Thursday, 12th December 2024

ದಿನಕ್ಕೊಂದರಂತೆ 365 ಗುಳಿಗೆ ಬರ್ಕೊಟ್ಟ ಇವ್ರು ಡಾಕ್ಟ್ರಲ್ಲ !

ತಿಳಿರು ತೋರಣ

srivathsajoshi@yahoo.com

ಮನಸ್ಸೆಂಬ ಮರ್ಕಟಕ್ಕೆ ಮಾತಿನ ರೂಪದ ಗುಳಿಗೆಗಳ ಸಂಗ್ರಹವೇ ಈ ಪುಸ್ತಕ. ನಿಮ್ಮ ಮನಸ್ಸಿಗೆ ಬೇಸರವಾದಾಗ, ಉತ್ಸಾಹ ಕುಗ್ಗಿದಾಗ, ಸೋತು ಸುಣ್ಣವಾದಾಗ ಈ ಒಳ್ಳೆಯ ಮಾತಿನ ಗುಳಿಗೆಯೊಂದನ್ನು ಹಾಕಿಕೊಳ್ಳಿ. ಒಳ್ಳೆಯ ಫಲಿತಾಂಶ ಗ್ಯಾರಂಟಿ!’ ಅಂದರೆ, ತನುವೆಂಬ ಭಾಂಡವ ತೊಳೆದು ಕೆಟ್ಟ ಮನದ ಚಂಚಲವೆಂಬ ಮುಸುರೆಯ ಕಳೆದು … ಎಂದು ಪುರಂದರ ದಾಸರು ಹೇಳಿದ್ದು ಇದನ್ನೇ ಅಂತಾಯ್ತಲ್ಲ!

ಅನುಭವದಡುಗೆಯ ಮಾಡಿ ಅದಕ್ಕನುಭವಿಗಳು ಬಂದು ನೀವೆಲ್ಲ ಕೂಡಿ… ಎಂದಿದ್ದಾರೆ ಪುರಂದರ ದಾಸರು. ಅನುಭವದಡುಗೆ ಅಂದರೆ ಅಡುಗೆ ಮಾಡಿ ಅನುಭವವಿದೆ ಎಂಬ ಸೀಮಿತ ಅರ್ಥ ಅಲ್ಲ. ಆ ಅನುಭವವೂ ಇರಬೇಕು ನಿಜ, ಆದರೆ ಇಲ್ಲಿ ಅನುಭವ ದಡುಗೆ ಎಂದಿದ್ದು ಜೀವನಾನುಭವದ ಬಗ್ಗೆ. ಅಂತಹ ಅಡುಗೆ ತುಂಬ ಸತ್ತ್ವಯುತವಷ್ಟೇ ಅಲ್ಲ ಪುಷ್ಟಿಕರವೂ ಆಗಿರುತ್ತದೆ.

ಬೇಕಿದ್ದರೆ ಗಮನಿಸಿ: ಯಾರೋ ಒಬ್ಬರು ಬರೆದ ಒಂದು ಅನುಭವಕಥನವನ್ನೂ ಮತ್ತು ಇನ್ನ್ಯಾರೋ ಒಬ್ಬರು ಬರೆದ ಒಂದು ಸಾಹಿತ್ಯಿಕ ಲೇಖನವನ್ನೂ ನಿಮಗೆ ಓದಲಿಕ್ಕೆ ಕೊಡು ವುದು. ನೀವು ಮಾಡಲಿರುವ ಮೌಲ್ಯಮಾಪನದಲ್ಲಿ ಪೂರ್ವಗ್ರಹ ಬಾರದಿರ ಲೆಂದು ಆ ಇಬ್ಬರು ಬರಹಗಾರರು ಯಾರೆಂಬ ಮಾಹಿತಿಯನ್ನು ಮರೆಮಾಚುವುದು. ಯಾವುದನ್ನು ಮೊದಲು ಯಾವುದನ್ನು ಆಮೇಲೆ ಓದಬೇಕೆಂಬ ಆಯ್ಕೆಯನ್ನೂ ನಿಮಗೇ ಬಿಟ್ಟು ಬಿಡುವುದು. ಎರಡನ್ನೂ ಓದಿಮುಗಿಸಿದಾಗ ನೀವೇ ಗಮನಿಸುವಂತೆ ಅನುಭವಕಥನವೇ ನಿಮ್ಮನ್ನು ಹೆಚ್ಚು ತಟ್ಟಿರುತ್ತದೆ.

ಶಬ್ದಾಡಂಬರ ಮತ್ತಿತರ ಆಲಂಕಾರಿಕ ಸಾಮಗ್ರಿಗಳಿಲ್ಲದಿದ್ದರೂ ಅದು ನಿಮ್ಮ ಮನಸ್ಸನ್ನು ಮುಟ್ಟಿರುತ್ತದೆ. ಅದರ ಮುಂದೆ ಸಾಹಿತ್ಯಿಕ ಲೇಖನವು ಸೊರಗಿ ಸಪ್ಪೆಯಾಗಿ ಹೋಗುತ್ತದೆ. ಅನುಭವದಡುಗೆಯ ಹೆಚ್ಚುಗಾರಿಕೆ ಅದೇ. ಅಂತಹ ಅಡುಗೆ ರೂಪು ಗೊಳ್ಳುವ ಬಗೆಯನ್ನೂ ದಾಸರು ಬಣ್ಣಿಸುತ್ತಾರೆ- ‘ತನುವೆಂಬ ಭಾಂಡವ ತೊಳೆದು ಕೆಟ್ಟ ಮನದ ಚಂಚಲವೆಂಬ ಮುಸುರೆಯ ಕಳೆದು ಘನವಾಗಿ ಮನೆಯನ್ನು ಬಳಿದು ಅಲ್ಲಿ ಮಿನುಗುವ ತ್ರಿಗುಣವ ಒಲೆಗುಂಡನೆಡೆದು…’ ಇದು ಒಂದು ರೀತಿಯಲ್ಲಿ ಬಸವಣ್ಣ ನವರೆಂದ ಅಂತರಂಗ ಶುದ್ಧಿ ಬಹಿರಂಗ ಶುದ್ಧಿಗೆ ಸಮಾನಾಂತರವಾದ ತತ್ತ್ವವೇ.

