Thursday, 12th December 2024

ಕೋಟಿವೀರರೂ, 42 ವರ್ಷ ಪಕ್ಷದ ಕಚೇರಿಯಲ್ಲೇ ಮನೆ ಮಾಡಿಕೊಂಡವರೂ !

ಇದೇ ಅಂತರಂಗ ಸುದ್ದಿ

vbhat@me.com

ಈ ಸಲದ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರದ ಗಮನ ಸೆಳೆದ ಹಲವು ಕ್ಷೇತ್ರಗಳಲ್ಲಿ ಕೇರಳದ ತಿರುವನಂತಪುರವೂ ಒಂದು. ಈ ಕ್ಷೇತ್ರದಿಂದ ಮೂರು ಸಲ ಗೆದ್ದ ಕಾಂಗ್ರೆಸ್ಸಿನ ಹಾಲಿ ಸದಸ್ಯ, ಕೇಂದ್ರದ ಮಾಜಿ ಸಚಿವ ಮತ್ತು ಲೇಖಕ ಶಶಿ ತರೂರ್ ಮತ್ತು ಕೇಂದ್ರದ ಮಾಹಿತಿ ತಂತ್ರಜ್ಞಾನ ಹಾಗೂ ಇಲೆಕ್ಟ್ರಾನಿಕ್ ಖಾತೆ ರಾಜ್ಯ ಸಚಿವ ಬಿಜೆಪಿಯ ರಾಜೀವ್ ಚಂದ್ರಶೇಖರ್ ಮಧ್ಯೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಇವರಿಬ್ಬರೂ ಭಿನ್ನ ಸಿದ್ಧಾಂತವನ್ನು ಪ್ರತಿನಿಧಿಸಿದರೂ, ಅವರಿಬ್ಬರ ಮಧ್ಯೆ ಸಾಮ್ಯತೆಯಿದೆ. ಇಬ್ಬರೂ ವಿದೇಶದಲ್ಲಿ ಓದಿದವರು, ಇಬ್ಬರೂ ಅಗತ್ಯಕ್ಕಿಂತ ಕಮ್ಮಿ ಮಲಯಾಳಂ ಮಾತಾಡುವವರು, ಇಬ್ಬರೂ ದಿಲ್ಲಿಯಲ್ಲಿ ಅಧಿಕಾರವನ್ನು ಅನುಭವಿಸಿದವರು, ಇಬ್ಬರೂ ಕುರ್ತಾಧಾರಿಗಳು ಮತ್ತು ಇಬ್ಬರೂ ಶ್ರೀಮಂತ ಹಿನ್ನೆಲೆಯಿಂದ ಬಂದವರು. ತರೂರ್ ಅವರು ಡಿಪ್ಲೊಮ್ಯಾಟ್ ಆಗಿ ರಾಜಕೀಯಕ್ಕೆ ಧುಮುಕಿದವರು. ರಾಜೀವ್ ಚಂದ್ರಶೇಖರ್ ತಂತ್ರಜ್ಞಾನಿ
ಯಾಗಿ, ಉದ್ಯಮಿಯಾಗಿ ರಾಜಕೀಯ ಪ್ರವೇಶಿಸಿದವರು.

ಇಬ್ಬರೂ ಕೋಟಿವೀರರೇ. ಆದರೆ ನನಗೆ ಇವರಿಬ್ಬರ ಸ್ಪರ್ಧೆಗಿಂತ ಕಣದಲ್ಲಿರುವ ಇನ್ನೊಬ್ಬರ ಬಗ್ಗೆ ಕುತೂಹಲವಿದೆ. ೭೮ ವರ್ಷದ ಈ ಹಿರಿಯ ಕಮ್ಯುನಿಸ್ಟ್ ನಾಯಕನ ಹೆಸರು ಪನ್ನಿಯನ್ ರವೀಂದ್ರನ್. ಅವರು ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಒಂದೂವರೆ ಅಡಿ ಉದ್ದದ ತಲೆಗೂದಲು, ಕೃಶ ದೇಹ ಮತ್ತು ಎತ್ತರದ ಕಾಯ ಹೊಂದಿರುವ ಪನ್ನಿಯನ್, ಇಬ್ಬರು ದಿಗ್ಗಜರ ನಡುವೆಯೂ ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪನ್ನಿಯನ್ ಅವರ ಸರಳ ವ್ಯಕ್ತಿತ್ವವೇ ಅವರ ಬಹುದೊಡ್ಡ ಆಸ್ತಿ. ತರೂರ್ ೫೫ ಕೋಟಿ ರುಪಾಯಿ ಮತ್ತು ರಾಜೀವ್ ಚಂದ್ರಶೇಖರ್ ೨೮ ಕೋಟಿ ರುಪಾ ಯಿ (ಇದು ಸುಳ್ಳು ಲೆಕ್ಕ ಎಂದು ಈಗಾಗಲೇ ದೂರು ದಾಖಲಾಗಿದೆ) ಘೋಷಿಸಿಕೊಂಡಿದ್ದರೆ, ತನ್ನ ಆಸ್ತಿ ಬರೀ ೧೪ ಲಕ್ಷ ರುಪಾಯಿ ಎಂದು ಪನ್ನಿಯನ್ ಘೋಷಿಸಿಕೊಂಡಿದ್ದಾರೆ.

