Sunday, 15th December 2024

ಚೀನಾ ಇಂತಹದ್ದೇ ಪ್ರಮಾದವನ್ನು 62 ವರ್ಷಗಳ ಹಿಂದೆಯೇ ಮಾಡಿತ್ತು

ಕರೋನಾವೈರಸ್ ಭೀತಿಯಲ್ಲಿ ಇಡೀ ವಿಶ್ವವೇ ತತ್ತರಿಸಿ ಕ್ವಾರಂಟೈನ್ ಆಗಿರುವ ಈ ದಿನಗಳಲ್ಲಿ, ಈ ಭೀಕರ ಸೋಂಕಾಣುವಿನ ತವರುಮನೆ ಚೀನಾಕ್ಕೆ ಎಲ್ಲರೂ ಹಿಡಿಶಾಪ ಹಾಕುತ್ತಿರುವ ಈ ದಿನಗಳಲ್ಲಿ, ಕರೋನ ವೈರಸನ್ನು ನಿರ್ಮಿಸಿದ್ದು ಚೀನಾವಂತೆ, ಇದೊಂದು ಜೈವಿಕ ಸಮರವಂತೆ, ಪ್ರಪಂಚದ ಮೇಲೆ ತನ್ನ ಏಕಸ್ವಾಮ್ಯವನ್ನು ಸ್ಥಾಪಿಸಲು ಚೀನಾ ಹೂಡಿದ ಮಹಾತಂತ್ರವಂತೆ ಮುಂತಾದ ತರ್ಕ-ಕುತರ್ಕಗಳಲ್ಲಿ ನಿರತವಾಗಿರುವ ಈ ದಿನಗಳಲ್ಲಿ, ನಾನು ನನ್ನ ಪಾಡಿಗೆ ಮೂರ್ನಾಲ್ಕು ದಿನಗಳಿಂದ ಒಂದು ಪುಸ್ತಕದೊಳಗೆ ಹೂತು ಹೋಗಿದ್ದೆ. ಆ ಪುಸ್ತಕದ ಹೆಸರು Tombstone : The Great Chinese Famine 1958 – 1962. ಅದನ್ನು ಬರೆದವ ಚೀನಾದ ಸುದ್ದಿಸಂಸ್ಥೆಯಲ್ಲಿ ಬಹಳ ವರ್ಷಗಳ ಕಾಲ ವರದಿಗಾರನಾಗಿ ಕೆಲಸ ಮಾಡಿದ ಪತ್ರಕರ್ತ ಯಾಂಗ್ ಜಿಶೆಂಗ್.

ಕರೋನಾ ವೈರಸ್ ಇಡೀ ವಿಶ್ವವನ್ನು ಕಲ್ಲವಿಲಗೊಳಿಸಿರಬಹುದು, ಇದರಿಂದ ಜಗತ್ತಿಗೆ ಜಗತ್ತೇ ಸ್ತಬ್ಧವಾಗಿರಬಹುದು, ಆದರೆ ಯಾಂಗ್ ಹೇಳುವ ಕತೆಗಳನ್ನು ಕೇಳಿದರೆ, ಕರೋನಾವೈರಸ್ ಚೀನಾದಲ್ಲಿ ಮಾಡಿದ ಅವಾಂತರ ಏನೇನೂ ಅಲ್ಲ. ಅದಕ್ಕಿಂತ ಲಕ್ಷಾಂತರ ಪಟ್ಟು ಭೀಕರವಾದ ಆಘಾತ ಅಥವಾ ದುಪಳಿಯನ್ನು, ಆ ದೇಶ ಸುಮಾರು ಇಂದಿಗೆ ಅರವತ್ತೆರಡು ವರ್ಷಗಳ ಹಿಂದೆಯೇ ಅನುಭವಿಸಿತ್ತು. ಕರೋನಾ ಮಾನವ ನಿರ್ಮಿತ ಹೌದೋ ಅಲ್ಲವೋ ಎಂಬ ಬಗ್ಗೆ ವಾದ – ವಿವಾದಗಳು ನಡೆಯುತ್ತಲೇ ಇವೆ. ಆದರೆ ಅರವತ್ತೆರಡು ವರ್ಷಗಳ ಹಿಂದೆ ಘಟಿಸಿದ ಆ ಮಹಾಕ್ಷಾಮ ಮಾತ್ರ ನೂರಕ್ಕೆ ನೂರು ಮಾನವ ನಿರ್ಮಿತ, ಚೀನಾ ನಿರ್ಮಿತ ಮತ್ತು ಆ ದೇಶದ ಸರಕಾರದ ಒಂದು ಕೆಟ್ಟ ನಿರ್ಧಾರದ ಫಲ.