ಅನುಭವದಡುಗೆಯ ಮಾತು ಈಗೇಕೆ ಬಂತೆಂದರೆ ಕಳೆದ ವಾರ ಪಟ್ಣಂ ರಘುನಂದನ ಎಂಬುವವರಿಂದ ನನಗೊಂದು
ಮಿಂಚೋಲೆ ಬಂದಿತ್ತು. ‘ನಮಸ್ತೇ. ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ನಾನು ರಘು. ಲಗತ್ತಿಸಿರುವ ಪಿಡಿಎಫ್ ನನ್ನ ಚೊಚ್ಚಲ ಪುಸ್ತಕದ ಕರಡುಪ್ರತಿ. ಇದು ‘ದಿನಕ್ಕೊಂದು ಸೂಕ್ತಿ’ಗಳ ಸಂಕಲನ. ಸುಭಾಷಿತ ಅಥವಾ ಹಿತನುಡಿಗಳಂತೆ ಕಾಣುತ್ತ ವಾದರೂ ಇವು ಆರೀತಿ ಸಂಗ್ರಹಿಸಿದವಲ್ಲ. ನಾನೇ ಬರೆದದ್ದು ಮತ್ತು ಸಾಧ್ಯವಿದ್ದಲ್ಲೆಲ್ಲ ನಿತ್ಯಜೀವನದ ಉದಾಹರಣೆಗಳ ಮೂಲಕ ಆಲೋಚನೆಗಳನ್ನು ಪುಷ್ಟೀಕರಿಸಿದ್ದು.

ಇದೇ ಜನವರಿ ೧ರಂದು ಈ ಪುಸ್ತಕವನ್ನು ಬಿಡುಗಡೆ ಮಾಡಬೇಕೆಂದುಕೊಂಡಿದ್ದೇನೆ. ಸಾಧ್ಯವಾದರೆ ನೀವು ಇದನ್ನೊಮ್ಮೆ ಪೂರ್ಣವಾಗಿ ಓದಿ, ಇಲ್ಲದಿದ್ದರೂ ಅಲ್ಲೊಂದು ಇಲ್ಲೊಂದು ಸ್ಯಾಂಪಲ್ ಓದಿ ಅಭಿಪ್ರಾಯ ತಿಳಿಸಿದರೆ ಕೃತಾರ್ಥನಾಗುತ್ತೇನೆ. ಇಷ್ಟು ಗಡಿಬಿಡಿಯಿಂದ ಈ ಬೇಡಿಕೆಯಿಡುತ್ತಿರುವುದಕ್ಕೆ ಕ್ಷಮೆಯಿರಲಿ.’ ಎಂದು ಮಿಂಚೋಲೆಯ ಒಕ್ಕಣೆ. ಪಿಡಿಎಫ್ ತೆರೆದು ನೋಡಿದೆ. ಒಟ್ಟು ೩೦ ಪುಟಗಳು ಅಷ್ಟೇ.

ಅವರೇನಾದರೂ ಕವಿತೆಗಳನ್ನೋ ಸಣ್ಣಕತೆಗಳನ್ನೋ ಬರೆದುಕಳುಹಿಸಿದ್ದರೆ ‘ದಯವಿಟ್ಟು ಕ್ಷಮಿಸಿ. ಇದು ನನ್ನಿಂದಾಗದ ಕೆಲಸ’ ಎಂದು ನಿರ್ದಾಕ್ಷಿಣ್ಯವಾಗಿ ಉತ್ತರಿಸಿ ಕೈತೊಳೆದುಕೊಳ್ಳುತ್ತಿದ್ದೆ. ಇವು ಕತೆ-ಕವಿತೆಗಳಲ್ಲ. ಚಿಕ್ಕಚಿಕ್ಕ ನುಡಿಮುತ್ತುಗಳು, ಒಟ್ಟು ೩೬೫ ಇವೆ. ‘ಮನಸ್ಸೆಂಬ ಮರ್ಕಟಕ್ಕೆ ಮಾತೆಂಬ ಗುಳಿಗೆ’ ಅಂತ ಆಕರ್ಷಕವಾದೊಂದು ಹೆಸರು ಬೇರೆ ಕೊಟ್ಟಿದ್ದಾರೆ. ಓದಲಿಕ್ಕೆ ಕಷ್ಟವಿಲ್ಲ ಓದಿದರೆ ನಷ್ಟವಿಲ್ಲ ಎಂದುಕೊಂಡು ತಯಾರಾದೆ.

ಮೊದಲ ಪುಟದಲ್ಲಿ ಶೀರ್ಷಿಕೆಯ ಕೆಳಗೆ ಬರೆದಿದ್ದ ವಾಕ್ಯ ಗಮನ ಸೆಳೆಯಿತು. ‘ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಮಾತ್ರೆ ಗಳಿಗಿಂತ ಮಾತುಗಳೇ ಹೆಚ್ಚು ಪರಿಣಾಮಕಾರಿ. ಮನಸ್ಸಿನ ದುಗುಡ ನೀಗಿ, ಮುದ ನೀಡಿ, ಉಡುಗಿದ ಚೇತನಕ್ಕೆ ಹೊಸ ಚೈತನ್ಯ ನೀಡಿ, ಹೊಸ ಉತ್ಸಾಹದ ಚಿಲುಮೆಯನ್ನು ಪುನಃ ಉಕ್ಕಿಸುವ ಅದ್ಭುತ ಶಕ್ತಿ ಮಾತುಗಳಿಗಿದೆ.’ ಹೌದಲ್ಲ! ಒಂದು ಸವಿನುಡಿಯ ಮಾತಿನಲಿ ವಿಶ್ವವನು ಸೃಷ್ಟಿಸಿಹ ಬೊಮ್ಮಗಿಹ ಶಕ್ತಿಯಿದೆ ಎಂದು ಎಲ್ಲೋ ಓದಿದ್ದು ನೆನಪಾಯಿತು. ‘ಪ್ರಿಯ ವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ| ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ||’ ಸುಭಾಷಿತವೂ ನೆನಪಿಗೆ ಬಂತು.

