ಜಯವೀರ ವಿಕ್ರಮ ಸಂಪತ್ ಗೌಡ
ಈರಣ್ಣ ಕಡಾಡಿ ಮತ್ತು ಅಶೋಕ ಗಸ್ತಿ !
ಬಿಜೆಪಿ ಹೈಕಮಾಂಡ್ ರಾಜ್ಯಸಭೆಯ ಎರಡು ಸ್ಥಾನಗಳಿಗೆ ಈ ಎರಡು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದಾಗ, ಎಲ್ಲರಿಗೂ ಆಶ್ಚರ್ಯ, ಒಂಥರಾ ಶಾಕ್ !
ಕಾರಣ ಇವರಿಬ್ಬರ ಹೆಸರುಗಳನ್ನು ಕೇಳಿದವರು ತೀರಾ ಕಡಿಮೆ. ಬಿಜೆಪಿ ರಾಜ್ಯ ಪದಾಧಿಕಾರಿಗಳ ಪೈಕಿ ಒಂದಿಬ್ಬರು ‘ಇವರು ಯಾರ್ರೀ ?’ ಎಂದು ಉದ್ಗಾರ ತೆಗೆದರಂತೆ . ಅವರೂ ಈ ಎರಡೂ ಹೆಸರುಗಳನ್ನು ಕೇಳಿರಲಿಲ್ಲ. ಮೊನ್ನೆ ಕನ್ನಡ ಟಿವಿ ಚಾನೆಲ್ಲುಗಳು ಬ್ರೇಕಿಂಗ್ ನ್ಯೂಸ್ ನಲ್ಲಿ ಈ ಹೆಸರುಗಳನ್ನು ಬಿತ್ತರಿಸಿದವು. ಆದರೆ ಈ ಇಬ್ಬರು ಅಭ್ಯರ್ಥಿಗಳ ಮುಖಗಳನ್ನು ತೋರಿಸೋಣ ಅಂದ್ರೆ ಅವರಿಬ್ಬರನ್ನು ಯಾರೂ ನೋಡಿರಲಿಲ್ಲ. ತಕ್ಷಣ ಬಿಜೆಪಿ ನಾಯಕರಿಗೆ ಫೋನ್ ಮಾಡಿದರೆ, ಅವರೂ ಇದೇ ಥರಾ ತರಗಾ ಬರಗಾ. ಎಲ್ಲರ ಮೊದಲ ಪ್ರತಿಕ್ರಿಯೆ – ‘ಅವರು ಯಾರು ಅಂತ ನಮಗೆ ಗೊತ್ತಿಲ್ಲ. ಸರಿಯಾಗಿ ಚೆಕ್ ಮಾಡ್ರಿ, ಅವರು ಇರಲಿಕ್ಕಿಲ್ಲ. ಅವರಿಗೆಲ್ಲ ರಾಜ್ಯಸಭೆ ಟಿಕೆಟ್ ಕೊಡುವ ಛಾನ್ಸೇ ಇಲ್ಲ…. ‘ ಇಪ್ಪತ್ತು ನಿಮಿಷಗಳಲ್ಲಿ ಅವರೆಲ್ಲರ ಸಂದೇಹ ನಿವಾರಣೆಯಾಗಿತ್ತು. ಆದರೆ ಅವರಾರೂ ಆ ಆಘಾತದಿಂದ ಮಾತ್ರ ಚೇತರಿಸಿಕೊಂಡಿರಲಿಲ್ಲ.
