ವಿನುತಾ ಗೌಡ
ಒಂದೆರಡು ವಾರಗಳ ಹಿಂದಿನವರೆಗೂ ತೀರಾ ಒಣಒಣವಾಗಿ ಬಳಕೆಯಾಗುತ್ತಿದ್ದ ಸಾಂಕ್ರಾಮಿಕತೆ ಎಂಬ ಪದ ಈಗ ರಾಕ್ಷಸಾಕಾರವಾಗಿ ಜಗತ್ತಿನ ಮುಂದೆ ನಿಂತುಬಿಟ್ಟಿದೆ. ಏಕೆಂದರೆ ಕರೋನಾ ಎಂಬ ಮಹಾಮಾರಿ ಪ್ರಪಂಚದ ನಿದ್ರೆ ಕೆಡಿಸಿದೆ. ಶ್ರೀಮಂತ ಎನಿಸಿಕೊಂಡ ದೇಶಗಳನೇಕ ದೇಶಗಳು ಕರೋನಾದ ಮುಂದೆ ಮಂಡಿಯೂರಿ ತಲೆಬಾಗಿದೆ. ಇಟಲಿಯಂಥ ದೇಶ ಕೂಡಾ ಪರಿಸ್ಥಿತಿ ನಮ್ಮ ಕೈಮೀರಿದೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದೆ. ಚೀನಾದಂಥ ಚೀನಾವೇ ತನ್ನೆಲ್ಲಾ ಶಕ್ತಿಯನ್ನು ವೈರಸ್ ನಿಗ್ರಹಕ್ಕೆ ಬಳಸಿಕೊಳ್ಳುತ್ತಿದೆ. ಜಾಗತಿಕ ರಂಗದಲ್ಲಿ ಈಗ ವೈರಸ್ ಬಿಟ್ಟರೆ ಬೇರೇನೂ ಇಲ್ಲವೇನೋ ಎಂಬಂತೆ ಸ್ತಬ್ದವಾಗಿದೆ. ಜಗತ್ತಿನ ಹಿರಿಯಣ್ಣನ ಸ್ಥಾನಕ್ಕೆ ನಡೆಯುತ್ತಿದ್ದ ತೆರೆಮರೆಯ ಮಸಲತ್ತುಗಳು, ತೈಲ ವ್ಯಾಪಾರದ ಹೊಟ್ಟೆೆಯುರಿಗಳು, ಗಡಿ ವಿವಾದಗಳು, ಭಯೋತ್ಪಾದನೆಗಳೆಲ್ಲವೂ ವಿಶ್ವದ ಸಮಸ್ಯೆೆಗಳೇ ಅಲ್ಲವೇನೋ ಎಂಬಂತೆ ಮರೆಯಾಗಿಹೋಗಿವೆ. ಜಾಗತಿಕ ಭಯೋತ್ಪಾದಕನ ಸ್ಥಾನದಲ್ಲಿ ಸದ್ಯಕ್ಕೆ ನಿಂತಿರುವುದು ಈಗ ಕರೋನಾ ಎಂಬ ಅಪಾಯಕಾರಿ ವೈರಸ್ ಒಂದೇ.
