Saturday, 23rd November 2024

ಹೂವಿನಿಂದಲೂ ದೋಸೆ ತಯಾರಿಸಬಹುದು !

ಶಶಾಂಕಣ

ಶಶಿಧರ ಹಾಲಾಡಿ

ಹಳ್ಳಿಗಾಡಿನ ತಿಂಡಿ ತಿನಿಸುಗಳು ಆಧುನಿಕ ನಾಗರಿಕತೆಯ ಭರಾಟೆಯಲ್ಲಿ ಕೊಚ್ಚಿ ಹೋಗುತ್ತಿರುವ ಇಂದಿನ ಸಂದರ್ಭದಲ್ಲಿ, ದೊಡ್ಡ ನಗರ ಗಳ ಬೀದಿಗಳಲ್ಲಿ ಹಳ್ಳಿ ತಿಂಡಿಗಳನ್ನು ತಯಾರಿಸುವ ಹೊಟೇಲ್‌ಗಳು, ರೆಸ್ಟಾರೆಂಟ್‌ಗಳು ತಲೆ ಎತ್ತುತ್ತಿರುವುದು, ಜನರಿಗೆ ಹಳೆಯ ತಿನಿಸನ್ನು ಪರಿಚಯಿಸುತ್ತಿರುವುದು ಒಂದು ಪುಟ್ಟ ವಿಸ್ಮಯವೇ ಸರಿ.

ಇಪ್ಪತ್ತೊಂದನೇ ಶತಮಾನದ ವಿಸ್ಮಯಗಳಲ್ಲಿ ಒಂದು ಎಂದರೆ, ಬಹು ದೊಡ್ಡ ನಗರಗಳಲ್ಲೂ ‘ಹಳ್ಳಿ ತಿಂಡಿ ದೊರೆಯುತ್ತದೆ’ ಎಂಬ ಬೋರ್ಡ್ ತಗುಲಿಸಿಕೊಂಡಿರುವ ಆಧುನಿಕ ಹೊಟೇಲ್‌ಗಳು ಮತ್ತು ರೆಸ್ಟಾರೆಂಟ್‌ಗಳು! ಬೆಂಗಳೂರಿನ ಹಲವು ಆಧುನಿಕ ಬಡಾವಣೆ ಗಳಲ್ಲಿ ಸುತ್ತಾಡಿದರೆ, ಹಳೆಯ ಕಾಲದ ತಿಂಡಿಗಳನ್ನು ತಯಾರಿಸಿ ಅಥವಾ ತರಿಸಿ, ಗ್ರಾಹಕರಿಗೆ ಒದಗಿಸುವ ಹೊಟೇಲ್ ಗಳನ್ನು ಕಾಣಬಹುದು.

ಆಧುನಿಕ ಶಿಕ್ಷಣ ಪಡೆದ, ಉತ್ತಮ ಉದ್ಯೋಗದಲ್ಲಿರುವ ಕೆಲವರಿಗೆ ಹಳ್ಳಿಯ ತಿನಿಸು ಗಳೆಂದರೆ ಬಹಳ ಇಷ್ಟ! ಇಲ್ಲೊಂದು ಕುತೂಹಲಕಾರಿ ವಿಚಾರವೂ ಇದೆ – ಕೆಲವು ವಲಯಗಳಲ್ಲಿ, ಜನರು ಶ್ರೀಮಂತರಾದಷ್ಟೂ, ಅವರಿಗೆ ಹಳೆಯ ಕಾಲದ ತಿಂಡಿಗಳ ನೆನಪು ಹೆಚ್ಚು ಹೆಚ್ಚು ಕಾಡುತ್ತದೆ. ಅಂತಹ ಭಾವಜೀವಿಗಳ ಜಿಹ್ವಾದಾಹ ತಣಿಸಲೆಂದೇ ಹಳ್ಳಿಯ ತಿಂಡಿಗಳನ್ನು ಕೆಲವು ಆಧುನಿಕ ಹೊಟೇಲ್ ಗಳು ತಯಾರಿಸು ತ್ತಿರಬಹುದು.