ವಿಶ್ವವಾಣಿಯಲ್ಲಿ ‘ದಾರಿದೀಪೋಕ್ತಿ’, ವಿಜಯವಾಣಿ ಯಲ್ಲಿ ‘ಮುಂಜಾನೆ ಮಾತು’, ಅಥವಾ ಆ ರೀತಿಯ ಥಾಟ್ -ಆಫ್-ದ-ಡೇ ಸೂಕ್ತಿಗಳನ್ನು ಓದುವ ಅಭ್ಯಾಸ ನನಗೂ ಇದೆ. ಅವುಗಳಿಂದ ಆಗೊಮ್ಮೆ ಈಗೊಮ್ಮೆ ಪ್ರಭಾವ-ಪ್ರೇರಣೆ ಪಡೆದದ್ದೂ ಇದೆ. ಅಲ್ಲದೇ ಇವರು ಇವೆಲ್ಲ ತನ್ನ ಸ್ವಂತದ ಹೊಳಹುಗಳು, ಜೀವನಾನುಭವದ ಉದಾಹರಣೆಗಳ ಕುಂದಣ ಕಟ್ಟಿರುವಂಥವು ಎಂದು ಹೇಳಿಕೊಂಡಿದ್ದಾರೆ, ಪ್ರಾಮಾಣಿಕ ಅಭಿಪ್ರಾಯ ತಿಳಿಸಿರೆಂದು ಪ್ರಾಮಾಣಿಕವಾಗಿ ಕೇಳಿಕೊಂಡಿದ್ದಾರೆ.

ಅಂದ ಮೇಲೆ ನಾನೂ ಪ್ರಾಮಾಣಿಕತೆ ಮೆರೆಯಬೇಕು ಎಂದುಕೊಂಡು ಓದನ್ನು ಮುಂದುವರಿಸಿದೆ. ಗುಳಿಗೆ ಪಟ್ಟಿಯ ಮುನ್ನ ಲೇಖಕರ ಅರಿಕೆಯಲ್ಲಿದ್ದ ಪ್ಯಾರಗ್ರಾಫ್ ಸಹ ಗಮನಾರ್ಹ: ‘ಈಗಿನ ಒತ್ತಡದ ಜೀವನ ಶೈಲಿಯಲ್ಲಿ ಆತುರ-ಕಾತರಗಳೇ ಹಾಸುಹೊಕ್ಕಾಗಿರುವ ನಮ್ಮ ಬದುಕಿನಲ್ಲಿ, ಮನಸ್ಸನ್ನು ಯಾವುದೇ ಸಂದರ್ಭ ಬಂದರೂ ಹೆಚ್ಚು ಕ್ಷೋಭೆಗೆ ಒಳಗಾಗದ ಹಾಗೆ ಕಾಪಾಡಿಕೊಳ್ಳುವುದು ದೊಡ್ಡ ಸಾಹಸವೇ ಸರಿ.

ಜೀವನ ನಿರ್ವಹಣೆಗೆ ಪಡುವ ನೂರೆಂಟು ಪಾಡು, ವ್ಯಾಪಾರ-ವ್ಯವಹಾರಗಳಲ್ಲಿ ತುರುಸಿನ ಸ್ಪರ್ಧೆ, ಬದುಕಿನಲ್ಲಿ ನಾವು ಎದುರಿಸುವ ಹತಾಶೆ, ಸೋಲು, ನೋವು… ಒಂದೊಂದೂ ನಮ್ಮ ಮಾನಸಿಕ ಆರೋಗ್ಯವನ್ನು ಎಕ್ಕುಡಿಸುವ ಸಾಮರ್ಥ್ಯ ಹೊಂದಿರುವಾಗ, ಅವೆಲ್ಲ ಒಟ್ಟಿಗೇ ಬಂದು ನಮ್ಮ ಮನಸ್ಸಿಗೆ ಅಟಕಾಯಿಸಿಕೊಂಡರೆ, ಮನಸ್ಸು ಇನ್ನ್ಯಾವ ಬಿಲದಲ್ಲಿ ಅಡಗ ಬೇಕು? ಹೀಗಾಗಿ ಸದಾ ಒಂದಲ್ಲ ಒಂದು ಕಾರಣದಿಂದ ನೆಮ್ಮದಿ ಕಳೆದುಕೊಳ್ಳುವ ಮನಸ್ಸಿಗೆ ಸ್ವಲ್ಪವಾದರೂ ಸಮಾಧಾನ ಕೊಡುವ ಸಂಗತಿಯೆಂದರೆ ಒಳ್ಳೆಯದೊಂದು ಮಾತು.

ಒಳ್ಳೆಯ ಮಾತಿನಿಂದ ಪ್ರಾಣಿಗಳಿಗೂ ಸಂತೋಷವಾಗುತ್ತದೆ ಎಂದಮೇಲೆ ಮನುಷ್ಯನಿಗೆ ಸಂತೋಷವಾಗದೆ ಇದ್ದೀತೇ? ಹಾಗಾಗಿ ಮನಸ್ಸೆಂಬ ಮರ್ಕಟಕ್ಕೆ ಮಾತಿನ ರೂಪದ ಗುಳಿಗೆಗಳ ಸಂಗ್ರಹವೇ ಈ ಪುಸ್ತಕ. ನಿಮ್ಮ ಮನಸ್ಸಿಗೆ ಬೇಸರವಾದಾಗ, ಉತ್ಸಾಹ ಕುಗ್ಗಿದಾಗ, ಸೋತು ಸುಣ್ಣವಾದಾಗ ಈ ಒಳ್ಳೆಯ ಮಾತಿನ ಗುಳಿಗೆಯೊಂದನ್ನು ಹಾಕಿಕೊಳ್ಳಿ. ಒಳ್ಳೆಯ ಫಲಿತಾಂಶ ಗ್ಯಾರಂಟಿ!’ ಅಂದರೆ, ತನುವೆಂಬ ಭಾಂಡವ ತೊಳೆದು ಕೆಟ್ಟ ಮನದ ಚಂಚಲವೆಂಬ ಮುಸುರೆಯ ಕಳೆದು… ಎಂದು ಪುರಂದರ ದಾಸರು ಹೇಳಿದ್ದು ಇದನ್ನೇ ಅಂತಾಯ್ತಲ್ಲ!