ಇತ್ತ ಯಡಿಯೂರಪ್ಪ ಅವರ ಮನೆಯಲ್ಲೂ ಹೆಚ್ಚು-ಕಮ್ಮಿ ಇದೇ ವಾತಾವರಣ. ಅವರಿಗೆ ಬೆಳಗ್ಗೆಯೇ ಪಕ್ಷದ ಹೈಕಮಾಂಡ್ ಈರಣ್ಣ ಕಡಾಡಿ ಮತ್ತು ಅಶೋಕ ಗಸ್ತಿ ಅವರ ಹೆಸರುಗಳನ್ನು ಅಖೈರು ಮಾಡಿರುವುದನ್ನು ತಿಳಿಸಿದಾಗ ಅವರಿಗೂ ಆಘಾತ. ತಕ್ಷಣ ಕಡಾಡಿ ಮತ್ತು ಗಸ್ತಿ ಅವರ ಹೆಸರುಗಳು ಮುಖ್ಯಮಂತ್ರಿಗಳ ಕಣ್ಣ ಮುಂದೆ ಬರಲಿಲ್ಲ. ‘ಅವರು ಯಾರು?’ ಎಂಬುದು ಅವರ ಮೊದಲ ಪ್ರತಿಕ್ರಿಯೆಯಾಗಿತ್ತು. ಆ ಹೆಸರುಗಳನ್ನು ಕೇಳುತ್ತಿದ್ದಂತೆ ಯಡಿಯೂರಪ್ಪ ಅವರ ಮುಖ ಪೂರ್ತಿ ಬಿಳುಚಿಕೊಂಡಿತು. ಇನ್ನು ಕಡಾಡಿ ಮತ್ತು ಗಸ್ತಿ ಕನಸು ಮನಸಿನಲ್ಲಿಯೂ ರಾಜ್ಯಸಭೆಗೆ ಹೋಗುವ ಆಸೆ ಇಟ್ಟುಕೊಂಡವರಲ್ಲ. ಇಬ್ಬರ ಪೈಕಿ ಗಸ್ತಿ ಅವರು, ಪಕ್ಷದ ನಾಯಕರ ಮುಂದೆ ಸಾಧ್ಯವಾದರೆ ಎಮ್ಮೆಲ್ಸಿ ಮಾಡಿ ಎಂದು ಹೇಳಿದ್ದರಂತೆ. ಯಾವಾಗ ಇವರಿಬ್ಬರ ಹೆಸರುಗಳು ಪ್ರಕಟವಾದವೋ, ಇಬ್ಬರೂ ಅದನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಯಾರಾದರೂ ಚೇಷ್ಟೆ ಮಾಡುತ್ತಿದ್ದಿರಬಹುದಾ ಎಂದು ಅಂದುಕೊಂಡರು. ಅವರು ಎಂದೂ ತಮಗೆ ಇಂಥ ಬಂಪರ್ ಲಾಟರಿ ಹೊಡೆಯಬಹುದು ಎಂದು ಭಾವಿಸಿರಲಿಲ್ಲ.
ಬಿಜೆಪಿಯ ಕೋರ್ ಕಮಿಟಿ ಪ್ರಭಾಕರ ಕೋರೆ, ರಮೇಶ ಕತ್ತಿ ಮತ್ತು ಪ್ರಕಾಶ ಶೆಟ್ಟಿ ಅವರ ಹೆಸರುಗಳನ್ನು ಕಳಿಸಿತ್ತು. ಈ ಮೂವರೂ ಯಡಿಯೂರಪ್ಪ ಅವರ ಆಯ್ಕೆಗಳೇ ಆಗಿದ್ದವು. ತಾವು ಕಳಿಸಿದ ಪಟ್ಟಿಯಲ್ಲಿದ್ದ ಮೂರೂ ಹೆಸರುಗಳನ್ನು ಹೈಕಮಾಂಡ್ ಪುರಸ್ಕರಿಸಬಹುದು ಎಂಬ ವಿಶ್ವಾಸ ಯಡಿಯೂರಪ್ಪ ಅವರಿಗಿತ್ತು. ಆದರೆ ಬಿಜೆಪಿ ಹೈಕಮಾಂಡ್ ಈ ಮೂರೂ ಹೆಸರುಗಳನ್ನು ಕಸದಬುಟ್ಟಿಗೆ ಹಾಕಿ, ಪಕ್ಷದ ಕೆಳಹಂತದ ಕಾರ್ಯಕರ್ತರಾದ ಕಡಾಡಿ ಮತ್ತು ಗಸ್ತಿ ಹೆಸರುಗಳನ್ನು ಪ್ರಕಟಿಸಿತು. ಎಂದು ಎಂಥವರಿಗಾದರೂ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮುಖಭಂಗ ಎಂದು ಅನಿಸದೇ ಇರದು. ಅದು ಹೌದೂ ಹೌದು.
