Sunday, 15th December 2024

೧೯೭೧ರ ಯುದ್ದ ಗೆದ್ದರೂ ನಿಜವಾಗಿ ಸೋತ ಭಾರತ

ವಿಶ್ಲೇಷಣೆ

ಪ್ರಕಾಶ್ ಶೇಷರಾಘವಾಚಾರ‍್

sprakashbjp@gmail.com

ಹಾಗೆ ನೋಡಿದರೆ, 1971ರ ಯುದ್ಧದ ಗೆಲುವು ದೇಶಗಳ ನಡುವೆ ಇದ್ದ ವಿವಾದಗಳನ್ನು ಬಗೆಹರಿಸಿಕೊಳ್ಳಲು ಒದಗಿದ್ದ ಸುವರ್ಣಾವ ಕಾಶವಾಗಿತ್ತು. ದೊರೆತ ಅವಕಾಶವನ್ನು ತನ್ನ ಹಿತ ಕಾಪಾಡಲು ಬಳಸಿಕೊಳ್ಳುವಲ್ಲಿ ವಿಫಲವಾಗಿತ್ತು ಭಾರತ. ಯುದ್ಧದಲ್ಲಿ ಸೋತಿದ್ದ ಪಾಕಿಸ್ತಾನ ತನ್ನ ಅನುಕೂಲಕ್ಕೆ ತಕ್ಕ ಹಾಗೆ ಒಪ್ಪಂದ ಮಾಡಿಕೊಳ್ಳಲು ಯಶಸ್ವಿಯಾಗಿ ಗೆದ್ದು ಬೀಗಿದ್ದು ಕಟು ಸತ್ಯ.

‘ಪಾಕಿಸ್ತಾನವನ್ನುಬಗ್ಗು ಬಡಿದು ಬಾಂಗ್ಲಾದೇಶ ಉದಯಕ್ಕೆ ಕಾರಣರಾಗಿದ್ದು ಇಂದಿರಾ ಗಾಂಧಿ ಹಾಗೂ ಬಾಬು ಜಗಜೀವನ್ ರಾಮ; ಅದು ಮೋದಿ ಅಥವಾ ಬೊಮ್ಮಾಯಿ ಕೊಟ್ಟಿದ್ದಲ್ಲ’ ಎಂದು ಜಗಜೀವನರಾಮ್ ಜಯಂತಿಯಂದು ಸಿದ್ದರಾಮಯ್ಯತಮ್ಮ ಜ್ಞಾನವನ್ನು ಹಂಚಿಕೊಂ ಡಿದ್ದರು. ಇದಲ್ಲದೆ ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಾರ್ಟಿ ಎಂದು ಪದೇ ಪದೇ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಇಂದಿನ ಕಾಂಗ್ರೆಸ್ ಮುಖಂಡರು ಅಂದು ತುಂಡು ತುಂಡಾದ ಭಾರತಕ್ಕೂ ಮತ್ತು ವಿಭಜನೆಯ ವೇಳೆ ನಡೆದ ಲಕ್ಷಾಂತರ ಹಿಂದುಗಳ ನರಮೇಧಕ್ಕೂ ಹೊಣೆಯಾಗಬೇಕು ಎಂದು ತಿಳಿಸುವ ಅವಶ್ಯಕತೆ ಈಗ ಇನ್ನೂ ಹೆಚ್ಚಿದೆ.

1971ರಲ್ಲಿ ಯುದ್ಧವನ್ನು ಗೆದ್ದ ಭಾರತಕ್ಕೆ ಆದ ಲಾಭವನ್ನು ಲೆಕ್ಕ ಹಾಕಿದರೆ ನಷ್ಟವೇ ಹೆಚ್ಚು ಕಾಣುತ್ತದೆ. ಇಂದಿರಾಗಾಂಧಿ ಭುಟ್ಟೊವನ್ನು ಓಲೈಸಲು ಅಥವಾ ದೃಢವಾದ ನಿಲುವು ತೆಗೆದುಕೊಳ್ಳುವ ರಾಜಕೀಯ ಇಚ್ಛಾಶಕ್ತಿ ಅಭಾವದಿಂದ ಬಹು ದೊಡ್ಡ ಪ್ರಮಾದವನ್ನೇ ಎಸಗಿದ್ದರು. 71ರ ಯುದ್ಧದಲ್ಲಿ ಪಾಕಿಸ್ತಾನದ ಶೇಕಡಾ 25ರಷ್ಟು ಸೇನೆ ನಮ್ಮ ವಶದಲ್ಲೇ ಇತ್ತು. ಅವರ ನೌಕಾ ಪಡೆಯು ಅರ್ಧದಷ್ಟು ನಾಶ ವಾಗಿತ್ತು. ಭಾರತೀಯ ಸೈನಿಕರ ಪರಾಕ್ರ ಮದ ಮುಂದೆ ಪಾಕಿಸ್ತಾನದ ಸೇನೆ ಮಂಡಿಯೂರಿತ್ತು. ಭಾರತದ ಮುಂದೆ ಶರಣಾಗತಿಯಲ್ಲದೆ ಬೇರೆ ದಾರಿಯು ಇರಲಿಲ್ಲ.