ಕೆಲವು ದಶಕಗಳ ಹಿಂದೆ ನಮ್ಮ ಹಳ್ಳಿಗಳಲ್ಲಿ ಬಹಳ ಸಾಮಾನ್ಯ ಎನಿಸಿದ್ದ ಹಲವು ತಿಂಡಿಗಳು ಈಗ ಕಣ್ಮರೆಯಾಗುವ ಹಂತದಲ್ಲಿದ್ದು, ಅವುಗಳನ್ನು ಕೆಲವು ಹೊಟೇಲ್ ಗಳು, ಆಸಕ್ತರು ಈಗ ತಯಾರಿಸಿ, ಆ ರೆಸೆಪಿಯನ್ನು ಜೀವಂತವಾಗಿಟ್ಟು, ಆಧುನಿಜ ಸಮಾಜಕ್ಕೆ ಪರಿಚಯಿಸುತ್ತಿರುವುದು ಒಂದು ಪುಟ್ಟ ವಿಸ್ಮಯವೇ ಸರಿ. ವಿದೇಶಗಳ ಹೆಸರು ಹೊತ್ತ, ಕಾಸ್ಮೊಪಾಲಿಟನ್ ತಿನಿಸುಗಳನ್ನು ಒದಗಿಸುವ ಬಣ್ಣ ಬಣ್ಣದ ಹೊಟೇಲ್ ಗಳ ಮಧ್ಯೆ, ಉಡುಪಿ ಕೊಟ್ಟೆ ಕಡುಬಿನಂತಹ ಅಪ್ಪಟ ಹಳ್ಳಿಗಾಡಿನ ತಿನಿಸನ್ನು ನೀಡುವ ಹೊಟೇಲ್‌ಗಳು ಈಚಿನ ವರ್ಷಗಳಲ್ಲಿ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲೂ ಆರಂಭಗೊಂಡದ್ದು ನನಗಂತೂ ಬೆರಗನ್ನು ತಂದಿದೆ.

ಈ ವಿದ್ಯಮಾನವನ್ನು ಕಂಡು ನಮ್ಮೂರಿನ ಕೆಲವು ಹಳೆಯ ತಿನಿಸುಗಳ ನೆನಪಾಗಿದ್ದಂತೂ ಸುಳ್ಳಲ್ಲ. ಕೆಲವು ದಶಕಗಳ ಹಿಂದೆ ನಮ್ಮ ಹಳ್ಳಿಯಲ್ಲಿ ಲಭ್ಯವಿದ್ದ ತಿಂಡಿಗಳ, ಆಹಾರಗಳ ಪಟ್ಟಿ ವೈವಿಧ್ಯಮಯ! ಆಧುನಿಕತೆಯ ಭರಾಟೆಯಲ್ಲಿ, ಹಳ್ಳಿಗಳಿಂದ ಜನರು ನಗರ ಗಳತ್ತ ವಲಸೆ ಬರುವ ನಿರಂತರ ಪ್ರಕ್ರಿಯೆಯಲ್ಲಿ ಅಂತಹ ಹಲವು ತಿಂಡಿಗಳು ಪೂರ್ತಿ ಕಣ್ಮರೆಯಾಗುವ ಹಾದಿ ಹಿಡಿದಿರಿವುದು ನಿಜವಾದರೂ, ಅವುಗಳಲ್ಲಿ ಕೆಲವನ್ನಾದರೂ ಆಸಕ್ತರು ನೆನಪಿಟ್ಟುಕೊಂಡು, ತಯಾರಿಸುತ್ತಿರುವುದು ನೆಮ್ಮದಿಯ ವಿಚಾರ.

ಆ ಮೂಲಕ ಪುರಾತನ ಸಂಸ್ಕೃತಿಯ ಒಂದು ಭಾಗದ ಮುಂದುವರಿಕೆಯನ್ನು ಕಾಣಬಹುದು. ಈ ಹಳ್ಳಿ ತಿಂಡಿಗಳ ವೈವಿಧ್ಯತೆ ಹೇಗಿದೆ ಯೆಂದೆ, ಒಂದೊಂದು ಊರಿಗೆ ಒಂದೊಂದು ರುಚಿಯ ತಿಂಡಿಗಳೂ ಇವೆ ಮತ್ತು ಒಂದೇ ತಿಂಡಿಯನ್ನು ಬೇರೆ ಬೇರೆ ರೀತಿ ತಯಾರಿಸುವ ಹಳ್ಳಿಗಳೂ ಇವೆ. ನನಗೆ ನಮ್ಮೂರಿನ ಹಳೆಯ ತಿನಿಸುಗಳ ಪರಿಚಯವನ್ನು ಮಾಡಿಕೊಟ್ಟವರು ನಮ್ಮ ಅಮ್ಮಮ್ಮ, ಅಮ್ಮ ಮತ್ತು ನಮ್ಮೂರಿನ ಕೆಲವು ಹಿರಿಯರು.

