Thursday, 12th December 2024

ಮಿದುಳಿನ ಬಗ್ಗೆ ಒಂದಷ್ಟು ಮಹತ್ವದ ಮಾಹಿತಿ

ಹಿಂದಿರುಗಿ ನೋಡಿದಾಗ

ನಮ್ಮ ಭೂಮಿಯ ಮೇಲೆ ಜೀವರಾಶಿಯು ಸಮುದ್ರದಲ್ಲಿ ಹುಟ್ಟಿತು. ಕೆಲವು ಜೀವಿಗಳು ಭೂಮಿಯ ಮೇಲೆ ಬದುಕನ್ನು ನಡೆಸಲು ಸಿದ್ಧವಾದವು. ಅದಕ್ಕಾಗಿ ೩ ವ್ಯವಸ್ಥೆಗಳನ್ನು ರೂಪಿಸಿಕೊಂಡವು. ಮೊದಲನೆಯದು ರಕ್ತಪರಿಚಲನಾ ವ್ಯವಸ್ಥೆ. ಇದು ದೇಹದ ಪ್ರತಿಯೊಂದು ಜೀವಕೋಶಕ್ಕೆ ಪೋಷಕಾಂಶಗಳನ್ನು ಹಾಗೂ
ಆಮ್ಲಜನಕವನ್ನು ಪೂರೈಸಿತು. ಇದರ ಸೋದರ ಪರಿಚಲನಾ ವ್ಯವಸ್ಥೆಯೇ ಹಾಲ್ರಸ ಪರಿಚಲನಾ ವ್ಯವಸ್ಥೆ (ಲಿಂಫ್ಯಾಟಿಕ್ ಸಿಸ್ಟಮ್). ರಕ್ತದಿಂದಲೇ ರೂಪುಗೊಳ್ಳುವ ಹಾಲ್ರಸವು (ಲಿಂಫ್) ರಕ್ತದ ಸಮತೋಲನವನ್ನು ಕಾಪಾಡಿ, ಜೀರ್ಣವಾದ ಕೊಬ್ಬಿನಂಶವನ್ನು ವಿತರಿಸುವುದರ ಜತೆಯಲ್ಲಿ ನಮ್ಮ ದೇಹದ ಮಿಲಿಟರಿ ಪಡೆಯಾದ ಬಿಳಿಯ ರಕ್ತಕಣಗಳ ಸಂಚಾರಕ್ಕೆ ಒಂದು ತಡೆಯಿಲ್ಲದ ರಾಜಮಾರ್ಗವನ್ನು ಒದಗಿಸುತ್ತದೆ. ಈ ಎರಡು ವ್ಯವಸ್ಥೆಗಳ ಜತೆ ಮೂರನೆಯ
ವ್ಯವಸ್ಥೆಯೂ ಒಂದಿದೆ. ಅದುವೇ ಮಸ್ತಿಷ್ಕ-ಮೇರುದ್ರವ ಅಥವಾ ಬಳ್ಳಿಮಿದುಳ ದ್ರವ ವ್ಯವಸ್ಥೆ.

ಮೊದಲ ೨ ವ್ಯವಸ್ಥೆಗಳನ್ನು ಪರಿಚಲನಾ ವ್ಯವಸ್ಥೆ ಎಂದೆವು. ಪರಿಚಲನೆ ಎಂದರೆ ಮತ್ತೆ ಮತ್ತೆ ಸುತ್ತುಹಾಕುವುದು, ಪ್ರದಕ್ಷಿಣೆ ಹಾಕಿದಂತೆ. ಹೃದಯವು, ಒಂದೇ ರಕ್ತವನ್ನು ಮತ್ತೆ ಮತ್ತೆ ಪಂಪ್ ಮಾಡಿ ನಮ್ಮ ಶರೀರಾದ್ಯಂತ ಹರಿಯುವಂತೆ ಮಾಡುತ್ತದೆ ಅಲ್ಲವೆ! ಆ ರಕ್ತವು, ನಾವು ಹುಟ್ಟುವ ಮೊದಲೇ ಸುತ್ತಲೂ ಆರಂಭಿಸಿ, ನಾವು ಸಾಯುವಾಗ ತನ್ನ ಪರಿಚಲನೆಯನ್ನು ನಿಲ್ಲಿಸುತ್ತದೆ. ಬಳ್ಳಿಮಿದುಳ ದ್ರವ ವ್ಯವಸ್ಥೆಯು ಪರಿಚಲನಾ ವ್ಯವಸ್ಥೆಯಲ್ಲ. ಪ್ರತಿಸಲವೂ ದ್ರವವು ಹೊಸದಾಗಿ ಉತ್ಪಾದನೆಯಾಗಿ, ತನ್ನ ಪಥದಲ್ಲಿ ಚಲಿಸಿ, ಕೆಲಸವು ಮುಗಿದ ಕೂಡಲೇ ವಿಲೀನವಾಗುತ್ತದೆ.

