Sunday, 15th December 2024

ಸೆಕ್ಯುಲರ್ ಪ್ರಭುತ್ವ ಮತ್ತು ಧಾರ್ಮಿಕ ತಾಟಸ್ಥ್ಯ

ಟಿ. ದೇವಿದಾಸ್

ಕ್ರೈಸ್ತ, ಯಹೂದಿ ಮತ್ತು ಇಸ್ಲಾಾಂಗಳನ್ನು ಧರ್ಮವೆಂದೂ ಕಲ್ಪಿಸಿಕೊಳ್ಳುವುದಕ್ಕೂ, ಭಾರತದ ನಂಬಿಕೆ ಆಚರಣೆಗಳು ಸಂಪ್ರದಾಯಗಳನ್ನು ಅದರಲ್ಲೂ ಹಿಂದೂ ಎಂಬುದನ್ನು ಧರ್ಮವೆಂದು ನಿರೂಪಣೆ ಮಾಡಿಕೊಳ್ಳುವುದಕ್ಕೂ ವ್ಯತ್ಯಯಗಳಿವೆ. ಈ ಸೆಮೆಟಿಕ್ ಧರ್ಮಗಳು ಮನುಷ್ಯ ಕಲ್ಪನೆಯಲ್ಲ, ದೈವದತ್ತವಾದುದು. ಇವು ಆತ್ಯಂತಿಕ ಸತ್ಯದ ವಾರಸುದಾರಿಕೆಯನ್ನು ಅಂದರೆ ತಮ್ಮದು ಮಾತ್ರ ಸತ್ಯವೆಂದು ನಂಬಿಕೊಂಡಂಥವು. ಈ ಸೆಮೆಟಿಕ್ ಧರ್ಮಗಳು ಪೇಗನ್ ಧರ್ಮಗಳ ನಂಬಿಕೆಯನ್ನೊಪ್ಪುವುದಿಲ್ಲ. ಸತ್ಯದ ಅನಾವರಣವೋ ಅಥವಾ ಸಾಧನೆಯ ಮಾರ್ಗವೋ- ಅವುಗಳಲ್ಲಿ ತಮ್ಮದೂ ಒಂದು ಎಂದು ಒಪ್ಪದ ಈ ಸೆಮೆಟಿಕ್ ಧರ್ಮಗಳಲ್ಲಿ ಮತಾಂತರವೆಂಬುದು ಅತ್ಯಗತ್ಯ. ಈ ವಿಶ್ವದಲ್ಲಿ ತಮ್ಮದು ಮಾತ್ರ ಸತ್ಯವೆಂದುಕೊಂಡಿರುವ ಈ ಧರ್ಮಗಳ ಮಧ್ಯೆ ಬಹುಕಾಲದಿಂದಲೂ ಸಾಮರಸ್ಯವನ್ನೂ ಅನುಕೂಲವನ್ನೂ ಪ್ರತಿಕೂಲವನ್ನೂ ವಿರೋಧವನ್ನೂ ಎದುರಿಸುತ್ತಲೇ ಚೈತನ್ಯದಾಯಕವಾಗಿಯೇ ಸೆಟೆದು ನಿಂತಿರುವ ಜಗದ ಏಕೈಕ ಧರ್ಮವೆಂದರೆ ಹಿಂದೂ ಧರ್ಮ ಮಾತ್ರ. ಆದ್ದರಿಂದಲೇ ಭಾರತದ ಧಾರ್ಮಿಕ ಬಹುತ್ತ್ವವೆಂಬುದು ಯಾವತ್ತೂ ಜಟಿಲವಾಗೇ ಇದೆ. ಅದರಲ್ಲೂ ನಾವು ಜಾತ್ಯತೀತರೆಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದರಿಂದ ಈ ಸೆಮೆಟಿಕ್ ಧರ್ಮಗಳ ಆಡುಂಬೊಲವಾಗಿ ಜಗತ್ತಿನ ಬೇರೆ ಯಾವ ಭಾಗವಲ್ಲದಿದ್ದರೂ ಭಾರತವಂತೂ ಪರಿವರ್ತಿತವಾಗಿದೆ. ಇಲ್ಲಿನ ಸಾರ್ವಕಾಲಿಕ ಸಮಾನ ನಾಗರಿಕತೆಯಿಂದ ಹೊರಗೇ ಇರುವ ಇವರು ರಾಷ್ಟ್ರದ ಸಂವಿಧಾನಕ್ಕಿಿಂತ ಧರ್ಮದ ಸಂವಿಧಾನವನ್ನೇ ಬಹುವಾಗಿ ನೆಚ್ಚಿಕೊಂಡಿರುವುದರಿಂದ ಧಾರ್ಮಿಕ ಮತ್ತು ಸಾಮಾಜಿಕ ಜೀವನದಲ್ಲಿ ಅವರು ವೈಚಾರಿಕವಾದ ಕಾಠಿಣ್ಯವನ್ನು ಹೊಂದಿದ್ದಾರೆ. ಇದು ಅವರಲ್ಲೇ ಆಂತರಿಕವಾದ ವಿಷಮತೆಗೂ ಕಾರಣವಾಗಿದೆ. ರಾಜಕೀಯವಾಗಿ ಇವರು ತುಷ್ಟೀಕರಣಕ್ಕೊಳಪಡುತ್ತಿರುವುದರಿಂದ ಇವರ ಜನಸಂಖ್ಯೆ ಅಪಾರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ನಮ್ಮದು ಪಶ್ಚಿಮದ ಮಾದರಿಯ ಉದಾರವಾದೀ ಪ್ರಭುತ್ವ. ಈ ಪ್ರಭುತ್ವಕ್ಕೆ ಸೆಕ್ಯುಲರಿಸಂ ಯಾವ ಕಾಲಕ್ಕೂ ಸಮಸ್ಯೆಯೇ ಆಗಿರುತ್ತದೆ. ಆದರೆ ಸ್ವಾತಂತ್ರ್ಯಾನಂತರದ ಭಾರತವನ್ನಾಳಿದ ಪ್ರಭುತ್ವಕ್ಕೆ ಈ ಸೆಮೆಟಿಕ್ ಧರ್ಮಗಳು ರಾಜಕೀಯವಾಗಿ ಬಲವನ್ನು ತಂದುಕೊಟ್ಟಿರುವುದರಿಂದ ಪಾಶ್ಚಾತ್ಯದ ಸಂದರ್ಭದಲ್ಲಿ ಆಗುವಂಥ ಧಾರ್ಮಿಕ ಸಹಿಷ್ಣುತೆಯನ್ನೂ ಇಲ್ಲಿ ಕಂಡುಕೊಳ್ಳಲು ಸಾಧ್ಯವಾಗದೇ ಕೇವಲ ತುಷ್ಟೀಕರಣದ ರಾಜಕೀಯ ಮಾಡುತ್ತಲೇ ಧಾರ್ಮಿಕ ಸಂಘರ್ಷವನ್ನು ಉಳಿಸಿಕೊಂಡೇ ಬಂದಿರುವುದರಿಂದ ಇಂದು ಅದು ಅತೀ ಕ್ಲಿಷ್ಟಾತಿಕ್ಲಿಷ್ಟ ಗಂಟಾಗಿದೆ. ಉದಾಹರಣೆಗೆ ಕಾಶ್ಮೀರದಲ್ಲಿ ಗಲಾಟೆಯಾದರೆ ಕಾಸರಗೋಡಿನಲ್ಲಿರುವ ಮುಸ್ಲಿಮರು ಪೋಲಿಸರಿಗೆ ಕಲ್ಲುಹೊಡೆಯುವಷ್ಟು. ಅಂದರೆ, ಧರ್ಮದ ವಿಚಾರ ಬಂದರೆ ಮುಸ್ಲಿಮರು ಒಗ್ಗಟ್ಟಾಗುವುದೂ ಕೂಡ ಆ ಧರ್ಮವು ನಂಬಿಕೊಂಡಿರುವ ಬಂದಿರುವ ತತ್ತ್ವವೆಂಬ ಕಲ್ಪನೆಗಳಿಂದ. ಇದು ಪೇಗನ್ ಧರ್ಮಗಳ ತತ್ತ್ವಕ್ಕೆ ವಿರುದ್ಧವಾಗಿರುವುದರಿಂದ ಸೆಮೆಟಿಕ್ ಧರ್ಮಗಳ ನಡುವೆ, ಅದರಲ್ಲೂ ಮುಖ್ಯವಾಗಿ ಇಸ್ಲಾಾಂ ಧರ್ಮವು ಹೊಂದಿರುವ ದೃಷ್ಟಿಕೋನ ನಿರಂತರ ಸಂಘರ್ಷಕ್ಕೆ ಎಡೆಮಾಡುತ್ತಲೇ ಇದೆ. ಸೆಮೆಟಿಕ್ ಧರ್ಮಗಳ ಈ ಧರ್ಮಾಂಧತೆಯ ಸ್ವಭಾವದ ಅಭಿವ್ಯಕ್ತಿಯನ್ನು ಪೇಗನ್ ಧರ್ಮಗಳು ಸಹಜವಾಗೇ ವಿರೋಧಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವುದರಿಂದ ಭಿನ್ನಾಭಿಪ್ರಾಯಗಳು ಮಾತು ಹೊಂದಿರುವ ಶಕ್ತಿಯನ್ನು ಮೀರಿ ಸಂಘರ್ಷಕ್ಕಿಳಿದಿವೆ. ಇದಕ್ಕೆೆ ರಾಜಕೀಯ ಬೇರೆ ಸೇರಿಕೊಂಡು ವಿರಾಟ್ ಸ್ವರೂಪವನ್ನು ಪಡೆದಿದೆ. ಪರಿಹಾರ ಹೇಗೆಂಬುದು ವಸಾಹತುಶಾಹಿ ಕಾಲದಿಂದಲೂ ಪ್ರಶ್ನೆಯಾಗಿಯೇ ಇದೆ.

ಭಾರತವೆಂಬುದು ಹಿಂದೂಗಳೇ ಬಹುಸಂಖ್ಯಾತರಿರುವ ಹಲವಾರು ಜಾತಿ ಮತ ಪಂಥ ಪಂಗಡ ಧರ್ಮಗಳಿಂದ ಕೂಡಿದ ರಾಷ್ಟ್ರ. ಇದು ಜಗತ್ತಿನ ರಾಷ್ಟ್ರಗಳಲ್ಲೇ ವಿಭಿನ್ನವಾದ ವಿಶಿಷ್ಟವಾದ ಮತ್ತು ಸಂಕೀರ್ಣವಾದ ಮಾದರಿಯನ್ನು ಹೊಂದಿದೆ. ಆದರೂ ನಾವು ಸೆಕ್ಯುಲರಿಸಂ ತತ್ತ್ವವನ್ನು ಹೊಂದಿದ್ದೇವೆ. ಸಂವಿಧಾನಕ್ಕೆ ಬದ್ಧರಾಗಿದ್ದೇವೆ. ಏಕತೆಯನ್ನು ವೈವಿಧ್ಯದಲ್ಲಿ ಕಂಡುಕೊಂಡಿದ್ದೇವೆ. ನಿಜವೆಂದರೆ ಈ ರಾಷ್ಟ್ರಕ್ಕೆ ಪಶ್ಚಿಮದ ಸೆಕ್ಯುಲರಿಸಂ ನುಂಗಲಾರದ ತುತ್ತು. ಇಲ್ಲಿರುವ ಅಲ್ಪಸಂಖ್ಯಾತರ ಮೂಲ ಭಾರತವಲ್ಲ. ಈ ರಾಷ್ಟ್ರದ ನೀತಿನಿರೂಪಣೆಯ ನೆಲೆಗಟ್ಟನ್ನು ಭಾರತದ ಸಂಪ್ರದಾಯಗಳನ್ನು ವಿರೋಧಿಸುವ ಕ್ರಿಶ್ಚಿಯನ್ ಅದರಲ್ಲೂ ಮುಖ್ಯವಾಗಿ ಪ್ರೊಟೆಸ್ಟೆೆಂಟ್ ಟೀಕೆಗಳನ್ನು ಆಧರಿಸಿ ಅದರ ಸುತ್ತಲೂ ಕಥೆಗಳನ್ನು ಹೆಣೆಯುತ್ತಾ ಇಲ್ಲಿಯ ಧರ್ಮಗಳ, ವೈದಿಕ ವರ್ಗಗಳ, ದೇವಳಗಳ ಸ್ವರೂಪದ, ಜನರ ನಿತ್ಯಜೀವನದಲ್ಲಿ ಧರ್ಮಗಳು ಬೀರಿದ ಪಾತ್ರ ಪ್ರಭಾವಗಳ ಬಗ್ಗೆೆ ನೇತ್ಯಾತ್ಮಕವಾದ ನಿರೂಪಣೆಯ ವರ್ಣನೆಯನ್ನು ಮಾಡುತ್ತಾ ಪಶ್ಚಿಮದ ಸೆಕ್ಯುಲರಿಸಂ ಧೋರಣೆಗಳನ್ನು ಬಲವಾಗಿ ಊರುತ್ತಾ ಬಂದಿರುವುದರಿಂದ, ಆಮೇಲಿನ ಇಲ್ಲಿನ ರಾಜಕಾರಣಿಗಳಿಗೆ ಇದು ಮಾರ್ಗದರ್ಶಿಯಾಗಿಯೂ ವರವಾಗಿಯೂ ಪರಿಣಮಿಸಿದ್ದರಿಂದ ವರ್ತಮಾನದಲ್ಲಿ ಈ ಸೆಕ್ಯುಲರಿಸಂ ಎಂಬುದು ರಾಷ್ಟ್ರವನ್ನೇ ಹಿಂಡಿ ಹಿಪ್ಪೆ ಮಾಡುತ್ತಿದೆ. ನೆಹರೂ ಮಾರ್ಗದ ಫಲವಿದು. ವಸಾಹತುಶಾಹಿ ಅಧಿಕಾರದ ಪ್ರತಿಫಲನವಿದು. ನೆಹರೂ ಭಾರತದ ಚಿಂತನೆಗಳೇ ಬಹುಪಾಲು ಪಶ್ಚಿಮದವು. ನೆಹರೂಗೆ ಭಾರತವನ್ನು ಭಾವನಾತ್ಮಕವಾಗಿ ಒಪ್ಪಿಕೊಂಡದ್ದು ಅನ್ಯಸ್ಥಳದವನೆಂಬ ಪ್ರಜ್ಞೆಯಿಂದ. ಭಾರತದ ಧರ್ಮವನ್ನು ಕೊಳೆಯುವಂತೆ ಮಾಡಿ, ಮತ್ತೆ ಅವುಗಳ ಉದ್ಧಾರಕ್ಕಾಗಿ ಸೆಮೆಟಿಕ್ ಧರ್ಮಗಳು ಪ್ರವೇಶಿಸಿ ತಮ್ಮ ಸಂಪ್ರದಾಯ, ಆಚರಣೆ, ನಂಬಿಕೆಗಳನ್ನು ಪ್ರಭಾವಗೊಳಿಸುತ್ತಾ ತನ್ಮೂಲಕ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಅಲ್ಲಗಳೆದು ಸೆಮೆಟಿಕ್ ಧರ್ಮಗಳೇ ಶ್ರೇಷ್ಠ ಮತ್ತು ಅದುವೇ ಸತ್ಯವೆಂದು ಬಿಂಬಿಸಲು ನೆಹರೂ ಹಾಕಿದ ಬುನಾದಿಯಿದು. ಒಟ್ಟೂ ಪರಿಸ್ಥಿತಿಯು ಹೇಗೆ ಸೆಮೆಟಿಕ್ ಧರ್ಮಗಳ ಅಸ್ತಿತ್ವದ ಬೇರನ್ನು ಇಲ್ಲಿ ಬಲಗೊಳಿಸಲು ಸಾಧ್ಯವಾಯಿತೆಂಬುದನ್ನು ವಿವರಿಸುವುದು ಅನಗತ್ಯವೆಂದೇ ಭಾವಿಸಿ ಪ್ರಸಕ್ತ ಭಾರತ ಈ ಎಲ್ಲಾ ಆಂತರಿಕ ಬಿಕ್ಕಟ್ಟಿನಿಂದ ಹೊರಬರುವಂತೆ ಮಾಡಲು ಪ್ರಭುತ್ವಕ್ಕೆ ಯಾವ ಮಾರ್ಗವನ್ನು ಅನುಸರಿಸಲು ಸಾಧ್ಯ ಎಂಬ ಪ್ರಶ್ನೆಗೆ ಧಾರ್ಮಿಕ ತಾಟಸ್ಥ್ಯವೇ ಉತ್ತರವೆನಿಸುತ್ತದೆ. ಯಾಕೆಂದರೆ ಸೆಮೆಟಿಕ್ ಧರ್ಮಗಳು ಹುಟ್ಟಿಸುವ ಪ್ರಕ್ಷುಬ್ಧತೆಯನ್ನು ನಿಯಂತ್ರಿಸಲು ಸೆಕ್ಯುಲರಿಸಂ ಅಡ್ಡ ಬರುತ್ತದೆ. ಪೇಗನ್ ಧರ್ಮಗಳ ನಂಬಿಕೆಗಳನ್ನು, ಸಂಪ್ರದಾಯಗಳನ್ನು ಮಾನ್ಯಮಾಡಲೂ ಸೆಕ್ಯುಲರಿಸಂ ಅಡ್ಡಬರುತ್ತದೆ. ಆಗ ಸೆಮೆಟಿಕ್ ಧರ್ಮಗಳು ಸೆಕ್ಯುಲರಿಸಂ ಹೆಸರಲ್ಲಿ ಹುಯಿಲಿಡಲು ಆರಂಭಿಸುತ್ತವೆ. ಆಗ ಮತ್ತೆ ಸಂಘರ್ಷಗಳೇಳುತ್ತವೆ. ಪ್ರಭುತ್ವವೇ ಆತ್ಯಂತಿಕವಾದ ದೋಷಿಯೆಂಬ ಆರೋಪ ಮತ್ತು ಆಕ್ಷೇಪಗಳು ಹುಟ್ಟಿಕೊಳ್ಳುತ್ತವೆ. ಇಂಥ ಹುಯಿಲು ನಿತ್ಯದ ಕಾಯಕವಾಗಿ ಕಾಣುತ್ತಲೇ ಇದೆ.

ಪಾಶ್ಚಾತ್ಯ ಸೆಕ್ಯುಲರ್ ಮಾದರಿಯಂತೆ ಭಾರತದ ಸೆಕ್ಯುಲರಿಸಂ ಇಲ್ಲ. ಇರುವುದಕ್ಕೂ ಸಾಧ್ಯವಿಲ್ಲ. ಇಲ್ಲಿರುವ ಸೆಮೆಟಿಕ್ ಧರ್ಮಗಳು ಭಾರತದ ಸೆಕ್ಯುಲರಿಸಂ ಅನ್ನು ತಮ್ಮ ಸ್ವಾರ್ಥಕ್ಕಾಗಿ, ತಮಗೆ ನಂಬಿಕೆಗಳ ಸತ್ಯವನ್ನು ಮಾತ್ರ ಹೇಳುವುದಕ್ಕಾಗಿ ಉಪಯೋಗಿಸುವುದರಿಂದ ಪ್ರಭುತ್ವದ ಉದಾರವಾದಿ ಚಿಂತನೆಯು ಅವರಿಗೆ ಅನುಕೂಲವಾಗಿಯೇ ಇದೆ. ಇದರಿಂದಾಗಿ ಮತಾಂತರ ಎಗ್ಗಿಲ್ಲದೆ ನಡೆಯುತ್ತಿದೆ. ಪಶ್ಚಿಮದ ಹಣ ಭಾರತದಲ್ಲಿ ಚಲಾವಣೆಗೂ ಬಂದು ಈ ಪ್ರಕ್ರಿಯೆಗೆ ಹಿಂದೂಗಳು ಬಲಿಪಶುವಾದದ್ದು ಈಗ ಚರಿತ್ರೆ. ಇವರ ಈ ತಂತ್ರಗಾರಿಕೆ ಸಹಜವಾಗೇ ಪೇಗನ್ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಯಿತು. ಪರಂಪರೆಯನ್ನು ನಚ್ಚಿಕೊಂಡೇ ಜೀವನ ಸಾಗಿಸುತ್ತಿದ್ದ ಭಾರತದಲ್ಲಿ ಪ್ರಭುತ್ವವೇ ಈ ಬಗೆಯ ಧಾರ್ಮಿಕ ಸಾಮರಸ್ಯಕ್ಕೆ ಮುಳುವಾಗುವಂತೆ ಸೆಮೆಟಿಕ್ ಧರ್ಮಗಳನ್ನು ತುಷ್ಟೀಕರಣ ಮಾಡಿ ಬಹುಸಂಖ್ಯಾತ ಹಿಂದೂಗಳ ನಂಬಿಕೆಗಳನ್ನು ಸುಳ್ಳು ಎಂದು ಅವಕಾಶ ಕಲ್ಪಿಸಲು ನೆಹರೂ ಮತ್ತಿತರ ಬೌದ್ಧಿಕ ವರ್ಗಕ್ಕೆ ಸಾಧ್ಯವಾಗಿದ್ದರಿಂದ ಈಗ ಭಾರತದಲ್ಲಿ ಧರ್ಮಗಳ ಮೇಲಾಟ ನಡೆಯುವಂತಾಗಿದೆ. ಸೆಮೆಟಿಕ್ ಧರ್ಮಗಳ ಔನ್ನತ್ಯಕ್ಕಾಗಿ ವಿಫುಲವಾದ ಸನ್ನಿವೇಶಗಳನ್ನು ನಿರ್ಮಿಸಿದ ಪ್ರಭುತ್ವ ತಾಟಸ್ಥ್ಯ ನೀತಿಯನ್ನನುಸರಿಸಿತು. ಸ್ವಾತಂತ್ರ್ಯ ನಂತರದಲ್ಲಿ ಪ್ರಭುತ್ವವು ಮಾಡಿದ ದೊಡ್ಡ ದುರಂತವಿದು.

