Sunday, 15th December 2024

ಸತ್ತಾಗ ಅವರಲ್ಲಿದ್ದುದು ಕೇವಲ 130 ರುಪಾಯಿ !

ಬುಲೆಟ್ ಪ್ರೂಫ್

ವಿನಯ್ ಖಾನ್

ಆತ, ಕೇವಲ ೬ನೇ ತರಗತಿಯವರೆಗೆ ಓದಲು ಸಾಧ್ಯವಾದ ಹುಡುಗ. ತಮಿಳುನಾಡಿನ ಪುಟ್ಟ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಆತನಿಗೆ ೧೫ ವರ್ಷ ವಯಸ್ಸಾದಾಗ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಬಗ್ಗೆ ತಿಳಿಯಿತು. ಆಗ ತನಗರಿವಿಲ್ಲದಂತೆ ಆತನ ರಕ್ತ ಕುದಿಯತೊಡಗಿ ಆ ಕ್ಷಣದಿಂದಲೇ ಮನಸ್ಸು ಸ್ವಾತಂತ್ರ್ಯ ಹೋರಾಟಕ್ಕಾಗಿ ಹಾತೊರೆಯತೊಡಗಿತು.

ಮಹಾತ್ಮ ಗಾಂಧಿಯವರು ೧೯೨೧ರಲ್ಲಿ ಮಧುರೈಗೆ ಬಂದಾಗ ಕಾಂಗ್ರೆಸ್ಸಿನ ಕಾರ್ಯಕರ್ತನಾಗಿ ಸೇರಿಕೊಂಡ ಈ ಹುಡುಗ ೧೯೩೦ರಲ್ಲಿ ಭುಗಿಲೆದ್ದ ಅಸಹಕಾರ ಚಳವಳಿಯಲ್ಲಿ ಹುರುಪಿನಿಂದಲೇ ಪಾಲ್ಗೊಂಡ. ಮುಂದೆ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ಎರಡು ವರ್ಷ ಜೈಲು ವಾಸವನ್ನೂ ಅನುಭವಿಸಿದ. ಸ್ವಾತಂತ್ರ್ಯ ಸಂಬಂಧಿತ ಚಳವಳಿಗಳಲ್ಲಿ ಭಾಗವಹಿಸಿದ್ದಕ್ಕಾಗಿ ಈತ ಹೆಚ್ಚುಕಮ್ಮಿ ೮ ವರ್ಷಗಳ ಕಾಲ ಜೈಲಲ್ಲೇ ಇರಬೇಕಾಗಿ ಬಂತು.

ಹೀಗೆ ರಾಷ್ಟ್ರ ಪ್ರೇಮದ ದ್ಯೋತಕವಾಗಿರುವ ಬಗೆಬಗೆಯ ಹೋರಾಟಗಳಲ್ಲಿ ಭಾಗವಹಿಸಿ, ತಮಿಳುನಾಡಿನಾದ್ಯಂತ ಖ್ಯಾತಿ ಪಡೆದು, ಮುಂದೆ ದೇಶಾದ್ಯಂತದ ಜನಮಾನಸದಲ್ಲಿ ತನ್ನದೇ ವಿಶಿಷ್ಟ ಛಾಪು ಮೂಡಿಸಿದ, ಲಾಲ್ ಬಹಾ ದುರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿಯವರನ್ನು ದೇಶದ ಪ್ರಧಾನಮಂತ್ರಿ ಹುದ್ದೆಗೆ ಏರಿಸಿ, ರಾಜಕೀಯ ಚತುರ, ಚಾಣಕ್ಯ, ಕಿಂಗ್ ಮೇಕರ್ ಎಂದೆಲ್ಲ ಕರೆಸಿಕೊಂಡ ಮಹಾನ್ ಮುತ್ಸದ್ದಿಯ ಹೆಸರು ಕುಮಾರಸ್ವಾಮಿ ಕಾಮರಾಜ್. ಸಂಕ್ಷಿಪ್ತವಾಗಿ ಇವರು ‘ಕೆ.ಕಾಮರಾಜ್’.