ಹಾಗಾಗಿ ಇದನ್ನು ಕೇವಲ ಒಂದು ವ್ಯವಸ್ಥೆ ಎನ್ನಬಹುದು. ಈ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಮಿದುಳಿನ ಬಗ್ಗೆ ಒಂದಷ್ಟು ತಿಳಿದುಕೊಳ್ಳಬೇಕು. ನಮ್ಮ ಮಿದುಳು ಹಾಗೂ ಮಿದುಳುಬಳ್ಳಿಯನ್ನು ೩ ಪದರಗಳು ಅವರಿಸಿವೆ. ಎಳಸುಪೊರೆ (ಪಯಾಮ್ಯಾಟರ್) ಜೇಡರೂಪಿ ಪೊರೆ (ಅರಕ್ನಾಯ್ಡ್ ಮ್ಯಾಟರ್) ಹಾಗೂ
ಗಡಸುಪೊರೆ (ಡ್ಯೂರಾಮ್ಯಾಟರ್). ಜೇಡರೂಪಿ ಪೊರೆಯು ಜೇಡರಬಲೆಯಂತೆ ಹಗುರವಾದ, ಸಡಿಲ ರಚನೆ. ಈ ಪೊರೆಯ ಕೆಳಗೆ ಅವಕಾಶವಿದೆ. ಅದರಲ್ಲಿ ಬಳ್ಳಿಮಿದುಳ ದ್ರವವು ಹರಿಯುತ್ತದೆ. ಈ ದ್ರವವು ಮಿದುಳಿನ ಮೆತ್ತೆಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ನಮ್ಮ ಮಿದುಳಿನ ಒಳಗೆ ೪ ಮಿದುಳಗುಣಿ ಗಳಿವೆ (ವೆಂಟ್ರಿಕಲ್ಸ್).

ಮಿದುಳಿನ ಎಡ ಮತ್ತು ಬಲ ಅರೆಗೋಳದಲ್ಲಿ ಒಂದೊಂದು ಗುಣಿಗಳಿವೆ. ಇವನ್ನು ದ್ವಿಪಾರ್ಶ್ವ ಅಥವಾ ಇಬ್ಬದಿಯ ಮಿದುಳಗುಣಿಗಳು (ಲ್ಯಾಟರಲ್ ವೆಂಟ್ರಿಕಲ್ಸ್) ಎನ್ನುವರು. ೩ನೇ ಮತ್ತು ೪ನೇ ಮಿದುಳಗುಣಿಗಳೂ ಇದೆ. ನಾಲ್ಕನೆಯ ಗುಣಿಯು ಮಿದುಳಬಳ್ಳಿಯ ತುದಿಯವರೆಗೆ ಸಾಗುತ್ತದೆ. ಜೇಡರೂಪಿ ಪೊರೆಯು ಮುಖ್ಯ ವಾದದ್ದು. ಇಬ್ಬದಿಯ ಮಿದುಳಗುಣಿಗಳ ಭಿತ್ತಿಯಲ್ಲಿರುವ ಜೇಡರೂಪಿ ಪೊರೆಯಲ್ಲಿ ವಿಶೇಷ ಉಲ್ಬರಕ್ತನಾಳ ಜಾಲವಿದೆ (ಕೊರಾಯ್ಡ್ ಪ್ಲೆಕ್ಸಸ್). ಈ ಜಾಲದಲ್ಲಿ ವಿಶೇಷವಾದ ಗುಳಿಕೋಶಗಳಿರುತ್ತವೆ (ಎಪಿಂಡೈಮಲ್ ಸೆಲ್ಸ್). ಇವು ಬಳ್ಳಿಮಿದುಳ ದ್ರವವನ್ನು ಉತ್ಪಾದಿಸುತ್ತವೆ ಹಾಗೂ ಮಿದುಳು ಮತ್ತು ಮಿದುಳುಬಳ್ಳಿ ಯಾದ್ಯಂತ ಹರಿಸುತ್ತವೆ. ಜೇಡರೂಪಿ ಪೊರೆಯಿಂದ ಮೇಲ್ಮುಖವಾಗಿ ಗಡಸುಪೊರೆಯೊಳೆಗೆ ಜೇಡರೂಪಿ ಲೋಮನಾಳಗಳು (ಅರಕ್ನಾಯ್ಡ್ ನ್ಯುಲೇಶನ್) ಚಾಚಿಕೊಂಡಿವೆ. ಇಲ್ಲಿ ಆಕ್ಸಿಜನ್ ಕೊರತೆಯ ರಕ್ತಹರಿಯುವ ಎಲುಗುಳಿಗಳಿವೆ (ಸೈನಸ್).