ಬ್ಯಾಂಕಿನಲ್ಲಿ ೫೯,೭೨೯ ರುಪಾಯಿ ಮತ್ತು ಕೈಯಲ್ಲಿ ಮೂರು ಸಾವಿರ ರುಪಾಯಿ ಹೊಂದಿರುವುದಾಗಿ ತಮ್ಮ ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ಹೆಂಡತಿಯ ಬಳಿ ಎರಡು ಸಾವಿರ ರುಪಾಯಿ ನಗದು ಮತ್ತು ೪೮ ಗ್ರಾಂ ಚಿನ್ನ (ಎಲ್ಲ ಸೇರಿ ಎರಡೂವರೆ ಲಕ್ಷ ರುಪಾಯಿ) ಇರುವುದಾಗಿ ಪನ್ನಿಯನ್ ಹೇಳಿದ್ದಾರೆ.
೨೦೦೫ರಲ್ಲಿ ಅದೇ ಕ್ಷೇತ್ರದಿಂದ ಪನ್ನಿಯನ್ ಲೋಕಸಭೆಗೆ ಆಯ್ಕೆಯಾಗಿದ್ದರು. ಹೀಗಾಗಿ ಆ ಬಾಬತ್ತು ಅವರಿಗೆ ತಿಂಗಳಿಗೆ ೨೫ ಸಾವಿರ ರುಪಾಯಿ ಪೆನ್ಷನ್ ಬರುತ್ತದೆ. ಅದೇ ಅವರಿಗಿರುವ ಏಕೈಕ ಆದಾಯ. ಕಣ್ಣೂರಿನಲ್ಲಿ ಅವರಿಗೆ ಸ್ವಂತ ಮನೆಯಿದೆ. ಅದರ ಮೌಲ್ಯ ಹನ್ನೊಂದು ಲಕ್ಷ ರುಪಾಯಿ. ಆ ಮನೆ ಹೇಗಿರಬಹುದು ಎಂದು ಊಹಿಸಬಹುದು.

ಸಿಪಿಐ ರಾಜ್ಯ ಕಾರ್ಯದರ್ಶಿಯೂ ಆಗಿದ್ದ ಪನ್ನಿಯನ್, ಕಳೆದ ೪೨ ವರ್ಷಗಳಿಂದ ತಿರುವನಂತಪುರ ದಲ್ಲಿ ಮಾಡೆಲ್ ಸ್ಕೂಲ್ ಜಂಕ್ಷನ್‌ನಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ವಾಸಿಸುತ್ತಿದ್ದಾರೆ. ಈ ಕಾರ್ಯಾಲಯವನ್ನು ರಿಪೇರಿ ಮಾಡುತ್ತಿರುವುದರಿಂದ ಈಗ ಪಕ್ಷದ ಟ್ರೇಡ್ ಯೂನಿಯನ್ ಘಟಕದ ಕಾರ್ಯಾ ಲಯಕ್ಕೆ ತಮ್ಮ ವಾಸ್ತವ್ಯವನ್ನು ಕೆಲಕಾಲದ ಮಟ್ಟಿಗೆ ವರ್ಗಾಯಿಸಿದ್ದಾರೆ. ಪನ್ನಿಯನ್ ಪತ್ನಿ ಕಣ್ಣೂರಿನಲ್ಲಿ ವಾಸಿಸುತ್ತಾರೆ. ೨-೩ ತಿಂಗಳಿ ಗೊಮ್ಮೆ ಅವರು ಕಣ್ಣೂರಿಗೆ ಹೋಗಿ ಪತ್ನಿಯನ್ನು ನೋಡಿಕೊಂಡು ಬರುತ್ತಾರೆ. ‘ನೀವೇಕೆ ತಿರುವನಂತಪುರದಲ್ಲಿ ಮನೆಯನ್ನು ಖರೀದಿಸುವುದಿರಲಿ, ಬಾಡಿಗೆ ಮನೆಯನ್ನಾ ದರೂ ಹೊಂದಿಲ್ಲ? ಆಗ ನಿಮ್ಮ ಪತ್ನಿಯನ್ನು ಅಲ್ಲಿಗೆ ಕರೆಯಿಸಿಕೊಳ್ಳ ಬಹುದಿತ್ತಲ್ಲ?’ ಎಂದು ‘ಮನಿ ಕಂಟ್ರೋಲ್’ ವೆಬ್‌ಸೈಟ್ ಪತ್ರಕರ್ತ ಸಂದರ್ಶನ ದಲ್ಲಿ ಕೇಳಿದಾಗ, ‘ನನಗೆ ಬರೋದೇ ೨೫,೦೦೦ ರುಪಾಯಿ. ೪,೦೦೦ ರುಪಾಯಿ ಯನ್ನು ಲೆವಿ ರೂಪದಲ್ಲಿ ಪಕ್ಷಕ್ಕೆ ನೀಡಬೇಕು.

ತಿರುವನಂತಪುರದಲ್ಲಿ ಒಂದು ರೂಮಿನ ಮನೆಗೆ ಕನಿಷ್ಠ ೧೫,೦೦೦ ರುಪಾಯಿ ನೀಡಬೇಕು. ಮಿಕ್ಕ ೬,೦೦೦ ರುಪಾಯಿಯಲ್ಲಿ ಹೇಗೆ ಜೀವಿಸುವುದು?’ ಎಂದು ಪನ್ನಿಯನ್ ಹೇಳಿದಾಗ ಸಂದರ್ಶಕ ತಬ್ಬಿಬ್ಬು. ‘ನನ್ನ ಅಭಿಮಾನಿಗಳು, ಸ್ನೇಹಿತರು ಬಾಡಿಗೆಗೆ ತಮ್ಮ ಮನೆಗಳನ್ನು ನೀಡುವುದಾಗಿ ಮುಂದೆ ಬಂದಿದ್ದುಂಟು. ಒಬ್ಬರು ಸ್ನೇಹಿತರು ಉಚಿತವಾಗಿ ತಮಗೆ ಸೇರಿದ ಮನೆಯನ್ನೇ ಬಿಟ್ಟು ಕೊಡುವುದಾಗಿ ಹೇಳಿದ್ದುಂಟು. ಆದರೆ ನಾನು ಅವೆಲ್ಲವನ್ನೂ
ನಯವಾಗಿ ನಿರಾಕರಿಸಿದೆ. ನಾನು ಪಾರ್ಟಿ ಕಾರ್ಯಾಲಯದಲ್ಲಿ ೪೨ ವರ್ಷಗಳಿಂದ ವಾಸಿಸುತ್ತಿದ್ದೇನೆ. ನನಗೆ ಯಾವುದೇ ಕೊರತೆ ಯಾಗಿಲ್ಲ. ನನ್ನಷ್ಟು ಸುಖಿ ಯಾರೂ ಇಲ್ಲ’ ಎಂದು ಪನ್ನಿಯನ್ ಹೇಳಿದರು.

