Thursday, 12th December 2024

ಕಾಮೆಂಟರಿಕಾರನಿಲ್ಲದ ಕ್ರಿಕೆಟ್ಟೂ, ಅರ್ಚಕನಿಲ್ಲದ ದೇವರೂ !

ವಿಶ್ವೇಶ್ವರ ಭಟ್

ಕ್ರಿಕೆಟ್ ಬಗ್ಗೆ ಒಂದು ಪ್ರಸಿದ್ಧವಾದ ಮಾತಿದೆ. ಅದೇನೆಂದರೆ, ‘ಭಾರತದಲ್ಲಿ ಕ್ರಿಕೆಟ್ ನೋಡಲು ಚೆಂದ, ಆಸ್ಟ್ರೇಲಿಯಾದಲ್ಲಿ ಆಡಲು ಚೆಂದ ಮತ್ತು ಇಂಗ್ಲೆಂಡಿನಲ್ಲಿ ಕೇಳಲು ಚೆಂದ’ ಹೀಗಾಗಿ ಇಂಗ್ಲೆಂಡಿನಲ್ಲಿ ಎಲ್ಲಿಯೇ ಕ್ರಿಕೆಟ್ ಪಂದ್ಯ ನಡೆಯಲಿ, ಎರಡೂ ತಂಡದವರು ಆಟಗಾರರರನ್ನು ಆಯ್ಕೆ ಮಾಡುವಂತೆ ಅಲ್ಲಿನ ಕ್ರಿಕೆಟ್ ಆಡಳಿತ ಮಂಡಳಿ, ಅಳೆದು ತೂಗಿ ಕಾಮೆಂಟೆಟರುಗಳನ್ನು ಅರ್ಥಾತ್ ವೀಕ್ಷಕ ವಿವರಣಕಾರರನ್ನು ಆಯ್ಕೆ ಮಾಡುತ್ತದೆ. ಇದಕ್ಕೆ ಇನ್ನೊಂದು ಕಾರಣವೂ ಇದೆ.

ಸಾಮಾನ್ಯವಾಗಿ ಇಂಗ್ಲೆಂಡಿನಲ್ಲಿ ಬೇಸಿಗೆ ಕಾಲದಲ್ಲಿ, ಐದು ದಿನಗಳ ಟೆಸ್ಟ್ ಪಂದ್ಯಗಳು ನಡೆಯುತ್ತವೆ. ವಿಚಿತ್ರ ಅಂದರೆ, ಇಂಗ್ಲೆಂಡಿನಲ್ಲಿ ಬೇಸಿಗೆಯಲ್ಲೇ ಆಗಾಗ ಮಳೆ ಬರುತ್ತಿರುತ್ತದೆ. ಅದರಲ್ಲೂ ಟೆಸ್ಟ್ ಪಂದ್ಯ ನಡೆಯುವಾಗ ಮಳೆ ಬಂದೇ ಬರುತ್ತದೆ. ಆ ಕಾರಣಕ್ಕೇ ಈ ಪಂದ್ಯಗಳನ್ನು ಐದು ದಿನಗಳಿಗೆ ನಿಗದಿಪಡಿಸಿರುವುದು. ಪಂದ್ಯ ಮಳೆಯಿಂದ ಸ್ಥಗಿತವಾಗಿ, ಆಟಗಾರರು ಪೆವಿಲಿಯನ್ ಗೆ ತೆರಳಿದಾಗ, ಆಡುವವರು ಕಾಮೆಂಟರಿ ಬಾಕ್ಸಿನಲ್ಲಿರುವ ವೀಕ್ಷಕ ವಿವರಣಕಾರರು! ಅಂದರೆ ಈ ಅವಧಿಯಲ್ಲಿ ಟೈಮ್ ಫಿಲ್ಲರುಗಳೆಂದರೆ ಕಾಮೆಂಟೆಟರುಗಳು. ಮಳೆ ನಿಂತು ಆಟ ಆರಂಭವಾಗುವವರೆಗೆ, ಅವರು ಮಾತಾಡುತ್ತಿರಬೇಕಲ್ಲ?

ಹೀಗಾಗಿ ಈ ಕಾಮೆಂಟೆಟರುಗಳ ಮಾತುಗಳನ್ನು ಕೇಳುವುದೇ ಚೆಂದ. ಈ ಕಾರಣಕ್ಕೆ ನುರಿತ, ಆಟದ ವೈಶಿಷ್ಟ್ಯ, ಇತಿಹಾಸ, ಕಲಾತ್ಮಕತೆ ಮತ್ತು ಆಟದ ಬಗ್ಗೆ ಸಮ್ಯಕ್ ದೃಷ್ಟಿಯಿರುವ ನಿವೃತ್ತ ಕ್ರಿಕೆಟ್ ಆಟಗಾರರು ಮತ್ತು ಪರಿಣತರನ್ನು ವೀಕ್ಷಕವಿವರಣಕಾರರನ್ನಾಗಿ ಆರಿಸಿರುತ್ತಾರೆ.