ಕರೋನಾದಿಂದ ಚೀನಾದಲ್ಲಿ ಸತ್ತವರು ಕೇವಲ ಮೂರು ಕಾಲು ಸಾವಿರ ಮಂದಿ. ಆದರೆ ಅಂದಿನ ಮಹಾಕ್ಷಾಮದಲ್ಲಿ 1958 ರಿಂದ 1962ರವರೆಗಿನ ನಾಲ್ಕು ವರ್ಷಗಳಲ್ಲಿ ಸತ್ತವರು ಸುಮಾರು ನಾಲ್ಕು ಕೋಟಿ ಐವತ್ತು ಲಕ್ಷ ಮಂದಿ. ಭೀಕರ ಕ್ಷಾಮ ತಲೆದೋರಿದ ಚೀನಾದ ಮಧ್ಯ ಪ್ರಾಂತವಾದ ಹೆನಾನ್ ನಲ್ಲಿ ನಾಲ್ಕು ತಲೆ ತಲೆಮಾರುಗಳ ಜನ ಹೇಳಹೆಸರಿಲ್ಲದೇ ಸರ್ವನಾಶವಾದರು. ಆ ಪೈಕಿ ಯಾಂಗ್ ತಂದೆಯೂ ಸೇರಿದ್ದ. ಭೀಕರ ಕ್ಷಾಮ ಸಂಭವಿಸಿದಾಗ ಹದಿನೆಂಟು ವರ್ಷ ಯುವಕನಾಗಿದ್ದ ಯಾಂಗ್, ಸಾಕ್ಷಾತ್ ತನ್ನ ಕುಟುಂಬ ಹಸಿವಿನಿಂದ ವಿಲಿವಿಲಿ ಒದ್ದಾಡಿ ಸಾಯುವ ಹೃದಯವಿದ್ರಾವಕ ದೃಶ್ಯಗಳನ್ನು ಕಂಡು ವಿಹ್ವಲಗೊಂಡವ.

ಈ ಮಹಾ ಕ್ಷಾಮಕ್ಕೆ ಸಂಬಂಧಿಸಿದಂತೆ ಅಂದಿನಿಂದಲೇ ಯಾಂಗ್ ಮಾಹಿತಿ ಕಲೆ ಹಾಕಲಾರಂಭಿಸಿದ. ಮಹಾಕ್ಷಾಮದಲ್ಲಿ ಮಡಿದ ಸಾವಿರಾರು ಕುಟುಂಬಗಳ ಸದಸ್ಯರನ್ನು ಮಾತಾಡಿಸಿದ. ಸರಕಾರದ ನೂರಾರು ಅಧಿಕಾರಿಗಳನ್ನು ಸಂದರ್ಶಿಸಿದ. ಹೆನಾನ್ ಗೆ ಅನೇಕ ಸಲ ಭೇಟಿ ನೀಡಿದ. ಸರಕಾರಿ ದಾಖಲೆಗಳನ್ನು ರಹಸ್ಯವಾಗಿ ಸಂಗ್ರಹಿಸಿದ. ತನ್ನ ಕೆಲಸಗಳ ಮಧ್ಯೆಯೂ ಈ ಎಲ್ಲಾ ಕೆಲಸಗಳನ್ನು ಸುಮಾರು ಐವತ್ತು ವರ್ಷಗಳ ಕಾಲ ಒಂದು ತಪಸ್ಸಿನಂತೆ ಮಾಡಿದ. ಸುಮಾರು ಒಂದು ಕೋಟಿ ಪದಗಳಷ್ಟು ಸುದೀರ್ಘ ನೋಟ್ಸ್ ಮಾಡಿಕೊಂಡ. ಕೊನೆಯಲ್ಲಿ 2008ರಲ್ಲಿ ಸುಮಾರು 1208 ಪುಟಗಳ ಎರಡು ಸಂಪುಟಗಳನ್ನು ಪ್ರಕಟಿಸಲು ನಿರ್ಧರಿಸಿದ. ಅದರ ಫಲವೇ ಈ ಪುಸ್ತಕ – Tombstone.

ಆದರೆ ಚೀನಾದಲ್ಲಿ ಅದನ್ನು ಮುದ್ರಿಸಲು ಯಾವ ಪ್ರಕಾಶಕನೂ ಮುಂದೆ ಬರಲಿಲ್ಲ. ಕೊನೆಗೆ ಇದನ್ನು ಹಾಂಗ್ ಕಾಂಗ್ ನಲ್ಲಿ ಮುದ್ರಿಸಿದ. ಅಷ್ಟೊತ್ತಿಗೆ ಈ ಕೃತಿಯನ್ನು ಚೀನಾ ಸರಕಾರ ಮುಟ್ಟುಗೋಲು ಹಾಕಿತು. ಅದಾಗಿ ಎರಡು – ಮೂರು ವರ್ಷಗಳಲ್ಲಿ ಈ ಕೃತಿ ಜರ್ಮನ್, ಫ್ರೆಂಚ್ , ಇಂಗ್ಲಿಷ್ ಸೇರಿದಂತೆ ಜಗತ್ತಿನ ಹತ್ತಾರು ಭಾಷೆಗಳಿಗೆ ಅನುವಾದಗೊಂಡು, ಅಂತಾರಾಷ್ಟ್ರೀಯ ಸಮೂದಾಯದ ಮುಂದೆ ಚೀನಾದ ಮುಖವಾಡ ಕಳಚಿಬೀಳುವಂತೆ ಮಾಡಿತು. ಅರ್ಧ ಶತಮಾನ ಕಾಲ ಜಗತ್ತಿನ ಮುಂದೆ ಬಚ್ಚಿಟ್ಟಿದ್ದ ಸುಳ್ಳು ಬಹಿರಂಗವಾಯಿತು. ಚೀನಾ ಸರಕಾರ ಅದೆಂಥ ಚಿಲ್ಲರೆ ನಡೆ ಪ್ರದರ್ಶಿಸಿತೆಂದರೆ, ಆ ಮಹತ್ವದ ಕೃತಿಗಾಗಿ ಯಾಂಗ್ ಗೆ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯ ನಿಮನ್ ಫೆಲೋಶಿಪ್ ನೀಡಿ ಗೌರವಿಸಲು ಆಮಂತ್ರಿಸಿದಾಗ, ಅಲ್ಲಿಗೆ ಹೋಗಿ ಸ್ವೀಕರಿಸಲು ಅನುಮತಿ ನಿರಾಕರಿಸಿತು.

