Monday, 25th November 2024

ಲಾಕ್ ಡೌನ್ ಸಾಹಿತ್ಯ ಕೃಷಿ !

ಲಾಕ್ ಡೌನ್ ಸಾಹಿತ್ಯಕೃಷಿ !
– ವಿಶ್ವೇಶ್ವರ ಭಟ್

ಪ್ರತಿದಿನ ನನಗೆ ಏನಿಲ್ಲವೆಂದರೂ ‘ಭಟ್ಟರ ಸ್ಕಾಚ್’ ಗಾಗಿ 60-70 ಪ್ರಶ್ನೆಗಳು ಬರುತ್ತವೆ. ಆ ಪೈಕಿ 20-30 ಪೋಸ್ಟ್ ಕಾರ್ಡ್ ಗಳಲ್ಲಿ ಬರುತ್ತವೆ. ಉಳಿದವು ವಾಟ್ಸಾಪ್ ಮತ್ತು ಇಮೇಲ್ ಮೂಲಕ.

ಯಾವಾಗ ಲಾಕ್ ಡೌನ್ ಶುರುವಾಯಿತೋ, ಅಂದಿನಿಂದ ಪ್ರತಿದಿನ ಏನಿಲ್ಲವೆಂದರೂ ನೂರೈವತ್ತು ಪ್ರಶ್ನೆಗಳು ಬರಲಾರಂಭಿಸಿವೆ. ಆ ಪೈಕಿ ನಾನು ಉತ್ತರಿಸುವುದು ಕೇವಲ ಹತ್ತು ಪ್ರಶ್ನೆಗಳಿಗೆ. ಎಲ್ಲ ಪ್ರಶ್ನೆಗಳನ್ನೂ ತೆಗೆದುಕೊಳ್ಳಲು ಆಗುವುದಿಲ್ಲವಲ್ಲಾ ಎಂಬ ಬೇಸರ.

ಅಷ್ಟಾದರೂ ಕೆಲವರು ನಿತ್ಯ ಪ್ರಶ್ನೆಗಳನ್ನು ಕಳಿಸುತ್ತಾರೆ. ಈಗ ಪೋಸ್ಟ್ ಕಾರ್ಡ್ ನಲ್ಲಿ ಯಾರೂ ಪ್ರಶ್ನೆಗಳನ್ನು ಕಳಿಸುವುದಿಲ್ಲ. ಎಲ್ಲರೂ ವಾಟ್ಸಾಪ್ ಮತ್ತು ಇಮೇಲ್ ಮೂಲಕವೇ. ಲಾಕ್ ಡೌನ್ ಮುಂದುವರಿದರೆ ಪೋಸ್ಟ್ ಕಾರ್ಡಿನಲ್ಲಿ ಬರೆಯುವ ಅಲ್ಪ ಸ್ವಲ್ಪ ಮಂದಿಯೂ ಆ ಅಭ್ಯಾಸವನ್ನು ನಿಲ್ಲಿಸಬಹುದು.

ಅಲ್ಲಿಗೆ ಪತ್ರ ಬರೆಯುವ ಸಂಪ್ರದಾಯ ಅಥವಾ ಪರಂಪರೆಗೆ ಪೂರ್ಣ ವಿರಾಮ ಹಾಕಿದಂತಾಗಬಹುದು.

ಈ ಕರೋನಾವೈರಸ್ ಜಗತ್ತಿನಾದ್ಯಂತ ಮಾಡಿದ ಅವಾಂತರಗಳು ಅಷ್ಟಿಷ್ಟಲ್ಲ. ಆದರೆ ಕೆಲವೊಂದು ಒಳ್ಳೆಯ ಕೆಲಸವನ್ನೂ ಮಾಡಿದೆ.

ಲಾಕ್ ಡೌನ್ ಶುರುವಾದಂದಿನಿಂದ ಎಲ್ಲರಿಗೂ ಸಮಯ ಸಿಗುತ್ತಿದೆ. ಟೈಮಿಲ್ಲ ಅಂತ ಯಾರೂ ಹೇಳುತ್ತಿಲ್ಲ. ಮೀಟಿಂಗಿನಲ್ಲಿದ್ದೇನೆ ಎಂದು ಯಾರೂ ಸುಳ್ಳು ಹೇಳುತ್ತಿಲ್ಲ. ಪಕ್ಕದ ಬೀದಿಯಲ್ಲಿದ್ದರೂ ದುಬೈದಲ್ಲಿದ್ದೇನೆ ಎಂದು ಯಾರೂ ಹೇಳುತ್ತಿಲ್ಲ.

ಪತ್ರಿಕೆಗಳಿಗೆ ಬರೆಯುವವರ ಸಂಖ್ಯೆ ದಿಢೀರ್ ಹೆಚ್ಚಿದೆ. ಬರೆಯಬೇಕೆಂಬ ಒತ್ತಾಸೆಯಿದ್ದರೂ, ಜೀವನದಲ್ಲಿ ಎಂದೂ ಬರೆಯದವರೆಲ್ಲ ಬರೆಯುತ್ತಿದ್ದಾರೆ. ಇವರೆಲ್ಲಾ ಬೇರೆ ಬೇರೆ ಕ್ಷೇತ್ರಗಳಲ್ಲಿರುವವರು.

ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ಪ್ರಾಕ್ಟಿಸಿಂಗ್ ಡಾಕ್ಟರುಗಳು ಬರೆಯಲಾರಂಭಿಸಿದ್ದಾರೆ. ‘ಕನ್ನಡದಲ್ಲಿ ಬರೆಯುವುದೆಂದರೆ ಕಷ್ಟ, ಇಂಗ್ಲೀಷಿನಲ್ಲಿ ಬರೆದು ಕಳಿಸುತ್ತೇನೆ, ನೀವು ಕನ್ನಡಕ್ಕೆ ಅನುವಾದ ಮಾಡಿಕೊಳ್ಳಿ’ ಎಂದು ಹೇಳುವ ಕಲಬೆರಕೆ ವರ್ಗವೊಂದಿದೆ. ಅಂಥವರೂ ಕನ್ನಡದಲ್ಲಿಯೇ ಬರೆದು ಕಳಿಸುತ್ತಿದ್ದಾರೆ. ಇವರೆಲ್ಲಾ ಎಂದೂ ಬರೆದವರೇ ಅಲ್ಲ.

ಸಮಾಧಾನದ ಸಂಗತಿಯೆಂದರೆ, ಬಹಳ ವರ್ಷಗಳ ನಂತರ ಮನೆಯಲ್ಲಿರುವ ಗೃಹಿಣಿಯರು ಬರೆಯುತ್ತಿದ್ದಾರೆ. ಇವರೆಲ್ಲಾ ದೈನಂದಿನ ಟಿವಿ ಧಾರಾವಾಹಿ ಭರಾಟೆಯಲ್ಲಿ ಕಳೆದು ಹೋಗಿದ್ದರು. ಇವರು ‘ಗೃಹಶೋಭಾ’, ‘ಸುಧಾ‘ ಮತ್ತು ‘ತರಂಗ‘ಗಳಲ್ಲಿ ಬರುವ ಧಾರಾವಾಹಿಗಳನ್ನು ಓದುವುದನ್ನು ಸಹ ಬಿಟ್ಟುಬಿಟ್ಟಿದ್ದರು.

ಯಾವ ಮನೆಯಲ್ಲಿ ತಾಯಿ ಓದುತ್ತಾಳೋ, ಬರೆಯುತ್ತಾಳೋ ಆ ಮನೆಯಲ್ಲಿ ಅಕ್ಷರ ಸಂಸ್ಕೃತಿ ಜಾಗೃತವಾಗಿರುತ್ತದೆ. ತಾಯಂದಿರು ಓದುವುದನ್ನು ಬಿಟ್ಟ ನಂತರ, ಟಿವಿಯಲ್ಲಿ ಹೂತು ಹೋದ ನಂತರ, ಪುಸ್ತಕಗಳು ಬೇಡದ ವಸ್ತುಗಳಾಗಿದ್ದವು. ಆದರೆ ಈಗ ಮಹಿಳೆಯರು ಮುಂಚಿನಂತೆ ಪುಸ್ತಕ ಹಿಡಿಯುತ್ತಿದ್ದಾರೆ. ಬರೆಯಲು ಕುಳಿತುಕೊಳ್ಳುತ್ತಿದ್ದಾರೆ.

ಇದಕ್ಕೆ ಕಾರಣ ಇಂದು ಒಂದೇ ದಿನ ನನಗೆ ಮಹಿಳೆಯರು ಬರೆದ ಹನ್ನೊಂದು ಲೇಖನಗಳು ಬಂದಿವೆ. ಇವರೆಲ್ಲಾ ನನ್ನ ‘ವಿಜಯ ಕರ್ನಾಟಕ’ ದಿನಗಳಲ್ಲಿ ಬರೆಯುತ್ತಿದ್ದವರು. ಆನಂತರ ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಹಾಗೂ ವರಾತ ಮಾಡಿದರೆ ಸವುಡು ಮಾಡಿಕೊಂಡು ಬರೆಯುತ್ತಿದ್ದವರು. ಈಗ ಅವರೆಲ್ಲಾ ಸ್ವಇಚ್ಛೆಯಿಂದ ಬರೆಯುತ್ತಿದ್ದಾರೆ.

ಮೊನ್ನೆ ಕವಿ ನಿಸಾರ ಅಹಮದ್ ಅವರು ತೀರಿಕೊಂಡಾಗ, ಕತಾರ್ ನಿಂದ ದೀಪಕ್ ಶೆಟ್ಟಿ ಅವರು ಲೇಖನ ಕಳಿಸಿದ್ದರು. ಪ್ರಾಯಶಃ ಅವರೆಂದೂ ಪತ್ರಿಕೆಗಳಿಗೆ ಬರೆದವರಲ್ಲ. ನಿಸಾರರ ಕುರಿತು ಏನಿಲ್ಲವೆಂದರೂ ಮೂವತ್ತಕ್ಕೂ ಹೆಚ್ಚು ಜನ ಲೇಖನಗಳನ್ನು ಕಳಿಸಿದ್ದರು.

ಲಾಕ್ ಡೌನ್ ಇಲ್ಲದಿದ್ದರೆ ಒಬ್ಬರೂ ಬರೆಯುತ್ತಿರಲಿಲ್ಲವೇನೋ? ಗಣ್ಯವ್ಯಕ್ತಿಗಳು ತೀರಿಕೊಂಡಾಗ ಗಣ್ಯರಿಂದ ಬರೆಯಿಸುವುದು ಕಷ್ಟ. ನಿಸಾರ ಅಹಮದ್ ತೀರಿಕೊಂಡ ದಿನ ಅನೇಕರು ಸ್ವಯಂಸ್ಫೂರ್ತಿಯಿಂದ ಬರೆದು ಕಳಿಸಿದ್ದು ವಿಶೇಷವೇ ಆಗಿತ್ತು.

ಲಾಕ್ ಡೌನ್ ಮುಗಿದ ನಂತರವೂ, ಇದು ಮುಂದುವರಿದರೆ ಎಷ್ಟು ಚೆಂದ ಅಲ್ಲವೇ ?

(ಸಂಪಾದಕರ ಸದ್ಯಶೋಧನೆ ಅಂಕಣದಿಂದ)