ಒತ್ತಡ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕೆಡಿಸುತ್ತದೆ
- ರಾಜೇಂದ್ರ ಭಟ್ ಕೆ.
STRESS ಅಂದರೆ ಒತ್ತಡ ಎಂದು ಅರ್ಥ. ಅದು ಮಾನಸಿಕ ಅಥವಾ ದೈಹಿಕ ಒತ್ತಡ ಆಗಿರಬಹುದು. ಎರಡೂ ಅಪಾಯಕಾರಿ ವಿದ್ಯಮಾನಗಳು. ಅದರಲ್ಲಿಯೂ ಮಾನಸಿಕ ಒತ್ತಡ ನಮ್ಮನ್ನು ಹೆಚ್ಚು ಬಳಲಿಸುತ್ತದೆ. ಇದು ನಮ್ಮಲ್ಲಿ ನೂರಾರು ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. (Stress relief)
ನಿದ್ರಾಹೀನತೆ, ತೀವ್ರ ಬಳಲಿಕೆ, ಪದೇ ಪದೇ ಕೋಪ ಬರುವುದು, ಏಕಾಗ್ರತೆಯ ಕೊರತೆ, ಕೆಲಸದಲ್ಲಿ ಆಸಕ್ತಿ ಇಲ್ಲದಿರುವುದು, ಕುತ್ತಿಗೆ ಮತ್ತು ಭುಜದ ನೋವು, ತೀವ್ರ ತಲೆನೋವು, ಉದಾಸೀನತೆ, ಅಭದ್ರತೆಯ ಭಾವನೆ, ಆಹಾರ ಜೀರ್ಣ ಆಗದಿರುವುದು, ಉದಾಸೀನ ಇವುಗಳು ನಿಮ್ಮಲ್ಲಿ ತೀವ್ರವಾಗಿವೆ ಎಂದರೆ ನೀವು ಯಾವುದೋ ಮಾನಸಿಕ ಒತ್ತಡದಲ್ಲಿ ಇದ್ದೀರಿ ಎಂದು ಖಚಿತವಾಗಿ ಹೇಳಬಹುದು. ಈ ಮಾನಸಿಕ ಒತ್ತಡವು ನಿಮ್ಮಲ್ಲಿ ಅಕಾಲಿಕ ವೃದ್ಧಾಪ್ಯವನ್ನು ಉಂಟುಮಾಡುವುದು ಮಾತ್ರವಲ್ಲ ನಿಮ್ಮ ಆಯಸ್ಸನ್ನೂ ಆಪೋಶನ ಮಾಡುತ್ತದೆ ಅನ್ನುತ್ತದೆ ವಿಜ್ಞಾನ. ಆದ್ದರಿಂದ ನೀವು ಮಾನಸಿಕ ಒತ್ತಡದಿಂದ ಹೊರಬರುವ ತುರ್ತು ಅಗತ್ಯ ಇದೆ.
ಇಲ್ಲಿವೆ ತಜ್ಞರು ಸೂಚಿಸಿದ 30 ಪರಿಹಾರ ಮಾರ್ಗಗಳು
1) ನಿಮ್ಮ ಮಿತಿಯನ್ನು ಮೀರಿ ಹೆಚ್ಚು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಡಿ. ಎಲ್ಲಿ ನೋ ಹೇಳಬೇಕೋ ಅಲ್ಲಿ ನೋ ಹೇಳುವುದನ್ನು ಕಲಿಯಿರಿ.
2) ನೀವು ನಿಮ್ಮ ಬಾಸ್, ನಿಮ್ಮ ಹೆಂಡತಿ, ನಿಮ್ಮ ಗಂಡ, ನಿಮ್ಮ ಮಕ್ಕಳು ಯಾರನ್ನೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಬದಲಾಗಬೇಕಾದದ್ದು ನೀವು ಮಾತ್ರ!
3) ನಿಮ್ಮ ಯೋಚನೆಗಳನ್ನು ಮಾನಿಟರ್ ಮಾಡಲು ಕಲಿಯಿರಿ. ನೆಗೆಟಿವ್ ಯೋಚನೆಗಳು ಮನಸನ್ನು ಪ್ರವೇಶಿಸದ ಹಾಗೆ ನೋಡಿಕೊಳ್ಳಿ.