ಪನ್ನಿಯನ್ ಅವರ ಬಳಿ ಸ್ವಂತ ವಾಹನವಿಲ್ಲ. ಅವರು ಸರಕಾರಿ ಕಾರನ್ನು ಬಳಸುವುದಿಲ್ಲ. ಏನಿದ್ದರೂ ರಿಕ್ಷಾ ಅಥವಾ ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ‘ನನ್ನ ಪಾಲಿಗೆ ಸರಕಾರಕ್ಕಿಂತ ನನ್ನ ಪಕ್ಷ ದೊಡ್ಡದು. ಹೀಗಾಗಿ ನಾನು ಸರಕಾರ ನೀಡುವ ಗೂಟದ ಕಾರುಗಳನ್ನು ತಿರಸ್ಕರಿಸುತ್ತೇನೆ’ ಎಂದು ಅವರು ಹೇಳುತ್ತಲೇ ಬಂದಿದ್ದಾರೆ. ಕಡು ಬಡಕುಟುಂಬದ ಹಿನ್ನೆಲೆಯಿಂದ ಬಂದ ಪನ್ನಿಯನ್, ೧೧ ವರ್ಷದವರಾಗಿದ್ದಾಗ ತಂದೆಯನ್ನು ಕಳೆದುಕೊಂಡರು. ಬಡತನದಿಂದ ಅವರಿಗೆ ಆರನೇ ಕ್ಲಾಸಿನ ತನಕ ಮಾತ್ರ ಓದಲು ಸಾಧ್ಯವಾಯಿತು. ಮುಂದೆ ಅವರು ಸ್ಕೂಲಿನ ಕಡೆಗೆ ತಲೆಯನ್ನೇ ಹಾಕಲಿಲ್ಲ.

ಆ ವಯಸ್ಸಿನಲ್ಲೇ ಕಮ್ಯುನಿಸ್ಟ್ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ‘ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ನಾನು ಕಮ್ಯುನಿಸ್ಟ್ ಆಗಿ
ಸಾಯಲು ಬಯಸುತ್ತೇನೆ. ಅದಕ್ಕಿಂತ ದೊಡ್ಡ ಸಾಧನೆ ಮತ್ತು ಗೌರವ ಮತ್ತೊಂದಿಲ್ಲ’ ಎಂಬುದು ಅವರ ಅಚಲ ನಂಬಿಕೆ. ೨೦೦೫ರಲ್ಲಿ ಗೆದ್ದ ಬಳಿಕ, ೨೦೦೯ರಲ್ಲೂ ಸ್ಪರ್ಧಿಸುವಂತೆ ಪಕ್ಷ ಹೇಳಿತು. ಆದರೆ ಅವರು ಬೇರೆಯವರಿಗೆ ಅವಕಾಶ ಮಾಡಿಕೊಡಲು ಸ್ಪರ್ಧಿಸಲಿಲ್ಲ. ಈ ಸಲವೂ ಅವರಿಗೆ ಸ್ಪರ್ಧಿಸಲು ಮನಸ್ಸಿರಲಿಲ್ಲ. ಆದರೆ ಪಕ್ಷದ ಆದೇಶಕ್ಕೆ ತಲೆಬಾಗಿ, ಒಲ್ಲದ ಮನಸ್ಸಿನಿಂದ ಚುನಾವಣಾ ಕಣಕ್ಕಿಳಿದರು. ‘ನಿಮ್ಮಲ್ಲಿ ಹಣವೇ ಇಲ್ಲ. ಆದರೆ ನಿಮ್ಮ ಎದುರಾಳಿಗಳು ನೂರಾರು ಕೋಟಿ ರುಪಾಯಿ ಖರ್ಚು ಮಾಡುತ್ತಿದ್ದಾರೆ. ಹೀಗಿರುವಾಗ ಚುನಾವಣೆಯನ್ನು ಹೇಗೆ ನಿಭಾಯಿಸುತ್ತೀರಿ?’ ಎಂದು ಪತ್ರಕರ್ತರು ಕೇಳಿದಾಗ, ‘ನಾನು ನನ್ನ ಜೀವನದಲ್ಲಿ ಒಂದು ಕೋಟಿ ರುಪಾಯಿ ಹಣವನ್ನು ಕಣ್ಣಲ್ಲಿ ನೋಡಿಯೇ ಇಲ್ಲ. ಆದರೆ ನನ್ನ ಜತೆ ಲಕ್ಷ ಲಕ್ಷ ಜನರಿದ್ದಾರೆ.

