Thursday, 31st October 2024

ಶಂಕಿತರು, ಸೋಂಕಿತರಿಗಿಂತ ಕೊಂಕಿತರಿಗೇನು ಮಾಡೋಣ?

ಪ್ರಸ್ತುತ
– ಜಿ. ಪ್ರತಾಪ್ ಕೊಡಂಚ

ಮಾತಿನಲ್ಲಿ ಮೋಡಿ ಮಾಡುವುದೇ ಮೋದಿ ಕಾಯಕ, ಆರಿಸಿದ ತಪ್ಪಿಗೆ ಅನುಭವಿಸಿ ಎಂಬಂಥ ಮಾತುಗಳು, ಇಡೀ ಪ್ರಪಂಚವೇ ಕರೋನಾದ ಕ್ರೌರ್ಯದಲ್ಲಿ ಬಳಲಿ ಬೆಂಡಾಗುತ್ತಿರುವುದನ್ನು ನೋಡಿಯೂ ಆಡುತ್ತಿರುವುದು ಅಕ್ಷಮ್ಯ.
ಸಂಪೂರ್ಣ ಲಾಕ್ ಡೌನ್ ಮಾಡಿ, ದೇಶವನ್ನೇ ಆರ್ಥಿಕ ದುಸ್ಥಿತಿಗೆ ತಳ್ಳಿ, ಬಡ ಮಧ್ಯಮ ವರ್ಗದ ಬದುಕನ್ನೇ ಕಸಿದುಕೊಳ್ಳುವ ಹುನ್ನಾರವೆಂಬ ಆಪಾದನೆ ಕೂಡ ಅಲ್ಲಲ್ಲಿ ಹರಿದಾಡುತ್ತಿದೆ. ಈ ರೀತಿಯ ಕಠಿಣ ನಿರ್ಧಾರಗಳಿಂದ ತೆವಳಿ ಸಾಗುತ್ತಿದ್ದ ಭಾರತೀಯ ಆರ್ಥಿಕತೆ ಜರ್ಜರಿತಗೊಳ್ಳುವುದು ದಿಟ. ಆದರೆ ಲಾಕ್ ಡೌನ್ ಉದ್ದೇಶ ತಮ್ಮ ಸರಕಾರದ ವೈಫಲ್ಯವನ್ನು ಮುಚ್ಚಿಕೊಳ್ಳಲು ಸರಕಾರ ಹೂಡಿದ ಷಡ್ಯಂತ್ರ ಎಂದು ಬಿಂಬಿಸುವ ಪ್ರಯತ್ನ ಮೋದಿ ಕಡು ವಿರೋಧಿಗಳೂ ಒಪ್ಪುವುದಿಲ್ಲ.

ಕೊಂಕಿತರೇ? ಇದೇನಿದು ಹೊಸ ಪದ ಪುಂಜ! ಏನಿದರರ್ಥ ಎಂಬ ಗೊಂದಲವೇ? ಸ್ವಲ್ಪ ಇರಿ, ನಿಮ್ಮ ಗೊಂದಲವನ್ನು ಪರಿಹರಿಸಿಯೇ ನಾನಿಂದು ಹೇಳ ಹೊರಟಿರುವ ವಿಷಯಕ್ಕೆ ಬರುತ್ತೇನೆ. ಎಲ್ಲದರಲ್ಲೂ ತಪ್ಪು ಕಂಡು ಹಿಡಿದು, ಅದನ್ನೇ ಎತ್ತಿ, ಆಡಿ ತಾವು ತ್ರಿಕಾಲ ಜ್ಞಾನಿಗಳು, ದಾರ್ಶನಿಕರು ಎಂಬಂತೆ ಸ್ವಯಂ ಬಿಂಬಿಸಿಕೊಂಡು ‘ಕೊಂಕು’ ನುಡಿಯುವವರನ್ನೇ ನಾನಿಲ್ಲಿ ‘ಕೊಂಕಿತರು’ ಎಂದು ಹೇಳ ಹೊರಟಿದ್ದು. ನಿಜವಾಗಿಯೂ ಅಂತಹ ಶಬ್ದವಿಲ್ಲದಿದ್ದಲ್ಲಿ ಕ್ಷಮಿಸಿ. ಕೆಲ ದಿನಗಳಿಂದ ಜಗದೆಲ್ಲೆಡೆ ಮನೆ, ಮನ ಕೆಡಿಸುತ್ತಿರುವ ಕರೋನಾ ರೌದ್ರ ತಾಂಡವ ಹದ್ದುಬಸ್ತಿನಲ್ಲಿಡಲು ಭಾರತ ಸರಕಾರ ತೆಗೆದುಕೊಂಡಿರುವ ಕೆಲ ಕ್ರಮಗಳ ಕುರಿತ ಕೊಂಕು ನುಡಿಗಳಿಗೆ ಉತ್ತರಿಸಿ, ಕೀಳಿರಿಮೆ ಹೋಗಲಾಡಿಸುವ ಧನಾತ್ಮಕ ಪ್ರಯತ್ನ ನನ್ನದು. ವಾಟ್ಸಾಪ್, ಫೇಸ್ಬುಕ್ ಆದಿಯಾಗಿ ಬಗೆ ಬಗೆಯ ಸಾಮಾಜಿಕ ಜಾಲತಾಣಗಳಲ್ಲಿ ಪದೇಪದೆ ಎತ್ತಿ ಆಡುತ್ತಿರುವ, ಹೀಗೆ ಮಾಡಬಹುದಿತ್ತು, ಹಾಗೆ ಮಾಡಬಹುದಿತ್ತು, ನಮ್ಮ ನಾಯಕರ ಮಾತು ಕೇಳಬೇಕಿತ್ತು, ಯುರೋಪ್, ಅಮೆರಿಕಗಳೇ ನಿಯಂತ್ರಿಸಲಾಗದ ಮಾರಿಗೆ ನಾವೇನು ಮಾಡಲು ಸಾಧ್ಯ? ನಮ್ಮ ಕಥೆ ಮುಗಿಯಿತೆಂದು ಷರಾ ಬರೆಯ ಹೊರಟ ಕೊಂಕು ನಿಲುವುಗಳಿಗೆ ಉತ್ತರಿಸುವ ಮತ್ತು ನಮಗಿದ್ದ ಸಂದಿಗ್ದತೆ, ಅಡಚಣೆಗಳ ನಡುನಡುವೆ ಪ್ರತಿರೋಧ ಒಡ್ಡಬಲ್ಲ ದೂರದರ್ಶಿ ನಾಯಕತ್ವದ ದೃಢನಿರ್ಧಾರ ಬಿಡಿಸಿಡುವುದು ಅವಶ್ಯವೆನಿಸಿತು. ಅದಕ್ಕಾಗಿಯೇ ಅಹುದಹುದೆನಿಸುವಂತೆ ಹರಡಲು ಹೊರಟಿರುವ ಕರೋನಾಕ್ಕೂ ಮಿಗಿಲಾದ ಋಣಾತ್ಮಕ ಕೊಂಕುಗಳನ್ನು ಪ್ರಸ್ತುತತೆಯ ಅರಿವಿನ ಬೆಳಕಿನಲ್ಲಿ ನೋಡಬೇಕಿದೆ.

ಸರಕಾರ 15 ದಿನಗಳ ಮುಂಚೆ ವಿದೇಶ ಸಂಚಾರಿಗಳನ್ನು ಬರದಂತೆ ನಿರ್ಬಂಧಿಸಿ ಬಿಡಬೇಕಿತ್ತು. ಮಂತ್ರಿ, ಮಾಗಧರ ಮನೆಯವರನ್ನೆಲ್ಲ ಕರೆಸಿಕೊಳ್ಳಲೇ ವಿಮಾನಯಾನ ತೆರೆದಿಟ್ಟು, ಅನಂತರ ನಿರ್ಬಂಧ ವಿಧಿಸಲಾಯಿತೆಂಬುದೇ ಮೊದಲನೇ ಕೊಂಕೋಕ್ತಿ! ಮಂತ್ರಿ ಮಾಗಧರ ಮಕ್ಕಳೂ ಮರಳಿ ಬಂದವರಲ್ಲಿ ಇದ್ದಿರಬಹುದಾದರೂ, ಹೊಟ್ಟೆಪಾಡಿಗಾಗಿ ವಿದೇಶಗಳಲ್ಲಿದ್ದ ಅಸಂಖ್ಯಾತ ಭಾರತೀಯರೂ ಇದರಲ್ಲಿದ್ದರೆಂಬುದು, ಸರಕಾರಗಳು ಬಿಡುಗಡೆ ಮಾಡಿರುವ ಹೋಂ ಕ್ವಾರಂಟೈನ್ ಪಟ್ಟಿ ನೋಡಿದಲ್ಲಿ ದೃಢವಾಗುತ್ತದೆ. ಜಾಗತೀಕರಣದ ಬೆಳಕಿನಲ್ಲೇ ಮುನ್ನುಗ್ಗುತ್ತಿರುವ ಈ ಪ್ರಪಂಚದಲ್ಲಿಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧಿಸುವುದು ನಿಜಕ್ಕೂ ಸಂದಿಗ್ದ ನಿರ್ಣಯ. ವ್ಯಾವಹಾರಿಕವಾಗಿ ತೀವ್ರ ತರಹದ ಹೊಡೆತ ಬೀಳುವ ಹೆಜ್ಜೆ. ಸಣ್ಣ ಅವಧಿಯ ಕೆಲಸಕ್ಕೋ, ತಿರುಗಾಟಕ್ಕೊ ಹೋದ ದೇಶೀ ಬಂಧು ಭಾಂಧವರಿಗೆ, ಕಣ್ತೆರೆದು ನೋಡುವಷ್ಟರಲ್ಲಿ ಬಾಗಿಲು ಮುಚ್ಚಿದೆ ಎಂದು ಹಠಾತ್ತಾನೆ ಹೇಳಿದರೆ ಹೇಗಾಗಬಹುದು? ಶಾಲೆಗೆ ಹೋಗುತ್ತಿರುವನಮ್ಮ ಮನೆಯ ಪುಟ್ಟ ಮಗುವಿಗೆ ಸಿಡುಬು ಅಥವಾ ಇನ್ನಾವುದೋ ಅಂಟು ರೋಗ ಬಂದಿತೆಂದ ಮಾತ್ರಕ್ಕೆ, ಮಗುವನ್ನು ನೀವು ಮನೆಗೆ ಸೇರಿಸಿಕೊಳ್ಳದೆ ಇರುತ್ತಿದ್ದಿರೆ? ಮನೆಯಲ್ಲೇ ಇಟ್ಟುಕೊಂಡು ಆರೈಕೆ ಮಾಡಿ ಇನ್ನಿತರರಿಗೆ ಹರಡದಂತೆ ಜಾಗ್ರತೆ ಮಾಡುತ್ತಿರಲಿಲ್ಲವೇ? ಒಮ್ಮೆ ನಿಮ್ಮಲ್ಲೇ ಆತ್ಮಾವಲೋಕನ ಮಾಡಿಕೊಳ್ಳಿ. ಒಂದೊಮ್ಮೆ ಹಠಾತ್ತನೆ ಅಂತಹ ನಿರ್ಧಾರ ತೆಗೆದುಕೊಂಡಿದ್ದರೆ ಪವಿತ್ರ ಯಾತ್ರೆಗೆ ತೆರೆಳಿದ್ದ ಒಂದು ಜನಾಂಗವನ್ನು ದೇಶದಿಂದ ಹೊರಗಿಡುವ ಪಕ್ಷಪಾತಿ ಸರಕಾರ ಅಂತಲೂ, ವಿದೇಶದಲ್ಲಿದ್ದವರ ಹಿತ ರಕ್ಷಣೆ ಮರೆತು ಬೇಜವಾಬ್ದಾರಿಯ ಸರಕಾರ ಅಂತಲೋ ಇದೇ ಕೊಂಕಿತರು ಹುಯಿಲೆಬ್ಬಿಸುತ್ತಿದ್ದರು, ಹೀಗಿದ್ದೂ ಒಂದು ಹಂತದ ನಂತರವಾದರೂ ವಿದೇಶಿ ವಿಮಾನಯಾನ ಮುಚ್ಚುವ ದೃಢ ನಿರ್ಧಾರ ತಗೆದುಕೊಂಡದ್ದು ಪ್ರಶಂಸನೀಯ. ಅಮೆರಿಕದಂಥ ಬಲಿಷ್ಠ ರಾಷ್ಟ್ರಗಳೂ ಇಂತಹ ಪೂರ್ಣ ಪ್ರಮಾಣದ ನಿಲುವು ಇಂದಿಗೂ ತೆಗೆದುಕೊಳ್ಳಲಾಗದೇ ತತ್ತರಿಸಿಬಿಟ್ಟಿವೆ.
ಸಂಪೂರ್ಣ ಲಾಕ್ ಡೌನ್ ಮಾಡಿ, ದೇಶವನ್ನೇ ಆರ್ಥಿಕ ದುಸ್ಥಿತಿಗೆ ತಳ್ಳಿ, ಬಡ ಮಧ್ಯಮ ವರ್ಗದ ಬದುಕನ್ನೇ ಕಸಿದುಕೊಳ್ಳುವ ಹುನ್ನಾರವೆಂಬ ಆಪಾದನೆ ಕೂಡ ಅಲ್ಲಲ್ಲಿ ಹರಿದಾಡುತ್ತಿದೆ. ಈ ರೀತಿಯಕಠಿಣ ನಿರ್ಧಾರಗಳಿಂದ ತೆವಳಿ ಸಾಗುತ್ತಿದ್ದ ಭಾರತೀಯ ಆರ್ಥಿಕತೆ ಜರ್ಜರಿತಗೊಳ್ಳುವುದು ದಿಟ. ಆದರೆ ಲಾಕ್ ಡೌನ್ ಉದ್ದೇಶ ತಮ್ಮ ಸರಕಾರದ ವೈಫಲ್ಯವನ್ನು ಮುಚ್ಚಿಕೊಳ್ಳಲು ಸರಕಾರ ಹೂಡಿದ ಷಡ್ಯಂತ್ರ ಎಂದು ಬಿಂಬಿಸುವ ಪ್ರಯತ್ನ ಮೋದಿ ಕಡು ವಿರೋಧಿಗಳೂ ಒಪ್ಪುವುದಿಲ್ಲ. ಭಾರತದ ಮಾಜಿ ವಿತ್ತ, ಗೃಹಮಂತ್ರಿಗಳೂ ಆಗಿದ್ದ, ಪಿ. ಚಿದಂಬರಂ ಕೂಡಾ ಲಾಕ್ ಡೌನ್ ನಿರ್ಧಾರಕ್ಕೆ ನೀಡಿದ ಸಂಪೂರ್ಣ ಬೆಂಬಲವೇ ಇಂತಹ ಆಪಾದನೆಗಳನ್ನು ಹುಸಿಯಾಗಿಸಿ ಬಿಡುತ್ತದೆ.

