Monday, 16th September 2024

ಯಕ್ಷಗಾನದ ಒಡ್ಡೋಲಗವನ್ನೇ ನೆನಪಿಸುವ ಆಟವಿದು !

ಶಶಾಂಕಣ

ಈ ವರ್ಷ ಮಾನ್ಸೂನ್ ಮಳೆ ಆರಂಭವಾಗಿದ್ದು ಸ್ವಲ್ಪ ವಿಳಂಬವಾಗಿ. ಮೊದಲು ಕೇರಳವನ್ನು ಪ್ರವೇಶಿಸು ಮಾನ್ಸೂನ್, ಹಾಗೆಯೇ ಉತ್ತರಕ್ಕೆ ಚಲಿಸಿ, ಮಂಗಳೂರು, ಉಡುಪಿ, ಕಾರವಾರಕ್ಕೆ ಬರಲು ಒಂದೆರಡು ದಿನ ಬೇಕು. ನಮ್ಮ ಊರಿಗೆ, ಅಂದರೆ ಉಡುಪಿ ಜಿಲ್ಲೆಯ ಕರಾವಳಿ ತೀರದಿಂದ ತುಸು ಒಳನಾಡಿನಲ್ಲಿ ರುವ, ಪಶ್ಚಿಮ ಘಟ್ಟಗಳಿಗೆ ಹತ್ತಿರವಿರುವ, ಅಲ್ಲಲ್ಲಿ ಸಾಕಷ್ಟು ಕಾಡುಪ್ರದೇಶ ವಿರುವ ಹಳ್ಳಿಗೆ ಈಗ ಮಾನ್ಸೂನ್ ಪ್ರವೇಶವಾಗಿದೆ.

ನಮ್ಮ ರಾಜ್ಯದ ಬಯಲು ಸೀಮೆಯವರಿಗೆ, ಬೆಂಗಳೂರಿನಂತಹ ‘ನಗರಿಗ’ರಿಗೆ, ಮಾನ್ಸೂನ್ ಪ್ರವೇಶದ ನಿಜಾರ್ಥ ಅಥವಾ ವೈಭವದ ಪೂರ್ಣ ಅರಿವಿಲ್ಲ, ಅರಿವಿರುವುದು ತುಸು ಕಷ್ಟವೇ ಸರಿ. ಕರಾವಳಿಯ ಜಿಲ್ಲೆಗಳಲ್ಲಿ ಮಳೆ ಚೆನ್ನಾಗಿ ಸುರಿದ ನಂತರ, ಅಲ್ಲಿ ಉಳಿದ ಮೋಡಗಳು ಬಯಲುಸೀಮೆಯತ್ತ ಚಲಿಸಿ ಸ್ವಲ್ಪ ಮಳೆ ಕರುಣಿಸಿದಾಗ, ‘ಮಾನ್ಸೂನ್’ ಶುರುವಾಯಿತು ಎನ್ನುತ್ತಾರೆ.

ಚಿತ್ರ ದುರ್ಗ, ಕಡೂರು, ಹುಳಿಯಾರು ಮೊದಲಾದ ಪ್ರದೇಶಗಳಲ್ಲಿ ಒಂದು ಮಾತಿದೆ – ಕರಾವಳಿ, ಮಲೆನಾಡಿನಲ್ಲಿ ಚೆನ್ನಾಗಿ ಮಳೆಯಾದ ನಂತರ, ಅದರ ಶೇಷ ಭಾಗ ತಮಗೆ ಸಿಗುತ್ತದೆ ಎಂದು. ‘ಮಾನ್ಸೂನ್ ಪ್ರವೇಶ’ ಎಂದರೇನು? ಜಡಿ ಮಳೆಯ ಆರಂಭ ಎಂದು ಸರಳವಾಗಿ ಹೇಳ ಬಹುದಾದರೂ, ಕರಾವಳಿಯ ‘ಮಾನ್ಸೂನ್’ ಅನ್ನು ಬೇರೊಂದೇ ರೀತಿಯಲ್ಲಿ ಹೇಳಬಹುದು ಎಂದು ನನಗನಿಸುತ್ತದೆ. ಯಕ್ಷಗಾನದಲ್ಲಿ ಪ್ರಮುಖ ಪಾತ್ರ ಧಾರಿಯೊಬ್ಬರು ಪ್ರವೇಶಿಸುವ ಮೊದಲೇ ಚಂಡೆ, ಮದ್ದಳೆಗಳ ಸದ್ದು; ನಂತರ ಪದ, ಚಂಡೆ, ಮದ್ದಳೆಗಳ ಅಬ್ಬರದ ನಡುವೆ ಸದ್ದುಮಾಡುತ್ತಾ, ಕುಣಿಯುತ್ತಾ ರಂಗಸ್ಥಳ ಪ್ರವೇಶಿಸಿ, ಒಂದಷ್ಟು ನರ್ತಿಸಿ, ನಂತರ ಚಂಡೆ ಮದ್ದಲೆಗಳ ಸದ್ದಿಗೆ ಸರಿಯಾಗಿ ಅರ್ಧಘಂಟೆ ಅಬ್ಬರದ ಕುಣಿತ ಮಾಡುತ್ತಾ ಇರುತ್ತಾರಲ್ಲ, ಹಾಗೆ ಅಲ್ಲಿನ ಮಳೆ.

