ಅವಲೋಕನ
ಬೇಲೂರು ರಾಮಮೂರ್ತಿ
ಯಾವುದೇ ಒಂದು ಮಠದಲ್ಲಿ ಗುರುಗಳು ಎಷ್ಟು ಮುಖ್ಯರೋ ಅವರ ಶಿಷ್ಯರೂ ಅಷ್ಟೇ ಮುಖ್ಯ. ತಮ್ಮ ನಂತರ ಯಾರು ಎನ್ನುವು ದನ್ನು ಗುರುಗಳೇ ನಿರ್ಧರಿಸಿ ಶಿಷ್ಯ ಸ್ವೀಕಾರ ಮಾಡಿ ತಮ್ಮ ನಂತರ ಅವರು ಪೀಠ ನಡೆಸಿಕೊಂಡು ಹೋಗುವ ಕ್ರಮ ಅನುಸರಿಸು ತ್ತಾರೆ.
ಅನೇಕ ಸಂದರ್ಭಗಳಲ್ಲಿ ಗುರುಗಳ ಅಚಾನಕವಾಗಿ ಸ್ವರ್ಗಾರೋಹಣವಾದಾಗ ಮಠದಲ್ಲಿ ಇರುವ ಕ್ರಮ ಅನುಸರಿಸಿ ಗುರುಗಳನ್ನು ಆಯ್ಕೆ ಮಾಡಲಾಗುತ್ತದೆ. ಹಾಗೆ ದಿಢೀರ್ ಗುರುಗಳಾದವರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಶೃಂಗೇರಿ ಶಂಕರ ಮಠದಲ್ಲಿ ಶಿಷ್ಯ ರನ್ನು ತಯಾರು ಮಾಡಿ ಉತ್ತರಾಧಿಕಾರಿ ಎಂದು ಘೋಷಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ಕೊಡುವ ಪರಿಕ್ರಮ ಇದೆ. ಇದು ನಡೆದು ಬಂದಿರುವುದು ಸ್ವತಃ ಆದಿ ಶಂಕರಾಚಾರ್ಯರಿಂದ. ಅವರು ತಮ್ಮ ಜೀವಿತಾವಧಿಯಲ್ಲಿ ನಾಲ್ಕು ಶಿಷ್ಯರನ್ನು ವಿವಿಧ
ಸಂದರ್ಭಗಳಲ್ಲಿ ಸ್ವೀಕರಿಸಿ ತಮ್ಮ ನಂತರ ಅವರು ಚತುರಾಮ್ನಾಯ ಪೀಠಗಳನ್ನು ನಡೆಸಿಕೊಂಡು ಹೋಗುವಂತೆ ಮಾಡಿದರು.
ನಾಲ್ಕು ಜನ ಶಿಷ್ಯರಿಗೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಭಾಗಗಳಲ್ಲಿ ಮಠಗಳನ್ನು ಸ್ಥಾಪನೆ ಮಾಡಿ ಅದನ್ನು ನಡೆಸಿಕೊಂಡು ಹೋಗುವಂತೆ ಆದೇಶಿಸಿದರು. ಆದಿ ಶಂಕರಾಚಾರ್ಯರಿಗೆ ಶಿಷ್ಯರಾಗಿ ಬಂದ ನಾಲ್ಕು ಮಹಾನ್ ವ್ಯಕ್ತಿಗಳ ಬಗೆಗೆ ಸೂಕ್ಷ್ಮ ಅವಲೋಕನ ಇಲ್ಲಿದೆ.
