ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
vbhat@me.com
ರಾಜಕಾರಣಿಗಳು, ಸಚಿವರು ವಿದೇಶ ಪ್ರವಾಸಕ್ಕೆ ಮೋಜು ಉಡಾಯಿಸಲು ಹೋಗುತ್ತಾರೆ ಎಂಬ ಭಾವನೆ ಸಾಮಾನ್ಯರಲ್ಲಿದೆ. ಅದು ನಿಜವೂ ಇದ್ದಿರಬಹುದು. ಅದರಲ್ಲೂ ದುಬೈ, ಥಾಯ್ಲೆಂಡ್, ಮಲೇಷ್ಯಾಕ್ಕೆ ಹೋದರೆ ಆ ಉದ್ದೇಶಕ್ಕೇ ಹೋಗುತ್ತಾರೆ ಎಂದು ಭಾವಿಸುವವರಿದ್ದಾರೆ.
ಇದಕ್ಕೆ ಇಂಬು ನೀಡುವಂತೆ, ರಾಜಕಾರಣಿಗಳು ಸಹ ವರ್ತಿಸುವುದೂ ಉಂಟು. ಮೊನ್ನೆ ನನ್ನ ‘ನೂರೆಂಟು ವಿಶ್ವ’ ಅಂಕಣದಲ್ಲಿ, ‘ಬೊಮ್ಮಾಯಿಯವರೇ, ವಿದೇಶ ಪ್ರವಾಸ ಮಾಡದಿರುವುದು ಶ್ರೇಷ್ಠತೆ ಅಲ್ಲ’ ಎಂಬ ಅಂಕಣಕ್ಕೆ ಓದುಗರೊಬ್ಬರು, ‘ರಾಜಕಾರಣಿಗಳು ವಿದೇಶ ಪ್ರವಾಸ ಹೋಗುವುದರಿಂದ ರಾಜ್ಯಕ್ಕೆ, ದೇಶಕ್ಕೆ ಆದ ಮತ್ತು ಆಗುವ ಲಾಭಗಳೇನು? ಅವರು ಬೇಕಾದರೆ ತಮ್ಮ ಸ್ವಂತ ಖರ್ಚಿನಲ್ಲಿ ಹೋಗಲಿ, ಆದರೆ ಸರಕಾರದ ಹಣದಲ್ಲಿ ಹೋಗು ವುದು ನಿರರ್ಥಕ. ಅವರು ಅಲ್ಲಿಂದ ಬಂದು ಮಾಡುವುದು ಅಷ್ಟರ ಇದೆ’ ಎಂದು ಪ್ರತಿಕ್ರಿಯಿಸಿದ್ದರು. ಸಚಿವರಾದ ವರು ಸಹ ವಿದೇಶಕ್ಕೆ ಹೋಗಿ ಕಡಿದು ಕಟ್ಟೆ ಹಾಕುವುದು ಅಷ್ಟರ ಇದೆ ಎಂಬ ಭಾವನೆ ಜನರಲ್ಲಿ ಮೂಡಿಬಿಟ್ಟಿದೆ.
ಆದರೆ ಮೊನ್ನೆ ನಾನು ದುಬೈಗೆ ಹೋದಾಗ, ನಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣ ಖಾತೆ ಸಚಿವರಾದ ಬಿ.ಸಿ.ನಾಗೇಶ್ ಕಾರ್ಯವೈಖರಿ, ಅದರಲ್ಲೂ ಅವರು ವಿದೇಶ ದಲ್ಲಿ ನಡೆದುಕೊಂಡ ರೀತಿ ನೋಡಿ ಆಶ್ಚರ್ಯವೂ ಆಯಿತು ಮತ್ತು ಅವರ ಬಗ್ಗೆ ಮತ್ತಷ್ಟು ಅಭಿಮಾನವೂ ಮೂಡಿತು. ಮೂಲತಃ ನಾಗೇಶ್ ಹೆಚ್ಚು ವಿದೇಶ ಪ್ರವಾಸ ಮಾಡಿದವರಲ್ಲ. ಶಾಸಕರಾಗಿ, ಅಧ್ಯಯನ ಪ್ರವಾಸ ನಿಮಿತ್ತ ಕೆಲವು ದೇಶಗಳಿಗೆ ಹೋಗಿರಬಹುದಷ್ಟೆ. ಅದರಲ್ಲೂ ಸಚಿವರಾದ ನಂತರ ಇದು ಅವರ ಮೊದಲ ವಿದೇಶ ಪ್ರವಾಸ. ಯುಎಇಯ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಸಂಘಟಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಗೇಶ್ ದುಬೈಗೆ ಆಗಮಿಸಿದ್ದರು. ಅವರೊಂದಿಗೆ ಪತ್ನಿ ಮತ್ತು ಆಪ್ತ ಕಾರ್ಯದರ್ಶಿಯೂ ಜತೆಯಲ್ಲಿದ್ದರು.