ಸಾಕಷ್ಟು ಕುಣಿಯುತ್ತಾ, ನರ್ತಿಸುತ್ತಾ, ಗುಡುಗುತ್ತಾ, ಸದ್ದು ಮಾಡುತ್ತಾ ಸುರಿವ ನಮ್ಮೂರ ಮಳೆಗೆ, ಅಂತಹ ಮಳೆಯೇ ಸಾಟಿ, ಹೋಲಿಕೆ. ಯಕ್ಷಗಾನದ ಽಮಿಕಿಟವನ್ನು ನೆನಪಿಸುವ ಪ್ರಕೃತಿಯ ಈ ಆಟವನ್ನು ಪ್ರತಿ ಜೂನ್‌ನಲ್ಲಿ ನೋಡುವ ಅವಕಾಶ. ಮಾನ್ಸೂನ್ ಪ್ರವೇಶವನ್ನು ನಮ್ಮೂರಿನವರು ‘ಮಳೆಗಾಲ ಶುರುವಾಯಿತು’ ಎಂದು ಕರೆದಾಗ, ಆ ಮಾತಿನ ಅಂತರಾರ್ಥವೇ ತುಸು ಗಹನ, ತುಸು ನಿಗೂಢ.

ಮಳೆಗಾಲ ಆರಂಭವಾಗುವ ಒಂದೆರಡು ದಿನ ಮುಂಚೆ, ಸಂಜೆಯೋ, ರಾತ್ರಿಯೋ ಗಾಳಿ ಮಳೆ, ಗುಡುಗು ಸಹಿತ ಮಳೆ. ಆ ಗುಡುಗಿನ ಸ್ವರೂಪವಾದರೂ ಎಂಥದ್ದು! ಎದೆಯಲ್ಲಿ ಅವಲಕ್ಕಿ ಕುಟ್ಟಿಸುವಷ್ಟು ಜೋರು! ಗುಡುಗಿಗೂ ಮುಂಚೆ, ಮಿಂಚು, ಸಿಡಿಲು
ಗಳ ಆರ್ಭಟ. ಅದಕ್ಕೂ ಮುಂಚೆ ಬಿರುಸಾಗಿ ಬೀಸುವ ಗಾಳಿ, ಆಗಸದಲ್ಲಿ ಕಪ್ಪನೆಯ ಮೋಡಗಳ ರಾಶಿ, ನೂರಾರು ಕಾಡು ಕೋಣಗಳು ಅಶಿಸ್ತಿನಿಂದ ಗುಂಪಾಗಿ ಆಗಸದಲ್ಲಿ ಮೆರವಣಿಗೆ ಹೊರಟಂತಹ ಭಾವ; ಗಾಳಿ ಜೋರಾಗಿದ್ದಾಗ, ಆ ಕಾರ್ಮೋಡ ಗಳು ಗುಟುರು ಹಾಕುತ್ತಾ ಆಗಸದ ಒಂದು ತುದಿಯಿಂದ ಇನ್ನೊಂದು ತುದಿಗೆ ಸಾಗುವ ವೈಭವವನ್ನು ನೋಡಬೇಕು!