ಅಂತಹ ತಿಂಡಿಗಳ ಪೈಕಿ ನೀವು ಇಂದು ನಿಬ್ಬೆರಗಾಗುವ ರುಚಿಗಳು, ತಿನಿಸುಗಳು ಇವೆ ಎಂಬುದಂತೂ ಖಚಿತ. ಉದಾಹರಣೆಗೆ ಗುಂಬಳ ಹೂವಿನ ದೋಸೆಯ ವಿಚಾರ ನಿಮಗೆ ಗೊತ್ತೆ ಅಥವಾ ತಿಂದಿದ್ದೀರಾ? ಈಚಿನ ಹಲವು ದಶಕಗಳಲ್ಲಿ ನನ್ನ ಕಣ್ಣಿಗೆ ಬೀಳದೇ ಇರುವ, ನಾಲಗೆಯ ರುಚಿ ತಣಿಸದೇ ಇರುವ ಗುಂಬಳ ಹೂವಿನ ದೋಸೆಯು, ಅತಿ ಅಪರೂಪದ ತಿನಿಸುಗಳಲ್ಲಿ ಒಂದು ಎಂದೇ ನನ್ನ ಅಭಿಮತ. ಅತ್ಯಪರೂಪ ಎನಿಸುವ ಗುಂಬಳ ಹೂವಿನ ದೋಸೆಯನ್ನು ನನಗೆ ಪರಿಚಯಿಸಿದವರು ಅಥವಾ ತಿನಿಸಿದವರು ನಮ್ಮ ಅಮ್ಮಮ್ಮ. ನಮಗಿದ್ದ ಸಣ್ಣ ಜಾಗದಲ್ಲಿ, ಅಮ್ಮಮ್ಮನ ಮುತುವರ್ಜಿಯಿಂದಾಗಿ ಹಲವು ಗುಂಬಳ ಬಳ್ಳಿಗಳು ಬೆಳೆಯುತ್ತಿದ್ದವು.

ಅವುಗಳಲ್ಲಿ ಎರಡು ವಿಧ. ಒಂದು ಬೂದುಗುಂಬಳ, ಇನ್ನೊಂದು ಮಾಮೂಲಿ ಗುಂಬಳ ಅಥವಾ ಚೀನಿ ಗುಂಬಳ (ನಮ್ಮ ರಾಜ್ಯದಲ್ಲಿ ಜನಪ್ರಿಯವಾಗಿರುವ ದುಂಡನೆಯ, ಸಾಮಾನ್ಯ ಕುಂಬಳಕಾಯಿ). ದೋಸೆ ತಯಾರಿಸಲು ಬೂದುಗುಂಬಳ ಹೂವು ಆಗಿಬರುವುದಿಲ್ಲ, ಚೀನಿ ಗುಂಬಳದ ಹೂವೇ ಬೇಕು. ಅದರಲ್ಲೂ ಚೀನಿ ಗುಂಬಳದ ಗಂಡು ಹೂವುಗಳೇ ಅಗತ್ಯ ಎನ್ನುತ್ತಿದ್ದರು ಅಮ್ಮಮ್ಮ. (ಹೆಣ್ಣು ಹೂವು ಗಳಿಂದ ಕಾಯಿ ಸಿಗುವುದರಿಂದ, ಅವುಗಳನ್ನು ಕೊಯ್ಯುತ್ತಿರಲಿಲ್ಲ). ಆ ಹೂವುಗಳನ್ನು ಕುಯ್ದು, ಸಣ್ಣದಾಗಿ ಕತ್ತರಿಸಿ, ಅಕ್ಕಿ ಹಿಟ್ಟಿನಲ್ಲಿ ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿ, ತೆಳುವಾಗಿ ದೋಸೆಕಲ್ಲಿನ ಮೇಲೆ ಹರಡಿ ಬೇಯಿಸಿದರೆ, ಕುಂಬಳ ಹೂವಿನ ದೋಸೆ ಸಿದ್ಧ. ಅಕ್ಕಿಹಿಟ್ಟನ್ನು ಅರೆದು ಸಿದ್ಧಪಡಿಸುವಾಗಲೇ, ರುಚಿಗೆ ತಕ್ಕ ಉಪ್ಪು, ಖಾರ ಸೇರಿಸಬೇಕು.

