ವಿದೇಶವಾಸಿ
dhyapaa@gmail.com
ಕೇಂದ್ರ ಸರಕಾರ ಮುನ್ನೂರ ಐವತ್ತನೆಯ ವಿಧಿ ರದ್ದುಗೊಳಿಸಿ ಈಗ ಹೆಚ್ಚು ಕಮ್ಮಿ ಮೂರು ವರ್ಷ. ಅಲ್ಲಿಂದ ಇದುವರೆಗೆ ಕಾಶ್ಮೀರದಲ್ಲಿ ಸುಮಾರು ಐವತ್ತೈದು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಈಗಾಗಲೇ ಮೂವತ್ತಕ್ಕೂ ಹೆಚ್ಚು ಯೋಜನೆಗಳು ಪೂರ್ಣಗೊಂಡಿವೆ.
ನಮ್ಮ ಜೀವಿತಾವಧಿಯಲ್ಲಿ ಈ ದಿನ ನೋಡುತ್ತೇವೆ ಎಂದು ಖಂಡಿತ ಎಣಿಸಿರಲಿಲ್ಲ. ಭಾರತದ ಉತ್ತರದ ಕಣಿವೆ ರಾಜ್ಯ ಪ್ರತಿನಿತ್ಯವೂ ಭಯೋತ್ಪಾದನೆ, ಆತಂಕ, ಹತ್ಯೆ, ಗುಂಡು, ಸಾವು ಇತ್ಯಾದಿಗಳಿಂದ ಸಾಕಷ್ಟು ಘಾಸಿಗೊಳ ಗಾಗಿತ್ತು. ಉಗ್ರರ, ಪ್ರತ್ಯೇಕತಾವಾದಿಗಳ, ಆತಂಕವಾದಿಗಳ ಆರ್ಭಟಕ್ಕೆ ರಾಜ್ಯ ನಲುಗಿ ಜರ್ಜರಿತವಾಗಿತ್ತು. ಒಮ್ಮೆ ಪಂಜಾಬ್‌ನಲ್ಲಿ ಖಲಿಸ್ಥಾನದ ಕೂಗು ಕೇಳಿದ್ದು ಬಿಟ್ಟರೆ, ಸ್ವಾತಂತ್ರ್ಯಾ ನಂತರದಲ್ಲಿ ಭಾರತದ ಯಾವ ಪ್ರದೇಶವೂ ಜಮ್ಮು ಕಾಶ್ಮೀರದಷ್ಟು ಸಂಕಷ್ಟ- ಸಂಘರ್ಷಕ್ಕೆ ಸಾಕ್ಷಿಯಾಗಲಿಲ್ಲ ಎಂದರೆ ತಪ್ಪಿಲ್ಲ.
ಕಾಶ್ಮೀರದ ನೆಲ ಅದಕ್ಕೆ ಅರ್ಹವೂ ಆಗಿರಲಿಲ್ಲ, ಅಲ್ಲಿಯ ಬಹುತೇಕ ಜನ ಅದನ್ನು ಬಯಸಿಯೂ ಇರಲಿಲ್ಲ. ಹಿಮಾಲಯದ ತೊಪ್ಪಲಿನ ತಂಪಿನಲ್ಲಿರುವ ಜನ ನಿತ್ಯವೂ ಬಾಂಬ, ಗುಂಡಿನ ದಾಳಿಯ ಬೇಗೆಯಲ್ಲಿ ಬೇಯು ತ್ತಿದ್ದರು. ನೋಡ ನೋಡುತ್ತಿದ್ದಂತೆ ಕಾಶ್ಮೀರದ ಪರಿಸ್ಥಿತಿ ಹೇಗಾಯಿತು ಎಂದರೆ, ಅಲ್ಲಿಯ ಸರಕಾರವಷ್ಟೇ ಅಲ್ಲ, ಕೇಂದ್ರ ಸರಕಾರವೂ ಕುಮುಟಿ ಬೀಳುವಂತಾ ಯಿತು. ಕೆಲವು ರಾಜ್ಯ ಸರಕಾರಗಳು ಭಾರತದ ಪರವಾಗಿವೆಯೋ, ಪಾಕಿಸ್ತಾನದ ಪರವಾಗಿವೆಯೋ ಅಥವಾ ಕಾಶ್ಮೀರದ ಪರವಾಗಿವೆಯೋ ಎನ್ನುವುದೇ ಅರ್ಥವಾಗುತ್ತಿರಲಿಲ್ಲ.