ಮನಸ್ಸಿನಲ್ಲಿ ಇಷ್ಟು ರಂಗಸಜ್ಜಿಕೆ ಆದಮೇಲೆ ಗುಳಿಗೆ ಸೇವನೆ ಆರಂಭಿಸಿದೆ. ನಿಜವಾಗಿ ಇಂಥ ಪುಸ್ತಕಗಳನ್ನು ‘ಒಂದೇ ಗುಕ್ಕಿನಲ್ಲಿ’ ಓದಬಾರದು. ಅವಶ್ಯವೆನಿಸಿದಾಗ ಒಂದೊಂದು ಪುಟದಿಂದ ಒಂದೆರಡು ಸೂಕ್ತಿ ಓದಿ ಅರಗಿಸಿಕೊಳ್ಳುವುದು ಸರಿಯಾದ ಕ್ರಮ. ಆದರೆ ಪುಸ್ತಕದ ಬಗೆಗಿನ ಅಭಿಪ್ರಾಯ ತಿಳಿಸುವ ಹೊಣೆಯಿದ್ದುದರಿಂದ ನಾನು ೩೬೫ ಗುಳಿಗೆಗಳನ್ನು ಒಂದಾದ ಮೇಲೊಂದರಂತೆ ಸ್ವಾಹಾ ಮಾಡಿದೆ. ರಘು ಅವರ ಬರಹ ಶೈಲಿ, ಭಾಷೆಯ ಮೇಲಿನ ಹಿಡಿತ, ಪದಬಳಕೆ, ವಾಕ್ಯರಚನೆ ಎಲ್ಲ ಅಚ್ಚುಕಟ್ಟಾಗಿದೆ ಅನಿಸಿತು.

ಅಲ್ಲಲ್ಲಿ ಕೆಲವು ಕಾಗುಣಿತ ದೋಷಗಳು ಕಂಡುಬಂದದ್ದನ್ನು ಅವರಿಗೆ ತಿಳಿಸಿದರೆ ಮುದ್ರಿತ ಪ್ರತಿ ಹೆಚ್ಚು ಸ್ವಚ್ಛವಾಗಿರುತ್ತದೆಂದು ಪಿಡಿಎಫ್‌ನಲ್ಲಿ ಅಂಥವನ್ನೂ ಗುರುತುಹಾಕಿದೆ. ಎಲ್ಲ ಓದಿಮುಗಿಸಿದಾಗ ಅವರ ಬಗೆಗೊಂದು ಅಭಿಮಾನ-ಬಹುಮಟ್ಟಿಗೆ ಅಪರಿಚಿತರೇ ಆದರೂ- ನನ್ನಲ್ಲಿ ಮೂಡಿತು. ವಸ್ತುನಿಷ್ಠವಾಗಿ ಹೇಳಬೇಕೆಂದರೆ ಅದು ಆ ಪುಸ್ತಕದ ಬಗೆಗಿನ ಅಭಿಮಾನ.

ಅದನ್ನೇ ನನ್ನ ಅಭಿಪ್ರಾಯವೆಂದು ಬರೆದು ಕಳುಹಿಸಿದೆ, ಹೀಗೆ: ‘ಶ್ರೀವರ ಭಾರದ್ವಾಜ ಪ್ರಿಸ್ಕ್ರೈಬ್ ಮಾಡಿರುವ ಈ ೩೬೫ ಗುಳಿಗೆಗಳು- ದಿನಕ್ಕೊಂದರಂತೆ ವರ್ಷವಿಡೀ ಸೇವಿಸಿದರೆ- ಜೀವನದಲ್ಲೊಂದು ಹೊಸ ಹುರುಪು, ಉತ್ಸಾಹ ತಂದುಕೊಳ್ಳಲಿಕ್ಕೆ ಬಹಳ ಉಪಯುಕ್ತವಾಗಿ ಇವೆ. ಮುಖ್ಯವಾಗಿ ಇವು ಅಲ್ಲಿಇಲ್ಲಿ ಓದಿದ/ಕೇಳಿದ ಸುಭಾಷಿತಗಳನ್ನೋ ನುಡಿಗಟ್ಟುಗಳನ್ನೋ ಭಟ್ಟಿ ಇಳಿಸಿದ್ದಾಗಿರದೆ, ಸ್ವಾನುಭವದ ಮೂಸೆಯಲ್ಲಿ ತಯಾರಾದವು, ನಿತ್ಯಜೀವನದ ಸಂಗತಿಗಳನ್ನೇ ಬಳಸಿ ಅರೆದಂಥವು. ವಿಶ್ವ ವಿಖ್ಯಾತ ಪರ್ಸನಾಲಿಟಿ ಡೆವಲಪ್ ಮೆಂಟ್ ಗುರುಗಳ ದೊಡ್ಡದೊಡ್ಡ ಪ್ರವಚನಗಳು ಅಥವಾ ಪುಟಗಟ್ಟಲೆ ಲೇಖನಗಳ ಸಾರವನ್ನು ಚಿಕ್ಕದಾಗಿ ಚೊಕ್ಕದಾಗಿ ಹೇಳಿದರೆ ಹೇಗಿರುತ್ತದೋ ಹಾಗೆ, ಇವು ನಿಜಾರ್ಥದಲ್ಲಿ ಕ್ಯಾಪ್ಸೂಲ್ಸ್.