ದುಬೈಯಲ್ಲಿದ್ದ ನಾಲ್ಕೂ ದಿನ ನಾಗೇಶ್ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅವರು ಉಳಿದುಕೊಂಡಿದ್ದ ಹೋಟೆಲಿನಲ್ಲಿಯೇ ನಾನೂ ಉಳಿದು ಕೊಂಡಿದ್ದೆ. ಆದರೆ ನನಗೆ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮತ್ತು ಒಂದು ಸಲ ಹೋಟೆಲಿನಲ್ಲಿ ಉಪಾಹಾರ ಸೇವಿಸುವಾಗ ಭೇಟಿಯಾಗಿದ್ದು ಬಿಟ್ಟರೆ, ನಾಗೇಶ್ ಜತೆ ಬಿಡುವಾಗಿ ಮಾತಾಡಲು ಸಹ ಆಗಲಿಲ್ಲ. ಬೆಳಗ್ಗೆ ಎಂಟು-ಒಂಬತ್ತು ಗಂಟೆಗೆ ಅವರು ಹೋಟೆಲ್ ಬಿಟ್ಟರೆ ಮರಳಿ ಹೋಟೆಲಿಗೆ ಬರುತ್ತಿದ್ದುದೇ ರಾತ್ರಿ ಒಂಬತ್ತರ ನಂತರ. ನಾಗೇಶ್ ಅಷ್ಟೊಂದು ‘ಬಿ.ಸಿ.’ !
ನಾಗೇಶ್ ಜತೆ ಹೋಗುತ್ತಿದ್ದ ಸ್ಥಳೀಯರೊಬ್ಬರು, ಸಚಿವರ ಬಗ್ಗೆ ಬಹಳ ಅಭಿಮಾನದಿಂದ ನನಗೆ ಹೇಳಿದರು – ‘ನಾನು ಕಳೆದ ಇಪ್ಪತ್ತು ವರ್ಷಗಳಿಂದ ಕರ್ನಾಟಕ ದಿಂದ ಆಗಮಿಸುವ ಸಚಿವರು ಮತ್ತು ರಾಜಕಾರಣಿಗಳನ್ನು ನೋಡಿದ್ದೇನೆ. ಆದರೆ ನಾಗೇಶ್ ಅವರಂಥ ಸಜ್ಜನ ರಾಜಕಾರಣಿಯನ್ನು ನೋಡಿಲ್ಲ. ಸಾಮಾನ್ಯ ವಾಗಿ ಎಲ್ಲರೂ ಒಂದೆರಡು ಸರಕಾರೀ ಕಾರ್ಯಕ್ರಮಗಳನ್ನು ನೆಪ ಮಾತ್ರಕ್ಕೆ ಜೋಡಿಸಿಕೊಂಡು ಇಲ್ಲಿಗೆ ಬರುತ್ತಾರೆ. ನಂತರ ದುಬೈಯಲ್ಲಿ ಪ್ರಸಿದ್ಧವಾಗಿರುವ ಮಾಲ್ ಗಳಿಗೆ ಶಾಪಿಂಗ್ ಹೋಗುತ್ತಾರೆ. ಇಲ್ಲಿಗೆ ಬಂದು ಕುಡಿದು, ತಿಂದು, ನೈಟ್ ಕ್ಲಬ್ಗಳಿಗೆ ಹೋಗಿ ಮಜಾ ಮಾಡಿ ಹೋಗುತ್ತಾರೆ.
ಹೋಗುವಾಗ ಹೊರಲಾಗದಷ್ಟು ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅವರಿಗೆ ಹಣ (ದಿರ್ಹಮ) ಕೊಡುವವರ, ಮಜಾ ಮಾಡಿಸುವವರ ದೊಡ್ಡ ಲಾಬಿಯೇ ಇಲ್ಲಿದೆ. ಈ ಸಚಿವರಿಂದ ಲಾಭ ಮಾಡಿಕೊಳ್ಳುವುದು ಹೇಗೆ ಎಂಬುದು ಗೊತ್ತಿರುತ್ತದೆ. ಆದರೆ ನಾಗೇಶ್ ಇವರೆಲ್ಲರಿಗಿಂತ ಭಿನ್ನವಾಗಿ ಎದ್ದು ನಿಲ್ಲುವ ವ್ಯಕ್ತಿ. ನನಗೆ ಅವರ ಬಗ್ಗೆ ಅಭಿಮಾನ ಉಂಟಾಯಿತು. ಈಗಿನ ಕಾಲದಲ್ಲಿ ಇಂಥ ಸಚಿವರೂ ಇದ್ದಾರಲ್ಲ ಎಂದು ಸಂತಸ ಮತ್ತು ಸಮಾಧಾನ ಆಯಿತು.’