ಕೊಡುಕೊಳ್ಳುವಿಕೆಯ ಮೂಲಕವೇ ನಿತ್ಯಜೀವನವನ್ನು ಸಾಗಿಸುತ್ತಿದ್ದ ಹಿಂದೂ ಮುಸ್ಲಿಿಂ ಕ್ರೈಸ್ತರಲ್ಲಿದ್ದ ಸೆಕ್ಯುಲರಿಸಂ ಪರಿಕಲ್ಪನೆಯ ಆಕೃತಿಗಳು ಪ್ರಭುತ್ವದ ದೆಸೆಯಿಂದಾಗಿ ಛಿದ್ರಗೊಂಡು ಆ ಮೂಲಕ ಹುಟ್ಟಿಕೊಂಡ ಧಾರ್ಮಿಕ ಅಸಹಿಷ್ಣುತೆ ದಿನಗಳೆದಂತೆ ಉಲ್ಬಣಗೊಂಡು ಈಗ ಹಿಂದೂ ಮುಸ್ಲಿಿಂ ಮೂಲಭೂತವಾದ ಸೃಷ್ಟಿಯಾಗಿರುವುದರಿಂದ ಮೋದಿಯಂಥ ದಕ್ಷ ಮತ್ತು ಪ್ರಬುದ್ಧ ನಾಯಕನನ್ನೂ ಧೃತಿಗೆಡಿಸುವಂತೆ ಮಾಡಿದೆ. ಇದರ ಪರಿಣಾಮವಾಗಿ ಮಂದಿರ ಮಸೀದಿಗಳ ದ್ವಂಸ, ಜಿಹಾದಿ ಸಂಘಟನೆಗಳ ಆಟಾಟೋಪ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು, ಅಲ್ಪಸಂಖ್ಯಾತರ ವಿರುದ್ಧದ ಸಂಘರ್ಷ, ಸೆಮೆಟಿಕ್ ಧರ್ಮಗಳ ಆಚರಣೆಗಳು, ಸೆಕ್ಯುಲರ್ ಧೋರಣೆಯ ಭಾರತವನ್ನು ಸ್ಥಾಪಿಸಿ ಭಾರತದ ಸಂಪ್ರದಾಯವನ್ನು ಋಣಾತ್ಮಕ ದೃಷ್ಟಿಯಿಂದ ನೋಡುತ್ತಾ ಸಮುದಾಯದ ಮೇಲೂ ಅದು ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತಲೇ ಭಾರತದ ಗತಚರಿತ್ರೆಯಲ್ಲಿ ಆದ ಘಟನೆಗಳನ್ನು ಮತ್ತೆ ಮತ್ತೆ ಎಳೆದು ತಂದು ಎಂದೋ ಆದ ಸಂಗತಗಳಿಗೆ ಈಗ ಪ್ರತಿರೋಧವನ್ನು ಈಗ ತೀರಿಸಿಕೊಳ್ಳುವಂತೆ ತೀವ್ರವಾದ ಸ್ವರಕ್ಷಣೆ ಮತ್ತು ನೆಹರೂ ಬುನಾದಿಯ ಸೆಕ್ಯುಲರ್ ಚಿಂತನೆಯನ್ನು ವಿರೋಧಿಸುತ್ತಾ ಎರಡೂ ಗುಂಪುಗಳನ್ನು ಸೃಷ್ಟಿಸಿದೆ. ಸೂಕ್ಷ್ಮವಾಗಿ ನೋಡಿದರೆ ನಮ್ಮಲ್ಲಿ ಧಾರ್ಮಿಕ ವಿರೋಧಗಳಿರಲಿಲ್ಲ. ಸರಿಹೊತ್ತಿನ ರಾಜಕಾರಣದ ಪ್ರತಿಫಲನವಿದು. ಅಧಿಕಾರ ದಾಹಕ್ಕಾಾಗಿ ಸೆಮೆಟಿಕ್ ಧರ್ಮಗಳ ಅನುಯಾಯಿಗಳನ್ನು ತುಷ್ಟೀಕರಣಗೊಳಿಸುವ ಚಾಳಿ ನೆಹರೂ ಪ್ರಣಾಳಿಕೆಯದ್ದು. ಇದಕ್ಕೆ ತದ್ವಿರುದ್ಧವಾಗಿ ಹುಟ್ಟಿದ್ದು ಹಿಂದುತ್ವದ ಅಜೆಂಡಾ. ಅಲ್ಲಿಯವರೆಗೆ ಭಾರತೀಯ ಸಂಪ್ರದಾಯ ಮತ್ತು ಪರಂಪರೆಯಲ್ಲೇ ಸೆಮೆಟಿಕ್ ಧರ್ಮಗಳು ಅನೂಚಾನವಾಗಿ ಬದುಕುತ್ತಿದ್ದವು. ಅಂದರೆ, ಎಲ್ಲಾ ವೈವಿಧ್ಯಮಯ, ವಿಭಿನ್ನಮಯ ನಂಬಿಕೆಗಳ, ಆಚರಣೆಗಳ, ಸಂಪ್ರದಾಯಗಳ ನಡುವೆಯೂ ಬಹುತ್ವದ ಭಾರತವಿತ್ತು. ವಿಶ್ವದಲ್ಲೇ ಇಲ್ಲದ ಬಹುತ್ವದ ಕಲ್ಪನೆ ನಮ್ಮಲ್ಲಿತ್ತು. ಇದಕ್ಕೆೆ ಕಾರಣ ಸೆಮೆಟಿಕ್ ಧರ್ಮಗಳನ್ನು ಬೆಂಬಲಿಸಿದ ಅಂದಿನ ಉದಾರವಾದಿ ಪ್ರಭುತ್ವ. ಹಿಂದೂ ಕ್ರೈಸ್ತ ಮುಸ್ಲಿಿಂ ಸಂಪ್ರದಾಯಗಳು