ಇಲ್ಲಿ ಮೆಟ್ರೊ ಟ್ರೈನ್, ಕ್ರಿಕೆಟ್ ಪಿಚ್, ಐಟಿ ಉದ್ಯೋಗ, ಟ್ರಾಫಿಕ್ ಜಾಮ್, ಕಾರ್ ಡ್ರೈವಿಂಗ್, ಅಡುಗೆಮನೆ, ನೀರಿನ ನಲ್ಲಿ, ಮೊಬೈಲ್ ನೆಟ್‌ವರ್ಕ್ ಮುಂತಾದುವನ್ನೆಲ್ಲ ರೂಪಕಗಳಂತೆ ಬಳಸಿರುವುದರಿಂದ ಪರಿಸ್ಥಿತಿಯನ್ನೂ ಹಿತೋಪದೇಶವನ್ನೂ ರಿಲೇಟ್ ಮಾಡಿಕೊಂಡು ಅರ್ಥೈಸುವುದು ತುಂಬ ಸುಲಭ. ಉದಾಹರಣೆಗೆ- ‘ಎಕ್ಸ್ ಪೈರ್ ಆದ ಒಟಿಪಿ ಹೇಗೆ ಉಪಯೋಗ ವಿಲ್ಲವೋ, ಹಾಗೆ ಸಮಯಕ್ಕೆ ಸಿಗದ ಸಹಾಯ, ಸ್ನೇಹಿತರು, ಹಣ, ಸಂಬಂಧಗಳು ಸಹ ಉಪಯೋಗವಿಲ್ಲದವು’, ‘ಸಂಸ್ಕಾರ ಕೊಡದ ವಿದ್ಯೆ, ದಾನಧರ್ಮಕ್ಕೆ ಉಪಯೋಗಿಸದ ದುಡ್ಡು, ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿ ಅತಿ ದುಬಾರಿ ಮೊಬೈಲ್ ಹ್ಯಾಂಡ್‌ಸೆಟ್‌ನಂತೆ.

ಇದ್ದರೂ ಏನೂ ಉಪಯೋಗವಿಲ್ಲ’ ಇತ್ಯಾದಿ. ಮತ್ತೆ ಕೆಲವು ಗಾದೆಮಾತಿನಂತೆ ಚುಟುಕಾಗಿದ್ದರೂ ಚುರುಕು ಮುಟ್ಟಿಸುವಂಥವು: ಸಹನೆ ಇದ್ದರಷ್ಟೇ ಸಾಧನೆ; ನಿಷ್ಠೆಯಿಂದ ನಷ್ಟವಿಲ್ಲ; ವೇದನೆ ಇಲ್ಲದೆ ಸಾಧನೆ ಇಲ್ಲ; ಮೊಗದ ನಗವೇ ನಗು… ಇತ್ಯಾದಿ. ವೈಯಕ್ತಿಕವಾಗಿ ನನಗೆ ತುಂಬ ಇಷ್ಟವಾದಂಥವೆಂದರೆ- ‘ದೊಡ್ಡ ಖಾಯಿಲೆಗಳನ್ನು ಹೇಗೆ ಸಣ್ಣ ಮಾತ್ರೆಗಳು ಸರಿಪಡಿಸಬಲ್ಲವೋ ಹಾಗೆಯೇ ದೊಡ್ಡ ಜಗಳಗಳನ್ನು ‘ದಯವಿಟ್ಟು ಕ್ಷಮಿಸಿ ನನ್ನಿಂದ ತಪ್ಪಾಗಿದೆ’ ಎಂಬ ಸಣ್ಣ ವಾಕ್ಯ ಸರಿಪಡಿಸಬಲ್ಲದು’, ‘ಪರೋಪಕಾರ ಮಾಡಿದ ಕೂಡಲೇ ಮಾಡಲೇಬೇಕಾದ ಎರಡು ಪ್ರಮುಖ ಕೆಲಸಗಳೆಂದರೆ ಉಪಕೃತರಿಂದ ಏನನ್ನೂ ನಿರೀಕ್ಷೆ
ಮಾಡದಿರುವುದು ಮತ್ತು ನಾವು ಉಪಕಾರ ಮಾಡಿದೆವೆಂಬುದನ್ನು ಮರೆತುಬಿಡುವುದು’, ‘ಎಲ್ಲರೂ ಕಂಗಾಲಾದಾಗ ನಾವು ಕಂಗಾಲಾಗದೆ ನಮ್ಮ ಒಳ ಕಂಗಳನ್ನು ತೆರೆದು ನೋಡಿಕೊಂಡರೆ ಕಂಗಾಲಾಗದಿರಲು ಏನಾದರೊಂದು ಉಪಾಯ ಕಂಗಳಿಗೆ ಗೋಚರಿಸೀತು’, ‘ಚುಚ್ಚುಮಾತು ಹೀಯಾಳಿಕೆ ಕೆಲವೊಮ್ಮೆ ನಮ್ಮಲ್ಲಿನ ಸ್ವಾಭಿಮಾನವನ್ನು ಕೆರಳಿಸಿ ಅತ್ಯದ್ಭುತ ಎನ್ನುವಂಥ
ಕೆಲಸಗಳನ್ನು ಮಾಡಿಸಿಬಿಡುತ್ತದೆ’ ಮುಂತಾದುವು.