ಬಳ್ಳಿಮಿದುಳ ದ್ರವವು ತನ್ನ ಕೆಲಸವನ್ನು ಪೂರ್ಣಗೊಳಿಸಿ, ಈ ಲೋಮನಾಳಗಳ ಮೂಲಕ ಆಕ್ಸಿಜನ್ ಕೊರತೆಯ ರಕ್ತದೊಳಗೆ ವಿಲೀನವಾಗುತ್ತದೆ. ಬಳ್ಳಿಮಿದುಳ ದ್ರವವು ಮಿದುಳಿಗೆ ಪೋಷಣೆಯನ್ನು ಒದಗಿಸುತ್ತದೆ. ಮಿದುಳಿನ ಕಾರ್ಯಗಳಲ್ಲಿ ಉತ್ಪಾದನೆಯಾಗುವ ಅಪಾಯಕಾರಿ ಹಾಗೂ ವಿಷಕಾರಿ ರಾಸಾಯನಿಕಗಳನ್ನು ವಿಸರ್ಜಿಸುತ್ತದೆ ಹಾಗೂ ಮಿದುಳಿಗೆ ಜಲಭೌತಿಕ ರಕ್ಷಣೆಯನ್ನು ಒದಗಿಸುತ್ತದೆ. ಜಲಭೌತಿಕ ರಕ್ಷಣೆಯು ಎರಡು ರೀತಿಯಲ್ಲಿ ಒದಗುತ್ತದೆ. ಮೊದಲನೆಯದು ದ್ರವವು ಶಾಕ್ ಅಬ್ಸಾರ್ಬರ್ ಆಗಿ ಮಿದುಳನ್ನು ರಕ್ಷಿಸುತ್ತದೆ. ದೇಹಕ್ಕೆ ಅಥವಾ ತಲೆಗೆ ಬೀಳುವ ಪೆಟ್ಟುಗಳು ಅಥವಾ ಆಘಾತಗಳು ನೇರವಾಗಿ ಮಿದುಳಿಗೆ  ವರ್ಗಾವಣೆ ಯಾಗುವುದಿಲ್ಲ. ಆಗದಂತೆ ರಕ್ಷಣೆಯನ್ನು ನೀಡುತ್ತದೆ.