ಅವರು ತಮ್ಮ ದುಡಿಮೆಯ ಹತ್ತು-ಇಪ್ಪತ್ತು ರುಪಾಯಿಗಳನ್ನು ನೀಡುತ್ತಿದ್ದಾರೆ. ಈ ಹಣದಿಂದಲೇ ಚುನಾವಣೆಯನ್ನು ನಿಭಾಯಿಸುತ್ತಿದ್ದೇನೆ. ಹಾಗಂತ ಯಾರಾದರೂ ಒಂದು ಲಕ್ಷಕ್ಕಿಂತ ಅಧಿಕ ಹಣವನ್ನು ಚುನಾವಣಾ ನಿಧಿ ಎಂದು ನೀಡಿದರೆ ಸ್ವೀಕರಿಸುವುದಿಲ್ಲ’ ಎಂದು ಪನ್ನಿಯನ್ ಖಡಾಖಡಿ ಹೇಳಿದರು.
ಪನ್ನಿಯನ್ ವ್ಯಕ್ತಿತ್ವದ ಎದ್ದು ಕಾಣುವ ಅಂಶವೆಂದರೆ ಅವರ ಉದ್ದ ತಲೆಗೂದಲು. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಹಿಪ್ಪಿ ಹೇರ್ ಸ್ಟೈಲ್ ಪ್ರಚಲಿತ ದಲ್ಲಿತ್ತು. ಆಗ ಯುವಕರು ಉದ್ದದ ಕೂದಲನ್ನು ಬಿಡುತ್ತಿದ್ದರು. ಆದರೆ ಪೊಲೀಸರು ಹಿಪ್ಪಿ ಹೇರ್ ಸ್ಟೈಲ್ ಅನ್ನು ವಿರೋಧಿಸುತ್ತಿದ್ದರು. ಒಂದು ದಿನ ಪನ್ನಿಯನ್ ಅವರ ತಲೆಗೂದಲನ್ನು ಪೊಲೀಸನೊಬ್ಬ ಕತ್ತರಿಸಿಬಿಟ್ಟ. ಇದರಿಂದ ತಮ್ಮ ಸ್ವಾತಂತ್ರ್ಯಹರಣವಾಯಿತು ಎಂದು ಪನ್ನಿಯನ್ ಅಲ್ಲಿಯೇ ಪ್ರತಿಭಟಿಸಿದರು.

ಅಂದಿನಿಂದ ಅವರು ಒಮ್ಮೆ ಮಾತ್ರ ಕೂದಲನ್ನು ಕತ್ತರಿಸಿದ್ದನ್ನು ಬಿಟ್ಟರೆ, ಸದಾ ಉದ್ದದ ಕೂದಲುಗಳಿಂದಲೇ ಕಂಗೊಳಿಸುತ್ತಾರೆ. ಎಷ್ಟೋ ಸಲ ಅವನ್ನು ನೀಟಾಗಿ ಬಾಚುವುದೂ ಇಲ್ಲ. ಈ ಸಲ ಪನ್ನಿಯನ್ ಎಲ್ಲಿಯೇ ಹೋಗಲಿ, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ‘ಪನ್ನಿಯನ್ ಅವರಂಥ ರಾಜಕಾರಣಿ
ಯನ್ನು ಇನ್ನು ಈ ಜನ್ಮದಲ್ಲಿ ಅಥವಾ ಮುಂದಿನ ಜನ್ಮದಲ್ಲಿ ನೋಡುವುದು ಸಾಧ್ಯವಿಲ್ಲ. ಇಂಥ ಒಬ್ಬ ನಾಯಕ ಇದ್ದ ಅಂದರೂ ಯಾರೂ ನಂಬುವು ದಿಲ್ಲ. ಪಕ್ಷದ ಸಿದ್ಧಾಂತಕ್ಕೆ ಸರ್ವಸ್ವವನ್ನೂ ಅರ್ಪಿಸಿಕೊಂಡ ಅವರ ಕಾಲದಲ್ಲಿ ನಾವೂ ಬದುಕಿದ್ದೇವೆ ಎನ್ನುವುದೇ ನಮಗೆ ಅಭಿಮಾನ’ ಎಂದು ಎಲ್ಲ ವಯೋಮಾನ ದವರೂ ಮುಕ್ತ ಕಂಠದಿಂದ ಅವರನ್ನು ಪ್ರಶಂಸಿಸುತ್ತಾರೆ. ಆದರೆ ಇದು ಮತವಾಗಿ ಪರಿವರ್ತನೆಯಾಗುತ್ತದಾ? ಚುನಾವಣೆಯಲ್ಲಿ ಒಳ್ಳೆಯ ಅಭ್ಯರ್ಥಿಯನ್ನು ಜನ ಬೆಂಬಲಿಸುತ್ತಾರಾ? ಈ ಆದರ್ಶಗಳೆಲ್ಲ ಮತದಾರರಿಗೆ ಬುರುಡೆಯಾ? ಗೊತ್ತಿಲ್ಲ.

ರಾಜ್ ನಾರಾಯಣ್ ನಿಜಕ್ಕೂ ಜೋಕರಾ?
ಭಾರತದ ರಾಜಕಾರಣವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಅದರಲ್ಲೂ ಭಾರತದ ವಿದ್ಯಮಾನಗಳನ್ನು ವರದಿ ಮಾಡಲು ಬರುವ ವಿದೇಶಿ ಪತ್ರಕರ್ತರಿಗೆ ಇಲ್ಲಿನ ರಾಜಕೀಯ ಒಳಸುಳಿಗಳನ್ನು ಎಷ್ಟೇ ತಿಳಿಸಿ ಹೇಳಿದರೂ ಸುಲಭಕ್ಕೆ ಅರ್ಥವಾಗುವುದಿಲ್ಲ. ದೇಶಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣಾ ವರದಿಗೆಂದು ಇತ್ತೀಚೆಗೆ ಮೂವರು ಪತ್ರಕರ್ತರ ತಂಡ ಬೆಂಗಳೂರಿಗೆ ಆಗಮಿಸಿತ್ತು. ನಾನು ಅವರನ್ನು ನಮ್ಮ ಕಚೇರಿಗೆ ಆಹ್ವಾನಿಸಿದ್ದೆ. ಅವರ ಜತೆ ಸುಮಾರು ಎರಡು ತಾಸು ಮಾತಾಡುವಾಗ, ಭಾರತ ರಾಜಕಾರಣದ ಹಲವು ಆಯಾಮ, ಮಜಲು ಮತ್ತು ಝಲಕುಗಳು ಹಾದುಹೋದವು.