ಮತ್ತೊಂದು, ಭಗವದ್ಗೀತೆಯ ‘ಉದ್ಧರೇದಾತ್ಮ ನಾತ್ಮಾನಂ’ ಸಾಲನ್ನು ನೆನಪಿಸುವ ‘ಜೀವನದಲ್ಲಿ ನಾವು ಬಿದ್ದಾಗ ಕೈಹಿಡಿದು ಎಬ್ಬಿಸುವವರಿಗಿಂತ ಕೈ ಕೊಡುವವರೇ ಹೆಚ್ಚು. ಯಾರೋ ನಮ್ಮನ್ನು ಕೈಹಿಡಿದು ಕಾಪಾಡುತ್ತಾರೆ ಎಂಬ ನಿರೀಕ್ಷೆ ಬೇಡ. ಬಿದ್ದವರು ನಾವೇ ಆದ್ದರಿಂದ ಯಾರ ಸಹಾಯವೂ ಇಲ್ಲದೆ ಏಳುವುದೂ ನಮ್ಮದೇ ಜವಾಬ್ದಾರಿ.’ ಇಲ್ಲಿನದೇ ಒಂದು ಗುಳಿಗೆ ಹೇಳುವಂತೆ- ನೀತಿ ಮಾತುಗಳು ಒಂದೇ ಸಾಲಿನವು ಆಗಿರಬಹುದು, ಆದರೆ ಅವು ಕಲಿಸುವ ಪಾಠಗಳು ಇಡೀ ಜೀವನಕ್ಕೆ ಸಾಲುವಂಥವು. ಈ ಪುಸ್ತಕದಲ್ಲಿರುವ ಪ್ರತಿಯೊಂದು ಗುಳಿಗೆಗೂ ಈ ಮಾತು ಅನ್ವಯ.

ಜಾಣನಿಗೆ ಮಾತಿನ ಪೆಟ್ಟು ಎಂಬಂತೆ ಈ ಗುಳಿಗೆಗಳ ನಿಯತ ಸೇವನೆ ಒಂಥರ ಸ್ವಾಸ್ಥ್ಯ ಸಂಜೀವಿನಿಯೇ. ಚೊಚ್ಚಲ ಪುಸ್ತಕ ರಚಿಸಿರುವ ಶ್ರೀವರ ಭಾರದ್ವಾಜರಿಂದ ಇಂಥ ಲೋಕೋಪಯೋಗಿ ಸರಕು ಇನ್ನಷ್ಟು ಬರಲಿ.’ ಒಂದ್ನಿಮಿಷ ತಾಳಿ! ಪಟ್ಣಂ  ರಘುನಂದನ ಯಾರು? ಶ್ರೀವರ ಭಾರದ್ವಾಜ ಯಾರು? ಅದೇ ಸಂದೇಹ ನನಗೂ ಬಂದಿತ್ತು!

ಮಿಂಚೋಲೆಯಲ್ಲಿದ್ದ ಹೆಸರು ಪಟ್ಣಂ ರಘುನಂದನ. ಪುಸ್ತಕದಲ್ಲಿದ್ದದ್ದು ‘ಗುಳಿಗೆ ವೈದ್ಯ: ಶ್ರೀವರ ಭಾರದ್ವಾಜ’ ಎಂದು! ಗೊಂದಲ ಪರಿಹರಿಸುವಂತೆ ಅವರನ್ನೇ ಕೇಳಿದೆ. ಮಾರುತ್ತರ ಬರೆದರು: ‘ಶ್ರೀರಂಗಪಟ್ಟಣ ವರಾಹಮೂರ್ತಿ ಆಚಾರ್ ರಘುನಂದನ ಭಾರದ್ವಾಜ ಎಂದು ನನ್ನ ಪೂರ್ಣಹೆಸರು. ಶ್ರೀವರ ಭಾರದ್ವಾಜ ಅಂತ ಹ್ರಸ್ವವಾಗಿಸಿದ್ದೇನೆ. ಹಳೆಮೈಸೂರಿನವರು ಶ್ರೀರಂಗ ಪಟ್ಟಣವನ್ನು ಪಟ್ಣ ಅಂತಲೂ, ಚಾಮರಾಜನಗರವನ್ನು ನಗರ ಅಂತಲೂ ಕರೆಯುವುದು ರೂಢಿ. ನನ್ನ ಇಮೇಲ್ ಪ್ರೊಫೈಲ್‌ ನಲ್ಲಿ ಶ್ರೀರಂಗಪಟ್ಟಣವು ಪಟ್ಣಂ ಆಗಿದೆ. ಆದರೆ ಬರವಣಿಗೆಯಲ್ಲಿ ಶ್ರೀವರ ಎಂದು ಬಳಸುತ್ತೇನೆ. ಊರಿನ ಹೆಸರು, ತಂದೆಯ ಹೆಸರು ಮತ್ತು ನನ್ನ ಹೆಸರು- ಮೂರರಿಂದಲೂ ಮೊದಲಕ್ಷರ ಜೋಡಿಸಿದ್ದು.’

ಇದನ್ನೋದಿ ನನಗೆ ಕೆಲವು ತೆಲುಗು ಸ್ನೇಹಿತರ ಹೆಸರು ನೆನಪಾದವು. ದೂರ್ವಾಸುಲ ಸತ್ಯ ಸಾಯಿ ಸುಬ್ರಹ್ಮಣ್ಯ ಶಾಸ್ತ್ರಿ, ಅದ್ದೆಪಲ್ಲಿ ವೀರ ವೇಂಕಟ ಸುಬ್ಬಾರಾವು ವರಪ್ರಸಾದ್ ಅಂತೆಲ್ಲ ಹೆಸರುಗಳು ಅಲ್ಲಿ ವೆರಿ ಕಾಮನ್. ಎ-ಟು-ಝಡ್ ಇನಿಷಿಯಲ್ಸ್ ಎಂದು ನಾವೆಲ್ಲ ಅವರಿಗೆ ತಮಾಷೆ ಮಾಡುವುದೂ ವೆರಿ ಕಾಮನ್. ಅಷ್ಟು ಉದ್ದದ ಹೆಸರಿಂದಾಗಿಯೋ ಏನೋ ರಘು ಬಗ್ಗೆ ನನ್ನಲ್ಲಿ ಕುತೂಹಲ ಹೆಚ್ಚಿತು. ವಾಟ್ಸ್ಯಾಪ್ ಕರೆ ಮಾಡಿ ಮಾತನಾಡಿದೆ. ಅವರ ಬಯೋಡೇಟಾ ಕೇಳಿ ಪಡೆದೆ.