ಎರಡನೆಯದು, ಬಳ್ಳಿಮಿದುಳ ದ್ರವವು, ಮಿದುಳು ಹಾಗೂ ಮಿದುಳುಬಳ್ಳಿಗೆ ಪ್ಲವನತೆಯನ್ನು (ಬಾಯನ್ಸಿ) ನೀಡುತ್ತದೆ. ಪ್ಲವನತೆ ಎಂದರೆ ತೇಲುವ ಗುಣ. ಇಡೀ ಮಿದುಳು ಸುಮಾರು ೧೫೦೦ ಗ್ರಾಂ ತೂಗುತ್ತದೆ. ಇದು ಬಳ್ಳಿಮಿದುಳ ದ್ರವದಲ್ಲಿ ತೇಲುತ್ತಿರುವ ಕಾರಣ, ಅದರ ಭಾರವು ೫೦ ಗ್ರಾಂ.ಗಿಂತಲೂ ಕಡಿಮೆಯಾಗುತ್ತದೆ. ಹಾಗಾಗಿ ಸಣ್ಣ-ಪುಟ್ಟ ಆಘಾತಗಳು ಮಿದುಳಿಗೆ ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ. ಮಿದುಳು ಹಾಗೂ ಮಿದುಳುಬಳ್ಳಿಯಲ್ಲಿ ಸುಮಾರು ೧೫೦ ಎಂ.ಎಲ್. ದ್ರವವಿರುತ್ತದೆ. ಇದರಲ್ಲಿ ೧೨೫ ಎಂ.ಎಲ್. ದ್ರವವು ಮಿದುಳು ಹಾಗೂ ಮಿದುಳಬಳ್ಳಿಯನ್ನು ಆವರಿಸಿದ್ದರೆ, ಉಳಿದ ೨೫ ಎಂ.ಎಲ್. ದ್ರವವು ಮಿದುಳಗುಣಿಗಳಲ್ಲಿ ಇರುತ್ತದೆ. ಪ್ರತಿದಿನವೂ ಸುಮಾರು ೪೦೦-೬೦೦ ಎಂ.ಎಲ್. ದ್ರವವು ಉತ್ಪಾದನೆಯಾಗುತ್ತದೆ.

ಅಂದರೆ ದಿನಕ್ಕೆ ಸುಮಾರು ೫ ಸಲವಾದರೂ ಹೊಸದಾಗಿ ಬಳ್ಳಿಮಿದುಳ ದ್ರವವು ಉತ್ಪಾದನೆಯಾಗುತ್ತಿರುತ್ತದೆ ಹಾಗೂ ವಿಸರ್ಜನೆಯಾಗುತ್ತಿರುತ್ತದೆ ಎನ್ನಬಹುದು. ಇಂಥ ಬಳ್ಳಿಮಿದುಳ ದ್ರವ, ಅವು ಇರುವ ಮಿದುಳಗುಳಿಗಳು ಹಾಗೂ ಮಿದುಳನ್ನು ಆವರಿಸಿರುವ ಪೊರೆಗಳ ಬಗ್ಗೆ ನಮ್ಮ ತಿಳಿವು ಬೆಳೆದು ಬಂದ ದಾರಿಯು ರೋಚಕವಾಗಿದೆ. ಈ ಬಗ್ಗೆ ಮೊದಲಿಗೆ ದಾಖಲಿಸಿದವರು ಪ್ರಾಚೀನ ಈಜಿಪ್ಷಿಯನ್ನರು. ೧೮೬೨ರಲ್ಲಿ ಎಡ್ವಿನ್ ಸ್ಮಿತ್ ಎನ್ನುವ ಅಮೆರಿಕದ ಪುರಾತನ ವಸ್ತುಗಳ ಸಂಗ್ರಹಕಾರನು ೪.೬೮ ಮೀ. (೧೫.೩ ಅಡಿ) ಉದ್ದದ ಪ್ಯಾಪಿರಸ್ ಹಾಳೆಯನ್ನು ಕೊಂಡುಕೊಂಡ. ಅದರಲ್ಲಿ ೪೮ ವೈದ್ಯಕೀಯ ರೋಗಪ್ರಕರಣಗಳ ವಿವರಣೆಯಿತ್ತು. ಅವು ಪ್ರಧಾನವಾಗಿ ಮಿದುಳು, ಮಿದುಳುಬಳ್ಳಿ ಹಾಗೂ ನರಮಂಡಲಕ್ಕೆ ಸಂಬಂಧಪಟ್ಟಿದ್ದವು. ಇದನ್ನು ಈಜಿಪ್ಟಿನ ಹೈರಾಟಿಕ್ ಲಿಪಿಯಲ್ಲಿ ಬರೆದಿದ್ದರು. ಅಂದರೆ ಇದು ಈಜಿಪ್ಟಿನ ೧೬-೧೭ನೇ ವಂಶಜರ ಕಾಲದ್ದು ಎನ್ನಬಹುದು.

