Monday, 16th September 2024

ಜೈಲು ಸೇರಿದ ಇಮ್ರಾನ್‌ಗೆ ಕ್ಯಾರೇ ಎನ್ನುತ್ತಿಲ್ಲವೇಕೆ?

– ಬರ್ಖಾ ದತ್

ಪಾಕಿಸ್ತಾನಕ್ಕೆ ಮತ್ತೊಮ್ಮೆ ಹೊಸ ಪ್ರಧಾನ ಮಂತ್ರಿಯ ಆಯ್ಕೆ ಆಗಿರುವುದು ಜಗತ್ತಿನ ಗಮನಕ್ಕೇ ಬಂದಂತಿಲ್ಲ. ಅಲ್ಲಿನ ಮಿಲಿಟರಿ ಆಡಳಿತದ ಅತ್ಯಂತ ನಿಕಟ ವ್ಯಕ್ತಿಯೆಂದೇ ಪರಿಗಣಿತ, ಬಲೂಚಿಸ್ತಾನ್ ಅವಾಮಿ ಪಾರ್ಟಿಯ ಸದಸ್ಯ ಅನ್ವರ್-ಉಲ-ಹಕ್ ಕಾಕರ್ ಅವರು ಭಾರತದ ನೆರೆ ರಾಷ್ಟ್ರದ ಹಂಗಾಮಿ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ಮುಂದಿನ ಚುನಾವಣೆ ನಡೆದು ಹೊಸ ಪ್ರಧಾನಿಯ ಆಯ್ಕೆಯಾಗುವವರೆಗೆ ಅವರು ಆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಹಾಗೆಂದು ಅಲ್ಲಿನ ಅರಾಜಕ ಸ್ಥಿತಿ ಬದಲಾಗಿದೆ ಎಂದೇನೂ ಅಲ್ಲ. ಅಲ್ಲಿನ ರಾಜಕೀಯ ಬೇಗುದಿ ಮೇಲ್ನೋಟಕ್ಕೆ ಕಾಣುವುದಕ್ಕಿಂತ ಇನ್ನೂ ವಿಕ್ಷಿಪ್ತವಾಗಿದೆಯೇ ಹೊರತೂ ಸುಧಾರಿಸಿಲ್ಲ. ದಟ್ಟದಾರಿದ್ರ್ಯದ ಸ್ಥಿತಿ ತಲುಪಿರುವ ಆ ದೇಶ ಈಗ ಸುದ್ದಿಯಲ್ಲಿರುವುದು ಚರ್ಚ್‌ಗಳ ಮೇಲಿನ ದಾಳಿ ಹಾಗೂ ಅಸಹಾಯಕರಾಗಿ ನಿಂತಿರುವ ಬಿಷಪ್‌ಗಳ ಕಾರಣಕ್ಕೆ. ಇದನ್ನು ಹೊರತುಪಡಿಸಿದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ತನ್ನ ವಿಡಿಯೋಗಳು ಸೇರಿದಂತೆ ಎಲ್ಲ ಪ್ರಚಾರ ಸಾಮಗ್ರಿಗಳಿಂದ ಮಾಜಿ ಪ್ರಧಾನಿಯೂ ಆಗಿರುವ, ದೇಶದ ೧೯೯೨ರ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ಕ್ಯಾಪ್ಟನ್ ಇಮ್ರಾನ್ ಖಾನ್ ಅವರ
ಫೋಟೊ ಇತ್ಯಾದಿಗಳನ್ನು ತೆಗೆದುಹಾಕಲು ಮುಂದಾಗಿರು ವುದು ಸಹ ಮಾಧ್ಯಮಗಳ ಹೆಡ್‌ಲೈನ್ ಆಗಿದೆ. ವಾಸಿಂ ಅಕ್ರಂ ಅವರಂಥ ಹಿರಿಯ ಕ್ರಿಕೆಟಿಗರೂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿನ ತೀವ್ರ ಆಕ್ರೋಶದ ನಡುವೆಯೂ ಇಮ್ರಾನ್ ‘ಸ್ಥಾನಪಲ್ಲಟ’ ಅಬಾಧಿತವಾಗಿದೆ.