ಸಮ್ಮಿಶ್ರಗೊಂಡಂಥ ಗತವಿನ್ಯಾಸವನ್ನು ಈಗ ಅಸ್ತಿತ್ವಕ್ಕೆ ತರುವುದಕ್ಕೆ ಸಾಧ್ಯವಾಗಬೇಕಾದರೆ ಪ್ರಭುತ್ವವು ಧಾರ್ಮಿಕ ತಾಟಸ್ಥ್ಯ ನೀತಿಯನ್ನು ತನ್ನ ಆಡಳಿತದಲ್ಲಿ ಅನುಸರಿಸಬೇಕು. ಅದು ಎಷ್ಟು ದೃಢವಾಗಬೇಕೆಂದರೆ ತನ್ನ ಪರಿಣಾಮದಲ್ಲಿ ಜನತೆಯೇ ಬಹುತ್ವದ ಚಿಂತನೆಯನ್ನು ಕಂಡುಕೊಳ್ಳುವಷ್ಟು. ಮೋದಿಯವರ ಆಡಳಿತದ ನೀತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇದು ಅರ್ಥವಾಗುತ್ತದೆ. ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೂ ಮೋದಿಯವರು ಯಾವುದನ್ನೂ ನೆಹರೂರಂತೆ ಸೆಕ್ಯುಲರ್ ರೂಪದಲ್ಲಾಗಲೀ ಅಸೆಕ್ಯುಲರ್ ರೂಪದಲ್ಲಾಗಲೀ ಕಾಣಲಿಲ್ಲ. ಹಾಗಂತ ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾದುದನ್ನು ಸಹಿಸಲಿಲ್ಲ. ಭಾರತೀಯ ಚರಿತ್ರೆ ಮತ್ತು ಸುದೀರ್ಘವಾದ ಸಾಂಸ್ಕೃತಿಕ ಆವರಣವನ್ನು ಅದರ ನೆಲೆಯಿಂದಲೇ ಅರ್ಥ ಮಾಡಿ ವ್ಯಾಖ್ಯಾನಿಸುವ ಕೆಲಸವನ್ನು ಮೌನವಾಗಿಯೇ ಮಾಡುತ್ತಿರುವುದರಿಂದ ಭಾರತದಲ್ಲಿರುವ ಸೆಮೆಟಿಕ್ ಧರ್ಮಗಳ ಅನುಯಾಯಿಗಳು ಮೌನವಾಗಬೇಕಾಗಿದೆ. ಪ್ರಭುತ್ವದ ಪ್ರಬುದ್ಧ ಚಿಂತನೆಯಿದು. ಯಾರ ಸ್ವಾತಂತ್ರ್ಯಕ್ಕೂ ಅಡ್ಡಿಯಾಗದ ಉದಾರವಾದಿ ಚಿಂತನೆಯನ್ನೂ, ಸೆಕ್ಯುಲರ್ ಅಡಿಯಲ್ಲಿ ಯಾವುದೇ ಸಮಸ್ಯೆಯನ್ನೂ ಉಲ್ಬಣಿಸದಂತೆ ಮಾಡುವ ದಾರಿಯನ್ನು ಮೋದಿಯವರು ಕಂಡುಕೊಂಡಿದ್ದಾರೆ. ಮತ್ತು ಅಭಿವೃದ್ಧಿಯೊಂದೇ ರಾಷ್ಟ್ರವನ್ನು ತಳಮಟ್ಟದಿಂದಲೇ ಭದ್ರ ಮತ್ತು ಸುರಕ್ಷಿತವಾಗಿಡಲು ಸಾಧ್ಯವೆಂಬುದನ್ನು ಕಳೆದ ಇಷ್ಟೂ ವರ್ಷಗಳಿಂದ ತನ್ನ ನೀತಿಯಲ್ಲಿ ಅಭಿವ್ಯಕ್ತಿಸುತ್ತಿದ್ದಾರೆ. ಇದನ್ನು ಹಿಂದೂಗಳೂ ಸೇರಿ ಅಲ್ಪಸಂಖ್ಯಾತರು ಅರ್ಥೈಸಿಕೊಂಡರೆ ರಾಷ್ಟ್ರೀಯ ಹಿತಾಸಕ್ತಿ ಆಂತರಿಕವಾಗಿ ಬಲಗೊಳ್ಳುತ್ತದೆ. ಉದಾರವಾದ ಮತ್ತು ಸೆಕ್ಯುಲರ್ ವಾದಗಳಿಂದ ಸೆಮೆಟಿಕ್ ಧರ್ಮಾನುಯಾಯಿಗಳು ತಮ್ಮ ಧಾರ್ಮಿಕ ಚೌಕಟ್ಟನ್ನು ಮೀರಿ ರಾಷ್ಟ್ರೀಯತೆಗೆ ಬದ್ಧರಾದರೆ ಮಾತ್ರ ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಸಾಧ್ಯ. ಇಲ್ಲವಾದಲ್ಲಿ ರಾಷ್ಟ್ರ ಆಂತರಿಕವಾಗಿ ಕಲಹ, ದ್ವೇಷ, ಸೇಡಿನ ಮನೋಧರ್ಮದ ವರ್ತುಲದಲ್ಲೇ ಬಲಹೀನಗೊಳ್ಳುತ್ತಾ ಕ್ಷೀಣವಾಗುತ್ತಾ ಹೋಗುತ್ತದೆ.