ಮಳೆಗಾಲ ಕಳೆದ ನಂತರ, ನಮ್ಮ ಮನೆಯಲ್ಲಿ ಕುಂಬಳ ಹೂವು ಸಿಗುತ್ತಿದ್ದು, ಅಪ ರೂಪಕ್ಕೊಮ್ಮೊಮ್ಮೆ ಈ ದೋಸೆಯನ್ನು ಮಾಡುತ್ತಿದ್ದರು. ನಿಜ ಹೇಳಬೇಕೆಂದರೆ, ನಾನು ಪ್ರೌಢ ಶಾಲಾ ವಿದ್ಯಾರ್ಥಿಯಾಗಿದ್ದಾಗ ಈ ಅಪರೂಪದ ದೋಸೆಯನ್ನು ತಿಂದಿದ್ದೆ, ಆ ನಂತರ ನಮ್ಮ ಮನೆಯಲ್ಲಿ ಅದನ್ನು ತಯಾರಿಸಲೇ ಇಲ್ಲ! ಈಗ ಹೇಳಿ, ಇದು ನನ್ನ ಮಟ್ಟಿಗಾದರೂ ಅತ್ಯಪರೂಪದ ದೋಸೆ ಅಲ್ಲವೆ! ಇದನ್ನೇ ಹೋಲುವ ಇನ್ನೊಂದು ದೋಸೆ ಎಂದರೆ ಹೀರೆಕಾಯಿ ದೋಸೆ. ಹೋಲಿಕೆ ಏಕೆಂದರೆ, ಮಾಡುವ ವಿಧಾನದಿಂದಾಗಿ. ಹೊರತು, ಹೀರೆಕಾಯಿ ದೋಸೆ ಅಷ್ಟೊಂದು ಅಪರೂಪವಲ್ಲ.

ಈಗಲೂ ಕರಾವಳಿಯ ಹಲವು ಮನೆಯಗಳಲ್ಲಿ, ಇದನ್ನು ತಯಾರಿಸುವುದುಂಟು. ಹೀರೆಕಾಯಿಯ ಸಿಪ್ಪೆ ತೆಗೆದು, ದುಂಡಗೆ ಕತ್ತರಿಸಿ, ಅಕ್ಕಿ ಹಿಟ್ಟಿನಲ್ಲಿ ಮುಳುಗಿಸಿ, ದೋಸೆಕಲ್ಲಿನ ಮೇಲೆ ಹಚ್ಚಿ ಬೇಯಿಸಿದಾಗ ದೋಸೆ ಸಿದ್ಧ. ಎಲ್ಲಾ ಹೀರೆಕಾಯಿಗಳ ಹೋಳುಗಳು ಒಂದಕ್ಕೊಂದು ಅಂಟಿಕೊಂಡಿರುತ್ತವೆ. ಇದೇ ರೀತಿ, ಬಾಳೆಕಾಯಿ ಮತ್ತು ಬದನೆಕಾಯಿಗಳಿಂದ ದೋಸೆ ತಯಾರಿಸಬಹುದು.

ನಮ್ಮೂರಿನ ಅಪರೂಪದ ತಿನಿಸುಗಳ ಪಟ್ಟಯಲ್ಲಿ ಮರಕೆಸುವಿನ ದೋಸೆಯನ್ನೂ (ಚೆಟ್ಟಿ ಎಂದೂ ಕರೆಯುವುದುಂಟು) ಸೇರಿಸಬಹುದು. ಮರಕೆಸು ಎಲೆಗಳು ಮಳೆಗಾಲದ ನಾಲ್ಕಾರು ವಾರ ಮಾತ್ರ ಲಭ್ಯವಿರುವುದರಿಂದಾಗಿ, ಈ ದೋಸೆ ಅಪರೂಪದ್ದೇ ಸರಿ. ಮರಕೆಸುವಿನ ಎಲೆಗಳನ್ನು ಹೆಚ್ಚಿಹಾಕಿ, ಅಕ್ಕಿ ಹಿಟ್ಟಿನ ಜತೆ ಬೇಯಿಸುವುದು ಇದರ ತಯಾರಿಕೆಯ ವಿಧಾನ. ಈಗಿನ ದಿನಗಳಲ್ಲಿ ಕಾಡು, ಹಕ್ಕಲು, ಹಳೆಯ ಮರಗಳು ಕಡಿಮೆಯಾಗಿರುವುದರಿಂದಾಗಿ, ಮರಕೆಸುವಿನ ಲಭ್ಯತೆಯೂ ಕಡಿಮೆಯಾಗಿದ್ದು, ಈ ದೋಸೆಯು ಕ್ರಮೇಣ ಮರೆಯಾಗುತ್ತಿದೆ.
ಬಯಲು ಸೀಮೆಯವರಿಗೆ ಅಷ್ಟೇನೂ ಪರಿಚಯವಿಲ್ಲದ ಇನ್ನೊಂದು ರೆಸೆಪಿ ಎಂದರೆ ತಂಬುಳಿಗಳು.

