Sunday, 15th December 2024

ಚೆಸ್‌ ಆಡೋನು – 64 ವಿದ್ಯೆಯಲ್ಲಿ ಪಾರಂಗತ

ತುಂಟರಗಾಳಿ

ಸಿನಿಗನ್ನಡ

ನಿರ್ದೇಶಕ ಶಶಾಂಕ್ ಅವರ ಹೊಸ ಚಿತ್ರ ಲವ್ ೩೬೦ ತೆರೆಕಂಡಿದೆ. ಜಾಮಿಟ್ರಿ ವಿಷಯದಲ್ಲಿ ಝೀರೋ ಡಿಗ್ರಿಗೂ ೩೬೦ ಡಿಗ್ರಿಗೂ ವ್ಯತ್ಯಾಸ ಥಟ್ಟಂತ ಗೊತ್ತಾಗಲ್ಲ. ನೀವು ಯಾವ ಕಡೆಯಿಂದ ಆಂಗಲ್‌ನ ಗುರುತಿಸುತ್ತೀರೋ ಅದರ ಮೇಲೆ ಅಂತಿಮವಾದ ವ್ಯಾಲ್ಯೂ ನಿರ್ಧಾರ ಆಗುತ್ತೆ. ನಿಂತ ಇದ್ರೆ ಸೊನ್ನೆ ಡಿಗ್ರಿ ಆಂಗಲ್, ಕೊಂಕಣ ಸುತ್ತಿ ಮೈಲಾರಕ್ಕೆ ಬಂದ್ರೆ ೩೬೦ ಡಿಗ್ರಿ ಆಂಗಲ್.

ಆದರೆ ಈ ಚಿತ್ರದಲ್ಲಿ ಕೊಂಕಣದ ಕಥೆ ಇಲ್ಲ, ಇಡೀ ಕಥೆ ಗೋಕರ್ಣದ ಇದೆ. ಮತ್ತು ಅಲ್ಲಿಯೇ ಸುತ್ತುತ್ತದೆ. ಹಾಗಾಗಿ ಇಂಥದ್ದೊಂದು ಪೂರ್ತಿ ಸರ್ಕಲ್ ರೂಪದಲ್ಲಿ ವಾಪಸ್ ಸುತ್ತಿಕೊಂಡು ಬರುವ ಕ್ಲೈಮ್ಯಾಕ್ಸ್ ಲವ್ ೩೬೦ ಚಿತ್ರದಲ್ಲಿದೆ. ಅದು ೩೬೦ ಡಿಗ್ರಿ ಆಂಗಲ್‌ನಲ್ಲಿ ಸುತ್ತಿಕೊಂಡು ಬರೋದ್ರಿಂದ ನಿರ್ದೇಶಕ ಶಶಾಂಕ್ ಈ ಚಿತ್ರದ ಲವ್ ಕಮ್ ಕ್ರೈಮ್ ಸ್ಟೋರಿಗೆ ಒಂದು ಹೊಸ ಆಂಗಲ್ ಕೊಡೋಕೆ ಟ್ರೈ ಮಾಡಿದ್ದಾರೆ ಅನ್ನಬಹುದು.

ಪ್ರೀತಿಯಲ್ಲಿ ಬಿದ್ದವರಿಗೆ, ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎನ್ನು ವಂಥ ನಿಷ್ಕಲ್ಮಷ ಅನುಭವ ಆಗೋದು ಸಹಜ. ಆದರೆ, ಇಲ್ಲಿನ ೩೬೦ ಡಿಗ್ರಿ ಲವ್ ಸ್ಟೋರಿಯಲ್ಲಿ ೩ ಸಿಕ್ಸ್ಟಿ ಸೇರಿ ಒಂದು ಕ್ವಾರ್ಟರ್ ಆಯಿತು ಎನ್ನುವಂಥ ಕಿಕ್ ಇಲ್ಲ. ಆದರೆ, ಮೊದಲೇ ಹೇಳಿದಂತೆ ಸಿನಿಮಾಕ್ಕೆ ಥಮ್ಸ ಅಪ್ ಅನ್ನೋಕಾಗದಿದ್ದರೂ, ಕ್ಲೈಮ್ಯಾಕ್ಸ್  ನಲ್ಲಿ ಮಾತ್ರ ಬಾಟಮ್ಸ ಅಪ್ ಕಿಕ್ ಎನ್ನುವಂಥ ಸಣ್ಣ ಸರ್ಪ್ರೈಸ್ ಇದೆ. ಅದನ್ನು ಊಹಿಸಿದವರಿಗೆ ಪ್ರೈಸ್ ಕೊಡಬಹುದು ಎನ್ನುವಂಥ ಸ್ಪೆಷಲ್ ಸರ್‌ಪ್ರೈಸ್ ಅದು. ಆದರೆ, ಅದೊಂದು ಕಿಕ್‌ಗಾಗಿ ತಾಸುಗಟ್ಟಲೆ ಇಡೀ ಸಿನಿಮಾ ನೋಡೋದು ತ್ರಾಸಿನ ಕೆಲಸ ಅನ್ನಿಸಿದರೆ ತಪ್ಪಿಲ್ಲ.