4) ಪ್ರಶಾಂತವಾದ ನಿದ್ದೆ ನಿಮ್ಮನ್ನು ಒತ್ತಡದಿಂದ ರಿಲಾಕ್ಸ್ ಮಾಡುತ್ತದೆ. ಏನೇ ತೊಂದರೆ ಆದರೂ ನಿದ್ದೆ ಬಿಟ್ಟು ಕೆಲಸ ಮಾಡಬೇಡಿ.
5) ಸಮಯವನ್ನು ಸರಿಯಾಗಿ ಪ್ಲಾನ್ ಮಾಡಿಕೊಂಡರೆ ಒತ್ತಡವು ಕಡಿಮೆ ಆಗುತ್ತದೆ.
6) ಹಾಸ್ಯ ಪ್ರವೃತ್ತಿಯು ಇದ್ದವರು ಕಡಿಮೆ ಒತ್ತಡವನ್ನು ಫೀಲ್ ಮಾಡುತ್ತಾರೆ. ಹೆಚ್ಚು ಗಂಭೀರವಾಗಿ ಇರುವವರು ಹೆಚ್ಚು ಒತ್ತಡವನ್ನು ಫೀಲ್ ಮಾಡುತ್ತಾರೆ. ಆಯ್ಕೆ ನಿಮ್ಮದು.
7) ಮೌನ ಪ್ರಾರ್ಥನೆಯಲ್ಲಿ ಅದ್ಭುತ ಪವರ್ ಇರುತ್ತದೆ. ಬೆಳಿಗ್ಗೆ ಮತ್ತು ರಾತ್ರಿ 10 -15 ನಿಮಿಷ ಪ್ರಾರ್ಥನೆಯನ್ನು ಮಾಡುವುದರಿಂದ ಒತ್ತಡವು ಕಡಿಮೆ ಆಗುತ್ತದೆ.
8) ಒಬ್ಬಂಟಿಯಾಗಿ ಇರುವುದನ್ನು ಅವಾಯ್ಡ್ ಮಾಡಿ. ಸಾಧ್ಯವಾದಷ್ಟು ಒಳ್ಳೆಯ ವ್ಯಕ್ತಿಗಳ ನಡುವೆ ಇರುವುದನ್ನು ಖಾತರಿ ಮಾಡಿಕೊಳ್ಳಿ.
9) ಹೆಚ್ಚು ಕಾಫೀ,ಟೀ ಅಥವಾ ಕೋಲಾ ಕುಡಿಯುವುದರಿಂದ ನಮ್ಮ ಆಂತರಿಕ ಒತ್ತಡ ಹೆಚ್ಚುತ್ತದೆ.
10) ದಿನಕ್ಕೆ 15 ನಿಮಿಷ ಯೋಗ/ ಪ್ರಾಣಾಯಾಮ/ ಮೌನ ಪ್ರಾರ್ಥನೆ ಯಾವುದಾದರೂ ಒಂದನ್ನು ಮಾಡಿ.
11) ಆಫೀಸಿನ ಕೆಲಸವನ್ನು ಆಫೀಸಿನಲ್ಲಿಯೇ ಮಾಡಿ. ಅವುಗಳನ್ನು ಮನೆಗೆ ತೆಗೆದುಕೊಂಡು ಬರಬೇಡಿ.
12) ಒಳ್ಳೆಯ ಸ್ನೇಹಿತರನ್ನು ಹೊಂದುವುದರಿಂದ, ಅವರ ಜೊತೆ ಮನಸು ಬಿಚ್ಚಿ ಮಾತನಾಡುವುದರಿಂದ ನಮಗೆ ಭಾವನಾತ್ಮಕ ಬೆಂಬಲ ದೊರೆಯುತ್ತದೆ ಮತ್ತು ಒತ್ತಡ ಕಡಿಮೆ ಆಗುತ್ತದೆ.