ಇಂಗ್ಲೆಂಡಿನಲ್ಲಿ ವಿಂಬಲ್ಡನ್ ಟೆನಿಸ್ ಮತ್ತು ಟೆಸ್ಟ್ ಕ್ರಿಕೆಟ್ ನೋಡಲು, ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರು ಹೋಗುತ್ತಾರಲ್ಲ, ಆ ರೀತಿ ಠಾಕು-ಠೀಕಾಗಿ ಹೋಗುತ್ತಾರೆ. ಅಲ್ಲಿ ಕ್ರಿಕೆಟ್ ನೋಡುವುದು ಮತ್ತು ಕಾಮೆಂಟರಿ ಕೇಳುವುದೆಂದರೆ, ಸಂಗೀತಗೋಷ್ಠಿಗೆ ಹೋದಂತೆ, ಸಂಗೀತವನ್ನು ಧೇನಿಸಿದಂತೆ. ಅದೊಂದು ವಿಶೇಷ, ಅಪೂರ್ವ ಅನುಭೂತಿ. ಅದಕ್ಕಾಗಿ ಬೇರೆಯದೇ ಆದ ಮನಸ್ಥಿತಿಯನ್ನು ಹದಗೊಳಿಸಿಕೊಳ್ಳಬೇಕು, ಪಕ್ವಗೊಳಿಸಿಕೊಳ್ಳಬೇಕು. ಅದೊಂದು ಶ್ರದ್ಧೆಗೆ ಸಂಬಂಧಿಸಿದ ಸಂಗತಿ.

ಸಾಮಾನ್ಯವಾಗಿ ಇಂಗ್ಲೆಂಡಿನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದ್ದರೆ, ನಾನು ಅದನ್ನು ತಪ್ಪಿಸಿಕೊಳ್ಳುವುದಿಲ್ಲ. ಐದೂ ದಿನ ಅಲ್ಲದಿದ್ದರೂ, ಪಂದ್ಯದ ಕೆಲ ಭಾಗವನ್ನಾದರೂ ನೋಡಲು ಸವುಡು ಮಾಡಿಕೊಳ್ಳುತ್ತೇನೆ. ಹಸುರಿನಿಂದ ನಳನಳಿಸುವ ಮೈದಾನದಲ್ಲಿ, ಆಟಗಾರರಂತೆ, ಪ್ರೇಕ್ಷಕರನ್ನು ನೋಡುವುದು ಸಹ ಚೆಂದವೇ. ಜತೆಯಲ್ಲಿ ಕಾಮೆಂಟರಿಯ ಕರ್ಣಾನಂದ ! ವಿಂಬಲ್ಡನ್ ಪ್ರೇಕ್ಷಕರಿಗೆ ಹೋಲಿಸಿದರೆ, ಇಂಗ್ಲೆಂಡಿನ ಪ್ರೇಕ್ಷಕರು ತುಸು ಉದಾರಿಗಳು. ಮೊದಲೆಲ್ಲ ಪ್ರೇಕ್ಷಕರೂ ಥ್ರೀ ಪೀಸ್ ಸೂಟ್, ಟೈ ಧರಿಸಿ, ಪನಾಮ ಹ್ಯಾಟ್ ಹಾಕಿ ಬರುತ್ತಿದ್ದರು. ಕಾಲ ಬದಲಾದಂತೆ, ಅವರ ಪೋಷಾಕು ಸಹ ಬದಲಾಗಿದೆ ಬಿಡಿ.

ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ, ನಾನು ಲಂಡನ್ ನಲ್ಲಿದ್ದಾಗ, ಅಲ್ಲಿನ ಸೇಂಟ್ ಜಾನ್ಸ್ ವುಡ್ ನಲ್ಲಿರುವ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್ ಗೆ ಹೋಗಿದ್ದೆ. ಆಗ ಅಲ್ಲಿನ ಆಟಗಾರರ ಡ್ರೆಸಿಂಗ್ ರೂಮಿನಲ್ಲಿ ಒಬ್ಬನೇ ಒಬ್ಬ ವೀಕ್ಷಕ ವಿವರಣಕಾರನ ಫೋಟೋ ನೋಡಿ ಆಶ್ಚರ್ಯವಾಗಿತ್ತು. ಲಾರ್ಡ್ಸ್ ಸ್ಟೇಡಿಯಂನಲ್ಲಿ ಜಾನ್ ಅರ್ಲಾಟ್ ಇಂದಿಗೂ ನೆನಪಾಗಿ ಉಳಿದಿದ್ದಾನೆ. ರೇಡಿಯೋ ಜನಪ್ರಿಯವಾಗಿದ್ದ ಕಾಲದಲ್ಲಿ ಅರ್ಲಾಟ್ ನ ಕಾಮೆಂಟರಿ ಕೇಳುವುದೆಂದರೆ, ಬಾಲ ಮುರಳಿಕೃಷ್ಣ ಸಂಗೀತ ಕೇಳಿದಂತೆ. ಆತ ಬಿಬಿಸಿಗೆ ಸುಮಾರು ನಾಲ್ಕು ದಶಕಗಳ ಕಾಲ ವೀಕ್ಷಕ ವಿವರಣೆ ನೀಡಿ ದಂತಕತೆಯಾದವ. ಆತನನ್ನು ಇಂದಿಗೂ Poet Commentator ಎಂದೇ ಕರೆಯುತ್ತಾರೆ. ಇಂಗ್ಲೆಂಡಿನಲ್ಲಿ ಕ್ರಿಕೆಟ್ ಕಾಮೆಂಟೆಟರುಗಳಿಗೆ ಎಲ್ಲಿಲ್ಲದ ಗೌರವ. ಅಮೀನ್ ಸಹಾನಿ ಅವರ ಬಿನಾಕಾ ‘ಗೀತಮಾಲ’ದಂತೆ, ಅರ್ಲಾಟ್ ಕ್ರಿಕೆಟ್ ಕಾಮೆಂಟರಿಯ ಧ್ವನಿ ಸುರುಳಿ ಇಂದಿಗೂ ಅಮೂಲ್ಯ ಸಂಗ್ರಹವೇ. ಅದಕ್ಕೆ ಕಾಲ-ದೇಶವನ್ನು ಮೀರಿದ antique ಮೌಲ್ಯವಿದೆ.