ಈ ವಂಶಜರು ಕ್ರಿ.ಪೂ.೧೭೦೦ ವರ್ಷಗಳ ಹಿಂದೆ ಆಳ್ವಿಕೆ ನಡೆಸಿದ್ದರು. ಎಡ್ವಿನ್ ಸ್ಮಿತ್ ಸಂಗ್ರಹಿಸಿದ್ದ ಪ್ಯಾಪಿರಸ್ ಹಾಳೆಯು ವಾಸ್ತವದಲ್ಲಿ ಒಂದು ಪ್ರತಿಯಾಗಿತ್ತು. ಇದರ ಮೂಲವು ಕ್ರಿ.ಪೂ.೩೦೦೦-ಕ್ರಿ.ಪೂ.೧೫೦೦ ಕಾಲದಲ್ಲಿ ರಚನೆಯಾಗಿತ್ತು. ಆಗ ಜೋಸರ್ ಎನ್ನುವ -ರೋ ರಾಜ್ಯಭಾರ ಮಾಡುತ್ತಿದ್ದ. ಅವನ ಬಳಿ ಇಮ್‌ಹೋಟೆಪ್ ಎಂಬ ವೈದ್ಯನಿದ್ದ. ಅವನು ವೈದ್ಯಕೀಯದ ಜತೆ ಮಂತ್ರಿ, ಪುರೋಹಿತ ಹಾಗೂ ವಾಸ್ತುಶಿಲ್ಪಿಯಾಗಿಯೂ ಸೇವೆ ಸಲ್ಲಿಸಿದ್ದ. ಎಡ್ವಿನ್ ಸ್ಮಿತ್ ಪ್ಯಾಪಿರಸ್‌ನಲ್ಲಿದ್ದ ೬ನೆಯ ರೋಗ ಪ್ರಕರಣ. ಇದರಲ್ಲಿ ರೋಗಿಯ ‘ತಲೆಗೆ ಬಲವಾದ ಏಟು ಬಿದ್ದಿದೆ. ಗಾಯವು ತೆರೆದುಕೊಂಡಿದೆ. ಮೂಳೆಯು ಮುರಿದಿದೆ. ಮೂಳೆಯ ಮೇಲಿರುವ ಪದರಗಳು ಹರಿದಿವೆ.

ಒಳಗಿರುವ ದ್ರವವು ಹೊರಗೆ ಹರಿದಿದೆ. ಆದರೆ ಮಿದುಳು ಇನ್ನೂ ಮಿಡಿಯುತ್ತಿದೆ’ ಎಂಬ ವಿವರಣೆಯ ಜತೆ ‘ಇಂಥ ಪ್ರಕರಣಗಳಿಗೆ ಚಿಕಿತ್ಸೆ ನೀಡುವುದರಿಂದ ಏನೂ
ಪ್ರಯೋಜನವಿಲ್ಲ’ ಎಂಬ ತೀರ್ಪೂ ದಾಖಲಾಗಿದೆ. ಇದು ಮಿದುಳಿನ ಪೊರೆಗಳ ಹಾಗೂ ಅದರೊಳಗಿರುವ ದ್ರವದ ಪ್ರಥಮ ಲಭ್ಯ ಉದಾಹರಣೆ. ಗ್ರೀಸ್ ದೇಶದಲ್ಲಿ ರುವ ಕಾಸ್ ದ್ವೀಪದ ಹಿಪ್ಪೋಕ್ರೇಟ್ಸ್ ‘ಆಧುನಿಕ ವೈದ್ಯಕೀಯ ವಿಜ್ಞಾನದ ಪಿತಾಮಹ’ ಎಂಬ ಅಭಿದಾನಕ್ಕೆ ಪಾತ್ರನಾದವನು. ಇವನು ಬಳ್ಳಿಮಿದುಳ ದ್ರವದ ಬಗ್ಗೆ ಪ್ರಸ್ತಾಪಿಸತ್ತಾ, ‘ಈ ದ್ರವದ ಹರಿವಿಗೆ ತೊಂದರೆಯಾದರೆ ಜಲಮಸ್ತಿಷ್ಕವು (ಹೈಡ್ರೋಸೆ-ಲಸ್) ಉಂಟಾಗುತ್ತದೆ; ಮಗುವಿನ ತಲೆಯು ಕುಂಬಳಕಾಯಿಯ ಹಾಗೆ
ಊದಿಕೊಳ್ಳುತ್ತದೆ. ಸಕಾಲದಲ್ಲಿ ಬಳ್ಳಿಮಿದುಳ ದ್ರವವು ಸರಾಗ ಹರಿಯದಿದ್ದರೆ, ಮಗುವು ಸಾಯುವುದು ಅನಿವಾರ್ಯವಾಗುತ್ತದೆ’ ಎಂದಿದ್ದಾನೆ.