ಭಾರತೀಯತೆಯನ್ನು ಸೆಮೆಟಿಕ್ ಧರ್ಮಗಳು ಅಭಿವ್ಯಕ್ತಿಸಬೇಕಾಗಿದೆ. ಕೇವಲ ಅಲ್ಪಸಂಖ್ಯಾತವೆಂಬ ಪಟ್ಟಿಯನ್ನು ಹೊತ್ತು ಸರಕಾರದ ಸೌಲಭ್ಯಗಳನ್ನು ಪಡೆಯುವುದಕ್ಕೋಸ್ಕರ ಪ್ರಭುತ್ವವನ್ನು ಬೆಂಬಲಿಸುವುದಾಗಲೀ ವಿರೋಧಿಸುವುದಾಗಲೀ ಮಾಡಿದರೆ ಅದು ತಪ್ಪು ಅಷ್ಟೇ ಅಲ್ಲ, ವೈಚಾರಿಕ ಮತ್ತು ಬೌದ್ಧಿಕ ದೌರ್ಬಲ್ಯ ಕೂಡ. ಧರ್ಮದ ಸಂಪ್ರದಾಯಗಳು, ನೀತಿನಿಯಮಗಳನ್ನು ತಮ್ಮ ಧಾರ್ಮಿಕ ಸಂವಿಧಾನದಡಿಯಲ್ಲೇ ಅನುಸರಿಸಿದರೂ ರಾಷ್ಟ್ರಕ್ಕೆ ಮಾರಕವಾಗದಂತೆ ಜಾಗ್ರತೆಯನ್ನು ವಹಿಸಬೇಕು. ತಮ್ಮ ಧರ್ಮ ಮಾತ್ರ ಸತ್ಯವೆಂಬ ವೈಚಾರಿಕತೆಯ ಕಾಠಿಣ್ಯದಿಂದ ಹೊರಬರಬೇಕಾಗಿದೆ. ಯಾವಾಗ ಪ್ರಭುತ್ವವು ತಾಟಸ್ಥ್ಯನೀತಿಯನ್ನು ಅನುಸರಿಸುತ್ತದೋ ಆಗ ಸೆಮೆಟಿಕ್ ಮತ್ತು ಪೇಗನ್ ಧರ್ಮಗಳ ನಡುವೆಯೂ ತಾಟಸ್ಥ್ಯ ಸಾಧ್ಯವಾಗುವುದು ತೀರಾಕಷ್ಟವೇನಲ್ಲ. ಸೆಮೆಟಿಕ್ ಧರ್ಮಗಳ ನಡುವೆ ಇದೂ ಸಾಧ್ಯವಿಲ್ಲ. ತಮ್ಮ ಧರ್ಮವೇ ಆತ್ಯಂತಿಕ ಸತ್ಯವೆಂದು ಬೊಬ್ಬಿಡುವ ಅವರಲ್ಲೇ ಸಂಘರ್ಷಗಳು ಹುಟ್ಟುತ್ತವೆ. ಅದು ಘೋರವಾದ ಪರಿಣಾಮವನ್ನು ಭಾರತದಲ್ಲಿ ನೀಡುತ್ತದೆ. ಧಾರ್ಮಿಕ ಅಲಿಪ್ತತೆಯನ್ನು, ಧರ್ಮತಾಟಸ್ಥ್ಯವನ್ನು ಪ್ರಭುತ್ವವು ಹೊಂದಿದ ಮಾತ್ರಕ್ಕೆ ಲೌಕಿಕದ ವಿಷಯವಾದ ಕಾನೂನಿನ ರಕ್ಷಣೆ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವುದು ಪ್ರಭುತ್ವದ ಆದ್ಯ ಕರ್ತವ್ಯವಾಗಿರುತ್ತದೆ. ಇದರಲ್ಲಿ ಧಾರ್ಮಿಕ ಮತ್ತು ಮತೀಯ ನಿಲುವನ್ನು ಪ್ರಭುತ್ವ ಹೊಂದಬಾರದು. ಹೊಂದಿದರೆ ಅದು ವೋಟ್ ಬ್ಯಾಾಂಕ್ ರಾಜಕಾರಣವಾಗಿ ಮತ್ತೆೆ ಸಮಾಜದಲ್ಲಿ ಧಾರ್ಮಿಕ ಸಂಘರ್ಷವನ್ನು ಉದ್ದೀಪಿಸಲು ಪ್ರಭುತ್ವವೇ ಕಾರಣವಾಗುತ್ತದೆ. ಮತೀಯವಾಗಿಯಾಗಲೀ ಧರ್ಮದ ವಿಚಾರವಾಗಲೀ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎಂದು ವರ್ಗೀಕರಿಸುವುದೇ ಶುದ್ಧ ಮೂರ್ಖತನ, ಹಾಸ್ಯಾಸ್ಪದ. ಇದೇ ಇಂದಿನ ರಾಜಕಾರಣದ ದುರಂತ. ಯಾಕೆಂದರೆ ಹಿಂದೂಗಳಲ್ಲೂ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತರಿದ್ದಾರೆ. ಸರಕಾರ ನೀಡುವ ಸವಲತ್ತು ಸೌಲಭ್ಯಗಳಿಗಾಗಿ ಧರ್ಮ ಮತ್ತು ಮತವನ್ನು ವಿಭಜಿಸಿಕೊಳ್ಳುವುದರ ದುರಂತವನ್ನು ವಾಸ್ತವದಲ್ಲೇ ಜ್ವಲಂತವಾಗಿ ನೋಡುತ್ತಿದ್ದೇವೆ. ಪ್ರಭುತ್ವಕ್ಕೆ ಎಲ್ಲರೂ ಪ್ರಜೆಗಳೇ ಆಗಿರುವಾಗ ಈ ವಿಂಗಡನೆ ಸಾಧುವಲ್ಲ. ಈ ಬಗೆಯ ಕೃತ್ರಿಮ ವಿಂಗಡನೆಯಿಂದಾಗಿಯೇ ಸಮಾನ ನಾಗರಿಕ ಕಾಯಿದೆ ಇನ್ನೂ ಸಾಧ್ಯವಾಗದ ಕನಸಾಗೇ ಉಳಿದಿದೆ. ಪ್ರಭುತ್ವಕ್ಕೆ ಮಾನವ ಹಕ್ಕುಗಳ ರಕ್ಷಣೆಯೊಂದೇ ನೀತಿಯಾದರೆ ಧಾರ್ಮಿಕ ಮತ್ತು ಮತ್ತು ಸಾಂಸ್ಕೃತಿಕ ಬಹುತ್ವಕ್ಕೆ ಯಾವ ಅಡ್ಡಿಯಿರಲಾರದು. ಪ್ರಭುತ್ವಕ್ಕೆ ಎಲ್ಲವೂ ಅಲಿಪ್ತವಾಗಬೇಕು, ನಿರ್ಲಿಪ್ತವೂ ಆಗಬೇಕು. ಅದು ಯಾವುದರೊಂದಿಗೂ ತಾದಾತ್ಮ್ಯವನ್ನು ಹೊಂದದೇ ತಟಸ್ಥವಾಗಬೇಕು.