ಯಡಿಯೂರಪ್ಪ ಕಳಿಸಿದ ಅರ್ಥಾತ್ ಕೋರ್ ಕಮಿಟಿ ಕಳಿಸಿದ ಪಟ್ಟಿಯನ್ನು ಹೈಕಮಾಂಡ್ ಸುರುಳಿ ಸುತ್ತಿ ಬಿಸಾಡಲು ಕಾರಣವಿತ್ತು. ಕೋರೆ ಅವರಿಗೆ ಎಪ್ಪತ್ತಮೂರು ವರ್ಷಗಳಾಗಿತ್ತು, ಈಗಾಗಲೇ ರಾಜ್ಯಸಭೆಯಲ್ಲಿ ಎರಡು ಅವಧಿಯನ್ನು ಮುಗಿಸಿದ್ದರು. ಅವರು ಅಲ್ಲಿ ಕಡಿದು ಕಟ್ಟೆ ಹಾಕಿದ್ದು ಅಷ್ಟಕ್ಕಷ್ಟೇ. ರಮೇಶ ಕಕತ್ತಿಗೆ ಕೊಡದಿರಲು ಸ್ಪಷ್ಟ ಕಾರಣಗಳಿದ್ದವು. ಕತ್ತಿ ಸಹೋದರರ ಹಾರಾಟ ಜಾಸ್ತಿಯಾಗಿತ್ತು. ಉಮೇಶ ಕತ್ತಿ ತಮ್ಮನ್ನು ಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕೆ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಮಂತ್ರಿ ಮಾಡದ ತಪ್ಪಿಗೆ ಸಹೋದರನಿಗೆ ರಾಜ್ಯಸಭೆ ಟಿಕೆಟ್ ನೀಡಿ ಎಂಬುದು ಅವರ ವಾದವಾಗಿತ್ತು. ಹೈಕಮಾಂಡಿಗೆ ಸವಾಲು ಹಾಕುವ ರೀತಿಯಲ್ಲಿ ಅವರು ನಡೆದುಕೊಂಡರು. ಅಲ್ಲದೆ ಇವರಿಬ್ಬರೂ ಒಂದೇ ಜಿಲ್ಲೆಗೆ ಮತ್ತು ಕೋಮಿಗೆ ಸೇರಿದವರಾಗಿದ್ದರು. ಹೀಗಾಗಿ ಕೋರೆ ಮತ್ತು ಕತ್ತಿ ಗೆ ಟಿಕೆಟ್ ಕೊಡದಿರಲು ಹೈಕಮಾಂಡ್ ನಿರ್ಧರಿಸಿತು.
ಇನ್ನು ಹೋಟೆಲ್ ಉದ್ಯಮಿ ಪ್ರಕಾಶ ಶೆಟ್ಟಿ. ಇವರ ಕೈಯಲ್ಲಿರುವ ಹಣವೇ ಮುಖ್ಯ ಆಕರ್ಷಣೆ. ಅದಕ್ಕಿಂತ ಹೆಚ್ಚಾಗಿ ಅವರನ್ನು ಮೆಚ್ಚಲು ಬೇರೆ ಕಾರಣಗಳೇನೂ ಇಲ್ಲ. ಶೆಟ್ಟಿ ಅವರಿಗೆ ಟಿಕೆಟ್ ನೀಡಿದರೆ, ಹಣಕ್ಕೆ ವ್ಯಾಪಾರ ಮಾಡಿಕೊಂಡರು ಎಂಬ ಆಪಾದನೆ ಬರುವುದೆಂದು ಅವರಿಗೆ ಟಿಕೆಟ್ ನಿರಾಕರಿಸಲಾಯಿತು. ಈ ಮೂವರ ಬದಲು, ಎರಡೇ ಸ್ಥಾನಗಳನ್ನು ಇಟ್ಟುಕೊಂಡು, ಹೆಚ್ಚುವರಿ ಮತಗಳ ಮೂಲಕ ದೇವೇಗೌಡರು ಆರಿಸಿ ಬರಲು ಸಹಕರಿಸಿದರೆ, ಒಕ್ಕಲಿಗರ ಸಹಾನುಭೂತಿ ಗಳಿಸಬಹುದು ಎಂದು ಬಿಜೆಪಿ ಹೈಕಮಾಂಡ್ ಯೋಚಿಸಿತು.
ಹಾಗಾದರೆ ಆ ಎರಡು ಸ್ಥಾನಗಳನ್ನು ಯಾರಿಗೆ ಕೊಡುವುದು ? ಪಕ್ಷದ ಕಾರ್ಯಕರ್ತರಿಗೆ ಕೊಟ್ಟರೆ ಹೇಗೆ ? ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರಿಗೆ ಕೊಟ್ಟರೆ ಒಂದು ಒಳ್ಳೆಯ ಸಂದೇಶ ನೀಡಿದಂತಾಗುವುದಿಲ್ಲವೇ ? ಈ ಮೂಲಕ ಕಾರ್ಯಕರ್ತರ ವಿಶ್ವಾಸಕ್ಕೆ ಪಾತ್ರವಾಗಬಹುದಲ್ಲವೇ ಮತ್ತು ಯಡಿಯೂರಪ್ಪನವರಿಗೆ ಕಿವಿ ಹಿಂಡಿದಂತಾಗುವುದಿಲ್ಲವೇ ? ಹೈಕಮಾಂಡ್ ತಡ ಮಾಡಲಿಲ್ಲ. ಕಡಾಡಿ ಮತ್ತು ಗಸ್ತಿಗೆ ಜೈ ಎಂದಿತು. ಒಂದೇ ಕಲ್ಲಿಗೆ ಅನೇಕ ಹಕ್ಕಿಗಳು ಬಿದ್ದವು.
ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರನ್ನು ರಾಜ್ಯಸಭೆಗೆ ಕಳಿಸಬೇಕು ಎಂಬ ಹೈಕಮಾಂಡ್ ನಿರ್ಧಾರ ಸೂಪರ್. ಇದರಲ್ಲಿ ಅನುಮಾನವೇ ಇಲ್ಲ. ಘಟಾನುಘಟಿಗಳಾದ ಕೋರೆ, ಕತ್ತಿ ಮತ್ತು ಶೆಟ್ಟಿಯನ್ನು ಡಂಪ್ ಮಾಡಿ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರಿಗೆ ಮಣೆ ಹಾಕಬೇಕೆನ್ನುವ ಹೈಕಮಾಂಡ್ ಉದ್ದೇಶ ಮೆಚ್ಚುವಂಥದ್ದೇ. ಈ ದಿನಗಳಲ್ಲಿ ಇಂಥ ಯೋಚನೆ ಅಪರೂಪವೂ ಹೌದು. ಕಾರಣ ರಾಜ್ಯಸಭೆ ಟಿಕೆಟನ್ನು ಬಿಜೆಪಿ ಸೇರಿದಂತೆ, ಎಲ್ಲಾ ಪಕ್ಷಗಳೂ ಮಾರಾಟ ಮಾಡುವುದನ್ನು ಚಾಳಿ ಮಾಡಿಕೊಂಡಿವೆ. ಹಾಗಿರುವಾಗ ಪಕ್ಷ ಸಂಘಟನೆಯಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡವರಿಗೆ ರಾಜ್ಯಸಭೆ ಸದಸ್ಯತ್ವದ ಇನಾಮು ನೀಡುವುದು ಈ ಕಾಲದಲ್ಲಿ ಹೊಸ ಸಂಪ್ರದಾಯವೇ.
ಆದರೆ ಉದ್ದೇಶ ಒಳ್ಳೆಯದಿದ್ದರೆ ಮಾತ್ರ ಸಾಲದು, ಆಯ್ಕೆಯೂ ಒಳ್ಳೆಯದಾಗಿರಬೇಕಲ್ಲವೇ ?
ಯಾಕೆ ಎಂದು ಹೇಳುತ್ತೇನೆ. ನನಗೆ ಈರಣ್ಣ ಕಡಾಡಿ ಮತ್ತು ಅಶೋಕ ಗಸ್ತಿ ಅವರ ಬಗ್ಗೆ ತಕರಾರಿಲ್ಲ. ಎಲ್ಲರಂತೆ ನಾನೂ ಅವರನ್ನು ನೋಡಿಲ್ಲ, ಅವರ ಹೆಸರುಗಳನ್ನು ಕೇಳಿಯೂ ಇಲ್ಲ. ಈ ಹೆಸರಿನ ಎರಡು ಜೀವಿಗಳು ಈ ಮಾತೃಭೂಮಿಯ ಮೇಲೆ ಜೀವಿಸುತ್ತಿರಬಹುದು ಎಂದು ಗೊತ್ತಿರಲಿಲ್ಲ. ಪಾಪ, ಅಷ್ಟಕ್ಕೂ ಅವರೆಂದೂ ತಮ್ಮನ್ನು ರಾಜ್ಯಸಭೆಗೆ ಕಳಿಸಿ ಎಂದು ಯಾರನ್ನೂ ಕೇಳಿಕೊಂಡವರಲ್ಲ. ಆದರೆ ಅವರ ಹೆಸರನ್ನು ಆರಿಸುವವರಿಗೆ ತಾವು ಯಾರನ್ನು ಮತ್ತು ಎಲ್ಲಿಗೆ ಕಳಿಸುತ್ತಿದ್ದೇವೆ ಎಂಬ ಜವಾಬ್ದಾರಿ, ವಿವೇಕ ಇರಬೇಕಿತ್ತು.