ಯಕ್ಷಗಾನದಲ್ಲಿ ರಂಗಸ್ಥಳದಲ್ಲಿ ಯಾರಿದ್ದಾರೆ ಎಂಬುದನ್ನು ನೋಡಿ ಅದನ್ನು ವೀಕ್ಷಿಸುವಂತೆ, ಕಾಮೆಂಟರಿ ಬಾಕ್ಸಿನಲ್ಲಿ ಯಾರಿದ್ದಾರೆ ಎಂಬುದನ್ನು ನೋಡಿ ಕ್ರಿಕೆಟ್ ನೋಡಬೇಕು. ಅತ್ಯತ್ತಮ ಕಾಮೆಂಟರಿಕಾರ ಕೇವಲ ನಡೆದಿದ್ದನ್ನು ಹೇಳುವುದಿಲ್ಲ. ಆಟವನ್ನು ಹೇಗೆ ನೋಡಬೇಕೆಂಬುದನ್ನು ಹೇಳಿಕೊಡುತ್ತಾನೆ. ಪ್ರತಿ ಕ್ಷಣದ ಮಹತ್ವವನ್ನು ತಿಳಿಸಿಕೊಡುತ್ತಾನೆ. ಪ್ರೇಕ್ಷಕರನ್ನು ಕರೆದುಕೊಂಡು ಆಟದ ವಿವಿಧ ಆಯಾಮ, ಆಟಗಾರನ ವಿವಿಧ ಕಲಾತ್ಮಕತೆಯನ್ನು ವಿವರಿಸುತ್ತಾ ಹೋಗುತ್ತಾನೆ. ಕ್ರಿಕೆಟ್ ಪಂದ್ಯದ ಪ್ರವೇಶಕ್ಕೆ ಕಾಮೆಂಟರಿಕಾರ ಮಂತ್ರ ಹೇಳುವ ಪುರೋಹಿತನಿದ್ದಂತೆ, ದೇವರ ಮುಂದಿರುವ ಅರ್ಚಕನಿದ್ದಂತೆ.

ಅನೇಕರು ಕ್ರೀಸಿನಲ್ಲಿ ಯಾರಿದ್ದಾರೆ ಎಂಬುದನ್ನು ನೋಡಿ ಟಿವಿಯಲ್ಲಿ ಕ್ರಿಕೆಟ್ ನೋಡಬೇಕೋ, ಬೇಡವೋ, ನೋಡುವುದಾದರೆ ಎಷ್ಟು ಹೊತ್ತು ನೋಡಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಸಚಿನ್, ಧೋನಿ, ವಿರಾಟ್, ಸೆಹವಾಗ್ ಕ್ರೀಸಿನಲ್ಲಿದ್ದರೆ, ಟಿವಿ ಬಿಟ್ಟು ಕದಲುವುದಿಲ್ಲ. ಕ್ರಿಸ್ ಗೇಲ್ ಬ್ಯಾಟ್ ಮಾಡುತ್ತಿದ್ದಾನೆ ಅಂತ ಗೊತ್ತಾದರೆ, ಟಿವಿ ಆನ್ ಮಾಡದೇ ಇರಲು ಸಾಧ್ಯವಾ?

