ಸಂಡೆ ಸಮಯ
ಸೌರಭ ರಾವ್, ಕವಯತ್ರಿ, ಬರಹಗಾರ್ತಿ
ಬುದ್ಧಿಶಕ್ತಿ ಕೇವಲ ಮನುಷ್ಯರ ಸ್ವತ್ತು ಎಂಬಂತೆ ಬೀಗುತ್ತಿರುತ್ತೇವೆ. ಒಮ್ಮೆ ವನ್ಯಜೀವಿಗಳ ಬಗ್ಗೆ ಕುತೂಹಲ ಬೆಳೆಸಿಕೊಂಡು ಅವು ಗಳ ಬಗ್ಗೆ ನಡೆದಿರುವ, ನಡೆಯುತ್ತಿರುವ ವೈಜ್ಞಾನಿಕ ಅಧ್ಯಯನಗಳ ಆಧಾರದ ಮೇಲೆ ಕಲಿಯಲು ಶುರು ಮಾಡಿದರೆ ಸೃಷ್ಟಿಯಲ್ಲಿ
ನಮ್ಮ ಜಾಗದ ಸರಿಯಾದ ಅರಿವು ನಮಗಾದೀತು. ಈ ಮಾಹಿತಿಯುಗದಲ್ಲಿ ತಪ್ಪು ಸುದ್ದಿ, ತಪ್ಪು ಮಾಹಿತಿ ಸುಲಭವಾಗಿ ಹರಿ ದಾಡುವಷ್ಟು ವಿಶ್ವಾಸಾರ್ಹ ಮೂಲಗಳಿಂದ ಸರಿಯಾದ ಮಾಹಿತಿ ಪರಿಶೀಲಿಸಿ ಬೇರೆಯವರ ಜೊತೆ ಹಂಚಿಕೊಳ್ಳುವ ಪ್ರಕ್ರಿಯೆ ಸುಲಭವಲ್ಲ.
ಇದಕ್ಕೆ ಎಷ್ಟೋ ಸಲ ಸಮೂಹ ಮಾಧ್ಯಮಗಳೂ ಹೊರತಲ್ಲ. ನಮ್ಮ ರಾಷ್ಟ್ರೀಯ ಪ್ರಾಣಿಯಾದ ಹುಲಿಯಂಥಾ ಹುಲಿಯ ಬಗ್ಗೆಯೇ ನಮ್ಮಲ್ಲಿ ಅನೇಕರಿಗೆ ಇರುವ ಅಪಾರ ತಪ್ಪು ತಿಳಿವಳಿಕೆಯನ್ನು ನೋಡಿದರೆ ಹಿಂಸೆಯಾಗುತ್ತದೆ, ಇನ್ನು ಚಿಕ್ಕಪುಟ್ಟ ಜೀವಿಗಳ ಬಗ್ಗೆ ಎಷ್ಟು ಜನ ಕಲಿಯಲು ನಿಜವಾದ ಆಸಕ್ತಿ ತೋರುತ್ತಾರೋ? ಒಮ್ಮೊಮ್ಮೆ ತಪ್ಪು ಮಾಹಿತಿಯನ್ನು ಅದೆಷ್ಟು
ಆತ್ಮವಿಶ್ವಾಸದಿಂದ ಬೇರೆಯವರ ಬಳಿ ಕೆಲವರು ಹಂಚಿಕೊಳ್ಳುತ್ತೇವೆಂದರೆ, ನಾವು ಮಾಡುತ್ತಿರುವುದು ಒಂದು ರೀತಿಯ ಅಪರಾಧ ಎನ್ನುವ ಪ್ರಜ್ಞೆಯೇ ಇಲ್ಲದಂತಿರುತ್ತದೆ. ಆದರೆ ಓದುಗರಾಗಿ, ಕಲಿಯುವವರಾಗಿ ನಾವು ಮೊದಲು ತಾಳ್ಮೆ ಬೆಳೆಸಿಕೊಂಡು ಮಾಹಿತಿಯ ಪ್ರವಾಹದಲ್ಲಿ ಕೊಚ್ಚಿಹೋಗದೇ ಆದಷ್ಟೂ ವೈಜ್ಞಾನಿಕ ಆಧಾರದ ಮೇಲೆ ದೊರಕುವ ಲೇಖನಗಳನ್ನು, ಅಧ್ಯಯನ ಗಳನ್ನು ಪರಿಶೀಲಿಸುವ ಜವಾಬ್ದಾರಿ ನಮ್ಮ ಮೇಲಿದೆ.
