Monday, 16th September 2024

ಸಂಪಾದಕರ ಹೆಸರೇ ಪತ್ರಿಕೆಯಲ್ಲಿ ತಪ್ಪಾಗಿ ಪ್ರಕಟವಾದಾಗ !

– ವಿಶ್ವೇಶ್ವರ ಭಟ್

ಕೆಲವು ದಿನಗಳ ಹಿಂದೆ, ರಾಜ್ಯಮಟ್ಟದ ಪ್ರಮುಖ ಕನ್ನಡ ದಿನಪತ್ರಿಕೆಯೊಂದರಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರ ಹೆಸರು ತಪ್ಪಾಗಿ ಪ್ರಕಟವಾಗಿ ಚರ್ಚೆಗೆ ಗ್ರಾಸವಾಗಿತ್ತು.

ಪತ್ರಿಕೆಗಳಲ್ಲಿ ಹೆಸರುಗಳು ತಪ್ಪಾಗಿ ಪ್ರಕಟವಾಗುವುದು ಹೊಸತೇನಲ್ಲ. ಪ್ರತಿದಿನ ಎಲ್ಲಾ ಪತ್ರಿಕೆಗಳಲ್ಲೂ ಒಬ್ಬರ ಹೆಸರಾದರೂ ತಪ್ಪಾಗಿ ಪ್ರಕಟವಾಗುವುದು ಸ್ವಾಭಾವಿಕ.

ಆದರೆ ದತ್ತ ಅವರ ಹೆಸರಿನಲ್ಲಿ ‘ದ’ ಬದಲು, ‘ಸ’ ಪ್ರಕಟವಾಗಿ, ಅಂದರೆ ‘ದತ್ತ’ ಎಂದು ಬದಲು ‘ಸತ್ತ’ ಎಂದು ಪ್ರಕಟವಾಗಿ ತೀವ್ರ ಮುಜುಗರವಾಗಿತ್ತು. ಇದಕ್ಕೆ ಕಾರಣವೇನೇ ಇರಬಹುದು, ಯಾರೋ ಮಾಡಿದ ಈ ತಪ್ಪಿಗೆ ಸಂಪಾದಕರಿಗೆ ಸಮರ್ಥಿಸಿಕೊಳ್ಳುವುದು ಕಷ್ಟವಾಗುತ್ತದೆ.

ಹಾಗೆಂದು ಯಾರೂ ಸಹ ಬೇಕೆಂದೇ ಈ ರೀತಿಯ ಗಂಭೀರ ತಪ್ಪನ್ನು ಮಾಡುವುದಿಲ್ಲ. ಕಣ್ತಪ್ಪಿನಿಂದ, ಅಚಾನಕ್ ಆಗಿ ಈ ರೀತಿಯ ಪ್ರಮಾದ ಆಗಿಬಿಡುತ್ತದೆ. ಆದರೆ ಇದನ್ನು ಅರಗಿಸಿಕೊಳ್ಳುವ ಹೊತ್ತಿಗೆ ಸಂಪಾದಕರಿಗೆ ಏಳೋ-ಹನ್ನೊಂದೋ ಆಗಿರುತ್ತದೆ.

ಬದುಕಿರುವವರು ಸತ್ತಿದ್ದಾರೆಂದು ಪತ್ರಿಕೆಯಲ್ಲಿ ಪ್ರಕಟವಾದರೆ, ಅವರ ಆಯುಷ್ಯ ವೃದ್ಧಿಸುವುದಂತೆ. ಈ ಕಾರಣ ನೀಡಿ ದತ್ತ ಅವರನ್ನು ಸಮಾಧಾನ ಮಾಡಬಹುದು.

ಆದರೆ ಓದುಗರನ್ನು ಸಮಾಧಾನ ಮಾಡುವುದು ಕಷ್ಟ. ಇನ್ನು ಹತ್ತು ವರ್ಷಗಳ ನಂತರವೂ ದತ್ತ ಅವರ ಹೆಸರನ್ನು ಈ ಪತ್ರಿಕೆ, ಈ ರೀತಿ ತಪ್ಪು ಬರೆದಿತ್ತು ಎಂದು ಆಗಾಗ ನೆನಪಿಸುತ್ತಾರೆ, ತಮ್ಮ ತಮ್ಮ ಮಧ್ಯೆ ಚರ್ಚಿಸುತ್ತಾರೆ.

ಪತ್ರಿಕೆಯಲ್ಲಿ ಆದ ತಪ್ಪು ಶಾಶ್ವತವಾಗಿ ಉಳಿದುಬಿಡುತ್ತದೆ. ಅದಕ್ಕೆ ಮರುದಿನ ವಿಷಾದ ವ್ಯಕ್ತಪಡಿಸಬಹುದು ಅಥವಾ ಕ್ಷಮೆ ಕೇಳಬಹುದು. ಆದರೆ ಆದ ತಪ್ಪನ್ನು ಮಾತ್ರ ಅಳಿಸಲು, ಮರೆಸಲು, Recall ಮಾಡಲು ಆಗುವುದಿಲ್ಲ.

ಈ ಕಾರಣದಿಂದ ಮೈಯೆಲ್ಲಾ ಕಣ್ಣಾಗಿ ಪ್ರೂಫ್ ರೀಡಿಂಗ್ ಮಾಡಬೇಕು. ಅದರಲ್ಲೂ ವ್ಯಕ್ತಿಗಳ ಹೆಸರನ್ನು ತಪ್ಪಾಗಿ ಬರೆದರೆ, ಬೇರೆ ಯಾರಿಗೆ ಅಲ್ಲದಿದ್ದರೂ ಆ ವ್ಯಕ್ತಿಗೆ, ಅವರ ಸಂಬಂಧಿಕರಿಗೆ, ಅವರ ಅಭಿಮಾನಿಗಳಿಗೆ ಬೇಸರವಾಗುತ್ತದೆ.