ಅದನ್ನೋದಿದಾಗ ಖಾತರಿಯಾಯ್ತು, ‘ಮನಸ್ಸೆಂಬ ಮರ್ಕಟಕ್ಕೆ ಮಾತೆಂಬ ಗುಳಿಗೆ’ ಪಕ್ಕಾ ಅನುಭವದಡುಗೆಯೇ ಎಂದು. ರಘು
ಅವರಂಥ ಅಸಾಮಾನ್ಯ ಶ್ರೀಸಾಮಾನ್ಯರು ನನಗೆ ಹೆಚ್ಚು ಇಷ್ಟವಾಗುತ್ತಾರೆ. ಅವರ ಕಿರುಪರಿಚಯವನ್ನು ಅವರದೇ ಮಾತು ಗಳಲ್ಲೆಂಬಂತೆ ನೀವೂ ಓದಬೇಕು ಎಂದು ಇಲ್ಲಿ ಸೇರಿಸಿಕೊಂಡಿದ್ದೇನೆ: ‘ನಾನು ಹುಟ್ಟಿದ್ದು ೧೯೬೯ರಲ್ಲಿ. ತಂದೆ ದಿ. ವರಾಹ ಮೂರ್ತಿ ಆಚಾರ್. ಮೂಲತಃ ನಂಜನಗೂಡಿನವರು. ಐಟಿಐನಲ್ಲಿ ಉದ್ಯೋಗಿಯಾಗಿದ್ದರು. ರಾ. ಸ್ವ. ಸಂಘದ ಕಟ್ಟಾಳು.

ತುರ್ತುಪರಿಸ್ಥಿತಿ ವೇಳೆ ಭೂಗತರಾಗಿದ್ದವರು. ಹೊ. ವೆ. ಶೇಷಾದ್ರಿ ಮತ್ತಿತರರ ಒಡನಾಟವಿದ್ದವರು. ವಿಕ್ರಮ ಮತ್ತು ಆರ್ಗನೈಸರ್ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ಐಟಿಐನಲ್ಲಿ ಓವರ್‌ಕೈಮ್ ಭತ್ಯೆಗೆ ಅವಕಾಶವಿತ್ತು. ಸಂಬಳ ದ್ವಿಗುಣವಾಗಿಸಬಹುದಿತ್ತು. ಆದರೆ ಸರ್ಕಾರಿ ಉದ್ಯಮ, ಅಂಥ ಕೆಲಸವೇನೂ ಇಲ್ಲದೆ ಓವರ್‌ಕೈಮ್ ಪಡೆಯುವುದು ಅವರ ಮನಃಸಾಕ್ಷಿಗೆ ಒಪ್ಪಿತವಿರಲಿಲ್ಲ. ಹಾಗಾಗಿ ಅಪ್ರಾಮಾಣಿಕ ಸಿರಿತನಕ್ಕೆ ಕೈಹಾಕಲಿಲ್ಲ. ಮೆಟ್ರಿಕ್‌ವರೆಗಷ್ಟೇ ಓದಿದ್ದರೂ ಅವರ ಇಂಗ್ಲಿಷ್ eನ ಪ್ರಖರ. ಡಿಕ್ಷನರಿ ನೋಡದೆಯೇ ಪದಗಳ ಅರ್ಥ ಹೇಳೋರು. ನನ್ನ ಅಮ್ಮ ಪಿ.ವಿ.ಸುಕನ್ಯಾ. ಕೋಲಾರ ಜಿಲ್ಲೆ ಮುಳಬಾಗಿಲಿನವರು. ಆದರ್ಶ ಗೃಹಿಣಿ. ನನ್ನ ಪತ್ನಿ ಹೇಮಾ ಸಹ ಸದ್ಗೃಹಿಣಿಯೇ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಮುಗಿಸಿ ವಿದ್ವತ್‌ಗೆ ಸಿದ್ಧತೆ ನಡೆಸಿದ್ದಾಳೆ.

ಪುಸ್ತಕದ ಶೀರ್ಷಿಕೆ ಸೂಚಿಸಿದ್ದು ಆಕೆಯೇ. ನಮಗಿಬ್ಬರು ಗಂಡುಮಕ್ಕಳು. ದೊಡ್ಡವನು ಪವನ್, ಬಿ.ಕಾಂ ಓದಿದ್ದಾನೆ. ಒಂದು ಕೆಫೆ
ನಡೆಸುತ್ತಿದ್ದಾನೆ. ಇಂಟೀರಿಯರ್ ಡಿಸೈನ್ ಕಂಪನಿಯೂ ಇದೆ. ಕಿರಿಯವನು ಭುವಿ. ಮೆಕ್ಯಾನಿಕಲ್ ಬಿ.ಇ. ಅವನದೂ ಒಂದು ಕೆಫೆ ಇತ್ತು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಅಣ್ಣ-ತಮ್ಮ ಮತ್ತೊಂದಿಷ್ಟು ಗೆಳೆಯರು ಸೇರಿ ನೂರಾರು ಮಂದಿಗೆ ಉಚಿತ ಊಟ ಒದಗಿಸಿದ್ದಾರೆ. ಭುವಿ ಈಗೊಂದು ಸಾಫ್ಟ್‌ವೇರ್ ಕಂಪನಿಯಲ್ಲಿದ್ದಾನೆ. ನಾನು ಎಂ.ಕಾಂ ಪದವೀಧರ, ಫಿನ್ ಲ್ಯಾಂಡ್ ಮೂಲದ ಕಂಪನಿಯೊಂದರ ಬೆಂಗಳೂರು ಶಾಖೆ ಯಲ್ಲಿ ೨೨ ವರ್ಷಗಳಿಂದ ಸೇವೆ. ಸದ್ಯಕ್ಕೆ ಹಣಕಾಸು-ಲೆಕ್ಕಪತ್ರ ವಿಭಾಗದ ಸಹಾಯಕ ನಿರ್ದೇಶಕ.