ಕಾರಣ ಮೂಲತಃ ರಾಜ್ಯಸಭೆ ಎಂಬುದು ಹಿರಿಯರ ಮನೆ. ಲೋಕಸಭೆಗಿಂತ ಅನುಭವ ಮತ್ತು ಜ್ಞಾನದಲ್ಲಿ ಒಂದು ಕೈ ಮೇಲೆ. ಅದೊಂದು ಹಿರಿಯರ, ಅನುಭವಿಗಳ, ಜ್ಞಾನಿಗಳ, ಬುದ್ಧಿವಂತರ, ಪರಿಣತರ, ವಿದ್ವಾಂಸರ, ವಿಷಯ ಪ್ರಕಾಂಡರನ್ನೊಳಗೊಂಡ ಸಂಸತ್ತಿನ ಮನೆ. ಅನಕ್ಷರಸ್ಥರು , ಕ್ರಿಮಿನಲ್ ಹಿನ್ನೆಲೆಯುಳ್ಳವರೆಲ್ಲ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಅವರನ್ನು ಮತದಾರರು ಕಳಿಸಿಕೊಟ್ಟ ಮೇಲೆ ಮುಗಿಯಿತು, ಪ್ರಶ್ನಿಸುವಂತಿಲ್ಲ. ಆದರೆ ರಾಜ್ಯಸಭೆ ಹಾಗಲ್ಲ. ಅದು ಜ್ಞಾನಿಗಳ ಸದನ. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯಸಭೆಯ ಘನತೆಯೂ ತಗ್ಗಿರುವುದು ಬೇರೆ ಮಾತು. ಆದರೆ ಇಂದಿಗೂ ರಾಜ್ಯಸಭೆ ಅಂದರೆ ಅದು ಹಿರಿಯರ ಮನೆ ಎಂಬ ಇಮೇಜನ್ನು , ಆದರ್ಶವನ್ನು ಹಾಗೆ ಕಾಪಾಡಿಕೊಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ನೋಡಿದರೆ, ಕಡಾಡಿ ಮತ್ತು ಗಸ್ತಿ ಅವರು ಯಾವ ಕೋನದಿಂದ ನೋಡಿದರೂ ಫಿಟ್ ಆಗುವುದಿಲ್ಲ. ಪಕ್ಷದ ಕಾರ್ಯಕರ್ತರು, ಪಕ್ಷ ಸಂಘಟನೆಯಲ್ಲಿ ತೊಡಗಿದವರು ಎಂಬುದಷ್ಟೇ ಮಾನದಂಡವಾಗುವುದಿಲ್ಲ. ಮಾನದಂಡ ಆಗಬಾರದು. ಪಕ್ಷದ ಸಂಘಟನೆಯಲ್ಲಿ ತೊಡಗಿರುವ ಕಾರ್ಯಕರ್ತರನ್ನು ಪುರಸ್ಕರಿಸಬೇಕು ಎಂಬ ಇರಾದೆಯಿದ್ದರೆ, ಅವರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಕೊಡಬಹುದು, ಸರಕಾರದ ಹಲವಾರು ಸಮಿತಿಗಳ ಪೈಕಿ ಒಂದರಲ್ಲಿ ತೂರಿಸಬಹುದು, ಅದಕ್ಕಿಂತ ಹೆಚ್ಚಿನ ಸ್ಥಾನಮಾನ ನೀಡಬೇಕು ಎಂದಿದ್ದರೆ, ಅವರನ್ನು ವಿಧಾನ ಪರಿಷತ್ ಗೆ ನಾಮಕರಣ ಸದಸ್ಯರನ್ನಾಗಿ ಮಾಡಬಹುದು… ಹೀಗೆ ರಾಜ್ಯಮಟ್ಟದಲ್ಲಿ ಹಲವಾರು ಅವಕಾಶಗಳಿವೆ. ಇದರಿಂದ ಅವರಿಗೂ ಉಪಕಾರ ಮಾಡಿದಂತಾಗುತ್ತದೆ. ಅವರಿಗೆ ಸಮರ್ಥವಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟಂತಾಗುತ್ತದೆ.
