Thursday, 31st October 2024

ಜಗತ್ತು ಕಂಡ ಸರ್ವವ್ಯಾಪಿ ಸಾಂಕ್ರಾಮಿಕ ರೋಗ ಇದೊಂದೇ ಅಲ್ಲ

ಅವಲೋಕನ
ಶಶಿ ತರೂರ್, ಲೋಕಸಭಾ ಸದಸ್ಯ

ಕರೋನಾ ವೈರಸ್‌ನಂತಹ ಸರ್ವವ್ಯಾಪಿ ಸಾಂಕ್ರಾಮಿಕ ರೋಗಕ್ಕೆ ಇಂಗ್ಲಿಷ್‌ನಲ್ಲಿ pandemic ಎನ್ನುತ್ತಾರೆ. ಇದರ ಮೂಲ ಗ್ರೀಕ್‌ನ pandemos.ಅಂದರೆ ಎಲ್ಲಾ ಜನರಿಗೆ ಸಂಬಂಧಿಸಿದ್ದು, ಸಾರ್ವತ್ರಿಕ ಎಂದರ್ಥ. ಪ್ಯಾನ್ (ಎಲ್ಲರೂ) ಹಾಗೂ ಡೆಮೋಸ್ (ಜನರು) ಎಂಬುದು ಇದರ ವ್ಯುತ್ಪತ್ತಿ. ಸಾಂಕ್ರಾಮಿಕ ರೋಗ, ಅಂದರೆ ಎಪಿಡೆಮಿಕ್, ದೊಡ್ಡ ಪ್ರಮಾಣದಲ್ಲಿ ಶರವೇಗದಲ್ಲಿ ಎಲ್ಲೆಡೆ ಸೋಂಕು ಹರಡುತ್ತದೆ. ಇದಕ್ಕಿಿಂತ ತೀವ್ರವಾದ ಪ್ಯಾಾಂಡೆಮಿಕ್, ಅಂದರೆ ಸರ್ವವ್ಯಾಪಿ ಸಾಂಕ್ರಾಮಿಕ ರೋಗ, ಒಂದು ಸೀಮಿತ ಪ್ರದೇಶದಲ್ಲಿ ಮಾತ್ರವಲ್ಲದೆ ಎಲ್ಲಾ ಕಡೆಯಲ್ಲೂ ಎಲ್ಲರನ್ನೂ ಬಾಧಿಸುತ್ತದೆ. ಇದರಲ್ಲಿ ಸಾವಿನ ಪ್ರಮಾಣ ಅತ್ಯಧಿಕ. ಉದಾಹರಣೆಗೆ, ಹಿಂದೆ ಎಬೋಲಾ ಎಂಬ ವೈರಸ್ ಸಾವಿರಾರು ಜನರನ್ನು ಕೊಂದರೂ ಅದು ಪಶ್ಚಿಮ ಆಫ್ರಿಕಾಕ್ಕೆ ಮಾತ್ರ ಸೀಮಿತವಾಗಿತ್ತು. ಹೀಗಾಗಿ ಅದಕ್ಕೆ ಪ್ಯಾಾಂಡೆಮಿಕ್ ಎಂಬ ಹಣೆಪಟ್ಟಿ ನೀಡಿರಲಿಲ್ಲ. ಈಗಿನ ಕರೋನಾ ವೈರಸ್ ಆರಂಭದಲ್ಲಿ ಚೀನಾಕ್ಕೆ ಸೀಮಿತವಾಗಿತ್ತು. ಹೀಗಾಗಿ ತಜ್ಞರು ಇದನ್ನೂ ಮೊದಲಿಗೆ ಎಪಿಡೆಮಿಕ್ ಎಂದೇ ಕರೆದಿದ್ದರು. ಆದರೆ ಯಾವಾಗ ಇದು ಚೀನಾದ ಗಡಿ ದಾಟಿ ಎಲ್ಲಾ ದೇಶಗಳಿಗೂ ಹರಡಿತೋ ಆಗ ವಿಶ್ವ ಆರೋಗ್ಯ ಸಂಸ್ಥೆಯವರು ಇದಕ್ಕೆ ಪ್ಯಾಾಂಡೆಮಿಕ್ ಎಂಬ ಹಣೆಪಟ್ಟಿ ಅಂಟಿಸಿದರು.

