Thursday, 12th December 2024

ಕೂಲಿ ಕಾರ್ಮಿಕರನ್ನು ಬೀದಿಪಾಲು ಮಾಡಿದ ಸರಕಾರಗಳು!

ಅಭಿಮತ

ನಾಗಮಣಿ ಕೆ.ಎಂ.
ಕೋವಿಡ್-19 ಎಂಬ ಕರೋನಾ ವೈರಸ್ ಇಡೀ ಜಗತ್ತನ್ನೇ ತತ್ತರಿಸುವಂತೆ ಮಾಡಿದೆ. ಚೀನಾ ದೇಶದಲ್ಲಿ ಜನ್ಮ ತಾಳಿದ ಈ ಮಹಾ ಮಾರಿ ವೈರಸ್ ಕಳೆದ ಮೂರು – ನಾಲ್ಕು ತಿಂಗಳುಗಳಿಂದ ಇಡೀ ಪ್ರಪಂಚವನ್ನೇ ತನ್ನ ಮುಷ್ಟಿಯಲ್ಲಿ ಹಿಡಿದುಕೊಂಡು ಅಟ್ಟಹಾಸ ಮೆರೆಯುತ್ತಿದೆ.

ದೇಶದಿಂದ ದೇಶಕ್ಕೆ ಹರಡಿ ಈಗ ನಮ್ಮ ಭಾರತಕ್ಕೂ ಕಾಲಿಟ್ಟು, ಪ್ರತಿ ರಾಜ್ಯ, ಜಿಲ್ಲೆಗಳಿಗೂ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಜನರೆಲ್ಲರೂ ಭಯಭೀತರಾಗಿದ್ದಾರೆ. ಈ ಕರೋನಾ ಎಂಬ ಯಾರ ಕಣ್ಣಿಗೂ ಕಾಣದ ರಾಕ್ಷಸ ನಮ್ಮ ದೇಶದ, ರಾಜ್ಯದ ಸಾವಿರಾರು ಬಡ ಜನರಿಗೆ ಒಂದು ಹೊತ್ತು ಊಟಕ್ಕೂ ಗತಿಯಿಲ್ಲದಂತೆ ಮಾಡಿದೆ.

ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಗೋವಾ, ಮಹಾರಾಷ್ಟ್ರ, ತೆಲಂಗಾಣ ಮತ್ತು ಹೈದರಾಬಾದ್ ರಾಜ್ಯ ಸರಕಾರಗಳು ಮಾನವೀಯತೆಯನ್ನು ಮರೆತು ನಮ್ಮ ಕರ್ನಾಟಕದ ಕೂಲಿ ಕಾರ್ಮಿಕರನ್ನು ತಮ್ಮ ರಾಜ್ಯಗಳಿಂದ ಹೊರ ಹಾಕಿದ್ದಾರೆ. ಬೆಳಗಾವಿ, ರಾಯಚೂರು, ಕೊಪ್ಪಳ, ಬೀದರ್‌ಗಳಂತಹ ಜಿಲ್ಲೆಗಳಿಂದ ವಲಸೆ ಹೋಗಿ, ಹಲವಾರು ವರ್ಷಗಳಿಂದ ದಿನಕೂಲಿ ಮಾಡಿ ಜೀವನ ನಡೆಸುತ್ತಿದ್ದ ಕಾರ್ಮಿಕರನ್ನು ಈ ನೆರೆ ರಾಜ್ಯಗಳು ಯಾವುದೇ ಕರುಣೆ ಮತ್ತು ಮಾನವೀಯತೆಯಿಲ್ಲದೆ ಹೊರದೂಡಿದ್ದಾರೆ. ಐದಾರು ದಿನಗಳಿಂದ ಊಟವಿಲ್ಲದೇ ಸುಮಾರು ನೂರರಿಂದ ನೂರೈವತ್ತು ಕಿಲೋ ಮೀಟರ್‌ಗಳಷ್ಟು ತಮ್ಮ ಪುಟ್ಟ ಕಂದಮ್ಮಗಳನ್ನು ಹೆಂಗಸರು ಕಂಕುಳಲ್ಲಿ ಹೊತ್ತು, ಗಂಡಸರು ಬ್ಯಾಗುಗಳನ್ನು ಹಿಡಿದುಕೊಂಡು ಅವರವರ ಗೂಡನ್ನು ಸೇರಲು ತಮ್ಮ ಪ್ರಾಣವನ್ನು ಬಿಗಿಹಿಡಿದ ನಿರಾಶ್ರಿತ ಜನರು ಯಾವುದೇ ವಾಹನಗಳಿಲ್ಲದೇ ನಡೆದುಕೊಂಡು ಬಂದು ನಮ್ಮ ರಾಜ್ಯಕ್ಕೆ ಕಾಲಿಡುತ್ತಿರುವ ಸಂಗತಿ ಹೃದಯ ಕಲುಕುವಂತೆ ಮಾಡಿದೆ.