ಆದರೆ ವಿದೇಶದಿಂದ ಬಂದವರಾದಿಯಾಗಿ, ಲಾಕ್ ಡೌನ್ ಘೋಷಣೆಯ ನಂತರವೂ ಅನವಶ್ಯಕ ತಿರುಗಾಡಿದ ನಮ್ಮ ದೇಶ ಭಾಂಧವರ ನಡೆ ನಿಜಕ್ಕೂ ಖಂಡನೀಯ. ಪರಿಸ್ಥಿತಿಯ ವಿಷಮತೆಯನ್ನು ನಿರ್ಲಕ್ಷಿಸಿ ಜೀವಂತ ಮಾನವ ಬಾಂಬುಗಳಂತೆ ತಿರುಗಿದ ಇಂಥವರಲ್ಲಿ ಬಹುತೇಕರು ಸುಶಿಕ್ಷಿತರು ಮತ್ತು ಬಲಾಢ್ಯರೆಂಬುದು ವಿಪರ್ಯಾಸ. ತನ್ನ ದೇಶದ ಜನರ ಜೀವ ಉಳಿಸಲು ಅನ್ಯಥಾ ದಾರಿ ತಕ್ಷಣಕ್ಕೆ ಕಾಣಿಸುತ್ತಿಲ್ಲ ಎಂದು ಕ್ಷಮೆ ಕೋರುತ್ತಾ, ಈ ಕಠಿಣ ನಿರ್ಧಾರಕ್ಕೆ ಸಹಕರಿಸಿ ಎಂದು ಪ್ರಧಾನಿಗಳು ಪರಿಪರಿಯಾಗಿ ಕೇಳಿಕೊಂಡರೂ, ಗಾಂಭೀರ್ಯತೆ ಅರಿಯದ ಬುದ್ಧಿಿಗೇಡಿ ವರ್ತನೆ ಅನಾಗರೀಕ.

ಮಾತಿನಲ್ಲಿ ಮೋಡಿ ಮಾಡುವುದೇ ಮೋದಿ ಕಾಯಕ, ಆರಿಸಿದ ತಪ್ಪಿಗೆ ಅನುಭವಿಸಿ ಎಂಬಂತ ಮಾತುಗಳು, ಇಡೀ ಪ್ರಪಂಚವೇ ಕರೋನಾದ ಕ್ರೌರ್ಯದಲ್ಲಿ ಬಳಲಿ ಬೆಂಡಾಗುತ್ತಿರುವುದನ್ನು ನೋಡಿಯೂ ಆಡುತ್ತಿರುವುದು ಅಕ್ಷಮ್ಯ. ಕರುನಾಡಿನ ಮಂತ್ರಿವೇರೇಣ್ಯರೊಬ್ಬರಂತೂ ಶಾಸನ ಸಭೆಯಲ್ಲೇ ಕೇಂದ್ರ ಸರಕಾರ ಸಿಎಎ ಮತ್ತು ಎನ್‌ಆರ್‌ಸಿ ವಿರೋಧವನ್ನು ಮಟ್ಟಹಾಕಲೇ ಬಿಡುತ್ತಿರುವ ಛೂಮಂತ್ರ, ಕರೋನಾ ಅಂದುಬಿಟ್ಟಿದ್ದರು! ಪರಿಸ್ಥಿತಿ ಬಿಗಾಡಾಯಿಸುತ್ತಿದಂತೆ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ ಬೀಳುವ ವಾಸನೆ ಹಿಡಿದ ಅದೇ ಮಂತ್ರಿವರೇಣ್ಯರು, ಏಕಾಏಕಿ ನಿರ್ಧಾರ ಮಾಡಿದರೆ ಅಲ್ಲಿದ್ದ ತಮ್ಮ ಮಕ್ಕಳು ಗತಿ ಏನು? ಅವರನ್ನು ಕರೆ ತರಲು ಸಮರ್ಪಕ ವ್ಯವಸ್ಥೆ ಮಾಡಿಸಿ ಎಂದು ತದನಂತರ ಬಿನ್ನವಿಸಿಕೊಂಡರೆನ್ನಿ!