ಹಾಗಂತ ಈ ಕರೋನಾ ವೈರಸ್ ನಮ್ಮ ಭೂಮಂಡಲವನ್ನು ಬಾಧಿಸಿದ ಏಕೈಕ ಅಥವಾ ಪ್ರಥಮ ಪ್ಯಾಾಂಡೆಮಿಕ್ ಏನಲ್ಲ. ಇದಕ್ಕಿಿಂತ ತೀವ್ರವಾಗಿ ಇನ್‌ಫ್ಲುಯೆಂಜಾ ಸೋಂಕು ಪದೇ ಪದೆ ಪ್ಯಾಾಂಡೆಮಿಕ್ ಆಗಿ ಜಗತ್ತನ್ನು ಕಾಡಿದೆ. ಅದು ಬಹುದೊಡ್ಡ ಪ್ರಮಾಣದಲ್ಲಿ ಜಗತ್ತನ್ನು ಬಾಧಿಸಿದ್ದು 1918-19ರಲ್ಲಿ. ಆಗ ಅದನ್ನು ಸ್ಪಾನಿಶ್ ಫ್ಲೂ ಎಂದು ತಪ್ಪಾಗಿ ಕರೆದಿದ್ದರು. ಎರಡು ವಿಶ್ವ ಮಹಾಯುದ್ಧಗಳಲ್ಲಿ ಒಟ್ಟು ಎಷ್ಟು ಜನರು ಸತ್ತಿದ್ದರೋ ಅದಕ್ಕಿಿಂತ ಹೆಚ್ಚು ಜನರನ್ನು ಈ ಫ್ಲೂ ಬಲಿ ಪಡೆದಿತ್ತು! ಇಂತಹ ಅನೇಕ ಪ್ಯಾಾಂಡೆಮಿಕ್ ಸೋಂಕುಗಳು ಜಗತ್ತಿನಲ್ಲಿ ಆಗಾಗ ಕಾಣಿಸಿಕೊಂಡ ಇತಿಹಾಸವಿದೆ. 1889-90ರಲ್ಲಿ ರಷ್ಯನ್ ಫ್ಲೂ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಜನರನ್ನು ಸಾಯಿಸಿತ್ತು. 1956-58ರಲ್ಲಿ ಏಷ್ಯನ್ ಫ್ಲೂ 20 ಲಕ್ಷ ಜನರನ್ನು ಹೊಸಕಿಹಾಕಿತ್ತು. ಹಾಂಗ್‌ಕಾಂಗ್ ಫ್ಲೂ 1968ರಲ್ಲಿ 10 ಲಕ್ಷ ಜನರನ್ನು ಸಾಯಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಏವಿಯನ್ ಫ್ಲೂ ಅಥವಾ ಬರ್ಡ್ ಫ್ಲೂ (ಹಕ್ಕಿ1ಜ್ವರ), 2003ರಲ್ಲಿ ಸಾರ್ಸ್ ವೈರಸ್‌ಗಳು ಪ್ಯಾಾಂಡೆಮಿಕ್ ರೀತಿಯಲ್ಲಿ ಜಗತ್ತನ್ನು ಕಾಡಿವೆ.

ಕಾಲರಾ, ಬ್ಯುಬೋನಿಕ್ ಪ್ಲೇಗ್ ಹಾಗೂ ಸ್ಮಾಲ್‌ಪಾಕ್‌ಸ್‌ ಕೂಡ ಇತಿಹಾಸದಲ್ಲಿ ಅತಿದೊಡ್ಡ ಪ್ಯಾಾಂಡೆಮಿಕ್ ಆಗಿ ಜಗತ್ತನ್ನು ಬಾಧಿಸಿವೆ. ಬಹುಶಃ ಸ್ಮಾಲ್‌ಪಾಕ್‌ಸ್‌‌ನಷ್ಟು ತೀವ್ರವಾಗಿ ಹರಡಿ ಜನರನ್ನು ಸಾಯಿಸಿದ ಪ್ಯಾಾಂಡೆಮಿಕ್ ಮತ್ತೊೊಂದಿಲ್ಲ. ಇದು 12000 ವರ್ಷಗಳ ಸುದೀರ್ಘ ಅವಧಿಯಲ್ಲಿ 30ರಿಂದ 50 ಕೋಟಿ ಜನರನ್ನು ಬಲಿ ಪಡೆದಿದೆ. ಹಿಂದೆ ಜಗತ್ತಿನ ಒಟ್ಟು ಜನಸಂಖ್ಯೆೆಯೇ 50 ಕೋಟಿ ಇರಲಿಲ್ಲ! 1970ರ ದಶಕದಲ್ಲಿ ಇದನ್ನು ನಿರ್ಮೂಲನೆ ಮಾಡಿದ್ದು ಮನುಕುಲದ ವೈದ್ಯಕೀಯ ಸಾಧನೆಯಲ್ಲಿ ಮುಕುಟಪ್ರಾಯ ಸಂಗತಿ.

