Thursday, 12th December 2024

ಪಂಚ ಗ್ಯಾರಂಟಿ ಯೋಜನೆಗಳ ಸುತ್ತಮುತ್ತ

ವಿಶ್ಲೇಷಣೆ

ರಮಾನಂದ ಶರ್ಮಾ

ಯಾವುದೇ ಕಾರಣಕ್ಕೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸ್ವಾತಂತ್ರ್ಯೋತ್ಸವದ ಸಂದೇಶದಲ್ಲಿ ಖಡಾಖಂಡಿತವಾಗಿ ಹೇಳಿದ್ದಾರೆ ಮತ್ತು ಆಶ್ವಾಸನೆ ನೀಡಿದ್ದಾರೆ. ಆದರೂ ಈ ನಿಟ್ಟಿನಲ್ಲಿ ಹಲವು ವದಂತಿಗಳು ಹರಿದಾಡುತ್ತಲೇ ಇವೆ. ‘ಗ್ಯಾರಂಟಿ ಯೋಜನೆಗಳಿಗೆ ಸದ್ಯದಲ್ಲಿಯೇ ಎಳ್ಳು- ನೀರು ಸಾಧ್ಯತೆ’, ‘ಅಳಿವಿನಂಚಿನಲ್ಲಿ ಗ್ಯಾರಂಟಿ ಯೋಜನೆಗಳು’, ‘ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ’, ‘ಮಾನದಂಡದಲ್ಲಿ ಮಾರ್ಪಾಡು’, ‘ಉಳ್ಳವರಿಗೆ ಗ್ಯಾರಂಟಿ ಯೋಜನೆ ಇಲ್ಲ, ಬಡತನ ರೇಖೆಯಿಂದ ಕೆಳಗಿದ್ದವರಿಗೆ ಮಾತ್ರ’ ಹೀಗೆ ಸಾಗುತ್ತದೆ ವದಂತಿಗಳ ಸಾಲು.

ಗ್ಯಾರಂಟಿ ಯೋಜನೆಗಳ ಮುಂದುವರಿಕೆಯ ವಿಷಯದಲ್ಲಿ ಪಕ್ಷದೊಳಗೇ ಕೆಲವರು ಅಪಸ್ವರ ಎತ್ತಿದ್ದು, ‘ಈ ಯೋಜನೆಗಳಿಂದಾಗಿ ಅಭಿವೃದ್ಧಿ ಕುಂಠಿತ ವಾಗಿದೆ, ನಿರೀಕ್ಷೆಯಷ್ಟು ಅನುದಾನ ಹರಿಯುತ್ತಿಲ್ಲ’ ಎಂಬ ಅಸಮಾಧಾನ ಅವರಿಂದ ವ್ಯಕ್ತವಾಗುತ್ತಿದೆಯಂತೆ. ಹಣದುಬ್ಬರದ ದಿನಗಳಲ್ಲಿ ಖರೀದಿ ಶಕ್ತಿ ಕುಂದಿರುವಾಗ ಜನಸಾಮಾನ್ಯರಿಗೆ ಸ್ವಲ್ಪ breathing space  ನೀಡಲು ಜಾರಿಗೊಳಿಸಲಾಗಿದ್ದ ಈ ಯೋಜನೆಗಲಿಗೆ ವಾರ್ಷಿಕ ಸುಮಾರು ೬,೦೦೦ ಕೋಟಿ ರು. ವೆಚ್ಚವಾಗುತ್ತಿದ್ದು, ಕೆಲವು ಸಮೀಕ್ಷೆಗಳ ಪ್ರಕಾರ ಜನರು ಇದನ್ನು ಸ್ವಾಗತಿಸಿದ್ದಾರೆ.