ಹಾಗೆ ಕೆಲವರು ಕಾಮೆಂಟರಿ ಬಾಕ್ಸಿನಲ್ಲಿದ್ದಾರೆ ಅಂದ್ರೆ ಅಲ್ಲಿಂದ ಕದಲಲು ಮನಸ್ಸಾಗುವುದಿಲ್ಲ. ಟಿವಿ ಇಲ್ಲದ ಆ ದಿನಗಳಲ್ಲಿ ನಮಗೆ ಆಟಗಾರರ ಕ್ರಿಕೆಟ್ ವ್ಯಕ್ತಿತ್ವವನ್ನು ಕಟ್ಟಿಕೊಟ್ಟವರು ಇವರೇ. ಆರ್.ಎಸ್. ಕೃಷ್ಣಸ್ವಾಮಿ(ತುಂಬಿ), ನರೋತ್ತಮ ಪುರಿ, ಅನಂತ ಸೆಟಲ್ವಾಡ್, ರವಿ ಚತುರ್ವೇದಿ, ಸುಶೀಲ್ ದೋಷಿ ಇವರೇ ನನ್ನಂಥ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿಗೆ ಕ್ರಿಕೆಟ್ ಪ್ರವೇಶಕ್ಕೆ ಮುನ್ನುಡಿ ಬರೆದವರು. ಪ್ರತಿ ಬಾಲ್, ಹೊಡೆತ, ಕ್ಯಾಚ್, ವಿಕೆಟ್ ನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿ ಆಟದ ರುಚಿ ಹತ್ತಿಸಿದವರು.

ಆನಂತರ ಈ ಕೆಲಸವನ್ನು ರಿಚಿ ಬೆನಾಡ್, ಟೋನಿ ಕೋಜಿಯರ್, ಟೋನಿ ಗ್ರೆಗ್, ಜೆಫ್ರಿ ಬಾಯ್ಕಾಟ್, ಅಲನ್ ಮ್ಯಾಕ್ ಗಿಲ್ವ್ರಾಯ್ , ಸುನಿಲ್ ಗಾವಸ್ಕರ್, ರವಿ ಶಾಸ್ತ್ರಿ, ಬಿಲ್ ಲಾರಿ, ಅರುಣ್ ಲಾಲ್, ರಮೀಜ್ ರಾಜಾ, ಗ್ರೀಮ್ ಸ್ವಾನ್, ಮಾರ್ಕ್ ಟೇಲರ್, ಮೈಕೆಲ್ ಹೋಲ್ಡಿಂಗ್, ಮೈಕ್ ಅಥರ್ಟನ್, ಇಯಾನ್ ಬಿಷಪ್, ಸಂಜಯ ಮಂಜ್ರೆಕರ್, ವಾಸಿಂ ಅಕ್ರಮ್, ಹರ್ಷ ಬೋಗ್ಲೆ, ಡೇವಿಡ್ ಲ್ಲೊಯ್ಡ್, ಜಿಮ್ ಮ್ಯಾಕ್ಸ್ವೆಲ್, ಮೈಕಲ್ ಸ್ಲಾಟರ್, ಇಯಾನ್ ಹೀಲಿ, ನವಜೋತ್ ಸಿಂಗ್ ಸಿದ್ದು , ಜಾಕ್ ಬೆನಿಸ್ಟರ್, ಇಯಾನ್ ಬೋಥಮ್, ಗ್ರೆಗ್ ಚಾಪೆಲ್, ಇಯಾನ್ ಚಾಪೆಲ್, ಆಲಿಸನ್ ಮಿಟ್ಚೆಲ್, ಮೈಕ್ ಹಯ್ಸ್ಮನ್, ರೋಷನ್ ಅಭಯಸಿಂಘೆ, ಮಾರ್ಕ್ ಬುಚರ್ ಮುಂತಾದವರು ಮಾಡಿದರು. ಎಲ್ಲಾ ಕ್ರಿಕೆಟ್ ಆಟಗಾರರೂ ಉತ್ತಮ ವೀಕ್ಷಕ ವಿವರಣಕಾರರಲ್ಲ. ಹರ್ಷ ಬೋಗ್ಲೆ ಕ್ರಿಕೆಟ್ ಆಟಗಾರರಲ್ಲ.

ಇವರೆಲ್ಲರ ಪೈಕಿ ನನಗೆ ಇಷ್ಟವಾದವರೆಂದರೆ, ರಿಚಿ ಬೆನಾಡ್, ಟೋನಿ ಕೋಜಿಯರ್, ಟೋನಿ ಗ್ರೆಗ್, ಜೆಫ್ರಿ ಬಾಯ್ಕಾಟ್, ಹರ್ಷ ಬೋಗ್ಲೆ, ಸುನಿಲ್ ಗಾವಸ್ಕರ್, ಸಂಜಯ್ ಮಂಜ್ರೆಕರ್, ರವಿ ಶಾಸ್ತ್ರಿ, ಮೈಕೆಲ್ ಹೋಲ್ಡಿಂಗ್ ಮತ್ತು ರಮೀಜ್ ರಾಜಾ. ಈ ಪೈಕಿ ಮೊದಲ ಮೂವರು ಬದುಕಿಲ್ಲ. ಬಾಯ್ಕಾಟ್ ವಯೋ ಸಹಜ ಕಾರಣದಿಂದ ಕಾಮೆಂಟರಿ ಹೇಳುತ್ತಿಲ್ಲ. ಅದರಲ್ಲೂ ಹರ್ಷ ಬೋಗ್ಲೆ, ಗಾವಸ್ಕರ್ ಮತ್ತು ಹೋಲ್ಡಿಂಗ್ ಕಾಮೆಂಟರಿ ಬಾಕ್ಸಿನಲ್ಲಿದ್ದರೆ ನಾನು ಅಲ್ಲೇ ಸ್ತಬ್ಧ! ರಾಮನ ಪಕ್ಕದ ಆಂಜನೇಯ!