1981ರಿಂದ ಇಲ್ಲಿಯವರೆಗೆ ಜಗತ್ತಿನಾದ್ಯಂತ ಹರಡಿ 3.6 ಕೋಟಿಗೂ ಹೆಚ್ಚು ಜನರನ್ನು ಸಾಯಿಸಿದ ಎಚ್‌ಐವಿ/ಏಡ್‌ಸ್‌ ರೋಗವನ್ನು ಕೂಡ ಪ್ಯಾಾಂಡೆಮಿಕ್ ಎಂದೇ ಕರೆಯಬಹುದು. ಕಾಲರಾವನ್ನು ಈಗ ಜಗತ್ತು ಅಷ್ಟೇನೂ ಭಯಾನಕವಾಗಿ ನೋಡುವುದಿಲ್ಲ. ಆದರೆ, ಭಾರತದಲ್ಲಿ ಹುಟ್ಟಿದ ಈ ಸೋಂಕು ನಮ್ಮ ದೇಶದಲ್ಲೇ 8 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದು ಮಧ್ಯಪ್ರಾಚ್ಯ, ಪೂರ್ವ ಯುರೋಪ್, ಉತ್ತರ ಆಫ್ರಿಕಾ ಹಾಗೂ ಕೊನೆಗೆ ಅಮೆರಿಕಕ್ಕೂ ಹರಡಿತ್ತು. ಅಮೆರಿಕದಲ್ಲಿ 1910-1911ರ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಇದು ವ್ಯಾಪಿಸಿತ್ತು.

ಮನುಕುಲದ ಇತಿಹಾಸದಲ್ಲಿ ಜನರನ್ನು ಅತಿಹೆಚ್ಚು ಭಯಕ್ಕೆ ತಳ್ಳಿದ ಸಾರ್ವತ್ರಿಕ ಸಾಂಕ್ರಾಮಿಕ ರೋಗವೆಂದರೆ ಪ್ಲೇಗ್. ಪ್ರಾಚೀನ ಹಾಗೂ ಮಧ್ಯಕಾಲೀನ ಯುಗವೆಂದು ನಾವು ಯಾವ ಅವಧಿಯನ್ನು ಕರೆಯುತ್ತೇವೋ ಆ ಸಮಯದಲ್ಲಿ ಇದು ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸಿತ್ತು. 1346-53ರ ಅವಧಿಯಲ್ಲಿ ಈ ಬ್ಯುಬೋನಿಕ್ ಪ್ಲೇಗ್ ಏಳು ವರ್ಷಗಳ ಕಾಲ ಸುಮಾರು 20 ಕೋಟಿ ಜನರನ್ನು ಸಾಯಿಸಿತ್ತು. ಆಗ ಜಗತ್ತಿನ ಜನಸಂಖ್ಯೆಯೇ ಒಟ್ಟಾರೆ ಸುಮಾರು 60 ಕೋಟಿಯಾಗಿತ್ತು. ಯುರೋಪ್, ಆಫ್ರಿಕಾ ಹಾಗೂ ಏಷ್ಯಾದೆಲ್ಲೆೆಡೆ ಇದು ಸಂಚರಿಸಿತ್ತು. ಸರಕು ಸಾಗಣೆ ಹಡಗಿನಲ್ಲಿ ಪ್ಲೇಗ್ ಸೋಂಕಿತ ಇಲಿಗಳು ಇದನ್ನು ಒಂದು ದೇಶದಿಂದ ಇನ್ನೊೊಂದು ದೇಶಕ್ಕೆ ಹರಡಿದ್ದವು. ಆ ಸಮಯದಲ್ಲಿ ಪ್ಲೇಗ್ ಜಗತ್ತಿನಾದ್ಯಂತ ಎಷ್ಟು