ಆ ಕಾಲದಲ್ಲಿ ಕಾಶ್ಮೀರ ಕೈತಪ್ಪಿ ಹೋಗುತ್ತಿದೆ ಎಂದು ಭಾವಿಸಿದವರೇ ಹೆಚ್ಚು. ಆದರೆ ಇತ್ತೀಚೆಗೆ ಆಗುತ್ತಿರುವ ಬದಲಾವಣೆ ಮತ್ತು ಬರುತ್ತಿರುವ ವಿದ್ಯ ಮಾನ ಕೇಳಿದಾಗ ಯಾವುದೋ ನೆಮ್ಮದಿ, ಸಮಾಧಾನ. ಒಂದು ಕಾಲದಲ್ಲಿ ಜಮ್ಮು-ಕಾಶ್ಮೀರವನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯುತ್ತಿದ್ದರು. ಹಸಿರು ಕಣಿವೆ, ಹಿಮಾಚ್ಛಾದಿತ ಪರ್ವತ, ಪ್ರಕೃತಿದತ್ತ ಸರೋವರ, ಝರಿ-ಜಲಪಾತ, ಹಚ್ಚ ಹಸಿರ ಹುಲ್ಲುಗಾವಲು, ಮೈ ತುಂಬ ಹೂ ಹೊದ್ದ ಭೂಮಿ, ನೈಸರ್ಗಿಕ ಉದ್ಯಾನವನ, ಕಣ್ಣು ತೂರಿದಷ್ಟೂ ಕಾಣುವ ರಮಣೀಯ ಸೌಂದರ್ಯದ ಅದ್ಭುತ ದೃಶ್ಯ, ಅಮೂಲ್ಯ ಔಷಧಯುಕ್ತ ಗಿಡಮೂಲಿಕೆಗಳು, ಒಂದೇ ಎರಡೇ! ’ಸ್ವಿಡ್ಜರ್‌ಲ್ಯಾಂಡಿಗೆ ಕಿಚ್ಚು ಹಚ್ಚೆಂದ…’ ಎನ್ನುವಂತಿತ್ತು.
ಭೌಗೋಳಿಕವಾಗಿ ಆ ಪ್ರದೇಶ ಇಂದಿಗೂ ಹಾಗೆಯೇ ಇದೆ. ಆದರೆ ಯಾವ ಕುಹುಯೋಗವೋ ಗೊತ್ತಿಲ್ಲ, ಪಕ್ಕದಲ್ಲಿರುವ ಕುಹಕ ಕುತ್ಸಿತ ದೇಶದಿಂದಾಗಿ ಕಾಶ್ಮೀರ ಎಂದರೆ ಆತಂಕವಾದಿಗಳ ಮೈದಾನ, ಕಾಶ್ಮೀರಿ ಪಂಡಿತರ ಮಾರಣಹೋಮ ಮಾಡಿದ ನಾಡು, ಸೈನಿಕರ ಮೇಲೆ ಕಲ್ಲು ತೂರುವ ರಾಜ್ಯವೆಂದೇ ಹೆಸರಾಯಿತು. ಯಾವತ್ತು ಕೇಂದ್ರ ಸರಕಾರ ಮುನ್ನೂರ ಎಪ್ಪತ್ತನೆಯ ವಿಧಿಯನ್ನು ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿಸಿತೋ ಅಲ್ಲಿಂದ ಜಮ್ಮು ಕಾಶ್ಮೀರದ ಜಾತಕ ಬದಲಾಗ ತೊಡಗಿತು.