ಇದಿಷ್ಟು ಪೀಠಿಕೆ ಏಕೆಂದರೆ, ಜರ್ಮನಿಯ ಯೂನಿವರ್ಸಿಟಿ ಆಫ್ ಟ್ಯೂಬಿಂಗೆನ್ ವಿಜ್ಞಾನಿಗಳು ಕಾಗೆಗಳ ಬುದ್ಧಿಶಕ್ತಿಯ ಬಗ್ಗೆ ಹೊಸ ಅಧ್ಯಯನ ನಡೆಸಿ ಕಳೆದ ತಿಂಗಳು ‘ಸೈನ್ಸ್’ ಎಂಬ ಪ್ರಖ್ಯಾತ ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟಿಸಿದ್ದಾರೆ. ಬಾಯಾರಿದ ಕಾಗೆಯೊಂದು ಮಡಿಕೆಯಲ್ಲಿದ್ದ ನೀರನ್ನು ಕೊಕ್ಕಿನಿಂದ ತಲುಪಲಾರದೇ ಕಲ್ಲುಗಳನ್ನು ಅದರೊಳಗೆ ತುಂಬಿ ತುಂಬಿ ನೀರು ಮೇಲೆ ಬಂದಾಗ ಕುಡಿದು ತಣಿದ ಕಥೆ ಬಾಲ್ಯದಲ್ಲಿ ಓದಿದ್ದೇವಲ್ಲ, ಅದು ಕೇವಲ ಕಥೆಗೋಸ್ಕರ ತೋರಿಸಿಕೊಟ್ಟ ಕಾಗೆಯ ಬುದ್ಧಿ ಶಕ್ತಿಯಲ್ಲ, ಈಗ ವೈಜ್ಞಾನಿಕವಾಗಿ ತೋರಿಸಿಕೊಟ್ಟಿರುವ ವಸ್ತುಸ್ಥಿತಿ. ಪ್ರಜ್ಞೆ, ಅರಿವು – ನಮಗೆ ಏನು ತಿಳಿದಿದೆ ಎಂಬುದರ ಬಗ್ಗೆ ತಿಳಿವಳಿಕೆ – ಕೇವಲ ಮನುಷ್ಯರಿಗೆ ಮಾತ್ರ ಇರುವುದು ಎಂದು ನಾವು ನಂಬಿಕೊಂಡು ಬಂದಿದ್ದೇವೆ. ಒಮ್ಮೊಮ್ಮೆ, ನಮ್ಮ ಮಿದು ಳಿನ ವ್ಯವಸ್ಥೆಯ ಜೊತೆ ಹೋಲಿಕೆಗಳಿರುವ ಕೆಲವು ಸಸ್ತನಿಗಳಿಗೆ ಈ ಪ್ರಜ್ಞೆ ಇದೆ ಎಂದು ಕಂಡುಕೊಂಡಿದ್ದೇವೆ. ಆದರೆ ಇತ್ತೀಚಿಗೆ ನಮ್ಮ ನಂಬಿಕೆಗಳನ್ನು ಪ್ರಶ್ನಿಸಿಕೊಳ್ಳುವಂತಹ ಅಧ್ಯಯನಗಳು ನಡೆದು, ಬೇರೆ ಪ್ರಾಣಿ – ಪಕ್ಷಿಗಳಲ್ಲೂ ಇಂತಹ ಪ್ರಜ್ಞೆ ಇರುವು ದಕ್ಕೆ ಪ್ರಯೋಗಗಳಿಂದ ಹೊರಬಿದ್ದ ಫಲಿತಾಂಶಗಳ ಮೂಲಕ ಪುರಾವೆ ಸಿಕ್ಕಿದೆ. ಸೃಷ್ಟಿಯ ಸೋಜಿಗಗಳು ಅಗಣಿತ!