ಸಿನಿಮಾದಲ್ಲಿ ನಾಯಕ ಜರ್ಕಿನ್ ಬಟನ್ ಒಂದನ್ನು ದೊಡ್ಡ ಕಸದ ರಾಶಿಯಲ್ಲಿ ಹುಡುಕುತ್ತಾನೆ. ಹಾಗೆಯೇ ಪ್ರೇಕ್ಷಕ ಕೂಡಾ,
ಸಿನಿಮಾದಲ್ಲಿ ಎಂಟರ್‌ಟೈನಿಂಗ್ ಎಲಿಮೆಂಟ್ ಅನ್ನು ಇನ್ನೊಂದು ಲೆವೆಲ್ಲಿಗೆ ತೆಗೆದುಕೊಂಡು ಹೋಗೋ ಟ್ರಿಗ್ಗರ್ ಬಟನ್‌ಗಾಗಿ
ಹುಡುಕುತ್ತಾನೆ. ಈ ಎರಡು ವಿಷಯಗಳಲ್ಲಿ, ವ್ಯತ್ಯಾಸ ಅಂದ್ರೆ, ನಾಯಕನಿಗೆ ಮಾತ್ರ ಜರ್ಕಿನ್ ಬಟನ್ ಸಿಗುತ್ತೆ. ಸಿನಿಮಾ ಸುಖಾಂತ್ಯ ಆಗುತ್ತದೆ. ನಾಯಕನಿಗೆ ನಾಯಕಿ ಸಿಗುತ್ತಾಳೆ.

ಆದ್ರೆ ಪ್ರೇಕ್ಷಕರಿಗೆ ಮಾತ್ರ ಕೃಷ್ಣನ್ ಲವ್ ಸ್ಟೋರಿ, ಮೊಗ್ಗಿನ ಮನಸ್ಸು ಚಿತ್ರಗಳ ನಿರ್ದೇಶಕ ಶಶಾಂಕ್ ಮಾತ್ರ ಸಿಗೋದಿಲ್ಲ ಅನ್ನೋದು ಬೇಸರದ ಸಂಗತಿ.

ಲೂಸ್ ಟಾಕ್
ಬಿಜೆಪಿ ಕಾರ್ಯಕರ್ತ (ಕಾಲ್ಪನಿಕ ಸಂದರ್ಶನ)
ಅಲ್ಲರೀ, ನಿಮ್ಮ ಸರಕಾರ ಪಾಪ, ದಿಲ್ಲಿಯಲ್ಲಿ ಒಳ್ಳೆ ಕೆಲಸ ಮಾಡ್ತಿರೋ ಎಎಪಿ ನಾಯಕರ ಮೇಲೆ ಸಿಬಿಐ ಛೂ ಬಿಡ್ತಾ ಇದ್ದೀಯಲ್ಲ, ಸರೀನಾ?
-ಅವರು ಒಳ್ಳೆ ಕೆಲಸಕ್ಕೆ ಶಂಕುಸ್ಥಾಪನೆ ಮಾಡ್ತಾರೆ, ನಾವು ಒಳ್ಳೆ ಕೆಲಸಕ್ಕೆ ಕಲ್ಲು ಹಾಕ್ತೀವಿ. ಒಂಥರಾ, ಎರಡೂ ಒಂದೇ ಅಲ್ವಾ.

ಅದೂ ಸರಿ ಬಿಡಿ, ಆದ್ರೂ, ಫಾರಿನ್ ಪೇಪರ್‌ನಲ್ಲಿ ಹೊಗಳಿಸಿಕೊಂಡೋರ ಮೇಲೆ ಸಿಬಿಐ ರೈಡ್ ಮಾಡ್ತೀರಲ್ರೀ..