ಹಿಪ್ಪೋಕ್ರೇಟ್ಸ್ ಮಿದುಳನ್ನು ಆವರಿಸಿರುವ ಪೊರೆಗಳ ಬಗ್ಗೆಯೂ ವಿವರಣೆ ನೀಡಿರುವುದುಂಟು. ಗ್ರೀಸ್ ದೇಶದ ಚಾಲ್ಸಿಡಾನ್ ಪ್ರದೇಶದ ಹೆರೋಫಿಲಸ್
ಅಲೆಗ್ಸಾಂಡ್ರಿಯದಲ್ಲಿ ವೃತ್ತಿನಿರತನಾಗಿದ್ದ. ಇವನು ಮರಣದಂಡನೆಗೆ ಗುರಿಯಾದ ಅಪರಾಽಗಳ ಸಜೀವಚ್ಛೇದನ ಮಾಡುತ್ತಿದ್ದ. ಇವನು ಮಿದುಳನ್ನು ಆವರಿಸಿರುವ ಪೊರೆಗಳು, ಮಿದುಳಗುಳಿಗಳು ಹಾಗೂ ಮೊದಲ ಬಾರಿಗೆ ಬಳ್ಳಿಮಿದುಳ ದ್ರವವನ್ನು ಉತ್ಪಾದಿಸುವ ಉಲ್ಬರಕ್ತನಾಳ ಜಾಲದ ಬಗ್ಗೆ ಗುರುತಿಸಿದ. ಇವನು ಮಿದುಳು ಆತ್ಮ ಹಾಗೂ ವಿಚಾರಗಳ ನೆಲೆ ಎಂದು ಭಾವಿಸಿದ್ದ. ಇವನ ಬಹಳಷ್ಟು ಬರಹವು ನಮಗೆ ದೊರೆತಿಲ್ಲ.

ಆಧುನಿಕ ಟರ್ಕಿಯ ಪೆರ್ಗಮಾನ್ ಎಂಬಲ್ಲಿ ಗ್ಯಾಲನ್ ಎಂಬ ರೋಮನ್ ವೈದ್ಯನಿದ್ದ. ಇವನು ಹೆರೋಫಿಲಸ್ ಬರಹವನ್ನು ಓದಿದ್ದ. ಆದರೆ ಗ್ಯಾಲನ್ ಬರಹದಲ್ಲಿ ಸುಮಾರು ಅರ್ಧದಷ್ಟು ಬರಹಗಳು ಅಗ್ನಿ ಅಪಘಾತವೊಂದರಲ್ಲಿ ನಾಶವಾದವು. ಇವನು ಆತ್ಮವು (ನ್ಯೂಮ=ಸ್ಪಿರಿಟ್) ೩ ರೂಪದಲ್ಲಿರುತ್ತದೆಯೆಂದ. ಅವನ್ನು ನ್ಯೂಮಾ ಫಿಸಿಕಾನ್ (ಶಾರೀರಿಕಾತ್ಮ ಆತ್ಮ) ನ್ಯೂಮಾ ಜ಼ೋಟಿಕಾನ್ (ಜೈವಿಕಾತ್ಮ) ಮತ್ತು ನ್ಯೂಮಾ ಸೈಕಿಕಾನ್ (ಮಾನಸಿಕ ಆತ್ಮ) ಎಂದು ಕರೆದ.
ಈ ೩ನೇ ಆತ್ಮವು ಮಿದುಳಿನಲ್ಲಿರುತ್ತದೆ ಎಂದ. ಇವನು, ಮನುಷ್ಯರ ಮಿದುಳನ್ನು ೨ ಪೊರೆಗಳು ಆವರಿಸಿರುತ್ತವೆ. ಮೊದಲನೆಯದು ಗಟ್ಟಿಯಾಗಿಯೂ ದೃಢವಾಗಿಯೂ ಇರುತ್ತದೆ. ಎರಡನೆಯದು ಮೃದುವಾಗಿರುತ್ತದೆ. ೨ನೇ ಪದರವು ಮಿದುಳಗುಳಿಗಳ ಒಳಗೆ ಸಾಗಿ ಅಲ್ಲಿ ಉಲ್ಬರಕ್ತನಾಳ ಜಾಲವನ್ನು ರೂಪಿಸುತ್ತದೆ. ಇಬ್ಬದಿಯ ಮಿದುಳುಗುಣಿಗಳಲ್ಲಿ ಮನುಷ್ಯನ ಕಲ್ಪನಾ ಸಾಮರ್ಥ್ಯವಡಗಿದೆ.