ಹೆಚ್ಚು ಹೆಚ್ಚು ತಿಳಿದಷ್ಟೂ ನಮಗೆ ತಿಳಿದಿರುವುದು ಎಷ್ಟು ಕಡಿಮೆ ಎಂದು ಮನವರಿಕೆಯಾಗುತ್ತಾ ಹೋಗುತ್ತದೆ. ಅಧ್ಯಯನದ ಪ್ರಮುಖ ವಿಜ್ಞಾನಿಯಾದ ಆಂಡ್ರೆಯಾಸ್ ನೈಡರ್, ಲಿಸಾನ್ ವ್ಯಾಗೆನರ್ ಮತ್ತು ಪಾಲ್ ರಿನ್ನರ್ಟ್ ಅವರ ಪ್ರಕಾರ, ಪ್ರಜ್ಞೆ ಮತ್ತು ಸಾಮಾನ್ಯ ಮಾನದಂಡವಾದ ಸೆರೆಬ್ರಲ್ ಕಾರ್ಟೆಕ್ಸ್ ನಡುವಿನ ಸಂಬಂಧ ಮನುಷ್ಯರಲ್ಲಿ ಮಾತ್ರವಲ್ಲ, ಕಾಗೆಗಳಲ್ಲೂ ಇದೆ. ವಿಶಿಷ್ಟ ಪ್ರಯೋಗವೊಂದರ ಮೂಲಕ, ಕಾಗೆಗಳು (ನಿರ್ದಿಷ್ಟವಾಗಿ ‘ಕ್ಯಾರಿಯನ್ ಕಾಗೆ’) ಒಂದು ಉದ್ದೀಪನೆಯನ್ನು (ಸ್ಟಿಮ್ಯುಲಸ್) ಅರ್ಥ ಮಾಡಿಕೊಳ್ಳುವ ಬಗೆಯನ್ನು, ಮತ್ತು ಅವುಗಳ ಮಿದುಳಿನ ನರಕೋಶಗಳಲ್ಲಿ ಉಂಟಾಗುವ ಸ್ಪಂದನೆ ಯನ್ನು (ರೆಸ್ಪಾನ್ಸ್) ಈ ವಿಜ್ಞಾನಿಗಳು ಅಧ್ಯಯಿಸಿದ್ದಾರೆ. ಹೊರಗಿನ ಪ್ರಪಂಚದಿಂದ ಪ್ರಜ್ಞಾಪೂರ್ವಕವಾಗಿ ನಮ್ಮನ್ನು ಪ್ರವೇಶಿಸಿ
ಮತ್ತು ಮಿದುಳಿಗೆ ವರದಿ ಮಾಡುವಂತಹ ಆಂತರಿಕ/ಮನೋಗ್ರಾಹ್ಯವಾದ ಅನುಭವಗಳು ಮಿದುಳಿನ ಸೆರೆಬ್ರಲ್ ಕಾರ್ಟೆಕ್ಸ್ ಎಂಬ ಭಾಗಕ್ಕೆ ಸಂಬಂಧಿಸಿದ್ದು.
ನರಕೋಶಗಳ ಸಾಂದ್ರತೆ ಹೆಚ್ಚಿರುವ ಪ್ಯಾಲಿಯಂ ಎಂಬ ಮಿದುಳಿನ ಭಾಗದಲ್ಲಿ ನರತಂತುಗಳ ಸಂಪರ್ಕ ಮತ್ತು ಚಟುವಟಿಕೆಗಳ ವಿನ್ಯಾಸಗಳ ಮೇಲೆ ಪ್ರಜ್ಞೆ/ಬುದ್ಧಿವಂತಿಕೆ ಸ್ಥಾಪಿಸಲ್ಪಟ್ಟಿದೆ. ಇಂತಹ ಸೆರೆಬ್ರಲ್ ಕಾರ್ಟೆಕ್ಸ್ ವ್ಯವಸ್ಥೆ ಇಲ್ಲದಿರುವ ಜೀವಿಗಳಲ್ಲಿ ಇಂದ್ರಿಯಗಳಿಗೆ ಸಂಬಂಧಿಸಿದ ಸಂವೇದನಾವಾಹಕ ಪ್ರಜ್ಞೆ ಹೇಗೆ ಉದ್ಭವವಾಗುತ್ತದೋ ಅಥವಾ ಇಲ್ಲವೋ ಎಂದು ಇನ್ನೂ
