Saturday, 14th December 2024

ಕನ್ನಡದ ಆಸ್ತಿ ಮಾಸ್ತಿಗೆ 130ರ ಸಂಭ್ರಮ !

ತನ್ನಿಮಿತ್ತ

ನಂ.ಶ್ರೀಕಂಠ ಕುಮಾರ್‌

ಕನ್ನಡದ ಆಸ್ತಿ ಎಂದು ಭಾವಿಸಲಾಗಿರುವ ಕನ್ನಡದ ಶ್ರೇಷ್ಠ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನ ವಿಂದು. ಸಣ್ಣ ಕಥೆಗಳ ರಚನೆ ಅವರ ಪ್ರಮುಖವಾದ ಸಾಹಿತ್ಯ ಕೊಡುಗೆ. ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ಮಾಸ್ತಿ ಯವರು ನೂರಾರು ಸಣ್ಣ ಕಥೆಗಳನ್ನು ಬರೆದರು. ಹಾಗಾಗಿ, ಅವರನ್ನು ಸಣ್ಣ ಕಥೆಗಳ ಜನಕ ಎಂದೇ ಕರೆಯಲ್ಪಡು ತ್ತಿದ್ದರು. ಹಾಗೆಯೇ ಕಥೆ ಹೇಳುವುದರಲ್ಲಿಯೂ ಮಾಸ್ತಿಯವರು ಎತ್ತಿದ ಕೈ. ಹಲವಾರು ಸಣ್ಣ ಕಥೆಗಳನ್ನು ಪ್ರಕಟಿಸಿದ ಇವರು ಮೊದಲು ಬರೆದ ರಂಗನ ಮದುವೆ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರ ಕೊನೆಯ ಕೃತಿ ಮಾತುಗಾರ ರಾಮಣ್ಣವರೆಗೆ ಒಟ್ಟು 126 ಕೃತಿಗಳನ್ನು ರಚಿಸಿದ್ದಾರೆ.

ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎಂಬುದು ನಾಣ್ನುಡಿಯಾದರೂ ಜನನ ಮತ್ತು ಮರಣ ಎರಡೂ ಅದೇ ದಿನಾಂಕ ಸಂಭವಿಸಿರು ವುದು ಕನ್ನಡದ ಮೇರು ಸಾಹಿತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಬದುಕಿನಲ್ಲಿ ವಿಸ್ಮಯವೂ ಹೌದು.

1891ರಲ್ಲಿ ಜೂನ್ 6, 1891ರಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಮಾಸ್ತಿ ಎಂಬ ಪುಟ್ಟ ಗ್ರಾಮದ ಬಡ ಕುಟುಂಬದಲ್ಲಿ ರಾಮಸ್ವಾಮಿ ಅಯ್ಯಂಗಾರ್ ಮತ್ತು ತಿರುಮಲ ದಂಪತಿಗೆ ಜನಿಸಿದರು. ಇವರ ಪೂರ್ವಜರು ಶ್ರೀಮಂತಿಕೆಯಿಂದ ಬದುಕನ್ನು ನಡೆಸಿದ್ದರೂ ಇವರು ಹುಟ್ಟಿದ ಸಂದರ್ಭದಲ್ಲಿ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮ ವಾಗಿರಲಿಲ್ಲ. ಇವರ ವಿದ್ಯಾಭ್ಯಾಸವು ಕಷ್ಟದ ಪರಿಸ್ಥಿತಿಯ ನಡೆಯಿತು.

ಬಂಧುಗಳ ನೆರವಿನಿಂದ ಹೊಂಗೇನಹಳ್ಳಿ, ಯಳಂದೂರು, ಶಿವಾರಪಟ್ಟಣ, ಬೆಂಗಳೂರು, ಮಳವಳ್ಳಿ, ಮೈಸೂರು ಸೇರಿದಂತೆ
ವಿವಿಧ ಸ್ಥಳಗಳಲ್ಲಿ ವಿದ್ಯಾಭ್ಯಾಸ ಪಡೆಯಬೇಕಾಯಿತು. ಮದ್ರಾಸಿನಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಎಂಎ ಪದವಿ ಪಡೆದು, ಚಿನ್ನದ ಪದಕ ಗಳಿಸಿದರು. ನಂತರ ಸ್ವಲ್ಪಕಾಲ ಅಲ್ಲಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು. ಆ ನಂತರ ಬೆಂಗಳೂರಿಗೆ ಬಂದು ಮೈಸೂರು ಸಂಸ್ಥಾನ (ಸರ್.ಎಂ.ವಿಶ್ವೇಶ್ವರಯ್ಯ ಅವರ ಕಾಲದಲ್ಲಿ) ಪ್ರಾರಂಭಿಸಿದ ಮೊದಲ ಮೈಸೂರು ಸಿವಿಲ್ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದು ಉನ್ನತ ಸರಕಾರಿ ಅಧಿಕಾರಿಯಾಗಿ ಉದ್ಯೋಗಕ್ಕೆ ಸೇರಿ ಸಮರ್ಪಕವಾಗಿ ಕೆಲಸ ಮಾಡಿ ದಕ್ಷ ಅಧಿಕಾರಿಯೆಂದು ಹೆಸರು ಗಳಿಸಿದರು.