ಇದು ಇಮ್ರಾನ್ ಖಾನ್‌ರ ಉದಯ ಮತ್ತು ಪತನದ ಸಂಕೇತ. ಪಾಕ್ ರಾಜಕೀಯದಲ್ಲಿ ಇಮ್ರಾನ್ ಯುಗಾಂತ್ಯಕ್ಕೆ ಇದಕ್ಕಿಂತ ಸೂಕ್ತ ರೂಪಕ ಇನ್ನೊಂದು ಸಿಗಲಾರದು. ಬಹುಶಃ ಪಾಕಿಸ್ತಾನಿ ರಾಜಕೀಯದಲ್ಲಿ ತಲೆಮಾರುಗಳ ಅಂತ್ಯದ ಪರಂಪರೆಯ ಅರಿವು ಜಗತ್ತಿನ ಬೇರಾವುದೇ ದೇಶದ ಜನರಿಗಿಂತಲೂ ಭಾರತೀಯರಿಗೆ ಹೆಚ್ಚು ಚೆನ್ನಾಗಿದೆ. ಅಷ್ಟಕ್ಕೂ, ಅಷ್ಟೊಂದು ಜನಪ್ರಿಯ ಕ್ರಿಕೆಟಿಗನಾಗಿದ್ದೂ ಇಮ್ರಾನ್ ಬಗೆಗೆ ಯಾಕಿಷ್ಟೊಂದು ಅಸಹನೆ? ಆತನ ಬಗೆಗೆ ಬಹುತೇಕ ಯಾರಲ್ಲೂ ಸಹಾನುಭೂತಿ ಯಾಕಿಲ್ಲ? ಹೇಗೆಯೇ ನೋಡಿದರೂ, ಇಂದು ಪಾಕಿಸ್ತಾನದಲ್ಲಿ ಚುನಾವಣೆ ನಡೆದರೆ, ಖಾನ್ ಗೆಲ್ಲುತ್ತಾರೆಂಬುದು ನಿರ್ವಿವಾದ.
ವಾಸ್ತವವಾಗಿ, ಅವರ ವಿರುದ್ಧದ ಆರೋಪಗಳಲ್ಲಿನ ಸತ್ಯಾ ಸತ್ಯತೆ, ಗಾಂಭಿರ್ಯವನ್ನು ಲೆಕ್ಕಿಸದೇ ತೋಷಖಾನಾ ಪ್ರಕರಣದಲ್ಲಿ (ಸರಕಾರಿ ಉಡುಗೊರೆಗಳನ್ನು ಮಾರಿ ಲಾಭ ಗಳಿಸಿದ್ದಕ್ಕಾಗಿ) ಸಿಲುಕಿಸಿ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಉದ್ದೇಶ ಇಷ್ಟೇ, ಅಲ್ಲಿನ ಸೇನೆ ಮತ್ತು ರಾಜಕೀಯ ಎರಡರಲ್ಲೂ ಅವರ ಪ್ರತಿಸ್ಪರ್ಧಿಗಳಿಗೆ ಇಮ್ರಾನ್ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯಬೇಕಿತ್ತು. ಅದನ್ನು ಈ ಮೂಲಕ
ಈಡೇರಿಸಿಕೊಳ್ಳಲು ಮುಂದಾಗಿದ್ದಾರೆಂಬುದು ಸ್ಪಷ್ಟ.