೩ನೇ ಗುಳಿಯಲ್ಲಿ ಗ್ರಹಣ ಸಾಮರ್ಥ್ಯ ಹಾಗೂ ೪ನೇ ಗುಳಿಯಲ್ಲಿ ಸ್ಮರಣಶಕ್ತಿಯಿರುತ್ತದೆ ಹಾಗೂ ಈ ಎಲ್ಲ ಗುಳಿಗಳಲ್ಲಿ ಒಂದು ‘ಅನಿಲೀಯ ರಸ’ವು (ಗೇಷಿಯಸ್ ಹ್ಯೂಮರ್) ಇಡೀ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ ಎಂದ. ಆಂಡ್ರಿಯಸ್ ವೆಸಾಲಿಯಸ್ ಮಿದುಳು, ಮಿದುಳಪೊರೆ ಹಾಗೂ ಮಿದುಳಗುಳಿಗಳ ಬಗ್ಗೆ ನಿಖರ ವಿವರಣೆಯನ್ನು ‘ಡಿ ಹ್ಯೂಮನಿ ಕಾರ್ಪೊರಿಸ್ -ಬ್ರಿಕ’ ಎಂಬ ತನ್ನ ಉದ್ಗ್ರಂಥದಲ್ಲಿ ನೀಡಿದ. ಇವನು, ಮಿದುಳುಗುಳಿಗಳಲ್ಲಿ ಯಾವುದೇ ಅನಿಲೀಯ ರಸವಿಲ್ಲ; ಅಲ್ಲಿ ಪಾರದರ್ಶಕ ರಸವು ಮಾತ್ರ ಇದೆ ಎಂದು ದಾಖಲಿಸಿ ಗ್ಯಾಲನ್ನನ್ನು ಸಿದ್ಧಾಂತವನ್ನು ಅಲ್ಲಗಳೆದ.