ಶತ್ರು ರಾಷ್ಟ್ರವನ್ನು ಯುದ್ಧದಲ್ಲಿ ಜಯಿಸಿದ ತರುವಾಯ ಅದರಿಂದ ಭವಿಷ್ಯದ ದೃಷ್ಟಿಯಿಂದ ನಮಗೆ ಹೇಗೆ ಅನುಕೂಲಕರ ಪರಿಸ್ಥಿತಿ ಯನ್ನು ಸಾಧಿಸಲು ಸಾಧ್ಯ, ಮೊಂದೊದಗಬಹುದಾದ ಸಮಸ್ಯೆಗಳನ್ನು ಹೇಗೆ ಚಿವುಟಿ ಹಾಕಬಹುದು ಎಂಬುದನ್ನು ಅವಲೋಕಿಸ ಬೇಕಿತ್ತು. ದೇಶದ ಗಡಿ ಮತ್ತು ಗೌರವ ಕಾಪಾಡಲು ಸಾವಿರಾರು ಸೈನಿಕರು ತಮ್ಮ ರಕ್ತ ಬಸಿದಿದ್ದರು ಮತ್ತು ಸಹಸ್ರಾರು ಯೋಧರ ಪ್ರಾಣಾರ್ಪಣೆಯಾಗಿತ್ತು. ಸಾವಿರಾರು ಕೋಟಿ ಹಣವು ವೆಚ್ಚಮಾಡಿ ಶತ್ರು ರಾಷ್ಟ್ರದ ದುಸ್ಸಾಹಸಕ್ಕೆ ತಕ್ಕ ಪ್ರತ್ಯುತ್ತರವನ್ನು ಭಾರತ ನೀಡಿತ್ತು. ಆದರೆ ಇದಕ್ಕೆ ಪ್ರತಿಫಲ ವಾಗಿ ನಾವು ಪಡೆದದ್ದೇನು? 1971ರಲ್ಲಿ 2/3 ರಷ್ಟು ಬಹುಮತ ಪಡೆದು ಅಧಿಕಾರ ಚುಕ್ಕಾಣಿ ಹಿಡಿದಿದ್ದ ಇಂದಿರಾಗಾಂಽಯನ್ನು ಪ್ರಶ್ನಿಸು ವುದು ದುಃಸ್ಸಾಹಸವೇ ಆಗಿತ್ತು.