ಅವರಲ್ಲೊಬ್ಬರು ಭಾರತ ರಾಜಕಾರಣದ ವರ್ಣರಂಜಿತ ರಾಜಕಾರಣಿ ರಾಜ್ ನಾರಾಯಣ್ ಕುರಿತು ಪ್ರಸ್ತಾಪಿಸಿದರು. ‘ನನ್ನ ದೃಷ್ಟಿಯಲ್ಲಿ ರಾಜ್ ನಾರಾಯಣ್ ಒಬ್ಬ ಬಫೂನ್ ಮತ್ತು ಜೋಕರ್. ಎಂಥವರೆಲ್ಲ ಭಾರತ ರಾಜಕಾರಣದಲ್ಲಿ ಏನೇನೋ ಆಗಿಹೋಗಿದ್ದಾರೆ’ ಎಂದು ಹೇಳಿದರು. ಅದಕ್ಕೆ ನಾನು, ‘ನೀವು ರಾಜ್ ನಾರಾಯಣ್ ಅವರನ್ನು ಜೋಕರ್ ಅಥವಾ ಬಫೂನ್ ಅಂತ ಹೇಳುತ್ತೀರಿ. ನಾನು ಅದನ್ನು ಒಪ್ಪುವುದಿಲ್ಲ. ಕಾರಣ ಅವರ ರಾಜಕೀಯ ಜೀವನ ಮತ್ತು ಹೋರಾಟವನ್ನು ನೀವು ಗಮನಿಸಿದಂತಿಲ್ಲ. ಅವರು ಸುಮಾರು ೫೦ ವರ್ಷಗಳ ಕಾಲ ರಾಜಕಾರಣ ಮಾಡಿದವರು.

ಆಚಾರ್ಯ ನರೇಂದ್ರ ದೇವ್, ಜಯಪ್ರಕಾಶ ನಾರಾಯಣ ಮತ್ತು ರಾಮಮನೋಹರ ಲೋಹಿಯಾ ನೇತೃತ್ವದ ಸೋಷಿಯಲಿಸ್ಟ್ ಪಕ್ಷದಲ್ಲಿ ವಿವಿಧ ಸ್ಥಾನಗಳನ್ನು ಅಲಂಕರಿಸಿದವರು. ಸುಮಾರು ೧೫ ವರ್ಷಗಳ ಅವಧಿಯಲ್ಲಿ ಅವರು ಹೋರಾಟಗಳಲ್ಲಿ ಭಾಗವಹಿಸಿದ್ದಕ್ಕಾಗಿ ಅರವತ್ತಕ್ಕೂ ಹೆಚ್ಚು ಸಲ ಸೆರೆಮನೆವಾಸ ಅನುಭವಿಸಿದವರು. ೧೯೫೨ರಲ್ಲಿಯೇ ಉತ್ತರ ಪ್ರದೇಶ ವಿಧಾನಸಭೆಗೆ ಶಾಸಕರಾಗಿ ಆರಿಸಿ ಬಂದವರು. ಸೋಷಿಯಲಿಸ್ಟ್ ಪಾರ್ಟಿ, ಪ್ರಜಾ ಸೋಷಿಯಲಿಸ್ಟ್ ಪಾರ್ಟಿ, ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿ, ಸೋಷಿಯಲಿಸ್ಟ್ ಪಾರ್ಟಿ (ಲೋಹಿಯಾ), ಭಾರತೀಯ ಲೋಕದಳ, ಜನತಾ ಪಾರ್ಟಿ,
ಜನತಾ ಪಾರ್ಟಿ (ಸೆಕ್ಯುಲರ್), ಡೆಮಾಕ್ರಟಿಕ್ ಸೋಷಿಯಲಿಸ್ಟ್ ಪಾರ್ಟಿ, ನಂತರ ಜನತಾ ಪಾರ್ಟಿ ಮತ್ತು ಸೋಷಿಯಲಿಸ್ಟ್ ಪಾರ್ಟಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದವರು. ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು.

ಇಂಥವರನ್ನು ಜೋಕರ್ ಅಂತ ಹೇಗೆ ಹೇಳುತ್ತೀರಿ?’ ಎಂದು ಕೇಳಿದೆ. ಅವರಲ್ಲಿ ನಿಖರವಾದ ಉತ್ತರ ಇರಲಿಲ್ಲ. ರಾಜ್ ನಾರಾಯಣ್ ಅವರ ಮ್ಯಾನರಿಸಂ ಹಾಗೆ ಇದ್ದಿರಬಹುದು. ಕೆಲವು ಸಲ ಅವರು ತಿಕ್ಕಲು ತಿಕ್ಕಲಾಗಿ ವರ್ತಿಸಿದ್ದಿರಬಹುದು. ಆಗಾಗ ತಮ್ಮ ನಿಷ್ಠೆಯನ್ನು ಬದಲಿಸಿದ್ದಿರಬಹುದು. ಆದರೆ ಅವರು ಚಾಣಾಕ್ಷ ರಾಜಕಾರಣಿ ಯಾಗಿದ್ದರು. ಯಾವಾಗ ಯಾರ ಚುಂಗು ಹಿಡಿಯಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಹಾಗೆಂದು ಅವರು ಕಾಂಗ್ರೆಸ್ ವಿರೋಽ ನೆಲೆಯಲ್ಲಿಯೇ ರಾಜಕಾರಣ ಮಾಡಿಕೊಂಡು ಬಂದರು. ೧೯೭೧ರಲ್ಲಿಯೇ ಇಂದಿರಾ ಗಾಂಧಿ ವಿರುದ್ಧ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತು ಹೋದರು.