ಇವರು ವಿವಿಧ ಸ್ಥಳಗಳಲ್ಲಿ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ, 1944ರಲ್ಲಿ ಸರಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದರು. ಮಾಸ್ತಿಯವರು ವೃತ್ತಿಯ ಜತೆ ಜತೆಗೆ ಸಾಹಿತ್ಯದಲ್ಲೂ ಹೆಚ್ಚಿನ ಆಸಕ್ತಿ ಉಂಟಾಗಿ ಕನ್ನಡ ಸಾಹಿತ್ಯ ಲೋಕಕ್ಕೆ
ಅಪಾರ ಕೊಡುಗೆ ನೀಡಿದ್ದಾರೆ. ಅವರ ಜೀವನಾನುಭವಗಳ ವೈವಿಧ್ಯ ಮತ್ತು ಓದಿನ ಆಳ, ವೈಶಾಲ್ಯಗಳಿಂದ ಪಡೆದ ಬಹುತ್ವದ ಕಲ್ಪನೆಯೇ ಅವರ ಸಾಹಿತ್ಯದಲ್ಲಿ ರೂಪಕ ಸೃಷ್ಟಿಯ ಮೂಲಸತ್ವ. 1910ರಲ್ಲಿ ಇವರ ಕೆಲವು ಸಣ್ಣ ಕಥೆಗಳ ಮೊದಲ ಪುಸ್ತಕ ಪ್ರಕಟಗೊಂಡಿತು.

ಆಗ ಅವರಿಗೆ 19ನೇ ವಯಸ್ಸು. ಹಾಗೆಯೇ ಸಾಹಿತ್ಯ ಕ್ಷೇತ್ರದ ಕೃಷಿಯನ್ನು ಮುಂದುವರಿಸಿ ನೀಳ್ಗತೆ, ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ, ಅನುವಾದ ಮುಂತಾದ ಪ್ರತಿಯೊಂದು ಮಜಲುಗಳಲ್ಲಿಯೂ ತಮ್ಮ ಅನುಭವದ ಛಾಪನ್ನು
ಮೂಡಿಸಿzರೆ. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರೂ ಆದರು. ಜಿ.ಪಿ.ರಾಜರತ್ನಂ, ದ.ರಾ.ಬೇಂದ್ರೆಯಂಥ ಸಮಕಾಲೀನ ಸಾಹಿತಿಗಳ ಪ್ರೀತಿಪಾತ್ರರಾಗಿ ಮಾರ್ಗದರ್ಶಕರಾಗಿದ್ದರು.

ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರದಿದ್ದ ಕಾಲದಲ್ಲಿ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯ ಕ್ಷೇತ್ರ ದಲ್ಲಿ ಗಮನಾರ್ಹ ಕೊಡುಗೆಯನ್ನು ನೀಡಿದರು. ಸಣ್ಣ ಕಥೆಗಳ ರಚನೆ ಅವರ ಪ್ರಮುಖವಾದ ಸಾಹಿತ್ಯ ಕೊಡುಗೆ. ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ಮಾಸ್ತಿಯವರು ನೂರಾರು ಸಣ್ಣ ಕಥೆಗಳನ್ನು ಬರೆದರು. ಹಾಗಾಗಿ, ಅವರನ್ನು ಸಣ್ಣ ಕಥೆಗಳ ಜನಕ ಎಂದೇ ಕರೆಯಲ್ಪಡುತ್ತಿದ್ದರು. ಹಾಗೆಯೇ ಕಥೆ ಹೇಳುವುದರಲ್ಲಿಯೂ ಮಾಸ್ತಿಯವರು ಎತ್ತಿದ ಕೈ.