ದೇಶದ ಬದ್ಧ ವೈರಿ ಪಾಕಿಸ್ತಾನವನ್ನು ಮಣಿಸಿದ ನಂತರವಂತೂ ಇಂದಿರಾ ಮಾತಿಗೆ ಎದುರಾಡುವ ಶಕ್ತಿ ಯಾರಿಗೂ ಉಳಿದಿರಲಿಲ್ಲ. ಪಾಪ, ಅಂದಿನ ರಕ್ಷಣಾ ಸಚಿವ ಬಾಬು ಜಗಜೀವನ ರಾಮ್ ಸ್ವತಂತ್ರವಾಗಿ ನಿರ್ಣಯ ತೆಗೆದುಕೊಳ್ಳುವ ಶಕ್ತಿ ಎಂದೋ ಕಳೆದುಕೊಂಡಿ ದ್ದರು. ಪಶ್ಚಿಮ ಮತ್ತು ಪೂರ್ವ ಪಾಕಿಸ್ತಾನವು ಭೌಗೋಳಿಕವಾಗಿ 1200 ಕಿ.ಮೀ. ಅಂತರದಲ್ಲಿದ್ದವು. ಒಂದೆಡೆ ಉರ್ದು ಭಾಷೆಯಾದರೆ ಮತ್ತೊಂದೆಡೆ ಬಂಗಾಲಿ ಮಾತೃಭಾಷೆಯಾಗಿತ್ತು. ಮಾನಸಿಕವಾಗಿ ಈ ಎರಡೂ ಭಾಗಗಳು ಒಂದಾಗದ ಕಾರಣ ರಾಜಕೀಯ ಅಸ್ಥಿರತೆ ಉಂಟಾಗಿ ಶೇಖ್ ಮುಜೀಬುರ್ ರೆಹಮಾನ್ ನೇತೃತ್ವದಲ್ಲಿ ಪ್ರತ್ಯೇಕ ರಾಷ್ಟ್ರದ ಹೋರಾಟ ಆರಂಭವಾಗಿತ್ತು.

ಬಾಂಗ್ಲಾ ವಿಮೋಚನೆಗಾಗಿ ಹೋರಾಡುತ್ತಿದ್ದ ‘ಬಾಂಗ್ಲಾ ಮುಕ್ತಿ ವಾಹಿನಿ’ಗೆ ಭಾರತ ಪರೋಕ್ಷವಾಗಿ ಯುದ್ಧ ತರಬೇತಿಯಿಂದ ಮೊದಲು ಗೊಂಡು ಹಣಕಾಸು ನೆರವು ಸಹಿತ ಸಹಾಯ ಹಸ್ತ ಚಾಚಿತ್ತು. ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಬಂಡಾಯ ತೀವ್ರವಾದಾಗ, ಪಾಕಿಸ್ತಾನ, ಬಂಡಾಯವನ್ನು ಅಡಗಿಸುವ ನೆವ ದಲ್ಲಿ ಭಾರತದ ಮೇಲೆ ಅಪ್ರಚೋದಿತ ದಾಳಿ ಮಾಡಿತು.

ಭಾರತ ಅನಿವಾರ್ಯವಾಗಿ ಡಿಸೆಂಬರ್ 3, 1971 ರಲ್ಲಿ ಕದನದ ಕಣಕ್ಕೆ ಧುಮುಕಬೇಕಾಯಿತು. ಭಾರತದ ಸೈನಿಕರ ಪರಾಕ್ರಮದ ಮುಂದೆ ತತ್ತರಿಸಿ ಹೋದ ಪಾಕಿಸ್ತಾನ, ಕೇವಲ 13 ದಿನಗಳಲ್ಲಿ, ಡಿಸೆಂಬರ್ 16ರಂದು ಏಕಪಕ್ಷೀಯವಾಗಿ ಯುದ್ಧ ವಿರಾಮ ಘೋಷಿಸಿ, ಲೆ. ಜ. ಎಎಕೆ ನಿಯಾಜಿರವರ ನೇತೃತ್ವದ 93 ಸಾವಿರ ಸೈನಿಕರನ್ನೊಳಗೊಂಡ ಇಡೀ ಸೇನೆ ಭಾರತಕ್ಕೆ ಶರಣಾಯಿತು. ಭಾರತಕ್ಕೆ ಇದೊಂದು ಐತಿಹಾಸಿಕ ಕ್ಷಣವಾಗಿತ್ತು. ತನ್ನ ಬದ್ಧ ವೈರಿಯನ್ನು ಯುದ್ಧದಲ್ಲಿ ಮಣಿಸಿ ಶರಣಾಗುವಂತೆ ಮಾಡುವ ಮೂಲಕ ಭಾರತೀಯ ಸೇನೆ ಇತಿಹಾಸವನ್ನು ಬರೆದಿತ್ತು. ಪೂರ್ವ ಪಾಕಿಸ್ತಾನದಲ್ಲಿ ಸಂಪೂರ್ಣ ಸೋಲು ಮತ್ತು ಪಶ್ಚಿಮ ಪಾಕಿಸ್ತಾನದಲ್ಲಿ 15000 ಚದರಡಿ ಭೂ ಭಾಗವು ಭಾರತದ ವಶವಾಗಿತ್ತು.