’ನಾಗೇಶ್ ತಾವು ದುಬೈಯಲ್ಲಿದ್ದ ನಾಲ್ಕೂ ದಿನ, ದಿನದಲ್ಲಿ ನಾಲ್ಕೈದು ಕಾರ್ಯಕ್ರಮಗಳಂತೆ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜತೆಯಲ್ಲಿ ಪತ್ನಿ ಕೂಡ ಇದ್ದರು. ಸಾಮಾನ್ಯವಾಗಿ ಹೆಂಡತಿ ಜತೆ ಬರುವವರು, ತಾವು ಅಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ, ಪತ್ನಿಯನ್ನು ಶಾಪಿಂಗ್ ಗೆ ಕಳಿಸುತ್ತಾರೆ. ಆದರೆ ನಾಗೇಶ್ ಹಾಗೆ ಮಾಡಲಿಲ್ಲ. ಒಂದೆರಡು ಕಡೆ ಅವರ ಪತ್ನಿ ವೀಣಾ ಸಹ ಮಕ್ಕಳೊಂದಿಗೆ ಸಂಸ್ಕೃತದಲ್ಲಿ ಮಾತಾಡಿದರು. ಅವರ ಪತ್ನಿ ಸರಳತೆ ಕಂಡು
ನನಗೆ ಆಶ್ಚರ್ಯವಾಯಿತು’ ಎಂದು ನನ್ನ ಸ್ನೇಹಿತರು ಹೇಳಿದರು.
’ದುಬೈಯಲ್ಲಿದ್ದಷ್ಟೂ ದಿನ ನಾಗೇಶ್ ಜೆಎಸ್ಎಸ್ ಸಂಸ್ಥೆ ಸೇರಿದಂತೆ ಕೆಲವು ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದರು. ಮಕ್ಕಳು ಮತ್ತು ಶಿಕ್ಷಕರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೂ ಇದರಿಂದ ಆನಂದವಾಯಿತು. ಕಾರಣ ಕರ್ನಾಟಕದ ಯಾವ ಸಚಿವರೂ ಇಷ್ಟು ವರ್ಷಗಳ ಕಾಲ ಅವರನ್ನು ಭೇಟಿಯಾಗಿದ್ದು ಇಲ್ಲವೇ ಇಲ್ಲ. ಅಷ್ಟೇ ಅಲ್ಲ, ಅಲ್ಲಿನ ಶಾಲೆಗಳು ಕಾರ್ಯನಿರ್ವಹಿಸುವ ರೀತಿ, ಶಿಕ್ಷಕರ ಸಮಸ್ಯೆ, ಸವಾಲು, ಕಾರ್ಯಚಟುವಟಿಕೆಗಳನ್ನು ಸಚಿವರು ತಿಳಿದುಕೊಂಡರು.
ಅದರಲ್ಲೂ ನಾಗೇಶ್ ಅವರ ಸರಳ ನಡೆ-ನುಡಿ, ಪೋಷಾಕು, ಎಲ್ಲರೊಡನೆ ಬೆರೆಯುವ ಸ್ವಭಾವ ಕಂಡು ಅವರೆಲ್ಲರೂ (ಮಕ್ಕಳು, ಶಿಕ್ಷಕರು) ಬಹಳ ಖುಷಿಪಟ್ಟರು’
ಎಂದು ನನ್ನ ಸ್ನೇಹಿತರು ಹೇಳಿದರು. ’ನಾಗೇಶ್ ಅವರಿಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ ಎಂದು ಅಂದುಕೊಂಡಿದ್ದೆ. ಹೀಗಾಗಿ ಅಲ್ಲಿನ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂಬ ಅಳುಕು ಮತ್ತು ಕುತೂಹಲ ನನ್ನದಾಗಿತ್ತು. ಆದರೆ ಅವರು ಕನ್ನಡದಷ್ಟೇ, ಹಿಂದಿ ಮತ್ತು ಇಂಗ್ಲಿಷಿನಲ್ಲಿ ಕೂಡ
ನಿರರ್ಗಳವಾಗಿ ಮತ್ತು ಚೆಂದವಾಗಿ ಮಾತಾಡಿದರು. ಅಲ್ಲದೇ ಅವರ ಮಾತಿನಲ್ಲಿ ಸಾಕಷ್ಟು ಹೊಸ ಮತ್ತು ಉತ್ತಮ ವಿಚಾರಗಳಿದ್ದವು. ಅವರ ನಡೆ-ನುಡಿಗಳಂತೂ
ದುಬೈಯಲ್ಲಿರುವ ಕನ್ನಡಿಗರಿಗೆ ಅತೀವ ಸಮಾಧಾನ ತಂದುಕೊಟ್ಟಿದ್ದಂತೂ ನಿಜ’ ಎಂದು ಹಲವು ಸಂಘಟನೆಗಳೊಂದಿಗೆ ಸಂಪರ್ಕ-ಸಂಬಂಧ ಇಟ್ಟುಕೊಂಡಿರುವ ನನ್ನ ಸ್ನೇಹಿತರು ಹೇಳಿದರು.