ಅವರ ಬೆಂಬಲಿಗ, ಖ್ಯಾತ ಜುನೂನ್ ಸಂಗೀತಗಾರ ಸಲ್ಮಾನ್ ಅಹ್ಮದ್ ಪ್ರಕಾರ, ಇಮ್ರಾನ್‌ರ ದುರ್ದಿನಗಳು ಆರಂಭವಾಗಿದ್ದಷ್ಟೇ ಅಲ್ಲ. ಅವರಿನ್ನು ಜೈಲಿನಿಂದ ಎಂದಿಗೂ ಹೊರಬರಲು ಸಾಧ್ಯವೇ ಇಲ್ಲ. ಅಂಥದ್ದೊಂದು ಸಂಚು ರೂಪಿಸಲಾಗಿದೆ. ಜೈಲಿನಲ್ಲೇ ಅವರಿಗೆ ವಿಷ ಹಾಕಿ ಕೊಲ್ಲುವ ಶಂಕೆಯಿದೆ. ಅದಕ್ಕಾಗಿಯೇ ಅವರನ್ನು ಡೆತ್‌ಸೆಲ್‌ನಲ್ಲಿಇರಿಸಲಾಗಿದೆ. ಕೊನೇ ಪಕ್ಷ ಅವರಿಗೆ ಮನೆಯಿಂದ ಆಹಾರ ಅಥವಾ ನೀರನ್ನೂ ಪೂರೈಸಲು ಅನುಮತಿಸಲಾಗಿಲ್ಲ. ಬೇರೆ ಯಾವುದೇ ದೇಶದ ಪಾಲಿಗೆ ಇದು ಯಾದೃಚ್ಛಿಕ ಅತಿಶಯೋಕ್ತಿಯಂತೆ ಎನಿಸಿಕೊಳ್ಳಬಹುದೇನೋ; ಆದರೂ ಇದು ಸತ್ಯ. ಪಾಕಿಸ್ತಾನದ ಮಟ್ಟಿಗೆ ಇದು ಸಂಪೂರ್ಣ ಸಹಜ. ಇಡೀ ಜಗತ್ತು ಪಾಕಿಸ್ತಾನದ ದೀರ್ಘಕಾಲಿಕ ಆಂತರಿಕ ಪ್ರಹಸನಗಳಿಂದ ರೋಸಿ ಹೋಗಿದೆ. ಇಷ್ಟಾದರೂ ಅದು ಕೊನೆಯಾಗಿಲ್ಲ; ಬಹುಶಃ ಕೊನೆಯಾಗುವುದೂ ಇಲ್ಲ. ಇದಕ್ಕೆ ಎರಡು ಕಾರಣಗಳಿರಬಹುದು. ಸಹಜವಾಗಿ ಮೊದಲನೆಯದೆಂದರೆ, ಪ್ರತಿ ದಂಗೆಯ ನಂತರವೂ ಪಾಕಿಸ್ತಾನದ ಸೇನೆಯು ಹಿಂದೆಂದಿಗಿಂತಲೂ ಬಲಿಷ್ಠವಾಗುತ್ತ ಸಾಗಿದೆ ಎಂಬುದು ಆ ದೇಶವನ್ನು ಗಮನಿಸುತ್ತಿರುವ ಪ್ರತಿಯೊಬ್ಬನಿಗೂ ತಿಳಿದಿದೆ. ಅಂದ ಮೇಲೆ ‘ಜನಪ್ರತಿನಿಧಿಗಳಿಂದ ಅಧಿಕಾರ ಕಿತ್ತುಕೊಳ್ಳುವ ಸೇನೆಯದ್ದು ಸರ್ವಾಧಿಕಾರಿ ಧೋರಣೆ’ ಎಂದು ಹೀಯಾಳಿಸುವ ಪ್ರಮೇಯವೇ ಉಳಿದಿಲ್ಲ.