ಇಂತಹ ಮೊದಲ ಗಾಳಿಮಳೆಯ ಸಮಯದಲ್ಲೇ, ಕಾಡಂಚಿನಲ್ಲಿರುವ ಕಾಟುಮಾವಿನ ಮರ ಗಳಿಂದ ನೂರಾರು ಹಣ್ಣುಗಳು ತೊಟ್ಟುಕಳಚಿ ಕೆಳಗೆ ಬಿದ್ದಿರುತ್ತವೆ. ಇನ್ನು ಮೊದಲ ಮಳೆಯ ಸಮಯದಲ್ಲಿ ಕಾಣಿಸುವ ಮಿಂಚು, ಸಿಡಿಲುಗಳ ಆರ್ಭಟವನ್ನು
ವರ್ಣಿಸಲು ಪದಗಳು ಸಾಲವು. ಫಟಾ, ಫಟಾ, ಫಟ್, ದುಡುಂ – ಹೀಗೆ ಏನೋನೋ ಶಬ್ದಗಳಿಂದ ಸಿಡಿಲು, ಮಿಂಚು ಝಳಪಿಸುತ್ತವೆ.

ಅಂತಹ ರಾತ್ರಿ ಯಲ್ಲಿ ಕಣ್ಣು ಕೋರೈಸುವ ಮಿಂಚನ್ನು ನೋಡಿದರೆ, ಹೆಚ್ಚಿನವರ ಎದೆ ಝಲ್ ಎಂದೀತು. ಆ ಸಮಯ
ದಲ್ಲಿ, ಕತ್ತಲಿನ ಆಗಸದತ್ತ ಕಣ್ಣೆತ್ತಿ ನೋಡಿದರೆ, ನೂರಾರು, ಸಾವಿರಾರು ಅಡಿ ಉದ್ದನೆಯ, ಕೋಲ್ಮಿಂಚು, ಆಗಸದ ಒಂದು ತುದಿಯಿಂದ ಇನ್ನೊಂದು ತುದಿಗೆ ಸಾಗುವುದನ್ನು ಕಾಣಬಹುದು. ಅಂತಹ ಬೃಹತ್ ಕೋಲ್ಮಿಂಚಿಗೆ ಕೆಲವೊಮ್ಮೆ ಹತ್ತಾರು ಕವಲು ಗಳು ಕಾಣಿಸುವುದುಂಟು -ಬೃಹತ್ ಒಣ ಮರ ವೊಂದರ ಕೊಂಬೆಗಳ ರೀತಿ. ಆ ಕೋಲ್ಮಿಂಚು ಕ್ಷಣಾರ್ಧದಲ್ಲಿ, ಬೆಳಕಿನ ವೇಗದಲ್ಲಿ ಆಗಸದುದ್ದಕ್ಕೂ ಚಲಿಸಿದರೂ, ನಮ್ಮ ಕಣ್ಣು ಅದನ್ನು ಗೃಹಿಸಿ, ಅದರ ಸ್ವರೂಪವನ್ನು ಅರಿಯಬಲ್ಲದು, ಎದೆಯಲ್ಲಿ ಭೀತಿ ಹುಟ್ಟಿಸಬಲ್ಲದು!

ಕಪ್ಪನೆಯ ಆಗಸದಲ್ಲಿ ಬೃಹತ್ ಕೋಲ್ಮಿಂಚು ಕಾಣಿಸಿದ ಕೆಲವು ಸೆಕೆಂಡು ಗಳ ನಂತರ, ಛಟ್ ಛಟಿಲ್ ಎಂಬ ಸಿಡಿಲಿನ ಸದ್ದು. ಕೆಲವು ಬಾರಿ ಸುದೂರ ಆಗಸದಲ್ಲಿ ಮಿಂಚು ಝಳಪಿಸಿದಾಗ, ಹಲವು ಸೆಕೆಂಡಿನ ನಂತರ ಗುಡುಗಿನ ಸದ್ದು ಕೇಳುತ್ತದೆ. ಕೆಲವು ಗುಡುಗುಗಳು ಆಗಸದುದ್ದಕ್ಕೂ ‘ಗುಡು ಗುಡು’ ಎನ್ನುತ್ತಾ ಸಂಚರಿಸುವುದುಂಟು – ಇಂದ್ರನ ರಥವು ಸದ್ದು ಮಾಡುತ್ತಾ ಚಲಿಸಿ
ದಂತೆ. ಮೋಡಗಳ ಹಲವು ಪದರುಗಳಿಗೆ ಸಿಡಿಲಿನ ಸದ್ದು ಡಿಕ್ಕಿ ಹೊಡೆದು, ಅನುರಣನಗೊಂಡಾಗ ಕೇಳುವ ಸದ್ದು ಅದು.