‘ಶಕ್ತಿ’ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ನೀಡುವ ಕೊಡುಗೆಗೆ ಈವರೆಗೆ ೬,೫೪೧ ಕೋಟಿ ರು. ಖರ್ಚಾಗಿದ್ದರೆ, ‘ಗೃಹಜ್ಯೋತಿ’ ಯೋಜನೆ ಅಡಿಯಲ್ಲಿ ಪ್ರತಿ ಮನೆಗೆ ೨೦೦ ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಲು ೮,೮೪೪ ಕೋಟಿ, ‘ಗೃಹಲಕ್ಷ್ಮಿ’ ಯೋಜನೆಯಡಿ ೨೫,೨೦೦ ಕೋಟಿ ವೆಚ್ಚವಾಗಿದೆ. ‘ಅನ್ನಭಾಗ್ಯ’ ಯೋಜನೆಯಡಿ ೭,೭೬೩ ಕೋಟಿ, ‘ಯುವನಿಧಿ’ ಹೆಸರಿನಲ್ಲಿ ನಿರುದ್ಯೋಗಿ ಡಿಪ್ಲೊಮಾ ಮತ್ತು ಪದವೀಧರರಿಗೆ ೯೧ ಕೋಟಿ ರು. ನೀಡಲಾಗಿದೆ. ಈ ಯೋಜನೆಗಳಿಂದ ಫಲಾನುಭವಿಗಳ ಹೊಟ್ಟೆ ಪೂರ್ಣವಾಗಿ ತುಂಬಿಲ್ಲದಿರಬಹುದು, ಆದರೆ ಹಸಿದ ಹೊಟ್ಟೆಗೆ ಕಿಂಚಿತ್ತಾ ದರೂ ಉಣಿಸಿದ ಸಮಾಧಾನ ಕಾಣುತ್ತದೆ.

ಯೋಜನೆ ಯಾವುದೇ ಇರಲಿ, ಅದರ ಅನುಷ್ಠಾನದಲ್ಲಿ ನೂರಕ್ಕೆ ನೂರರಷ್ಟು ಯಶಸ್ಸು ದೊರಕುವುದು ಕಷ್ಟ. ಒಂದು ಕಾಲಕ್ಕೆ ಭಾರಿ ಸುದ್ದಿ ಮಾಡಿದ್ದ, ಇಂದಿರಾ ಗಾಂಧಿಯವರ ‘೨೦ ಅಂಶಗಳ ಕಾರ್ಯಕ್ರಮ’ದ ಅನುಷ್ಠಾನದಲ್ಲಿ ಕೂಡ ನಿರೀಕ್ಷಿತ ಪರಿಣಾಮಕಾರಿತ್ವ ಮತ್ತು ದಕ್ಷತೆ ಇರಲಿಲ್ಲ. ಆದರೆ
ಮೂಲೋದ್ದೇಶವನ್ನು ಸಾಧಿಸುವಲ್ಲಿ ಈ ಯೋಜನೆ ಯಶಸ್ಸು ಕಂಡಿತ್ತು.

ಸಿದ್ದರಾಮಯ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಆರಂಭದಿಂದಲೂ ಒಂದು ರೀತಿಯ ಬಾಲಗ್ರಹ ಪೀಡೆಗೆ ಒಳಗಾಗಿದ್ದವು. ರಾಜಕೀಯದ under current  ಇದೆ ಎನ್ನಲಾದ ಈ ಯೋಜನೆಗಳನ್ನು, ಮತದಾರರ ಮನವೊಲಿಸಿ ಚುನಾವಣೆ ಗೆಲ್ಲಲು ರೂಪಿಸಿದ್ದು ಎಂದು ಸಿದ್ದರಾಮಯ್ಯನವರ ರಾಜಕೀಯ ವಿರೋಧಿಗಳು ದೇಶಾದ್ಯಂತ ಬಿಂಬಿಸಿದ್ದರು. ಇದರಲ್ಲಿ ಹುದುಗಿರುವ ಸಾಮಾನ್ಯ ಜನರ ಆರ್ಥಿಕ ಉನ್ನತಿಯ ಅಂಶವನ್ನು ಹತ್ತಿಕ್ಕಿ, ‘ಇಂಥ ಯೊಜನೆ ಗಳಿಂದ ದೇಶ ದಿವಾಳಿಯಗುತ್ತದೆ; ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಶ್ರೀಲಂಕಾದಂತೆ ದೇಶವು ಆರ್ಥಿಕ ಕ್ಷೋಭೆಗೆ ಒಳಗಾಗುತ್ತದೆ. ದೇಶವು ಅಂತಾರಾಷ್ಟ್ರೀಯ ಹಣಕಾಸು ಮಾರುಕಟ್ಟೆಯಲ್ಲಿ ಭಿಕ್ಷೆ ಯಾಚಿಸುವ ದಿನ ದೂರವಿಲ್ಲ’ ಎಂದೆಲ್ಲಾ ಅಪಪ್ರಚಾರ ಮಾಡಿದರು.