ಭಯ ಹುಟ್ಟಿಸಿತ್ತೆೆಂದರೆ ಜನರು ಇದನ್ನು ಬ್ಲ್ಯಾಕ್ ಡೆತ್ ಎಂದು ಕರೆಯುತ್ತಿದ್ದರು. ಅದಕ್ಕೂ ಮೊದಲೂ ಬ್ಯುಬೋನಿಕ್ ಪ್ಲೇಗ್ ಯುರೋಪ್‌ನಲ್ಲಿ ಸಾಕಷ್ಟು ಸಲ ಹರಡಿತ್ತು. ಆದರೆ, ಅದನ್ನು ಪ್ಯಾಾಂಡೆಮಿಕ್ ಎಂದು ಕರೆಯಬೇಕೋ ಕರೆಯಬಾರದೋ ಗೊತ್ತಿಲ್ಲ. ಏಕೆಂದರೆ ಆಗ ಜಗತ್ತು ಅಂದರೆ ಯುರೋಪ್ ಮಾತ್ರ ಆಗಿತ್ತು. ಉದಾಹರಣೆಗೆ, ಕ್ರಿ.ಶ. 541-542ರ ಅವಧಿಯಲ್ಲಿ ಯುರೋಪ್‌ನ ಅರ್ಧದಷ್ಟು ಜನಸಂಖ್ಯೆೆ, ಅಂದರೆ ಸುಮಾರು 2.5 ಕೋಟಿ ಜನರನ್ನು ಜಸ್ಟಿನಿಯನ್ ಪ್ಲೇಗ್ ಸಾಯಿಸಿತ್ತು. ಪೂರ್ವ ಮೆಡಿಟರೇನಿಯನ್ ಭಾಗದಲ್ಲಿ ಈ ರೋಗ ಯಾವ ಪರಿ ಹರಡಿತ್ತೆೆಂದರೆ ಕಾನ್‌ಸ್ಟಂಟಿನೋಪಲ್ ನಗರವೇ ಇದರ ಹೊಡೆತಕ್ಕೆ ಸರ್ವನಾಶವಾಗಿತ್ತು. ಅಲ್ಲಿನ ಶೇ.40ರಷ್ಟು ಜನರು ಪ್ಲೇಗ್‌ನಿಂದ ಸತ್ತಿದ್ದರು. ಅದಕ್ಕಿಿಂತ ಮುಂಚೆ ಕ್ರಿ.ಶ. 165ರಲ್ಲಿ ಗ್ಯಾಲನ್ ಪ್ಲೇಗ್ ಅಥವಾ ಆಂಟೋನೈನ್ ಪ್ಲೇಗ್ ಎಂದು ಕರೆಸಿಕೊಂಡಿದ್ದ ಸಾಂಕ್ರಾಮಿಕ ರೋಗ ಈಜಿಪ್‌ಟ್‌, ಗ್ರೀಸ್ ಹಾಗೂ ಇಟಲಿಯನ್ನು ದೊಡ್ಡ ಪ್ರಮಾಣದಲ್ಲಿ ಕಾಡಿದ್ದವು. ಅದು ನಿಜವಾಗಿಯೂ ಪ್ಲೇಗ್ ಆಗಿತ್ತೋ ಅಥವಾ ಸ್ಮಾಲ್‌ಪಾಕ್‌ಸ್‌, ದಢಾರವಾಗಿತ್ತೋ ಎಂಬುದು ಇತಿಹಾಸಕಾರರಿಗೆ ಸ್ಪಷ್ಟವಿಲ್ಲ. ಒಟ್ಟಿನಲ್ಲಿ ಮೆಸಪೋಟೇಮಿಯಾಕ್ಕೆ ಯುದ್ಧಕ್ಕೆೆಂದು ಹೋದ ಸೈನಿಕರು ಮರಳಿ ಬರುವಾಗ ರೋಮ್‌ಗೆ ಅದರ ಸೋಂಕು ಹೊತ್ತು ಬಂದಿದ್ದರು ಎಂದು ಹೇಳಲಾಗುತ್ತದೆ. ಅದು ಏನೇ ಆಗಿದ್ದರೂ ಆ ಪ್ಲೇಗ್ ಸುಮಾರು 50 ಲಕ್ಷಕ್ಕೂ ಹೆಚ್ಚು ಜನರನ್ನು ಸಾಯಿಸಿ ರೋಮನ್ ಸೇನೆಯನ್ನೇ ಸರ್ವನಾಶ ಮಾಡಿತ್ತು.