ಮೊದಲನೆಯ ಶಿಷ್ಯರು – ಸನಂದನಾಚಾರ್ಯರು (ಪದ್ಮಪಾದಾಚಾರ್ಯರು) ಪಶ್ಚಿಮದಲ್ಲಿನ ಕಾಲಿಕಾ ಪೀಠ ದ್ವಾರಕಾ ಕ್ಷೇತ್ರ: ಇವರ ಪೂರ್ವಾಶ್ರಮದ ಹೆಸರು ವಿಷ್ಣುಶರ್ಮ. ಮಾಧವಾಚಾರ್ಯ – ಲಕ್ಷಮ್ಮ ದಂಪತಿಗಳ ಪುತ್ರ. ಚೋಳದೇಶದವರಾದ ಇವರು ಗುರುಗಳನ್ನು ಅರಸಿ ಪಯಣ ಮಾಡಿ ಕಾಶಿ ಕ್ಷೇತ್ರದಲ್ಲಿ ಆದಿ ಶಂಕರಾಚಾರ್ಯರ ಕಣ್ಣಿಗೆ ಬಿದ್ದಾಗ ಸನಂದನರು ಶಂಕರರ ಪಾದಕ್ಕೆ ವಂದಿಸಿ ನಾನು ಗುರುಗಳನ್ನು ಅರಸಿ ಹೊರಟಿದ್ದೇನೆ ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಎಂದು ಬೇಡಿದರು.
ಪ್ರಥಮವಾಗಿ ಶಂಕರಾಚಾರ್ಯರು ಸನಂದನರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋದರು.
ಸನಂದನರು ಗುರುಗಳು ಹೇಳಿಕೊಟ್ಟಿದ್ದನ್ನು ಅತಿಶೀಘ್ರವಾಗಿ ಕಲಿಯುತ್ತಿದ್ದರು. ಇದರಿಂದಾಗಿ ಅವರನ್ನು ಏಕಸಂಧಿಗ್ರಾಹಿ ಎನ್ನುವ ಹೆಸರು ಬಂದಿತು. ಶಂಕರಾಚಾರ್ಯರಿಂದ ಬ್ರಹ್ಮಸೂತ್ರಗಳು, ಉಪನಿಷತ್ತು ಮತ್ತು ಭಗವಗದ್ದೀತೆ ಪಾಠ ಮಾಡಿಸಿ ಕೊಂಡರು.
ಶಿಷ್ಯನ ಗುರುಭಕ್ತಿ ಪರೀಕ್ಷಿಸುವ ಸಮಯ ಬಂದಾಗ ಆಚೆ ದಡದಲ್ಲಿದ್ದ ಶಿಷ್ಯನನ್ನು ಬೇಗ ಬಾ ಎಂದು ಗುರುಗಳು ಕರೆದಾಗ ಸನಂದನರು ಹಿಂದೆ ಮುಂದೆ ನೋಡದೇ ನೀರ ಮೇಲೆ ಕಾಲಿಟ್ಟು ನಡೆದು ಬಂದರು. ಅವರ ಗುರುಭಕ್ತಿಗೆ ಮೆಚ್ಚಿದ ಗಂಗೆ ಸನಂದ ನರು ಕಾಲಿಟ್ಟ ಕಡೆ ಒಂದೊಂದು ಕಮಲವನ್ನಿಟ್ಟಳು. ಇದರಿಂದಾಗಿ ಸನಂದರಿಗೆ ಪದ್ಮಪಾದಾಚಾರ್ಯ ಎನ್ನುವ ಹೆಸರು ಬಂದಿತು. ಶಂಕರಾಚಾರ್ಯರ ಆದೇಶದ ಮೇರೆಗೆ ಶಂಕರಾಚಾರ್ಯರು ಅಂತರ್ಧಾನರಾದ ಮೇಲೆ ದ್ವಾರಕಾ ಕ್ಷೇತ್ರದ ಕಾಲಿಕಾ ಮಠದ ಗುರುಗಳಾದರು
ಎರಡನೆಯ ಶಿಷ್ಯರು ಮಂಡನ ಮಿಶ್ವರು (ಸುರೇಶ್ವರಾಚಾರ್ಯರು) ದಕ್ಷಿಣಾಮ್ನಾಯ ಶೃಂಗೇರಿ ಕ್ಷೇತ್ರ: ಎರಡನೆಯ ಶಿಷ್ಯರು ಸುರೇಶ್ವರಾಚಾರ್ಯರು. ಇವರ ಪೂರ್ವಾಶ್ರಮದ ಹೆಸರು ಮಂಡನಮಿಶ್ರ, ಬ್ರಹ್ಮನ ಅವತಾರ. ಇವರ ತಂದೆ ಹಿಮಿಮಿತ್ರ ಭಟ್ಟಾಚಾರ್ಯ. ಇವರಿಗೆ ಮಂಡನಮಿಶ್ರ ಮತ್ತು ವಿಶ್ವರೂಪ ಎಂಬ ಎರಡು ಹೆಸರು. ಮಂಡನಮಿಶ್ರರು ಕಾಶ್ಮೀರ ದೇಶದ
ಮಾಹೀಶ್ಪತಿ ನಗರವಾಸಿ. ಕುಮಾರ ಸ್ವಾಮಿಯ ಅವತಾರವಾದ ಭಟ್ಟಪಾದ ಮುನಿಗಳಲ್ಲಿ ಕರ್ಮಕಾಂಡದ ಅಧ್ಯಯನ ಸರಸ್ವತಿಯ ಅವತಾರವಾದ ಉಭಯಭಾರತಿ ಇವರ ಪತ್ನಿ, ಈಕೆಗೆ ಸರಸವಾಣಿ ಎನ್ನುವ ಇನ್ನೊಂದು ಹೆಸರೂ ಇತ್ತು. ಈಕೆ ಮಂಡನಮಿಶ್ರರು ಮತ್ತು ಶಂಕರಾಚಾರ್ಯರ ವಾದಕ್ಕೆ ತೀರ್ಪುಗಾರಳಾಗಿದ್ದಳು.
ವಾದದಲ್ಲಿ ಶಂಕರರು ಮಂಡನಮಿಶ್ರರನ್ನು ಜಯಿಸಿದ ಮೇಲೆ ಉಭಯಭಾರತಿ ತನ್ನ ಅವತಾರದ ಕೆಲಸ ಮುಗಿದಿದೆ ಎಂದು ಹೊರಟ ಮೇಲೆ ಶಂಕರಾಚಾರ್ಯರು ತಾವು ಸ್ಥಾಪಿಸುವ ಮಠಗಳಲ್ಲಿ ಅಲ್ಲಿನ ಅಧಿದೇವತೆಯಾಗಿ ನೆಲೆನಿಲ್ಲು ಎಂದು ಕೋರಿದರು. ಹೀಗಾಗಿ ಶಾರದೆ ಎಲ್ಲಾ ಶಂಕರ ಪೀಠಗಳ ಅಧಿದೇವತೆಯಾಗಿದ್ದಾಳೆ. ಶಂಕರಾಚಾರ್ಯರಿಂದ ವಾದದಲ್ಲಿ ಸೋಲು ಉಂಟಾದ ಮೇಲೆ ಮಂಡನಮಿಶ್ರರು ಶಂಕರಾಚಾರ್ಯರ ಶಿಷ್ಯರಾದರು. ಅವರಿಗೆ ಸುರೇಶ್ವರಾಚಾರ್ಯ ಎನ್ನುವ ನಾಮಧೇಯವನ್ನು ಗುರುಗಳು ಅನುಗ್ರಹಿಸಿದರು.
