ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಡಬ್ಬಿಂಗ್ ಬೇಕು ಬೇಕು ಅಂತ ಪರದಾಡುತ್ತಿದ್ದವರಿಗೆ ಈಗ ಡಬ್ಬಿಂಗ್ ಬಂದಿದೆ ಅಂತ ಸಂತೋಷ ಪಡೋಕೂ ಆಗ್ತಾ ಇಲ್ಲ ಅನ್ನೋದು ಕನ್ನಡ ಸಿನಿಮಾಗೆ ಸಂಬಂಧಪಟ್ಟ ಹೊಸ ವಿಷಯ.
ಡಬ್ಬಿಂಗ್ ಬಂದ್ರೆ ಕನ್ನಡ ಭಾಷೆ ಉದ್ಧಾರ ಆಗುತ್ತೆ, ಚಿತ್ರರಂಗ ಉದ್ಧಾರ ಆಗುತ್ತೆ ಅಂತೆ ದೊಡ್ಡ ದೊಡ್ಡ ಮಾತಾಡುತ್ತಿದ್ದ ಮಂದಿಗೆ ಈಗ ಕೈಯಿಗೆ ಬಂದಿದ್ದ ಕಣ್ಣಿಗೆ ಬರ್ತಾ ಇಲ್ಲ ಅನ್ನೋ ಬೇಸರ. ಅಂದ್ರೆ, ಡಬ್ಬಿಂಗ್ ನಿಯಮ ಏನೋ ಬಂದಿದೆ. ಓಟಿಟಿಗಳಲ್ಲಿ ಕೆಲವು ಕೆಟ್ಟ ಕ್ವಾಲಿಟಿ ಇರೋ ಡಬ್ಬಿಂಗ್ ಸಿನಿಮಾಗಳು ಕಾಣುತ್ತಿವೆ. ಆದ್ರೆ ಅವುಗಳನ್ನು ಥಿಯೇಟರ್‌ನಲ್ಲಿ ನೋಡಿ ಕಣ್ತುಂಬಿಕೊಳ್ಳುವ ಭಾಗ್ಯ ಮಾತ್ರ ಡಬ್ಬಿಂಗ್ ಪ್ರಿಯರಿಗೆ ಇನ್ನೂ ಸಂಪೂರ್ಣವಾಗಿ ಬಂದಿಲ್ಲ.
ಯಾಕಂದ್ರೆ, ನಿರ್ಮಾಪಕರೇ ಡಬ್ಬಿಂಗ್ ಚಿತ್ರಗಳನ್ನು ಬಿಡುಗಡೆ ಮಾಡಲು ಆಸಕ್ತಿ ತೋರಿಸುತ್ತಿಲ್ಲ. ಹಾಗಾಗಿ, ಡಬ್ಬಿಂಗ್ ಬಂದರೂ ಕನ್ನಡದಲ್ಲಿ ಯಾಕೆ ಬಿಡುಗಡೆ ಮಾಡ್ತಾ ಇಲ್ಲ ನೀವು ಅನ್ನೋ ಆರ್ತನಾದ ಮಾತ್ರ ಇನ್ನೂ ಕೇಳಿಸ್ತಾನೇ ಇದೆ.
ಮೊನ್ನೆ ಪುಷ್ಪ, ಈಗ ಈಗ ಆರ್‌ಆರ್. ಕರ್ನಾಟಕದಲ್ಲಿ ಮೂಲ ಭಾಷೆಯ ಚಿತ್ರ ಸಾಕಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ಆದ್ರೆ ಕನ್ನಡ ವರ್ಶನ್ ಮಾತ್ರ ಅಂದು ಇಂದು, ಒಮ್ಮೊಮ್ಮೆ ಅದೂ ಇಲ್ಲ. ಅದಕ್ಕೆ ಕಾರಣ ಪ್ರೇಕ್ಷಕರ ಕೊರತೆ. ಡಬ್ಬಿಂಗ್ ಬೇಕು ಎಂದು ಕೂಗಾಡಿದ ಕೆಲವು ಹೋರಾಟಗಾರರನ್ನು ಬಿಟ್ಟರೆ ಸಾಮಾನ್ಯ ಪ್ರೇಕ್ಷಕರು ಅಷ್ಟಾಗಿ ಕನ್ನಡ ವರ್ಷನ್ ನೋಡಲು ಆಸಕ್ತಿ ತೋರಿಸುತ್ತಿಲ್ಲ.