ಕೆಲವು ಬಾರಿ ಸಂಜೆಯ ಹೊತ್ತಿನಲ್ಲಿ, ಶಾಲೆಯಿಂದ ಬರುವಾಗಲೋ, ಗಂಟಿ ಮೇಯಿಸಲು ಹೋಗಿದ್ದಾಗಲೋ ಇಂತಹ ಗುಡುಗು – ಸಿಡಿಲುಗಳ ಆರ್ಭಟಕ್ಕೆ, ನಡುದಾರಿಯಲ್ಲಿ ಸಿಕ್ಕಿಹಾಕಿಕೊಳ್ಳುವುದುಂಟು. ಆಗ ಅರ್ಜುನನ ಐದಾರು ಹೆಸರುಗಳನ್ನು ಹೇಳಿಕೊಂಡರೆ, ಭಯ ದೂರವಾಗುತ್ತದೆ ಎಂದು ಹಿರಿಯರು ಹೇಳುವುದುಂಟು: ‘ಅರ್ಜುನ, ಪಾರ್ಥ, ಕಿರೀಟಿ, ಗಾಂಢೀವಿ, ಧನಂಜಯ..’ ‘ಗುಡುಗತ್, ಮಿಂಚತ್, ಮಳೆಯಾಕೆ ಬತ್ತಿಲ್ಲೆ?‘ ಎಂಬುದು ನಮ್ಮೂರಿನ ಒಂದು ಗಾದೆ ಅಥವಾ ನುಡಿಗಟ್ಟು. ಮಿಂಚು, ಗುಡುಗು ಬಂದ ನಂತರ, ಮಳೆ ಬಂದೇ ಬರುತ್ತದೆ ಎಂಬ ಭಾವ ಈ ನುಡಿಗಟ್ಟಿನಲ್ಲಿದೆ.

ಮುಂಗಾರು ಅಥವಾ ಮಾನ್ಸೂನ್ ಆರಂಭದ ಒಂದೆರರಡು ದಿನಗಳು ಸಂಜೆ ಅಥವಾ ರಾತ್ರಿ, ಎರಡು ಮೂರು ಗಂಟೆ ಸುರಿಯುವ ಮಳೆಯು, ಕ್ರಮೇಣ ಒಂದೆರಡು ದಿನದ ಅಂತರ ದಲ್ಲಿ ಅಥವಾ ತಕ್ಷಣವೂ ತನ್ನ ಆಟವನ್ನು ಮುಂದುವರಿಸುತ್ತದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ವಾಸಿಸುವವರಿಗೆ ಮಾತ್ರ ಈ ಸುರಿತದ ಯಥಾವತ್ ಸ್ವರೂಪ ಗೊತ್ತಿರಲು ಸಾಧ್ಯ. ಧಪಧಪನೇ, ಆಗಸಕ್ಕೆ ತೂತು ಬಿದ್ದಂತೆ ಸುರಿಯುವ ಮಳೆಯು, ನಿರಂತರವಾಗಿ ನಾಲ್ಕಾರು ಗಂಟೆ ಸುರಿಯಬಲ್ಲದು ಅಥವಾ
ನಾಲ್ಕಾರು ದಿನವೂ ಮುಂದುವರಿಯಬಲ್ಲದು. ಈ ರೀತಿಯ ಜಡಿಮಳೆಯು ಒಮ್ಮೊಮ್ಮೆ ಒಂದೆರಡು ವಾರ ನಿರಂತರವಾಗಿ ಸಂದು ಕಡಿಯದೇ ಸುರಿದಾಗಲೇ ‘ನೆರೆ’ ಬರುವುದು.