ಮೂರನೆಯ ಶಿಷ್ಯರು – ಹಸ್ತಾಮಲಕಾ ಚಾರ್ಯರು. ಪೂರ್ವಾಮ್ನಾಯ ಗೋವರ್ಧನ ಮಠ, ಪುರಿ ಜಗನ್ನಾಥ ಕ್ಷೇತ್ರ: ಪೂರ್ವಾಶ್ರಮದ ತಂದೆಯ ಹೆಸರು ಪ್ರಭಾಕರ ಭಟ್ಟ. ಇವರು ಹುಟ್ಟಿದಂದಿನಿಂದ ೮ ವರ್ಷ ಆಗುವವರೆಗೂ, ಅಂದರೆ ಆದಿ ಶಂಕರಾಚಾರ್ಯರ ದರ್ಶನ ಆಗುವವರೆಗೂ ಮಾತೇ ಮಾತಾಡಿರಲಿಲ್ಲ. ಮೂಕ ಮಗ ಹುಟ್ಟಿದ ಎಂದು ತಂದೆ ತಾಯಿ ಖಿನ್ನರಾಗಿದ್ದರು. ಊಟ, ತಿಂಡಿ, ಬಾಯಾರಿಕೆ ಆದಾಗಲೂ ಮಾತೇ ಆಡದ ಮಗ ಉಪನಯನ ಮಾಡಿದ ಮೇಲೂ ಸುಧಾರಣೆ
ಆಗಲಿಲ್ಲ. ಪ್ರಭಾಕರ ಭಟ್ಟ ಶಂಕರಾಚಾರ್ಯರ ಪಾದಕ್ಕೆ ವಂದಿಸಿ ತಮ್ಮ ದುಃಖವನ್ನು ತೋಡಿಕೊಂಡಾಗ ಶಂಕರಾಚಾರ್ಯರು ಆ ಮೂಕ ಮಗನನ್ನು ನೋಡಿ ಅಚ್ಚರಿಯಿಂದ “ ಇಂಥಾ ಪರಬ್ರಹ್ಮ ಸ್ವರೂಪಿ ಮಗನನ್ನು ಪಡೆದದ್ದು ನಿನ್ನ ಅದೃಷ್ಟ.
ಇಂಥವನನ್ನು ಮೂಕ ಮಗ ಎನ್ನುವಿರಲ್ಲಾ, ನಾನು ಇವನನ್ನು ಮಾತಾಡಿಸುತ್ತೇನೆ ನೋಡಿ” ಎಂದು ಆ ಹುಡುಗನತ್ತ ನೋಡಿ “ ನೀನು ಯಾರು, ಎಲ್ಲಿಂದ ಬಂದಿರುವೆ, ನಿನ್ನ ಹುಟ್ಟಿದ ಊರು ಯಾವುದು, ನಿನ್ಮ ಹೆಸರೇನು” ಎಂದು ಕೇಳಿದಾಗ ಆ ಹುಡುಗ ಎಲ್ಲರೂ ಅಚ್ಚರಿ ಪಡುವಂತೆ “ಎಲೈ ಶಂಕರ ಗುರುವೇ, ನಾನು ದೇವತೆಯಲ್ಲ, ಮನುಷ್ಯನಲ್ಲ, ಸರ್ಪವಿಶೇಷನಲ್ಲ, ಯಕ್ಷನಲ್ಲ, ಗುಹ್ಯನಲ್ಲ, ಧನುಜನಲ್ಲ, ಕಿನ್ನರನಲ್ಲ, ಕುರುಡನಲ್ಲ, ಕಿವುಡನಲ್ಲ, ಹೆಳವನಲ್ಲ, ಕುಂಟನಲ್ಲ, ನೀನು ಯಾವ ಪರಬ್ರಹ್ಮ ಸ್ಮರೂಪವನ್ನು ಕುರಿತು ಲೋಕಕ್ಕೆ ಬೋಧಿಸುತ್ತಿರುವೆಯೋ ಆ ಪರಬ್ರಹ್ಮವೇ ನಾನು” ಎಂದು ಹೇಳಿದಾಗ ಅಲ್ಲಿ ನೆರೆದಿದ್ದವರೆಲ್ಲ
ಅಚ್ಚರಿಪಟ್ಟರು.
ನಂತರ ಶಂಕರಾಚಾರ್ಯರು ಪ್ರಭಾಕರ ಭಟ್ಟನನ್ನು ಕುರಿತು “ ನಿಮಗೆ ಇನ್ನೂ ಮಕ್ಕಳಾಗುವರು, ಇವನನ್ನು ನಮ್ಮ ಶಿಷ್ಯನನ್ನಾಗಿ
ನೀಡು, ನಾನು ಇವನನ್ನು ನಮ್ಮ ಜೊತೆ ಕರೆದುಕೊಂಡು ಹೋಗುತ್ತೇವೆ ” ಎಂದು ಆ ಹುಡುಗನಿಗೆ ಸನ್ಯಾಸ ಕೊಟ್ಟರು. ಪರಬ್ರಹ್ಮ
ಸ್ವರೂಪವನ್ನು ಅಂಗೈನೆಲ್ಲಿಯಂತೆ ವಿವರಿಸಿದ ಕಾರಣ ಅವರಿಗೆ ಹಸ್ತಾಮಲಕರೆಂಬ ಯೋಗಪಟ್ಟ ಕಟ್ಟಿ ತಮ್ಮ ಶಿಷ್ಯನನ್ನಾಗಿಸಿಕೊಂಡರು.