ಬಹುತೇಕ ಬಡ ಮತ್ತು ಮಧ್ಯಮ ವರ್ಗದವರಿಗೆ ನೀಡುವ ಈ ಗ್ಯಾರಂಟಿ ಮತ್ತು ಉಚಿತ ಭಾಗ್ಯಗಳನ್ನು ಹೀನಾಯವಾಗಿ ‘ಬಿಟ್ಟಿಭಾಗ್ಯ’ ಎಂದು ಕರೆಯ ಲಾಯಿತು. ಕೆಲ ಮಾಧ್ಯಮದವರು ಮತ್ತು ಬುದ್ಧಿಜೀವಿಗಳು ಈ ಯೋಜನೆಗಳನ್ನು ಮನಸಾರೆ ಟೀಕಿಸಿದರು, ರೀಮುಗಟ್ಟಲೆ ಬರೆದರು. ಜನರ ತೆರಿಗೆ ಹಣ ಬಿಟ್ಟಿಭಾಗ್ಯಗಳಿಗೆ ಹರಿದುಹೋಗುತ್ತಿದ್ದು, ಅಭಿವೃದ್ಧಿಯ ರೈಲಿಗೆ ಇನ್ನು ಹಸಿರು ನಿಶಾನೆ ಅಸಾಧ್ಯ ಎಂದು ಕೊರೆದರು. ವಿಪರ್ಯಾಸವೆಂದರೆ, ಸಿದ್ದರಾ ಮಯ್ಯನವರ ಗ್ಯಾರಂಟಿ ಯೋಜನೆಗಳನ್ನು ಹೀಗೆ ಲೇವಡಿ ಮಾಡಿದ್ದವರು, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಇಂಥದೇ ಯೋಜನೆಗಳ ಭರವಸೆ ನೀಡಿ ಅಧಿಕಾರ ಹಿಡಿದಾಗ ದನಿಯೆತ್ತಲಿಲ್ಲ.

ರಾಜಕೀಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ, ‘ನಾನು ಮಾಡಿದರೆ ಸರಿ, ಅದನ್ನೇ ಇನ್ನೊಬ್ಬ ಮಾಡಿದರೆ ತಪ್ಪು’ ಎಂಬ ಅಲಿಖಿತ ಸಿದ್ಧಾಂತಕ್ಕೆ ಕೆಲವು ರಾಜಕೀಯ ಪಕ್ಷಗಳು ಶರಣಾಗಿದ್ದು ದುರಂತ. ವಾಸ್ತವದಲ್ಲಿ ಈ ಗ್ಯಾರಂಟಿಗಳನ್ನು ‘ಸರಿ’ ಎನ್ನಲಾಗದು ಮತ್ತು ‘ತಪ್ಪು’ ಎಂದೂ ಅಭಿಪ್ರಾಯಪಡಲಾಗದು. ಇವುಗಳಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ಅಂಶಗಳಿವೆ. ಒಂದು ನಿಶ್ಚಿತ ಅಥವಾ ಕಡಿಮೆ ವರಮಾನ ಇರುವವರ ಬದುಕು ಹಣದುಬ್ಬರ ದಿಂದ ದುಸ್ತರವಾಗುತ್ತಿರುವಾಗ, ಅವರಿಗೆ ತಿಂಗಳ ಕೊನೆ ಕಾಣಲು ಯಾವುದಾದರೂ ರೂಪದಲ್ಲಿ ನಾಲ್ಕು ಕಾಸನ್ನು ನೀಡುವುದರಲ್ಲಿ ತಪ್ಪೇನಿಲ್ಲ. ಇಂಥ
ನೆರವು ನೀಡುವುದು ಸರಕಾರದ ಕರ್ತವ್ಯ ಕೂಡಾ ಎನ್ನಬಹುದು.