ಕೊಂಕಿತರ ಕೊಂಕೋಕ್ತಿ ಬದಿಗಿಟ್ಟು ನೋಡಿದರೆ ಒಂದು ದಿನದ ಜನತಾ ಕರ್ಫ್ಯೂ ಆಗಲಿ, ಇಪ್ಪತ್ತೊೊಂದು ದಿನದ ಲಾಕ್‌ಡೌನ್‌ನಂತಹ ನಿರ್ಧಾರಗಳು, ಪ್ರಪಂಚದ ಯಾವುದೇ ರಾಷ್ಟ್ರಗಳಲ್ಲಿ ತೆಗೆದುಕೊಂಡಿರದ ದಿಟ್ಟ, ಧೀಮಂತ ನಿರ್ಧಾರ. ಸದ್ಯ ನಾನಿರುವ ಅಮೆರಿಕದ ಪೆನಿಸಿಲ್ವೇನಿಯಾ ರಾಜ್ಯ ಕರೋನಾ ಆಕ್ರಮಣಕ್ಕೆೆ ತತ್ತರಿಸುತ್ತಿದ್ದರೂ ಸ್ಥಳೀಯ ಸರಕಾರಗಳು ಹೊರಡಿಸಿದ ‘ಸ್ಟೇ ಅಟ್ ಹೋಂ’ ಆದೇಶಗಳು ಪೂರ್ಣ ರಾಜ್ಯಕ್ಕಲ್ಲ, ಕೆಲವು ಕೌಂಟಿ(ಜಿಲ್ಲೆ)ಗಳಿಗೆ ಮಾತ್ರ ಸೀಮಿತವಾಗಿದೆ. ಅಮೆರಿಕ ತುರ್ತು ಪರಿಸ್ಥಿತಿಯ ಸಂದರ್ಭವೆಂದು ಘೋಷಿಸಿಕೊಂಡರೂ ಕಟ್ಟುನಿಟ್ಟಿನ ಲಾಕ್ ಡೌನ್ ದೇಶದಾದ್ಯಂತ ಜಾರಿಯಲ್ಲಿಲ್ಲ. ರಾಜ್ಯ ಮತ್ತು ಕೇಂದ್ರದ ನಡುವಿನ ಅಸಮನ್ವಯತೆ, ವ್ಯತಿರಿಕ್ತ ನಿರ್ಧಾರಗಳು ಹೋರಾಟದ ಶಕ್ತಿ ಕುಂದಿಸಿದೆ. ಸಂಪದ್ಭರಿತ ಅಭಿವೃದ್ಧಿ ಹೊಂದಿದ ಅಮೆರಿಕ, ಯೂರೋಪಿನ ಹಲವು ದೇಶಗಳಲ್ಲಿ ವೆಂಟಿಲೇಟರ್, ಮತ್ತು ವೈದ್ಯಕೀಯ ಸುರಕ್ಷತಾ ಉಪಕರಣಗಳ ತೀವ್ರ ಕ್ಷಾಮ ಕಾಣಿಸಿಕೊಂಡಿದೆ. ಹೀಗಿದ್ದಾಗ ಸಮೂಹ ಹರಡುವಿಕೆಯ ಹಂತ ತಲುಪಿದರೆ ಅಧಿಕ ಜನಸಂಖ್ಯೆೆಯ ಭಾರತದಂಥ ದೇಶದ ಪರಿಸ್ಥಿತಿ ಊಹಿಸಲೂ ಅಸಾಧ್ಯ. ಕಣ್ಣೆದುರೇ ಹಲವು ಸಂಪದ್ಭರಿತ ಮುಂದುವರಿದ ರಾಷ್ಟ್ರಗಳು ಕರೋನಾ ಕಬಂಧ ಬಾಹುವಿನಿಂದ ಬಿಡಿಸಿಕೊಳ್ಳಲಾಗದೆ ಮಂಡಿಯೂರಿರುವುದನ್ನು ನೋಡಿಯೂ ನಿರ್ಲಕ್ಷಿಸಿದರೆ, ರಾತ್ರಿ ಕಂಡಬಾವಿಗೆ ಹಗಲು ಹಾರಿದಂತೆ ಅಲ್ಲವೇ? ಹೀಗಿದ್ದೂ ಸರಕಾರ ಜನ ಜೀವನದ ಉಳಿವಿಗಾಗಿ ತೆಗೆದುಕೊಂಡ ಕಠಿಣ ನಿರ್ಧಾರವನ್ನು, ಅಸಮರ್ಥ ಮತ್ತು ಅಸಮರ್ಪಕ ಎಂದು ಬಿಂಬಿಸುವುದು ಕೊಂಕಿತರ ವಿಫಲ ಪ್ರಯತ್ನ.

ಅಯ್ಯೋ ನಮ್ಮಲ್ಲಿ ಪರೀಕ್ಷೆ ಮಾಡಿಸಲು ಕಿಟ್ ಗಳೇ ಇಲ್ಲ. ಭಾರತದಲ್ಲಿನ ಅಂಕಿ, ಸಂಖ್ಯೆ ಸರಿ ಇಲ್ಲ ಎಂಬುದು ಇನ್ನೊೊಂದು ಕೊಂಕೋಕ್ತಿ. ಅವಶ್ಯಕತೆ ತಕ್ಕಂತೆ ಪರೀಕ್ಷೆ ಮಾಡುವ ಸಾಮರ್ಥ್ಯ ಸದ್ಯಕ್ಕಂತೂ ಜಗತ್ತಿನ ಯಾವುದೇ ಬಲಾಢ್ಯ ರಾಷ್ಟ್ರಗಳಲ್ಲೂ ಕಾಣಿಸುತ್ತಿಲ್ಲ. ಭಾರತವೂ ಇದರಿಂದ ಹೊರತೇನಲ್ಲ. ಆ ಮಟ್ಟಿಗೆ ಈ ವಾದ ಸರಿ ಎನಿಸಿದರೂ ಇಂತಹ ಕೀಳಿರಿಮೆ ನಮ್ಮಲೇ ನಮಗ್ಯಾಕೋ ಎಂದು ನನಗಂತೂ ಅರಿವಾಗುತ್ತಿಲ್ಲ. ಹರಡುವಿಕೆಯನ್ನೇ ತಡೆಗಟ್ಟಿಕೊಂಡರೆ ಆ ಪ್ರಮಾಣದ ಪರೀಕ್ಷೆಯ ಅವಶ್ಯಕತೆಯೂ ಬರಲಿಕ್ಕಿಲ್ಲ ಎಂಬ ನಮ್ಮ ನಾಯಕತ್ವದ್ದು ಎಂಬ ಧನಾತ್ಮಕ ಚಿಂತನೆ ನಾವ್ಯಾಕೆ ಮಾಡುತ್ತಿಲ್ಲ?
ಇನ್ನೊೊಂದು ಕೊಂಕು ಹಲವು ಕೋಟಿ ರುಪಾಯಿಗಳನ್ನು ವ್ಯಯಿಸಿ ಸರದಾರ ಪಟೇಲ್ ಪ್ರತಿಮೆ ಸ್ಥಾಪಿಸುವ ಬದಲು, ಆಸ್ಪತ್ರೆಗಳನ್ನು ಮಾಡಬಹುದಿತ್ತೆೆಂಬುದು. ಸರದಾರ್ ಪಟೇಲ್ ಸ್ಮಾರಕವಾಗಲಿ, ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕವಾಗಲಿ, ಟ್ರಂಪ್ ಸ್ವಾಗತಕ್ಕೆೆ ಬಳಸಿದ ಅಥವಾ ಇನ್ನಾವುದೇ ವೆಚ್ಚ ಭಾರತ ಸರಕಾರ ಮಾಡಿರುವುದು ಕರೋನಾ ಬಂದಪ್ಪಳಿಸಿದ ಮೇಲೋ, ಬರುತ್ತಿದೆ ಎಂಬ ಸೂಚನೆ ದೊರೆತ ಮೇಲೋ ಅಲ್ಲವಲ್ಲ ಸ್ವಾಮೀ! ಹಾಗಾಗಿದ್ದರೆ ಅದನ್ನು ಅನವಶ್ಯಕ ಮತ್ತು ಬೇಜವಾಬ್ದಾರಿಯ ದುಂದುವೆಚ್ಚ ಎನ್ನಬಹುದಾಗಿತ್ತು. ಸಂಸ್ಕೃತಿ, ಪರಂಪರೆಯ ಹಿರಿಮೆ ಎತ್ತಿ ಹಿಡಿಯುವ,ಅಂತಾರಾಷ್ಟ್ರೀಯ ಸ್ತರದಲ್ಲಿ ಸ್ವಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಬಯಕೆ ಎಲ್ಲ ಸಶಕ್ತ ರಾಷ್ಟ್ರಗಳಿಗೂ ಇದೆ. ಅಂತೆಯೇ ನಮ್ಮಲ್ಲೂ ಇಂದಿನ ಮತ್ತು ಹಿಂದಿನ ಸರಕಾರಗಳು ಕಾಲ ಕಾಲಕ್ಕೆ ಅಂತಹ ವೆಚ್ಚ ಮಾಡಿವೆ. ಆರ್ಥಿಕ ಸುಸ್ಥಿತಿಯಲ್ಲಿದ್ದ ಸ್ನೇಹಿತನೊಬ್ಬ ಅದ್ದೂರಿಯ ಮದುವೆಯೋ, ಮೋಜು, ವಿಹಾರಕ್ಕೋ ವೆಚ್ಚ ಮಾಡಿದ್ದನೆಂದ ಮಾತ್ರಕ್ಕೆ, ಮುಂದೊಮ್ಮೆ ಆತ ಸೋತು ತುರ್ತು ಅವಶ್ಯಕತೆಗೆ ನಿಮ್ಮಲ್ಲಿ ಸಣ್ಣ ಮಟ್ಟದ ಸಹಾಯಕೇಳಿದರೆ, ಅಷ್ಟೆಲ್ಲ ದುಂದುವೆಚ್ಚ ಮಾಡಿದ್ದೀಯಲ್ಲ, ಆಗ ಬುದ್ಧಿ ಇರಲಿಲ್ಲವೇ? ಈಗ ಅನುಭವಿಸು ಎಂದು ಮೂದಲಿಸುವ ಕುಹಕಿಗಳಿಗಿಂಥ ಭಿನ್ನವೇನಲ್ಲ ಈ ಕೊಂಕಿತರು ಅನಿಸುವುದಿಲ್ಲವೇ?