ನಮ್ಮೂರಿನಲ್ಲಿ ಈ ರೀತಿ ೨೪ ಇಂಟು ೭ ಮಳೆಯು ಹಲವು ದಿನಗಳ ಕಾಲ ಸುರಿದದ್ದುಂಟು. ಇಂಥ ಮಳೆಯನ್ನು ಕಡು
ಬಯಲುಸೀಮೆಯವರು ಊಹಿಸಲೂ ಸಾಧ್ಯವಿಲ್ಲ, ಕನಸಿನಲ್ಲೂ ಕಂಡಿರಲು ಸಾಧ್ಯವಿಲ್ಲ. ಎಷ್ಟೇ ಬಿರುಸಾಗಿ ಮಳೆ ಸುರಿದರೂ, ನಿರಂತರ ನಾಲ್ಕಾರು ದಿನ ‘ಸಂದು ಕಡಿಯದೇ’ ನಮಳೆ ಸುರಿದರೂ, ‘ಮಳೆಗಾಲ ಶುರು’ವಾಯಿತೆಂದರೆ ನಮ್ಮೂರಿನವರಿಗೆ ಖುಷಿ; ಅದೇ ಕೃಷಿ ಚಟುವಟಿಕೆಗೆ ಬೀಜಾಂಕುರ. ಗದ್ದೆ ಹೂಡುವವರು ಹೂಡುತ್ತಾರೆ, ಒಂದೆರಡು ವಾರ ಮಳೆ ಬಂದ ನಂತರ ಅಗೇಡಿಯಲ್ಲಿರುವ ‘ಅಗೆ’ಯನ್ನು ಕಿತ್ತು, ಹೂಡಿದ ಗದ್ದೆಯಲ್ಲಿ ನಾಟಿ ಮಾಡುತ್ತಾರೆ, ಅಂಗಳದ ಮೇಲೆಲ್ಲಾ ಅಡಕೆಯ ಸೋಗೆ ಅಥವಾ ದರಲೆಯನ್ನು ಮುಚ್ಚಿ, ನೆಲವನ್ನು ರಕ್ಷಿಸುತ್ತಾರೆ – ಹೀಗೆ ವಿವಿಧ ಕೆಲಸಗಳಿಲಗೆ ಮಳೆಗಾಲದ ಆರಂಭವು ಚಾಲನೆ
ನೀಡುತ್ತದೆ. ಶಿವರಾತ್ರಿಯ ನಂತರ, ಅಂದರೆ ಫೆಬ್ರವರಿಯಲ್ಲಿ ಕಾಯಲು ಶುರುವಾದ ಬಿಸಿಲು, ಮೇ ತಿಂಗಳ ಕೊನೆಯ ವಾರದ ತನಕ ತನ್ನ ಪ್ರತಾಪವನ್ನು ತೋರಿ, ಸುತ್ತಲಿನ ಜಗವನ್ನು ಒಣಗಿಸಿಟ್ಟಿರುತ್ತದೆ, ಜನರಿಗೆ ಸೆಕೆಯ ತಾಪವನ್ನು ಉಣಬಡಿಸಿ
ರುತ್ತದೆ – ಆ ಬಿರುಬೇಸಗೆಯ ಕೊನೆಯಲ್ಲಿ ಸದ್ದು ಗದ್ದಲದ ಒಡ್ಡೋಲಗದೊಂದಿಗೆ ಮಳೆಗಾಲ ಶುರು ವಾದಾಗ, ಭೂಮಿಗೂ ತಂಪು, ಜನಕ್ಕೂ ಖುಷಿ.

ಜತೆಗೆ, ಪ್ರತಿವರ್ಷ ಜೂನ್ ಮೊದಲವಾರ ಆರಂಭವಾಗುವ ಮಳೆಗಾಲವು, ಕರಾವಳಿ ಮತ್ತು ಮಲೆನಾಡಿಗರ ಬದುಕಿಗೆ ಒಂದು ಭರವಸೆಯ ಜೀವ ನಾಡಿ, ನಂಬುಗೆಯ ಕಾಮಧೇನು. ವರ್ಷದ ನಿರ್ದಿಷ್ಟ ಕಾಲದಲ್ಲಿ, ಅಂದರೆ ಜೂನ್ ಮೊದಲ ವಾರ, ಪ್ರತಿ ವರ್ಷ ತಪ್ಪದೇ ಮಳೆ ಬರುವುದೆಂದರೆ, ಜೀವಜಗತ್ತಿಗೆ ಅಗತ್ಯವಾದ ನೀರನ್ನು ಉಣಬಡಿಸುವುದೆಂದರೆ, ಅದೊಂದು ಅಸಾಧಾರಣ ಪ್ರಕ್ರಿಯೆ; ಅದು ಪ್ರಕೃತಿಯ ಮೇಲೆ ಮನುಷ್ಯನ ಇಟ್ಟಿರುವ ನಂಬು ಗೆಯ ಪರಾಕಾಷ್ಠೆ ಎಂದೇ ಹೇಳಬಹುದಲ್ಲವೆ? ಹಾಗೆಯೇ ಬದುಕಿನಲ್ಲಿ ಪ್ರಾಮಾಣಿಕತೆ, ನಂಬಿಕೆ, ವಾಗ್ದಾನವನ್ನು ರೂಢಿಸಿಕೊಳ್ಳಲು ಜನರಿಗೆ ಸೂರ್ತಿಯಾಗುವ, ಪರಿಸರದ
ಒಂದು ದಿವ್ಯ ವ್ಯಾಪಾರವೂ ಸಹ.