ಯುದ್ಧದಲ್ಲಿ ೩೦೦೦ ಭಾರತೀಯ ಸೈನಿಕರ ಪ್ರಾಣಾರ್ಪಣೆಯಾಗಿತ್ತು ಮತ್ತು ೧೨,೦೦೦ ಯೋಧರು ಗಾಯಗೊಂಡಿದ್ದರು. ಕೊನೆಗೂ ೧೯೭೧ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಉದಯವಾಯಿತು. ಭಾರತ ದೇಶವಿಡೀ ಮತ್ತೊಮ್ಮೆ ಸ್ವಾತಂತ್ರ್ಯ ಬಂದ ಹಾಗೆ ಸಂಭ್ರಮಿಸಿತು. ಸೋನಾರ್ ಬಂಗ್ಲಾ ಉದಯವಾಯಿತು ಎಂದು ಜನತೆ ಕುಣಿದು ಕುಪ್ಪಳಿಸಿತು. ಆದರೆ, ವಿಜಯದ ಅಮಲಿನಲ್ಲಿದ್ದ ರಾಷ್ಟ್ರವು ಲಕ್ಷಾಂತರ
ಹಿಂದುಗಳು ಇದಕ್ಕಾಗಿ ತೆರಬೇಕಾಗಿದ್ದ ದುಬಾರಿ ಬೆಲೆಯ ಬಗ್ಗೆ ಮರೆತೇ ಹೋಗಿತ್ತು. ಬಾಂಗ್ಲಾ ವಿಮೋಚನೆಯ ಹೋರಾಟದಲ್ಲಿ ಪಾಕಿಸ್ತಾನ ಮತ್ತು ಇಸ್ಲಾಮಿಕ್ ಮೂಲಭೂತವಾದಿಗಳ ಕ್ರೂರ ದೃಷ್ಟಿಗೆ ಒಳಗಾಗಿ ೫೦ಲಕ್ಷಕ್ಕೂ ಹೆಚ್ಚು ಹಿಂದುಗಳು ಮತ್ತೊಮ್ಮೆ ನಿರ್ಗತಿಕರಾಗಿ ಭಾರತಕ್ಕೆ ಬರಬೇಕಾ ಯಿತು.

ಸಾವಿರಾರು ಹಿಂದೂಗಳ ಮಾರಣ ಹೋ ಮ ನಡೆದು ಹೋಯಿತು. ಲಕ್ಷಾಂತರ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ, ಅಪಹರಣ, ಬಲವಂತದ ಮತಾಂತರ ಆಗಿತ್ತು. ಅಂದಾಜು ೪ಲಕ್ಷಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ವರದಿಯಾಗಿದೆ.
ನಿರ್ಗತಿಕರಾಗಿ ನೊಂದು ಬೆಂದು ಬಸವಳಿದು ಬಂದಿದ್ದಂತ ನಿರಾಶ್ರಿತರಿಗೆ ಬದುಕು ಕಟ್ಟಿಕೊಡಲು ಗಟ್ಚಿಯಾದ ನಿರ್ಧಾರ ಕೈಗೊಳ್ಳಲು ಇಂದಿರಾಗಾಂಧಿ ವಿಫಲರಾಗಿದ್ದರು.

ಕೇವಲ ತಮ್ಮ ವರ್ಚಸ್ಸನ್ನು ವೃದ್ಧಿ ಪಡಿಸಿಕೊಳ್ಳಲು ಮತ್ತು ಪಾಕಿಸ್ತಾನದಲ್ಲಿ ಬಂಧನದಲ್ಲಿದ್ದ ಶೇಖ್ ಮುಜಿಬುರ್ ರೆಹಮಾನ್ ಅವರನ್ನು ಬಂಗ್ಲಾದೇಶಕ್ಕೆ ವಾಪಸ್ ಕರೆತರುವ ಆತುರದಲ್ಲಿ ಮಾತ್ರ ಅವರು ಇದ್ದರು. ೧೯೭೧ರಲ್ಲಿ ಅಂದಾಜು ೮೦ಲಕ್ಷ ನಿರಾಶ್ರಿತರು ಭಾರತದಲ್ಲಿ ಆಶ್ರಯ ಪಡೆದಿದ್ದರು. ಅಂದಿನ ವಿದೇಶಾಂಗ ಸಚಿವ ಸ್ವರ್ಣಸಿಂಗ್ ಅವರು ಅನೇಕ ದೇಶಗಳಿಗೆ ಭೇಟಿ ನೀಡಿ ಸಹಾಯ ಕೋರಿದರಾದರೂ ಒಬ್ಬರು ಕೂಡ ಭಾರತದ ಸಹಾಯಕ್ಕೆ ನಿಲ್ಲಲಿಲ್ಲ ಎಂಬುದು ದುರದೃಷ್ಟಕರ. ನಮ್ಮ ಗಾಢ ಸ್ನೇಹಿತ ಸೋವಿ
ಯತ್ ರಷ್ಯ ಕೂಡ ಕೇವಲ ನೈತಿಕ ಬೆಂಬಲವನ್ನು ಮಾತ್ರ ಘೋಷಿಸಿತ್ತು.