ಮಿಲಿಟರಿ ಆಜ್ಞಾನುಸಾರ ಆ ಛಾಯೆಯಡಿ ಉಳಿದು ಬಿಟ್ಟರೆ, ಶ್ರೀಮಂತ ಹಾಗೂ ಪ್ರಭಾವಶಾಲಿ ಬದುಕನ್ನು ನಡೆಸುವುದು ಅಲ್ಲಿ ತುಂಬ ಸುಲಭ. ಅಧಿಕಾರಕ್ಕೇರುವ ನಾಯಕರ ಮೇಲೆ ಅಜ್ಞಾತ ನಿಯಂ ತ್ರಣವನ್ನು ಸಾಧಿಸುವ ಪಾಕ್ ಮಿಲಿಟರಿ ಶಕ್ತಿ, ಅದರ ಹೊರ ತಾಗಿಯೂ ಜಗತ್ತಿನೆದುರು ‘ಜನಪ್ರಿಯ ಸರಕಾರ’ವೇ ದೇಶದಲ್ಲಿದೆ ಎಂಬಂತೆ ಪ್ರಸ್ತುತಪಡಿಸುವ ಕಲೆಯನ್ನು ಸಿದ್ಧಿಸಿಕೊಂ ಡಿದೆ. ಹೀಗಾಗಿ ಸಾಮಾನ್ಯ ರಾಜಕೀಯ ಕಾರ್ಯಕರ್ತರಲ್ಲಿನ ಧೈರ್ಯದ ಹೊರತಾಗಿಯೂ ಅವರ ‘ನಿರೀಕ್ಷಿತ ಭವಿಷ್ಯ’ ವನ್ನು ಅರ್ಥ ಮಾಡಿಕೊಂಡಿರುವ ಜಗತ್ತಿಗೆ, ನೈಜ ಚುನಾವಣಾ ಪ್ರಜಾಪ್ರಭುತ್ವದ ಬೇರುಗಳು ಆ ನೆಲದಲ್ಲಿ ಬೆಳೆಯಲು ಸಾಧ್ಯವೇ ಇಲ್ಲ ಎಂಬುದು ಗೊತ್ತಾಗಿದೆ. ಇನ್ನು ಇಮ್ರಾನ್ ಅಧಿಕಾರ ಪತನಕ್ಕೆ ಇರುವ ಎರಡನೆಯ ಕಾರಣ ಸ್ಪಷ್ಟ. ಅಧಿಕಾರದಲ್ಲಿದ್ದಾಗ ಅವರು ನಿಂತು ಏನೆಲ್ಲ ವನ್ನು ಪ್ರತಿಪಾದಿಸಿದ್ದರೋ ಅವಷ್ಟನ್ನೂ ಕಬಳಿಸಿಯಾಗಿದೆ.

ಕ್ರಿಕೆಟಿಗನಾಗಿ ಹೇಗೆ ಇಮ್ರಾನ್‌ಖಾನ್ ಒಬ್ಬ ದೈತ್ಯ ಆಟ ಗಾರನೋ, ಹಾಗೆಯೇ ರಾಜಕೀಯದಲ್ಲೂ ಅತ್ಯಂತ ‘ಅಪಾಯಕಾರಿ ಜನಪ್ರಿಯ ಆಟ’ವನ್ನು ಆಡಿದ್ದಾರೆಂಬುದರಲ್ಲಿಎರಡು ಮಾತಿಲ್ಲ. ಅವರು ತಮ್ಮ ಕ್ರೀಡಾಖ್ಯಾತಿಯನ್ನು ಬಳಸಿ ಜನರ ವಿಶ್ವಾಸಾರ್ಹತೆ ಗಳಿಸಿ ಅಧಿಕಾರಕ್ಕೇರಿದರು. ಆದರೆ ಬಹಳ ಬೇಗನೆ ಅವರು ಕ್ಯಾಸನೋವಾದಿಂದ ಕನ್ಸರ್ವೇಟಿವ್ ಆಗಿ, ಪ್ಲೇಬಾಯ್ ಗೆಟಪ್‌ನಿಂದ ಧರ್ಮನಿಷ್ಠರಾಗಿ ಗೊತ್ತೇ ಆಗದಂತೆ ಬದಲಾಗಿ ಬಿಟ್ಟಿದ್ದರು. ಅವರ ತೀರಾ ಸಾಂಪ್ರದಾಯಿಕ ಕೌಟುಂಬಿಕ ಹಿನ್ನೆಲೆಗಿಂತಲೂ ಹೆಚ್ಚು ಆಘಾತಕಾರಿ ಸಂಗತಿಯೆಂದರೆ ಮೂಲಭೂತ ಉದಾರವಾದಿ ರಾಜಕೀಯ ಮೌಲ್ಯಗಳ ಪಾಲನೆಯನ್ನು ನಿರಾಕರಿಸಿದ್ದು. ಪತ್ರಕರ್ತಳಾಗಿ, ಅಸೈನ್‌ಮೆಂಟ್‌ನ ಮೇಲೆ ಪಾಕಿಸ್ತಾನಕ್ಕೆ ಹೋದಾಗಲೆಲ್ಲ, ಇಮ್ರಾನ್ ಅವರನ್ನು ಸಂದರ್ಶಿಸುವುದನ್ನು ನಾನು ಎಂದಿಗೂ ಮರೆಯುವುದಿಲ್ಲ. ಇಂಥ ಸಂದರ್ಶನವೊಂದರಲ್ಲೇ ‘ಉದಾರವಾದಿಗಳೆಂದರೆ ಪಾಕಿಸ್ತಾನದ ಪಾಲಿನ ಪೀಡೆ. ಅವರು -ಸಿಸ್ಟ್‌ಗಳು, ನನಗೆ ಈ ಉದಾರವಾದಿಗಳೆಂದರೆ ಆಗಿಬರುವುದೇ ಇಲ್ಲ. ಏಕೆಂದರೆ, ಹಾಗೆಂದು ಹೇಳಿಕೊಳ್ಳು ವವರೇ ಹಳ್ಳಿಗಳ ಮೇಲಿನ ಬಾಂಬ್ ದಾಳಿಯನ್ನು ಬೆಂಬಲಿಸುತ್ತಾರೆ. ಡ್ರೋನ್ ದಾಳಿಗೆ ಪ್ರಚೋದಿಸುತ್ತಾರೆ. ಭಯೋತ್ಪಾದನೆಯ ಇಂಥ ಪರೋಕ್ಷ ಯುದ್ಧವನ್ನು ನಾನು ವಿರೋಧಿಸಿದ್ದರಿಂದ ಅವರು ನನ್ನನ್ನು ಟೀಕಿಸುತ್ತಿದ್ದಾರೆ. ಈ ಕ್ರಿಮಿನಲ್ ಬಾಂಬ್ ದಾಳಿ, ಹಳ್ಳಿಗಳ ಮೇಲಿನ ವೈಮಾನಿಕ
ಬಾಂಬ್ ದಾಳಿ, ಮಹಿಳೆಯರು ಮತ್ತು ಮಕ್ಕಳ ಸಾವನ್ನುನಾನು ಸಹಿಸುವುದಿಲ್ಲ. ಆದ್ದರಿಂದಲೇ ಜನರು ನನ್ನನ್ನು ಶ್ಲಾಸಿದರು. ನಿಜಕ್ಕೂ ಇವರು ಉದಾರವಾದಿಗಳಲ್ಲ. ಇದು ಉದಾರವಾದಿಗಳೆಂದು ಕರೆದುಕೊಳ್ಳುವ ಪಾಕಿಸ್ತಾನದ ಕೊಳಕು…’ ಎಂದು ಹೇಳಿದ್ದರು ಇಮ್ರಾನ್. ಇಂಥ ಇಮ್ರಾನ್, ಆಮಿಷಗಳಿಗೆ ಬಲಿಯಾಗಿ ‘ತಾಲಿಬಾನ್ ಖಾನ್’ ಆಗಿ ಪರಿವರ್ತಿಸಲ್ಪಟ್ಟರು. ಅಂಥ ಬೆಂಬಲದೊಂದಿಗೇ ತಮ್ಮ ರಾಜಕೀಯ ನಾಯಕತ್ವವನ್ನು ನಿರ್ಮಿಸಿಕೊಂಡದ್ದುಗುಟ್ಟಾಗೇನೂ ಉಳಿದಿಲ್ಲ.