1957 ರ ಮಧ್ಯಭಾಗದಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ನಾಯಕ ಮಾವೋ ಝೆಡೊಂಗ್ ಗೆ ಅದ್ಯಾವನೋ ಒಂದು ಶುದ್ಧತಿಕ್ಕಲು ಸಲಹೆ ಕೊಟ್ಟ. ಚೀನಾ ಮಹಾನ್ ಕ್ರಾಂತಿ (Great Leap Forward ) ಮಾಡಬೇಕೆಂದರೆ ಅಥವಾ ಅಭಿವೃದ್ಧಿಯಲ್ಲಿ ಮಹಾ ಜಿಗಿತವನ್ನು ಕಾಣಬೇಕೆಂದರೆ , ದೇಶದಲ್ಲಿರುವ ಎಲ್ಲಾ ಗುಬ್ಬಚ್ಚಿಗಳನ್ನು ಸಾಯಿಸಬೇಕು! ಯಾಕೆಂದರೆ ಒಂದು ಗುಬ್ಬಚ್ಚಿ ಪ್ರತಿವರ್ಷ ಸರಾಸರಿ ನಾಲ್ಕೂವರೆ ಕೆಜಿ ಧಾನ್ಯ ಅಥವಾ ಕಾಳು – ಕಡಿಗಳನ್ನು ತಿನ್ನುತ್ತದೆ, ಅಂದರೆ ಹತ್ತು ಲಕ್ಷ ಗುಬ್ಬಚ್ಚಿಗಳನ್ನು ಸಾಯಿಸಿದರೆ, ಅವು ತಿನ್ನುವ ಅಕ್ಕಿ ಅಥವಾ ದವಸ – ಧಾನ್ಯಗಳು ಅರವತ್ತು ಸಾವಿರ ಮನುಷ್ಯರಿಗೆ ಆಹಾರವಾಗುತ್ತದೆ, ಈ ಗುಬ್ಬಚ್ಚಿಗಳನ್ನು ಸಾಯಿಸದಿದ್ದರೆ ನಿರೀಕ್ಷಿತ ಆರ್ಥಿಕ ಪ್ರಗತಿ ಸಾಧಿಸುವುದು ಸಾಧ್ಯವೇ ಇಲ್ಲ.

ದಿಢೀರನೆ ಮಹಾಕ್ರಾಂತಿ ಸಾಧಿಸುವ ತರಾತುರಿಯಲ್ಲಿದ್ದ ಮಾವೋಗೆ ಈ ಸಲಹೆ ಬಹಳ ಹಿಡಿಸಿತು. ಅಷ್ಟಕ್ಕೂ ಗುಬ್ಬಚ್ಚಿಗಳನ್ನು ಸಾಯಿಸುವುದು ಏನು ಮಹಾ ಕೆಲಸ ? ಆ ಅಂಗೈ ಗಾತ್ರದ ಪಕ್ಷಿಯನ್ನು ಸಾಯಿಸಿದರೆ ಆಗುವುದಾದರೂ ಏನು? ಆದರೆ ಹಾಗೆ ಮಾಡುವುದರಿಂದ ತಾನು ಅಂದುಕೊಂಡ ಮಹಾಕ್ರಾಂತಿಯನ್ನು ಶೀಘ್ರ ಸಾಧಿಸಿ, ದೇಶದ ಚರಿತ್ರೆಗೆ ಹೊಸ ಭಾಷ್ಯ ಬರೆಯಬಹುದು ಎಂದು ಯೋಚಿಸಿದ. ಗುಬ್ಬಚ್ಚಿಗಳ ಸಂತತಿಯನ್ನೇ ನಾಶ ಮಾಡುವುದರಿಂದ ಯಾರ ವಿರೋಧವೂ ಬರುವುದಿಲ್ಲ, ಅಲ್ಲದೇ ಅದಕ್ಕೆ ಹೆಚ್ಚು ಖರ್ಚು ತಗಲುವುದಿಲ್ಲ, ಆದರೆ ಅದರಿಂದ ಆಗುವ ಪರಿಣಾಮ ಮಾತ್ರ ಗಣನೀಯ ಎಂದು ಆತ ಯೋಚಿಸಿ ಆ ಸಲಹೆಯನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಿದ.