ಪರಿಪೂರ್ಣವಲ್ಲದಿದ್ದರೂ ಈ ತನಕದ ಭಾರತದಲ್ಲಿನ ಲಾಕ್ ಡೌನ್ ನೀರಿಕ್ಷೆಗೂ ಮೀರಿ ಯಶಸ್ವಿಯಾಗುತ್ತಿದೆ ಎಂಬುದು ನನ್ನ ಅನಿಸಿಕೆ. ಈ ಅಭಿಪ್ರಾಯ ಓದಿದ ನನ್ನ ಅಮೆರಿಕನ್ ಸಹೋದ್ಯೋಗಿಯೊಬ್ಬ 1.3 ಬಿಲಿಯನ್ ಜನಸಂಖ್ಯೆಯಲ್ಲಿ ಇಂತಹ ಪ್ರಯತ್ನ ಈ ಪ್ರಮಾಣದ ಯಶಸ್ಸು ಕಂಡಿರುವುದು ಅಲ್ಲಿನ ನಾಯಕತ್ವದ ಇಚ್ಛಾಶಕ್ತಿಯ ದ್ಯೋತಕವಲ್ಲದೇ ಮತ್ತೇನಿಲ್ಲ ಎಂದು ಅಚ್ಚರಿಗೊಳ್ಳುತ್ತಾನೆ. ಕೊಂಕಿಗರ ಕೊಂಕೋಕ್ತಿಗಳು ನಿಸ್ಸತ್ವಗೊಳ್ಳಲು ಇದಕ್ಕಿಿಂತ ಹೆಚ್ಚಿನ ಸಾಕ್ಷ್ಯ ಬೇಕಿಲ್ಲವೆನಿಸುತ್ತದೆ.
ಪುರಂದರ ದಾಸರು ತಮ್ಮೊೊಂದು ದಾಸವಾಣಿಯಲ್ಲಿ ಹೇಳಿದಂತೆ, ನಿಂದಕರಿರಬೇಕು ನಿಂದಕರಿರಬೇಕು, ಹಂದಿ ಇದ್ದರೆ ಕೇರಿ ಹೆಂಗೆ ಶುದ್ಧಿಯೂ ಹಾಗೆ, ಅಂದಂದು ಮಾಡಿದ ಪಾಪದ ಮಾಮಲ, ತಿಂದು ಹೋಗುವರಯ್ಯ ನಿಂದಕರು… ಎನ್ನುವಂತೆ, ಅಂತವರು ಇರಲೂ ಬೇಕೆನ್ನಿ. ಜಗತ್ತಿನ ಎಲ್ಲ ಭಾಗಗಳಲ್ಲೂ, ತಕ್ಕ ಪ್ರಮಾಣದಲ್ಲಿ ಎಲ್ಲ ಕಾಲಮಾನಗಳಲ್ಲೂ ಇಂತವರು ಇದ್ದವರೇ. ಆದರೆ ನಿಂದಕರ ಸೋಗಿನಲ್ಲಿ ಕಾಣಿಸಿಕೊಳ್ಳುತ್ತಿರುವ ಕೊಂಕಿತರು, ದಾಸವಾಣಿಯಲ್ಲಿ ಹೇಳಿದ ನಿಂದಕರಿಗಿಂತ ವಿಭಿನ್ನ ಮತ್ತು ಅಪಾಯಕಾರಿ ಜೀವಿಗಳು.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಜನ ಮಾನಸದಲ್ಲಿ ಧನಾತ್ಮಕ ಚಿಂತನೆ ಮೂಡಿಸುವ ಕೆಲಸ ಹಲವಾರು ದಿನ ಪತ್ರಿಕೆಗಳು, ಮಾಧ್ಯಮಗಳು ಮಾಡುತ್ತಿರುವುದು ಪ್ರಶಂಸನೀಯ. ಧನಾತ್ಮಕ ಚಿಂತನೆ ಹೆಚ್ಚಿಸಿಕೊಂಡು ಸರಕಾರದ ನಿರ್ಧಾರಗಳನ್ನು ನಮ್ಮ ನಮ್ಮ ಮನೆ, ಕೇರಿ, ಊರುಗಳಲ್ಲಿ ಸ್ವಯಂ ಶಿಸ್ತಿನಿಂದ ಅನುಷ್ಠಾನಗೊಳಿಸುವ ನಾಗರಿಕ ಪ್ರಯತ್ನ ನಮ್ಮೆಲ್ಲರಿಂದಾಗಲೇಬೇಕು. ಅಷ್ಟಕ್ಕೂ ಇದೆಲ್ಲ ಏತಕ್ಕಾಗಿ ಹೇಳಿ? ನಮ್ಮ ಹಾಗೂ ನಮ್ಮವರ ಉಳಿವಿಗಾಗಿ. ಜಗತ್ತಿನ ಬಹುತೇಕ ಎಲ್ಲ ದೇಶಗಳನ್ನೂ ಹೆಚ್ಚು ಕಡಿಮೆ ಈ ಕಾಯಿಲೆ ಬಾಧಿಸಿದೆ. ಎಲ್ಲ ವಿಷಮತೆಗಳಲ್ಲೂ ಅಪೂರ್ವ ಅವಕಾಶಗಳಿವೆ ಎಂಬ ನಾಣ್ಣುಡಿಯಂತೆ, ಈ ಕ್ಲಿಷ್ಟಕರ ಸನ್ನಿವೇಶ ಎದುರಿಸುವ ಜತೆ ಜತೆಗೆ ಬೆಳವಣಿಗೆಯ ಅವಕಾಶಗಳನ್ನು ಸದುಪಯೋಗ ಗೊಳಿಸಬೇಕಿದೆ. ಅದೆಷ್ಟೋ ಬಂಧಿಖಾನೆಗಳಲ್ಲಿ ಮಾಸ್‌ಕ್‌ ತಯಾರಿಸಿಯೋ, ದೇಶೀಯವಾಗಿ ಕೃತಕ ಉಸಿರಾಟ ಉಪಕರಣ ಹಾಗೂ ಇನ್ನಿತರ ವೈದ್ಯಕೀಯ ಪರಿಕರಗಳ ಉತ್ಪಾದನೆ ದೇಶೀಯವಾಗಿ ಮಾಡುವ ಕಾರ್ಯಕ್ಷಮತೆ ಬೆಳಸಲಿದೆ. ಭಾರತದಲ್ಲಿ ಸ್ವಲ್ಪ ತಡವಾಗಿಯೇ ಕಾಣಿಸಿಕೊಂಡ ಈ ಹೆಮ್ಮಾರಿ, ಮುಂದಿನ ಕೆಲ ದಿನಗಳಲ್ಲಿ ಗಣನೀಯವಾಗಿ ಉಲ್ಬಣಗೊಳ್ಳುವ ಸಾಧ್ಯತೆಗಳಿದ್ದರೂ, ಒಂದಾಗಿ ಶಿಸ್ತು ಮತ್ತು ವೈಯಕ್ತಿಕ ತ್ಯಾಗ ಮತ್ತು ದೃಢ ಸಂಕಲ್ಪದ ಮೂಲಕ ಅಖಂಡತೆಯನ್ನು ಪ್ರದರ್ಶಿಸುವ ಅವಶ್ಯಕತೆ ಸಮಸ್ತ ಭಾರತೀಯರಿಗಿದೆ. ಜಗತ್ತಿಗೆ ಆದರ್ಶಪ್ರಾಯವಾಗಿ ಭಾರತ ಹೊರಹೊಮ್ಮುವ ಅವಕಾಶ ಸಾಕಾರಗೊಳಿಸಬೇಕಿದೆ. ಧನಾತ್ಮಕವಾಗಿ ಒಬ್ಬರಿಗೊಬ್ಬರು ಭುಜಕೊಟ್ಟು ಹುಮ್ಮಸ್ಸಿನೊಂದಿಗೆ ಕರೋನಾ ಹೆಮ್ಮಾರಿ ಸಮರ್ಥವಾಗಿ ಎದುರಿಸಿ ನಾವು, ನಮ್ಮಿಿಂದ, ನಮಗಾಗಿಯೇ ಈ ಮಹಾಯುದ್ಧ ಗೆಲ್ಲಬೇಕಾಗಿದೆ.