ಧಾರ್ಮಿಕ ಉಗ್ರವಾದದೊಂದಿಗೆ ಫ್ಲರ್ಟ್ ಮಾಡುತ್ತಲೇ ಪಾಕಿಸ್ತಾನದ ಸೇನೆಯ ಪೋಸ್ಟರ್ ಬಾಯ್ ಎಂಬಂತೆ ತಮ್ಮನ್ನು ಬಿಂಬಿಸಿಕೊಂಡರು. ಈಗ ಅವರು ತಮ್ಮ ಜೀವನದ ಇನ್ನೊಂದು ಮಗ್ಗುಲಲ್ಲಿದ್ದಾರೆ. ಅವರಿಗೆ ಮತ್ತೊಂದು ಮುಖದ ದರ್ಶನವಾಗುತ್ತಿದೆ. ಅವರು ಹೆಚ್ಚು ಪ್ರಭಾವಶಾಲಿಯಾಗಿದ್ದಾಗ ಕಂಡ ಎಲ್ಲ ವಿಚಾರಗಳು ಮತ್ತು ಜನರು ಈಗವರ ಬೆಂಬಲಕ್ಕೆ ಬರುತ್ತಲೇ ಇಲ್ಲ. ಜೈಲಿನಲ್ಲಿ ಖಾನ್ ಅವರನ್ನು ನಡೆಸಿಕೊಳ್ಳಲಾಗುತ್ತಿರುವ ರೀತಿಗೆ ಇಂದು ಅವರ ಅಭಿಮಾನಿಗಳು ದುಃಖಿಸುತ್ತಿದ್ದಾರೆ, ಸರಿ. ಆದರೆ, ಅವರು ಪ್ರಧಾನಿಯಾಗಿದ್ದಾಗ, ಅದೇ ಆಸನದಲ್ಲಿ ತಮಗಿಂತಲೂ ಹಿಂದೆ ಕುಳಿತಿದ್ದ ನವಾಜ್ ಷರೀ-ರನ್ನು ಹೇಗೆ ನಡೆಸಿಕೊಂಡಿದ್ದರು ಎಂಬುದನ್ನೊಮ್ಮೆ ನೆನಪಿಸಿಕೊಳ್ಳಲಿ. ೨೦೧೯ರಲ್ಲಿ, ಷರೀಫ್ ರ ವಿರುದ್ಧ, ಆಡಳಿತದ ವಿರುದ್ಧ ದನಿ ಎತ್ತಿದ್ದವರು ಇದೇ ಇಮ್ರಾನ್ ಖಾನ್ ಅವರೇ ಅಲ್ಲವೇ?