ರಾಷ್ಟ್ರೀಯ ವಾದವೆಂಬುದು ಏಕರೂಪೀಕರಣ ಎಂದು ಹುಯಿಲಿಡುವುದು ಶತ ಮೂರ್ಖತನ. ಸ್ಥಳೀಯತೆಯ ಪ್ರಜ್ಞೆಯಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಜ್ಞೆ ಬೆಳೆಯೋದು. ಇಸ್ಲಾಾಂ ರಾಷ್ಟ್ರೀಯತೆಯೆಂಬುದು ಸಮಗ್ರ ರಾಷ್ಟ್ರೀಯವಾದವನ್ನಾಗಲೀ, ಬಹುತ್ತ್ವವನ್ನಾಗಲೀ ಬೋಧಿಸಲಾರದು. ಎಲ್ಲಾ ಸಂಸ್ಕೃತಿಗಳುಳ್ಳ ಬಹುತ್ವದ ಭಾರತಕ್ಕೆ ರಾಷ್ಟ್ರೀಯ ಮನೋಭಾವದ ರಾಷ್ಟ್ರೀಯವಾದವನ್ನೇ ಸಂಸ್ಕೃತಿಯ ಏಕರೂಪೀಕರಣ ಎಂದು ದೂಷಿಸುವುದರಲ್ಲಿ ಹುರುಳಿಲ್ಲ. ಚರಿತ್ರೆೆಯಿಂದ ನಾವು ಕಲಿಯಬೇಕಾದ, ಕಲಿಯಬಹುದಾದ ಪಾಠಗಳನ್ನು ಕಲಿಯದೇ ರಾಷ್ಟ್ರೀಯ ಸಾಮರಸ್ಯಕ್ಕೆ ಸ್ಪಂದಿಸದೆ ಅಲ್ಪಸಂಖ್ಯಾಾತರ ಪರ ದನಿಯೆತ್ತುವುದು ರಾಷ್ಟ್ರೀಯ ಹಿತಾಸಕ್ತಿಗೆ ದ್ರೋಹವೂ ಏಕತೆಗೆ ಭಂಗವೂ ಆಗಿಬಿಡುತ್ತದೆ. ಮುಸ್ಲಿಮರೇ ಇದಕ್ಕೆ ದೃಢ ನಿಲುವನ್ನು ಹೊಂದಿ ಮುಖ್ಯವಾಹಿನಿಯ ಜತೆ ಬೆರೆತಾಗ ಮಾತ್ರ ರಾಷ್ಟ್ರ, ರಾಷ್ಟ್ರೀಯತೆ ಬಲವಾದೀತು. ಎಡಪಂಥೀಯ ಚಿಂತನೆಗಳು ಇದಕ್ಕೆೆ ಅನುವು ಮಾಡಿಕೊಡಬೇಕು. ಗ್ರಹಿಕೆ ತಪ್ಪಾಗಿದ್ದುದು ವೈಚಾರಿಕತೆಯ ಕೊರತೆಯಿಂದಲೇ ಹೊರತು ಬಹುಸಂಖ್ಯಾತರ ನಿಲುವಿನಿಂದಲ್ಲ. ಅಲ್ಪಸಂಖ್ಯಾತರು ತಮ್ಮ ಇರವಿನ ಔಚಿತ್ಯವನ್ನು ಬಹುಸಂಖ್ಯಾತರ ನೆಲೆಯಲ್ಲಿ ಕಂಡುಕೊಳ್ಳಲು ಸಾಧ್ಯವಾಗುವುದು ರಾಷ್ಟ್ರೀಯತೆಗೆ ಬದ್ಧರಾಗಿ ರಾಷ್ಟ್ರದ ಔನ್ನತ್ಯವೇ ನಮ್ಮ ಔನ್ನತ್ಯವೆಂದು ಪರಿಗಣಿಸಿದಾಗ. ಆಗ ಬಹುಸ್ತರಗಳ ರಾಷ್ಟ್ರೀಯವಾದ ಜೀವಂತವಾಗುತ್ತದೆ. ಡಾ. ಅಜಕ್ಕಳ ಗಿರೀಶ ಭಟ್ ಹೇಳುವಂತೆ ಈ ದೇಶದ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ಜೈನರು, ಬೌದ್ಧರು, ಪಾರ್ಸಿಗಳು, ಸಿಖ್ಖರು ಹೀಗೆ ಎಲ್ಲರನ್ನೂ ನಮ್ಮ ಸೆಕ್ಯುಲರ್ ಸಂಕಥನ ಮತ್ತು ಸೆಕ್ಯುಲರ್ ನೀತಿಗಳು ಪಶ್ಚಿಮದ ಅಥವಾ ರಿಲಿಜನ್‌ನ ದೃಷ್ಟಿಕೋನದಿಂದಲೇ ನೋಡಿದುದೇ ಸಮಸ್ಯೆೆಗೆ ಕಾರಣ. ಇದರ ಬದಲಾಗಿ ಪರಂಪರಾಗತ ಭಾರತೀಯ ದೃಷ್ಟಿಕೋನದಿಂದ ನೋಡುತ್ತಿದ್ದರೆ ಸೆಕ್ಯುಲರ್ ವಾದವು ಇಷ್ಟರಮಟ್ಟಿಗೆ ವಿಫಲವಾಗುತ್ತಿರಲಿಲ್ಲ. ಈ ಪರಂಪರಾಗತ ಅಥವಾ ಸಾಂಪ್ರದಾಯಿಕ ಭಾರತೀಯ ದೃಷ್ಟಿಕೋನ, ಅಂದರೆ ಪರಸ್ಪರ ಸ್ಪರ್ಧಿಗಳಲ್ಲದ ಸಮಯದಾಯಗಳಾಗಿ ಅಥವಾ ಜಾತಿಗಳಾಗಿ ಯಾವುದೇ ಒಂದು ಸಮುದಾಯವು ಇತರ ಸಮುದಾಯಗಳನ್ನು ಗ್ರಹಿಸುವ ದೃಷ್ಟಿಕೋನ ನಮ್ಮ ಸಾಮಾನ್ಯ ಹಳ್ಳಿಗಳಲ್ಲಿ ಹಿಂದೂಗಳದ್ದು ಮಾತ್ರವಲ್ಲ; ಅಷ್ಟೇ ಪ್ರಮಾಣದಲ್ಲಿ ಮುಸ್ಲಿಮರದ್ದೂ ಕ್ರೈಸ್ತರದೂ ಆಗಿತ್ತು. ಸ್ವಾತಂತ್ರ್ಯ ಬರುವ ಹೊತ್ತಿನಲ್ಲಿ ಮತ್ತು ಅನಂತರ ಕೂಡ. ತಮ್ಮ ಅನುಭವ ಮತ್ತು ಪರಿಸರದಿಂದ ಪ್ರಜ್ಞೆಯನ್ನು ರೂಪಿಸಿಕೊಂಡಿರುತ್ತಿದ್ದರೆ ಸ್ವಾತಂತ್ರ್ಯೋತ್ತರ ಭಾರತದ ಸೆಕ್ಯುಲರ್ ವಾದಿಗಳಿಗೆ ಈ ಪರಂಪರಾಗತ ಭಾರತೀಯ ದೃಷ್ಟಿ ಸುಲಭವಾಗಿ ಅರ್ಥವಾಗುತ್ತಿತ್ತು. ಬಹುಶಃ ಅದು ಅರ್ಥವಾಗದೇ ಇದ್ದುದರಿಂದಲೇ ದೇಶ ವಿಭಜನೆಯಾದಾಗ ಭಾರತದಲ್ಲೇ ಉಳಿದ ಮುಸ್ಲಿಮರ ಭಾರತೀಯತೆಯನ್ನು ಸೆಕ್ಯುಲರ್ ವಾದಿಗಳು ಅಂದಿನಿಂದ ಇಂದಿನವರೆಗೂ ಗುರುತಿಸಲಿಲ್ಲ.