ಮಳೆಗಾಲ ಆರಂಭವಾಯಿತೆಂದರೆ ನಮ್ಮೂರಿನ ಕಾಡು, ಗುಡ್ಡ, ಹಾಡಿ, ಹಕ್ಕಲು, ಬ್ಯಾಣ, ತೋಡು, ಗದ್ದೆಯಂಚು, ತೋಟಗಲ್ಲಿ ಆವಿರ್ಭವಿಸುವ ಹೊಸ ‘ಜೀವ ಲೋಕ’ ವೈವಿಧ್ಯತೆಯು ಬೆರಗುಹುಟ್ಟಿಸುವಂತಹದ್ದು. ಮನೆ ಎದುರಿನ ಗದ್ದೆ ಬೈಲಿನಲ್ಲಿ ಎಲ್ಲೆಲ್ಲೂ
ನೀರೋ ನೀರು; ಆ ನೀರಿನಲ್ಲಿ ಸಾವಿರಾರು ಕಪ್ಪೆಗಳು ತೇಲುತ್ತಾ, ಆಡುತ್ತಾ ಇರುವುದು ಒಂದೆಡೆಯಾದರೆ, ಸಂಜೆಯಾದ ಕೂಡಲೇ ಅವು ಆರಂಭಿಸುವ ‘ಸಂಗೀತ ಕಛೇರಿ’ಯ ಸದ್ದಿನ ಮಜಲೇ ಇನ್ನೊಂದು ರೀತಿ ಯದು.

ಒಂದೊಂದು ಕಪ್ಪೆ ಒಂದೊಂದು ರೀತಿ ಕೂಗುತ್ತಾ, ಸಾವಿರಾರು ತೆರನ ಸದ್ದು ಹೊರಡಿಸಿ, ಕೇಳುವವರ ತಲೆ ಚಿಟ್ಟುಹಿಡಿಸಿದರೂ ಅಚ್ಚರಿಯಿಲ್ಲ. ಆ ಕಪ್ಪೆಗಳ ರೂಪವೂ ಚಿತ್ರವಿಚಿತ್ರ – ಮರಿ ಕಪ್ಪೆ, ಪುಟಾಣಿ ಕಪ್ಪೆ, ದೊಡ್ಡ ಕಪ್ಪೆ, ಗೊಂಗರು ಕಪ್ಪೆ – ಈ ರೀತಿಯ ನೋಟ. ಇವುಗಳ ಜತೆಯಲ್ಲೇ, ಆದರೆ ತುಸು ದೂರದಲ್ಲಿ, ಅಂದರೆ ಮನೆಯೊಳಗೆ ಜಂತಿಯ ಮೆಲೋ, ಪಕಾಸಿಯ ಸಂದಿಯಲ್ಲೋ ಕುಳಿತು, ಚಟಚಟ ಎಂದು ಸದ್ದು ಮಾಡುವ ಮರಗಪ್ಪೆ ಮತ್ತೊಂದೇ ವಿಸ್ಮಯ.

ಒಂದೆರಡು ವಾರ ಮಳೆ ಸುರಿದ ನಂತರ, ಗದ್ದೆಯಂಚಿನ ತೋಡುಗಳಲ್ಲಿ ನೀರು ಹರಿಯತೊಡಗುತ್ತದೆ. ಬಿರು ಮಳೆ ಸುರಿದರೆ, ತೋಡಿನಲ್ಲಿ ಕೆಂಪನೆಯ ನೀರು; ಮಳೆ ಕಡಿಮೆಯಾದಾಗ ಸಾಕಷ್ಟು ತಿಳಿ ನೀರು. ಬೆಟ್ಟ ಗುಡ್ಡ ಹಾಡಿಗಳಲ್ಲಿ ಉಜಿರು ನೀರು
(ಝರಿ) ಹರಿಯತೊಡಗಿ, ತೋಡುಗಳಲ್ಲಿ ಸದ್ದು ಮಾಡುತ್ತಾ, ಜುಳು ಜುಳು ಎಂದು ಹರಿಯುವ ಪರಿಯೇ ಅದ್ಭುತ, ಆ ನೀರಿನ ಓಟವನ್ನು ನೊಡುವುದೇ ಒಂದು ದಿವ್ಯಾನುಭವ. ಚೆನ್ನಾಗಿ ಮಳೆ ಬಂದು ಹೋದ ನಂತರ, ನಡುವೆ ಒಂದೆರಡು ವಾರ
ಮಳೆ ಬಾರದೇ ಇದ್ದರೂ, ತೋಡುಗಳಲ್ಲಿ ಪರಿಶುದ್ಧ ನೀರು ಹರಿಯುತ್ತಲೇ ಇರುತ್ತದೆ.