ಒಂದ ಜನ ಡಬ್ಬಿಂಗ್ ಪರ ಹೋರಾಟಗಾರರು ಸೇರ್ಕಂಡು ಒಂದ್ ಶೋ ಹೌಸ್ ಫುಲ್ ಮಾಡಿಬಿಟ್ರೆ ಸಾಕಾ ಎನ್ನುತ್ತಿದ್ದಾರೆ ನಿರ್ಮಾಪಕರು. ಅಲ್ಲದೆ ಕಲೆಕ್ಷನ್ ಆಗುತ್ತೆ ಅಂದ್ರೆ ಅವರ್ಯಾಕೆ ಕನ್ನಡ ವರ್ಷನ್ ಬಿಡುಗಡೆ ಮಾಡಲ್ಲ? ಅದರಿಂದ ಅವರಿಗೇನು ನಷ್ಟ, ಇನ್ನೂ ಲಾಭವೇ ತಾನೇ, ಅನ್ನೋದು ಕೂಡಾ ಗಮನಿಸಬೇಕಾದ ಸತ್ಯ.
ಲೂಸ್ ಟಾಕ್
ರಾಜಮೌಳಿ (ಕಾಲ್ಪನಿಕ ಸಂದರ್ಶನ)
? ಏನ್ ಸಾರ್, ಆರ್ ಆರ್ ಆರ್ ಹವಾ ಜೋರಿದೆಯಾ?
-ಏನ್ ಜೋರೋ ಏನೋ, ಇ ದಿನ ಆರ್‌ಆರ್‌ಆರ್ ಬ್ಯಾನರ್ ಕಟ್ತಾ ಇದ್ದಾರು, ಈಗ ಬ್ಯಾನ್ ಆರ್‌ಆರ್‌ಆರ್ ಅಂತಿದ್ದಾರೆ
? ಏನ್ ಮಾಡೋಕಾಗಲ್ಲ, ಇದು ಬ್ಯಾನ್-ಗಳೂರು. ಸರಿ, ನಿಮ್ ಸಿನಿಮಾಗಳಲ್ಲಿ ನಟ ನಟಿಯರ ಆಕ್ಟಿಂಗಿಗಿಂತ ಗ್ರಾಫಿಕ್ಸೇ ಜಾಸ್ತಿ ಇರುತ್ತೆ ಅಂತ ಆಪಾದನೆ ಇದ್ಯ?
-ಅದು ನಾನ್ ಸಿನಿಮಾ ಮಾಡೋ ಸ್ಟೈಲು. ನೋಡ್ತಾ ಇರಿ, ಮುಂದಿನ ಸಿನಿಮಾದಲ್ಲಿ ಆಕ್ಟರ್‌ಸೇ ಇರಲ್ಲ, ಶೂಟಿಂಗೂ ಇರಲ್ಲ, ಗ್ರಾಫಿಕ್ಸ್ ಸ್ಟುಡಿಯೋದಲ್ಲಿ ಕೂತ್ಕಂಡೇ ಸಿನಿಮಾ ಮುಗಿಸಿಬಿಡ್ತೀನಿ.
? ಮಾಡಿದ್ರೂ ಮಾಡ್ತೀರ ಬಿಡಿ. ಅದ್ಸರಿ, ಈ ಆರ್‌ಆರ್‌ಆರ್ ಯಾವ್ ಥರ ಸಿನಿಮಾ ?
-ಏನೋಪ್ಪಾ, ನೋಡಿರ್‌ದೋ ಕೆಲವರು ರೀರೆಕಾರ್ಡಿಂಗ್ ನೋಡಿ ಇದು ಆರ್‌ಆರ್ ಸಿನಿಮಾ ಅಂದ್ರು, ಇನ್ ಕೆಲವರು ಭಯಾನಕ -ಟಿಂಗ್ ಸೀನ್ ನೋಡಿ ಹಾರರ್ ಸಿನಿಮಾ ಅಂದ್ರು.