ಈ ಪ್ರಯುಕ್ತ 1958 ರ ಆರಂಭದಲ್ಲಿ ಮಾವೋ ಒಂದು ಕರೆ ಕೊಟ್ಟ – “ದೇಶಾದ್ಯಂತ ಗುಬ್ಬಚ್ಚಿಗಳನ್ನು ಕಂಡಲ್ಲಿ ಸಾಯಿಸಬೇಕು. ಗುಬ್ಬಚ್ಚಿಗಳನ್ನು ಕಂಡ ಕೂಡಲೇ ತಮಟೆ, ಜಾಗಟೆ ಹೊಡೆದು ಅವಗಳನ್ನು ಓಡಿಸಬೇಕು. ಅವುಗಳ ಗೂಡುಗಳನ್ನು ಕಿತ್ತು ಬಿಸಾಡಬೇಕು, ಅವುಗಳಿಗೆ ಕುಳಿತುಕೊಳ್ಳಲು ಬಿಡಬಾರದು, ಆಯಾಸದಿಂದ ಬಳಲಿ ಅವು ಸತ್ತು ಹೋಗಬೇಕು, ಇಲ್ಲವೇ ಕಂಡಲ್ಲಿ ಕಲ್ಲು ಹೊಡೆದು ಅಥವಾ ಗುಂಡಿಕ್ಕಿ ಸಾಯಿಸಬೇಕು. ಇನ್ನು ಆರು ತಿಂಗಳ ಅವಧಿಯಲ್ಲಿ ಚೀನಾದಿಂದ ಗುಬ್ಬಚ್ಚಿಗಳ ಸಂತತಿ ನಾಶವಾಗುವವರೆಗೂ ನಾವು ವಿರಮಿಸಕೂಡದು. ಈ ಪಕ್ಷಿಯ ಸಂತತಿಯನ್ನು ನಾವು ಸಂಪೂರ್ಣ ಅಳಿಸಿಹಾಕಲು ಯಶಸ್ವಿಯಾದರೆ, ನಾವು ಅಂದುಕೊಂಡ ಗುರಿಯನ್ನು ಎರಡು ವರ್ಷಗಳೊಳಗೆ ಸಾಧಿಸುತ್ತೇವೆ.”

ಈ ಉದ್ದೇಶಕ್ಕಾಗಿ ಮಾವೋ ಸರಕಾರಿ ಯಂತ್ರಗಳನ್ನು ಬಳಸಿಕೊಂಡ. ಮಿಲಿಟರಿಗೂ ಆದೇಶ ನೀಡಿದ. ಅದಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಿದ. ಮಹಾಕ್ರಾಂತಿಯ ಕನಸು ಕಾಣುತ್ತಿದ್ದ ಮಾವೋ, ಗುಬ್ಬಚ್ಚಿಗಳನ್ನು ಸಾಯಿಸುವ ಅಭಿಯಾನದಲ್ಲಿ ಮುಂದೆ ನಿಂತು ದೇಶದ ಜನರನ್ನು ಹುರಿದುಂಬಿಸಿದ. ಮಾವೋ ಮಾತನ್ನು ಜನ ಮಹಾಪ್ರಸಾದ ಎಂಬಂತೆ ಪಾಲಿಸಲಾರಂಭಿಸಿದರು. 1958ರಲ್ಲಿ ಚೀನಾದಲ್ಲಿ ಗುಬ್ಬಬ್ಬಚ್ಚಿಗಳು ಎಷ್ಟಿದ್ದವು ಎಂಬ ಬಗ್ಗೆ ನಿಖರ ಮಾಹಿತಿ ಇರಲಿಲ್ಲ. ಆದರೆ ಒಬ್ಬ ಪ್ರಜೆ ಪ್ರತಿ ದಿನದಂತೆ ಸತತ ಒಂದು ವರ್ಷದವರೆಗೆ ಆ ಪಾಪಚ್ಚಿ ಪಕ್ಷಿಯನ್ನು ಸಾಯಿಸಿದ ಪ್ರಮಾಣವನ್ನು ಲೆಕ್ಕ ಹಾಕಿದರೆ, ಚೀನಾದಲ್ಲಿ ಸುಮಾರು ನೂರು ಕೋಟಿ ಗುಬ್ಬಚ್ಚಿಗಳಿದ್ದರಬಹುದು ಎಂದು ಅಂದಾಜು ಹಾಕಲಾಯಿತು. ಗುಬ್ಬಚ್ಚಿಗಳೇ ತಮ್ಮ ಪ್ರಗತಿಗೆ ಅಡ್ಡಿಯಾಗಿವೆ ಎಂಬುದನ್ನು ಮನಗಂಡ ಜನರೂ ಮಾವೋನ ಅಣತಿಯಂತೆ ಸಿಕ್ಕಸಿಕ್ಕಲ್ಲಿ ಅವುಗಳನ್ನು ಸಾಯಿಸಲಾರಂಭಿಸಿದರು.

