆರಿಕ ಅಧ್ಯಕ್ಷರಾಗಬಹುದು. ಆದರೆ ಮಿಸ್ ಅಮೆರಿಕ ಆಗುವುದು ಬಹಳ ಕಷ್ಟ.

ಮತ್ತೊಬ್ಬ : ಹೇಗೆ ಹೇಳ್ತೀರಾ ?

ಒಬ್ಬ : ನೋಡಿ, ಇಬ್ಬರ ಪೈಕಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆರಿಸುತ್ತಾರೆ. ಆದರೆ ಮಿಸ್ ಅಮೆರಿಕ ಹಾಗಲ್ಲ, ಐವತ್ತು ಯುವತಿಯರ ಪೈಕಿ ಒಬ್ಬಳನ್ನು ಆರಿಸುತ್ತಾರೆ.

* ಅಮೆರಿಕದ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭಾರತಕ್ಕೆ ಬಂದಿದ್ದರು. ಆಗ ಮೊರಾರ್ಜಿ ದೇಸಾಯಿ ಪ್ರಧಾನಿ. ಅವರಿಗೆ ಎಂಬತ್ತೆರಡು ವರ್ಷ ವಯಸ್ಸಾಗಿತ್ತು. ಕಾರ್ಟರ್ ಅವರ ಗೌರವಾರ್ಥ ಏರ್ಪಡಿಸಿದ್ದ ಭೋಜನ ಕೂಟದಲ್ಲಿ, ಮೊರಾರ್ಜಿ ಕೊನೆಯಲ್ಲಿ, ‘Lets make love and not war’ ಎಂದು ಹೇಳಿದರಂತೆ.

ಈ ಮಾತುಗಳನ್ನು ಕೇಳಿದ ಕಾರ್ಟರ್ ತಮ್ಮ ಪಕ್ಕದಲ್ಲಿ ಕುಳಿತಿದ್ದ ಸಹಾಯಕನಿಗೆ ಹೇಳಿದರಂತೆ – ‘ಈ ಮನುಷ್ಯನನ್ನು (ಮೊರಾರ್ಜಿ) ನೋಡಿದರೆ, ಅವೆರಡನ್ನೂ ಮಾಡುವ ಲಕ್ಷಣಗಳಿದ್ದಂತೆ ಕಾಣುವುದಿಲ್ಲ.’

* ಒಮ್ಮೆ ಬಿಲ್ ಕ್ಲಿಂಟನ್ ಅವರನ್ನು ಯಾರೋ ಕೇಳಿದರಂತೆ – ‘ನಿಮ್ಮ ದೃಷ್ಟಿಯಲ್ಲಿ ಅಮೆರಿಕದ ಅಧ್ಯಕ್ಷಗಿರಿ ಅಂದ್ರೆ ಏನು ?’

ಅದಕ್ಕೆ ಕ್ಲಿಂಟನ್ ಹೇಳಿದರಂತೆ – ‘ಅಮೆರಿಕ ಅಧ್ಯಕ್ಷ ಅಂದ್ರೆ ಸ್ಮಶಾನದ ಮುಖ್ಯಸ್ಥನಿದ್ದಂತೆ. ಎಲ್ಲರೂ ಅವನ ಕಾಲ ಕೆಳಗೆ ಇರುತ್ತಾರೆ. ಆದರೆ ಒಬ್ಬರೂ ಅವನ ಮಾತುಗಳನ್ನು ಕೇಳುವುದಿಲ್ಲ.