ಆದರೆ ದತ್ತ ಅವರ ವಿಷಯದಲ್ಲಿ ಯಾವ ಸಮರ್ಥನೆ ನೀಡುವುದು?

ನಾನು ‘ವಿಜಯ ಕರ್ನಾಟಕ’ ಸಂಪಾದಕನಾಗಿದ್ದಾಗ, ಕಾಗೋಡು ತಿಮ್ಮಪ್ಪ ಅವರ ಹೆಸರು ಶೀರ್ಷಿಕೆಯಲ್ಲಿ ‘ಕಾಗೋಡು ತಿಮ್ಮ’ ಎಂದು ಪ್ರಕಟವಾಗಿಬಿಟ್ಟಿತ್ತು.

ಸ್ವತಃ ತಿಮ್ಮಪ್ಪನವರು ನನಗೆ ಫೋನ್ ಮಾಡಿ, ‘ಏನ್ ಭಟ್ರೇ, ನನ್ನ ಹೆಸರನ್ನು ಬದಲಿಸುವ ಅಧಿಕಾರವನ್ನು ನಿಮಗೆ ಯಾರು ಕೊಟ್ಟರು?’ ಎಂದು ಅರ್ಧ ತಮಾಷೆ ಮತ್ತು ಅರ್ಧ ಸೀರಿಯಸ್ ಆಗಿ ಕೇಳಿದ್ದರು. ಮರುದಿನ ನಾನು ಪತ್ರಿಕೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದೆ.

ಇದೇ ರೀತಿ, ಆರ್.ಗುಂಡೂರಾವ್ ಮುಖ್ಯಮಂತ್ರಿ
ಆಗಿದ್ದಾಗ, ಅವರ ಹೆಸರು ಪ್ರಮುಖ ಪತ್ರಿಕೆಯಲ್ಲಿ ತಪ್ಪಾಗಿ ಪ್ರಕಟವಾಗಿ ತೀವ್ರ ಮುಜುಗರ ಆಗಿತ್ತು. ಗುಂಡೂರಾವ್ ಬದಲು, ‘ಗಾಂಡೂರಾವ್’ ಎಂದು ಪ್ರಕಟವಾಗಿ ಸಂಪಾದಕರಿಗೆ ಇನ್ನಿಲ್ಲದ ಕಿರಿಕಿರಿಯಾಗಿತ್ತು.

ಆಗ ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಯೊಬ್ಬರು ಸಂಪಾದಕರಿಗೆ ಫೋನ್ ಮಾಡಿ,‘ದಯವಿಟ್ಟು ನಾಳಿನ ಸಂಚಿಕೆಯಲ್ಲಿ ವಿಷಾದ, ಕ್ಷಮೆ ಪ್ರಕಟಿಸಬೇಡಿ. ಮತ್ತೊಮ್ಮೆ ಓದುಗರಿಗೆ ನೆನಪಿಸಿದಂತಾದೀತು, ಇಂದು ಓದದವರಿಗೂ ಈ ಪ್ರಮಾದ ಗೊತ್ತಾದಂತಾದೀತು’ ಎಂದು ಕೋರಿದ್ದರಂತೆ.

ಪತ್ರಿಕೆಗಳು ಬೇರೆಯವರ ಹೆಸರನ್ನಷ್ಟೇ ಅಲ್ಲ, ತಮ್ಮ ಸಂಪಾದಕರ ಹೆಸರನ್ನೇ ತಪ್ಪಾಗಿ ಪ್ರಕಟಿಸಿದರೆ ಅದಕ್ಕೆ ಏನನ್ನೋದು ? ಖಾದ್ರಿ ಶಾಮಣ್ಣ ‘ಸಂಯುಕ್ತ ಕರ್ನಾಟಕ’ ಸಂಪಾದಕರಾಗಿದ್ದಾಗ, ಅವರ ಹೆಸರು ‘ಶಾದ್ರಿ ಕಾಮಣ್ಣ’ ಎಂದು ಪ್ರಕಟವಾಗಿಬಿಟ್ಟಿತ್ತು !

ಎಂಥಾ ಫಜೀತಿ ಅಂದ್ರೆ, ಈ ಪ್ರಮಾದಕ್ಕೆ ಸಂಪಾದಕರು ಪತ್ರಿಕೆಯಲ್ಲಿ ವಿಷಾದ ವ್ಯಕ್ತಪಡಿಸುವಂತೆಯೂ ಇಲ್ಲ. ಹಾಗೆ ಬರೆದವರನ್ನು ಡಿಸ್ಮಿಸ್ ಮಾಡಬೇಕಷ್ಟೆ.

ಇದಾದ ನಂತರ ಅವರ ಸಂಪಾದಕತ್ವದ ಪತ್ರಿಕೆಯಲ್ಲಿ ಖಾದ್ರಿ ಅವರ ಹೆಸರು ಯಾರಿಗೂ ತಪ್ಪು ಮಾಡಲು ಆಗದಂತೆ, ಹಸ್ತಾಕ್ಷರದಲ್ಲಿ ಪ್ರಕಟವಾಗುತ್ತಿತ್ತು!

(ಸಂಪಾದಕರ ಸದ್ಯಶೋಧನೆ ಅಂಕಣದಿಂದ)

Leave a Reply

Your email address will not be published. Required fields are marked *