ಕಲ್ಲು ತೂರುತ್ತಿದ್ದ ಯುವಕರ ಕೈಗೆ ಉದ್ಯೋಗ ದೊರಕಲಾರಂಭಿಸಿತು, ಮಕ್ಕಳ ಕೈಯ್ಯಲ್ಲಿ ಪುಸ್ತಕ ಬರಲಾರಂಭಿಸಿತು. ಗಲಭೆಗೆ ಹೋಗುತ್ತಿದ್ದ ಜನ ಕಚೇರಿಗೆ ಹೋಗಲಾರಂಭಿಸಿದರು. ಅಂದು ಬೀಸಿದ ಒಂದೊಂದು ಕಲ್ಲು ಕೂಡ ಇಂದು ರಸ್ತೆ, ಆಸ್ಪತ್ರೆ, ಮಾಲ್ ನಿರ್ಮಾಣದ ಕೆಲಸಕ್ಕೆ ಪರಿವರ್ತನೆ ಯಾಗುತ್ತಿದೆ ಎಂದು ಯಾರು ತಾನೆ ಊಹಿಸಲು ಸಾಧ್ಯವಿತ್ತು ಹೇಳಿ? ಹಾಗಾದರೆ ಕಾಶ್ಮೀರದಲ್ಲಿ ಪರಿಸ್ಥಿತಿ ನಿಜಕ್ಕೂ ಸುಧಾರಿಸುತ್ತಿದೆಯೇ? ಕಾಶ್ಮೀರಿ ಪಂಡಿತರ ವಿಷಯ, ಲಾಲ್ ಚೌಕ್ ವಿಷಯ ಯಾವುದನ್ನು ಇಲ್ಲಿ ಉಲ್ಲೇಖಿಸುತ್ತಿಲ್ಲ. ಇತ್ತೀಚೆಗೆ ಕೇಂದ್ರ ಸರಕಾರ ಕಾಶ್ಮೀರದಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಯೋಜನೆಗಳ ಕುರಿತು ಮಾತ್ರ ಹೇಳಲು ಬಯಸುತ್ತೇನೆ.
ಕೇಂದ್ರ ಸರಕಾರ ಮುನ್ನೂರ ಐವತ್ತನೆಯ ವಿಧಿ ರದ್ದುಗೊಳಿಸಿ ಈಗ ಹೆಚ್ಚು ಕಮ್ಮಿ ಮೂರು ವರ್ಷ. ಅಲ್ಲಿಂದ ಇದುವರೆಗೆ ಕಾಶ್ಮೀರದಲ್ಲಿ ಸುಮಾರು ಐವತ್ತೈದು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಈಗಾಗಲೇ ಮೂವತ್ತಕ್ಕೂ ಹೆಚ್ಚು ಯೋಜನೆಗಳು ಪೂರ್ಣಗೊಂಡಿವೆ. ನಿತಿನ್ ಗಡ್ಕರಿ ಸಾರಿಗೆ ಮಂತ್ರಿಯಾದಾಗಿಂದ ದೇಶದಲ್ಲಿ ‘ಹೆದ್ದಾರಿ ಕ್ರಾಂತಿ’ ಆರಂಭವಾದದ್ದಂತೂ ಹೌದು. ಜಮ್ಮು ಕಾಶ್ಮೀರವೂ ಅದಕ್ಕೆ ಹೊರತಲ್ಲ.
ರಾಜ್ಯದಲ್ಲಿ ಒಟ್ಟೂ ಇಪ್ಪತತೈದಕ್ಕೂ ಹೆಚ್ಚು ಹೆದ್ದಾರಿಗಳು ನಿರ್ಮಾಣಗೊಳ್ಳುತ್ತಿವೆ. ಅದರಲ್ಲೂ ಪ್ರಮುಖವಾಗಿ ಹೇಳಬೇಕೆಂದರೆ, ‘ದೆಹಲಿ- ಅಮೃತಸರ- ಕತ್ರಾ ಎಕ್ಸ್‌ಪ್ರೆಸ್ ಹೈವೇ’ ಅಥವಾ ‘ದೆಹಲಿ ಅಮೃ ತಸರ ಕಾರಿಡಾರ್ (ಡಿಎಕೆ)’. ಮೂರು ವರ್ಷದ ಹಿಂದೆ ಇದರ ವಿವರವಾದ ಯೋಜನಾ ವರದಿ (ಡಿಪಿಆರ್) ಯನ್ನು ಸಿದ್ಧಪಡಿಸಲಾಯಿತು. ಟೆಂಡರ್ ಮತ್ತು ಭೂಸ್ವಾಧೀನದ ಕಾರ್ಯ ಜಾರಿಯಲ್ಲಿದೆ. ಈ ಕಾರ್ಯಕ್ಕೆ ಒಟ್ಟೂ ಹದಿನೆಂಟು ಬೇರೆ ಬೇರೆ ಟೆಂಡರ್ ಕರೆಯಲಾಗಿದೆ.