ಹೀಗೆ ಶ್ರೀಮಂತ-ಬಡ ದೇಶಗಳೆಲ್ಲವನ್ನೂ ಒಂದೇ ತಟ್ಟೆಯಲ್ಲಿಟ್ಟ ಕರೋನಾಕ್ಕೆ ಭಾರತವೂ ಹೊರತಲ್ಲ. ಆದರೆ ಉಳಿದ ದೇಶಗಳ ಪರಿಸ್ಥಿತಿಯನ್ನು ತುಲನೆ ಮಾಡಿದರೆ ಕರೋನಾ ಬಿಕ್ಕಟ್ಟಿನಲ್ಲಿ ವಿಜಯದತ್ತ ದಾಪುಗಾಲು ಹಾಕುತ್ತಿರುವುದು ಭಾರತವೇ. ವಿಶಾಲ ಭೂಭಾಗದ, ದಟ್ಟ ಜನಸಾಂದ್ರತೆಯ ದೇಶವೊಂದು ವೈರಸನ್ನು ಎದುರಿಸುವುದಕ್ಕೂ ಯೂರೋಪಿನ ದೇಶವೊಂದು ವೈರಸನ್ನು ಎದುರಿಸುವುದಕ್ಕೂ ವ್ಯತ್ಯಾಸವಿದೆ. ಸವಾಲುಗಳು ಇಲ್ಲಿ ಅಡಿಗಡಿಗೆ ಎದುರಾಗುತ್ತವೆ. ಅಂಥ ಪರಿಸ್ಥಿತಿಯಲ್ಲೂ ಭಾರತ ಸವಾಲುಗಳನ್ನು ಮೆಟ್ಟಿನಿಲ್ಲಲು ಪ್ರಯತ್ನಪಡುತ್ತಿವೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಕರೆಯಂತೆ ಸ್ವಯಂ ಘೋಷಿತ ಕರ್ಫ್ಯೂಗೆ ದೇಶ ಸ್ಪಂದಿಸಿದ ರೀತಿಯೇ ಅದಕ್ಕೆ ಸಾಕ್ಷಿ. ಇಟಲಿಯಂಥ ದೇಶ ಸಾಂಕ್ರಾಮಿಕ ರೋಗ ನಮ್ಮನ್ನು ಕೊಲ್ಲುತ್ತಿದೆ ಎನ್ನುತ್ತಿರುವಾಗ ಭಾರತ ದೃಢವಾಗಿ ನಿಂತು ಸೋಂಕು ಹರಡದಂತೆ ಮುನ್ನಚ್ಚೆೆರಿಕೆ ಕೈಗೊಂಡ ನಿಟ್ಟಿನಲ್ಲಿ ಸಿಕ್ಕ ಮೊದಲ ಯಶಸ್ಸು ಎಂದು ಅದನ್ನು ಬಣ್ಣಿಸಿದರೆ ತಪ್ಪಾಗಲಾರದು. ಅದಕ್ಕೆ ಕಾರಣಗಳನ್ನು ಹುಡುಕಿದರೆ ಹಲವು ಸತ್ಯಗಳು ಗೋಚರವಾಗುತ್ತವೆ. ಏಕೆಂದರೆ ಭಾರತದಲ್ಲಿ ಕಳೆದ ಎರಡು ದಶಕಗಳಿಂದ ಸ್ಥಿತಿಗತಿಗಳು ಬದಲಾಗುತ್ತಿವೆ. ಆರೋಗ್ಯ ಪ್ರಜ್ಞೆ ಬೆಳೆಯುತ್ತಿದೆ. ಜನರ ವೈಯಕ್ತಿಕ ಆದಾಯದಲ್ಲಿ ಹೆಚ್ಚಳ, ಶಿಕ್ಷಣದ ಸುಧಾರಣೆಯ ಜತೆಗೆ ಉತ್ತಮ ಆರೋಗ್ಯವೂ ಬೇಕೆಂಬುದರ ಅರಿವು ಪಾಶ್ಚಾತ್ಯ ದೇಶಗಳಂತೆ ಭಾರತದಲ್ಲೂ ಆಗುತ್ತಿದೆ. ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ಆ ಅರಿವು ಮತ್ತಷ್ಟು ಹೆಚ್ಚಾಗಿದೆ ಎಂಬುದನ್ನೂ ನಾವು ಒಪ್ಪಿಕೊಳ್ಳಬೇಕು. ಅವರ ಎರಡೂ ಅವಧಿಗಳ ಆಡಳಿತಾವಧಿಗಳು ಮತ್ತು ಅದಕ್ಕೂ ಹಿಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನ ಅವಧಿಯಲ್ಲಿ ಅವರ ಆರೋಗ್ಯ ನೀತಿಗಳನ್ನು ಗಮನಿಸಿದರೆ ಅದು ತಿಳಿಯುತ್ತದೆ. ಅವರ ಅವಧಿಯಲ್ಲಿ ಸುಸ್ಥಿರ ಅಭಿವೃದ್ಧಿಯ ಗುರಿಯಲ್ಲಿ ಆರೋಗ್ಯ ಮತ್ತು ಅಭಿವೃದ್ಧಿಯು ನೇರಾನುಪಾತದಲ್ಲಿರುವುದನ್ನು ನೋಡಬಹುದು.