? ಅದೂ ನಿಜನೇ, ಅದಿರ್ಲಿ, ನಿಮ್ಗೆ ಮೊದ್ಲಿನ್ ಥರಾ ಲೋ ಬಜೆಟ್ ಸಿನಿಮಾ ಮಾಡೋಕೇ ಬರಲ್ವಾ ?
-ಯಾವನೋ ಬಂದಿದ್ದ, ೧೦ ಕೋಟಿಯಲ್ಲಿ ಸಿನಿಮಾ ಮಾಡಿ ಅಂತ. ಅದಕ್ಕೇ, ‘ಲೋ, ಬಜೆಟ್ ಇಂದ್ರೆ ರಾಮ್ ಗೋಪಾಲ್ ವರ್ಮಾ ಅವರತ್ರ ಹೋಗು, ಲೋ ಬಜೆಟ್ ನಲ್ಲಿ ಸಿನಿಮಾನೇ ಮಾಡಲ್ಲ ನಾನು’ ಅಂತ ಹೇಳಿದೆ
? ಓಹೋ, ಯಶಸ್ಸು ನಿಮಗೂ ನೆತ್ತಿಗೇರಿದೆ ಅನ್ಸುತ್ತೆ?
-ಯಾಕ್ ಏರ್ಬಾರ್ದು. ಯಾವ್ದೋ ಒಂದ್ ಸಿನಿಮಾ ಹಿಟ್ ಮಾಡಿ ಸೂಪರ್ ಸ್ಟಾರ್ ಡೈರೆಕ್ಟರ್ ಆಗಿಲ್ಲ ನಾನು. ನಾನ್ ಕೊಟ್ಟಿರೋ ಅಷ್ಟೂ ಸಿನಿಮಾಗಳೂ ಸೂಪರ್ ಹಿಟ್‌ಗಳೇ
? ಓ ಇ ದಿನ ಕನ್ನಡ ಸಿನಿಮಾಗಳ ಕಥೆ ಕದೀತಾ ಇದ್ರಿ, ಈಗ ಡೈಲಾಗೂ ಕದಿಯೋಕೆ ಶುರು ಮಾಡಿದ್ರಾ?
-ದುಡ್ ಕದ್ರೂ ಕಳ್ತನನೇ, ಬ್ರೆಡ್ ಕದ್ರೂ ಕಳ್ತನನೇ. ದುಡ್ಡೇ ಕದ್ಮೇಲೆ ಬ್ರೆಡ್ ಯಾವ್ ಲೆಕ್ಕ ಬಿಡಿ.
ನೆಟ್ ಪಿಕ್ಸ್
ಒಂದು ನಾಟಕದ ಕಂಪನಿ ಹೊಸದಾಗಿ ಊರಿಗೆ ಬಂದಿತ್ತು. ಆ ಕಂಪನಿ ಮಾಡುತ್ತಿದ್ದ ನಾಟಕ, ಆ ಊರಲ್ಲಿ ಹೌಸ್ ಫುಲ್ ಆಗಿ ಓಡುತ್ತಿತ್ತು. ಆ ನಾಟಕದಲ್ಲಿ ಅಂಥಾದ್ದೇನಿದೆ ಅಂತ ಊರ ಹೆಂಗಸರು ತುಂಬಾನೇ ಯೋಚನೆ ಮಾಡ್ತಾ ಇದ್ರು. ಯಾಕಂದ್ರೆ ಅವರ ಗಂಡಂದಿರು ಸಂಜೆ ಆಯ್ತು ಅಂದ್ರೆ ಸಾಕು, ನಾಟಕದ ಕಂಪನಿ ಕಡೆಗೆ ಹೊರಟು ಬಿಡುತ್ತಿದ್ದರು. ಇದೇನು ವಿಷ್ಯ, ಕಂಡು ಹಿಡಿಯಲೇಬೇಕು ಅಂತ ಒಂದು ದಿನ ಎಲ್ಲ ಹೆಂಗಸರೂ ಮಾತಾಡಿಕೊಂಡು ಕಂಪನಿಗೆ ಹೋದರು. ಅಲ್ಲಿ ಅವರು ತಮ್ಮ ಮನೆಯ ಗಂಡಸರು ಮಾತಾಡಿಕೊಳ್ಳುತ್ತಾ ಇದ್ದುದನ್ನ ನೋಡಿದ್ರು. ಅದರಿಂದ ಅವರಿಗೆ ಗೊತ್ತಾದ ವಿಷಯ ಅಂದ್ರೆ ಆ ನಾಟಕದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದ ಹುಡುಗಿಯೊಬ್ಬಳ ತುಟಿ ತುಂಬಾ
ದಪ್ಪ ಇದ್ದು, ಆ ಕಾರಣಕ್ಕೆ ಅವಳು ತುಂಬಾ ಆಕರ್ಷಕವಾಗಿ ಕಾಣಿಸ್ತಾ ಇದ್ಳು.
