Thursday, 12th December 2024

ಪತ್ರಿಕೆಯೂ, ಇತಿಹಾಸದ ತುಣುಕೂ!

ಸಮಸ್ತ ಓದುಗರ ಸಮೂಹ ನಾಳಿನ ಪತ್ರಿಕೆಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಸಂಚಿಕೆಯನ್ನು ರೂಪಿಸುವುದು ಬಹಳ ಸವಾಲಿನ, ಒತ್ತಡದ ಕೆಲಸ. ಕಾರಣ ನಾಳೆ ಅಸಂಖ್ಯ ಓದುಗರು ಪತ್ರಿಕೆಗಾಗಿ ಕಾಯುತ್ತಿರುತ್ತಾರೆ, ಯಾವ ಹೆಡ್ ಲೈನ್ ಕೊಟ್ಟಿರಬಹುದು ಎಂದು ಯೋಚಿಸುತ್ತಿರುತ್ತಾರೆ, ಆ ಸಂಚಿಕೆಯನ್ನು ಕಾದಿಟ್ಟುಕೊಳ್ಳಬೇಕೆಂದು ನಿರ್ಧರಿಸಿರುತ್ತಾರೆ, ಅಲ್ಲದೇ ಆ ದಿನದ ಮುಖಪುಟಕ್ಕೆ ಫ್ರೇಮ್ ಹಾಕಿಸಿ ಆಪ್ತರಿಗೆ ಉಡುಗೊರೆಯಾಗಿ ನೀಡಬೇಕೆಂದು ನಿರ್ಧರಿಸಿರುತ್ತಾರೆ. ಕಾರಣ ಅವರಿಗೆ ಆ ಮಹತ್ವದ ಸುದ್ದಿಯನ್ನು ವರದಿ ಮಾಡಿದ ತಮ್ಮ ಇಷ್ಟವಾದ ಪತ್ರಿಕೆಯ ಮುಖಪುಟ ಇತಿಹಾಸದ ಒಂದು ಅಮೂಲ್ಯ ತುಣುಕಾಗಿರುತ್ತದೆ. ಅಂಥ ಪ್ರಮುಖ ಘಟನೆಗಳ ಪೈಕಿ, ಮನುಷ್ಯ ಮೊಟ್ಟ ಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟಿದ್ದು ಸಹ ಒಂದು. ಅದೊಂದು ಕಂಡು ಕೇಳರಿಯದ ಘಟನೆ. ಅದಕ್ಕಿಿಂತ ಮುಂಚೆ ಯಾರೂ ಅಂಥ ಸಾಹಸ ಮಾಡಿರಲಿಲ್ಲ. ಚಂದ್ರನ ಮೇಲೆ ಮನುಷ್ಯ ಕಾಲೂರುವುದನ್ನು ಇಡೀ ಜಗತ್ತು ಉಸಿರು ಬಿಗಿ ಹಿಡಿದು ಕಾಯುತ್ತಿತ್ತು. ಆಗ ಈಗಿನಂತೆ ಟಿವಿಯಾಗಲಿ, ಸೋಷಿಯಲ್ ಮೀಡಿಯಾ ಆಗಲಿ ಇರಲಿಲ್ಲ. ಪತ್ರಿಕೆ ಮತ್ತು ರೇಡಿಯೋ ಮೂಲಕವೇ ಎಲ್ಲವನ್ನೂ ತಿಳಿದುಕೊಳ್ಳಬೇಕಿತ್ತು. ಹೀಗಾಗಿ ತಮ್ಮ ಇಷ್ಟದ ಪತ್ರಿಕೆ ಈ ಸುದ್ದಿಯನ್ನು ಹೇಗೆ ಕವರ್ ಮಾಡಬಹುದು ಎಂಬ ಬಗ್ಗೆ ಸರ್ವತ್ರ ಕುತೂಹಲ ಗರಿಗೆದರಿತ್ತು. ಅದರಲ್ಲೂ ಜಗತ್ತಿನ ಪ್ರತಿಷ್ಠಿತ ಪತ್ರಿಕೆಗಳಾದ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್‌ಟ್‌, ಟೈಮ್ಸ್ ಲಂಡನ್, ದಿ ಗಾರ್ಡಿಯನ್ ಮುಂತಾದ ಪತ್ರಿಕೆಗಳು ತಮ್ಮ ಮುಖಪುಟವನ್ನು ಹೇಗೆ ರೂಪಿಸಬಹುದು ಎಂಬ ಬಗ್ಗೆೆ ಅತೀವ ಜಿಜ್ಞಾಸೆ ಮೂಡಿತ್ತು. ಜಗತ್ತಿನ ಬಹುತೇಕ ಎಲ್ಲಾ ಪತ್ರಿಕೆಗಳು ಈ ಸುದ್ದಿಯನ್ನು ಅಭೂತಪೂರ್ವ ಘಟನೆ ಎಂಬಂತೆ ವಿಶೇಷವಾಗಿ ವರದಿ ಮಾಡಿದ್ದರೂ, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ನೀಡಿದ ಹೆಡ್ ಲೈನ್, ಮೊದಲ ಪ್ಯಾರಾ, ಫೋಟೋ, ಪುಟ ವಿನ್ಯಾಸ, ಸುದ್ದಿಯನ್ನು ಬೆಳೆಸಿದ ರೀತಿ ಮೆಚ್ಚುಗೆಗೆ ಪಾತ್ರವಾಯಿತು. ಆ ಘಟನೆ ನಡೆದು ಐವತ್ತೊೊಂದು ವರ್ಷಗಳ ನಂತರವೂ, ಆ ಪತ್ರಿಕೆಯ ಹೆಡ್ ಲೈನ್ ಇಂದಿಗೂ ಚರ್ಚೆಯಾಗುತ್ತಿದೆ. ಸಂಗ್ರಹ ಯೋಗ್ಯ ಎಂದು ಪರಿಗಣಿಸಿದ ಆ ದಿನದ ನ್ಯೂಯಾರ್ಕ್ ಟೈಮ್ಸ್ ಮುಖಪುಟವಂತೂ ಈಗಲೂ ಮಾರಾಟವಾಗುತ್ತಿದೆ. ಅಷ್ಟಕ್ಕೂ ಆ ದಿನ ನ್ಯೂಯಾರ್ಕ್ ಟೈಮ್ಸ್ ನೀಡಿದ ಹೆಡ್ ಲೈನ್ ಅತ್ಯಂತ ಸರಳವಾಗಿತ್ತು, ಎಂಥವರಿಗೂ ಅರ್ಥವಾಗುವಂತಿತ್ತು ಮತ್ತು ಸುದ್ದಿಯನ್ನು ಬಹುಬೇಗ ಹೇಳುವಂತಿತ್ತು. ಅಂಥ ಅಪೂರ್ವ ಘಟನೆಯನ್ನು ಅಷ್ಟು ಕಡಿಮೆ ಪದಗಳಲ್ಲಿ, ಅಷ್ಟು ಪರಿಣಾಮಕಾರಿಯಾಗಿ ಬೇರೆ ರೀತಿಯಲ್ಲಿ ಹೇಳಲು ಸಾಧ್ಯವಿರಲಿಲ್ಲವೇನೋ. ಆ ದಿನ ನ್ಯೂಯಾರ್ಕ್ ಟೈಮ್ಸ್ ನೀಡಿದ ಶೀರ್ಷಿಕೆ – MEN WALK ON MOON ಇಲ್ಲಿ ಯಾರು ಕಾಲಿಟ್ಟರು ಎಂಬುದು ಮುಖ್ಯವಲ್ಲ. ಯಾರೇ ಕಾಲಿಟ್ಟಿದ್ದರೂ ಅದು ಮುಖ್ಯವೇ ಆಗುತ್ತಿತ್ತು. ಹೀಗಾಗಿ ಚಂದ್ರನ ಮೇಲೆ ಪಾದ ಊರಿದವರ ಹೆಸರಿಲ್ಲ. ಅಂದು ಈ ಹೆಡ್ ಲೈನ್ ಕೊಟ್ಟು ಸಂಚಿಕೆ ರೂಪಿಸಿದವ ಪತ್ರಿಕೆಯ ಅಸೋಸಿಯೇಟ್ ಮ್ಯಾನೇಜಿಂಗ್ ಎಡಿಟರ್ ಅಬೆ ರೊಸೆಂಥಲ್. ಆ ದಿನದ ಸಂಚಿಕೆಗೆ ಎಲ್ಲೆಡೆಯಿಂದ ಭಾರಿ ಪ್ರಶಂಸೆ ಬಂದಿದ್ದರಿಂದ, ಕೇವಲ ಎರಡು ವಾರಗಳ ಅವಧಿಯಲ್ಲಿ ಅವರನ್ನು ಪತ್ರಿಕೆಯ ಅತ್ಯುನ್ನತ ಹುದ್ದೆಗೆ (ಮ್ಯಾನೇಜಿಂಗ್ ಎಡಿಟರ್) ಭಡ್ತಿ ನೀಡಲಾಯಿತು. ಐವತ್ತಾರು ವರ್ಷಗಳ ಕಾಲ ಅದೇ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ ರೊಸೆಂಥಲ್ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೂ ಭಾಜನರಾದರು. ಪ್ರತಿದಿನದ ಪತ್ರಿಕೆಯೂ ಇತಿಹಾಸದ ತುಣುಕು. ಇಂದಿನ ಪತ್ರಿಕೆ ನೂರು ವರ್ಷಗಳ ನಂತರ ಸಿಕ್ಕರೆ ಒಂದಿಲ್ಲೊಂದು ಕಾರಣಕ್ಕೆ ಅದು ಮಹತ್ವ ಪಡೆಯುತ್ತದೆ. ಅದಕ್ಕಿರುವ ಐತಿಹಾಸಿಕ ಮಹತ್ವವೇ ಬೇರೆಯಾಗಿರುತ್ತದೆ. ಹೀಗಾಗಿ ಪ್ರತಿದಿನವೂ ಪ್ರೀತಿ, ಶ್ರದ್ಧೆಯಿಂದ ಸಂಚಿಕೆಯನ್ನು ರೂಪಿಸಬೇಕು. ಒಂದಿಲ್ಲೊಂದು ಕಾರಣಕ್ಕೆ ಅದು ಇತಿಹಾಸದ ಸ್ಮರಣಿಕೆಯಾಗಬಹುದು.