ಆದರೆ ಏಕಾಏಕಿ ರಾಜ್ಯಸಭೆಯಲ್ಲಿ ಕುಳ್ಳಿರಿಸಿದರೆ, ಅವರ ಕತೆ ಏನಾಗಬೇಡ? ಅವರ ಪಾಡನ್ನು ನೆನೆದು ಯಾರಿಗಾದರೂ ಅನುಕಂಪ ಮೂಡುತ್ತದೆ. ಅವರನ್ನು ನೋಡಿ ಪಾಪ ಎನಿಸುತ್ತದೆ. ಮೊದಲೇ ಇವರಿಬ್ಬರಿಗೂ ಆ ದಿಲ್ಲಿ ಎಂಬ ದೇಶ ಗೊತ್ತಿಲ್ಲ, ಇನ್ನು ಭಾಷೆಯೂ ಗೊತ್ತಿಲ್ಲ, ಆ ರಾಜ್ಯಸಭೆಯ ಘಟಾನುಘಟಿಗಳ ಮಧ್ಯೆ ಇವರು ಹೇಗೆ ಕಾರ್ಯನಿರ್ವಹಿಸಬಹುದು? ಸ್ವಲ್ಪ ಯೋಚಿಸಿ. ಅವರಿಬ್ಬರ ಪರಿಸ್ಥಿತಿ ನೋಡಿ ಮರುಕ ಉಂಟಾಗುವುದಿಲ್ಲವೇ? ಪಕ್ಷದ ಕಾರ್ಯಕರ್ತರು ಎಂದು ಈ ರೀತಿ ಅವರನ್ನು ಮುಜುಗರಕ್ಕೆ ಸಿಲುಕಿಸಬಹುದಾ ? ಆ ಮೂಲಕ ದೇಶದ ಜನರನ್ನು ಈ ರೀತಿ ಹೀಯಾಳಿಸಬಹುದಾ ? ಗಲ್ಲಿ ಕ್ರಿಕೆಟ್ ಆಡುತ್ತಿದ್ದವರನ್ನು ಹೋಗಿ ಹೋಗಿ ವರ್ಲ್ಡ್ ಕಪ್ ಟೀಮಿಗೆ ಆರಿಸಿದರೆ ಅವರ ಸ್ಥಿತಿ ಏನಾಗಬಹುದು? ಇಲ್ಲಿ ಆಶಯ ಒಳ್ಳೆಯದೇ ಇದ್ದರೂ, ಉದ್ದೇಶ ಈಡೇರುವುದಿಲ್ಲ. ಈಗಿನ ಸ್ಥಿತಿಯೂ ಹಾಗೆ ಆಗಿದೆ. ಇದರಿಂದ ಕಡಾಡಿ ಮತ್ತು ಗಸ್ತಿ ಅವರಿಗೂ ಒಳ್ಳೆಯದಾಗಲಿಲ್ಲ, ರಾಜ್ಯಸಭೆಗೂ ಒಳ್ಳೆಯದಾಗಲಿಲ್ಲ ಮತ್ತು ದೇಶಕ್ಕೂ ಒಳ್ಳೆಯದಾಗಲಿಲ್ಲ.
ಹೀಗಾಗಿ ಏನು ಸಾಧಿಸಿದಂತಾಯಿತು ? ಇಂಥ ಆಯ್ಕೆ ಹುಡುಗಾಟಿಕೆಯ ಪರಾಕಾಷ್ಠೆ ಎಂದು ಕರೆಯಿಸಿಕೊಳ್ಳುತ್ತದೆ. ಯಾರನ್ನು ಏನು ಬೇಕಾದರೂ ಮಾಡಬಹುದು, ಯಾರು ಏನು ಬೇಕಾದರೂ ಆಗಬಹುದು ಎಂಬ ಭಾವನೆಯೇ ಬಹಳ ಅಪಾಯಕಾರಿ. ರಾಜ್ಯಸಭೆಗೆ ಯಾರನ್ನಾದರೂ ಕಳಿಸುವ ಅಧಿಕಾರವಿದೆಯೆಂದು, ಅಪಾತ್ರರನ್ನು ಕಳಿಸುವುದು, ಸಂಸತ್ತಿನ ಘನತೆಯನ್ನು ಕುಗ್ಗಿಸಿದಂತಾಗುವುದಿಲ್ಲವೇ? ಅದರ ಶ್ರೇಷ್ಠತೆಯನ್ನು ಅಪಮೌಲ್ಯಗೊಳಿಸಿದಂತಲ್ಲವೇ ? ಇದು ಪ್ರಜಾಪ್ರಭುತ್ವಕ್ಕೆಸಗಿದ ಅಪಚಾರವಲ್ಲವೇ ?