ಗಿರಿ, ಆನಂದಗಿರಿ (ತೋಟಕಾಚಾರ್ಯರು ) – ಬದರಿಕಾಶ್ರಮದ ಜೋತಿರ್ಮಠ: ಗಿರಿ, ಆನಂದಗಿರಿ ಎಂಬ ಹೆಸರಿನಿಂದ ಶೃಂಗೇರಿಯಲ್ಲಿ ಮಠದ ಕೆಲಸ ಮಾಡಿಕೊಂಡು ಇದ್ದವರು. ಸುರೇಶ್ವರಾಚಾರ್ಯರ ಶಿಷ್ಯರುಗಳ ಪೈಕಿ ಇವರು ಪ್ರಮುಖರು. ಇವರಂಥಾ ಶಿಷ್ಯರು ಇನ್ನಿಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಗುರುಸೇವೆ ಮಾಡಿಕೊಂಡಿದ್ದರು. ಆದರೆ ಗಿರಿಗೆ ಸ್ಪಲ್ಪ ಮಂದಮತಿ.
ಕೆಲವು ವಿಚಾರಗಳನ್ನು ಎರಡೆರಡು ಸಾರಿ ಹೇಳಬೇಕಾಗಿತ್ತು. ಕೆಲವು ವೇಳೆ ಗಿರಿಯನ್ನು ಇತರ ಶಿಷ್ಯರು ಆಡಿಕೊಳ್ಳುವುದೂ ಇತ್ತು.
ಶಂಕರಾಚಾರ್ಯರಿಗೆ ಬಲಗೈಯಂತೆ ಅವರ ದಿನನಿತ್ಯದ ಎಲ್ಲಾ ಕೆಲಸಗಳಲ್ಲೂ ಗಿರಿ ಸಹಕರಿಸುತ್ತಿದ್ದರು.
ಹೀಗಾಗಿ ಶಂಕರಾಚಾರ್ಯರಿಗೆ ಗಿರಿ ಬಗೆಗೆ ವಿಶೇಷ ಅಭಿಮಾನ ಇತ್ತು. ಶಂಕರಾಚಾರ್ಯರು ಇತರ ಶಿಷ್ಯರಿಗೆ ಪಾಠ ಹೇಳುವ
ಸಮಯದಲ್ಲಿ ಗಿರಿಯೂ ದೂರದಲ್ಲಿ ಕೂತು ಪಾಠ ಕೇಳಿಸಿಕೊಳ್ಳುತ್ತಿದ್ದರು. ಗಿರಿ ಗುರುಗಳ ಕಾವಿ ವಸಗಳನ್ನು ಶುದ್ಧಿಗೊಳಿಸಲು ಕೆರೆಗೆ ಹೋದ ಸಂದರ್ಭದಲ್ಲಿ ಸನಂದನರು ಬಂದು ಪಾಠಕ್ಕೆ ನಿವೇದನೆ ಮಾಡಿಕೊಂಡಾಗ ಶಂಕರಾಚಾರ್ಯರು “ಗಿರಿಯೂ ಬರಲಿ” ಎಂದರು.