ಒಟ್ಟೂ ಆರು ನೂರ ಐವತ್ತು ಕಿಲೋಮೀಟರ್ ಉದ್ದದ ಚತುಷ್ಪಥ ಹೆದ್ದಾರಿಯ ನಿರ್ಮಾಣದ ವೆಚ್ಚ ೨೫ ಸಾವಿರ ಕೋಟಿ ರುಪಾಯಿ ಎಂದು ಅಂದಾ ಜಿಸಲಾಗಿದೆ. ಮೊದಲ ಹಂತದ ಸುಮಾರು ನಾಲ್ಕುನೂರು ಕೊಲೋಮೀಟರ್‌ನಲ್ಲಿ ಈ ಹೆದ್ದಾರಿ ದೆಹಲಿ ಲುಧಿಯಾನ ಮತ್ತು ಗುರ ದಾಸ್ಪುರ ಪಟ್ಟಣಗಳ ನಡುವೆ ಸಂಪರ್ಕ ಬೆಸೆಯಲಿದೆ. ನಂತರದ ಇನ್ನೂರೈವತ್ತು ಕಿಲೋಮೀಟರ್ ಕತ್ರಾವರೆಗೂ ಕೊಂಡೊಯ್ಯುತ್ತದೆ. ೨೦೨೫ ರ ಅಂತ್ಯಕ್ಕೆ ಈ ಕಾಮಗಾರಿ ಸಂಪೂರ್ಣಗೊಳ್ಳಲಿದೆ. ಜಮ್ಮು ಶ್ರೀನಗರ ಸೆಮಿ-ರಿಂಗ್ ರೋಡ್ ಯೋಜನೆ ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಇದು ಶ್ರೀನಗರ ಪಟ್ಟಣದ ಸುತ್ತಲೂ ಸುಮಾರು ಅರವತ್ತೆರಡು ಕಿಲೋಮೀಟರ್ ಉದ್ದದ ಚತುಷ್ಪಥ ಸೆಮಿ-ರಿಂಗ್ ರೋಡ್ ಆಗಲಿದೆ.
ಇದೂ ಕೂಡ ಎರಡು ಹಂತದಲ್ಲಿ ನಿರ್ಮಾಣಗೊಳ್ಳುತ್ತಿದೆ. ಮೊದಲ ಹಂತದಲ್ಲಿ ನಲವತ್ತೆರಡು ಕಿಲೋಮೀಟರ್, ಎರಡನೆಯ ಹಂತದಲ್ಲಿ ಇಪ್ಪತ್ತು ಕಿಲೋಮೀಟರ್‌ನ ಕಾಮಗಾರಿ ನಡೆಯಲಿದೆ. ಶ್ರೀನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಈ ಯೋಜನೆ ಸಹಾಯಕಾರಿಯಾಗಲಿದೆ. ’ಅಂಜಿ ಖಾಡ್’ ಸೇತುವೆ ಜಮ್ಮು ಮತ್ತು ಕಾಶ್ಮೀರದ ಜಮ್ಮು-ಬಾರಾಮು ರೈಲು ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಕೇಬಲ್ ಸೇತುವೆಯಾಗಿದ್ದು, ಇದನ್ನು ಹಿಂದೂಸ್ತಾನ್ ಕನ್ಸ್ಟ್ರಕ್ಷನ್ ಕಂಪನಿ (ಎಚ್‌ಸಿಸಿ) ನಿರ್ಮಿಸುತ್ತಿದೆ.