ಇದೇ ಬಿಜೆಪಿ ನಾಲ್ಕು ತಿಂಗಳುಗಳ ಹಿಂದೆ, ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ರಂಜನ್ ಗಗೋಯ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿತ್ತು. ಅಂದರೆ ರಾಜ್ಯಸಭೆಯ ಸದಸ್ಯರ benchmark ನ್ನು ಎತ್ತರಿಸಿತ್ತು, ಅದು ಹೇಗಿರಬೇಕು ಎಂಬುದನ್ನು ತಿಳಿಸಿಕೊಟ್ಟಿತ್ತು. ಅಂಥವರ ಜಾಗಕ್ಕೆ ಕಡಾಡಿ ಮತ್ತು ಗಸ್ತಿ ಅವರನ್ನು ಕಳಿಸುವಾಗ ಈ ಎಲ್ಲಾ ಸಂಗತಿಗಳನ್ನು ಯೋಚಿಸಬೇಕಿತ್ತು. ಇಲ್ಲದಿದ್ದರೆ, ಈಗಿರುವ ಸದಸ್ಯರಿಗೂ ಅವಮಾನ ಮಾಡಿದಂತೆ.
ಇದು ಒಂಥರಾ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಡಾ.ಎಸ್.ಎಲ್.ಭೈರಪ್ಪ ಅವರಿಗೆ ನೀಡಿ, ಮುಂದಿನ ವರ್ಷ ಅದೇ ಪ್ರಶಸ್ತಿಯನ್ನು ಪಕ್ಕಾ ನಕಲಿ ಸಾಹಿತಿ ವೀರಪ್ಪ ಮೊಯಿಲಿ ಅವರಿಗೆ ನೀಡಿದಂತೆ. ಮೊಯಿಲಿ ಅವರಿಗೆ ಪ್ರಶಸ್ತಿ ನೀಡುವುದೆಂದರೆ ಡಾ.ಭೈರಪ್ಪನವರನ್ನು ಅವಮಾನಿಸಿದಂತೆ. ಇದರಿಂದ ಆ ಪ್ರಶಸ್ತಿಯ ಮೌಲ್ಯವೇ ಹೊರಟು ಹೋಗುತ್ತದೆ. ಅದನ್ನು ಯಾರು ಬೇಕಾದರೂ ಪಡೆಯಬಹುದು ಎಂಬ ಭಾವನೆ ಮೂಡುತ್ತದೆ. ನನಗೆ ಇಲ್ಲಿ ಒಂದು ವಿಚಿತ್ರ ಘಟನೆ ನೆನಪಾಗುತ್ತಿದೆ. ಕೆಲವು ವರ್ಷಗಳ ಹಿಂದೆ, ಒಬ್ಬ ನಿಷ್ಠಾವಂತ ನಿವೃತ್ತ ಪೊಲೀಸ್ ಅಧಿಕಾರಿಗೆ ರಾಜ್ಯಪ್ರಶಸ್ತಿ ನೀಡಲಾಯಿತು. ಅದೇ ಪಟ್ಟಿಯಲ್ಲಿ ಮಾಜಿ ರೌಡಿ ಮತ್ತು ಹಾಲಿ ಸಮಾಜ ಸೇವಕನೊಬ್ಬನಿಗೂ ಪ್ರಶಸ್ತಿ ನೀಡಲಾಯಿತು. ದುರಂತವೆಂದರೆ, ಅದೇ ಪೊಲೀಸ್ ಅಧಿಕಾರಿ ಹಲವು ವರ್ಷಗಳ ಹಿಂದೆ ಆ ಸಮಾಜ ಸೇವಕ ರೌಡಿಯಾಗಿದ್ದಾಗ ಅರೆಸ್ಟ್ ಮಾಡಿದ್ದರಂತೆ. ಈಗ ಒಂದೇ ವೇದಿಕೆಯಲ್ಲಿ ಇಬ್ಬರಿಗೂ ಸನ್ಮಾನ ! ಪಾಪ, ಆ ಪೊಲೀಸ್ ಅಧಿಕಾರಿ ಸಂಕಟ ನೋಡಿ, ಆ ಪ್ರಶಸ್ತಿಯನ್ನು ಸ್ವೀಕರಿಸಬೇಕೋ, ಬೇಡವೋ ಎಂಬ ಪೀಕಲಾಟ, ಉಭಯ ಸಂಕಟ ! ಖಂಡಿತವಾಗಿಯೂ ಅದು ಪೊಲೀಸ್ ಅಧಿಕಾರಿಗೆ ಮಾಡಿದ ಗೌರವ ಅಲ್ಲ, ಘೋರ ಅವಮಾನ.