ಗುಬ್ಬಚ್ಚಿ ಮಾರಣಹೋಮಕ್ಕೆ ಕರೆಕೊಟ್ಟಾಗ ಚೀನಾದಲ್ಲಿ ಜನ ಆ ಪಕ್ಷಿಯನ್ನು ಸಾಯಿಸುವುದನ್ನೇ ಕಾಯಕ ಮಾಡಿಕೊಂಡರು. ಎಲ್ಲರ ಮನೆಗಳ ಮೇಲೂ ಕೆಂಬಾವುಟ ಹಾರಾಡತೊಡಗಿದವು. ತಮ್ಮ ಮನೆ ಗುಬ್ಬಿಗಳಿಂದ ಮುಕ್ತ ಎಂದು ತಾವೇ ಘೋಷಿಸಿಕೊಳ್ಳಲಾರಂಭಿಸಿದರು. ಅಲ್ಲದೇ ಇಂದು ತಾವು ಸಾಯಿಸಿದ ಗುಬ್ಬಚ್ಚಿಗಳಿಷ್ಟು ಎಂದು ಲೆಕ್ಕ ಕೊಡಲಾರಂಭಿಸಿದರು. ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಗುಬ್ಬಚ್ಚಿಗಳನ್ನು ರೈಫಲ್ ಗಳಿಂದ ಸಾಯಿಸುವ ತರಬೇತಿ ನೀಡಲಾಯಿತು. ಪ್ರತಿ ವಿದ್ಯಾರ್ಥಿಯೂ ಆ ದಿನ ತಾನು ಸಾಯಿಸಿದ ಗುಬ್ಬಚ್ಚಿಗಳೆಷ್ಟು ಎಂದು ಲೆಕ್ಕ ಕೊಡಬೇಕಾಗುತ್ತಿತ್ತು. ನನ್ಯಾಂಗ್ ಎಂಬ ಪ್ರಾಂತದಲ್ಲಿದ್ದ ಬಾಲಕಿಯರು ಇಂದು ತಾವು ಒಂದು ಲಕ್ಷದ ತೊಂಬತ್ತು ಸಾವಿರ ಗುಬ್ಬಚ್ಚಿಗಳನ್ನು ಸಾಯಿಸಿದ್ದೇವೆಂದು ಲೆಕ್ಕ ನೀಡಿದ್ದರು.

ಪ್ರತಿದಿನ ಲಕ್ಷ ಲಕ್ಷ ಸಂಖ್ಯೆಯಲ್ಲಿ ಗುಬ್ಬಚ್ಚಿಗಳ ಮಾರಣಹೋಮ ನಡೆಯುತ್ತಿದ್ದರೆ, ಮಾವೋ ಖುಷಿಯಿಂದ ಬೀಗುತ್ತಿದ್ದ. ಗುಬ್ಬಚ್ಚಿಗಳನ್ನು ಸಾಯಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದ್ದಾಗ ಒಂದು ದಿನ ಕೆಲವು ಗುಬ್ಬಚ್ಚಿಗಳು ಪೀಕಿಂಗ್ ನಲ್ಲಿರುವ ಪೋಲಿಷ್ ರಾಯಭಾರ ಕಚೇರಿಯಲ್ಲಿ ಇನ್ನೂ ಗೂಡು ಕಟ್ಟಿಕೊಂಡಿವೆ ಎಂಬ ವಿಷಯ ಹೇಗೋ ಮಾವೋಗೆ ಗೊತ್ತಾಯಿತು. ಗುಬ್ಬಿ ಸಾಯಿಸಲು ಬಂದವರನ್ನು ಪೋಲಿಷ್ ಅಧಿಕಾರಿಗಳು ತಡೆದರು. ಅಲ್ಲಿಗೆ ಸರಕಾರಿ ಸಿಬ್ಬಂದಿ ಕಳಿಸಿದ ಮಾವೋ, ಪೋಲಿಷ್ ರಾಯಭಾರ ಕಚೇರಿ ಸುತ್ತ ಎರಡು ದಿನ ತಮಟೆ, ಜಾಗಟೆಗಳನ್ನು ಬಾರಿಸುವಂತೆ ಸೂಚಿಸಿದ. ಅನಂತರ ರಾಯಭಾರ ಕಚೇರಿಯಲ್ಲಿನ ನೂರಾರು ಗೂಡುಗಳನ್ನು ಕಿತ್ತು ಬಿಸಾಕಿದ ಸಿಬ್ಬಂದಿ ಅಲ್ಲಿದ್ದ ಸಾವಿರಾರು ಗುಬ್ಬಚ್ಚಿ ಗಳನ್ನು ಸಾಯಿಸಿದರು. ಬೇರೆ ದೇಶಗಳ ರಾಯಭಾರ ಕಚೇರಿಗಳಲ್ಲಿ ಗುಬ್ಬಚ್ಚಿಗಳನ್ನು ಸಾಯಿಸದಿದ್ದರೆ, ಅತಿಕ್ರಮ ಪ್ರವೇಶ ಅನಿವಾರ್ಯ ಎಂಬ ಆದೇಶವನ್ನೂ ಹೊರಡಿಸಿದ. ಪರಿಣಾಮ ಬೇರೆ ರಾಯಭಾರ ಕಚೇರಿಗಳೂ ಗುಬ್ಬಚ್ಚಿ ಸಾಯಿಸುವ ಕಾರ್ಯಕ್ಕೆ ಒಲ್ಲದ ಮನಸ್ಸಿನಿಂದ ಮುಂದಾಗಬೇಕಾಯಿತು.

