Saturday, 14th December 2024

Prakash Shesharaghavachar Column: ಏರು- ತಗ್ಗುಗಳ ಹಾದಿಯಲ್ಲಿ ಸರಕಾರದ ನೂರು ದಿನ

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್‌

ಸೆಪ್ಟೆಂಬರ್ 17ರಂದು ‘ಮೋದಿ 3.0’ ಆಳ್ವಿಕೆ ನೂರು ದಿನವನ್ನು ಪೂರೈಸಿದೆ. ಕಾಕತಾಳೀಯವಾಗಿ ಅಂದೇ ಮೋದಿ ಯವರ 74ನೇ ಜನ್ಮದಿನವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ‘ಎನ್‌ಡಿಎ’ ಮೈತ್ರಿಕೂಟ 293 ಸೀಟು ಗಳಿಸಿದರೆ, ‘ಇಂಡಿಯ’ ಮೈತ್ರಿಕೂಟ 234ರಲ್ಲಿ ಗೆದ್ದಿತು. ಪೂರ್ಣ ಬಹುಮತವಿಲ್ಲದೆ ಮಿತ್ರಪಕ್ಷಗಳ ಆಧಾರದ ಮೇಲೆ
ಸರಕಾರದ ರಚನೆಯಾಯಿತು. ‘ಅಬ್ ಕಿ ಬಾರ್, ಚಾರ್ ಸೌ ಪಾರ್’ ಎಂಬ ಚುನಾವಣಾ ಘೋಷವಾಕ್ಯ ಪಕ್ಷದ ಗೆಲುವಿಗೆ ದುಬಾರಿಯಾಯಿತು.

ನೆಹರು ಮತ್ತು ಇಂದಿರಾ ನಂತರ ಮೋದಿಯವರು ಮೂರನೆಯ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿ ಕೊಂಡರು. ನೆಹರು ನಂತರ ಮೋದಿಯವರಷ್ಟೇ ಸತತವಾಗಿ 3ನೆಯ ಬಾರಿಗೆ ಪ್ರಧಾನಿಯಾಗಿರುವುದು, ಏಕೆಂದರೆ ಇಂದಿರಾರವರು 1977ರಲ್ಲಿ ಸೋಲು ಕಂಡು 1980ರಲ್ಲಿ ಮೂರನೆಯ ಬಾರಿಗೆ ಪುನರಾಯ್ಕೆಯಾಗಿದ್ದರು.
2019 ರಲ್ಲಿ 54 ಸೀಟು ಗೆದ್ದಿದ್ದ ಕಾಂಗ್ರೆಸ್, ಈ ಬಾರಿ 99 ಸೀಟುಗಳನ್ನು ಗೆಲ್ಲುವ ಮೂಲಕ ತನ್ನ ಸ್ಥಿತಿಯನ್ನು ಸುಧಾರಿಸಿಕೊಂಡಿತು. ಹತ್ತು ವರ್ಷದ ನಂತರ ಅದು ಲೋಕಸಭೆಯ ಅಧಿಕೃತ ಪ್ರತಿಪಕ್ಷ ಸ್ಥಾನವನ್ನು ಪಡೆಯಿತು.