ಜನರು ಕೂಡ ದೇಶವನ್ನು ಮುನ್ನಡೆಸಲು ದಿನದ ೨೪ ಗಂಟೆ ಯಾವುದಾದರೊಂದು ರೂಪದಲ್ಲಿ ತೆರಿಗೆ ನೀಡುವ ಮೂಲಕ ಸರಕಾರಿ ಬೊಕ್ಕಸವನ್ನು ಸಮೃದ್ಧಗೊಳಿಸುತ್ತಲೇ ಇರುತ್ತಾರೆ. ಹೀಗೆ ಸರಕಾರಕ್ಕೆ ನೀಡಿದ ಹಣದಲ್ಲಿ ಒಂದಷ್ಟು ಭಾಗವನ್ನು ಇಂಥ ಭಾಗ್ಯಗಳ ಮೂಲಕ ವಾಪಸ್ ಪಡೆಯುವುದರಲ್ಲಿ ತಪ್ಪೇನಿಲ್ಲ. ಈ ಭಾಗ್ಯವನ್ನು ಸರಕಾರದ್ದೇ ಹಣವೆಂದು ಧಾರಾಳವಾಗಿ ಹೇಳಲಾಗದು. ಗ್ಯಾರಂಟಿ ಯೋಜನೆಗಳನ್ನು ರೂಪಿಸುವಾಗ, ಮಾನದಂಡವನ್ನು ನಿಗದಿಪಡಿಸುವಾಗ, ಚುನಾವಣಾ ದಿನ ಸಮೀಪಿಸುತ್ತಿದ್ದ ಅವಸರದಲ್ಲಿ ಸ್ವಲ್ಪ ಎಡವಿದಂತೆ ಕಾಣುತ್ತಿದ್ದು, ಅದು ಸರಕಾರಕ್ಕೆ ದುಬಾರಿಯಾಗಿ ಪರಿಣಮಿ ಸುವ ಲಕ್ಷಣ ಕಾಣುತ್ತದೆ.

‘ಬಡತನ ರೇಖೆಯಿಂದ ಕೆಳಗಿದ್ದವರಿಗೆ ಅಥವಾ ಆದಾಯ ಕರ ಮಿತಿಯೊಳಗೆ ಆದಾಯವಿದ್ದವರಿಗೆ ಎಂದು ಒತ್ತುನೀಡಿ ಯೋಜನೆಗಳನ್ನು ಘೋಷಿಸಿದ್ದರೆ ಸರಕಾರ ಈಗಿನ ಸಂಕಷ್ಟದಲ್ಲಿ ಇರುತ್ತಿರಲಿಲ್ಲ; ಹಾಗೆಯೇ ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣದ ದೂರಕ್ಕೆ ಗರಿಷ್ಠ ಮಿತಿ ಯನ್ನು ಹೇರಬೇಕಿತ್ತು’ ಎಂದು ತಜ್ಞರು ಅಲವತ್ತು ಕೊಳ್ಳುತ್ತಾರೆ. ಇದನ್ನು, ‘ದಿನಾ ಉದ್ಯೋಗಕ್ಕೆ ತೆರಳಲು ಬಸ್ಸನ್ನು ಅವಲಂಬಿಸಿರುವವರಿಗೆ’, ‘ಗರಿಷ್ಠ ತಮ್ಮ ತಾಲೂಕಿನೊಳಗೆ ಪ್ರಯಾಣಿ ಸಲು’, ‘ದಿನಕ್ಕೊಂದೇ ಬಾರಿ ಪ್ರಯಾಣಕ್ಕೆ ಅವಕಾಶ’ ಎಂಬೆಲ್ಲಾ ಕಟ್ಟುಪಾಡುಗಳನ್ನು ವಿಧಿಸಬೇಕಿತ್ತು ಎಂಬ ಅಭಿಪ್ರಾಯವೂ ಇದೆ.

ಈ ಯೋಜನೆಯಡಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸುವ ಅವಕಾಶ ಮಹಿಳೆಯರಿಗೆ ಇರುವುದರಿಂದ ಬಸ್ಸುಗಳು ಅವರಿಂದ ತುಂಬಿ ತುಳುಕುತ್ತದೆ; ಮಠ-ಮಂದಿರ-ಪುಣ್ಯಕ್ಷೇತ್ರಗಳಲ್ಲಿ ದಟ್ಟಣೆ ಕಾಣುತ್ತಿದ್ದು, ದೇವಸ್ಥಾನಗಳ ಆದಾಯದಲ್ಲಿ ಏರಿಕೆಯಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ‘ಸಾರಿಗೆ ಬಸ್ಸುಗಳ ನಷ್ಟವು ಮಂದಿರಗಳ ಆದಾಯವಾಗಿದೆ’ ಎಂಬ ಜೋಕ್ ಅಲ್ಲಲ್ಲಿ ಕೇಳುತ್ತದೆ. ಮಹಿಳೆಯರಿಗೆ ಪ್ರಯಾಣ ಉಚಿತ ಮಾಡುವ ಬದಲು ಟಿಕೆಟ್ ದರವನ್ನು ಶೇ.೫೦ರಷ್ಟು ಇಳಿಸಿದ್ದರೂ ಸಾಕಾಗುತ್ತಿತ್ತು; ಗಾರ್ಮೆಂಟ್ಸ್‌ನಲ್ಲಿ ದುಡಿಯುವ ಮಹಿಳೆಯರಿಗೆ ಸಂಬಳ ತುಂಬಾ ಕಡಿಮೆಯಿದ್ದು ಅವರಿಗೆ ಮಾಸಿಕ ಬಸ್ ಪಾಸ್‌ನಲ್ಲಿ ವಿನಾಯಿತಿ ಕೊಡಲಾಗುತ್ತದೆ. ಅದೇ ರೀತಿ ಉಳಿದ ಬಡಕಾರ್ಮಿಕರಿಗೂ ವಿನಾಯಿತಿ ಕೊಡಬಹುದಿತ್ತು ಎನ್ನುವವರಿದ್ದಾರೆ.

ಇನ್ನು ಮಾಸಿಕ ೨೦೦ ಯುನಿಟ್‌ನಷ್ಟು ಉಚಿತ ವಿದ್ಯುತ್‌ನ ಬಾಬತ್ತಿಗೆ ಬರೋಣ. ಈ ಇತಿಮಿತಿಯ ಆಸುಪಾಸಿನಲ್ಲಿ ವಿದ್ಯುತ್ ಬಳಸುವ ಕೆಲವರು, ಗೀಜರ್ ಬದಲು ಸೋಲಾರ್ ಹೀಟರ್ ಬಳಸಿಕೊಂಡು ತಮ್ಮ ವಿದ್ಯುತ್ ಬಳಕೆಯನ್ನು ೨೦೦ ಯುನಿಟ್‌ನೊಳಗೆ ಮಿತಗೊಳಿಸಿ ‘ಗೃಹಜ್ಯೋತಿ’ ಯೋಜನೆಯ ಲಾಭ ಪಡೆದರೆ, ಈವರೆಗೆ ೫೦-೧೫೦ ಯುನಿಟ್ ಬಳಸುತ್ತಿದ್ದವರು ಧಾರಾಳವಾಗಿ ೨೦೦ ಯುನಿಟ್ ಬಳಸಿ ಗೃಹಜ್ಯೋ ತಿಗೆ ಸವಾಲು ಹಾಕುತ್ತಾರೆ ಎನ್ನಲಾಗುತ್ತದೆ. ನೈತಿಕವಾಗಿ ತಪ್ಪು ಎನಿಸಿದರೂ, ಇವೆಲ್ಲವೂ ನಿಯಮಾವಳಿಯಂತೆ ಮತ್ತು ನಿಗದಿತ ಮಾನದಂಡದ ಅಡಿಯಲ್ಲಿ ನಡೆಯುತ್ತಿರುವುz ರಿಂದ ಯಾರನ್ನೂ ದೂಷಿಸಲಾಗದು. ಸರಕಾರವು ಚಾಪೆಯ ಅಡಿಯಲ್ಲಿ ನುಸುಳಿದರೆ, ಜನರು ರಂಗೋಲಿಯ ಕೆಳಗೆ ನುಸುಳುವ ಮನಸ್ಥಿತಿಯವರು ಎಂಬುದು ಹೊಸ
ಬೆಳವಣಿಗೆಯೇನಲ್ಲ.