ಅವರನ್ನು ಜೈಲಿಗಟ್ಟುವ ಪ್ರತಿಜ್ಞೆ ಮಾಡಿದ್ದರಲ್ಲವೇ? ಬಳಿಕ ‘ನವಾಜ್ ಷರೀಫ್ ಅವರು ಜೈಲಿನಲ್ಲೂ ಮನೆಯ ಆಹಾರ ವನ್ನೇ ಬಯಸುತ್ತಾರೆ, ಅಲ್ಲಿಯೂ ಅವರಿಗೆ ಏಸಿ ಬೇಕೇ? ಅರ್ಧದಷ್ಟು ಜನಸಂಖ್ಯೆ ಬಿಸಿಲಲ್ಲೇ ಕರಟುತ್ತಿರುವ, ಮನೆಯಲ್ಲಿ ಕನಿಷ್ಠ ಟಿವಿಯೂ ಇಲ್ಲದ ದೇಶದಲ್ಲಿ ಇದು ಯಾವ ರೀತಿಯ ಶಿಕ್ಷೆ?’ ಎಂದು ಇಮ್ರಾನ್ ಟೀಕಿಸಿದ್ದರು. ಷರೀಫ್ ಪತ್ನಿ ಕುಲ್ಸೂಮ್ ನವಾಜ್ ಶರಶಯ್ಯೆಯಲ್ಲಿದ್ದಾಗಲೂ, ಖಾನ್ ಆಳ್ವಿಕೆಯಡಿಯಲ್ಲಿದ್ದ ಜೈಲು ಅಧಿಕಾರಿಗಳು ಕನಿಷ್ಠ ಫೋನ್ ಕರೆ ಮಾಡಲೂ ಷರೀಫ್ ಗೆ ಅವಕಾಶ ನೀಡಲಿಲ್ಲ. ಪತ್ನಿ ಸಾಯುವ ಮುನ್ನ ಒಮ್ಮೆ ನೋಡಲೂ ಬಿಟ್ಟಿರಲಿಲ್ಲ. ಆಕೆ ಕೊನೆಯುಸಿರೆಳೆದಾಗ ಕೇವಲ ೧೨ ಗಂಟೆಗಳ ಪೆರೋಲ್ ಮೇಲೆ ಅಂತ್ಯಸಂಸ್ಕಾರಕ್ಕಾಗಿ ಹೊರಗೆ ಕಳುಹಿಸಲಾಗಿತ್ತು. ಇಂದು, ಆ ಎಲ್ಲ ಕಥೆಗಳನ್ನು ಷರೀಫ್ ಹೇಳದುಳಿದಾರೇ? ಹಾಗೆ ನೋಡಿದರೆ, ಖಾನ್ ತಮ್ಮ ಎದುರಾಳಿಗಳಿಗೆ ಜೈಲಿನಲ್ಲಿ ಕೊಟ್ಟಿದ್ದ ಕಿರುಕುಳ, ನೀಡಿದ್ದ ಹಿಂಸೆ, ನಿರ್ಮಾಣ ಮಾಡಿದ್ದ ವಾತಾವರಣಕ್ಕಿಂತಲೂ ಹೀನಸ್ಥಿತಿಯಲ್ಲೇನೂ ಇಂದು ಅವರಿಲ್ಲ. ಅಂದು ನವಾಜ್ ಷರೀಫ್ ಮುಂದಿದ್ದ ಅವೇ ಎರಡು ಆಯ್ಕೆಗಳೇ ಇಂದು ಇಮ್ರಾನ್ ಖಾನ್
ಅವರೆದುರೂ ಇವೆ- ದೇಶಭ್ರಷ್ಟರಾಗಿ ಅಥವಾ ಸೇನಾ ಕಾಯಿದೆಯಡಿಯಲ್ಲಿ ಕ್ರಮವನ್ನು ಎದುರಿಸಬೇಕಾಗುತ್ತದೆ. ಅಥವಾ ಆಜೀವ ಜೈಲುವಾಸ, ಇಲ್ಲವೇ ಮರಣದಂಡನೆಯೇ ಗತಿ. ಒಂದಂತೂ ಸ್ಪಷ್ಟ. ಪಾಕಿಸ್ತಾನದಲ್ಲಿ, ನಟರು ಮಾತ್ರ ಬದಲಾಗುತ್ತಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರೂಪಣೆ ಯಾವೊಂದೂ ಎಂದಿಗೂ ಬದಲಾಗುವುದೇ ಇಲ್ಲ.
(ಲೇಖಕರು ಪ್ರಶಸ್ತಿ ವಿಜೇತ ಪತ್ರಕರ್ತೆ)

Leave a Reply

Your email address will not be published. Required fields are marked *