ಈ ಮಧ್ಯೆ ಮತ್ಯಾರೋ ಅವನಿಗೆ ಸಲಹೆ ಕೊಟ್ಟರು, ಗುಬ್ಬಚ್ಚಿಗಳ ಜತೆಗೆ ಇಲಿ – ಹೆಗ್ಗಣ, ಸೊಳ್ಳೆ, ಮತ್ತು ಕೃಷಿ ಫಸಲು ತಿನ್ನುವ ಇನ್ನಿತರ ಜೀವಿಗಳನ್ನೂ ಸಾಯಿಸಿದರೆ ಅಂದುಕೊಂಡ ಗುರಿಯನ್ನು ಮತ್ತಷ್ಟು ಬೇಗ ಸಾಧಿಸಬಹುದೆಂದು. ಬೆಳೆನಾಶಕ ಕ್ರಿಮಿ ಕೀಟಗಳನ್ನು ನಾಶಪಡಿಸುವ ಈ ಮಹಾನ್ ಅಭಿಯಾನಕ್ಕೆ ಮಾವೋ Four Pests Campaign ಎಂದು ಕರೆದ. ಮುಂದಿನ ಒಂದು ವರ್ಷ ತಾನು ಹಮ್ಮಿಕೊಂಡಿದ್ದ ಈ ಅಭಿಯಾನ ಯಶಸ್ವಿಯಾಗಿ ನಡೆಯಿತು ಎಂದು ಭಾವಿಸಿದ. ಕಾರಣ ಚೀನಾದಲ್ಲಿ ಗುಬ್ಬಚ್ಚಿಗಳ ಸಂತತಿಯೇ ಅಳಿದಿತ್ತು. ನೂರು ಕೋಟಿ ಗುಬ್ಬಚ್ಚಿಗಳ ಜತೆಗೆ, ಸುಮಾರು ನೂರಾ ಐವತ್ತು ಕೋಟಿ ಇಲಿ ಮತ್ತು ಅಸಂಖ್ಯ ಬೆಳೆನಾಶಕ ಕೀಟಗಳನ್ನು ಸಾಯಿಸಲಾಯಿತು. ಮಾವೋ ತನ್ನ ಈ ನಿರ್ಧಾರವನ್ನು ಮುಂದಿನ ಐದಾರು ತಿಂಗಳು ಹೋದಲ್ಲೆಲ್ಲಾ ಕೊಚ್ಚಿಕೊಂಡ. ಚೀನಾ ಮಹಾನ್ ಕ್ರಾಂತಿಗೆ ಅಡಿ ಇಡುತ್ತಿದೆ ಎಂದು ತನ್ನ ಬೆನ್ನನ್ನೇ ತಟ್ಟಿಕೊಂಡ. ಮಾವೋನ ಮಾತನ್ನು ಜನರೂ ನಿಜ ಎಂದು ಭಾವಿಸಿದರು. ಅವರೂ ಆ ಮಹಾನ್ ಕ್ರಾಂತಿ ಯಾವಾಗ ಆಗಬಹುದು ಎಂದು ಕುತೂಹಲದಿಂದ ಕಾಯುತ್ತಾ ಇದ್ದರು.

ಆದರೆ ಪರಿಣಾಮ ಮಾತ್ರ ಭೀಭತ್ಸ, ಘನಘೋರವಾಗಿತ್ತು !