ಈಗ ನಮ್ಮ ಕಾಲದಲ್ಲಿ ಪ್ಯಾಾಂಡೆಮಿಕ್‌ಗಳು ಪದೇ ಪದೆ ಕಾಣಿಸಿಕೊಳ್ಳುತ್ತಿವೆ. ಏಕೆಂದರೆ ಜಗತ್ತಿನ ವಿವಿಧ ದೇಶಗಳ ನಡುವೆ ಸಂಚಾರ ಹೆಚ್ಚಿದೆ. ಜಗತ್ತು ಚಿಕ್ಕದಾಗಿದೆ. ಜನಸಂಖ್ಯೆ ಹೆಚ್ಚಿದೆ. ಪರಿಸರ ನಾಶ ವಿಪರೀತವಾಗಿದೆ. ಕಂಡಕಂಡ ಪ್ರಾಣಿಗಳನ್ನೆಲ್ಲ ತಿನ್ನುವ ಮನುಷ್ಯನ ಚಪಲದಿಂದಲೋ ಅಥವಾ ದೊಡ್ಡ ಪ್ರಮಾಣದಲ್ಲಿ ಕಾಡು ಕಡಿದು ಪರಿಸರದ ಸಮತೋಲನವನ್ನು ನಾಶ ಮಾಡಿದ್ದರಿಂದಲೋ ಪ್ರಾಣಿಗಳಿಂದ ಹರಡುವ ವೈರಲ್ ಸೋಂಕುಗಳು ಹೆಚ್ಚಾಗುತ್ತಿವೆ. ಅಪಾಯಕಾರಿ ರೋಗಾಣುಗಳು ಜಗತ್ತಿನ ಬೇರೆ ಬೇರೆ ಕಡೆಗಳಿಂದ ಪ್ರಾಣಿಗಳಲ್ಲಿ ಹರಡಿ, ತನ್ಮೂಲಕ ಮನುಷ್ಯನಿಗೂ ರೋಗ ಅಂಟಿಸಿ, ಕೊನೆಗೆ ಮನುಷ್ಯನಿಂದ ಮನುಷ್ಯನಿಗೆ ದಾಟುತ್ತಾ ಮತ್ತೆ ಜಗತ್ತಿನೆಲ್ಲೆೆಡೆ ಸಂಚರಿಸುತ್ತಿವೆ.

ಪ್ಯಾಾಂಡೆಮಿಕ್‌ಗಳಿಂದ ಮನುಷ್ಯರು ಸಾಯುವುದಷ್ಟೇ ಅಲ್ಲ, ಜಗತ್ತಿನ ಆರ್ಥಿಕತೆ, ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆ ಕೂಡ ಬುಡಮೇಲಾಗುತ್ತಿದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆೆಯ ನೆರವಿನಿಂದ ಜಗತ್ತಿನ ಎಲ್ಲಾ ದೇಶಗಳೂ ಇಂತಹ ರೋಗಗಳನ್ನು ನಿರ್ಮೂಲನೆ ಮಾಡಲು ಯೋಜನೆಗಳನ್ನು ರೂಪಿಸುತ್ತಿವೆ. ಆದರೂ ಇಂತಹ ರೋಗಗಳನ್ನು ಆರಂಭದಲ್ಲೇ ಗುರುತಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಏಕೆಂದರೆ ಶರವೇಗದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆದು ನಿಲ್ಲಿಸಲು ಬೇಕಾದ ಮೂಲಸೌಕರ್ಯ ಜಗತ್ತಿನಲ್ಲಿ ಇಲ್ಲ. ಅದಕ್ಕಿಿಂತ ಹೆಚ್ಚಾಗಿ ವೈರಸ್‌ನ ಮೂಲ ಪತ್ತೆಹಚ್ಚುವಷ್ಟರಲ್ಲಿಯೇ ದೊಡ್ಡ ಹಾನಿ ಉಂಟಾಗಿರುತ್ತದೆ. ಇದರಲ್ಲಿ ದೇಶ-ದೇಶಗಳ ನಡುವೆ ಸಮನ್ವಯತೆಯ ಕೊರತೆಯೂ ಇದೆ. ಇನ್ನು, ಬಡ ದೇಶಗಳಲ್ಲಿ ಇದಕ್ಕೆ ಬೇಕಾದ ಸಂಪನ್ಮೂಲಗಳನ್ನು ಹೊಂದಿಸುವುದೂ ಅಷ್ಟೇ ಕಷ್ಟವಾಗುತ್ತಿದೆ.