ಅದು ಎಲ್ಲ ಗಂಡಸರಿಗೂ ಇಷ್ಟ ಆಗಿ, ಅದನ್ನು ನೋಡೋಕಂತನೇ ಎಲ್ಲಾ ಗಂಡಸರೂ ಬರ್ತಾ ಇದ್ರು ಅನ್ನೋದು. ಸರಿ, ಹೆಂಗಸರೆ ಪ್ಲ್ಯಾನ್ ಮಾಡಿ ಏನಾದ್ರೂ ಮಾಡು ಇದನ್ನ ನಿಲ್ಲಿಸಬೇಕು ಅಂತ ಚರ್ಚೆ ಮಾಡಿದ್ರು. ಪ್ಲ್ಯಾನ್ ಪ್ರಕಾರ ಒಂದು ದಿನ ಆ ನಾಟದ ಕಂಪನಿಯ
ಹುಡುಗಿಯನ್ನು ಭೇಟಿ ಮಾಡಿ, ‘ನೋಡಮ್ಮಾ , ನಿನ್ನಿಂದ ನಮ್ಮ ಸಂಸಾರ ಹಾಳಾಗ್ತಿದೆ’ ಅಂತ ಹೇಳಿದ್ರು.
ಅದಕ್ಕೆ ಆ ಹುಡುಗಿ ‘ನಿಮ್ ಗಂಡಂದಿರಿಗೆ ಬುದ್ಧಿ ಹೇಳಬೇಕು ನೀವು, ನಾನೇನ್ಮಾಡೋಕಾಗುತ್ತೆ. ನನ್ ಕೈಲಿ ಏನಾದ್ರೂ ಮಾಡೋಕಾದ್ರೆ ಮಾಡ್ತೀನಿ ಹೇಳಿ’ ಅಂದ್ಳು. ಅದಕ್ಕೆ ಹೆಂಗಸರು ಒಂದು ಗಿಡಮೂಲಿಕೆ ಔಷಧ ಕೊಟ್ಟು, ‘ನೋಡಮ್ಮಾ, ಒಂದ್ ಕೆಲ್ಸ ಮಾಡು, ಇದನ್ನ ಇವತ್ತು ರಾತ್ರಿ ನಿನ್ನ ತುಟಿಗೆ ಹಚ್ಕೋ, ನಾಳೆ ಹೊತ್ತಿಗೆ ನಿನ್ನ ತುಟಿಗಳು ಸಣ್ಣ ಆಗ್ತವೆ. ಆದ್ರೆ ಅಪ್ಪಿ ತಪ್ಪಿ ಇದನ್ನ ನುಂಗಬೇಡ, ಮಾತೇ ಬಿದ್ದು ಹೋಗುವ ಸಾಧ್ಯತೆ ಇರುತ್ತೆ, ಹುಷಾರು’ ಅಂತ ಹೇಳಿ ಹೋದರು. ಸರಿ, ಮರುದಿನ ನಾಟಕ ಶುರು ಆಗೋ ಟೈಮಿಗೆ ಎಂದಿನಂತೆ ಊರಿನ ಎಲ್ಲಾ ಗಂಡಸರೂ ಹುಡುಗಿ ನೋಡೋದಿಕ್ಕೆ ಅಂತ ಬಂದು ಕೂತರು.