ಸೋತರೇನಂತೆ, ಇಂದಿರಾ ಅವರು ಚುನಾವಣಾ ಅಕ್ರಮಗಳನ್ನೆಸಗಿ ಆರಿಸಿ ಬಂದಿದ್ದಾರೆ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಅಲಹಾ ಬಾದ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. ಕೋರ್ಟ್ ರಾಜ್ ನಾರಾಯಣ್ ಅವರ ಆರೋಪಗಳನ್ನು ಎತ್ತಿ ಹಿಡಿಯಿತು. ಇಂದಿರಾ ಆಯ್ಕೆಯನ್ನು
ಅಮಾನ್ಯಗೊಳಿಸಿ, ಮುಂದಿನ ೬ ವರ್ಷಗಳ ಕಾಲ ಚುನಾವಣೆ ಯಲ್ಲಿ ಸ್ಪರ್ಧಿಸದಂತೆ ಆದೇಶ ನೀಡಿತು. ಇದರಿಂದ ಕಂಗಾಲಾದ ಇಂದಿರಾ ತೀವ್ರ ಒತ್ತಡಕ್ಕೊಳಗಾಗಿ, ದೇಶದಲ್ಲಿ ತುರ್ತುಪರಿಸ್ಥಿತಿ ಯನ್ನು ಹೇರಿದರು. ಅದು ರಾಜ್ ನಾರಾಯಣ್ ಅವರ ರಾಜಕೀಯ ಜೀವನದ ಉತ್ತುಂಗದ ದಿನಗಳು. ಅವರು ದೇಶದ ಯಾವ ಭಾಗಕ್ಕೆ ಹೋದರೂ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು.

ತುರ್ತುಪರಿಸ್ಥಿತಿ ಹೇರಿದ ದಿನದಂದೇ, ರಾಜ್ ನಾರಾಯಣ್ ಅವರನ್ನು ಬಂಧಿಸುವಂತೆ ಇಂದಿರಾ ಆದೇಶಿಸಿದರು. ೧೯೭೭ರಲ್ಲಿ ಇಂದಿರಾ ತುರ್ತುಸ್ಥಿತಿ ಯನ್ನು ವಾಪಸ್ ಪಡೆದರು. ಅದೇ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ವಿರುದ್ಧ ಯಾರನ್ನು ನಿಲ್ಲಿಸಬೇಕು ಎಂದು ಪ್ರತಿಪಕ್ಷಗಳ ನಾಯಕರಲ್ಲಿ ಚರ್ಚೆಯಾಯಿತು. ಚೌಧುರಿ ಚರಣ್ ಸಿಂಗ್ ಮತ್ತು ವಾಜಪೇಯಿ, ಇಂದಿರಾ ವಿರುದ್ಧ ಸೆಣಸಲು ಸಮ್ಮತಿಸಲಿಲ್ಲ. ಆಗ ಮುಂದೆ ಬಂದವರು ರಾಜ್ ನಾರಾಯಣ್. ಪ್ರಧಾನಿ ವಿರುದ್ಧ ಸೆಣಸಲು ಮುಂದಾದಾಗ ರಾಜ್ ನಾರಾಯಣ್ ಇಡೀ ದೇಶದ ಗಮನ ಸೆಳೆದರು. ಆ ಚುನಾವಣೆಯಲ್ಲಿ ಇಂದಿರಾ ಅವರನ್ನು ಐವತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ, ಅಕ್ಷರಶಃ ಹೀರೋ ಆದರು. ಆ ಚುನಾವಣೆಯಲ್ಲಿ ಮೊರಾರ್ಜಿ ನೇತೃತ್ವದ ಜನತಾಪಕ್ಷ ಭಾರಿ ಬಹುಮತದಿಂದ ಆರಿಸಿ ಬಂದು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ರಾಜ್ ನಾರಾಯಣ್ ಒಲ್ಲದ ಮನಸ್ಸಿನಿಂದ ದೇಸಾಯಿ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದರು. ಅಲ್ಲಿ ತನಕ ಎಲ್ಲವೂ ಸರಿ ಇತ್ತು. ಅವರನ್ನು ಯಾರೂ ಬಫೂನ್ ಅಥವಾ ಜೋಕರ್ ಎಂದು ಹೇಳುತ್ತಿರಲಿಲ್ಲ,  ಆದರೆ ಅದಾದ ಬಳಿಕ ಅವರ ವರ್ತನೆಯಲ್ಲಿ ಗಣನೀಯ ಬದಲಾವಣೆಗಳಾದವು. ಅವರಿಗೂ, ದೇಸಾಯಿ ಅವರಿಗೂ ಎಣ್ಣೆ-ಸೀಗೇಕಾಯಿ ಸಂಬಂಧ ಎನ್ನುವಂತಾಯಿತು.