ಮನುಷ್ಯನ ನಡುವೆ ಅತ್ಯಂತ ಸುಲಭವಾಗಿ ಮತ್ತು ವೇಗವಾಗಿ ಹರಡುವ, ಆದರೆ ಆರಂಭದಲ್ಲಿ ತನ್ನ ಲಕ್ಷಣಗಳನ್ನೇ ತೋರಿಸದ ಸಾಂಕ್ರಾಮಿಕ ರೋಗಗಳನ್ನು ಅತ್ಯಂತ ಅಪಾಯಕಾರಿ ಪ್ಯಾಾಂಡೆಮಿಕ್ ಎಂದು ಜಗತ್ತು ಗುರುತಿಸುತ್ತದೆ. ಏಕೆಂದರೆ ಈ ರೋಗ ಹರಡುವ ವೈರಸ್‌ಗಳು ಒಬ್ಬ ಮನುಷ್ಯನಲ್ಲಿ ಇರುವುದು ಗೊತ್ತಾಗುವುದಕ್ಕೂ ಮೊದಲೇ ಆತ ಹಲವಾರು ಜನರಿಗೆ ಸೋಂಕು ಹರಡಿರುತ್ತಾನೆ. ಆರಂಭದಲ್ಲಿ ಅದನ್ನು ಸಾಮಾನ್ಯ ನೆಗಡಿ ಅಥವಾ ಜ್ವರವೆಂದು ಎಲ್ಲರೂ ಕಡೆಗಣಿಸಿರುತ್ತಾರೆ. ಕರೋನಾ ವೈರಸ್ ವಿಷಯದಲ್ಲೂ ಆಗಿದ್ದು ಇದೇ. ನಿಫಾ ವೈರಸ್ ಹಾಗೂ ಹಕ್ಕಿಜ್ವರದಂತಹ ರೋಗಗಳನ್ನು ಮಧ್ಯಮ ತೀವ್ರತೆಯ ರೋಗಗಳೆಂದು ಜಗತ್ತು ಗುರುತಿಸುತ್ತದೆ. ಏಕೆಂದರೆ ಇವು ನಿರಂತರವಾಗಿ ಮನುಷ್ಯನಿಂದ ಮನುಷ್ಯನಿಗೆ ಹರಡಿದ ಉದಾಹರಣೆಗಳಿಲ್ಲ. ಸಾಮಾನ್ಯವಾಗಿ ಎಲ್ಲಾ ಸಾಂಕ್ರಾಮಿಕ ರೋಗಗಳ ವಿಷಯದಲ್ಲೂ ಅತಿಹೆಚ್ಚು ಅಪಾಯ ಎದುರಿಸುವ ದೇಶಗಳೆಂದರೆ ಅಭಿವೃದ್ಧಿಶೀಲ ದೇಶಗಳು ಮತ್ತು ಬಡ ದೇಶಗಳು. ಏಕೆಂದರೆ ಅಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಿರುತ್ತದೆ. ಸರಿಯಾದ ವೈದ್ಯಕೀಯ ಸೌಕರ್ಯಗಳಿರುವುದಿಲ್ಲ. ಜನಸಾಂದ್ರತೆ ಹೆಚ್ಚಿರುತ್ತದೆ. ಹೀಗಾಗಿ ರೋಗ ಬೇಗ ಹರಡುತ್ತದೆ.
ಆದರೆ, ಈಗ ಜಗತ್ತು ನೋಡುತ್ತಿರುವ ಪ್ಯಾಾಂಡೆಮಿಕ್‌ನಲ್ಲಿ ಅಭಿವೃದ್ಧಿ ಹೊಂದಿದ ದೇಶಗಳೇ ಅತಿಹೆಚ್ಚು ನಷ್ಟ ಅನುಭವಿಸುತ್ತಿವೆ. ಇದು ಬಹುಕಾಲ ಉಳಿಯುವ ಸಂಕಷ್ಟವಾಗಲಿದೆಯೋ ಅಥವಾ ಆದಷ್ಟು ಬೇಗ ನಿವಾರಣೆಯಾಗಲಿದೆಯೋ ಗೊತ್ತಿಲ್ಲ. ನಾವು ಇದರಿಂದ ಯಾವ ಪಾಠ ಕಲಿಯಬೇಕೆಂಬುದೂ ಸದ್ಯಕ್ಕೆ ಗೊತ್ತಿಲ್ಲ. ಕಾದು ನೋಡಬೇಕಷ್ಟೆ.