ನಾಲ್ಕು ನೂರ ಐವತ್ತು ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ, ನಾಲ್ಕುನೂರ ಎಪ್ಪತ್ತೈದು ಮೀಟರ್ ಉದ್ದದ ಈ ಸೇತುವೆ ಇದೇ ವರ್ಷ ಆಗಸ್ಟ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಂಜಿ ನದಿಯ ಮೇಲೆ ಮುನ್ನೂರ ಮೂವತ್ತು ಮೀಟರ್ ಪೂರ್ಣಗೊಂಡರೆ, ಇದು ದೇಶದ ಮೊದಲ ಕೇಬಲ್-ಸ್ಟೇಡ್ ರೈಲ್ವೆ ಸೇತುವೆಯಾಗಲಿದೆ. ಈ ಕಾರ್ಯಕ್ಕೆ ಸ್ಲೋವಾ ಕಿಯಾದಲ್ಲಿ ತಯಾರಿಸಿದ ನೂರು ವಿಶೇಷ ಗುಣಮಟ್ಟದ ತಂತಿಯನ್ನು ಬಳಸಲಾ ಗುತ್ತಿದೆ.
ರಾಜ್ಯದಲ್ಲಿ ಒಟ್ಟೂ ಮೂವತ್ತೊಂದು ರಸ್ತೆ ಸುರಂಗ ನಿರ್ಮಿಸುವ ಯೋಜನೆ ರೂಪುಗೊಂಡಿದೆ. ಅದರಲ್ಲಿ ಇಪ್ಪತ್ತು ಜಮ್ಮು ಕಾಶೀರದಲ್ಲಿದ್ದರೆ, ಹನ್ನೊಂದು ಲಡಾಕ್ ನಲ್ಲಿರುತ್ತದೆ. ಇವುಗಳಲ್ಲಿ ಪ್ರಮುಖವಾಗಿರುವುದು ಎರಡು ಸುರಂಗಗಳು. ’ಝೀ-ಮೋರ್ಹರ್’(Z-Morh) ಸುರಂಗವು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ನಿರ್ಮಿಸು ತ್ತಿರುವ ಆರೂವರೆ ಕಿಲೋಮೀಟರ್ ಉದ್ದದ ದ್ವಿಪಥ ರಸ್ತೆ ಯೋಜನೆಯಾಗಿದ್ದು, ಇದರ ವೆಚ್ಚ ಸುಮಾರು ಎರಡು ಸಾವಿರದ ನಾಲ್ಕು ನೂರು ಕೋಟಿ ಎಂದು ಅಂದಾಜಿಸ ಲಾಗಿದೆ. ಈ ಯೋಜನೆಗೆ ಹತ್ತು ವರ್ಷದ ಹಿಂದೆಯೇ ಅಡಿಗಲ್ಲು ಹಾಕಲಾಗಿತ್ತಾದರೂ, ಕಾರ್ಯ ಮುಂದುವರಿದಿರಲಿಲ್ಲ.
ಮೂರು ವರ್ಷದ ಹಿಂದೆ ಪುನಃ ಟೆಂರ್ಡ ಕರೆದು ಕಾರ್ಯ ಆರಂಭಿಸಿದ ನಂತರ ಈ ಕಾರ್ಯ ಈಗ ಪೂರ್ಣಗೊಂಡಿದೆ. ಇದರ ಫಲಶ್ರುತಿಯಾಗಿ, ಮೊದಲು ಮೂರೂವರೆ ಗಂಟೆ ತಗಲುತ್ತಿದ್ದ ಲಡಾಕ್ನಿಂದ ಅಮರನಾಥ್ ಗುಹೆಯ ಪ್ರಯಾಣದ ಸಮಯ ಕೇವಲ ಹದಿನೈದು ನಿ ಮಿಷಕ್ಕೆ ಇಳಿಯಲಿದೆ. ಇಂಗ್ಲಿಷ್ನ ಝಡ್ ಅಕ್ಷರದ ಆಕಾರದಲ್ಲಿ ನಿರ್ಮಾಣಗೊಂಡಿದ್ದರಿಂದ ಈ ಸುರಂಗಕ್ಕೆ Z-Morh ಎಂದು ಹೆಸರಿಡಲಾಗಿದೆ. ಇನ್ನೊಂದು ‘ಝೋಜಿ-ಲಾ’ ಸುರಂಗ.