ನನ್ನ ಆ ಸ್ನೇಹಿತರೊಬ್ಬರೇ ಅಲ್ಲ, ಆನಂತರ ನಾನು ಪಾಲ್ಗೊಂಡಿದ್ದ ಎರಡು ಕಾರ್ಯಕ್ರಮಗಳಲ್ಲಿ ಭೇಟಿಯಾದ ಕೆಲವು ಗಣ್ಯರು ಸಹ ಸಚಿವ ನಾಗೇಶ್ ಅವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ನಾಗೇಶ್ ಅವರನ್ನು ದುಬೈನ ಜನಪ್ರಿಯ ದೈನಿಕ ‘ಖಲೀಜ್ ಟೈಮ್ಸ್’ ಸಂದರ್ಶಿಸಿದ್ದು ಸಹ ಗಮನಾರ್ಹ. ನಾಗೇಶ್ ಭೇಟಿ ಯಿಂದ ಅವರ ವೈಯಕ್ತಿಕ ವರ್ಚಸ್ಸೊಂದೇ ಅಲ್ಲ, ರಾಜ್ಯ ಮತ್ತು ರಾಜ್ಯ ಸರಕಾರದ ಬಗ್ಗೆ ಸಕಾರಾತ್ಮಕ ಭಾವನೆ ಮೂಡುವಂತಾಗಿದ್ದು ಸುಳ್ಳಲ್ಲ. ನಾಗೇಶ್
ಮುಂಗಾಲಪುಟಿಕೆ ಸ್ವಭಾವದವರಲ್ಲ. ತಮ್ಮ ನೆಲೆಯಲ್ಲಿ, ನಿಷ್ಠೆಯಿಂದ, ದಕ್ಷತೆಯಿಂದ ಪ್ರಚಾರ ಬಯಸದೇ ಕೆಲಸ ಮಾಡುವವರು. ದುಬೈ ಕನ್ನಡಿಗರು ನಾಗೇಶ್ ಅವರ ಈ ಭೇಟಿಯನ್ನು ಯಾವತ್ತೂ ನೆನಪಿಟ್ಟುಕೊಳ್ಳುವುದಂತೂ ನಿಜ. ಅಷ್ಟೇ ಅಲ್ಲ, ಅವರು ವಿದೇಶಗಳಿಗೆ ಹೋಗುವ ಸಚಿವರಿಗೆ ಮತ್ತು ರಾಜಕಾರಣಿಗಳಿಗೆ ಒಂದು ಒಳ್ಳೆಯ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.
***
ವಿಮಾನ ನಿಲ್ದಾಣದ ಪುಸ್ತಕದಂಗಡಿ
ಸಾಮಾನ್ಯವಾಗಿ ನಾನು ಯಾವುದೇ ದೇಶಕ್ಕೆ ಹೋದರೂ, ವಿಮಾನ ನಿಲ್ದಾಣಗಳಲ್ಲಿರುವ ಬುಕ್ ಶಾಪ್ ಗೆ ಭೇಟಿ ನೀಡುವುದನ್ನು ತಪ್ಪಿಸುವುದಿಲ್ಲ. ವಿಮಾನ ನಿಲ್ದಾಣಕ್ಕೆ ಕನಿಷ್ಠ ಎರಡು ಗಂಟೆ ಮುಂಚಿತವಾಗಿ ಹೋಗಿ ಅಲ್ಲಿನ ಪುಸ್ತಕದ ಅಂಗಡಿಗಳಲ್ಲಿ ಸಮಯ ಕಳೆಯುತ್ತೇನೆ. ಬೇರೆಲ್ಲೂ ಸಿಗದ ಪುಸ್ತಕಗಳು ವಿಮಾನ ನಿಲ್ದಾಣದ ಪುಸ್ತಕದಂಗಡಿಗಳಲ್ಲಿ ಸಿಗುತ್ತವೆ. ಈ ಪುಸ್ತಕದಂಗಡಿಗಳಲ್ಲಿ ಗಂಭೀರ ಸಾಹಿತ್ಯ ಅಥವಾ ಓದಿನ ಕೃತಿಗಳು ಸಿಗುವುದಿಲ್ಲ.
ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು, ಈ ಅಂಗಡಿಗಳಲ್ಲಿ ಲಘು ಓದು, ಖುಷಿ ಧಾಟಿಯ, ಸಕಾರಾತ್ಮಕ ವಿಷಯಗಳ ಪುಸ್ತಕಗಳನ್ನು ಹೆಚ್ಚಾಗಿ ಇಟ್ಟಿರುತ್ತಾರೆ. ಇತ್ತೀಚೆಗೆ ಬಿಡುಗಡೆಯಾದ ಕೃತಿಗಳು, ಬೇರೆ ಕಡೆ ಸಿಗುವುದಕ್ಕಿಂತ ಮುನ್ನ ಇಲ್ಲಿರುತ್ತವೆ. ಹೀಗಾಗಿ ವಿಮಾನ ನಿಲ್ದಾಣ ಪುಸ್ತಕದಂಗಡಿಗಳು ಸಹ ಒಂದು ರಮ್ಯ ತಾಣವೇ. ಈ ಪುಸ್ತಕದಂಗಡಿಗಳಲ್ಲಿ ಎಲ್ಲರಿಗೂ ಕುಳಿತು ಪುಸ್ತಕಗಳನ್ನು ನೋಡಲು, ಪುಟ ತಿರುವಲು ಸಮಯವಿರುವುದಿಲ್ಲ. ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ ಎಲ್ಲರೂ ಅವಸರದಲ್ಲಿರುತ್ತಾರೆ. ವಿಮಾನಕ್ಕಾಗಿ ಕಾಯುತ್ತಿರುತ್ತಾರೆ.
ಅವರಿಗೆ ಪುಸ್ತಕಗಳನ್ನು ಖರೀದಿಸುವುದು ಆದ್ಯತೆ ಆಗಿರುವುದಿಲ್ಲ. ಸಮಯ ಕಳೆಯುವುದು ಅವರ ಮುಖ್ಯ ಉದ್ದೇಶವಾಗಿರುತ್ತದೆ. ಹೀಗಾಗಿ ಅನೇಕರು ‘ವಿಂಡೋ
ಶಾಪಿಂಗ್’ನಲ್ಲಿಯೇ ಖುಷಿ ಕಾಣುತ್ತಾರೆ. ಇಂಥ ಗ್ರಾಹಕರನ್ನು ಸೆಳೆದು, ಪುಸ್ತಕ ಖರೀದಿಸುವಂತೆ ಮಾಡುವುದು ಸವಾಲು. ಈ ದೃಷ್ಟಿಯಿಂದ ಪುಸ್ತಕಗಳ ಶೀರ್ಷಿಕೆ ಮತ್ತು ಅವುಗಳನ್ನು ಅಂದವಾಗಿ, ಒಪ್ಪವಾಗಿ ಜೋಡಿಸುವುದು ಮುಖ್ಯವಾಗುತ್ತದೆ. ಒಂದು ಕೃತಿಯನ್ನು ಉಳಿದ ಪುಸ್ತಕ ಅಂಗಡಿಗಳಿಗಿಂತ, ವಿಮಾನ ನಿಲ್ದಾಣದ ಅಂಗಡಿಗಳಲ್ಲಿ ಚೆಂದವಾಗಿ ಶೋಕೇಸ್ ಮಾಡುತ್ತಾರೆ. ಪುಸ್ತಕಗಳ ಆಯ್ಕೆಯನ್ನು ಸುಲಭವಾಗಿಸಲಾಗುತ್ತದೆ.
ಗ್ರಾಹಕರ ಕಣ್ಣಿನ ನೇರಕ್ಕೆ ನಿಲುಕುವುದಕ್ಕಿಂತ ಮೇಲೆ ಅಥವಾ ಕೆಳಗೆ ಒಳ್ಳೆಯ ಪುಸ್ತಕಗಳನ್ನು (ಬೆಸ್ಟ್ ಸೆಲ್ಲರ್ಸ್) ಇಡುವುದಿಲ್ಲ. ಗ್ರಾಹಕರ ಕೈಗೆ ಸಿಗದಷ್ಟು ಎತ್ತರದ ನಾಗಂತಿಕೆ (ಶೆಲ) ಮೇಲೆ ಪುಸ್ತಕಗಳನ್ನು ಇಡುವುದಿಲ್ಲ. ಕೈಗೆಟಕುವಷ್ಟು ಸುಲಭವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಕೆಲವು ಅಂಗಡಿಗಳಲ್ಲಿ, ಈ ಪುಸ್ತಕ ವನ್ನು ಯಾಕೆ ಓದಬೇಕು ಎಂಬ ಕಿರು ವಿಮರ್ಶೆ (ಐದಾರು ವಾಕ್ಯಗಳಲ್ಲಿ)ಯನ್ನು ಬರೆದು, ಖರೀದಿ ನಿರ್ಧಾರವನ್ನು ಸುಲಭ ಮಾಡಿಕೊಡಲಾಗುತ್ತದೆ.