ಆ ನೀರು ಅದೆಷ್ಟು ಪರಿಶುದ್ಧವೆಂದರೆ, ನಾವೆಲ್ಲಾ ಬೊಗಸೆಯಲ್ಲಿ ತುಂಬಿ ಕೊಂಡು ಆ ನೀರನ್ನು ಕುಡಿದದ್ದುಂಟು – ನಾಲ್ಕಾರು
ಮೈಲಿ ದೂರದ ನೆಂಟರ ಮನೆಗೆ ನಡೆದುಕೊಂಡೇ ಹೋಗುವಾಗ, ಬಾಯಾರಿಕೆ ನೀಗಿಸಿಕೊಳ್ಳಲು ತೋಡುಗಳ ನೀರನ್ನು ಕುಡಿಯುವುದರಲ್ಲಿ ಯಾವುದೇ ಹಿಂಜರಿಕೆ ಇಲ್ಲ. ಹಾಡಿ ಹಕ್ಕಲಿನಲ್ಲಿ ಬೆಳೆದ ನೂರಾರು ಮರ-ಗಿಡ-ಬಳ್ಳಿಗಳ ಬೇರುಗಳ
ಅಡಿಯಲ್ಲಿ ಉದ್ಭವಿಸಿ, ಹನಿ ಹನಿಗೂಡಿ ಹಳ್ಳವಾಗಿ ಹರಿದು ಬರುವ ಆ ನೀರು, ಅಮೃತ ಸಮಾನ. ಈಚಿನ ವರ್ಷಗಳಲ್ಲಿ ಅಂತಹ ಜಲಮೂಲಗಳು ತುಸು ಕಲುಷಿತಗೊಂಡಿವೆ; ಜನರೂ ಸಹ ತುಸು ‘ಆಧುನಿಕ ಮನೋಭಾವ’ವನ್ನು ಬೆಳೆಸಿಕೊಂಡಿದ್ದು,
ಕಾಡಿನ ನಡುವಿನ ತೊರೆಯ ನೀರನ್ನು ದೂರವಿರಿಸಿ, ‘ಪೆಸ್ಟ್ಲಿಕ್’ ಬಾಟಲಿಯ ನೀರನ್ನು ಕುಡಿಯಲು ಹೆಚ್ಚು ಇಷ್ಟಪಡುವುದುಂಟು!

ಮಳೆಗಾಲ ಆರಂಭವಾದ ನಂತರ, ಎಲ್ಲಾ ಕಡೆ ಹಸಿರು ತುಂಬಿಕೊಳ್ಳುತ್ತದೆ – ಇದು ಜಗದ ನಿಯಮ. ಈ ರೀತಿ ಹಸಿರು  ತುಂಬಿಕೊಳ್ಳುವುದರಲ್ಲೂ ನಮ್ಮೂರಿನ ವಿಶೇಷವಿದೆ – ದಟ್ಟ ಹಸಿರಿನ ಗಿಡಗಳ ನಡುವೆ, ಬಿಳಿ ಎಲೆ ಬಿಡುವ ‘ಗುಳ’ ಸೊಪ್ಪಿನ ಗಿಡಗಳ ಬಹು ದೂರದಿಂದ ಎದ್ದು ಕಾಣುತ್ತವೆ. ಹಕ್ಕಲಿನಲ್ಲಿ ಹಸಿರಿನ ನಡುವೆ ನಡೆಯುತ್ತಾ ಸಾಗಿದರೆ, ಅಲ್ಲಲ್ಲಿ ನೆಲದ ಮೇಲೋ, ಒಣಗಿದ ಮರಗಳ ಮೇಲೋ ನಾನಾ ರೀತಿಯ ಬಿಳಿ ಅಣಬೆಗಳ ನೋಟವು ಹೊಸ ಲೋಕವನ್ನೇ ತೆರೆದಿಡುತ್ತವೆ.