ಗುಬ್ಬಚ್ಚಿಗಳು, ಇಲಿಗಳು, ಸೊಳ್ಳೆಗಳು ಅಕ್ಕಿ, ದವಸ – ಧಾನ್ಯ, ಕಾಳು – ಕಡಿಗಳ ಜತೆಗೆ ಮಿಡತೆ ಮತ್ತು ಇನ್ನಿತರ ಫಸಲುಬಾಕ ಕೀಟಗಳನ್ನು ತಿನ್ನುತ್ತಿದ್ದವು. ಇವು ಪರಿಸರದಲ್ಲಿ ಅಥವಾ ಹೊಲ-ಗದ್ದೆಗಳಲ್ಲಿ ಒಂದು ಸಮತೋಲನ ಕಾದುಕೊಳ್ಳಲು ನೆರವಾಗುತ್ತಿದ್ದವು. ಯಾವಾಗ ಇವುಗಳ (ಗುಬ್ಬಚ್ಚಿಗಳು, ಇಲಿಗಳು, ಸೊಳ್ಳೆ ) ಸಂತತಿಯನ್ನೇ ನಾಶ ಮಾಡಲಾಯಿತೋ, ಚೀನಾದ ಹೊಲ – ಗದ್ದೆಗಳಲ್ಲಿ ಬೆಳೆದು ನಿಂತ ವಿವಿಧ ಬೆಳೆಗಳನ್ನು ಮಿಡತೆಗಳು ಮತ್ತು ಇನ್ನಿತರ ಕೀಟಗಳು, ರೈತನಿಗೆ ಏನೂ ಬಿಡದಂತೆ ತಿಂದು ಹಾಕಿ ಬಿಟ್ಟವು. ಒಂದೆರಡು ತಿಂಗಳಲ್ಲಿ ಚೀನಾದ ಕೃಷಿ ಪ್ರದೇಶಗಳೆಲ್ಲಾ ಬೆಳೆಗಳೇ ಇಲ್ಲದೇ ಬರಿದಾದವು. ಏಕಾಏಕಿ ಮಿಡತೆಗಳು ಮತ್ತು ಇನ್ನಿತರ ಕ್ರಿಮಿ ಕೀಟಗಳ ಸಂತತಿ ವೃದ್ಧಿಸಿದ್ದರಿಂದ ಪರಿಸರದಲ್ಲಿ ಏರುಪೇರಾಯಿತು. ದಿಢೀರನೆ ದೇಶಾದ್ಯಂತ ಆಹಾರ ಕೊರತೆ ಕಾಣಿಸಿಕೊಳ್ಳಲಾರಂಭಿಸಿತು.

ಒಂದನೇ ಬೆಳೆಯನ್ನು ಮಿಡತೆಗಳು ತಿಂದು ಹಾಕಿದವೆಂದು, ರೈತರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಆದರೆ ಆಗಲೇ ಸೊಕ್ಕಿ ಬೆಳೆದಿದ್ದ ಮಿಡತೆಗಳು ಎರಡನೇ ಬೆಳೆಯನ್ನೂ ಮತ್ತಷ್ಟು ಕ್ಷಿಪ್ರವಾಗಿ ತಿಂದು ಮುಗಿಸಿದವು. ಆಗ ದೇಶಾದ್ಯಂತ ಆಹಾರಕ್ಕೆ ಹಾಹಾಕಾರವೆದ್ದಿತು. ತಾನೆಂಥ ಮಹಾಪ್ರಮಾದ ಮಾಡಿದೆ ಎಂಬುದು ಮಾವೋಗೆ ಮನದಟ್ಟಾಯಿತು. ಆದರೆ ಕಾಲ ಮಿಂಚಿ ಹೋಗಿತ್ತು. ದಿಕ್ಕೆಟ್ಟು ಕಂಗಾಲಾದ ಮಾವೋ ಗುಬ್ಬಚ್ಚಿಗಳನ್ನು ಖರೀದಿಸಲು ರಷ್ಯಾಕ್ಕೆ ಓಡಿಹೋದ. ತಕ್ಷಣ ತನ್ನ ದೇಶಕ್ಕೆ ಸಾಧ್ಯವಿದ್ದಷ್ಟು ಗುಬ್ಬಚ್ಚಿಗಳನ್ನು ಕೊಡುವಂತೆ ಗೋಗರೆದ. ತನ್ನಲ್ಲಿರುವ ಗುಬ್ಬಚ್ಚಿಗಳನ್ನು ಕೊಟ್ಟರೆ ತಾನೂ ಇಂಥದೇ ಸಮಸ್ಯೆ ಎದುರಿಸಬೇಕಾಗಬಹುದು ಎಂದು ಭಾವಿಸಿದ ರಷ್ಯಾ ಕೇವಲ ಎರಡೂವರೆ ಲಕ್ಷ ಗುಬ್ಬಚ್ಚಿಗಳನ್ನು ಕಳಿಸಿಕೊಟ್ಟಿತು. ಭಾರತಕ್ಕೂ ಇಂಥದೇ ಮನವಿ ಮಾಡಿದ. ಪ್ರಧಾನಿ ನೆಹರು, ಮಾವೋನ ಮನವಿಗೆ ಸ್ಪಂದಿಸಿ ಗುಟ್ಟಾಗಿ ಲಕ್ಷಾಂತರ ಗುಬ್ಬಚ್ಚಿಗಳನ್ನು ಕಳಿಸಿಕೊಟ್ಟರು.