ಇಂದಿರಾರನ್ನು ಸೋಲಿಸಿದ ತಮಗೆ ಸರಕಾರದಲ್ಲಿ ಇನ್ನೂ ಮಹತ್ವದ ಸ್ಥಾನಮಾನ ಸಿಗಬೇಕು ಎಂದು ಅವರು ಅಪೇಕ್ಷಿಸಿದರು. ಚರಣ್ ಸಿಂಗ್ ನೇತೃತ್ವ ದಲ್ಲಿ ಅತೃಪ್ತರ ಬಣವನ್ನು ಕಟ್ಟಿದರು. ಇಂದಿರಾ ಅವರನ್ನು ಸೋಲಿಸಿದ್ದ ರಾಜ್ ನಾರಾಯಣ್, ಇಂದಿರಾ ಜತೆಗೆ ಕೈ ಜೋಡಿಸಿ, ಮೊರಾರ್ಜಿ ಸಂಪುಟ ವನ್ನು ಪದಚ್ಯುತಗೊಳಿಸಲು ಸಂಚು ರೂಪಿಸಿದರು. ‘ಚರಣ್ ಸಿಂಗ್ ರಾಮನಾದರೆ, ನಾನು ಹನುಮಂತ’ ಎಂದು ಥೇಟು ಜೋಕರನಂತೆ ಹೇಳಿಕೆ ನೀಡಿದರು. ದಿನ ಬೆಳಗಾದರೆ, ಚರಣ್ ಸಿಂಗ್ ಮತ್ತು ರಾಜ್ ನಾರಾಯಣ್, ತಮ್ಮದೇ ಸರಕಾರದ ವಿರುದ್ಧ ಹೇಳಿಕೆ ನೀಡಲಾರಂಭಿಸಿದರು. ಮೊರಾರ್ಜಿ ಅವರಿಬ್ಬರನ್ನೂ ಸರಕಾರದಿಂದ ವಜಾಗೊಳಿಸಿದರು. ಜನತಾಪಕ್ಷ ಆರೆಸ್ಸೆಸ್ ಸಿದ್ಧಾಂತವನ್ನು ಒಪ್ಪಿಕೊಂಡ ಹಿಂದೂ ರಾಷ್ಟ್ರೀಯವಾದಿಗಳ ಜತೆಗಿನ ಸಂಬಂಧವನ್ನು ಕಡಿದುಕೊಳ್ಳಬೇಕು, ಇಲ್ಲದಿದ್ದರೆ ಜನತಾಪಕ್ಷ ಇಬ್ಭಾಗವಾಗುತ್ತದೆ ಎಂದು ಹೇಳಿದರು.

ಆದರೆ ಅವರ ಮಾತಿಗೆ ಯಾರೂ ಸೊಪ್ಪು ಹಾಕಲಿಲ್ಲ. ಜನತಾಪಕ್ಷಕ್ಕೆ ರಾಜೀನಾಮೆ ನೀಡಿ ಜನತಾ ಪಾರ್ಟಿ (ಸೆಕ್ಯುಲರ್) ಎಂಬ ಪಕ್ಷವನ್ನು ಸ್ಥಾಪಿಸಿದರು. ಮೊರಾರ್ಜಿ ವಿರೋಧಿ ಬಣದಲ್ಲಿರುವ ಅತೃಪ್ತ ನಾಯಕರನ್ನು ಸೆಳೆಯಲು ಯಶಸ್ವಿಯಾದರು. ಇದಕ್ಕೆ ಕಾಂಗ್ರೆಸ್ ಕುಮ್ಮಕ್ಕು ಇತ್ತು. ಇವೆಲ್ಲದರ ಪರಿಣಾಮ, ಜನತಾಪಕ್ಷದ ಸರಕಾರ ಸಂಸತ್ತಿನಲ್ಲಿ ವಿಶ್ವಾಸಮತ ಗಳಿಸಲು ವಿಫಲವಾಗಿ ಅಧಿಕಾರ ಕಳೆದುಕೊಂಡಿತು. ಆ ವೇಳೆಗೆ ರಾಜ್ ನಾರಾಯಣ್ ‘ಬಫೂನ್’
ಆಗಿದ್ದರು.

೧೯೮೦ರಲ್ಲಿ ಇಂದಿರಾ ಭಾರಿ ಬಹುಮತದಿಂದ ಆರಿಸಿ ಬಂದು ಮತ್ತೊಮ್ಮೆ ಪ್ರಧಾನಿಯಾದರು. ವಾರಾಣಸಿಯಿಂದ ಸ್ಪರ್ಧಿಸಿದ ರಾಜ್ ನಾರಾಯಣ್, ಕಾಂಗ್ರೆಸ್ಸಿನ ಕಮಲಾಪತಿ ತ್ರಿಪಾಠಿ ವಿರುದ್ಧ ಸೋತುಹೋದರು. ಮುಂದಿನ ೪ ವರ್ಷಗಳಲ್ಲಿ ರಾಜ್ ನಾರಾಯಣ್ ರಾಜಕೀಯ ಬದುಕಿನಲ್ಲಿ ಸಾಕಷ್ಟು ನೀರು ಹರಿದುಹೋಯಿತು. ದಿನ ಬೆಳಗಾದರೆ ಚರಣ್ ಸಿಂಗ್ ಮತ್ತು ರಾಜ್ ನಾರಾಯಣ್ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದರು. ಅಷ್ಟೊಂದು ಗಳಸ್ಯ-ಕಂಠಸ್ಯ ರಾಗಿದ್ದ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿತು. ‘ಚರಣ್ ಸಿಂಗ್‌ಗೆ ನಾನೇ ರಾಜಕೀಯ ಶಕ್ತಿ. ನಾನಿಲ್ಲದ ಅವರು ಅಶಕ್ತರು. ಹನುಮಂತನಿಲ್ಲದ ರಾಮನನ್ನು ಊಹಿಸಿಕೊಳ್ಳಲು ಸಾಧ್ಯವೇ?’ ಎಂದುಬಿಟ್ಟರು. ಇದು ಚರಣ್ ಸಿಂಗ್ ಅವರನ್ನು ಕೆರಳಿಸಿತು. ‘ಇಂದೇ ಕೊನೆ. ನಾಳೆಯಿಂದ ನನ್ನ ಮನೆ ಕಡೆ ಸುಳಿಯಬೇಡ. ನಿನ್ನ ಮುಖ ನೋಡಲು ಸಹ ನನಗೆ ಇಷ್ಟವಿಲ್ಲ. ನೀನೊಬ್ಬ ಜೋಕರ್’ ಎಂದು ಚರಣ್ ಸಿಂಗ್ ಬೈದು ಹೊರಹಾಕಿದರು.