ಹಾಗೆ ನೋಡಿದರೆ, ೧೯೭೧ರ ಯುದ್ಧದ ಗೆಲುವು ಉಭಯ ದೇಶಗಳ ನಡುವೆ ಇದ್ದ ಹಲವಾರು ವಿವಾದ ಮತ್ತು ಗಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಒದಗಿದ್ದ ಸುವರ್ಣಾವಕಾಶವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಿಮ್ಲಾದಲ್ಲಿ ಶಾಂತಿ ಮಾತುಕತೆಯೂ ಆರಂಭವಾಯಿತು. ಆಗಸ್ಟ್ ೨, ೧೯೭೨ರಂದು ಸಿಮ್ಲಾ ಒಪ್ಪಂದಕ್ಕೆ ಸಹಿಯಾಗಿ ವಿವರಗಳು ಬಯಲಾದಾಗ
ಯುದ್ದಭೂಮಿಯಲ್ಲಿ ಗೆದ್ದಿದ್ದ ಭಾರತ ಸಂಧಾನದ ಮೇಜಿನಲ್ಲಿ ಸೋತಿದ್ದು ಸ್ಪಷ್ಟವಾಗಿತ್ತು. ದೊರೆತ ಅವಕಾಶವನ್ನು ತನ್ನ ಹಿತ ಕಾಪಾಡಲು ಬಳಸಿಕೊಳ್ಳುವಲ್ಲಿ ವಿ-ಲವಾಗಿತ್ತು ಭಾರತ. ಆದರೆ, ಯುದ್ಧದಲ್ಲಿ ಸೋತು ನೆಲಕಚ್ಚಿದ್ದ ಪಾಕಿಸ್ತಾನ ಸಂಧಾನವನ್ನು ವೇದಿಕೆ ಮಾಡಿಕೊಂಡು ತನ್ನ ಅನುಕೂಲಕ್ಕೆ ತಕ್ಕ ಹಾಗೆ ಒಪ್ಪಂದ ಮಾಡಿಕೊಳ್ಳಲು ಯಶಸ್ವಿಯಾಗಿ ಗೆದ್ದು ಬೀಗಿದ್ದು ಕಟು ಸತ್ಯ.

ಶರಣಾಗಿದ್ದ ಪಾಕಿಸ್ತಾನಿ ಸೈನಿಕರನ್ನು ಆಗಸ್ಟ್ ೨, ೧೯೭೨ ಸಿಮ್ಲಾ ಒಪ್ಪಂದ ಸಹಿ ಮಾಡಿದ ತರುವಾಯ ಬಿಡುಗಡೆ ಮಾಡಲಾಯಿತು. ಇದರೊಂದಿಗೆ ಪಾಕಿಸ್ತಾನದೊಂದಿಗೆ ಇದ್ದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ದೊರೆತಿದ್ದ ಬಹುದೊಡ್ಡ ಅವಕಾಶವನ್ನು ಕೈಚೆಲ್ಲ ಲಾಯಿತು. ನಮ್ಮ ಉದಾರತೆಯ ಅತಿರೇಕವು ಹೇಗಿರುತ್ತದೆಯೆಂದರೆ ಪಾಕಿಸ್ತಾನದ ಶರಣಾದ ೯೩,೦೦೦ ಸೈನಿಕರಿಗೆ ಇಂದಿರಾ ಗಾಂಽಯವರು ಜಿನಿವಾ ಒಪ್ಪಂದ ಪ್ರಕಾರ ನೀಡಬೇಕಾಗಿದ್ದ ಸೌಕರ್ಯಕ್ಕಿಂತ ಹೆಚ್ಚಿನ ಸೌಕರ್ಯ ನೀಡಿ ಬೀಳ್ಕೊಟ್ಟರು. ನಮ್ಮ
ಸೈನಿಕರ ಸಾವಿಗೆ ಕಾರಣರಾಗಿದ್ದವರಿಗೆ ವಿಶೇಷ ಮಮಕಾರ ತೋರಿಸಿದ್ದರು ಇಂದಿರಾ.

ಪಾಕಿಸ್ತಾನವನ್ನು ತನ್ನಿಷ್ಟದ ಹಾಗೆ ಬಗ್ಗಿಸಲು ಸಂಪೂರ್ಣ ಅವಕಾಶವಿದ್ದರು ಭಾರತ ಅದನ್ನು ಬಳಸಲು ಮುಂದಾಗದಿದ್ದುದು ದುರಂತ. ಕಾಶ್ಮೀರದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಕಾಶವನ್ನೂ ಕೈಚೆಲ್ಲಿದ್ದಕ್ಕಿಂತ ದುರದೃಷ್ಟ ಇನ್ನೊಂದಿಲ್ಲ. ಡಿಸೆಂಬರ್, ೧೯೭೧ ರಂದು ಗುರುತಿಸಿದ ನಿಯಂತ್ರಣ ರೇಖೆಯನ್ನು ಉಭಯ ದೇಶಗಳು ಮಾನ್ಯ ಮಾಡುತ್ತದೆ ಮತ್ತು ಯಾವುದೇ ಕಾರಣಕ್ಕೂ ಅದನ್ನು ಏಕಪಕ್ಷೀಯವಾಗಿ ವಿಸ್ತರಿಸಬಾರದು ಎಂದು ಒಪ್ಪಿಕೊಂಡು ಕಾಶ್ಮೀರ ಸಮಸ್ಯೆಯನ್ನು ಜೀವಂತವಾಗಿ ಇಡುವ ಮೂರ್ಖ
ನಿರ್ಧಾರ ಕೈಗೊಳ್ಳಲಾಯಿತು. ಇದರ ಪರಿಣಾಮವೇ ಕಳೆದ ೫೦ ವರ್ಷದಲ್ಲಿ ಸಾವಿರಾರು ನಾಗರಿಕರು ಮತ್ತು ಭದ್ರತಾ ಪಡೆಯವರು ಬಲಿಯಾಗಿzರೆ ಮತ್ತು ಇಂದಿಗೂ ಕಾಶ್ಮೀರದ ಸಮಸ್ಯೆ ದೇಶಕ್ಕೆ ದುಬಾರಿಯಾಗಿ ಪರಿಣಿಸಿದೆ.

ನಮ್ಮ ಯೋಧರು ವಶಪಡಿಸಿಕೊಂಡಿದ್ದ ೧೫,೦೦೦ ಚದರ ಕಿಮೀ ಭೂಭಾಗವನ್ನು ಹಿಂದಿರುಗಿಸಲು ನಮ್ಮ ಗಡಿ ಸುರಕ್ಷತೆ ಮತ್ತು ಭವಿಷ್ಯದ ಸವಾಲುಗಳು ಆಧಾರವಾಗ ಬೇಕಿತ್ತು. ಆದರೆ ಇಂದಿರಾ ಗಾಂಽಯವರಿಗೆ ದೂರದೃಷ್ಟಿ ಕೊರತೆಯೊ ಅಥವಾ ಗಟ್ಟಿ ನಿಲುವು ತಳೆಯುವಲ್ಲಿನ ಹಿಂಜರಿಕೆಯೋ, ದುರ್ಬಲತೆಯಿಂದ ಕಾರಣಕ್ಕೊ ಅನಾಯಾಸವಾಗಿ ಗೆದ್ದ ಭೂಭಾಗ ಮತ್ತೆ ಪಾಕಿಸ್ತಾನದ ಪಾಲು
ಮಾಡಿಬಿಟ್ಟರು.