ಇದು ಸುಮಾರು ಹದಿನಾಲ್ಕು ಕಿಲೋಮೀಟರ್ ಉದ್ದದ ರಸ್ತೆ ಸುರಂಗವಾಗಿದ್ದು, ಹಿಮಾಲಯದಲ್ಲಿ ನಿರ್ಮಾಣ ಹಂತದಲ್ಲಿದೆ. ಕುದುರೆಯ ಮುಖದ ಆಕಾರದ ಸುರಂಗವನ್ನು ಸುಮಾರು ಹತ್ತು ಮೀಟರ್ ಅಗಲ, ಎಂಟು ಮೀಟರ್ ಎತ್ತರಕ್ಕೆ ವಿನ್ಯಾಸ ಗೊಳಿಸಲಾಗಿದೆ. ಇದು ಕೂಡ ಎರಡು ಲೇನ್ ಹೊಂದಿ ರುತ್ತದೆ. ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ಸೋನ್ಮಾರ್ಗ್ ಮತ್ತು ಡ್ರಾಸ್ ಪಟ್ಟಣದ ನಡುವೆ ಝೋಜಿ-ಲಾ ಪಾಸ್ ಮೂಲಕ ಹಾದುಹೋಗುತ್ತದೆ.
CCTV, ರೇಡಿಯೋ ನಿಯಂತ್ರಣ, ವಾತಾಯನ ಮತ್ತು ತಡೆರಹಿತ ಶಕ್ತಿಯಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಈ ಸುರಂಗ ಸುಸಜ್ಜಿತವಾಗಿದೆ. Z-Morh ಸುರಂಗದೊಂದಿಗೆ, ಝೋಜಿ-ಲಾ ಸುರಂಗವು ಲಡಾಖ್ ಮತ್ತು ಬಾಲ್ಟಾಲ್‌ಗೆ ಯಾವುದೇ ಹವಾಮಾನ ವೈಪರೀತ್ಯದ ನಡುವೆಯೂ ವರ್ಷಪೂರ್ತಿ ಸಂಪರ್ಕವನ್ನು ಒದಗಿಸುತ್ತದೆ. ಈ ಎಲ್ಲ ಸುರಂಗದ ನಿರ್ಮಾಣದ ಒಟ್ಟೂ ವೆಚ್ಚ ಎಷ್ಟು ಗೊತ್ತಾ? ಸುಮಾರು ಒಂದೂವರೆ ಲಕ್ಷ ಕೋಟಿ ರುಪಾಯಿ. ಅಂದರೆ, ಕರ್ನಾಟಕದ ಅರ್ಧ ಬಜೆಟ್!
‘ಏಮ್ಸ (AIIMS) ಕಾಶ್ಮೀರ’ ಇನ್ನೂರ ಇಪ್ಪತ್ತು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಯೋಜನೆಯಾಗಿದ್ದು, ಸುಮಾರು ಎರಡು ಸಾವಿರ ಕೋಟಿ ರುಪಾಯಿ ಅಂದಾಜು ವೆಚ್ಚವನ್ನು ಹೊಂದಿದೆ. ಯೋಜನೆಯು ಜನವರಿ 2025 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಯೋಜನೆಯು ಫುಟ್ಬಾಲ್ ಮೈದಾನ, ಟೆನ್ನಿಸ್ ಕೋರ್ಟ್ ಮತ್ತು ಔಷಧಿಯ ಸಸ್ಯಗಳ ಉದ್ಯಾನ ಸೇರಿದಂತೆ ಅರವತ್ತು ಕಟ್ಟಡಗಳ ನಿರ್ಮಾಣವನ್ನು ಒಳಗೊಂಡಿದೆ. ಏಮ್ಸ್
ವಿಜಯಪುರ’ ಜಮ್ಮು ಕ್ಯಾಂಪಸ್ ರಾಷ್ಟ್ರೀಯ ಹೆದ್ದಾರಿ ನಲವತ್ತನಾಲ್ಕರ ಪಕ್ಕದಲ್ಲಿರುವ ಇನ್ನೂರ ಇಪ್ಪತ್ತೈದು ಎಕರೆ ಪ್ರದೇಶದಲ್ಲಿ ನಿರ್ಮಾಣ ಗೊಂಡಿದೆ.