ಈಗಾಗಲೇ ಕೇಂದ್ರ ಸರಕಾರ ದೇಶದ ಪ್ರತಿಯೊಬ್ಬ ಪ್ರಜೆಯ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆವಹಿಸಿ ಭಾರತವನ್ನು ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಸಾರಿಗೆ ಸಂಚಾರ ಸ್ತಬ್ಧವಾಗಿದೆ. ಹೋಟೆಲ್, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಐಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ. ಎಲ್ಲಾ ಅಂಗಡಿ ವಹಿವಾಟುಗಳು ಕೂಡ ನಿಂತುಹೋಗಿವೆ. ದೇಶ ಮತ್ತು ಪ್ರಪಂಚವೇ ಲಾಕ್ ಡೌನ್ ಆಗಿದೆ. ಯಾರೂ ಕೂಡ ಮನೆಯಿಂದ ಹೊರಬರಬಾರದೆಂದು ಕಠಿಣ ಆದೇಶ ಹೊರಡಿಸಿದ್ದರೂ ನಮ್ಮ ಜನರ ನಿರ್ಲಕ್ಷ್ಯತೆಯನ್ನು ಹತೋಟಿಯಲ್ಲಿಡಲು ಪೊಲೀಸ್ ಇಲಾಖೆಯು ಹಗಲು – ರಾತ್ರಿಯೆನ್ನದೆ ಕೆಲಸಮಾಡಿ ಕೇಂದ್ರ ಸರಕಾರದ ಆದೇಶವನ್ನು ಪಾಲಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಡೀ ವಿಶ್ವಸಮುದಾಯವೇ ಜಾತಿ, ಮತ, ಧರ್ಮಗಳನ್ನು ಮರೆತು ಕರೋನಾ ವಿರುದ್ಧ ಹೋರಾಡಲು ಒಂದಾಗಿರುವಾಗ ಗೋವಾ, ಮಹಾರಾಷ್ಟ್ರ, ಹೈದರಾಬಾದ್ ರಾಜ್ಯಗಳು ಮಾತ್ರ ಅಲ್ಲಿಂದ ಕನ್ನಡಿಗರನ್ನು ಹೊರ ಹಾಕುವ ಮೂಲಕ ಪ್ರಾದೇಶಿಕತೆಯನ್ನು ಮೆರೆಯುತ್ತಿರುವುದು ನಾಚಿಕೆಗೇಡಿನ ಸಂಗತಿ.

ಪ್ರವಾಸೋದ್ಯಮದ ಮೇಲೆ ನಡೆಯುತ್ತಿರುವ ಗೋವಾ, ಬೇರೆ ರಾಜ್ಯ ಮತ್ತು ಬೇರೆ ದೇಶಗಳಿಂದ ಪ್ರವಾಸಕ್ಕೆೆಂದು ಬರುತ್ತಿರುವ ಜನರಿಂದಲೇ ತನ್ನ ರಾಜ್ಯದ ಆರ್ಥಿಕತೆಯು ನಿಂತಿರುವುದೆಂದು ಮರೆತಹಾಗಿದೆ. ಅಲ್ಲಿನ ಕಟ್ಟಡಗಳನ್ನು ಕಟ್ಟಲು ಮಾತ್ರ ನಮ್ಮ ರಾಜ್ಯದ ಕಾರ್ಮಿಕರು ಬೇಕು ಎಂದಾದ ಮೇಲೆ ಅವರ ಆರೋಗ್ಯ ರಕ್ಷಣೆಯ ಜವಾಬ್ದಾಾರಿಯನ್ನೂ ಅಲ್ಲಿನ ಸರಕಾರ ಹೊರಬೇಕಲ್ಲವೇ?  ಸರಿ, ಯಾರೇ ಬಂದರೂ ನಾವು ಸ್ವಾಗತಿಸಿಕೊಳ್ಳುತ್ತೇವೆ ಎಂಬ ಉದಾರತೆ ಕರ್ನಾಟಕದ ಜನತೆಗೆ ಇದೆ. ಆದರೆ ಅವರನ್ನು ರಾಜ್ಯದಿಂದ ಹೊರಹಾಕುವಾಗ ಸಾರಿಗೆ ಸೌಲಭ್ಯಗಳನ್ನು ಒದಗಿಸುವಷ್ಟು ಕನಿಷ್ಠ ಸೌಜನ್ಯವಿಲ್ಲವೇ ನೆರೆ ರಾಜ್ಯದ ಸರಕಾರದವರಿಗೆ ?

ವಿಶ್ವಸಮುದಾಯವೇ ಒಂದಾಗಿ ಕರೋನಾ ಎಂಬ ಕಂಟಕವನ್ನು ಎದುರಿಸಬೇಕೇ ವಿನಾಃ ನೀವು ನಮ್ಮವರಲ್ಲ ಎಂದು ರಾಜ್ಯದಿಂದ ಜನರನ್ನು ಹೊರತಳ್ಳುವುದನ್ನು ಮಾಡಿ, ವ್ಯವಸ್ಥೆೆ ಮತ್ತಷ್ಟೂ ಹದಗೆಟ್ಟು ಕೇಂದ್ರ ಸರಕಾರದ ಉದ್ದೇಶವನ್ನು ರಾಜ್ಯ ಸರಕಾರಗಳು ವಿಫಲಗೊಳಿಸಬಾರದು ಎನ್ನುವುದೇ ನಮ್ಮ ಕೋರಿಕೆ.