ಮಲೆನಾಡು ಮತ್ತು ಕರಾವಳಿಯ ಜನರು ಅವೆಷ್ಟು ವಿಧನಾದ ತಂಬುಳಿ ತಯಾರಿಸುವರೆಂದರೆ, ಹೆಸರು ಕೇಳಿದರೆ ಬೆರಗಾದೀತು. ಚಗಟೆ ಸೊಪ್ಪಿನ ತಂಬಳಿ, ನೇರಳ ಕೊಡಿಯ ತಂಬುಳಿ, ಸಂಬಾರ ಬಳ್ಳಿಯ ತಂಬುಳಿ, ಎಲೆ ಉರುಗನ ತಂಬಳಿ, ಉರುಗನ ತಂಬುಳಿ, ಅಗಸೆ ತಂಬುಳಿ, ದಾಸಾನು ಸೊಪ್ಪಿನ ತಂಬುಳಿ, ಬಸಳೆ ಸೊಪ್ಪಿನ ತಂಬುಳಿ, ಕಾಕಿ ಸೊಪ್ಪಿನ ತಂಬುಳಿ, ಬೆಳ್ಳುಳ್ಳಿ ತಂಬುಳಿ, ಶುಂಠಿ ತಂಬುಳಿ, ಮಾವಿನ ಕಾಯಿ ತಂಬುಳಿ – ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಯಾವುದೇ ಸೊಪ್ಪನ್ನು ತಂದುಕೊಟ್ಟರೂ ನಮ್ಮೂರಿನ ಗೃಹಿಣಿಯರು, ರುಚಿಕರ ತಂಬುಳಿ ಮಾಡಿ ಉಣಬಡಿಸಬಲ್ಲರೇನೊ! ಬೇಸಗೆ
ಯಲ್ಲಿ ತಂಪು ಎಂಬುದು ಒಂದು ಉದ್ದೇಶವಾದರೆ, ತಂಬುಳಿ ಮಾಡಲು ಬಳಸುವ ಸೊಪ್ಪಿನಲ್ಲಿರುವ ಔಷಧಿಯ ಗುಣಗಳಿಗಾಗಿ ಆರೋಗ್ಯ ಕಾಪಾಡುವಲ್ಲೂ ತಂಬುಳಿಗಳು ಜನಪ್ರಿಯ. ಉದಾ ಹರಣೆಗೆ, ಉರುಗನ ಸೊಪ್ಪಿನ ತಂಬುಳಿ ತಿಂದರೆ, ನೆನಪಿನ ಶಕ್ತಿ ವೃದ್ಧಿ, ಬೆಳ್ಳುಳ್ಳಿ ತಂಬುಳಿಯಿಮದ ಅಜೀರ್ಣ ದೂರ ಇತ್ಯಾದಿ ನಂಬಿಕೆಯಿಂದಾಗಿ, ತಂಬುಳಿಗಳು ಸದಾ ಜನಪ್ರಿಯ.

ಆದರೂ ತಂಬುಳಿಗಳು ನಿಧಾನವಾಗಿ ನಮ್ಮ ಮೆನುವಿನಿಂದ ಕಣ್ಮರೆಯಾಗುತ್ತಿವೆ – ಏಕೆಂದರೆ ನಮಗೆಲ್ಲರಿಗೂ ನಗರದ ತಿನಿಸುಗಳ, ಪದಾರ್ಥಗಳ ವ್ಯಾಮೋಹ. ಸಾರು, ಸಾಂಬಾರು, ಪಲ್ಯಗಳ ಸಾರ್ವತ್ರಿಕ ಜನಪ್ರಿಯತೆಯಿಂದಾಗಿ, ತಂಬುಳಿ ಯಂತಹ ವ್ಯಂಜನಗಳು ನಿಧಾನವಾಗಿ ಜನರ ಮೆನುವಿನಿಂದ ದೂರವಾಗುತ್ತಿವೆ. ನಮ್ಮ ಹಳ್ಳಿಯ ವ್ಯಂಜನಗಳಲ್ಲಿ ಪ್ರಮುಖವೆಂದರೆ ಹಲಸಿನ ಕಾಯಿಯ ವಿವಿಧ ಅವತಾರಗಳು!