ತೃಣಮೂಲ ಕಾಂಗ್ರೆಸ್, ಡಿಎಂಕೆ ತಮ್ಮ ಬಲವನ್ನು ಭದ್ರಪಡಿಸಿಕೊಂಡರೆ, ಸಮಾಜವಾದಿ ಪಕ್ಷ ಉತ್ತರಪ್ರದೇಶದಲ್ಲಿ 37 ಸ್ಥಾನಗಳನ್ನು ಗೆದ್ದು ಬಿಜೆಪಿಗೆ ಬಹುದೊಡ್ಡ ಆಘಾತವನ್ನು ನೀಡಿತು. ಲೋಕಸಭಾ ಚುನಾವಣೆಯ ಜತೆಯಲ್ಲೇ ನಡೆದ 3 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯೇರಿತು. ಅದರಲ್ಲೂ, ಒಡಿಶಾ ದಲ್ಲಿ 24 ವರ್ಷದಿಂದ ಅಧಿಕಾರದಲ್ಲಿದ್ದ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳವನ್ನು (ಬಿಜೆಡಿ) ಮಣಿಸಿದ್ದು ವಿಶೇಷ. ಇನ್ನು ಆಂಧ್ರ ಪ್ರದೇಶದಲ್ಲಿ ಟಿಡಿಪಿ ಮತ್ತು ಜನಸೇನಾದೊಂದಿಗೆ ಕೈಜೋಡಿಸಿ ಚಂದ್ರಬಾಬು ನಾಯ್ಡುರವರ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರದ ಸಹಭಾಗಿಯಾಗಿದೆ. ಅರುಣಾಚಲ ಪ್ರದೇಶದಲ್ಲಿ ಮೂರನೆಯ ಬಾರಿಗೆ ಅಧಿಕಾರಕ್ಕೆ ಬಂದಿದೆ.

ಬಿಜೆಪಿಗೆ ಪೂರ್ಣ ಬಹುಮತ ಇಲ್ಲದಿರುವುದರಿಂದ, ಕೇಂದ್ರ ಸಚಿವ ಸಂಪುಟ ರಚನೆಯಲ್ಲಿ ಮೋದಿಯವರ
ಪ್ರಾಬಲ್ಯ ಕುಸಿಯಬಹುದು ಎಂಬ ನಿರೀಕ್ಷೆ ಸುಳ್ಳಾಗಿ, ಬಹುತೇಕ ಪ್ರಮುಖ ಖಾತೆಗಳನ್ನು ಬಿಜೆಪಿ ತನ್ನ ಬಳಿಯೇ ಉಳಿಸಿಕೊಂಡಿತು. ಮತ್ತೊಂದು ಬೆಳವಣಿಗೆಯೆಂದರೆ, ರಾಜ್ಯಸಭೆಯಲ್ಲಿ ಮತ್ತೆ ಬಹುಮತವನ್ನು ಪಡೆಯುವಲ್ಲಿ ಎನ್‌ಡಿಎ ಯಶಸ್ವಿಯಾಗಿದೆ. ಹಲವು ರಾಜ್ಯಸಭಾ ಸದಸ್ಯರು ಲೋಕಸಭೆಗೆ ಸ್ಪರ್ಧಿಸಿ ವಿಜಯಶಾಲಿಯಾದ ತರುವಾಯ ಬಹುಮತ ನಷ್ಟವಾಗಿತ್ತು. ತೆರವಾದ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11ರಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಗೆಲುವು ಸಾಧಿಸಿ, ಮತ್ತೆ ಬಹುಮತವನ್ನು ಪಡೆದಿವೆ.

ನೂರು ದಿನದ ಅವಧಿಯಲ್ಲಿ ಸರಕಾರಕ್ಕೆ ಕೆಲವು ಹಿನ್ನಡೆಗಳಾಗಿವೆ. ಅಧಿಕಾರಕ್ಕೆ ಬಂದ ಕೂಡಲೇ ಜಮ್ಮು ಪ್ರದೇಶ ದಲ್ಲಿ ಉಗ್ರಗಾಮಿ ಚಟುವಟಿಕೆಗಳು ಏಕಾಏಕಿ ಉಲ್ಬಣಗೊಂಡವು. ಜಮ್ಮುವಿನ ರೀಸಿ ಜಿಲ್ಲೆಯಲ್ಲಿ ಹಿಂದೂ ಯಾತ್ರಿಕರ ಬಸ್ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 10 ಜನರು ಮೃತಪಟ್ಟು 34 ಜನರು ಗಾಯಗೊಂಡರು. ಇದು ಪ್ರತ್ಯೇಕತಾವಾದಿಗಳು ಹೊಸ ಸರಕಾರಕ್ಕೆ ಎಸೆದ ಸವಾಲಾಗಿದೆ. ಕಳೆದ ೧೦೦ ದಿನಗಳಲ್ಲಿ ಸೈನಿಕರ ಶಿಬಿರಗಳ ಮೇಲೆ ನಡೆದಿರುವ ದಾಳಿಯಲ್ಲಿ ಕನಿಷ್ಠ 16 ಸೈನಿಕರು ಹುತಾತ್ಮರಾಗಿದ್ದಾರೆ. ಉಗ್ರರ ಚಟುವಟಿಕೆಯು ಕಾಶ್ಮೀರ ಕಣಿವೆ ಯಿಂದ ಹಿಂದೂ ಬಹುಮತವಿರುವ ಜಮ್ಮು ಪ್ರದೇಶಕ್ಕೆ ವಿಸ್ತರಣೆಯಾಗಿರುವುದು ಆತಂಕದ ವಿಷಯವಾಗಿದೆ.