ತಿಳಿದಿಲ್ಲ. ಆದರೆ ಈ ಅಧ್ಯಯನದಲ್ಲಿ ಕಾಗೆಗಳು ದೃಷ್ಟಿಗೋಚರವಾದ ಒಂದು ಉದ್ದೀಪನೆ ತಮ್ಮ ಮುಂದೆ ಇರುವುದು ಅಥವಾ ಇಲ್ಲದಿರುವುದರ ಆಧಾರದ ಮೇಲೆ ಕೊಡುವ ಬೇರೆ ಬೇರೆ ನಿಗದಿತ ಪ್ರತಿಕ್ರಿಯೆಗಳ ಆಧಾರದ ಮೇಲೆ ಈ ಹಕ್ಕಿಗಳಲ್ಲಿ ಪ್ರಜ್ಞೆ ಇರುವುದಕ್ಕೆ ಪ್ರಾಯೋಗಿಕ ಗುರುತು ಸಿಕ್ಕಂತಾಗಿದೆ. ಅಧ್ಯಯನದ ಫಲಿತಾಂಶದಿಂದ, ನರಕೋಶಗಳ ತಳಹದಿಯ ಮೇಲೆ ಇಂದ್ರಿಯಗಳಿಗೆ ಸಂಬಂಧಿಸಿದ ಸಂವೇದನಾವಾಹಕ ಪ್ರಜ್ಞೆ ಸಸ್ತನಿಗಳಿಗಿಂತಲೂ ಮುಂಚೆಯೇ, ಅಥವಾ ಸ್ವತಂತ್ರವಾಗಿಯೇ ಪಕ್ಷಿಗಳಲ್ಲಿ ಹುಟ್ಟಿದೆ, ಮತ್ತು ಇದಕ್ಕೆ ಯಾವಾಗಲೂ ಸೆರೆಬ್ರಲ್ ಕಾರ್ಟೆಕ್ಸ್ ಇರಲೇಬೇಕೆಂಬ ಅಗತ್ಯವಿಲ್ಲ ಎಂದು ವಿಜ್ಞಾನಿಗಳು
ತಮ್ಮ ವಾದ ಮಂಡಿಸಿದ್ದಾರೆ.
ಕಾಗೆಗಳು ತಮ್ಮ ಮಿದುಳಿನಲ್ಲಿರುವ ಮಾಹಿತಿ – ವಿಷಯಗಳನ್ನು ಪರಿಶೀಲಿಸಿ ನೋಡಲು ಸಾಧ್ಯವಾ ಎಂದು ಪತ್ತೆಮಾಡಲು ನರ ಜೀವಶಾಸಜ್ಞರಾದ ಆಂಡ್ರೆಯಾಸ್ ನೈಡರ್ ಒಂದು ಪ್ರಯೋಗ ನಡೆಸಿದರು. ಒಂದು ಮಂದವಾದ ಲೈಟ್ ಕಾಗೆಗಳು ನೋಡಿದವೋ ಇಲ್ಲವೋ ಎಂಬುದರ ಆಧಾರದ ಮೇಲೆ ನೀಲಿ ಅಥವಾ ಕೆಂಪು ಫಲಕವನ್ನು ಕುಟುಕುವಂತೆ ಆಝೀ ಮತ್ತು ಗ್ಲೆನ್ ಎಂಬ ಹೆಸರಿಟ್ಟ ಎರಡು ಕಾಗೆಗಳಿಗೆ ಆಂಡ್ರೆಯಾಸ್ ತರಬೇತಿ ನೀಡಿದರು. ಲೈಟ್ ಕಂಡರೆ ಕೆಂಪು, ಕಾಣದಿದ್ದರೆ ನೀಲಿ ಬಣ್ಣದ ಫಲಕವನ್ನು ಕುಟುಕಲು ಕಾಗೆಗಳು ತಮ್ಮ ಮಿದುಳಿನಗುವ ಬದಲಾವಣೆಗಳನ್ನು ಗ್ರಹಿಸಬೇಕು, ಮತ್ತು ನೈಡರ್- ಹೀಗೆ ಉತ್ತರ ಕೊಡಲು ಅವುಗಳಿಗೆ ಒಂದು ಅಥವಾ ಎರಡು ಸೆಕೆಂಡುಗಳ ಅವಧಿಯಿತ್ತು.
