Friday, 22nd November 2024

ಸ್ವಾಗತಾರ್ಹ ತೀರ್ಮಾನ

ಪರೀಕ್ಷೆ ಎಂಬುದು ವಿದ್ಯಾರ್ಥಿಗಳು ಕಂಠಪಾಠ ಮಾಡುವ, ಕಷ್ಟಪಟ್ಟು ನೆನಪಿಟ್ಟುಕೊಳ್ಳುವ ರೀತಿಯಲ್ಲಿ ಇರಬಾರದು. ಅದೇನಿದ್ದರೂ ಅವರ ನೈಜಸಾಮರ್ಥ್ಯ, ತಿಳಿವಳಿಕೆಯ ಮಟ್ಟ ಮತ್ತು ಸಾಧನೆಯ ಗಟ್ಟಿತನವನ್ನು ಒರೆಹಚ್ಚಿ ಪರಿಶೀಲಿಸುವಂತೆ ಇರಬೇಕು ಎಂಬ ಪ್ರತಿಪಾದನೆ ಬಹಳ ವರ್ಷಗಳಿಂದ ಕೇಳಿಬರುತ್ತಿತ್ತು. ಆ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ವರ್ಷಕ್ಕೆ ೨ ಬಾರಿ ಬೋರ್ಡ್ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು ಸ್ವಾಗತಾರ್ಹ. ವಿದ್ಯಾರ್ಥಿಗಳು ಎಷ್ಟು ತಿಂಗಳು ತರಬೇತಿ ಪಡೆದಿದ್ದಾರೆ, ಕಲಿತಿದ್ದರಲ್ಲಿ ಎಷ್ಟನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂಬುದರ ಬದಲಾಗಿ, ಅವರು ವಿಷಯಗಳನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಹಾಗೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಎಷ್ಟು ಸಾಧನೆ ಮಾಡಿದ್ದಾರೆ ಎಂಬುದರ ಮೌಲ್ಯಮಾಪನಕ್ಕೆ ಈ ಪರೀಕ್ಷೆಗಳು ನೆರವಾಗಲಿವೆ. ವರ್ಷದಲ್ಲಿ ೨ ಬಾರಿ ಪರೀಕ್ಷೆ ನಡೆಸುವುದರಿಂದ
ವಿದ್ಯಾರ್ಥಿಗಳು ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಳ್ಳಲು ಅವಕಾಶ ಸಿಗುತ್ತದೆ. ಅಲ್ಲದೆ, ತಾವು ಉತ್ತಮವಾಗಿ ಓದಿಕೊಂಡಿರುವ ವಿಷಯದ ಪರೀಕ್ಷೆ ತೆಗೆದುಕೊಳ್ಳಲು ಅವರಿಗೆ ಸಾಧ್ಯವಾಗಲಿದೆ. ಎರಡು ಪರೀಕ್ಷೆಗಳಲ್ಲಿ ಪಡೆದ ಅಧಿಕ ಅಂಕಗಳನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡಿರುವುದರಿಂದ ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಯು ಎರಡನೇ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ
ಪಡೆಯಲು ಸಹಜವಾಗಿಯೇ ಹೆಚ್ಚಿನ ಶ್ರಮ ಹಾಕುತ್ತಾನೆ. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯ ದೂರವಾಗುತ್ತದೆ. ಎನ್‌ಇಪಿ ಅನ್ವಯ ರೂಪಿಸಿರುವ ಈ ಪಠ್ಯಕ್ರಮವನ್ನು ಆಧರಿಸಿಯೇ ಮುಂದಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲು ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷಾ ಮಂಡಳಿಗಳು ಅಗತ್ಯಕ್ಕೆ ತಕ್ಕಂತೆ ಪರೀಕ್ಷೆಗಳನ್ನು ನಡೆಸಬಲ್ಲ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಮುಂಬರುವ  ದಿನಗಳಲ್ಲಿ ಪರೀಕ್ಷಾ ಕ್ರಮ, ಬೋಧನಾ ಕ್ರಮದಲ್ಲಿ ಇನ್ನಷ್ಟು ಸುಧಾರಣೆ ತಂದು, ವಿದ್ಯಾರ್ಥಿಗಳ ಬೇಡಿಕೆ ಆಧರಿಸಿ ಪರೀಕ್ಷೆ ನಡೆಸುವ ವೈಖರಿಗೆ ಬದಲಾವಣೆ ತರಲೂ ಕೇಂದ್ರ ಶಿಕ್ಷಣ ಸಚಿವಾಲಯ ಯೋಚಿಸಿದೆ. ಅದಕ್ಕೆ ಪೂರಕವಾಗಿ ಬೋಧಕರು, ಪ್ರಶ್ನೆಪತ್ರಿಕೆ ರೂಪಿಸುವವರು, ಮೌಲ್ಯಮಾಪಕರು ಕೂಡ ಕಾರ್ಯಪ್ರವೃತ್ತರಾಗಬೇಕು.