ಕೆ.ಕಾಮರಾಜ್ ಹೆಸರನ್ನು ಕೇಳದವರಿಲ್ಲ. ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯೋತ್ತರ ಇತಿಹಾಸ ಶುರುವಾಗುವ ಘಟ್ಟದಲ್ಲಿ ಇವರು ನಿರ್ವಹಿಸಿದ ಪಾತ್ರ ಮಹತ್ತರ ವಾದದ್ದು. ೧೯೩೭, ೧೯೪೬ರಲ್ಲಿ ಮದ್ರಾಸ್ ವಿಧಾನಸಭೆಗೆ, ೧೯೫೨ರ ದೇಶದ ಮೊದಲ ಪಾರ್ಲಿಮೆಂಟ್‌ಗೆ ಆಯ್ಕೆಯಾಗಿ, ಅದಾದ ಎರಡೇ ವರ್ಷದಲ್ಲಿ ಅಂದರೆ ೧೯೫೪ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಗದ್ದುಗೆಗೆ ಏರಿದ ಸಾಧಕ ಕಾಮರಾಜ್. ಓದಿದ್ದು ಕೇವಲ ೬ನೆಯ ತರಗತಿಯ ವರೆಗಾದರೂ, ‘ಇಂಗ್ಲಿಷ್ ಬಾರದ ಮೊದಲ ಮುಖ್ಯ ಮಂತ್ರಿ’ ಎಂದು ಅವರಿವರು ಆಡಿಕೊಳ್ಳುತ್ತಿದ್ದರೂ, ಬ್ರಿಟಿಷರ ಕಾಲದಲ್ಲಿ ತಮಿಳುನಾಡಿನಲ್ಲಿ ಕೇವಲ ಶೇ.೭ ರಷ್ಟಿದ್ದ ಸಾಕ್ಷರರ ಮಟ್ಟವನ್ನು ಹತ್ತೇ ವರ್ಷದಲ್ಲಿ ಶೇ.೩೭ ಕ್ಕೂ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ದವರು ಕಾಮರಾಜ್. ೧೧ನೇ ತರಗತಿಯವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ, ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮೊಟ್ಟಮೊದಲಿಗೆ ಶುರುಮಾಡಿದ್ದು ಇವರೇ.

ಮಕ್ಕಳಿಗೆ ಉಚಿತ ಸಮವಸ್ತ್ರಗಳು ದೊರೆಯಲಾರಂಭಿಸಿದ್ದು ಇವರ ಕಾಲದಿಂದಲೇ. ಕಾಮರಾಜ್ ಕಾಲಘಟ್ಟದಲ್ಲಿ ತಮಿಳುನಾಡು ಇಡೀ ದೇಶದಲ್ಲೇ ಅತ್ಯಂತ ಪ್ರಭಾವಿ ಆಡಳಿತ ನಡೆಸಿದ ರಾಜ್ಯಗಳ ಯಾದಿಯಲ್ಲಿ ಮೊದಲ ಸ್ಥಾನದಲ್ಲಿತ್ತು ಎಂಬುದು ಗಮನಾರ್ಹ.

ಕಾಮರಾಜ್ ಪ್ಲ್ಯಾನ್: ಕಾಮರಾಜ್ ಪ್ರಭಾವ ಹೀಗೆ ಏರುಗತಿ ಕಾಯ್ದುಕೊಳ್ಳುತ್ತ ಹೋಯಿತು. ಆದರೆ ೧೯೬೨ರ ಚೀನಾ ಯುದ್ಧವನ್ನು ಭಾರತವು ಸೋತ ಕಾರಣ ಕ್ಕಾಗಿ ಮುಂದಿನ ೪ ಪ್ರಮುಖ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುಣ್ಣಬೇಕಾಗಿಬಂತು. ಇದರಿಂದ ಸಹಜವಾಗಿಯೇ ನೆಹರು ಅವರಿಗೆ ಪಕ್ಷದ ಭವಿಷ್ಯದ ಕುರಿತಾಗಿ ಕಳವಳ ಹಾಗೂ ಕುರ್ಚಿಯ ಗಟ್ಟಿತನದ ಬಗ್ಗೆ ಭಯ ಆವರಿಸತೊಡಗಿತು. ಆಗ ಕಾಂಗ್ರೆಸ್ ಪಾಲಿಗೆ ವರದಾನವಾಗಿದ್ದು ಇದೇ ಕಾಮರಾಜ್.
ನೆಹರು ರನ್ನು ಭೇಟಿಯಾದ ಕಾಮರಾಜ್ ಒಂದು ವಿಶಿಷ್ಟ ಯೋಜನೆಯನ್ನು ಪ್ರಸ್ತಾವಿಸಿದರು.