ಈ ಕಂಪನಿ ಸೇರುವ ಮೊದಲು ಅಡುಗೆಮನೆ ಪರಿಕರಗಳು, ವಿದ್ಯುದುಪಕರಣ, ದ್ವಿಚಕ್ರವಾಹನ, ಕ್ರೆಡಿಟ್‌ಕಾರ್ಡು ಮುಂತಾಗಿ ಬೇರೆಬೇರೆ ಸೇಲ್ಸ್ಮನ್ ವೃತ್ತಿ ಮಾಡಿದ್ದೇನೆ. ಅದರಿಂದ ನನಗೆ ಸಾಕಷ್ಟು ಜೀವನಾನುಭವ ಸಿಕ್ಕಿದೆ. ಜನಸಾಮಾನ್ಯರ  ಡಿಮಿಡಿತ
ಅರಿಯುವುದಕ್ಕಾಗಿದೆ. ಕಾಲೇಜು ದಿನಗಳಲ್ಲಿ ತುಂಬ ಪುಸ್ತಕಗಳನ್ನು, ಪತ್ತೇದಾರಿ ಕಾದಂಬರಿಗಳನ್ನು ಓದುತ್ತಿದ್ದೆ. ಆಮೇಲೆ ಓದು ವಾರ್ತಾಪತ್ರಿಕೆಗಳಿಗೆ ಸೀಮಿತವಾಯ್ತು. ಈಗ ಬಿಡುವಿನ ವೇಳೆಯಲ್ಲಿ ಧರ್ಮಗ್ರಂಥಗಳನ್ನು ಓದುತ್ತೇನೆ. ಶ್ರೀ ವಿಶ್ವನಂದನ ತೀರ್ಥ ಸ್ವಾಮೀಜಿಯವರಿಂದ ಪಾಠ ಹೇಳಿಸಿಕೊಳ್ಳುತ್ತೇನೆ.

ವ್ಯಕ್ತಿತ್ವವಿಕಸನಕ್ಕೆ ಅನುವಾಗುವ ಚಿಕ್ಕಪುಟ್ಟ ಲೇಖನಗಳನ್ನು ಬರೆಯುತ್ತೇನೆ. ಪೂರ್ಣಪ್ರಜ್ಞ ಸಂಶೋಧನಾ ಮಂದಿರವು ಹೊರ ತಂದ ‘ಗೀತಾ ಭಾಷ್ಯಮ್’ದಲ್ಲಿ ಗೀತೆಯ ೧೮ ಅಧ್ಯಾಯಗಳಿಗೆ ಸ್ವಾಮೀಜಿ ಬರೆದ ಕನ್ನಡ ತಾತ್ಪರ್ಯವನ್ನು ಇಂಗ್ಲಿಷ್‌ಗೆ ಅನುವಾದಿಸಿದ ಧನ್ಯತೆ ನನ್ನದು. ನಮ್ಮ ಕಣ್ಣು-ಕಿವಿ-ಮನಸ್ಸನ್ನು ತೆರೆದಿಟ್ಟರೆ, ಬಾಳಿನ ಒಂದೊಂದು ಘಟನೆಯಿಂದಲೂ, ಬದುಕಿನಲ್ಲಿ ಸಿಗುವ ಪ್ರತಿಯೊಬ್ಬ ವ್ಯಕ್ತಿಯಿಂದಲೂ, ನಾವು ಏನನ್ನೋ ಕಲಿಯುವುದಿರುತ್ತದೆ ಎಂದು ನನ್ನ ದೃಢ ನಂಬಿಕೆ. ದಿನಕ್ಕೊಂದು ಸೂಕ್ತಿಯ ಯೋಚನೆ ಹೊಳೆದದ್ದು ಹಾಗೆಯೇ. ೭೦೦ಕ್ಕೂ ಹೆಚ್ಚು ಸೂಕ್ತಿಗಳನ್ನು ಬರೆದಿದ್ದೇನೆ.

ಇಷ್ಟಮಿತ್ರ ಬಂಧುಬಾಂಧವರಿಗೆ ಪ್ರತಿದಿನವೂ ಕಳುಹಿಸುತ್ತೇನೆ. ಅದರಲ್ಲಿ ಆಯ್ದ ೩೬೫ನ್ನು ಸಂಕಲಿಸಿ ಈ ಪುಸ್ತಕ ಮಾಡಿದ್ದೇನೆ.’
ಇಂದು, ಜನವರಿ ೧ರಂದು ಬೆಂಗಳೂರಿನಲ್ಲಿ ‘ಮಾತೆಂಬ ಗುಳಿಗೆ…’ ಪುಸ್ತಕ ಬಿಡುಗಡೆಯಾಗಬೇಕಿತ್ತು. ಅನಿವಾರ್ಯ ಕಾರಣ ಗಳಿಂದ ಅದನ್ನು ಸಂಕ್ರಾಂತಿಗೆ ಮುಂದೂಡಬೇಕಾಯ್ತಂತೆ. ಒಂದು ರೀತಿಯಲ್ಲಿ ಒಳ್ಳೆಯದೇ ಆಯ್ತು. ಎಳ್ಳು-ಬೆಲ್ಲ ತಿಂದು ಒಳ್ಳೊಳ್ಳೆಯ ಮಾತನಾಡು ಎಂಬ ಹಬ್ಬದ ಸಂದೇಶಕ್ಕೆ ಅರ್ಥಪೂರ್ಣವಾಗಿ ಒಳ್ಳೆಯ ಮಾತುಗಳ ೩೬೫ ಗುಳಿಗೆಗಳು ಬಿಡುಗಡೆ ಯಾಗುತ್ತಿವೆ!

ರಘುನಂದನರನ್ನು ಸಂಪರ್ಕಿಸಿ (ಮೊಬೈಲ್: ೯೯೦೨೯೧೧೭೭೪) ನೀವು ಈ ಪುಸ್ತಕದ ಲಭ್ಯತೆಯ ಬಗ್ಗೆ ತಿಳಿದುಕೊಳ್ಳಬಹುದು.
ಹಾಗೆಯೇ ಅವರ ‘ಡೈಲಿ ಡೋಸ್’ನ ಫಲಾನುಭವಿಯಾಗಬಹುದು. ಅನುಭವದಡುಗೆ ಸತ್ತ್ವಯುತ ಎಂದು ಆಗಲೇ ಹೇಳಿದ್ದೇನೆ!

Read E-Paper click here