ಕೊನೆಯ ಮಾತು: ಧಾರ್ಮಿಕ ಸಂಘರ್ಷಕ್ಕೆ ಪರಿಹಾರವನ್ನು ಸಾಂಸ್ಕೃತಿಕವಾದ ವಾತಾವರಣದಲ್ಲಿ ಕಂಡುಕೊಳ್ಳಬೇಕು. ಭಾರತದಲ್ಲಿ ಧಾರ್ಮಿಕ ಕ್ಲೇಶಗಳು ಹುಟ್ಟಿಕೊಂಡರೆ ನೆರೆಯ ಪಾಕಿಸ್ತಾನಕ್ಕೂ ವಿಸ್ತರಿಸಿಕೊಳ್ಳುತ್ತದೆ. ಇಲ್ಲಿಯ ಮುಸ್ಲಿಮರು ಪಾಕಿಸ್ತಾನದ ಮುಸ್ಲಿಮರ ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗ ಪ್ರತಿರೋಧಿಸುತ್ತಾರೆ. ಇದು ಎರಡು ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಜಟಿಲಗೊಳಿಸುತ್ತಾ ಮನಸ್ತಾಪವನ್ನು ದ್ವೇಷವನ್ನು ವೃದ್ಧಿಸುವುದಕ್ಕೆೆ ಕಾರಣವಾಗುತ್ತದೆ. ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದುಕೊಂಡು ತಮ್ಮ ಹಿತರಕ್ಷಣೆಗೆ ಯೋಚಿಸುವುದು ತಪ್ಪಲ್ಲ. ಅದು ರಾಷ್ಟ್ರೀಯ ಏಕತೆಗೆ ಭಂಗವಾಗಬಾರದು. ಪರಧರ್ಮ ಸಹಿಷ್ಣುತೆಯನ್ನು ಭಾರತೀಯ ಸಂಪ್ರದಾಯದಂತೆ ಅವರು ರೂಢಿಸಿಕೊಳ್ಳಬೇಕು. ಇಲ್ಲಿಯ ನಾಗರಿಕ ಸೌಲಭ್ಯಗಳನ್ನು ಅನುಭವಿಸುತ್ತಾ ಪಾಕಿಸ್ತಾನದ ಪರ ದನಿಯೆತ್ತುವುದು ಅವರ ಇರವಿಗೆ ಮಾರಕವಾಗುತ್ತದೆ. ಇಸ್ಲಾಾಂ ಅನ್ನು ತಪ್ಪಾಗಿ ಅರ್ಥೈಸುವುದರಿಂದ ಉಂಟಾಗುವ ಸಮಸ್ಯೆೆಗಳಿಗೆ ಮುಸ್ಲಿಮರೇ ಕಾರಣರಾದರೆ ಜಗತ್ತಿನ ಹಲವೆಡೆ ಬದುಕುತ್ತಿರುವ ಮುಸ್ಲಿಮರಿಗೆ ಸಮಸ್ಯೆ ಖಂಡಿತ. ಧರ್ಮದ ದುರುಪಯೋಗ ಪೇಗನ್ ಸಂಪ್ರದಾಯವಾದಿಗಳಿಗಿಂತ ಸೆಮೆಟಿಕ್ ಧರ್ಮಗಳಲ್ಲೇ ಅಧಿಕವಾಗಿರುವಾಗ ಶಾಂತಿ ನೆಮ್ಮದಿಯ ಬದುಕು ಭಾರತದಂಥ ರಾಷ್ಟ್ರದಲ್ಲಿ ಅಸಾಧ್ಯ. ನಾನು ಸಜ್ಜನನಾಗಲು, ಉತ್ತಮ ಧ್ಯೇಯಗಳೊಂದಿಗೆ ಬದುಕಲು ನಿಮ್ಮ ಮತಕ್ಕೇ ಏಕೆ ಸೇರಬೇಕು? ಹೊರಗಿದ್ದೇ ಇದು ಅಸಾಧ್ಯವೇ ಎಂಬ ಗಾಂಧಿಯವರ ಮಾತಿಗೆ ಗೀತೆಯ ಉಕ್ತಿಗಳು ಪ್ರಭಾವ ಆಗಿರಬೇಕು! ಹಿಂದೂ ಧರ್ಮ ಅಂದಾಕ್ಷಣ ಕೋಮು ಎಂಬ ಭಾವನೆ ಬರುವುದಾದರೆ ಈ ದೇಶದಲ್ಲಿರುವ ಎಲ್ಲರೂ ಹಿಂದೂಗಳೇ ಆಗುತ್ತಾರೆಯೇ? ಹಾಗೆ ಆಗುವುದಾದರೆ ಒಂದು ಜನಾಂಗವನ್ನೇ ಒಂದು ಧರ್ಮವೆಂದು ಪರಿಗಣಿಸಿದಂತಾಗುವುದಿಲ್ಲವೇ? ಹಾಗಾದಾಗ ನಿಜವಾಗಿ ಕತ್ತಲಲ್ಲಿ ಇರಿಯುವ ಕೆಲಸ ಮಾಡುತ್ತಿರುವವರು ಯಾರು? ಇದೆಲ್ಲಾ ಯಾರ ಅಜೆಂಡಾ ಹಾವಿನಂತೆ ಗೋಚರವಾಗುತ್ತದೆ? ಆಗ ಪರಧರ್ಮ ಸಹಿಷ್ಣುತೆಯ ಅಗತ್ಯವಾದರೂ ಹೇಗೆ ಬರುವುದಕ್ಕೆ ಸಾಧ್ಯ? ಆಗ ಇಡಿಯ ದೇಶವಾಸಿಗಳು ಒಂದೇ ಧರ್ಮಕ್ಕೆ ಸೇರಿದವರಾಗಿ ಮತಾಂತರವೂ ತಪ್ಪಾಗಿ ಕಾಣುತ್ತದೆ. ಯಾಕೆಂದರೆ ಎಲ್ಲರೂ ಹಿಂದೂಗಳೆಂಬ ರಾಷ್ಟ್ರವಾಚಕವನ್ನು ಧರ್ಮವಾಚಕವಾಗಿ ಸ್ವೀಕರಿಸುವುದರಿಂದ! ಮುಸ್ಲಿಿಂ ಅಥವಾ ಕ್ರಿಶ್ಚಿಯನ್ನಾಗಿಯೇ ಹಿಂದೂಧರ್ಮದ ಪುರಾಣ, ಗೀತೆ, ಉಪನಿಷತ್ತುಗಳ ಪರಂಪರೆ ಮತ್ತು ಸಂಪ್ರದಾಯವನ್ನು ಗೌರವಿಸುವುದು, ಹಿಂದೂವಾಗಿಯೇ ಬೈಬಲ್, ಕುರಾನ್ ಗಳಲ್ಲಿರುವ ಶ್ರೇಷ್ಠ ವಿಚಾರಗಳನ್ನು ಗೌರವಿಸುವುದು ಸಾಧ್ಯವಾದಾಗಲೇ ಪ್ರಭುತ್ವಕ್ಕೆ ತಾಟಸ್ಥ್ಯನೀತಿ ಸಾಧ್ಯವಾಗುವುದು. ಪ್ರಭುತ್ವಕ್ಕೆ ಬಲವನ್ನು ತುಂಬುವುದು ಪ್ರಜೆಗಳಾದ್ದರಿಂದ ಭಾರತಕ್ಕೆ ಸದ್ಯೋಭವಿಷ್ಯದ ದೃಷ್ಟಿಯಿಂದ ಇಂಥ ಬಲ ಅತೀ ತುರ್ತಾಗಿ ತುಂಬಬೇಕಿದೆ.
.