‘ಕಾಮರಾಜ್ ಪ್ಲ್ಯಾನ್’ ಎಂದೇ ಹೆಸರಾದ ಇದರ ಪ್ರಕಾರ, ಕೇಂದ್ರ ಮಂತ್ರಿ ಹಾಗೂ ರಾಜ್ಯಗಳ ಮುಖ್ಯಮಂತ್ರಿ ಸ್ಥಾನಗಳನ್ನು ಅಲಂಕರಿಸಿದ್ದ ಕೆಲವರು ತಮ್ಮ
ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಪಕ್ಷ ಸಂಘಟನೆಯೆಡೆಗೆ ಗಮನ ಹರಿಸಬೇಕಾಗಿತ್ತು. ಈ ಪ್ರಸ್ತಾವ ಕೇಳಿಬರುತ್ತಿದ್ದಂತೆ, ಆಗಿನ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ
ಮೊರಾರ್ಜಿ ದೇಸಾಯಿ, ಎಸ್.ಕೆ. ಪಾಟೀಲ್, ಲಾಲ್ ಬಹಾದುರ್ ಶಾಸ್ತ್ರಿ, ಜಗಜೀವನ್ ರಾಮ್, ಬಿ. ಗೋಪಾಲ ರೆಡ್ಡಿ, ಮದ್ರಾಸ್ ಮುಖ್ಯಮಂತ್ರಿಯಾಗಿದ್ದ
ಕಾಮರಾಜ್, ಒಡಿಶಾ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳ ಮುಖ್ಯಮಂತ್ರಿಗಳೂ ರಾಜೀನಾಮೆಯಿತ್ತು ಪಕ್ಷ ಸಂಘಟ ನೆಗೆ ಒತ್ತುನೀಡಿದರು.

‘ಕಾಮರಾಜ್ ಪ್ಲ್ಯಾನ್’ ಅನುಸಾರವೇ ಜವಾಹರಲಾಲ್ ನೆಹರು ಅವರು ತಮ್ಮ ಸಂಪುಟ ಸಚಿವರ ಸ್ಥಾನಗಳ ಬದಲಾವಣೆಯನ್ನೂ ಮಾಡಿದರು. ಅಂದು ಕೊಂಡಂತೆಯೇ ‘ಕಾಮರಾಜ್ ಪ್ಲ್ಯಾನ್’ ಸರಿಯಾಗಿ ಕೆಲಸ ಮಾಡಿದ್ದರಿಂದ ಅವರನ್ನು ೧೯೬೩ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡ ಲಾಯಿತು. ಇದಾದ ಕೆಲದಿನಗಳಲ್ಲಿ ನೆಹರು ದೇಹಾಂತ್ಯವಾದಾಗ, ಅವರ ಸ್ಥಾನವನ್ನು ಭರ್ತಿಮಾಡುವ ಹೊಣೆ ಎಲ್ಲ ಹಿರಿಯ ನಾಯಕರ ಹೆಗಲೇರಿತು. ಹಾಗೆಯೇ, ಆ ಸ್ಥಾನಕ್ಕೆ ದೊಡ್ಡ ಮಟ್ಟದಲ್ಲಿ ಸ್ಪರ್ಧೆಯೂ ಏರ್ಪಟ್ಟಿತು. ಆಗ ಪಕ್ಷಕ್ಕೆ ಅಧಿಕಾರವನ್ನು ಮತ್ತು ನಾಯಕತ್ವವನ್ನು ನಿಭಾಯಿಸುವ ವ್ಯಕ್ತಿ ಬೇಕಾಗಿತ್ತು. ಹೀಗಾಗಿ ಪ್ರಧಾನ ಮಂತ್ರಿ ಕಾರ್ಯಾಲಯದ ಆಯಕಟ್ಟಿನ ಜಾಗಗಳಲ್ಲಿ ತಮಗೆ ಬೇಕಾದವರನ್ನು ಸೇರಿಸಿದ ಕಾಮರಾಜ್ ತರುವಾಯದಲ್ಲಿ, ಪಕ್ಷಕ್ಕೆ ಅತ್ಯಗತ್ಯ ನಾಯಕರಾಗಿದ್ದ ಮತ್ತು ಸರಳತೆಗೆ ಹೆಸರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸುವಲ್ಲಿ ಯಶಸ್ವಿಯಾದರು.