ಆಗ ಸನಂದನರು ಮತ್ತು ಇತರ ಶಿಷ್ಯರೂ “ ಗಿರಿ ಒಬ್ಬ ಮೂಢ, ಇಷ್ಟು ದಿವಸ ನೀವು ಹೇಳಿಕೊಟ್ಟ ಪಾಠ ಮನನ ಮಾಡಿದವನಲ್ಲ, ನಿಮ್ಮ ಯಾವುದೇ ಪ್ರೆಶ್ನೆಗಳಿಗೂ ಉತ್ತರ ಕೊಟ್ಟವನಲ್ಲ. ಆ ಮೂಢನೊಂದಿಗೆ ನಮ್ಮನ್ನು ಸೇರಿಸಬೇಡಿ, ನಮಗೆ ಪ್ರತ್ಯೇಕ ಪಾಠ ಮಾಡಿ” ಎಂದು ನಿವೇದಿಸಿಕೊಂಡರು. ಶಿಷ್ಯರ ದುರಭಿಮಾನವನ್ನು ಹೋಗಲಾಡಿಸಬೇಕೆಂದು ಶಂಕರಾಚಾರ್ಯರು “ ಗಿರಿ ಸರ್ವಜ್ಞನಾಗಲಿ ” ಎಂದು ಅಂತರಂಗದಲ್ಲಿ ಸಂಕಲ್ಪಿಸಿದರು.
ಬಟ್ಟೆಗಳನ್ನು ಶುದ್ಧಿಗೊಳಿಸುತ್ತಿದ್ದ ಗಿರಿಗೆ ಕಣ್ಣೆದುರಿಗೆ ದಿವ್ಯಜ್ಯೋತಿಯು ಬೆಳಗಿದಂತಾಗಿ ಮೈ ನಡುಗಿತು. ಬ್ರಹ್ಮಚೈತನ್ಯ ಹೊಂದಿದ ಅನುಭವ ಅವರಿಗಾಯಿತು. ಕೂಡಲೇ ಗುರುಸಾನಿಧ್ಯವನ್ನು ಸೇರಿ ಗುರುಗಳ ಮುಂದೆ ಕೈ ಜೋಡಿಸಿ ನಿಂತು “ ಸಮಸ್ತ ಶಾಸ್ತ್ರಗಳನ್ನು ಕರತಲಾಮಲಕವಾಗಿ ಬಲ್ಲ ಉಪನಿಷದರ್ಥಗಳಿಂದ ತಿಳಿಯಲ್ಪಡುವ ಚರಿತ್ರೆಯುಳ್ಳ ಎಲೈ ಶಂಕರಗುರುವೇ
ನಿನ್ನ ನಿರ್ಮಲವಾದ ಪಾದಕಮಲಗಳೇ ನನಗೆ ಗತಿಯು” ಎಂದು ತೋಟಕವೃತ್ತಗಳಿಂದ ಐದು ಶ್ಲೋಕಗಳನ್ನು ತಕ್ಷಣದಲ್ಲಿಯೇ ಪಠಿಸಿದ್ದರಿಂದ ಅವರಿಗೆ ತೋಟಕಾಚಾರ್ಯರು ಎಂದು ನಾಮಧೇಯ ಮಾಡಿ ತಮ್ಮ ನಾಲ್ಕನೆಯ ಶಿಷ್ಯನನ್ನಾಗಿಸಿಕೊಂಡರು.
ಶೃಂಗೇರಿ ಪರಂಪರೆ ಸುರೇಶ್ವರಾಚಾರ್ಯರಿಂದ ಪ್ರಾರಂಭವಾಗಿ ಇಂದಿಗೆ ಮೂವತ್ತಾರನೆಯ ಗುರುಗಳಾಗಿ ಭಾರತೀ ತೀರ್ಥ ಮಹಾಸ್ವಾಮಿಗಳು ಪೀಠಾಧಿಪತಿಗಳಾಗಿದ್ದಾರೆ. ಅವರ ಶಿಷ್ಯರಾಗಿ 37ನೇ ಪೀಠಾಧಿಪತಿಗಳಾಗಿ ವಿಧುಶೇಖರ ಭಾರತೀ ಸ್ವಾಮಿಗಳು ಕ್ಷೇತ್ರದಲ್ಲಿ ನೆಲೆಸಿದ್ದಾರೆ. ಶೃಂಗೇರಿ ಪರಂಪರೆಯಲ್ಲಿನ 37 ಗುರುಗಳ ವಿವರಗಳನ್ನು ಶ್ರೀ ಶಂಕರಚರಿತಾಮೃತಮ್ ಕೃತಿಯಲ್ಲಿ ಕಾಣಬಹುದು.