ಇದು ಎರಡು ಭಾಗದಲ್ಲಿದ್ದು, ಉತ್ತರ ಕ್ಯಾಂಪಸ್ ಸುಮಾರು ನೂರು ಎಕರೆಗಳನ್ನು ಒಳಗೊಂಡಿದ್ದು, ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಕಟ್ಟಡಗಳನ್ನು
ಹೊಂದಿದೆ. ದಕ್ಷಿಣ ಕ್ಯಾಂಪಸ್ ನೂರ ಮೂವತ್ತು ಎಕರೆಗಳನ್ನು ಒಳಗೊಂಡಿದ್ದು, ಸಿಬ್ಬಂದಿ ವಸತಿ ಮತ್ತು ಹಾಸ್ಟೆಲ್ಗಳನ್ನು ಹೊಂದಿದೆ. ಒಟ್ಟೂ ಸುಮಾರು ಒಂದೂ ಮುಕ್ಕಾಲು ಸಾವಿರ ಕೋಟಿ ವೆಚ್ಚದ ಈ ಪ್ರತಿಷ್ಠಿತ ಯೋಜನೆ ಈಗಾಗಲೇ ಪೂರ್ಣಗೊಂಡಿದೆ.
ಕಣಿವೆಯಲ್ಲಿ ಇನ್ನು ಮುಂದೆ ಮೆಟ್ರೋ ರೈಲು ಓಡಾಡಲಿದೆ. ಜಮ್ಮು ನಗರದಲ್ಲಿ ಇಪ್ಪತ್ಮೂರು ನಿಲ್ದಾಣ ಹೊಂದಿದ,ಇಪ್ಪತ್ಮೂರು ಕಿಲೋಮೀರ್ಟ
ಉದ್ದದ ಮೆಟ್ರೊ ಯೋಜನೆ ರೂಪುಗೊಳ್ಳುತ್ತಿದೆ. ಇದೇ ರೀತಿಯ ಮೆಟ್ರೋ ಶ್ರೀನಗರದಲ್ಲಿಯೂ ಬರುತ್ತಿದ್ದು, ಅಲ್ಲಿ ಇಪ್ಪತ್ತನಾಲ್ಕು ನಿಲ್ದಾಣ, ಇಪ್ಪತ್ನಾಲ್ಕು ಕಿಲೋಮೀಟರ್ ಉದ್ದದ ಮಾರ್ಗ ಇರಲಿದೆ. ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾನರ್ ಪಥರ್ನಕ್ಕಿ ಮತ್ತು ಕಿರು ಗ್ರಾಮಗಳ ಬಳಿ ಚೆನಾಬ್
ನದಿಗೆ ಅಣೆಕಟ್ಟು ಕಟ್ಟಿ, ಕಿರು ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಲಾಗುತ್ತಿದೆ. ಈ ವರ್ಷ ಕೇಂದ್ರ ಸರಕಾರ ತನ್ನ ಬಜೆಟ್ನಲ್ಲಿ ಗ್ರಾಮೀಣ ಭಾಗದ
ಜನರ ಮನೆ ನಿರ್ಮಾಣ ಮತ್ತು ಹದಿನೆಂಟು ಲಕ್ಷ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವುದಕ್ಕೆಂದೇ ಒಂದೂಕಾಲು ಲಕ್ಷ ಕೋಟಿ ರುಪಾಯಿ ಘೋಷಿಸಿದೆ.
ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು.
ಇದುವರೆಗೆ ಹೇಳಿದ್ದೆಲ್ಲ ಸರಕಾರಿ ಯೋಜನೆಗಳು, ಇಂದಲ್ಲ ನಾಳೆ ಮಾಡಲೇಬೇಕಾದದ್ದು. ಈಗಲೇ ಆಗುತ್ತಿರುವುದು, ಇಷ್ಟು ಕ್ಷಿಪ್ರಗತಿಯಲ್ಲಿ ಆಗುತ್ತಿರು ವುದು ಉತ್ತಮ ಬೆಳವಣಿಗೆ. ಆದರೆ, ಕೇವಲ ಸರಕಾರಿ ಯೋಜನೆಗಳಿಂದ ಒಂದು ಪ್ರದೇಶ ಸಂಪೂರ್ಣ ಉದ್ಧಾರ ಆಗುವುದಿಲ್ಲ. ಒಂದು ಪ್ರದೇಶ
ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಖಾಸಗಿ ಸಂಸ್ಥೆಗಳೂ ಸೇರಿಕೊಳ್ಳಬೇಕು. ಸಂತೋಷದ ಸಂಗತಿಯೆಂದರೆ, ಇಂದು ಐದು ನೂರಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ವ್ಯಾಪಾರ ಬಂಡವಾಳ ಹೂಡಿಕೆಯ ಒಪ್ಪಂದ ಮಾಡಿಕೊಂಡಿವೆ.