ವಿಮಾನ ನಿಲ್ದಾಣದ ಪುಸ್ತಕದ ಅಂಗಡಿಗಳಲ್ಲಿ ಕಡ್ಡಾಯವಾಗಿ ‘ಟಾಪ್ ಹತ್ತು’ ಪುಸ್ತಕಗಳನ್ನು ಪಟ್ಟಿ ಮಾಡಿ, ಅವುಗಳಿಗೆ ಪ್ರತ್ಯೇಕ ಕಪಾಟನ್ನು ಮಾಡಿರುತ್ತಾರೆ.
ಸಾಮಾನ್ಯವಾಗಿ ಈ ಪಟ್ಟಿಯನ್ನು, ಕಪಾಟಿನಲ್ಲಿರುವ ಕೃತಿಗಳನ್ನು ನೋಡಿ ಒಂದಾದರೂ ಕೃತಿಯನ್ನು ಖರೀದಿಸಬೇಕು ಎಂದು ಯಾರಿಗಾದರೂ ಅನಿಸದೇ ಇರದು. ಎರಡು ವರ್ಷಗಳ ಹಿಂದೆ, ನಾನು ಅಜರ್ಬೈಜಾನ್ ಗೆ ಹೋದಾಗ, ಅಲ್ಲಿನ ರಾಜಧಾನಿ ಬಾಕುವಿನಲ್ಲಿ ಹೇದರ್ ಅಲಿಯೇವ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಪುಸ್ತಕ ಖರೀದಿಸಿದ್ದೆ. ಅದರ ಶೀರ್ಷಿಕೆ – How to attract readers and sell books in Airport Book Shops. ಈ ಕೃತಿಯನ್ನು ಓದಿದಾಗಲೇ ಅನಿಸಿದ್ದು ವಿಮಾನ ನಿಲ್ದಾಣದಲ್ಲಿನ ಓದುಗರ ಮನಸ್ಥಿತಿ. ಪುಸ್ತಕಗಳನ್ನು ಹೇಗೆ ಜೋಡಿಸಿಡಬೇಕು ಎಂಬ ಬಗ್ಗೆಯೇ ಈ ಪುಸ್ತಕದಲ್ಲಿ ಒಂದು ಅಧ್ಯಾಯ ವಿದೆ.
ಮೊನ್ನೆ ದುಬೈಯಿಂದ ಬರುವಾಗ ಅಲ್ಲಿನ ವಿಮಾನ ನಿಲ್ದಾಣದಲ್ಲಿ, ಪುಸ್ತಕದ ಅಂಗಡಿಗಾಗಿ ಬಹಳ ಹುಡುಕಾಡಿದೆ, ಬಹಳ ನಿರಾಸೆಯಾಯಿತು. ಅಲ್ಲಿನ ಪುಸ್ತಕ ದಂಗಡಿ ಬಹಳ ಚೆನ್ನಾಗಿತ್ತು. ನಾನು ಯಾವತ್ತೂ ಅಲ್ಲಿನ ಪುಸ್ತಕದಂಗಡಿಗೆ ಹೋಗದೇ ಬಂದಿಲ್ಲ. ಆದರೆ ಮೊನ್ನೆ ವಿಮಾನ ನಿಲ್ದಾಣದಲ್ಲಿ ಎಷ್ಟೇ ಹುಡುಕಿದರೂ ಸಿಗಲಿಲ್ಲ. ಮೊದಲಿದ್ದ ಪುಸ್ತಕದಂಗಡಿ ಜಾಗದಲ್ಲಿ ಲಿಕ್ಕರ್, ವೈನ್, ಅತ್ತರು ಮಾರಾಟ ಮಾಡುವ ಡ್ಯೂಟಿ ಫ್ರೀ ಅಂಗಡಿ ಕಂಡು ಬಂದಿತು. ಒಂದು ಮೂಲೆಯಲ್ಲಿ ಹತ್ತು ಅಡಿ ಅಗಲ ಮತ್ತು ಎಂಟು ಅಡಿ ಉದ್ದದ ಸಣ್ಣ ಜಾಗಕ್ಕೆ ಪುಸ್ತಕದಂಗಡಿ ವರ್ಗವಾಗಿತ್ತು. ಅಷ್ಟು ದೊಡ್ಡ ವಿಮಾನ ನಿಲ್ದಾಣದಲ್ಲಿ ಪುಸ್ತಕದ ಅಂಗಡಿಗೆ ಅಷ್ಟು ಚಿಕ್ಕ
ಜಾಗ ! ಯಾಕೋ ಬಹಳ ಪಿಚ್ಚೆನಿಸಿತು.