ಇವರು ನಮಗೆ ಬರೀ ಕ್ರಿಕೆಟ್ ಮೈದಾನದಳ್ಳಿ ಕಂಡಿದ್ದನ್ನು ಹೇಳುವುದಿಲ್ಲ. ನಾವು ನೋಡದ ಕ್ರಿಕೆಟಿನ ದರ್ಶನ ಮಾಡಿಸುತ್ತಾರೆ. ಕ್ರಿಕೆಟ್ ಎಂಬ ಅದ್ಭುತ ಆಧ್ಯಾತ್ಮದ ಬಗ್ಗೆ ಪಾಠ ಮಾಡುತ್ತಾ ಹೋಗುತ್ತಾರೆ. ಕ್ರಿಕೆಟನ್ನು ನೋಡುವ ಬಗೆಯನ್ನು ಹೇಳುತ್ತಾ, ಹೊಸ ಅನುಭವ ಕಟ್ಟಿಕೊಡುತ್ತಾರೆ. ಒಂದು ಎಸೆತ, ಹೊಡೆತಕ್ಕಿರುವ ಆಯಾಮಗಳನ್ನು ವಿವರಿಸುತ್ತಾರೆ. ಬೋಗ್ಲೆ ಮತ್ತು ಹೋಲ್ಡಿಂಗ್ ತಮ್ಮ ಧ್ವನಿ, ಲಾಲಿತ್ಯ, ಮಾಹಿತಿಯಿಂದಲೇ ಆಟದ ಸ್ವಾರಸ್ಯವನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ಕಳೆದ ಎರಡು ಬೇಸಿಗೆಯಲ್ಲಿ ಇಂಗ್ಲೆಂಡ್ ನಲ್ಲಿ ಅತಿ ಹೆಚ್ಚು ಜನಪ್ರಿಯರಾದವರೆಂದರೆ ಬೋಗ್ಲೆ ಮತ್ತು ಹೋಲ್ಡಿಂಗ್.

ಮೊನ್ನೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಸೌಥಮ್ಟನ್ ನಲ್ಲಿ ನಡೆದ ಮೊದಲ ಕ್ರಿಕೆಟ್ ಪಂದ್ಯದ ಮೊದಲ ದಿನದ ಆಟವನ್ನು ನೋಡುತ್ತಿದ್ದೆ. ಇಂಗ್ಲೆಂಡಿನ ಬೇಸಿಗೆಯಲ್ಲಿ ಆರಂಭವಾದ, ಮೂರು ಪಂದ್ಯಗಳ ಸರಣಿಯ, ಮೊದಲ ಟೆಸ್ಟಿನ ಮೊದಲ ದಿನದ ಕೆಲ ಹೊತ್ತು, ಮಳೆಗೆ ಆಹುತಿಯಾಗಿತ್ತು. ಅಮೆರಿಕದ ಮಿನ್ನಿಯಾಪೋಲಿಸಿನಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆಯ ನಂತರ ಜಗತ್ತಿನಾದ್ಯಂತ ನಡೆದ ಪ್ರತಿಭಟನೆಯ ನೆನಪು ಇನ್ನೂ ಹಸುರಿರುವಾಗಲೇ, (ಸಂಪೂರ್ಣ ಕರಿಯ ಆಟಗಾರರಿಂದ ತುಂಬಿರುವ) ವೆಸ್ಟ್ ಇಂಡೀಸ್ ತಂಡದ ಮೊದಲ ವಿದೇಶ ಪ್ರವಾಸ ಇದಾಗಿದ್ದರಿಂದ ಸಹಜವಾಗಿ ಈ ಪಂದ್ಯಕ್ಕೆ ಎಲ್ಲಿಲ್ಲದ ಮಹತ್ವ ಬಂದಿತ್ತು.