-ನೋಡ್ರೀ ಫಾರಿನ್ನೋರ್ದು ಟಿಶ್ಯೂ ಪೇಪರ್ ಕಲ್ಚರ್. ನಾವು ಇಲ್ಲಿ ಆಗಿರೋ ಇಶ್ಯೂ ಕಾರಣಕ್ಕೆ ರೈಡ್ ಮಾಡಿಸಿದ್ದು. ಅಲ್ದೇ, ಈ ಎಎಪಿಯವರದ್ದು ತುಂಬಾ ಹಾರಾಟ ಆಗಿದೆ. ಈ ಥರ ಸಿಬಿಐ ದಾಳಿ ಮಾಡಿಸದೇ ಇದ್ರೆ ಇವರನ್ನು ‘ಇಡಿ’ಯೋಕೆ ಆಗುತ್ತಾ?

ಓ, ಅಂದ್ರೆ, ಸಿಬಿಐ ಅಷ್ಟೇ ಅಲ್ಲ, ಇಡಿ ದಾಳಿನೂ ಮಾಡಿಸ್ತೀವಿ ಅಂತ ಇನ್ ಡೈರೆಕ್ಟ್ ಆಗಿ ಹೇಳ್ತಾ ಇದ್ದೀರಾ. ಅವರು ಪಾಪ ಜನರಿಗೆ ಎಷ್ಟೊಂದು ಬಿಟ್ಟಿ ಫೆಸಿಲಿಟಿ ಕೊಟ್ಟಿದ್ದಾರೆ. ಅದನ್ನ ಕಂಡ್ರೆ ನಿಮಗ್ಯಾಕೆ ಹೊಟ್ಟೆ ಉರಿ?
-ನಾವು ಅವರ ಥರ ಎಲ್ಲ ಬಿಟ್ಟಿಯಾಗಿ ಏನೂ ಕೊಡಲ್ಲ ಕಣ್ರೀ. ಏನಿದ್ರೂ ನಾವು ದೇಶದ ಜನರಿಗೆ ಬಿಟ್ಟಿ ಉಪದೇಶ ಕೊಡ್ತೀವಿ ಅಷ್ಟೇ.

ಉಪದೇಶ ಅಂದ್ರೆ ಇನ್ನೊಂದ್ ದೇಶ ಕಟ್ಟೋ ಪ್ಲ್ಯಾನ್ ಏನಾದ್ರೂ ಇದೆಯೇನ್ರೀ ಹೋಗ್ಲಿ, ಕೇಜ್ರಿವಾಲ್ ಮೇಲೆ ಮೋದಿಗೆ ಯಾಕೆ ಕೋಪ?
-ನೋಡ್ರೀ, ನಾವು ಮಾಡಿದ ಸಾಧನೆನಾ ನಾವೇ ಹೇಳ್ಕೊಬಾರದು. ನಮ್ ಅಮಿತ್ ಶಾ ಅವರನ್ನ ನೋಡಿ ಎಷ್ಟು ಆಪರೇಷನ್ ಕಮಲ, ಸಿಬಿಐ, ಐಟಿ ಇಡಿ ರೈಡ್ ಮಾಡಿಸಿಲ್ಲ? ಯಾವತ್ತಾದ್ರೂ ನಾನೇ ಮಾಡಿಸಿದ್ದು ಅಂತ ಹೇಳ್ಕೊತಾರಾ?

ಸರಿ, ಕರ್ನಾಟಕದಲ್ಲಿ ಮುಂದೆ ಯಾರ ಮೇಲೆ ಸಿಬಿಐ, ಐಟಿ , ಇಡಿ ದಾಳಿ ಮಾಡಿಸೋ ಪ್ಲ್ಯಾನು?
-‘ದಾಳಿ’‘ಧನಂ’ಜಯ

ನೆಟ್ ಪಿಕ್ಸ್
ಖೇಮು ಮತ್ತವನ ಸಂಸಾರ ಒಂದು ನಗರದಿಂದ ದೂರದ ಹಳ್ಳಿಯಲ್ಲಿ ವಾಸವಾಗಿತ್ತು. ಆ ಹಳ್ಳಿಯ ಪಕ್ಕದ ಅಂಟಿಕೊಂಡಂತೆ ಒಂದು ದಟ್ಟವಾದ ಕಾಡು ಇತ್ತು. ಅಲ್ಲಿ ಖೇಮುಗೆ ಅನೇಕ ಗೆಳೆಯರೂ ಇದ್ದರು. ಒಂದು ದಿನ ಖಥೇಮು ಮನೆಯಿಂದ ಹೊರಟ. ಹಳ್ಳಿ ದಾರಿಯಲ್ಲಿ ಹೋಗುವಾಗ ಅಲ್ಲಿ ಅವನ ಸ್ನೇಹಿತ ರಾಮು, ಬೀಡಿ ಸೇದ್ತಾ ಕೂತಿದ್ದ. ಅವನನ್ನು ನೋಡಿದ ಖೇಮು, ಲೋ ರಾಮು, ಬೀಡಿ ಸೇದೋದು ಕೆಟ್ಟದ್ದು ಕಣೋ, ಅದನ್ನೆ ಬಿಟ್ಟು ನನ್ನ ಜೊತೆ ಬಾ. ಕಾಡಿನ ಒಳಗೆ ನಿನಗೆ ಒಂದು ಸರ್ಪ್ರೈಸ್ ಇದೆ.