***
ವಿದೇಶ ಪ್ರವಾಸ ಮತ್ತು ಡ್ರೆಸ್
ವಿದೇಶಗಳಿಗೆ ಹೋಗುವಾಗ ನಾವು ಪ್ರವಾಸಿಗರಾಗಿ ಹೋಗುತ್ತಿದ್ದೇವಾ, ಪಯಣಿಗರಾಗಿ ಹೋಗುತ್ತಿದ್ದೇವಾ ಅಥವಾ ಬಿಸಿನೆಸ್ ಗಾಗಿ ಹೋಗುತ್ತಿದ್ದೇವಾ ಎಂಬುದು ಬಹಳ ಮುಖ್ಯ. ಬಿಸಿನೆಸ್ಗಾಗಿ ಹೋಗುವಾಗ ಫಾರ್ಮಲ್ ಪ್ಯಾಂಟ್, ಶರ್ಟ್, ಟೈ, ಷೂ ಎಲ್ಲವೂ ಅಗತ್ಯ.
ಒಂದು ವೇಳೆ ನೀವು ಪ್ರವಾಸಿಗರಾಗಿಯೋ, ಪಯಣಿಗರಾಗಿಯೋ ಹೋದರೆ ನಿಮ್ಮ ಡ್ರೆಸ್ಗೆ ಕಿಂಚಿತ್ತೂ ಬೆಲೆ ಕೊಡಬೇಕಿಲ್ಲ. ಹೇಗಿದ್ದರೂ ಆ ಊರಿನಲ್ಲಿ ನಿಮಗೆ ಯಾರ ಪರಿಚಯವೇ ಇಲ್ಲ. ನೀವು ಎಷ್ಟು ಒಳ್ಳೆಯ ಬಟ್ಟೆ ಧರಿಸಿದರೇನು, ಸುಕ್ಕಾದ ಬಟ್ಟೆ ತೊಟ್ಟರೇನು, ವ್ಯತ್ಯಾಸವೇ ಇಲ್ಲ. ಅಷ್ಟಕ್ಕೂ ವಿದೇಶಗಳಲ್ಲಿ ಉಡುಪಿಗೆ ಅಷ್ಟು ಮಹತ್ವ ಕೊಡುವುದಿಲ್ಲ. ಅದರಲ್ಲೂ ಅಮೆರಿಕದಲ್ಲಿ ಒಂದು ಜೀನ್ಸ್ ಪ್ಯಾಂಟ್ ಇಟ್ಟುಕೊಂಡರೆ ಒಂದು ತಿಂಗಳು ಕಳೆಯಬಹುದು. ಆಗಾಗ ಶರ್ಟ್ ಅಥವಾ ಟಿ-ಶರ್ಟ್ ಬದಲಿಸಿದರೆ ಸಾಕು. ನಾಲ್ಕು ಶರ್ಟ್ ಹಾಗೂ ಒಂದು ಪ್ಯಾಂಟ್ನಿಂದ ಆರಾಮಾಗಿ ತಿಂಗಳು ಕಳೆಯುವುದು ಕಷ್ಟವಲ್ಲ. ಸ್ವಲ್ಪ ಚಳಿಯಿದ್ದಾಗ ಮೇಲೊಂದು
ಬೆಚ್ಚಗಿನ ಸ್ವೇಟರೋ, ಜರ್ಕಿನೋ ಇದ್ದರೆ ಸಾಕೋ ಸಾಕು. ಜಾಗಿಂಗ್ ಅಥವಾ ಸ್ಪೋಟ್ಸ ಷೂ ಇದ್ದರೆ ಸಾಕು.