‘ನಿಮ್ಮ ಪಾಲಿಗೆ ನಾನು ಹನುಮಂತನಾಗಿದ್ದೆ. ಇನ್ನು ಮುಂದೆ ನಾನು ರಾವಣ’ ಎಂದು ಹೇಳಿದ ರಾಜ್ ನಾರಾಯಣ್, ೧೯೮೪ರಲ್ಲಿ ಬಾಘಪತ್ ಲೋಕ ಸಭಾ ಕ್ಷೇತ್ರದಿಂದ ಚರಣ್ ಸಿಂಗ್ ವಿರುದ್ಧವೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತುಹೋದರು. ವಾರಾಣಸಿಯ ಭೂಮಿಹಾರ್ ಬ್ರಾಹ್ಮಣ ಕುಟುಂಬ ದಲ್ಲಿ ಜನಿಸಿದ ರಾಜ್ ನಾರಾಯಣ್ ಅವರಿಗೆ ಕೇವಲ ೩೦,೦೦೦ ಮತಗಳು ಬಂದರೆ, ಚರಣ್ ಸಿಂಗ್ ಅವರಿಗೆ ಎರಡೂವರೆ ಲಕ್ಷ ಮತಗಳು ಬಂದವು. ಅಲ್ಲಿಗೆ ರಾಜ್ ನಾರಾಯಣ್ ರಾಜಕೀಯ ಜೀವನ ಕೊನೆ ಸುತ್ತು ಸುತ್ತಿತ್ತು. ಅವರು ನಂತರ ಯಾವ ರಾಜಕೀಯ ವೇದಿಕೆಗಳಲ್ಲೂ ಕಾಣಿಸಿಕೊಳ್ಳಲಿಲ್ಲ.

ಅದಾಗಿ ಎರಡು ವರ್ಷಗಳ ಬಳಿಕ ನಿಧನರಾದರು. ಅವರಿಗೆ ಮೂವರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳಿದ್ದಳು. ಆದರೆ ಅವರು ಅವರನ್ನೆಲ್ಲ  ಸುಮಾರು ಎರಡು ದಶಕಗಳ ಹಿಂದೆಯೇ ತ್ಯಜಿಸಿ, ಬ್ರಹ್ಮಚರ್ಯೆ ಪಾಲಿಸುತ್ತಿದ್ದರು. ಭಾರತ ರಾಜಕಾರಣದಲ್ಲಿ ಅವರು ಇನ್ನೂ ಎತ್ತರವನ್ನು ಏರಬಹು ದಿತ್ತು. ಜೀವನವಿಡೀ ಹೋರಾಟದ ಬದುಕನ್ನು ಸವೆಸಿದ ಅವರು, ಅಧಿಕಾರ ಬಂದಾಗ ಜವಾಬ್ದಾರಿಯುತವಾಗಿ ವರ್ತಿಸಲೇ ಇಲ್ಲ. ಅದೇ ಅವರ ಅಸಲಿ ಸಮಸ್ಯೆ. ಅಧಿಕಾರದಲ್ಲಿದ್ದಾಗಲೂ ಹೋರಾಟಗಾರನಂತೆ ವರ್ತಿಸಿಬಿಟ್ಟರು. ಹೀಗಾಗಿ ಅನೇಕರ ಕಣ್ಣಲ್ಲಿ ಜೋಕರ್, ಬಫೂನ್, ವಿದೂಷಕರಾಗಿ ಕಂಡರು. ನಮ್ಮ ಚರ್ಚೆ ಇನ್ನೆಲ್ಲೋ ಹೊರಳಿತು.

ಸೊಗಸಾದ ಹೆಡ್‌ಲೈನ್
ಪತ್ರಿಕೆಗಳ ಶೀರ್ಷಿಕೆಗಳು ಕೆಲವು ಸಲ ಕವಿತೆಗಳ ಸಾಲಿನಂತೆ ಶಾಶ್ವತವಾಗಿ ನೆನಪಿನಲ್ಲಿ ಉಳಿದುಬಿಡುತ್ತವೆ. ಕೋಲ್ಕೊತಾದಿಂದ ಪ್ರಕಟವಾಗುವ ‘ದಿ ಟೆಲಿಗ್ರಾಫ್’ ಪತ್ರಿಕೆಯನ್ನು ಇಂದು ಓದುತ್ತಿದ್ದೆ. ಇಲೆಕ್ಟ್ರಾನಿಕ್ ವೋಟಿಂಗ್ ಮಷೀನ್ (ಎವಿಎಂ) ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅದಕ್ಕೆ ಆ ಪತ್ರಿಕೆ, ’’EVMs Get Apex Court’s Vote’’ ಎಂಬ ಸೊಗಸಾದ ಶೀರ್ಷಿಕೆ ಬರೆದಿತ್ತು. ಹಾಗೆಯೇ ಅದೇ ಪುಟದ ಅಡಿಯಲ್ಲಿ (Anchor Story), ಪಿತ್ರಾರ್ಜಿತ ಆಸ್ತಿ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ ಸ್ಯಾಮ್ ಪಿತ್ರೋಡಾ ಸಂಬಂಧಿತ ವರದಿಗೆ, Good Samaritan, with a gift of the gaffe ಎಂಬ ಶೀರ್ಷಿಕೆ ನೀಡಿತ್ತು.