ಅದರಲ್ಲಿ ಪ್ರಮುಖವಾಗಿ ಹೇಳಬೇಕಾದದ್ದು, ದುಬೈನ ’ಎಮಾರ್’ ಸಂಸ್ಥೆ ನಿರ್ಮಿಸುತ್ತಿರುವ ಮಾಲ. ನಿಮಗೆ ತಿಳಿದಿರಬಹುದು, ದುಬೈನ ಪ್ರತಿಷ್ಠಿತ, ವಿಶ್ವದ ಅತಿ ಎತ್ತರದ ’ಬುರ್ಜ್ ಖಲೀಫಾ’ ಕಟ್ಟಡ ನಿರ್ಮಿಸಿದ ಕೀರ್ತಿ ಈ ಎಮಾರ್ ಸಂಸ್ಥೆಗೆ ಸಲ್ಲುತ್ತದೆ. ಅಂತಹ ಒಂದು ಸಂಸ್ಥೆ ಇಂದು ಕಾಶ್ಮೀರದಲ್ಲಿ ಮೂರು ಸಾವಿರದ ಇನ್ನೂರು ಕೋಟಿ ರೂಪಾಯಿ ತೊಡಗಿಸಿ ಒಂದು ವ್ಯಾಪಾರಿ ಮಳಿಗೆ ನಿರ್ಮಿಸಲು ಸಿದ್ಧವಾಗಿದೆ. ಒಂದು ಅಂದಾಜಿನ ಪ್ರಕಾರ ಸುಮಾರು ಮೂರು ಬಿಲಿಯನ್ ಡಾಲರ್ ಗಿಂತಲೂ ಹೆಚ್ಚಿನ ಮೊತ್ತದ ಈ ರೀತಿಯ ಒಪ್ಪಂದವಾಗಿದೆ. ಈ ಎಲ್ಲ ಯೋಜನೆಯಿಂದಾಗಿ ಕಣಿವೆಯಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಠಿಯಾಗಲಿದೆ. ಅಂದರೆ, ಕಲ್ಲು ತೂರುತ್ತಿದ್ದ ಕೈಗಳಿಗೆ ಕೆಲಸ ಸಿಗಲಿದೆ.
ಹೇಳಲಿಕ್ಕೆ ನಮ್ಮ ರಾಜ್ಯದಿಂದ ಅತಿ ದೂರದಲ್ಲಿರುವ ಪ್ರದೇಶ ಜಮ್ಮು-ಕಾಶ್ಮೀರ. ಆದರೆ ಯಾವ ಕಾರಣವೋ ಏನೋ, ಭಾವನಾತ್ಮಕವಾಗಿ ಇತರ ಎಲ್ಲ
ರಾಜ್ಯಗಳಿಗಿಂತ ಹತ್ತಿರವಾಗಿರುವುದು ಇದೇ ದೇಶ. ಕಾಶ್ಮೀರಕ್ಕಾಗಿ ಮನ ಮಿಡಿದಷ್ಟು ಪಕ್ಕದ ಕೇರಳ, ಗೋವಾ, ಮಹಾರಾಷ್ಟ್ರಕ್ಕೆ ಮಿಡಿಯುವುದಿಲ್ಲ. ಕಣಿವೆಯಲ್ಲಿ ಒಂದು ಕೊಲೆಯಾದರೂ ನಮ್ಮ ಮನೆಯಲ್ಲಿಯೇ ಆದಷ್ಟು ಸಂಕಟವಾಗುತ್ತದೆ. ಸದ್ಯ ಆ ಪ್ರಾಂತ್ಯದ ಭವಿಷ್ಯ ಬದಲಾಗುವ ಲಕ್ಷಣ
ಕಂಡುಬರುತ್ತಿದೆ. ಆ ಬದಲಾವಣೆ ಆದಷ್ಟು ಬೇಗ ಆಗಲಿ, ಅಲ್ಲಿಯ ಜನ ಸದಾ ನಗುತ್ತಿರಲಿ.