ತೋರಿಸ್ತೀನಿ ಅಂದ. ಸರಿ ರಾಮು ಖೇಮು ಜತೆ ಹೊರಟ. ಇಬ್ಬರೂ ಹೋಗ್ತಾ ಇದ್ರು. ಅಲ್ಲಿ ಇನ್ನೊಬ್ಬ ಸ್ನೇಹಿತ ಸೋಮು ಹೆಂಡ ಕುಡೀತಾ ಕೂತಿದ್ದ. ಅವನನ್ನು ನೋಡಿದ ಖೇಮು ಲೋ ಸೋಮು, ಹೆಂಡ ಕುಡಿಯೋದು ಕೆಟ್ಟದ್ದು ಕಣೋ, ಅದನ್ನೆ ಬಿಟ್ಟು ನನ್ನ ಜೊತೆ ಬಾ. ಕಾಡಿನ ಒಳಗೆ ನಿನಗೆ ಒಂದು ಸರ್ಪ್ರೈಸ್ ಇದೆ. ತೋರಿಸ್ತೀನಿ ಅಂದ. ಸರಿ ಸೋಮು ಕೂಡ ಅವರಿಬ್ಬರ ಜೊತೆ ಹೊರಟ. ಮುಮದೆ ಹಗುವಾಗ ಅಲ್ಲಿ ಇನ್ನಷ್ಟು ಸ್ನೇಹಿತರು ಇಸ್ಪೀಟ್ ಆಡ್ತಾ ಕೂತಿದ್ರು. ಅವರನ್ನು ನೋಡಿದ ಖೇಮು ಲೇ, ಇಸ್ಪೀಟ್ ಆಡೋದು ಕೆಟ್ಟದ್ದು ಕಣ್ರೋ, ಅದನ್ನೆ ಬಿಟ್ಟು ನನ್ನ ಜೊತೆ ಬನ್ನಿ.

ಕಾಡಿನ ಒಳಗೆ ನಿಮಗೆ ಒಂದು ಸರ್ಪ್ರೈಸ್ ಇದೆ. ತೋರಿಸ್ತೀನಿ ಅಂದ. ಸರಿ ಗುಂಪುಗೂಡಿಕೊಂಡು ಎಲ್ಲರೂ ಖೇಮುವಿನ
ಜೊತೆ ಹೊರಟರು. ಮುಂದೆ ದಾರಿಯಲ್ಲಿ ಅವರಿಗೆ ಇನ್ನೊಬ್ಬ ಗೆಳೆಯ ಮಾರ ಸಿಕ್ಕಿದ. ಅವನು ಹೊಗೆಸೊಪ್ಪು ಅಗಿಯುತ್ತಾ ಕೂತಿದ್ದ. ಅವನನ್ನು ನೋಡಿದ ಖೇಮು ಲೋ ಮಾರ, ಹೊಗೆ ಸೊಪ್ಪು ತಿನ್ನೋದು ಕೆಟ್ಟದ್ದು ಕಣೋ, ಅದನ್ನೆ ಬಿಟ್ಟು ನನ್ನ ಜೊತೆ ಬಾ. ಕಾಡಿನ ಒಳಗೆ ನಿನಗೆ ಒಂದು ಸರ್ಪ್ರೈಸ್ ಇದೆ. ತೋರಿಸ್ತೀನಿ ಅಂದ. ಅದಕ್ಕೆ ಮಾರ ಇದ್ದಕ್ಕಿದ್ದಂತೆ ಖೇಮು ಕಡೆ ನುಗ್ಗಿ ಬಂದು ಅವನ್ನನು ಹಿಗ್ಗಾ ಮುಗ್ಗಾ ಹೊಡೆಯೋಕೆ ಶುರು ಮಾಡಿದ.