ಶರಣಾದ ಸೈನಿಕರನ್ನು ಬಿಡುವ ಮುನ್ನ ಪಾಕಿಸ್ತಾನದ ಸೆರೆಯಲ್ಲಿ ಬಂದಿಗಳಾಗಿರುವ ಭಾರತೀಯ ಸೈನಿಕರ ಬಿಡುಗಡೆ ಮಾಡುವ ಷರತ್ತು ವಿಽಸಬೇಕಿತ್ತು ಎನ್ನುತ್ತಾರೆ ಬ್ರಿಗೇಡಿಯರ್ (ನಿ) ಎಚ್.ಎಸ್. ಘುಮಾನ್. ಭಾರತ ತನ್ನ ೫೪ ಸೈನಿಕರನ್ನು ಪಾಕಿಸ್ತಾನದ ಸೆರೆಯಿಂದ ಕರತರುವ ಪ್ರಯತ್ನವನ್ನೇ ಮಾಡದೆ ಪಾಕಿಸ್ತಾನದ ೯೩ ಸಾವಿರ ಸೈನಿಕರನ್ನು ಬಿಡುಗಡೆ ಮಾಡಿತ್ತು. ಪಾಕಿಸ್ತಾನ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿದ ಕೂಡಲೇ ಭಾರತ ಕೂಡ ಯುದ್ಧ ನಿಲ್ಲಿಸಿತ್ತು. ಅದರ ಬದಲು, ಯುದ್ಧ ಮುಂದುವರಿಸಿದ್ದರೆ ಭಾರತ, ಪಾಕಿಸ್ತಾನ ದೊಂದಿಗಿನ ತನ್ನೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಿತ್ತು. ಗುರಿ ಸಾಽಸುವವರೆಗೂ ಯುದ್ಧ  ನಿಲ್ಲಿಸಬಾರದಿತ್ತು ಎಂದು ವಾಜಪೇಯಿಯವರು ಆಗ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇಂದಿರಾ ಗಾಂಽಯವರು ಪಾಕಿಸ್ತಾನವನ್ನು ಎರಡು ಮಾಡಿ ದುರ್ಬಲ ಮಾಡಿದರು ಎನ್ನುತ್ತಾರೆ. ಆದರೆ, ನಿಜವಾಗಿ ಬಾಂಗ್ಲಾದೇಶದ ನುಸುಳುಕೋರರು ಅಕ್ರಮವಾಗಿ ಭಾರತಕ್ಕೆ ಬಂದು ಇಲ್ಲಿನ ಜನಂಖ್ಯೆಯ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿzರೆ. ಬಾಂಗ್ಲಾ ಭಯೋತ್ಪಾದಕರು ನಮ್ಮ ದೇಶದ ಭದ್ರತೆಗೆ ಸವಾಲಾಗಿzರೆ.

ಬಾಂಗ್ಲಾದಲ್ಲಿ ಹಿಂದುಗಳಿಗೆ ಕಿರುಕುಳ ಮತ್ತು ಮಂದಿರಗಳ ಮೇಲೆ ದಾಳಿ ಮಾಡುವುದು ನಿಂತಿಲ್ಲ. ಎರಡು ಮಾಡಿದರೂ ಭಾರತಕ್ಕೆ ತಲೆನೋವೇನು ಕಡಿಮೆಯಾಗಿಲ್ಲ, ಬದಲಾಗಿ ಸಮಸ್ಯೆ ಎರಡಾಗಿದೆ ಎಂಬುದನ್ನು ಕಾಂಗ್ರೆಸ್ ನಾಯಕರಿಗೆ ತಿಳಿಸಬೇಕಾಗಿದೆ. ಪ್ರಾಯಶಃ ಡೋಂಗಿ ಜಾತ್ಯತೀತವಾದಕ್ಕೆ ಜೋತು ಬಿದ್ದಿದ್ದ ಆಗಿನ ಕೇಂದ್ರ ಸರಕಾರ, ಪಾಕಿಸ್ತಾನದೊಂದಿಗೆ ಕಠಿಣ ನಿಲುವು ತಾಳಲು ಹಿಂಜರಿದು ದೇಶದ ಹಿತವನ್ನು ಸುಲಭವಾಗಿ ರಾಜಿ ಮಾಡಿಕೊಂಡ ಕರಾಳ ಇತಿಹಾಸವನ್ನು ಎಂದಿಗೂ ಮರೆಯಲಾಗದು.