ಕಂಡಲ್ಲಿ ಗುಬ್ಬಚ್ಚಿಗಳನ್ನು ಸಾಯಿಸಲು ಆದೇಶ ಕೊಟ್ಟಿದ್ದ ಮಾವೋ, ಇನ್ನು ಮುಂದೆ ಯಾರೂ ಅವುಗಳನ್ನು ಸಾಯಿಸಕೂಡದು ಮತ್ತು ಕಾಳಜಿಪೂರ್ವಕವಾಗಿ ಅವುಗಳ ಸಂತತಿಯನ್ನು ಉಳಿಸಬೇಕು ಮತ್ತು ಬೆಳೆಸಬೇಕು ಎಂದು ಆದೇಶ ಮಾಡಿದ. ಆದರೆ ಅಷ್ಟರಲ್ಲಾಗಲೇ ಚೀನಾದ ಬೀದಿ ಬೀದಿಗಳಲ್ಲಿ ಜನ ಆಹಾರವಿಲ್ಲದೇ ಸಾಯಲಾರಂಭಿಸಿದ್ದರು. ಗುಬ್ಬಚ್ಚಿಗಳನ್ನು ಸಾಯಿಸಿದ್ದರ ಪರಿಣಾಮ ಮುಂದಿನ ಮೂರು ವರ್ಷಗಳ ಕಾಲ ಚೀನಾ ಭೀಕರ ಕ್ಷಾಮವನ್ನು ಎದುರಿಸುವಂತಾಯಿತು. ಈ ಅವಧಿಯಲ್ಲಿ ಏನಿಲ್ಲವೆಂದರೂ ನಾಲ್ಕೂವರೆ ಕೋಟಿ ಜನ ಹೊಟ್ಟೆಗೇನೂ ಸಿಗದೇ ಉಪವಾಸಬಿದ್ದು ಗುಬ್ಬಚ್ಚಿಗಳಂತೆ ಸತ್ತುಹೋದರು. ಈ ಅವಧಿಯಲ್ಲಿ ಹಸಿವಿನಿಂದ ಕಂಗೆಟ್ಟ ಜನ ತಿನ್ನಲು ಏನೂ ಸಿಗದೇ ಪ್ರಾಣಿಗಳಂತೆ ಮನುಷ್ಯರನ್ನೂ ತಿಂದರು. ದೇಶದ ಕೆಲವು ಭಾಗಗಳು ಭೀಕರ ಸಾಂಕ್ರಾಮಿಕ ರೋಗಕ್ಕೆ ತುತ್ತಾಯಿತು. ಚೀನಾ ಪಡಬಾರದ ಸಂಕಟವನ್ನು ಅನುಭವಿಸಿ ಹೈರಾಣಾಗಿ ಹೋಯಿತು. ಈಗಲೂ ಈ ‘ಮಹಾನ್ ಕ್ರಾಂತಿ’ ಪುರಾಣಕತೆಯನ್ನು ಚೀನಾದಲ್ಲಿ ಯಾರೂ ಚರ್ಚಿಸುವಂತಿಲ್ಲ. ಅದು ನಿಷಿದ್ಧ.

ಯಾಂಗ್ ಜಿಶೆಂಗ್ ಪುಸ್ತಕವನ್ನು ಓದಿ ಮುಗಿಸಿದ ಬಳಿಕ ನನಗನಿದ್ದೇನೆಂದರೆ, ಮಹಾನ್ ಕ್ರಾಂತಿ ಮಾಡಲು ಹೋರಾಟ ಅಂದಿನ ಚೀನಾಕ್ಕೂ , ಈಗಲೂ ಅಂಥದೇ ಕನಸು, ಮಹಾತ್ವಾಕಾಂಕ್ಷೆಗಳನ್ನು ಇಟ್ಟುಕೊಂಡಿರುವ ಇಂದಿನ ಚೀನಾಕ್ಕೂ ಸ್ವಲ್ಪವೂ ವ್ಯತ್ಯಾಸವಿಲ್ಲ. ಅಂದು ತನ್ನ ದೇಶವಾಸಿಗಳ ಮಾರಣಹೋಮಕ್ಕೆ ಕಾರಣವಾದ ಚೀನಾ, ಇಂದು ವಿಶ್ವದ ಎಲ್ಲಾ ದೇಶಗಳ ಜನರ ಮಾರಣಹೋಮಕ್ಕೆ ಕಾರಣವಾಗಿದೆ.

ಅರವತ್ತೆರಡು ವರ್ಷಗಳ ನಂತರ ಇತಿಹಾಸ ಮರುಕಳಿಸಿದೆ. ಚೀನಾ ಇನ್ನೂ ಬುದ್ಧಿ ಕಲಿತಿಲ್ಲ. ತಾನು ಹಾಳಾಗಿದ್ದಲ್ಲದೇ, ಜಗತ್ತನ್ನೇ ವಿನಾಶದ ಕೂಪಕ್ಕೆ ತಂದಿಟ್ಟಿದೆ. ಅಂದು ಮಾವೋ ಮಾಡಿದ್ದನ್ನು ಮನೆಮಂದಿಯೆಲ್ಲ ಅನುಭವಿಸಿದ್ದರು. ಈಗ ಇಡೀ ಜಗತ್ತು ಅನುಭವಿಸುತ್ತಿದೆ. ಛೇ !
-ಶ್ರೀ ವಿಶ್ವೇಶ್ವರಭಟ್