ಹೀಗೆ ಕಾಗೆಗಳು ತಮಗೆ ಕೊಟ್ಟ ಕೆಲಸವನ್ನು ಬಗೆಹರಿಸುತ್ತಿದ್ದಾಗ ವಿಜ್ಞಾನಿಗಳು ಅವುಗಳ ಸಾವಿರಾರು ನರಕೋಶಗಳಲ್ಲಿ ಆಗುತ್ತಿದ್ದ ಚಟುವಟಿಕೆಗಳನ್ನು ದಾಖಲೆ ಮಾಡಿಕೊಳ್ಳುತ್ತಿದ್ದರು. (ಕೆಲವು ಮಂಗಗಳ ಪ್ರಭೇದಗಳಲ್ಲಿರುವಂತೆಯೇ ಕಾಗೆಗಳ ಮಿದುಳಿನಲ್ಲಿ ೧.೫ ಬಿಲಿಯನ್ ನರಕೋಶಗಳಿವೆ!) ಲೈಟ್ ಮಂದವಾಗಿ ಮಿನುಗಿದಾಗ, ಲೈಟ್ ಬೆಳಗಿದ ಕ್ಷಣ ಮತ್ತು ಕಾಗೆಗಳು ಕೆಂಪು ಬಣ್ಣದ
ಫಲಕವನ್ನು ಕುಟುಕುವ ಕ್ಷಣಗಳ ಮಧ್ಯ ಅವುಗಳ ಸಂವೇದನಾವಾಹಕ ನರಕೋಶಗಳು ಸಕ್ರಿಯವಾಗಿದ್ದವು. ಅವುಗಳ ದೃಷ್ಟಿಗೆ ಬರದಂತೆ ತೀರಾ ಮಂದವಾಗಿ ಲೈಟ್ ಮಿನುಗಿ ಮರೆಯಾದಾಗ, ಲೈಟ್ ಬೆಳಗದೇ ಇದ್ದದ್ದಕ್ಕೆ ತಾವು ಏನೂ ನೋಡಿಲ್ಲವೆಂದು ಅವು ನೀಲಿ ಫಲಕವನ್ನು ಕುಟುಕಿದವು. ಈ ಕ್ಷಣಗಳ ನಡುವಿನ ಅಂತರದಲ್ಲಿ ಆಝೀ ಮತ್ತು ಗ್ಲೆನ್ ನರಕೋಶಗಳು ಮೌನವಾಗಿದ್ದವು.
ಹೀಗೆ ನರಕೋಶಗಳ ಸ್ಪಂದನೆಯ ಆಧಾರದ ಮೇಲೆ ಕಾಗೆಗಳು ಮತ್ತು ಬಹುಷಃ ಇತರ ವಿಕಸನೀಯವಾಗಿ ಮುಂದುವರಿದ ಪಕ್ಷಿಗಳಲ್ಲೂ ಇಂತಹ ಪ್ರಜ್ಞೆ ಇದೆ ಎಂದು ಸಾಬೀತು ಮಾಡಬಹುದು. ಕಾಗೆಗಳನ್ನು ಬಿಟ್ಟರೆ ಸದ್ಯಕ್ಕೆ ನಮಗೆ ತಿಳಿದಮಟ್ಟಿಗೆ ಈ ರೀತಿಯ ಅರಿವು ಇರುವುದು ಮನುಷ್ಯರಲ್ಲಿ ಮತ್ತು ಮಕಾಕ್ ಮಂಗಗಳಲ್ಲಿ, ಎನ್ನುತ್ತಾರೆ ನೈಡರ್. ನಮ್ಮ ಮಿದುಳಲ್ಲಿರುವ ಮಾಹಿತಿಯನ್ನೇ ನಾವು ಅರಿತು, ಪರಿಶೀಲಿಸಿ, ನಮ್ಮ ಮಿದುಳನ್ನೇ ನಾವು ಧ್ಯಾನಿಸುವ ಶಕ್ತಿ ಮನುಷ್ಯರಲ್ಲದ ಪ್ರಾಣಿಗಳಲ್ಲೂ ಇದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿರುವ, ಸಾಬೀತಾಗುತ್ತಿರುವ ಸೃಷ್ಟಿಯ ಸತ್ಯ.