ಎಲ್ಲರೂ ಸೇರಿ ಅವನನ್ನು ಬಿಡಿಸಿ, ಅ ಮಾರ, ಪಾಪ ಅವನು ಒಳ್ಳೇದು ಹೇಳಿದ್ರೆ ನೀನು ಹಿಂಗಾ ಹೊಡೆಯೋದು ಅಂತ ಕೇಳಿದಾಗ ಮಾರ ಹೇಳಿದ, ನಿಮಗ್ ಗೊತ್ತಿಲ್ಲ, ಈ ಬಡ್ಡೀಮಗ ಖೇಮು, ಹೋದ್ ವಾರ ಕೂಡ ಹಿಂಗೇ ಗಾಂಜಾ ಹೊಡ್ಕೊಂಡು ಬಂದು, ಏನೋ ತೋರಿಸ್ತೀನಿ ಅಂತ ಇಡೀ ಕಾಡೆ ಸುತ್ತಿಸಿದ್ದ.

ಲೈನ್ ಮ್ಯಾನ್

ಯಾರಾದ್ರೂ ಕೆಲಸ ಕೊಟ್ರೆ ಖಂಡಿತಾ ಕುಡಿಯೋದು ಬಿಡ್ತೀನಿ- ವಿನೋದ್ ಕಾಂಬ್ಳಿ
-ಕೆಲ್ಸ ಇಲ್ಲದೆ ದುಡ್ಡಿಲ್ಲ ಅಂದ್ರೂ ಕುಡಿಯೋ ಮಗ ನೀನು, ಇನ್ನು ಕೆಲಸ ಸಿಕ್ಮೇಲೆ ಬಿಡ್ತೀಯಾ ಗುರೂ?

ಹಿಂದಿನ ಸರಕಾರಗಳು ಮಾಡಿಟ್ಟ ಆಸ್ತಿಗಳನ್ನೆಲ್ಲ ಮಾರಾಟ ಮಾಡ್ತಿರೋ ಮೋದಿಯನ್ನ ಇತಿಹಾಸ ಹೇಗೆ ನೆನಪಿಟ್ಟುಕೊಳ್ಳುತ್ತೆ?
Seಛಿ ಞಟ್ಞh ಡಿeಟ oಟ್ಝb oಟಞಛಿಟ್ಞಛಿ ಛ್ಝಿoಛಿ’o ಊಛ್ಟ್ಟಿZಜಿ

ಆದ್ರೂ ಮೋದಿ ಗ್ರೇಟ್. ಯಾಕೆ?
-ಬೇರೆ ರಾಜಕಾರಣಿಗಳು ಕೂತ್ಕೊಂಡ್ ತಿನ್ನುವಷ್ಟು ಆಸ್ತಿ ಮಾಡ್ಕೊತಾರೆ, ಆದ್ರೆ ಮೋದಿ ಇರೋ ಆಸ್ತಿನೇ ಮಾರಾಟ ಮಾಡ್ತಿದ್ದಾರೆ. ಯಾರ ಆಸ್ತಿ ಅಂತ ಕೇಳಂಗಿಲ್ಲ ಅಷ್ಟೇ.

ಗಾಳಿಪಟದ ಗೆಲುವಿನ ಜಾಹೀರಾತು

-‘ಫ್ಲೈಯಿಂಗ್’ ಸಕ್ಸಸ್-ಲ್ಲೀ

ಈಗ ಮತ್ತು ಗಾಳಿಪಟ ಚಿತ್ರಗಳಿಗೆ ಇರೋ ಹೋಲಿಕೆ

-ಎರಡೂ – ಬಗ್ಗೆ ಮಾಡಿದ ಚಿತ್ರಗಳು
ನೊಣದ ಬಗ್ಗೆ ಮಾಡಿದ ಈಗ ಸಿನಿಮಾವನ್ನು ಯಥಾವತ್ತು ರಿಮೇಕ್ ಮಾಡಿದರೆ ಅದು

-ಮಕ್ಕೀ ಕಾ ಮಕ್ಕೀ

ಮಕ್ಕಳಿಗೆ ಅಂತ ಬೇರೆ ಬ್ರ್ಯಾಂಡ್ ಬ್ರ್ಯಾಂಡಿ ಇದೆ. ಹಾಗೇ ಬಿಯರ್ ಕೂಡಾ ಇದ್ದಿದ್ರೆ
ಅದು
-‘ಚೈಲ್ಡ್’ ಬಿಯರ್

‘ಒಬ್ಬ ಸುಳ್ಳು’ ಹೇಳೋದ್ ನೋಡಿ ಅವನ ಜೊತೆಗಿರೋ ಜನರೆಲ್ಲ ಅಂಥವರೇ ಅಂತ ಡಿಸೈಡ್ ಮಾಡೋದು
-‘ಜನ’ರ‘ಲೈಸ್’

ಚೆಸ್ ಆಡುವವರು
-‘೬೪’ ವಿದ್ಯೆಯಲ್ಲಿ ಪಾರಂಗತರು