13) ವಾಸ್ತವಕ್ಕೆ ಸಮೀಪವಾದ ಗುರಿಗಳನ್ನು ಹೊಂದಿರಿ, ಅವುಗಳನ್ನು ಬರೆದಿಡಿ ಮತ್ತು ಹಂತ ಹಂತವಾಗಿ ಅವುಗಳ ಪೂರೈಕೆಗೆ ಶ್ರಮವಹಿಸಿ.
14) ಅತಿಯಾಗಿ ವರ್ಕ್ ಹೋಲಿಕ್ ಆಗಬೇಡಿ. ಅದು ನಿಮ್ಮ ಆಂತರಿಕ ಶಕ್ತಿಗಳನ್ನು ಖಾಲಿ ಮಾಡುತ್ತದೆ.
15) ನಿಮ್ಮ ಮನರಂಜನಾ ಮಾಧ್ಯಮ ಯಾವುದು ಎಂದು ಆಯ್ಕೆ ಮಾಡಿ. ಸಿನೆಮಾ, ಕ್ರಿಕೆಟ್, ಟಿವಿ ವೀಕ್ಷಣೆ, ಪುಸ್ತಕ ಓದುವುದು, ಟ್ರಾವೆಲಿಂಗ್ ಇತ್ಯಾದಿ. ದಿನಕ್ಕೆ ಕನಿಷ್ಠ 30 ನಿಮಿಷ ಅಥವಾ ವಾರಕ್ಕೆ ಕನಿಷ್ಠ 6 ಘಂಟೆ ಅದಕ್ಕಾಗಿ ಮೀಸಲಾಗಿರಿಸಿ.
16) ಸಂಗೀತಕ್ಕೆ ನಮ್ಮ ಮನಸನ್ನು ತಣಿಸುವ ಶಕ್ತಿ ( SOOTHING) ಇದೆ. ಅದರಲ್ಲಿಯೂ ವೀಣೆ, ಸಿತಾರ್, ಕೊಳಲು ಮೊದಲಾದ ಸಂಗೀತಗಳು ನಮ್ಮ ಒತ್ತಡವನ್ನು ಪೂರ್ತಿಯಾಗಿ ನಿವಾರಿಸುತ್ತವೆ.
17) ನಿಮ್ಮ TEEMನಲ್ಲಿ ನಂಬಿಕೆ ಇಡಿ ಮತ್ತು ಕೆಲಸವನ್ನು ಹಂಚುವುದನ್ನು ಕಲಿಯಿರಿ. ಎಲ್ಲವನ್ನೂ ತಲೆಯ ಮೇಲೆ ಹೊತ್ತುಕೊಂಡು ಮಾಡಲು ಹೊರಡಬೇಡಿ.
18) ಬಿಡುವಿನ ಅವಧಿಯ ಒಳ್ಳೆಯ ಹವ್ಯಾಸಗಳು (ತೋಟಗಾರಿಕೆ, ಬರೆಯುವುದು, ಓದುವುದು ಇತ್ಯಾದಿ) ನಿಮ್ಮನ್ನು ಒಳಗಿನಿಂದ ಬಲಿಷ್ಠ ಮಾಡುತ್ತವೆ. ಸುಡೊಕು ಅಥವಾ ಪದಬಂಧ ಬಿಡಿಸುವುದು ಕೂಡ ಆದೀತು.
19) ಮೊಬೈಲ್ ಬಳಕೆ ಅಡಿಕ್ಷನ್ ಹಂತಕ್ಕೆ ಹೋಗದ ಹಾಗೆ ನೋಡಿಕೊಳ್ಳಿ. ಅದನ್ನು ಆದಷ್ಟು ಕಡಿಮೆ ಬಳಕೆ ಮಾಡಿ. ಹಾಗೆಯೇ ಹಿಂಸಾತ್ಮಕ ದೃಶ್ಯಗಳು ಹೆಚ್ಚು ಇರುವ ಸಿನೆಮಾ, ಧಾರಾವಾಹಿ, ನ್ಯೂಸ್ ಚಾನೆಲ್ ನೋಡುವುದನ್ನು ಆದಷ್ಟು ಕಡಿಮೆ ಮಾಡಿ.