ಹಾಡಿಯ ಹಳೆಯ ಮರಗಳ ಕಾಂಡದ ಮೇಲೆ, ನೆಲದಿಂದ ಹತ್ತಾರು ಅಡಿ ಎತ್ತರದಲ್ಲಿ ಮರಕೆಸುವಿನ ಎಲೆಗಳು ನಳನಳಿಸುತ್ತವೆ – ‘ತಕೊಳಿ, ಪತ್ರೊಡಿ ಮಾಡಿ’ ಎಂದು ಆಹ್ವಾನಿಸುತ್ತವೆ. ಮನೆ ಎದುರಿನ ಅಂಗಳದಲ್ಲಿರುವ ಬಾವಿಯು ನೀರಿನಿಂದ ತುಂಬಿ ಹೋಗಿ, ಒಮ್ಮೊಮ್ಮೆ ನೀರು ಉಕ್ಕಿ ಹರಿಯುತ್ತದೆ. ಬಾವಿಯ ಕಲ್ಲುಗಳ ಸಂದಿಯಲ್ಲಿ ವಾಸಿಸುವ ಒಳ್ಳೆ ಹಾವುಗಳು, ನೆರೆ ಬಂದಾಗ ಬಾವಿಯಿಂದ ಹೊರಬಂದು, ಅಂಗಳವನ್ನು ಹಾದು ಮನೆಯತ್ತ ಧಾವಿಸುವುದೂ ಉಂಟು! ಮಳೆಗಾಲದ ಆರಂಭದ ವಾರಗಳ ಗುಡುಗು- ಸಿಡಿಲುಭರಿತ ಬಿರುಮಳೆಯ ದಿನಗಳ ನಂತರ, ಕಾರ್-ಆಸಾಡಿ ತಿಂಗಳಿನ ‘ಜಿರಾಪತಿ’ ಮಳೆಯ ಆರಂಭ.

ಆಸಾಡಿಯ (ಆಷಾಢ) ಮಳೆಯಲ್ಲಿ ಥಂಡಿ ಜಾಸ್ತಿ; ಹೊಳವೂ ಕಡಿಮೆ – ಪ್ರತಿದಿನ ಜಡಿಮಳೆ, ಹನಿ ಮಳೆ, ಗಾಳಿ ಇದ್ದದ್ದೇ. ಕೆಲವರಿಗೆ ಇಂತಹ ಮಳೆ ಯನ್ನು ನೋಡಿದಾಕ್ಷಣ ನೆಗಡಿ ಶೀತ ಕಾಡುತ್ತದೆ; ಮೆಣಸಿನ ಕಾಳಿನ ಕಷಾಯ, ಹಂಗಾರ ಕೆತ್ತೆಯ ಕಷಾಯ, ಈಗಿನ ದಿನಗಳಲ್ಲಾದರೆ ಪ್ಯಾರಾಸೆಟಾ ಮಲ್ ಮಾತ್ರೆ ಸೇವನೆಯೇ ಅದಕ್ಕೆ ಮದ್ದು. ಇಂತಹ ಜಿರಾಪತಿ ಮಳೆಯ ದಿನಗಳಲ್ಲಿ, ಅಜ್ಜಿ ಮಾಡಿಟ್ಟಿರುವ ಹಲಸಿನ ಹಪ್ಪಳವನ್ನು ಕೆಂಡದಲ್ಲಿ ಸುಟ್ಟು ಅಥವಾ ಕರಿದು, ಅದರ ಮೇಲೆ ನಾಲ್ಕಾರು
ಸುಟ್ಟ ಗೋಡಂಬಿ ಬೀಜಗಳನ್ನು ಇಟ್ಟುಕೊಂಡು, ನಿಧಾನವಾಗಿ ತಿನ್ನುತ್ತಾ, ಮನೆಯೆದುರಿನ ಅಗೇಡಿಗೆ ನಿರಂತರವಾಗಿ ಸುರಿವ ಮಳೆಯನ್ನು ನೋಡುತ್ತಾ ಕೂರುವ ಖುಷಿಗೆ ಸಾಟಿಯೇ ಇಲ್ಲ.