ಕೆಲವರು ವಿದೇಶಗಳಿಗೆ ಹೋದಾಗ ದಿನಕ್ಕೆ ಒಂದೊಂದು ಪ್ಯಾಂಟ್ ಮತ್ತು ಶರ್ಟ್ ಧರಿಸಲು ಸೂಟ್ ಕೇಸ್ ತುಂಬಾ ಬಟ್ಟೆಗಳನ್ನು ಒಯ್ಯುತ್ತಾರೆ. ಅಲ್ಲಿಗೆ ಹೋದ ನಂತರ ಇಷ್ಟೆಲ್ಲ ಬಟ್ಟೆಗಳ ಅಗತ್ಯವಿಲ್ಲ ಎಂಬುದು ಗೊತ್ತಾಗುತ್ತದೆ. ಹಾಗಂತ ಅವನ್ನೆಲ್ಲ ಬಿಸಾಡಲಾಗುವುದಿಲ್ಲ. ಅವರಿಗೆ ಅಲ್ಲಿ ಹೊಸ ಬಟ್ಟೆಗಳು ಕಂಡರೆ ಖರೀದಿಸ ಲಾಗುವುದಿಲ್ಲ ಅಥವಾ ಎಕ್ಸ್ಟ್ರಾ ಲಗೇಜ್ ಗೆ ಜಾಸ್ತಿ ಹಣ ಕೊಟ್ಟು ಅವನ್ನೆಲ್ಲ ತರಬೇಕಾಗುತ್ತದೆ. ಅದರ ಬದಲು ಇಲ್ಲಿಂದ ಹೋಗುವಾಗಲೇ ಕನಿಷ್ಠ ಅಗತ್ಯಕ್ಕೆ ಬೇಕಾ ದಷ್ಟು ಬಟ್ಟೆಗಳನ್ನು ಒಯ್ದರೆ ಅಲ್ಲಿ ಖರೀದಿಸಲು, ಶಾಪಿಂಗ್ ಮಾಡಲು ಅನುಕೂಲವಾಗುತ್ತದೆ. ಹೀಗಾಗಿ ಇಲ್ಲಿಂದ ಹೋಗುವಾಗ ಸಾಧ್ಯವಾದಷ್ಟು ಖಾಲಿ ಸೂಟ್ ಕೇಸ್ ಅನ್ನು ಒಯ್ಯಬೇಕು. ಬರುವಾಗ ಅದನ್ನು ತುಂಬಿಸಿಕೊಂಡು ಬರಬೇಕು. ಅಲ್ಲಿನ ಕೆಲವು ಸಾಮಾನುಗಳು ಗುಣಮಟ್ಟದಲ್ಲಿ ಉತ್ಕೃಷ್ಟವಾಗಿರುತ್ತವೆ ಮತ್ತು ಕೆಲವೊಮ್ಮೆ ಕಡಿಮೆ ಬೆಲೆಗೂ ದೊರಕುತ್ತವೆ.
ಭಾರತಕ್ಕೆ ಬರುವ ವಿದೇಶಿಯರನ್ನೂ ನೋಡಿ, ಅವರು ಹೆಗಲ ಮೇಲೆ ಏರಿಸಿಕೊಳ್ಳುವ ಬ್ಯಾಗ್ ಹಿಡಿದುಕೊಂಡು, ಇಡೀ ದೇಶ ಸುತ್ತಿ ವಾಪಸ್ ತಮ್ಮ ತಾಯ್ನಾಡಿಗೆ
ಹೋಗುತ್ತಾರೆ. ಬಟ್ಟೆಬರೆ ಬಿಟ್ಟರೆ ಅವರ ಬಳಿ ಏನೂ ಇರುವುದಿಲ್ಲ. ಅಷ್ಟಕ್ಕೂ ಅವರು ಇಲ್ಲಿಗೆ ಬರುವುದು ದೇಶ ನೋಡಲು ಹೊರತು ಖರೀದಿಗಲ್ಲ. ಕಂಡ ಕಂಡಿ ದ್ದನ್ನೆಲ್ಲ ಖರೀದಿಸಿದರೆ ಭಾರ ಜಾಸ್ತಿ ಆಗುತ್ತಲೇ ಹೋಗುತ್ತದೆ. ನಿಮ್ಮ ಲಗೇಜ್ ಎಷ್ಟು ಕಮ್ಮಿ ಇದೆಯೋ ನೀವು ಅಷ್ಟು ಒಳ್ಳೆಯ ಪ್ರವಾಸಿಗರು ಅಥವಾ ಪಯಣಿಗರು. ನಿಮ್ಮ ಅಲೆದಾಟಕ್ಕೆ ನಿಮ್ಮ ಮಣಭಾರದ ಸೂಟ್ ಕೇಸ್ ತೊಡಕು ಅಥವಾ ವೈರಿ.
ಬ್ಯಾಕ್ ಪ್ಯಾಕ್ ಒಂದೇ ಇದ್ದರೆ ನೀವು ನಿಜವಾದ ಪಯಣಿಗ. ಅಷ್ಟಕ್ಕೂ ನೀವು ವಿದೇಶಗಳಿಗೆ ಹೋಗುವುದು ಅಲ್ಲಿ ಸೆಟ್ಲ ಆಗಬೇಕು ಎಂದಲ್ಲ. ನೀವು ಹೋಗುವುದು
ಅಲ್ಲಿನ ಊರುಗಳನ್ನು ನೋಡಲು. ಅಷ್ಟೇ. ಅಗತ್ಯಕ್ಕಿಂತ ಯಾವುದೇ ಒಂದು ವಸ್ತುವಿದ್ದರೂ ಅದು ಭಾರವೇ. ಇನ್ನೊಂದು ಸಂಗತಿ ಗೊತ್ತಿರಲಿ, ಖಾಲಿ ಪರ್ಸ್ನಂಥ
ಭಾರದ ವಸ್ತು ಮತ್ತೊಂದಿಲ್ಲ !