20) ಹಸಿರು ಪರಿಸರದಲ್ಲಿ ಹಸಿರು ಹುಲ್ಲಿನ ಮೇಲೆ ಬೆಳಿಗ್ಗೆ ಅಥವಾ ಸಂಜೆ 20 ನಿಮಿಷ ವಾಕ್ ಮಾಡಿ.
21) ನಿಮ್ಮ ಕೆಲಸಗಳಲ್ಲಿ ಯಾವುದು ನಿಮಗೆ ಖುಷಿ ಕೊಡ್ತಾ ಇಲ್ಲ ಅವುಗಳನ್ನು ಕಡಿಮೆ ಮಾಡಿ. ಇಲ್ಲಿ ಉದಾಹರಣೆ ಕೊಡಲು ಹೋಗುವುದಿಲ್ಲ.
22) ಒಂದು ಬಾರಿಗೆ ಒಂದೇ ಜವಾಬ್ದಾರಿ ಆರಿಸಿಕೊಳ್ಳಿ. ಅದು ಮುಗಿದ ಮೇಲೆ ಇನ್ನೊಂದಕ್ಕೆ ಶಿಫ್ಟ್ ಆಗಿ.
23) ನಿಮ್ಮ ಮಿತಿಯನ್ನು ಮೀರಿ ಯಾರಿಗೂ ಪ್ರಾಮಿಸ್ ಕೊಡಬೇಡಿ. ಅದನ್ನು ಮುಂದೆ ನಿಭಾಯಿಸಲು ಆಗದೆ ಒದ್ದಾಟ ಆಗಬಹುದು.
24) ನೆಗೆಟಿವ್ ವ್ಯಕ್ತಿಗಳು ಮತ್ತು ನೆಗೆಟಿವ್ ವಿಚಾರಗಳಿಂದ ದೂರ ಇರಿ.
25) ನಿಮ್ಮ ಸಾಮರ್ಥ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಅದೇ ರೀತಿಯಾಗಿ ನಿಮ್ಮ ಪರಿಮಿತಿಗಳನ್ನು ( ಲಿಮಿಟೇಷನ್ಸ್) ಕೂಡ ಅರ್ಥ ಮಾಡಿಕೊಳ್ಳಿ.
26) ಅತಿಯಾಗಿ ಆತಂಕ ತರುವ ಕೆಲಸಗಳನ್ನು ಸಾಧ್ಯವಾದಷ್ಟು ದೂರ ಇಡಿ. ಏಕತಾನತೆಯ ಕೆಲಸಗಳನ್ನು ಅವಾಯ್ಡ್ ಮಾಡಿ.
27) ಯಾರೊಂದಿಗೂ ಸ್ಪರ್ಧೆಗೆ ಇಳಿಯುವುದು ಬೇಡ. ನೀವು ಅನನ್ಯ ವ್ಯಕ್ತಿ ( UNIQUE PERSON) ಎಂಬುದನ್ನು ಒಪ್ಪಿ.
28) ಉತ್ತಮ ಹಣಕಾಸು ನಿರ್ವಹಣೆಯು ನಿಮ್ಮ ಅನೇಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ.
29) ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
30) ಮಕ್ಕಳ ಜೊತೆ ಆಟವನ್ನು ಆಡುವುದರಿಂದ ನಿಮ್ಮ ಹಲವು ಒತ್ತಡಗಳನ್ನು ನಿವಾರಣೆ ಮಾಡಬಹುದು.
ಒತ್ತಡವಿಲ್ಲದ ಬಂಗಾರದ ಬದುಕು ನಿಮ್ಮದಾಗಲಿ.
ಇದನ್ನೂ ಓದಿ: Vidya Balan: ಸ್ಫೂರ್ತಿಪಥ ಅಂಕಣ: ‘ಬೆಂಕಿಯಲ್ಲಿ ಅರಳಿದ ಹೂವು’ ಬಾಲಿವುಡ್ ನಟಿ ವಿದ್ಯಾ ಬಾಲನ್