ಉಚಿತ, ವಿನಾಯಿತಿ ಇವುಗಳನ್ನು ನೀಡುವಾಗ ಸರಿಯಾಗಿ ಮತ್ತು ಸುದೀರ್ಘವಾಗಿ ಹೋಮ್‌ವರ್ಕ್ ಮಾಡಬೇಕಾಗುತ್ತದೆ. ಇವನ್ನು ಒಮ್ಮೆ ನೀಡಿದ ಮೇಲೆ
ವಾಪಸ್ ಪಡೆಯುವುದು ಕ್ಲಿಷ್ಟಕರ. ದೇಶದಲ್ಲಿ ಎಲ್ಲೂ ಇಂಥ ವಿನಾಯಿತಿಯನ್ನು ನೀಡಿ ವಾಪಸ್ ಪಡೆದ ಮಾಹಿತಿಯಿಲ್ಲ. ಬೇಸಗೆ ಮತ್ತು ಚಳಿಗಾಲ ಕ್ಕೆಂದು ಬಿಡಲಾಗುವ ವಿಶೇಷ ರೈಲುಗಳು, ವಿಮಾನಗಳು ಮುಂದಿನ ದಿನಗಳಲ್ಲಿ ಹಾಗೆಯೇ ಕಾಯಂ ಆಗುವ ಪ್ರಮೇಯವೇ ಹೆಚ್ಚು. ಅವು ಎಂದೂ ರದ್ದಾಗುವುದಿಲ್ಲ. ಅಂತೆಯೇ ಈ ಗ್ಯಾರಂಟಿಗಳನ್ನು ರದ್ದುಮಾಡುವುದು ತುಂಬಾ ಕಷ್ಟ. ಪ್ರಯಾಣಿಕರ ಒತ್ತಾಯಕ್ಕೆ ಸ್ಪಂದಿಸಿ ಯಾವುದಾದರೂ ರೈಲಿಗೆ ತಾತ್ಪೂರ್ತಿಕ ನಿಲುಗಡೆ ನೀಡಿದರೆ, ಅದು ಸಾಮಾನ್ಯವಾಗಿ ಕಾಯಂ ಆಗುತ್ತದೆ, ರದ್ದಂತೂ ಆಗುವುದಿಲ್ಲ.

ಅದೇ ರೀತಿ, ಗ್ಯಾರಂಟಿಗಳು ಕೂಡ. ಸಿದ್ದರಾಮಯ್ಯನವರು ಈಗ ಒತ್ತಡದಲ್ಲಿ ಇದ್ದಾರೆ. ಗ್ಯಾರಂಟಿಗಳನ್ನು ಅಕಸ್ಮಾತ್ ರದ್ದುಪಡಿಸಿದರೆ, ಅಂಥ ಕ್ರಮವು
ಮುಂಬರುವ ಚುನಾವಣೆಯಲ್ಲಿ ಮಾರ್ಮಿಕ ಏಟು ನೀಡುವುದು ದಿಟ. ರದ್ದುಪಡಿಸದಿದ್ದರೆ ಅಥವಾ ಸೂಕ್ತ ಮಾರ್ಪಾಡು ಮಾಡದಿದ್ದರೆ, ಅಂಥ ನಡೆಯು ಇನ್ನೊಂದು ರೀತಿಯ ಪೆಟ್ಟು ಕೊಡುವುದೂ ಅಷ್ಟೇ ನಿಜ.

(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)