ಹಲವಾರು ಸಣ್ಣ ಕಥೆಗಳನ್ನು ಪ್ರಕಟಿಸಿದ ಇವರು ಮೊದಲು ಬರೆದ ರಂಗನ ಮದುವೆ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರ ಕೊನೆಯ ಕೃತಿ ಮಾತುಗಾರ ರಾಮಣ್ಣವರೆಗೆ ಒಟ್ಟು 126 ಕೃತಿಗಳನ್ನು ರಚಿಸಿದ್ದಾರೆ. ಅವರ ಎಲ್ಲಾ ಕೃತಿಗಳಲ್ಲೂ ಕುಶಲತೆ, ಸಾಮ್ಯತೆ, ಜೀವನ ದರ್ಶನಗಳನ್ನು ಕಾಣಬಹುದು. ಭಾರತ ತೀರ್ಥ, ಆದಿಕವಿ ವಾಲ್ಮೀಕಿ ಇವು ರಾಮಾಯಣವನ್ನು ಕುರಿತು ಬರೆದಿರುವ ಗ್ರಂಥಗಳಾದರೆ ಶ್ರೀರಾಮಪಟ್ಟಾಭಿಷೇಕ ಅವರ ಒಂದು ಮಹಾಕಾವ್ಯ.

ಹಾಗೆಯೇ ರವೀಂದ್ರನಾಥ ಠಾಗೂರ್, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನು ಅನಾರ್ಕಳಿ, ತಿರುಪಾಣಿ, ಶಿವಛತ್ರಪತಿ ಮೊದಲಾದ ನಾಟಕಗಳನ್ನು ಆಂಗ್ಲಭಾಷೆಯ ಷೇಕ್ಸ್‌ಪಿಯರ್‌ನ ನಾಟಕಗಳ ಅನುವಾದಗಳನ್ನು ಮಾಡಿ ಪ್ರಕಟಿಸಿದ್ದಾರೆ. ಮಾಸ್ತಿ ರವರು ಬರೆದ ಕಾದಂಬರಿಗಳು ಚಿಕ್ಕವೀರ ರಾಜೆಂದ್ರ ಹಾಗೂ ಚೆನ್ನಬಸವನಾಯಕ. ಕೊಡಗಿನ ಕೊನೆಯ ರಾಜ ಚಿಕ್ಕವೀರ ರಾಜೇಂದ್ರ ಅಧಿಕಾರ ಕಳೆದುಕೊಂಡು ಕೊಡಗು ರಾಜ್ಯ ಸಂಪೂರ್ಣ ಬ್ರಿಟಿಷರ ಆಡಳಿತಕ್ಕೆ ಒಳಪಡುವ ಘಟನಾವಳಿಗಳನ್ನು
ವಿವರಿಸಿರುವ ಚಿಕ್ಕವೀರ ರಾಜೇಂದ್ರ ಕಾದಂಬರಿಯು 1983ರಲ್ಲಿ ಕನ್ನಡಕ್ಕೆ ನಾಲ್ಕನೇಜ್ಞಾನಪೀಠ ಪ್ರಶಸ್ತಿ ಗಳಿಸಿಕೊಟ್ಟ ಶಾಶ್ವತ ಕೀರ್ತಿ ಅವರದ್ದು.

ಆ ಸಂದರ್ಭದಲ್ಲಿ ಪತ್ರಕರ್ತ ರೊಬ್ಬರು ಮಾಸ್ತಿಯವರನ್ನು ಕೇಳಿದರಂತೆ ನಿಮಗಿಂತ ಕಿರಿಯರಿಗೆ ಪ್ರಶಸ್ತಿ ಬಂದ ಬಳಿಕ ನಿಮಗೆ ಜ್ಞಾನಪೀಠ ಪ್ರಶಸ್ತಿ ಈಗ ದೊರೆತಿದೆ. ಇದರಿಂದ ನಿಮಗೆ ಬೇಸರ ಆಗಿಲ್ಲವೇ? ಮಾಸ್ತಿ ಅಷ್ಟೇ ನಾಜೂಕ್ಕಾಗಿ ಉತ್ತರಿಸಿದರಂತೆ. ಮನೆಯಲ್ಲಿ ಏನಾದರೂ ಸಿಹಿ ತಿಂಡಿ ಮಾಡಿದ್ರೆ ಮೊದಲು ಕೊಡೋದೇ ಚಿಕ್ಕೋರಿಗೆ ಅವರೆ ಸಂತೋಷಪಟ್ಟ ಮೇಲೆ ಉಳಿದ್ರೆ
ಹಿರಿಯರು ತಿಂತಾರೆ. ಇಲ್ಲೂ ಅಷ್ಟೇ ಎಂದು ಸುಮ್ಮನಾದರಂತೆ.