ಮಣಿಪುರವು ಶಾಶ್ವತ ಶಾಂತಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಅಲ್ಲಿ ಹಿಂಸೆಗೆ ಬಿಡುವಿಲ್ಲದಾಗಿದೆ. ವಿಚ್ಛಿದ್ರಕಾರಿ
ಶಕ್ತಿಗಳು ರಾಕೆಟ್ ದಾಳಿಯನ್ನು ಕೈಗೊಂಡಿರುವುದು, ಅಲ್ಲಿನ ಗಲಭೆಯಲ್ಲಿ ವಿದೇಶಿ ಶಕ್ತಿಗಳ ಕೈವಾಡವಿರುವುದರ ಆರೋಪವನ್ನು ದೃಢಪಡಿಸುತ್ತದೆ. ಪದೇಪದೆ ನಡೆಯುತ್ತಿರುವ ಹಿಂಸಾಚಾರ ಕೃತ್ಯಗಳು ಅಲ್ಲಿನ ಸೂಕ್ಷ್ಮ ಪರಿಸ್ಥಿತಿ ಯನ್ನು ಬಿಂಬಿಸುತ್ತಿವೆ. ಮಣಿಪುರದಲ್ಲಿನ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ಗುರುತರ ಜವಾಬ್ದಾರಿ ಕೇಂದ್ರ ಸರಕಾರದ ಮೇಲಿದೆ. ಬಾಂಗ್ಲಾ ದೇಶದಲ್ಲಿ ನಡೆದಿರುವ ಅಧಿಕಾರಪಲ್ಲಟವು ಭಾರತಕ್ಕೆ ಹೊಸ ತಲೆನೋವನ್ನು ತಂದೊಡ್ಡಿದೆ. ಶೇಖ್ ಹಸೀನಾರವರು ಪದತ್ಯಾಗ ಮಾಡಿ ಭಾರತದಲ್ಲಿ ಆಶ್ರಯ ಪಡೆದಿರುವುದು ಉಭಯ ದೇಶಗಳ ಸಂಬಂಧದಲ್ಲಿ ಕಸಿವಿಸಿಯನ್ನು ಉಂಟುಮಾಡಿದೆ.

ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನೇ ಕೇಂದ್ರ ಸೇವೆಗೆ ಸೇರ್ಪಡೆ ಮಾಡುವ ಪದ್ಧತಿಯನ್ನು ಮುರಿದು, ವಿಷಯ ಪರಿಣತರನ್ನು ಆಯ್ಕೆಮಾಡುವ ಪ್ರಕ್ರಿಯೆ ಆರಂಭಿಸಿದಾಗ, ಇದರಿಂದ ಮೀಸಲಾತಿಗೆ ಪೆಟ್ಟು ಬೀಳುತ್ತದೆ ಎಂದು ವಿಪಕ್ಷಗಳು ಪ್ರಬಲವಾಗಿ ವಿರೋಧಿಸಿದವು. ಸರಕಾರವು ಈ ವಿರೋಧಕ್ಕೆ ಮಣಿದು ಅಧಿಸೂಚನೆ ಯನ್ನು ಹಿಂದಕ್ಕೆ ಪಡೆಯಬೇಕಾಯಿತು. ‘ಬ್ರಾಡ್‌ಕಾಸ್ಟಿಂಗ್ 2024’ ವಿಧೇಯಕವು ತೀವ್ರವಾದ ಪ್ರತಿರೋಧ ಎದುರಿಸಿದ್ದರಿಂದ ಸರಕಾರವು ಅಂತಿಮ ಕ್ಷಣದಲ್ಲಿ ಈ ವಿಧೇಯಕವನ್ನು ಹಿಂದಕ್ಕೆ ಪಡೆಯಬೇಕಾಯಿತು. ವಕ್ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸುವ ರಾಜಕೀಯ ಇಚ್ಛಾಶಕ್ತಿಯನ್ನು ಸರಕಾರವು ಪ್ರದರ್ಶಿಸಿದೆ. ಈ ವಿಧೇಯಕವು ಸದನದಲ್ಲಿ ಮಂಡನೆಯಾಗಿ, ಹೆಚ್ಚಿನ ಚರ್ಚೆ ಮತ್ತು ವ್ಯಾಪಕ ವಿಚಾರ ವಿನಿಮಯಕ್ಕಾಗಿ ಅದನ್ನು ಜಂಟಿ ಸಂಸದೀಯ ಸಮಿತಿಗೆ ಹಸ್ತಾಂತರಿಸಲಾಗಿದೆ.

‘ಇದು ಪೂರ್ಣ ಬಹುಮತವಿಲ್ಲದ ಸರಕಾರವು ತೆಗೆದುಕೊಂಡಿರುವ ಯು-ಟರ್ನ್’ ಎಂಬುದು ವಿರೋಧಿಗಳ ಅಂಬೋಣ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸ್ಪೃಶ್ಯವಾಗಿರುವ ರಷ್ಯಾಕ್ಕೆ ಮೋದಿಯವರು ಪ್ರವಾಸ ಕೈ ಗೊಂಡರು, ಜತೆಗೆ ಉಕ್ರೇನ್‌ಗೂ ತೆರಳಿ ಆ ದೇಶಕ್ಕೆ ನೈತಿಕ ಬೆಂಬಲವನ್ನು ತುಂಬಿದರು. ಯುದ್ಧದಲ್ಲಿ ತೊಡಗಿರುವ ಎರಡೂ ದೇಶಗಳಿಗೆ ಹೀಗೆ ಭೇಟಿ ನೀಡಿರುವ ವಿಶ್ವದ ಏಕೈಕ ನಾಯಕ ನರೇಂದ್ರ ಮೋದಿಯವರು ಎಂಬುದು ಉಲ್ಲೇಖನೀಯ. ತಮ್ಮ ರಷ್ಯಾ ಪ್ರವಾಸದ ಫಲಶ್ರುತಿಯಾಗಿ, ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಪಾಲ್ಗೊಂಡಿರುವ ಭಾರತೀಯ ಬಾಡಿಗೆ ಸೈನಿಕರನ್ನು ಬಿಡುಗಡೆಗೊಳಿಸುವ ಒಪ್ಪಿಗೆ ಪಡೆಯುವಲ್ಲಿ ಮೋದಿ ಸಫಲರಾದರು. ಸೇನೆ ಯಿಂದ ಬಿಡುಗಡೆಯಾದ ಸೈನಿಕರು ಭಾರತಕ್ಕೆ ಹಿಂದಿರುಗುತ್ತಿದ್ದಾರೆ.