ವೆಸ್ಟ್ ಇಂಡೀಸ್ ಆಟಗಾರರೆಲ್ಲ ಒಂದು ಕೈಗೆ ಕಪ್ಪು ಗವಸು ಧರಿಸಿದ್ದರು. ಇಂಗ್ಲೆಂಡಿನ ಆರಂಭಿಕ ಬ್ಯಾಟ್ಸಮನ್, ವಿಂಡೀಸಿನ ಎಲ್ಲಾ ಆಟಗಾರರು ಮತ್ತು ಅಂಪೈರುಗಳು ಮೈದಾನದಲ್ಲಿ ಮೊಳಕಾಲೂರಿ ಜಾರ್ಜ್ ಫ್ಲಾಯ್ಡ್ ಗೆ ಶ್ರದ್ಧಾಂಜಲಿ ಸಲ್ಲಿಸಿ Black Lives Matter ಎಂಬ ಅಭಿಯಾನಕ್ಕೆ ಬೆಂಬಲ ಸೂಚಿಸಿದರು. ಇದು 1968 ರ ಒಲಿಂಪಿಕ್ಸಿನಲ್ಲಿ ಅಮೆರಿಕದ ಕರಿಯ ಓಟಗಾರರಾದ ಜಾನ್ ಕಾರ್ಲೋಸ್ ಮತ್ತು ಟೊಮ್ಮಿ ಸ್ಮಿತ್ ಕೂಡ ಇದೇ ರೀತಿ ಮಾಡಿದ್ದನ್ನು ನೆನಪಿಸುವಂತಿತ್ತು. ಇಡೀ ಮೈದಾನದಲ್ಲಿ ಮೌನ. ಫ್ಲಾಯ್ಡ್ ಹತ್ಯೆಯ ನೆನಪು ಎಲ್ಲರನ್ನು ಮೂಕರನ್ನಾಗಿಸಿತ್ತು.

ಕಾಮೆಂಟರಿ ಬಾಕ್ಸಿನಲ್ಲಿ ಮೈಕೆಲ್ ಹೋಲ್ಡಿಂಗ್ ಇದ್ದರು. ಅವರ ಜತೆ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಮೊದಲ ಕರಿಯ ಆಟಗಾರ್ತಿ ಎಬೋನಿ ರೈನ್ಫೋರ್ಡ್ – ಬ್ರೆಂಟ್ ಇದ್ದರು. ಮೊದಲೇ ಗಡಸು ದನಿ, ಸಂದರ್ಭವೂ ಹಾಗೆ. ಹೋಲ್ಡಿಂಗ್ ಮಾತಾಡುತ್ತಿದ್ದರು. ಕ್ರೀಡೆಯಲ್ಲಿ ಅದರಲ್ಲೂ ವಿಶೇಷವಾಗಿ ಕ್ರಿಕೆಟಿನಲ್ಲಿ ವರ್ಣಭೇದ (ರೇಸಿಸಮ್) ನೀತಿ ಎಷ್ಟುಗಾಢವಾಗಿದೆ ಎಂಬುದನ್ನು ಹೇಳುತ್ತಿದ್ದರು – ‘ನನ್ನ ದೇವರು ಜೀಸಸ್. ಆತ ಕೂಡ ಬಿಳಿಯ. ಆತನ ಕಣ್ಣು ನೀಲಿ, ಕೂದಲು ಬಣ್ಣ ಬಂಗಾರ. ನಾನು ಪೂಜಿಸುವ ಎಲ್ಲಾ ದೇವರು ಬಿಳಿಯರು. ಮೊದಲಿನಿಂದಲೂ ಕಪ್ಪು ಬಣ್ಣ ಅಂದರೆ ಅಶುಭ, ಅಪಶಕುನ ಎಂಬ ಭಾವನೆ ನಮ್ಮಲ್ಲಿ ಬಿತ್ತಿದರು. ಹೆಣಕ್ಕೂ ಕಪ್ಪು ಬಟ್ಟೆಯೇ ಇಷ್ಟ. ಪ್ರತಿಭಟನೆಗೂ ಆ ಬಣ್ಣವೇ ಬೇಕು. ಎಲ್ಲಾ ಕೆಟ್ಟ ಘಟನೆಗೆ ಕಪ್ಪು ಸಂಕೇತ. ಉದಾಹರಣೆಗೆ, ಬ್ಲಾಕ್ ಡೇ , ಬ್ಲ್ಯಾಕ್ ಸಂಡೇ , ಬ್ಲ್ಯಾಕ್ ಫ್ರೈಡೇ .. ಮೂದಲಿಕೆಗೂ ಕಪ್ಪು ಬಣ್ಣವೇ ಬೇಕು. ನಿನ್ನದು ಎಂದೂ ಮಾಸದ ಕಪ್ಪು ಬಣ್ಣ ಎಂದು ಇಂದಿಗೂ ಗೇಲಿ ಮಾಡುವುದುಂಟು. ಜಮೈಕಾದಲ್ಲಿ ಶಾಲೆಯಲ್ಲಿ ಓದುವಾಗಲೂ ನಮ್ಮ ತಲೆಯಲ್ಲಿ ಕಪ್ಪು ಅಂದರೆ ಅಶುಭ, ಕೆಟ್ಟದ್ದು, ಅಪವಿತ್ರವಾದುದು ಎಂಬ ಅಭಿಪ್ರಾಯವನ್ನೇ ಬಿತ್ತಿದರು. ಒಬ್ಬೇ ಒಬ್ಬ ಕರಿಯ ಆದರ್ಶ ವ್ಯಕ್ತಿಯ ಪರಿಚಯವನ್ನೇ ಮಾಡಿಸಲಿಲ್ಲ. ನನಗೆ ಬುದ್ಧಿ ಬರುವ ಹೊತ್ತಿಗೆ ನನ್ನಲ್ಲಿ ಅಗಾಧ ಕೀಳರಿಮೆ ಮೂಡಿತ್ತು. ಕರಿಯರೆಂದರೆ ಈ ಸಮಾಜ, ಈ ಜಗತ್ತು ನಿಕೃಷ್ಟರಾಗಿ ಕಾಣುತ್ತದೆ ಎಂಬ ಭಾವನೆ ನನ್ನಲ್ಲಿ ಬಲವಾಗಿ ಬೇರೂರಿತ್ತು.’