ಮಾಸ್ತಿರವರು ಪತ್ರಿಕಾ ರಂಗಕ್ಕೂ ತಮ್ಮ ಅಮೂಲ್ಯ ಕೊಡುಗೆ ನೀಡಿzರೆ. ಧಾರವಾಡದಲ್ಲಿ ಸಾಹಿತಿ ದ.ರಾ.ಬೇಂದ್ರೆಯವರು ನಡೆಸುತ್ತಿದ್ದ ಜೀವನ ಎಂಬ ಪತ್ರಿಕೆಯನ್ನು ಬೆಂಗಳೂರಿಗೆ ವರ್ಗಾಯಿಸಿ, ಅದರ ಹೊಣೆ ಹೊತ್ತುಕೊಂಡು, ಸಂಪಾದಕೀಯ ಉತ್ತಮ ಲೇಖನವನ್ನು ಬರೆದು ಪತ್ರಿಕೆಯನ್ನು ಜನಪ್ರಿಯ ಗೊಳಿಸಿದರು.

ಮಾಸ್ತಿರವರು ಕೇವಲ ಸಾಹಿತಿಯಷ್ಟೇ ಅಲ್ಲ, ಸಂಸ್ಕೃತಿಯ ಪ್ರತಿಪಾದಕರೂ ಸಹ. ಅವರದ್ದು  ಶಿಸ್ತುಬದ್ಧ ಜೀವನ. ಬದುಕಿನಲ್ಲಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಪರಿಪಕ್ವವಾಗುವುದು ಹೇಗೆ ಎಂಬುದನ್ನು ಅವರ ಕೃತಿಗಳ ಮೂಲಕ ಸಾರಿದರು. ಕನ್ನಡ ಮನಸ್ಸುಗಳನ್ನು ಪೋಷಿಸಿ ಬದುಕಿನ ಮಹತ್ವವನ್ನು, ಕನ್ನಡದ ಅಸ್ತಿತ್ವದ ಹಿರಿಮೆಯನ್ನು ಸಾರಿದರು. ಕನ್ನಡ ಸಾಹಿತ್ಯದಲ್ಲಿ ಕಥಾ ಪ್ರಾಕಾರಕ್ಕೆ ನವೋದಯದ ಪ್ರಮುಖ ಆಯಾಮ ನೀಡಿದರು.

ಕನ್ನಡಿಗರ ಪ್ರೀತಿ ಪಾತ್ರರಾದ ಮಾಸ್ತಿರವರಿಗೆ ಸಂದ ಗೌರವ ಪುರಸ್ಕಾರಗಳು ಅಪಾರ. ಮೈಸೂರು ವಿಶ್ವ ವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಮೈಸೂರು ಸಂಸ್ಥಾನದ ಮಹಾ ರಾಜ ಜಯಚಾಮರಾಜ ಒಡೆಯರ್ ಅವರಿಂದ ರಾಜ ಸೇವಾ ಪ್ರಸಕ್ತ ಗೌರವ, ಅವರ ಕಾಕನ ಕೋಟೆ ಕಥೆಯ ಚಲನಚಿತ್ರಕ್ಕೆ ಉತ್ತಮ ಕಥೆಯ ರಾಜ್ಯ ಪ್ರಶಸ್ತಿ, ಕರ್ಣಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಹಾಗೂ ಅನೇಕ ಇತರ ಪುರಸ್ಕಾರ ಗಳು ಲಭಿಸಿವೆ.

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಜೂನ್ 6, 1986ರಂದು ತಮ್ಮ 95ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನ ರಾದರು. ಅವರ ಬದುಕು – ಬರಹವು ಕನ್ನಡದ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿ ಯಾಗಿದೆ. ಹಾಗಾಗಿ, ಇಂದಿಗೂ ಕನ್ನಡಿಗರ ಆಸ್ತಿಯಾಗಿ ಉಳಿದಿದ್ದಾರೆ. ಬೆಂಗಳೂರಿನ ಗವೀಪುರಂ ಬಡಾವಣೆಯ ಎರಡನೇ ಅಡ್ಡ ರಸ್ತೆಯಲ್ಲಿನ ನಮ್ಮ ಬಂಧುವೊಬ್ಬರ ಮನೆ
ಗೃಹಪ್ರವೇಶಕ್ಕೆ ಹೋಗಿದ್ದಾಗ ಅವರ ಮನೆ ಎದುರ ಮಾಸ್ತಿಯವರ ಮನೆ ಇದ್ದು, ಆಕಸ್ಮಿಕವಾಗಿ ಅಂದು ಮನೆಯ ಮುಂದೆ ನಿಂತಿದ್ದ ಮಾಸ್ತಿ ಅವರನ್ನು ದರ್ಶನ ಮಾಡಿದ್ದು, ನನ್ನ ಭಾಗ್ಯವೇ ಸರಿ.