‘ಭಾರತದ ಭೂಪ್ರದೇಶವನ್ನು ಚೀನಾ ಅತಿಕ್ರಮಿಸಿದೆ’ ಎಂದು ಸತತವಾಗಿ ಅಪಪ್ರಚಾರ ಮಾಡುತ್ತಿದ್ದರು ಕಾಂಗ್ರೆಸ್ಸಿ ಗರು ಹಾಗೂ ಮೋದಿ ವಿರೋಧಿಗಳು; ಆದರೀಗ ಗ್ಯಾಲ್ವಾನ್ ಸಹಿತ ನಾಲ್ಕು ವಿವಾದಿತ ಭೂಪ್ರದೇಶದಿಂದ ಚೀನಾ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಿದೆ. ವಿವಾದಿತ ಪ್ರದೇಶದಿಂದ ಸೈನ್ಯದ ಸಂಪೂರ್ಣ ಹಿಂದೆಗೆತಕ್ಕೆ ವೇದಿಕೆ ಸಜ್ಜಾಗಿದೆ. ಅಂದು ಬೊಬ್ಬೆ ಹೊಡೆದು ಮೋದಿಯವರನ್ನು ಪ್ರಶ್ನಿಸುತ್ತಿದ್ದವರು ಇಂದು ಬಾಯಿಗೆ ಬೀಗ ಹಾಕಿ ಕೊಂಡಿದ್ದಾರೆ. ಬ್ರಿಟಿಷ್ ವಸಾಹತು ಪರಂಪರೆಗೆ ತಿಲಾಂಜಲಿ ನೀಡಿ, ‘ಭಾರತೀಯ ದಂಡ ಸಂಹಿತೆ’ಯು ಬದಲಾಗಿ ‘ಭಾರತೀಯ ನ್ಯಾಯ ಸಂಹಿತೆ’ ಎಂದು ಅಧಿಕೃತ ಕ್ರಿಮಿನಲ್ ಕೋಡ್ ಆಯಿತು. 2023ರ ಡಿಸೆಂಬರ್‌ನಲ್ಲಿ ಈ ಹೊಸ ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿದ ನಂತರ 2024ರ ಜುಲೈ 1ರಂದು ಇದು ಜಾರಿಗೆ ಬಂದಿದೆ.

ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಯು ಪ್ರಗತಿಯಲ್ಲಿದೆ. ಈ ಕಣಿವೆ ರಾಜ್ಯದಲ್ಲಿ 370ನೇ ವಿಧಿಯು
ರದ್ದಾದ ನಂತರ ಜನರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಸಕಾರಾತ್ಮಕ ಬದಲಾ ವಣೆ. ಚುನಾವಣಾ ಪ್ರಚಾರಕಾರ್ಯವೂ ಶಾಂತಿಯುತವಾಗಿ ನಡೆಯುತ್ತಿರುವುದು ಸರಕಾರದ ಸಾಧನೆಯ ಕಿರೀಟಕ್ಕೆ ಸೇರ್ಪಡೆಯಾದ ಮತ್ತೊಂದು ಗರಿಯಾಗಿದೆ.

ನೂತನವಾಗಿ ಅಸ್ತಿತ್ವಕ್ಕೆ ಬಂದ ಸರಕಾರದಿಂದ ನೂರು ದಿನದ ಅವಧಿಯಲ್ಲಿ ಮಹತ್ತರ ಸಾಧನೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ; ಆದರೆ ಸರಕಾರವು ಸಾಗುತ್ತಿರುವ ದಿಕ್ಕನ್ನು ಅದು ಸೂಚಿಸುತ್ತದೆ. ಆ ನಿಟ್ಟಿನಲ್ಲಿ ‘ಮೋದಿ 3.0’ ಆಡಳಿ ತವು ಭರವಸೆಯ ಹಾದಿಯಲ್ಲಿ ಸಾಗುತ್ತಿದೆ ಎನ್ನಲಡ್ಡಿಯಿಲ್ಲ. ಮತ್ತೊಮ್ಮೆ ಅಧಿಕಾರಕ್ಕೆ ಬರುವ ಆತ್ಮವಿಶ್ವಾಸವಿದ್ದ ಕಾರಣ ಮೋದಿಯವರು, ಚುನಾವಣೆಗೆ ಮುನ್ನವೇ ಮೊದಲ 100 ದಿನಗಳ ಆದ್ಯತೆಯನ್ನು ಗುರುತಿಸಿದ್ದರು.