ಕೆಲ ದಶಕಗಳ ಹಿಂದೆ ಸಾವಿನ ದೇಶದಲ್ಲಿ ಜನನ-ಮರಣ ಅನುಪಾತಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದವು. ಅದು ಈಗ ಮರಣ ಪ್ರಮಾಣದ ಸಂಖ್ಯೆ ಇಳಿಮುಖವಾಗಿದೆ. 1990ರಲ್ಲಿ ದೇಶದಲ್ಲಿ ಶೇ.40ರಷ್ಟಿದ್ದ ತಾಯಿ ಮತ್ತು ಮಗುವಿನ ಸಾವಿನ ಪ್ರಮಾಣವು ಜಾಗತಿಕ ಮಟ್ಟದಲ್ಲಿ ತೀರಾ ಹೆಚ್ಚಿತ್ತು. ಆದರೆ 2015ರ ಹೊತ್ತಿಗೆ ಈ ಪ್ರಮಾಣ ಇಳಿಮುಖಗೊಂಡಿವೆ. ಅದಕ್ಕೆ ವೇಗವನ್ನು ಕೊಟ್ಟವರು ನರೇಂದ್ರ ಮೋದಿಯವರು. ಅಲ್ಲದೆ ಅವರ ಅವಧಿಯಲ್ಲಿ ಪರಿಸರ ನೈರ್ಮಲ್ಯ, ಮಕ್ಕಳ ಪೌಷ್ಟಿಕತೆ, ಸಾಮಾಜಿಕ ಆರೋಗ್ಯ, ಸಮರ್ಪಕ ಆಹಾರದ ಕಡೆಗೆ ಕೊಟ್ಟ ಹೆಚ್ಚಿನ ಗಮನಗಳೆಲ್ಲವೂ ದೇಶದ ಆರೋಗ್ಯದ ಅಸಮಾನತೆ, ಬಡತನ ಮತ್ತು ಶಿಶು ಮರಣ ಪ್ರಮಾಣವನ್ನು ನಿವಾರಣೆ ಮಾಡುತ್ತಾ ಬಂದಿದೆ. ಗ್ರಾಮೀಣ ಮಹಿಳೆಯರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ, ಉತ್ತಮ ಆರೋಗ್ಯ ಮತ್ತು ಸಾಕ್ಷರತೆ ಬಗ್ಗೆ ಜಾಗೃತಿಗಳು ಕರೋನಾ ಪ್ರಕರಣದ ಜಾಗೃತಿಗೂ ಕಾರಣವಾಗಿವೆ. ಕೆಲವು ಅಂಕಿ ಅಂಶಗಳನ್ನು ನೋಡಿದರೂ ಅದು ತಿಳಿಯುತ್ತದೆ. ಇತ್ತೀಚಿನ ಕೆಲ ದಶಕಗಳಲ್ಲಿ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಸೇವೆಗಳ ಪದ್ಧತಿ ಮತ್ತು ಗ್ರಾಮೀಣ ಆರೋಗ್ಯ ಮಿಷನ್‌ನ ಪರಿಣಾಮವಾಗಿ ಹಲವು ಸಾಂಕ್ರಾಾಮಿಕ ರೋಗಗಳ ನಿಯಂತ್ರಣದಲ್ಲಿ ಸಕಾರಾತ್ಮಕ ಫಲಿತಾಂಶ ಸಿಕ್ಕಿದೆ. ಅದರಲ್ಲಿ ಏಡ್‌ಸ್ ನಿಯಂತ್ರಣ ಯೋಜನೆ ಉತ್ತಮ ಫಲವನ್ನೇ ನೀಡಿದೆ. ಪೊಲೀಯೋ ಸಂಪೂರ್ಣ ಮುಕ್ತವಾಗಿದ್ದು ಇನ್ನೊೊಂದು ಮಹತ್ವದ ಸಾಧನೆ. ಕುಷ್ಟ ರೋಗ ನಿರ್ಮೂಲನೆಯಲ್ಲಿ ಸಮರ್ಪಕ ಕೆಲಸವಾಗಿದೆ. ವಿಷಮ ಶೀತ ಜ್ವರ ಗಣನೀಯವಾಗಿ ಕಡಿಮೆಯಾಗಿದೆ. ಆನೆ ಕಾಲು ರೋಗದ ಹೊಸ ಪ್ರಕರಣಗಳು ತೀರಾ ಕಡಿಮೆಯಾಗಿದೆ. ಮಲೇರಿಯಾ ಕೂಡಾ ಗಣನೀಯವಾಗಿ ಇಳಿಕೆಯಾಗಿದೆ. ಇತ್ತೀಚಿನ ದಶಕಗಳಲ್ಲಿ ಇವುಗಳ ನಿರ್ಮೂಲನೆಗೆ ಕೈಗೊಳ್ಳಲಾದ ಪ್ರಯತ್ನಗಳು ಗಮನ ಸೆಳೆಯುವಂತದ್ದು. ಡೆಂಗ್ಯೂ, ಚಿಕನ್ ಗುನ್ಯಾದಂತಹ ಹೊಸ ಕಾಯಿಲೆಗಳು ಕಾಣಿಸಿಕೊಂಡರೂ ಸಾವಿನ ಪ್ರಮಾಣ ತೀರಾ ಕಡಿಮೆಯಿದೆ. ಮಕ್ಕಳನ್ನು ಕಾಡುವ ಕಾಲರ, ಅತಿಸಾರ ಮತ್ತು ಉಸಿರಾಟ ಸಂಬಂಧಿ ಕಾಯಿಲೆಗಳು ವಿರಳವಾಗಿವೆ. ಈ ಎಲ್ಲಾ ಸಾಂಕ್ರಾಮಿಕ ರೋಗಗಳನ್ನು ಒಟ್ಟಾಾಗಿ ಪರಿಗಣಿಸಿದರೂ ಇವುಗಳಿಂದ ಸಂಭವಿಸಬಹುದಾದ ಸಾವಿನ ಸಂಖ್ಯೆ ಶೇ. 30ಕ್ಕಿಿಂತ ಕಡಿಮೆಯಿದೆ.
ಆದರೆ ಈಗ ಕರೋನಾ ವೈರಸ್‌ನಿಂದ ಹರಡುತ್ತಿರುವ ಸಾಂಕ್ರಾಮಿಕ ರೋಗದಿಂದ ಹಾಗೂ ಈ ಕಾಯಿಲೆಗೆ ಔಷಧಿಯು ಸಂಶೋಧನಾ ಹಂತದಲ್ಲಿರುವುದರಿಂದ ಸಾವು ನೋವುಗಳಿಂದ ಇಡೀ ವಿಶ್ವವೇ ಆರೋಗ್ಯ ತುರ್ತುಪರಿಸ್ಥಿತಿಗೊಳಗಾಗಿ ತತ್ತರಿಸಿದೆ. ಈ ಸೋಂಕಿನ ನಿರ್ವಹಣೆ ಅತ್ಯಂತ ಕಷ್ಟವಾಗಿದ್ದು, ಸೋಂಕು ಹರಡುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಂತೆ ಸೇವಾ ಪೂರೈಕೆಯ ಸಂಖ್ಯೆೆ ಕಡಿಮೆಯಾಗುತ್ತದೆ. ಇಂಥಾ ಪರಿಸ್ಥಿತಿಯನ್ನು ಎದುರಿಸುವುದು ಎಂಥಾ ವ್ಯವಸ್ಥೆಗಾದರೂ ಒಂದು ಸವಾಲು. ಭಾರತದಂಥ ದೇಶಕ್ಕೆ ಅದು ಇನ್ನೂ ಕಷ್ಟಕರವಾದುದ್ದೇ. ಆದರೆ ಭಾರತ ಅದನ್ನು ನಿಭಾಯಿಸುತ್ತಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಏಕೆಂದರೆ ಭಾರತದಂಥ ದೇಶಕ್ಕೆ ಇದು ಕೇವಲ ಒಂದು ರೋಗ ಮಾತ್ರವಲ್ಲ. ಇಲ್ಲಿನ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆೆಯ ಸಂರಚನೆಯೇ ಹಾಗಿದೆ. ಏಕೆಂದರೆ ಸರಕಾರ ಜನರ ಯೋಗಕ್ಷೇಮವನ್ನೇ ಪ್ರಧಾನವಾಗಿಟ್ಟುಕೊಂಡರೂ ಇದರಿಂದ ಬಳಲುತ್ತಿರುವವರಲ್ಲಿ ಬಡವ, ಮಧ್ಯಮ, ಮೇಲ್ವರ್ಗದ ಜನರೆಲ್ಲರೂ ಇದ್ದಾರೆ. ಚಿಕಿತ್ಸೆ ಸಿಗದೆ ಸಾಯುವವರು, ನಿರ್ಬಂಧಗಳಿಂದ ಬಳಲುವವರು, ಎಲ್ಲವೂ ಇದ್ದರೂ ಔಷಧಗಳಿಲ್ಲದೆ ಬಳಲುವವರು ಮತ್ತು ಪ್ರತಿರೋಧಕ ಶಕ್ತಿಯ ಕೊರತೆಯಿಂದ ತೊಂದರೆಗೊಳಗಾಗುವವರೆಲ್ಲರನ್ನೂ ಸರಿದೂಗಿಸುವ ಗುರುತರವಾದ ಹೊಣೆಗಾರಿಕೆ ಭಾರತದಂಥ ಬೃಹತ್ ದೇಶಕ್ಕಿದೆ. ಇಷ್ಟೆೆಲ್ಲಾ ಒತ್ತಡವನ್ನು ದೇಶದ ಆಡಳಿತ ವ್ಯವಸ್ಥೆ ಹೊತ್ತು ನಡೆಯುತ್ತಿದೆ. ಕೆಲವು ದೇಶಗಳಿಗೆ ಭವಿಷ್ಯದಲ್ಲಿ ಯುವಕರು ಉಳಿದರೆ ಸಾಕು ಎನ್ನುವಂಥ ಮನಸ್ಥಿತಿಯನ್ನು ಈ ವೈರಸ್ ಹುಟ್ಟುಹಾಕಿದ್ದರೆ ಭಾರತಕ್ಕೆ ಎಲ್ಲವೂ ತಲೆನೋವಿನ ಸಂಗತಿಗಳೇ. ಅದಕ್ಕೆ ಭಾರತ ಇಟ್ಟ ಮೊದಲ ಹೆಜ್ಜೆಯೇ ಪ್ರಧಾನಮಂತ್ರಿಗಳ ಮನವಿ! ನೀತಿ ನಿಯಮಗಳಿಗೆ ನಾಗರಿಕರು ಸ್ಪಂದಿಸಿ ಕೈಜೋಡಿಸಿದರೆ ಮಾತ್ರ ಭಾರತವನ್ನು ವೈರಸ್‌ನಿಂದ ಉಳಿಸಬಹುದು ಎಂಬ ಚಿಂತನೆ ಭಾರತವನ್ನು ಇಂದು ಇಂಥ ಗಂಭೀರ ಪರಿಸ್ಥಿಿತಿಯಲ್ಲಿಯೂ ಹೀಗಿಟ್ಟಿದೆ. ಮತ್ತೊೊಂದು ಇಟಲಿಯಾಗುವುದನ್ನು ತಡೆದಿದೆ. ವೈರಸ್ ದಾಳಿಯೇ ಇರಲಿ, ಶಸ್ತ್ರ ದಾಳಿಯೇ ಇರಲಿ, ಭಾರತ ಒಂದಾಗುತ್ತದೆ ಎಂಬ ಪಾಠವನ್ನು ಕರೋನಾ ತಿಳಿಸುತ್ತಿದೆ. ದೇಶ ಒಂದಾದರೆ ಗೆಲುವು ದೇಶದ್ದೇ ಎಂಬುದಕ್ಕೂ ನಮ್ಮಲ್ಲಿ ಉದಾಹರಣೆಗಳಿವೆ.
ಹಾಗಾದರೆ ವೈರಸ್ ದಾಳಿಯಲ್ಲಿ ಸಾಮಾನ್ಯರ ಪಾತ್ರವೇನು? ದೇಶದ ಆಡಳಿತವೇನೋ ವೈರಸನ್ನು ಎದುರಿಸಲು ಸಜ್ಜಾಗಿದೆ. ಸದ್ಯದ ಪರಿಸ್ಥಿತಿಯನ್ನು ಪ್ರಧಾನಿಯವರು ಲಕ್ಷಾಂತರ ಜನರ ಸಾವುನೋವಿಗೆ ಕಾರಣವಾದ ಪ್ಲೇಗ್, ಕಾಲರಾಕ್ಕೆ ಹೋಲಿಸಿ ನಾಗರಿಕರ ಸಹಕಾರ ಕೇಳಿದ್ದಾರೆ. ಸೇವಾ ಕಾರ್ಯದಲ್ಲಿ ತೊಡಗಿರುವವರಿಗೆ ನೈತಿಕ ಸ್ಥೈರ್ಯ ತುಂಬಲೂ ಹೇಳಿದ್ದಾರೆ. ಆದರೆ ಸಮಾಜ ಅದಕ್ಕೆ ಸ್ಪಂದಿಸದಿದ್ದರೆ ಏನು ಮಾಡಿದರೆ ತಾನೇ ಏನು ಬಂತು? ಸದ್ಯದ ಗಂಭೀರತೆ ಅರಿವಾಗುವುದು ಇಲ್ಲೇ. ಮನೆ ಬಿಟ್ಟು ಹೊರಗೆ ಬರದಿರಿ ಎಂಬ ಸರಕಾರದ ಸೂಚನೆಯನ್ನು ನಾವೆಷ್ಟು ಪಾಲಿಸುತ್ತಿದ್ದೇವೆ ಎಂದು ಅವಲೋಕನ ಮಾಡಿಕೊಳ್ಳಬೇಕಿದೆ. ಮಹಾನಗರಗಳಲ್ಲಿರುವವರು ಊರಿಗೆ ತೆರಳಬೇಡಿ ಎಂದರೂ ತುರ್ತುಪರಿಸ್ಥಿತಿಯನ್ನು ರಜೆಯ ಮೂಡಿನಲ್ಲಿ ಕಳೆಯಲು ಹೋದವರೆಷ್ಟೋ ಮಂದಿ! ಸರಕಾರದ ಆದೇಶವನ್ನು ಪಾಲಿಸದೆ ಅನಂತರ ಸರಕಾರವನ್ನು ದೂಷಿಸುವ ಜನರೂ ಇಂಥವರೇ. ಸರಕಾರಗಳಿಗೆ, ನಾಗರಿಕರಿಗೆ ಅರಿವು ಮೂಡಿಸುವುದು ಸೋಂಕು ಹರಡದಂತೆ ಕ್ರಮ ತೆಗೆದುಕೊಳ್ಳುವುದು ಒಂದಾದರೆ, ಸೋಂಕಿತರನ್ನು ನಿಭಾಯಿಸುವುದೂ ಅಷ್ಟೇ ಸವಾಲಿನ ಕೆಲಸ ಎಂಬುದನ್ನು ಪ್ರತಿಯೊಬ್ಬ ನಾಗರಿಕನೂ ಅರಿತುಕೊಳ್ಳಬೇಕಿದೆ. ಬೇಕಾಗಿರುವ ಹೇರಳ ಮಾನವ ಸಂಪನ್ಮೂಲ, ಹಣಕಾಸಿನ ನೆರವು, ಕೌಶಲ್ಯಯುತ ಸಿಬ್ಬಂದಿ, ಗುಣಮಟ್ಟದ ಚಿಕಿತ್ಸೆ, ಸಮರ್ಪಕತೆಯ ಜತೆಗೆ ಆರೋಗ್ಯ ಸೇವೆ ಮತ್ತು ಔಷಧಗಳು, ಅಗತ್ಯ ವಸ್ತುಗಳನ್ನು ಸರಕಾರ ವ್ಯವಸ್ಥೆೆ ಮಾಡಲು ಮುಂದಾಗಿರುವಾಗ ಪ್ರಜೆಗಳಾದ ನಾವು ಸರಕಾರ ಹೇಳಿದಂತೆ ಕೇಳಬಾರದೆ? ಸರಕಾರದ ನಿಯಮಗಳಿಗೆ ಬದ್ಧರಾಗಿ ನಡೆದರೆ ವೈರಸ್ ಅನ್ನು ಎದುರಿಸಬಹುದು. ಮತ್ತು ಸರಕಾರ ವಿಧಿಸುವ ನಿಯಮಗಳನ್ನು ನಾವು ಪಾಲಿಸುವವರೆಗೂ ನಾವು ಸುರಕ್ಷಿತ ಎಂಬ ಪ್ರಾಥಮಿಕ ಪಾಠವನ್ನೂ ನಾವು ತಿಳಿದಿರಬೇಕು. ಒಂದನ್ನಂತೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ವೈರಸ್ ಅನ್ನು ಎದುರಿಸಬೇಕಾದವರು ಕೇವಲ ಸರಕಾರವಲ್ಲ, ನಾವು, ನೀವು ಮತ್ತು ಎಲ್ಲರೂ.