‘ನೋಡಿ, ಈ ಮೈದಾನದಲ್ಲಿ ಬೆಳಗುತ್ತಿರುವ ಲೈಟುಗಳನ್ನು. ಈ ವಿದ್ಯುತ್ ದೀಪಗಳನ್ನು ಕಂಡು ಹಿಡಿದವನು ಯಾರು ಎಂದು ಕೇಳಿ, ಎಲ್ಲರೂ ಥಾಮಸ್ ಎಡಿಸನ್ ಎಂದು ಹೇಳುತ್ತಾರೆ. ಎಡಿಸನ್ ಕಂಡು ಹಿಡಿದ ಲೈಟಿನಲ್ಲಿ ಪೇಪರ್ ಫಿಲಮೆಂಟ್ ಇದೆಯಲ್ಲ, ಅದನ್ನು ಕಂಡು ಹಿಡಿದವರು ಯಾರು ಎಂದು ಕೇಳಿ, ಯಾರಿಗೂ ಗೊತ್ತಿಲ್ಲ. ಕಾರಣ ಅದನ್ನು ಕಂಡು ಹಿಡಿದವನು ಕರಿಯ. ಯಾವ ಶಾಲಾ ಪಠ್ಯ – ಪುಸ್ತಕದಲ್ಲೂ ಅವನ ಹೆಸರಿಲ್ಲ. ಅವನ ಹೆಸರು ಲೆವಿಸ್ ಹೊವಾರ್ಡ್ ಲೆಟಿಮರ್. ನಾವು ಕರಿಯರಾಗಿ ಹುಟ್ಟಿದ್ದೇ ತಪ್ಪಾ ? ನಮ್ಮ ಬಣ್ಣವೇ ನಮ್ಮ ವೈರಿಯಾ ? ನಾವು ಏನೂ ತಪ್ಪು ಮಾಡದಿದ್ದರೂ ಶತಶತಮಾನಗಳಿಂದ ನಿಂದನೆಗೆ, ತುಷ್ಟೀಕರಣಕ್ಕೆ, ಅಪಮಾನಕ್ಕೆ, ಅನ್ಯಾಯಕ್ಕೆ ಗುರಿಯಾಗುತ್ತಿದ್ದೇವಲ್ಲ, ನಾವೆಷ್ಟು ಹತಭಾಗ್ಯರಿರಬಹುದು ? ಈ ಆಧುನಿಕ ಜಗತ್ತಿನಲ್ಲೂ ನಾವು ನಮ್ಮ ಬಣ್ಣವನ್ನು ಬೆಂಬಲಿಸಿಕೊಳ್ಳಬೇಕಾಗಿದೆ. ನಮ್ಮ ಬಣ್ಣವೇ ನಮಗೆ ಶಾಪವಾಗಿದೆ.’

ಹೀಗೆ ಹೋಲ್ಡಿಂಗ್ ಮಾತಾಡುತ್ತಿದ್ದರು, ಒಬ್ಬ ದಾರ್ಶನಿಕನಂತೆ, ಒಬ್ಬ ತತ್ವಜ್ಞಾನಿಯಂತೆ.. ತಾನೊಬ್ಬ ಮಾಜಿ ಆಟಗಾರ ಅಥವಾ ಹಾಲಿ ವೀಕ್ಷಕ ವಿವರಣಕಾರ ಎಂಬುದನ್ನು ಮರೆತು ಮಾತಾಡುತ್ತಿದ್ದರು. ಕಲ್ಲಾಗಿ ಕೇಳುತ್ತಿದ್ದೆ.