ಎಷ್ಟೊತ್ತಾದರೂ ನಾಟಕ ಶುರು ಆಗಲಿಲ್ಲ. ಆಮೇಲೆ ನಾಟಕ ಕಂಪನಿಯವನೊಬ್ಬ ಬಂದು ಸ್ಟೇಜ್ ಮೇಲೆ ಅನೌ ಮಾಡಿದ ‘ಪ್ರೇಕ್ಷಕ ಮಹಾಪ್ರಭುಗಳು ಕ್ಷಮಿಸಬೇಕು, ನಿನ್ನೆ ರಾತ್ರಿ ನಮ್ಮ ಕಂಪನಿ ಯಜಮಾನರಿಗೆ ಮಾತು ಬಿದ್ದು ಹೋಗಿರುವುದರಿಂದ ನಾಟಕ ಕ್ಯಾನ್ಸಲ್ ಮಾಡಲಾಗಿದೆ’
ಲೈನ್ ಮ್ಯಾನ್
ಫ್ರೆಂಡ್ಸ್ ಟಾಕ್ ?‘ನೀನಿಷ್ಟೊತ್ತಿಗೆ ಒಂದ್ ಕಾರ್ ತಗೊಂಡಿರಬೇಕಿತ್ತು ಕಣೋ’
‘ಏನ್ ಕಿಂಡಲ್ ಮಾಡ್ತಾ ಇದ್ದಿಯಾ?’
?‘ಏ, ಏನೋ, ಒಳ್ಳೇದ್ ಹೇಳಿದ್ರೆ ಹಿಂಗಂತೀಯ ನೋಡು, ಹೇಳೋದನ್ನ ಸ್ಪೋರ್ಟಿವ್ ಆಗಿ ತಗೋಳ್ಳೋ’
‘ಸ್ಪೋರ್ಟಿವ್ ಆಗಿ ತಗೊಳ್ಳೋದಾದ್ರೆ ಸ್ಪೋಟ್ಸ ಕಾರೇ ತಗೋಬೇಕಿತ್ತು, ಅಲ್ವಾ?’
ಲೈಟ್ ಮಾತು
ಹೊಟ್ಟೆ ಉರ್ಕೊಳೋರ ಬಗ್ಗೆ ‘ಲೈಟ’ ಆಗಿ ಮಾತಾಡಬಾರದು. ತಾನು ಉರ್ಕೊಂಡು.. ಸಾರಿ, ತಾನು ‘ಉರಿದು’ ಜಗತ್ತಿಗೆ ಬೆಳಕು ಕೊಡುವ ದೀಪದಂತೆ ಅವರು.
ಸಿನಿ ಟೈಮ್
?‘ದಿ ಕಾಶ್ಮೀರ್ ಫೈಲ್ಸ್’ ನೋಡಿ ಕೆಲವರು ಹೊಟ್ಟೆ ಉರ್ಕೊತಿದ್ದಾರೆ
ಮೋಸ್ಟ್ ಲೀ ಅವರು ‘ಉರಿ’ ಸಿನಿಮಾ ನೋಡಿರ್ಬೇಕು
? ಆಮ್ ಆದ್ಮಿ ಪಕ್ಷ ಕೂಡಾ ದೇವರ ಮೇಲೆ ನಂಬಿಕೆ ಇದೆಯಾ?
-ಇದೆ, ಆದರೆ, ಅವರ ಭಕ್ತಿ ಗೀತೆ ಶುರುವಾಗಿದ್ದು, ‘ಸ್ವಾಮಿ ದೇವನೇ ‘ಲೋಕಪಾಲ’ನೆ’ ಅಂತ.