ಮರಾಜರು ಸಾಮೂಹಿಕ ನಾಯಕತ್ವಕ್ಕೆ ಒತ್ತು ನೀಡಿದ್ದರಿಂದ, ನೆಹರುರಂಥ ನಾಯಕನ ದೇಹಾಂತ್ಯವೂ ಪಕ್ಷಕ್ಕೆ ಅತಿದೊಡ್ಡ ಹಾನಿಯನ್ನೇನೂ ಮಾಡಲಿಲ್ಲ ಮತ್ತು
ಉತ್ತರಾಽಕಾರಿಯನ್ನು ತಕ್ಷಣ ನೇಮಕ ಮಾಡುವಲ್ಲಿ ಪಕ್ಷವು ಸಫಲವೂ ಆಯಿತು.

ಕಿಂಗ್‌ಮೇಕರ್ ಕಾಮರಾಜ್: ಕೆಲ ಕಾಲದ ನಂತರ ಲಾಲ್ ಬಹಾದುರ್ ಶಾಸ್ತ್ರಿಯವರ ದೇಹಾಂತ್ಯವಾದಾಗ, ಮೊರಾರ್ಜಿ ದೇಸಾಯಿಯವರ ಬದಲಿಗೆ ಇಂದಿರಾ ಗಾಂಧಿಯವರನ್ನು ಪ್ರಧಾನಿ ಗಾದಿಯಲ್ಲಿ ಕೂರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಕಾಮರಾಜ್, ತನ್ಮೂಲಕ ‘ಕಿಂಗ್ ಮೇಕರ್’ ಸ್ಥಾನದಲ್ಲಿ ಗಟ್ಟಿಯಾಗಿ ಕುಳಿತು ಕೊಂಡರು. ಅದಾದ ಕೆಲ ವರ್ಷಗಳ ನಂತರ ಕಾಂಗ್ರೆಸ್ ಪಕ್ಷವು ಕಾಮರಾಜರ ‘ಸಾಮೂಹಿಕ ನಾಯಕತ್ವ’ದ ಪರಿಕಲ್ಪನೆಯಿಂದ ದೂರ ಸರಿಯಲು ಶುರು ಮಾಡಿತು; ಒಂದಿಡೀ ಪಕ್ಷವು ತನ್ನನ್ನು ಇಂದಿರಾ ಗಾಂಧಿಯವರ ‘ಹೈಕಮಾಂಡ್’ಗೆ ಸಮರ್ಪಿಸಿಕೊಂಡು, ಅದರ ಇಶಾರೆಗೆ ತಕ್ಕಂತೆಯೇ ಕಾರ್ಯ ನಿರ್ವಹಿಸಲು ಮುಂದಾಯಿತು. ಇಂದಿರಾರ ವ್ಯಕ್ತಿತ್ವ ಇಡೀ ಪಕ್ಷದ ನಾಯಕತ್ವವನ್ನು ತನ್ನಲ್ಲಿ ಆವಾಹಿಸಿಕೊಳ್ಳಲು ಪ್ರಾರಂಭಿಸಿತು. ಈ ಬೆಳವಣಿಗೆಯಾದ ನಂತರ ಇಂದಿರಾರ ಬೆಂಬಲಿಗರು ಹಾಗೂ ಪಕ್ಷದ ಹಳೆಯ-ಹಿರಿಯ ನಾಯಕರ ನಡುವೆ ಕಿತ್ತಾಟ ಶುರುವಾಗಿ ೧೯೬೯ರಲ್ಲಿ ಕಾಂಗ್ರೆಸ್ ಇಬ್ಭಾಗವಾಯಿತು.

ಈ ಬೆಳವಣಿಗೆ ಆಗಿದ್ದೇ ಆಗಿದ್ದು, ಕಾಮರಾಜರ ಖ್ಯಾತಿಯೂ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಮುಂದೆ ಮಂಡಿಯೂರಬೇಕಾಗಿ ಬಂತು. ೧೯೬೭ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯಿಂದ ಕಾಂಗ್ರೆಸ್ ಹೀನಾಯ ಸೋಲು ಕಾಣಬೇಕಾಗಿ ಬಂತು. ಕಾಮರಾಜರೂ ಸೋಲುಣ್ಣಬೇಕಾಯಿತು. ಕೇಂದ್ರದಲ್ಲಿನ ಇಂದಿರಾರ ಪ್ರಭಾವ, ರಾಜ್ಯದಲ್ಲಿನ ಡಿಎಂಕೆ ಪ್ರಭಾವದಿಂದಾಗಿ ಕಾಮರಾಜರ ಶಕ್ತಿ ಕ್ಷೀಣಿಸತೊಡಗಿತು. ೧೯೭೧ರ ವಿಧಾನಸಭಾ ಚುನಾವಣೆಯಲ್ಲೂ ಪಕ್ಷ ಸೋತ ಕಾರಣ ಕಾಮರಾಜ್ ಅವರು ರಾಜಕೀಯದಿಂದ ದೂರ ಸರಿಯಬೇಕಾಗಿ ಬಂತು.

ಬಡ ಮತ್ತು ಹಿಂದುಳಿದ ಮನೆಯಲ್ಲಿ ಹುಟ್ಟಿದರೂ ಮುಂದೆ ರಾಜಕೀಯ ಅಧಿಕಾರದ ನೆಲೆಗಟ್ಟಿನಲ್ಲಿ ಪ್ರಭಾವಿ ಜೀವನ ನಡೆಸಿದ ಕಾಮರಾಜರು ೧೯೭೫ರ ಅಕ್ಟೋಬರ್ ೨ರಂದು ವಿಧಿವಶರಾದಾಗ ಅವರ ಬಳಿಯಲ್ಲಿದ್ದುದು ೧೩೦ ರುಪಾಯಿ ಮಾತ್ರ. ಅವರಿಗೆ ಮದುವೆಯಾಗಿರಲಿಲ್ಲ, ಇರಲು ಸ್ವಂತ ಮನೆಯೂ ಇರಲಿಲ್ಲ. ಭಾರತದ ರಾಜಕಾರಣದಲ್ಲಿ ಅತ್ಯಂತ ವರ್ಚಸ್ವಿ ಎನಿಸಿಕೊಂಡಿದ್ದ ನಾಯಕನೊಬ್ಬ ತನ್ನ ಜೀವನದ ಅಂತ್ಯವನ್ನು ಕಂಡ ಪರಿಯಿದು! ೧೯೭೬ರಲ್ಲಿ ಕಾಮರಾಜರಿಗೆ ಮರಣೋತ್ತರ ‘ಭಾರತ ರತ್ನ’ ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ಕಾಂಗ್ರೆಸ್ಸಿನ ಇತಿಹಾಸದ ವಿಚಾರ ಬಂದಾಗ ಕಾಮರಾಜರದ್ದು ಅದರಲ್ಲಿ ಮಹತ್ವದ ಅಧ್ಯಾಯವೇ ಎನ್ನಲಡ್ಡಿಯಿಲ್ಲ. ಇಂಥ ಅಪ್ರತಿಮ ರಾಜಕಾರಣಿ, ಅನನ್ಯ ನಾಯಕ, ಕಿಂಗ್‌ಮೇಕರ್ ಹುಟ್ಟಿದ್ದು ೧೯೦೩ರ ಜುಲೈ ೧೫ರಂದು. ಅಂದರೆ ಮೊನ್ನೆ ತಾನೇ ಅವರ ಜನ್ಮದಿನವಿತ್ತು. ಅದಕ್ಕಾಗಿ ಅವರನ್ನು ನೆನೆಯಬೇಕಾಗಿ ಬಂತು