ಎಬೋನಿ ರೈನ್ಫೋರ್ಡ್ -ಬ್ರೆಂಟ್ ದನಿಗೂಡಿಸಿದಳು – ‘ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯಲ್ಲಿ ಒಬ್ಬನೇ ಒಬ್ಬ ಕರಿಯ ಸದಸ್ಯನಿಲ್ಲ ಏಕೆ ? ಇಂಗ್ಲೆಂಡಿನಲ್ಲಿ ಹದಿನೆಂಟು ಕೌಂಟಿ ತಂಡಗಳಿವೆ, ಆ ಪೈಕಿ ಒಂದೇ ಒಂದು ತಂಡದ ನಾಯಕ ಕರಿಯನಿಲ್ಲ, ಏಕೆ ? ಇಂಗ್ಲೆಂಡ್ ತಂಡದಲ್ಲಿ ಬರೀ ಬಿಳಿಯರದೇ ಪಾರಮ್ಯ ಏಕೆ ? ಇಷ್ಟು ವರ್ಷವಾದರೂ ತಂಡದ ನಾಯಕನಾಗಲು ಒಬ್ಬನೇ ಒಬ್ಬ ಕರಿಯ ಸಿಗಲಿಲ್ಲ, ಏಕೆ ? ಹಾಗಾದರೆ ಕ್ರಿಕೆಟ್ ವರ್ಣಭೇದ ನೀತಿಯನ್ನು ಪೋಷಿಸುತ್ತಿದೆಯಾ? ಕ್ರೀಡೆಗೂ ಬಣ್ಣಕ್ಕೂ ಏನು ಸಂಬಂಧ ? ಇಂದಿಗೂ ವೆಸ್ಟ್ ಇಂಡೀಸ್ ತಂಡದ ಆಟಗಾರರನ್ನು ಅವರ ಬಣ್ಣದಿಂದ ಹೀಗಳೆಯುತ್ತಾರೆ, ಏಕೆ ? ಬೌಂಡರಿ ಲೈನಿನಲ್ಲಿ ನಿಂತವರನ್ನು ಪ್ರೇಕ್ಷಕರು ಬ್ಲ್ಯಾಕೀ ಅಂತ ಅಣಕಿಸುತ್ತಾರೆ. ಕ್ರಿಕೆಟ್ ನಮಗೆ ಕನಿಷ್ಠ ಮಾನವೀಯತೆಯನ್ನೂ ಕಲಿಸದಿದ್ದರೆ, ಅಂಥ ಕ್ರೀಡೆಯನ್ನೇಕೆ ಆಡಬೇಕು ?’

ಮೌನಕ್ಕೆ ಶರಣಾಗಿದ್ದೆ.

ವಿಂಡೀಸ್ ಕ್ರಿಕೆಟ್ ಆಟಗಾರರು ಎದುರಿಸಿದ ಗೋಳು, ಅಪಮಾನ, ಕಹಿ ಘಟನೆ, ಅನುಭವಿಸಿದ ಹಿಂಸೆ, ವಿಷಾದ, ಅಸಹಾಯಕತೆಯನ್ನು ಹೋಲ್ಡಿಂಗ್ ಹೇಳುತ್ತಿದ್ದರು. ಅಮೆರಿಕದ ಕರಿಯ ಓಟಗಾರರಾದ ಜಾನ್ ಕಾರ್ಲೋಸ್ ಮತ್ತು ಟೊಮ್ಮಿ ಸ್ಮಿತ್ ಅವರಿಗೇನಾಯಿತು? ದಶಕಗಳ ಕಾಲ ಅವರನ್ನು ಹೊರಗಿಡಲಾಯಿತು. ಹೋದೆಡೆಯೆಲ್ಲ ಅವರನ್ನು ಅವಮಾನಿಸಲಾಯಿತು. ಅಮೆರಿಕದ ಫುಟ್ಬಾಲ್ ಆಟಗಾರ ಕಾಲಿನ್ ಕೆಪೆರ್ನಿಕ್, ಕರಿಯರ ವಿರುದ್ಧದ ಪೊಲೀಸ್ ದಬ್ಬಾಳಿಕೆಯನ್ನು ಮೈದಾನದಲ್ಲಿ ಮಂಡಿಯೂರಿ ಪ್ರತಿಭಟಿಸಿದ ಎಂಬ ಕಾರಣಕ್ಕೆ, ಆತನನ್ನು ತಂಡದಿಂದ ಹೊರದಬ್ಬಲಾಯಿತು. ಇನ್ನೆಷ್ಟು ದಿನ ಈ ಹೀನ ಮನಸ್ಥಿತಿ ? ಕರಿಯರ ಬಗ್ಗೆ ಈಗಲಾದರೂ ಅಭಿಪ್ರಾಯ ಬದಲಾಗುವುದಾ?

ಹೋಲ್ಡಿಂಗ್ ಮಾತಿಗೆ ಯಾರಲ್ಲೂ ಉತ್ತರವಿರಲಿಲ್ಲ. ಆದರೆ ಅವರು ಮಾತು ಮಾತಿಗೆ ಪ್ರಶ್ನೆಗಳ ಬೌನ್ಸರ್ ಎಸೆಯುತ್ತಿದ್ದರು. ಹುಕ್ ಮಾಡುವ ಎದೆಗಾರಿಕೆ ಯಾರಲ್ಲೂ ಇರಲಿಲ್ಲ.

ನಿಮಗೆ ಮುಂದೊಮ್ಮೆ ವೆಸ್ಟ್ ಇಂಡೀಸ್ ಆಟಗಾರರು, ತಾವು ಕರಿಯರೆಂಬ ಕೀಳರಿಮೆ ಗೆದ್ದ ಕತೆ ಹೇಳಬೇಕು.