? ಕೆಲವರಿಗೆ ಎಲ್ಲಾ ಹೇಳಿದ್ರೂ ಬುದ್ಧಿ ಬರಲ್ಲ ಅನ್ನೋದನ್ನು ಹಿಂಗೂ ಹೇಳಬಹುದು
-ಕುರುಡರ ಜತೆ ಕಣ್ಣಾಮುಚ್ಚಾಲೆ ಆಡೋಕಾಗುತ್ತಾ?
? ಏನ್ ಸಿದ್ರಾಮಯ್ಯನೋರೇ, ಮೊನ್ನೆ ನಿಮ್ಮೂರಲ್ಲಿ ರ್ಜರಿ ಡ್ಯಾನ್ಸ ಮಾಡಿದ್ರಂತೆ?
ಏಯ, ನಂದೇನಿಲ್ಲಪ್ಪ, ನಾನೇನೂ ಮಾಡಿಲ್ಲ, ಎಲ್ಲಾ ನನ್ನ ಹಳೇ ಸ್ನೇಹಿತರು ಮಾಡಿ‘ಸಿದ್ದು’.
? ಕೃಷಿ ಜಮೀನು ಖಾಲಿ ಬಿಟ್ರೆ ‘ಬಿಜೆಪಿ’ ಸರಕಾರ ಮುಟ್ಟುಗೋಲು ಹಾಕ್ಕೊಳುತ್ತೆ ಅಂತ ಸುದ್ದಿ ಓಡಾಡ್ತಿದೆ.
ಯಾಕ್ ಬೇಕು, ಸುಮ್ನೆ. ನಿಮ್ ನಿಮ್ ಊರಲ್ಲಿರೋ ಖಾಲಿ ಜಮೀನಲ್ಲಿ ಅಟ್ ಲೀ ಕಾಂಗ್ರೆಸ’ ಗಿಡನಾದ್ರೂ ಹಾಕ್ಸಿ
ಹೊಟೇಲ್ ಉದ್ಯಮದ ಸತ್ಯ
ಸಣ್ಣ ರೂಮ್ ಥರ ಇದ್ದ ಹೊಟೇಲ, ಎಷ್ಟೇ ದೊಡ್ಡ ಲೆವೆಲ್ ಗೆ ಬೆಳೆದು ಬದಲಾದ್ರೂ, ಎಕ್ಸ್ಟ್ರಾ ಚಟ್ನಿ ಕೇಳ್ದಾಗ ಮುಖ ನೋಡೋದ್ ಮಾತ್ರ ಬದಲಾಗಲ್ಲ.
? ಒಂದ್ ಡೌಟು
ನಿಂಗೆ ಇಗೋ ಜಾಸ್ತಿ ಅಂತ ಹೇಳಿದಾಗ, ‘ಹೌದು’ ಅಂತ ಒಪ್ಪಿಕೊಳ್ಳೋನಿಗೆ ಇಗೋ ಇದೆ ಅಂತ ಅರ್ಥನಾ? ಇಲ್ಲ ಅಂತ ಅರ್ಥನಾ?
? ಎಸ್.ನಾರಾಯಣ್ ಕಾಂಗ್ರೆಸ್ ಯಾಕೆ ಸೇರ್ಕೊಂಡ್ರು?
ಇಬ್ಬರ ಸಿದ್ಧಾಂತಗಳೂ ಒಂದೇ ಅನ್ನೋ ಕಾರಣಕ್ಕೆ.
-ಕಥೆ- ಚಿತ್ರಕತೆ- ಸಂಭಾಷಣೆ -ಸಂಗೀತ- ಸಾಹಿತ್ಯ-ನಿರ್ದೇಶನ:
ಕಲಾ ಸಾಮ್ರಾಟ್ ಎಸ್. ನಾರಾಯಣ್
-ಕಾಂಗ್ರೆಸ್ ಅಧ್ಯಕ್ಷರು – ಪದಾಧಿಕಾರಿ – ಖಜಾಂಚಿ – ಸದಸ್ಯರು – ಹೈ ಕಮ್ಯಾಂಡ್
-ಲೋ ಕಮ್ಯಾಂಡ್ – ನೋ ಕಮ್ಯಾಂಡ್: ಸೋನಿಯಾ ಗಾಂಧಿ