ಇವುಗಳಲ್ಲಿ ಕೆಲವು ನಿಧಾನವಾಗಿ ಕಣ್ಮರೆಯಾಗುವ ದಾರಿ ಹಿಡಿದಿದ್ದರೂ (ಉದಾ: ಹಲಸಿನ ತೊಳೆ ನೀರಿಗೆ ಹಾಕುವುದು, ಹಲಸಿನ ಮೆಗಡದ ಪಲ್ಯ) ಹಲಸು ಒಂದು ತರಕಾರಿಯಾಗಿ ಇಂದಿಗೂ ಬಹು ಜನಪ್ರಿಯ. ಇದನ್ನು ನಮ್ಮ ಹಳ್ಳಿಯ ವಿಶೇಷ ಎನ್ನುವುದಕ್ಕಿಂತ ಕರಾವಳಿ ಮತ್ತು ಮಲೆನಾಡಿನ ವಿಸ್ಮಯ ಎನ್ನಬಹುದು. ವಿಸ್ಮಯವೇಕೆಂದರೆ, ಹಲಸಿನ ಕಾಯಿಯು ನಮ್ಮ ರಾಜ್ಯದ ಬಯಲು ಸೀಮೆ
ಮತ್ತು ಇತರ ಪ್ರದೇಶಗಳಲ್ಲಿ ಸಾಕಷ್ಟು ಲಭ್ಯವಿದ್ದರೂ, ಅದನ್ನು ಹಣ್ಣು ಮಾಡಿ ತಿನ್ನುವುದನ್ನು ಬಿಟ್ಟರೆ, ಅದರ ವಿವಿಧ ‘ಅವತಾರ’ಗಳನ್ನು ಸೇವಿಸುವ ಪದ್ಧತಿಯನ್ನು ಅಲ್ಲಿನ ಜನ ರೂಢಿಸಿಕೊಂಡಿಲ್ಲವೇಕೆ? ಇದೊಂದು ಅಧ್ಯಯನ ಯೋಗ್ಯ ವಿಷಯ.

ನಮ್ಮ ಹಳ್ಳಿಯಲ್ಲಂತೂ ಹಲಸಿನ ಕಾಯಿಯು ಅದೆಷ್ಟು ಸರ್ವಾಂತರ‍್ಯಾಮಿ ಎಂದರೆ, ಅದು ಬಡವರ ಪಾಲಿನ ಕಾಮಧೇನುವೂ ಹೌದು, ಇತರ ಜನರು ರುಚಿಗಾಗಿ ಬಯಸುವ ಕಾಯಿಯೂ ಹೌದು. ಕೆಲವು ವರ್ಷಗಳ ಹಿಂದೆ ಅರಸಿಕೆರೆ ಹತ್ತಿರದ ಹಳ್ಳಿಯಲ್ಲಿದ್ದ ನನ್ನ ಗೆಳೆ
ಯರೊಬ್ಬರಿಗೆ ಹಲಸಿನ ಕಾಯಿಯ ವಿವಿಧ ವ್ಯಂಜನ, ತಿನಿಸುಗಳ ಬಗ್ಗೆ ತಿಳಿಸಿದಾಗ ಅವರು ಅಕ್ಷರಶಃ ನಿಬ್ಬೆರಗಾದರು. ಅವರ ತೋಟದಲ್ಲಿ
ಸಾಕಷ್ಟು ಸಂಖ್ಯೆಯ ಹಲಸಿನ ಹಣ್ಣುಗಳಾಗುತ್ತವೆ, ಅವರಿಗೆ ಹಲಸಿನ ಹಣ್ಣು ತಿಂದು ಗೊತ್ತೇ ಹೊರತು, ಅದರಿಂದ ತಯಾರಿಸಬಹುದಾದ ಅಪಾರ ವೈವಿಧ್ಯಮಯ ತಿನಿಸುಗಳ ಪರಿಚಯವೇ ಇರಲಿಲ್ಲ.