ಮನುಷ್ಯರಾದ ನಾವು ಅನ್ವೇಷಣೆಗಳನ್ನು ಮಾಡುವುದು, ಸವಾಲುಗಳನ್ನು ಬಗೆಹರಿಸುವುದು ಈ ಅರಿವಿನಿಂದಲೇ. ನನಗೇನು
ತಿಳಿದಿದೆ? ನಾನು ಇದೇ ವಿಷಯವನ್ನು ಮತ್ತಷ್ಟು ದಿಕ್ಕುಗಳಿಂದ ನೋಡಿದರೆ ಹೇಗೆ ಕಾಣಬಹುದು? – ಹೀಗೆ ಬುದ್ಧಿವಂತಿಕೆಯನ್ನು ಬಳಸಲು ಕಾರಣ ಈ ಅರಿವು. ನಮಗೇನು ತಿಳಿದಿದೆ ಎಂದು ತಿಳಿಯುವುದೂ ಒಂದು ರೀತಿಯ ಪ್ರಜ್ಞೆಯೇ. ಆದರೆ ಈಗ ಈ ಶಕ್ತಿ ಬೇರೆ ಪ್ರಾಣಿ-ಪಕ್ಷಿಗಳಲ್ಲಿರುವುದು ತಿಳಿದುಬರುತ್ತಿರುವುದು ನಾವು ಭೂಮಿಯ ಮೇಲಿನ ಇತರ ಪ್ರಾಣಿಗಳನ್ನು ಯಾವ ರೀತಿ ನಡೆಸಿ ಕೊಳ್ಳುತ್ತಿದ್ದೇವೆ ಎಂಬುದರ ಬಗ್ಗೆ ಹಲವು ಪ್ರಶ್ನೆಗಳು ಮೂಡುವಂತೆ ಮಾಡುತ್ತದೆ.
ಭೂಮಿ ಕೇವಲ ನಮ್ಮ ಅಗತ್ಯಗಳನ್ನು ಪೂರೈಸುವುದಕ್ಕೆ ಇರುವ ಸಂಪನ್ಮೂಲಗಳ ಹೊತ್ತ ಆಸ್ತಿಯಲ್ಲ. ಬೇರೆ ಪ್ರಾಣಿಗಳಿಗೂ ಇದೊಂದೇ ಮನೆಯಾದ ಭೂಮಿಯ ಮೇಲೆ ಸ್ವತಂತ್ರವಾಗಿ, ಸ್ವಚ್ಛಂದವಾಗಿ ಜೀವಿಸಲು ನಮ್ಮಷ್ಟೇ ಹಕ್ಕಿದೆ. ಇಂತಹ ಅಧ್ಯಯನ ಗಳು ವನ್ಯಜೀವಿಗಳ ಬಗೆಗಿನ ನಮ್ಮ ಮೌಢ್ಯಗಳನ್ನು ಅಳಿಸಿಹಾಕಿ ನಮ್ಮ ಜ್ಞಾನ ಹೆಚ್ಚಿಸಲಿ. ಮುಂದಿನ ಸಲ ಯಾವ್ಯಾವುದೋ
ಅರ್ಧ ವಿಡಿಯೋ ಕ್ಲಿಪ್ ಅಥವಾ ಫೋಟೋಗಳನ್ನು ಫಾರ್ವರ್ಡ್ ಮಾಡುವ ಮುಂಚೆ, ಅಥವಾ ಸರಿಯಾಗಿ ಅಧ್ಯಯನ ನಡೆಸದೇ ಬ್ರೇಕಿಂಗ್ ನ್ಯೂಸ್ ಹೆಸರಲ್ಲಿ ಅರ್ಧ ಬೆಂದ ಮಾಹಿತಿ ಕೊಡುವ ಮೂಲಗಳನ್ನು ನಂಬುವ ಮುಂಚೆ ಸ್ವಲ್ಪ ಯೋಚಿಸೋಣ.
ಇಂತಹ ಅನೇಕ ಅಧ್ಯಯನಗಳು ಈಗ ಓಪನ್ ಸೋರ್ಸ್ ಆಗಿವೆ, ಅಂದರೆ ಸಾರ್ವಜನಿಕರಿಗೆ ಉಚಿತವಾಗಿ ಓದುವುದಕ್ಕೆ ಸಿಗುತ್ತವೆ. ನಮಗೆ ಬೇಕಿರುವುದು ತಾಳ್ಮೆ ಅಷ್ಟೇ. ತಕ್ಷಣ ಏನನ್ನೋ ವಾಟ್ಸ್ಯಾಪ್ ಮಾಡಿಬಿಡಬೇಕು, ಫೇಸ್ಬುಕ್ ಸ್ಟೇಟಸ್ ಹಾಕಿ ಬಿಡಬೇಕು, ಟ್ವೀಟ್ ಮಾಡಿ ಬಿಡಬೇಕು ಎಂಬ ಹುಚ್ಚು ಆತುರವಿಲ್ಲದೇ, ನಿಜವಾದ ಅಚ್ಚರಿ ಮತ್ತು ಕುತೂಹಲದಿಂದ ಕಲಿಯುವ ಸಂಯಮ. ಇದು ನಮ್ಮ ಜವಾಬ್ದಾರಿ ಕೂಡಾ.