ಅಧಿಕಾರಕ್ಕೆ ಬಂದ ತರುವಾಯ ಅವುಗಳ ಅನುಷ್ಠಾನಕ್ಕೆ ಚಾಲನೆ ದೊರೆತಿದೆ. ಮೂರು ಲಕ್ಷ ಕೋಟಿ ರುಪಾಯಿ ಮೌಲ್ಯದ ರಸ್ತೆ, ಬಂದರು, ರೈಲು ಮತ್ತು ವಿಮಾನಯಾನ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರು ಮೆಟ್ರೋ ಮೂರನೆಯ ಹಂತದ 15 ಸಾವಿರ ಕೋಟಿ ರುಪಾಯಿ ಯೋಜನೆಗೆ ಮಂಜೂರಾತಿ
ದೊರೆತಿದೆ. ಕಳೆದ 100 ದಿನಗಳಲ್ಲಿ 15 ‘ವಂದೇಭಾರತ್’ ರೈಲುಗಳ ಸಂಚಾರ ಆರಂಭವಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ಮದುರೈ ಮತ್ತು ಹುಬ್ಬಳ್ಳಿ-ಪುಣೆ ಮಾರ್ಗದಲ್ಲಿ ‘ವಂದೇಭಾರತ್’ ರೈಲುಗಳ ಸಂಚಾರ ಶುರುವಾಗಿದೆ. ನೂತನವಾದ ‘ವಂದೇ ಭಾರತ್ ಸ್ಲೀಪರ್ ಕೋಚ್’ ಅನಾವ
ರಣಗೊಂಡಿದ್ದು, ಬೆಂಗಳೂರಿನ ಬಿಇಎಂಎಲ್ ಕಾರ್ಖಾನೆಯಲ್ಲಿ ಇದರ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರಿಗೂ
ಹೆಮ್ಮೆಯ ವಿಷಯವಾಗಿದೆ. ಅಹಮದಾಬಾದ್ ಮತ್ತು ಭುಜ್ ನಡುವೆ ‘ನಮೋ ಭಾರತ್ ರ‍್ಯಾಪಿಡ್ ರೈಲು’ ಸಂಚಾರ ಆರಂಭವಾಗಿ ಅತ್ಯಾಧುನಿಕ ರೈಲು ಸೇವೆಗೆ ಬಾಗಿಲು ತೆರೆದುಕೊಂಡಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಾಗಿ 9.3 ಕೋಟಿ ರೈತರಿಗೆ 20000 ಕೋಟಿ ರುಪಾಯಿ ಹಣವನ್ನು ವಿತರಿಸಲಾಗಿದೆ. ಮಧ್ಯಮ ವರ್ಗವನ್ನು ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆಯಲ್ಲಿ 7 ಲಕ್ಷ ರು.ವರೆಗೆ ವಿನಾಯಿತಿ ನೀಡಲಾಗಿದೆ. ಏಕೀಕೃತ ಪಿಂಚಣಿ ಯೋಜನೆಗೆ ಅನುಮೋದನೆ ನೀಡಿ, ಹಳೆಯ ಮತ್ತು ಹೊಸ ಪಿಂಚಣಿಗಳ ಗೊಂದಲಕ್ಕೆ ತೆರೆ ಎಳೆಯಲಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಹಾಗೆಯೇ ನಗರ ಪ್ರದೇಶದಲ್ಲಿ ಒಂದು ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದಿಸಲಾಗಿದೆ. ಸ್ಟಾರ್ಟ್‌ಅಪ್ ಉದ್ದಿಮೆದಾರರಿಗೆ ತಲೆಬೇನೆಯಾಗಿದ್ದ ‘ಏಂಜಲ್ ತೆರಿಗೆ’ಯನ್ನು ಸಂಪೂರ್ಣವಾಗಿ ರದ್ದುಪಡಿಸಿ ಬಹುದೊಡ್ಡ ಹೊರೆಯನ್ನು ಇಳಿಸಲಾಗಿದೆ. ಮುದ್ರಾ ಯೋಜನೆಯ ಸಾಲದ ಮಿತಿಯನ್ನು 10 ಲಕ್ಷದಿಂದ 20 ಲಕ್ಷ ರುಪಾಯಿಗೆ ಹೆಚ್ಚಳ ಮಾಡಿ ಉದ್ದಿಮೆ ಸ್ಥಾಪನೆಗೆ ಉತ್ತೇಜನ ನೀಡಲಾಗಿದೆ. ಚುನಾವಣೆಯ ವೇಳೆ ನೀಡಿದ ಭರವಸೆಯಂತೆ ‘ಆಯುಷ್ಮಾನ್ ಭಾರತ’ ಯೋಜನೆಯನ್ನು 70ರ ಹರೆಯವನ್ನು ಮೀರಿದವರಿಗೂ ವಿಸ್ತರಿಸಿ 5 ಲಕ್ಷ ರು. ಉಚಿತ ಆರೋಗ್ಯ ವಿಮೆ ಸೌಲಭ್ಯವನ್ನು ಕಲ್ಪಿಸಿ, ವೃದ್ಧಾಪ್ಯದಲ್ಲಿ ತಲೆದೋರುವ ವೈದ್ಯಕೀಯ ವೆಚ್ಚದ ಚಿಂತೆಗೆ ಪರಿಹಾರ
ನೀಡಲಾಗಿದೆ. ಸಿಎಎ ಕಾಯ್ದೆಯನ್ವಯ ಹಿಂದೂ, ಸಿಖ್ ಮತ್ತು ಕ್ರೈಸ್ತರಿಗೆ ಭಾರತದ ಪೌರತ್ವ ನೀಡುವ ಪ್ರಕ್ರಿಯೆ ಆರಂಭಗೊಂಡಿದ್ದು, ಕರ್ನಾಟಕದ ಸಿಂಧನೂರಿನಲ್ಲಿರುವ ಬಾಂಗ್ಲಾದೇಶದ ಐವರು ನಿರಾಶ್ರಿತರಿಗೆ ಇದರಡಿಯಲ್ಲಿ ಪೌರತ್ವ ನೀಡಲಾಗಿದೆ. ಒಟ್ಟಾರೆ ಹೇಳುವುದಾದರೆ, ಜನಪರ ಮತ್ತು ಬಡವರ ಪರವಾದ ಹಲವಾರು ಯೋಜನೆ ಗಳನ್ನು ಜಾರಿಗೆ ತರುವಲ್ಲಿ ಮೋದಿ ಸರಕಾರದ ನೂರು ದಿನದ ಆಡಳಿತವು ಶ್ರೀಕಾರ ಬರೆದಿದೆ.

ದೂರದೃಷ್ಟಿಯುಳ್ಳ ನಾಯಕತ್ವವು ದೇಶದ ನಕ್ಷೆಯನ್ನು ಬದಲಿಸುವ ಯೋಜನೆಯ ಅನುಷ್ಠಾನದೊಂದಿಗೆ
ಕಾರ್ಯಾರಂಭ ಮಾಡಿದೆ, ತನ್ಮೂಲಕ ‘ವಿಕಸಿತ ಭಾರತ’ದ ಕನಸನ್ನು ನನಸು ಮಾಡಲು ದಾಪುಗಾಲು ಹಾಕಿದೆ.

(ಲೇಖಕರು ಬಿಜೆಪಿ ವಕ್ತಾರರು)

ಇದನ್ನೂ ಓದಿ: Prakash Shesharaghavachar Column: ಮಹಿಳಾ ಸುರಕ್ಷತೆ ಮೊದಲ ಆದ್ಯತೆಯಾಗಲಿ