ಹಲಸಿನ ತೊಳೆ ಸಾಂಬಾರು, ಎಳೆಹಲಸಿನ ಸಾಂಬಾರು, ತೊಳೆ ಚಿಪ್ಸ್, ಹಲಸಿನ ಹಪ್ಪಳ, ಪಲ್ಯ, ಕಡಿಗೆ ತಾಳ್, ಹಲಸಿನ ಬೀಜವನ್ನು ಸುಟ್ಟು ತಿನ್ನುವುದು, ಬೇಯಿಸಿ ತಿನ್ನುವುದು, ಬೀಜದಿಂದ ಒಬ್ಬಟ್ಟಿನಂತಹ ತಿನಿಸು, ರೊಟ್ಟಿ, ಹಲಸಿನ ತೊಳೆ ದೋಸೆ, ಗಟ್ಟಿ ಅಂಬಡೆ, ಹಲಸಿನ ತೊಳೆಯನ್ನು ಉಪ್ಪು ನೀರಿನಲ್ಲಿ ನೆನಸಿಟ್ಟು ಹಲವು ದಿನಗಳ ನಂತರ ಪಲ್ಯ, ರೊಟ್ಟಿ ಮಾಡುವುದು, ಹಲಸಿನ ಮೆಗಡದ
ಪಲ್ಯ, ಹಲಸಿನ ಹಣ್ಣಿನ ಪಾಯಸ, ದೋಸೆ, ಹಲಸಿನ ಹಣ್ಣಿನ ಕಡಬು, ಮುಳ್ಕ ಇವಿಷ್ಟು ತಕ್ಷಣ ನೆನಪಿಗೆ ಬರುವ ಹಲಸಿನ ‘ಅವತಾರ’ಗಳು. ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಹಲಸಿನ ಇನ್ನಷ್ಟು ವೈವಿಧ್ಯಗಳು ಇರಬಹುದು.

ನಮ್ಮೂರಿನಲ್ಲಿ, ಹಲಸಿನ ಕಾಯಿಯ ಎಲ್ಲಾ ಭಾಗಗಳನ್ನೂ ಉಪಯೋಗಿಸುತ್ತಾರೆ, ಅದರ ಹೊರಭಾಗದ ಮುಳ್ಳುಗಳನ್ನು ಹೊರತುಪಡಿಸಿ!
ಆದ್ದರಿಂದಲೇ ನನಗೆ ಅಚ್ಚರಿ, ನಮ್ಮ ರಾಜ್ಯದ ಬಯಲು ಸೀಮೆಯಲ್ಲೋ, ಕನಕಪುರದಲ್ಲೋ ಅದೇಕೆ ಹಲಸು ಒಂದು ತರಕಾರಿಯಾಗಿ ಈ
ರೀತಿಯ ಬಳಕೆ ರೂಢಿಗೆ ಬರಲಿಲ್ಲ ಎಂದು. ನಮ್ಮ ಹಳ್ಳಿಯ ತಿನಿಸು ಮತ್ತು ರೆಸಿಪಿಗಳಲ್ಲಿ ನಿಜವಾಗಿಯೂ ಕಣ್ಮರೆಯ ಹಾದಿ ಹಿಡಿದಿರು ವಂತಹದ್ದೆಂದರೆ ಗೆಣಸಿನ ಖಾದ್ಯಗಳು. ಗೆಣಸು ಎಂದ ಕೂಡಲೆ ‘ಸಿಹಿ ಗೆಣಸು’ ಮಾತ್ರ ಹೆಚ್ಚಿನವರ ಕಣ್ಮುಂದೆ ಬರುತ್ತದೆ. ಸಿಹಿಗೆಣಸು ಪೇಟೆಗಳಲ್ಲೂ ಲಭ್ಯವಿರುದರಿಂದ, ಅದರ ಬಳಕೆ ಇಂದಿಗೂ ಜನಪ್ರಿಯ.

ಸಿಹಿ ಗೆಣಸಿನ ಜತೆಯಲ್ಲೇ, ನಮ್ಮ ಹಳ್ಳಿಯಲ್ಲಿ ಇನ್ನೂ ಒಂದಷ್ಟು ಗೆಣಸುಗಳಿದ್ದವು. ದಕ್ ಗೆಣಸು, ಹೆಡಗೆ ಗೆಣಸು, ಕೋಲು ಗೆಣಸು, ಮರ ಗೆಣಸು ಇತ್ಯಾದಿ. ದಕ್ ಗೆಣಸು ಎಂಬುದು ಸಣ್ಣ ಸಣ್ಣ ಕೋಲುಗಳ ರೀತಿ ಬೆಳೆಯುವ ಗಡ್ಡೆ. ಅದನ್ನು ಬೇಯಿಸಿ ತಿಂದರೆ, ವಿಶಿಷ್ಟ ರುಚಿ, ಮಕ್ಕಳ ನಾಲಗೆಗೆ ಬಲು ರುಚಿಕರ. ಹೆಡಗೆ ಗೆಣಸು – ಹೆಸರೇ ಹೇಳುವಂತೆ ಒಂದು ಹೆಡಗೆಯಷ್ಟು ದೊಡ್ಡದು, ಹೆಡೆಯಾಕಾರದಲ್ಲೂ
ಇದೆ. ಅದನ್ನು ಕತ್ತರಿಸಿ ತರಕಾರಿಯಂತೆ ಉಪಯೋಗಿಸಬಹುದು.