ಹೀಗಾಗಿ ಒಬ್ಬರನ್ನು ಆಯ್ಕೆ ಮಾಡುವಾಗ, ಅನ್ಯರ ಸ್ವಾಭಿಮಾನ, ಗೌರವಕ್ಕೆ ಧಕ್ಕೆ ಆಗದಂತೆ ಎಚ್ಚರವಹಿಸಬೇಕು. ನೀವು ‘ಭಾರತ ರತ್ನ’ ಸಚಿನ್ ತೆಂಡೂಲ್ಕರ್ ಅವರನ್ನು ಗೌರವಿಸುವ ವೇದಿಕೆಯಲ್ಲಿ ಥ್ರೋ ಬಾಲ್ ಶಿವುನನ್ನು ಸನ್ಮಾನಿಸಬಾರದು. ಇದು ಇಬ್ಬರಿಗೂ ಮುಜುಗರವಾಗುವ ಪ್ರಸಂಗ. ಶ್ರೇಷ್ಠ ಪತ್ರಕರ್ತ ಪ್ರಶಸ್ತಿಯನ್ನು ಪಾಟೀಲ್ ಪುಟ್ಟಪ್ಪನಂಥ ಧೀಮಂತ ಪತ್ರಕರ್ತರಿಗೆ ಕೊಟ್ಟು ಅದೇ ವೇದಿಕೆಯಲ್ಲಿ ಆ ಪ್ರಶಸ್ತಿಯನ್ನು ಸ್ವಾಮಿಗೌಡನಂಥ ರೋಲ್ ಕಾಲ್ ಪತ್ರಕರ್ತನಿಗೆ ಕೊಟ್ಟರೆ ಏನಾದೀತು ?
ಸೂಕ್ಷ್ಮವಾಗಿ ಯೋಚಿಸಿದರೆ, ಇಲ್ಲಿ ರಂಜನ್ ಗಗೋಯ್ ಅವರನ್ನು ಕಡಾಡಿ ಮತ್ತು ಗಸ್ತಿ ಅವರ ಲೆವೆಲ್ಲಿಗೆ ತಂದಂತಾಯಿತು ಅಥವಾ ಕಡಾಡಿ ಮತ್ತು ಗಸ್ತಿ ಅವರನ್ನು ಗಗೋಯ್ ಲೆವೆಲ್ಲಿಗೆ ಏರಿಸಿದಂತಾಯಿತು. ಹೀಗಾಗಿ ಇಂಥ ಆಯಕಟ್ಟಿನ ಜಾಗಕ್ಕೆ ಕಳಿಸುವಾಗ ಈ ಎಚ್ಚರ ಅಗತ್ಯ. ಇಲ್ಲದಿದ್ದರೆ ಅದು ಧಿಮಾಕಿನ ಮತ್ತು ಹುಡುಗಾಟಿಕೆಯ ನಡೆ ಎಂದು ಕರೆಯಿಸಿಕೊಳ್ಳುತ್ತದೆ. ಇದರಿಂದ ಹೈಕಮಾಂಡ್ ತನ್ನ ‘ಅಹಂ’ನಿಂದ ಇನ್ನಷ್ಟು ಬೀಗಬಹುದೇ ಹೊರತು ಅದರಿಂದ ಮತ್ಯಾರಿಗೂ ಪ್ರಯೋಜನ ಆಗುವುದಿಲ್ಲ. ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅವರು ಪಕ್ಷದ ಕಾರ್ಯಕರ್ತರೂ ಹೌದು ಎಂಬುದು added qualification ಆಗಬೇಕೆ ಹೊರತು, ಅದೇ qualification ಆಗಬಾರದು.
ಈ ಎಲ್ಲಾ ಚರ್ಚೆ, ಭಿನ್ನಾಭಿಪ್ರಾಯ ಮತ್ತು ಪಕ್ಷದ ಹಿರಿಯ ನಾಯಕ ಅಸಮಾಧಾನದ ನಡುವೆಯೂ ಕಡಾಡಿ ಮತ್ತು ಗಸ್ತಿ ಅವರಿಗೆ ಒಳ್ಳೆಯದಾಗಲಿ. ಅವರನ್ನು ಆರಿಸಿದ ಹೈಕಮಾಂಡಿಗೆ ಅವರು ಒಳ್ಳೆಯ ಹೆಸರನ್ನು ತರಲಿ. ಇವರಿಬ್ಬರ ಅತ್ಯಲ್ಪ ರಾಜಕೀಯ ಅನುಭವದ ಫಲವನ್ನು ರಾಜ್ಯಸಭೆ ಬಳಸಿಕೊಳ್ಳುವಂತಾಗಲಿ. ಪ್ರಜಾಪ್ರಭುತ್ವ ಚಿರಾಯುವಾಗಲಿ.