ಇಂತಹ ಗೆಣಸುಗಳು ಹಳ್ಳಿಯ ತರಕಾರಿಯಾಗಿದ್ದು, ವಾಣಿಜ್ಯಕವಾಗಿ ಹೆಚ್ಚು ಪ್ರಚಾರಕ್ಕೆ ಬಂದಿಲ್ಲವಾದ್ದರಿಂದ, ಕ್ರಮೇಣ ಮರೆಯಾಗುತ್ತಿವೆ. ಹಳ್ಳಿಯಿಂದ ನಗರಕ್ಕೆ, ಪಟ್ಟಣಗಳಿಗೆ ವಲಸೆ ಹೋದವರಂತೂ ಇಂತಹ ಗೆಣಸುಗಳನ್ನು ಕಾಣದೇ ಅದೆಷ್ಟೋ ವರ್ಷಗಳಾಗಿರಬಹುದು.
ಇದನ್ನು ಬೆಳೆಯುತ್ತಿದ್ದ ರೈತರು ಸಹ ಇಂದು ಹಣ ತರುವ ವಾಣಿಜ್ಯಕ ಬೆಳೆಗಳತ್ತ, ತರಕಾರಿಗಳತ್ತ ಮುಖ ಮಾಡಿದ್ದರಿಂದ ದಕ್‌ಗೆಣಸಿ ನಂತಹ ಕಾಡುಪಾಪಗಳು ಕಾಡಿನಲ್ಲೇ ಕಳೆದುಹೋಗುತ್ತಿವೆ!

ಇಂತಹ ಅಪರೂಪದ ತಿನಿಸುಗಳನ್ನು, ತರಕಾರಿಗಳನ್ನು ಕೇವಲ ನೆನಪಿಸಿಕೊಂಡರಷ್ಟೇ ಸಾಕೆ, ಬಳಕೆಯೂ ಮಾಡಬೇಡವೆ ಎಂದು ನೀವು ಮರುಪ್ರಶ್ನೆ ಹಾಕಬಹುದು. ನಮ್ಮ ಮನೆಯಲ್ಲಿ ಹೀರೆಕಾಯಿ ದೋಸೆ, ಉಂಡ್ಲಕಾಯಿ, ಕೆಲವು ತಂಬುಳಿಗಳನ್ನು ಮತ್ತೆ ಮತ್ತೆ ನೆನಪಿಸಿ ಕೊಂಡು, ತಯಾರಿಸಿ ತಿನ್ನುವ ಪ್ರಯತ್ನ ಮುಂದುವರಿದಿದೆ. ಹಳೆಯ ತಿನಿಸುಗಳನ್ನು ಇಂದಿಗೂ ನಾವು ಜೀವಂತವಾಗಿಟ್ಟುಕೊಂಡು, ತಯಾರಿಸಿ ತಿನ್ನಬೇಕೆಂಬುದು ನಿಜಕ್ಕೂ ಒಂದು ಒಳ್ಳೆಯ ಆಶಯ.

ಆದರೆ, ಇಂದಿನ ಯುವ ಜನಾಂಗವು, ಮಕ್ಕಳು ಹಳೆಯ ಕಾಲದ ತಿನಿಸುಗಳನ್ನು ಇಷ್ಟಪಡುವುದಿಲ್ಲ ಎಂಬ ನೆಪದಿಂದಾಗಿ ಹಲವು ಮನೆಗಳಲ್ಲಿ ಇಂತಹ ತಿನಿಸುಗಳು ಮರೆಯಾಗಿವೆ. ಅದರಿಂದ ನಷ್ಟವೋ ಲಾಭವೋ ಕಾಲವೇ ಹೇಳಬೇಕು.