ಬಳ್ಳಿಮಿದುಳ ದ್ರವದ ಗಂಭೀರ ಅಧ್ಯಯನವು ೧೭-೧೮ನೇ ಶತಮಾನದಲ್ಲಿ ನಡೆಯಿತು. ಇಟಾಲಿಯನ್ ಅಂಗರಚನಾ ವಿಜ್ಞಾನಿ ಆಂಟೋನಿಯೋ ಮಾರಿಯ ವಲ್ಸಾಲ್ವ, ಥಾಮಸ್ ವಿಲ್ಲಿಸ್, ರಿಚರ್ಡ್ ಲೋವರ್, ಆಲ್ಬ್ರೆಕ್ಟ್ ವಾನ್ ಹ್ಯಾಲರ್ ಮುಂತಾದವರು ಬಳ್ಳಿಮಿದುಳ ದ್ರವದ ಬಗ್ಗೆ ಒಂದೊಂದೇ ವಿಚಾರಗಳನ್ನು ಅನಾವರಣ ಮಾಡಿದರು. ಡೋಮಿನಿಕೊ -ಲಿಸ್ ಆಂಟೋನಿಯೋ ಕೋಟುನ್ಯ ಇಟಲಿಯ ವೈದ್ಯನಾಗಿದ್ದ. ೧೭೬೪ರಲ್ಲಿ ೨೦ ಪುರುಷ ಮೃತದೇಹಗಳಿಂದ
ಬಳ್ಳಿಮಿದುಳ ದ್ರವವನ್ನು ಸಂಗ್ರಹಿಸಿದ. ಅದರ ಪ್ರಮಾಣವನ್ನು ಅಳೆದ. ಲಕ್ಷಣಗಳನ್ನು ಗುರುತಿಸಿದ ಹಾಗೂ ಈ ದ್ರವವು ಎಲ್ಲ ಮಿದುಳಗುಳಿಗಳಲ್ಲಿ ಹರಿಯುತ್ತದೆ ಎಂದ.

ಅವನ ಸಮಕಾಲೀನ ವೈದ್ಯರು ಅಪಹಾಸ್ಯ ಮಾಡಿದರು. ಆದರೆ ಮುಂದೆ ಅವನ ಗೌರವಾರ್ಥ ಬಳ್ಳಿಮಿದುಳ ದ್ರವವನ್ನು ‘ಲಿಕ್ಕರ್ ಕೋಟಿನ್ನಿ’ ಎಂದು ಕರೆದು ಗೌರವ ಸೂಚಿಸಿದರು. ಫ್ರಾನ್ಸ್ ದೇಶದ ಫ್ರಾಂಕೋಯಿಸ್ ಮೆಗೆಂಡಿ ಬಳ್ಳಿಮಿದುಳ ದ್ರವವು ಮಿದುಳು ಹಾಗೂ ಮಿದುಳುಬಳ್ಳಿಯೆರಡರಲ್ಲೂ ಹರಿಯುತ್ತದೆ ಎಂದ. ಈ
ದ್ರವಕ್ಕೆ ‘ಲಿಕ್ವಿಡ್ ಸೆರೆಬ್ರೋ ಸ್ಪೈನಲ್’ ಎಂಬ ಅನ್ವರ್ಥ ನಾಮಕರಣ ಮಾಡಿದ. ಅದೇ ಹೆಸರು ಇಂದಿನವರೆಗೆ ಉಳಿದುಬಂದಿದೆ. ಇವನು ಪ್ರಾಣಿಗಳ ಬೆನ್ನುಹುರಿಗೆ ಸೂಜಿ ಚುಚ್ಚಿ, ದ್ರವವನ್ನು ಬಸಿಯಲು ಸಾಧ್ಯ ಎಂದು ಮೊದಲ ಬಾರಿಗೆ ತೋರಿಸಿಕೊಟ್ಟ. ಬಳ್ಳಿಮಿದುಳ ದ್ರವದ ಬಗ್ಗೆ ನಿಖರ ಅಧ್ಯಯನ ಮಾಡಿದವರು ಸ್ವೀಡನ್ ದೇಶದ ಆಕ್ಸೆಲ್ ಕೇ, ಗುಸ್ತಾವ್ ಮ್ಯಾಗ್ನಸ್ ರೆಟ್ಜಿಯಸ್. ಇವರು ಮಿದುಳಪೊರೆ, ಮಿದುಳಗುಳಿ, ಬಳ್ಳಿಮಿದುಳ ದ್ರವಗಳ ಬಗ್ಗೆ ನಿಖರ ಮಾಹಿತಿ ನೀಡುವುದರ ಜತೆಯಲ್ಲಿ ಈ ದ್ರವವು ಮಿದುಳುಬಳ್ಳಿಯಲ್ಲೂ ಹರಿಯುತ್ತದೆ ಎನ್ನುವುದನ್ನು ಪ್ರಾಯೋಗಿಕವಾಗಿ ನಿರೂಪಿಸಿದರು.

ಮಿದುಳುಗುಳಿಗಳ ಒಳಗೆ ಬಣ್ಣದ ದ್ರವವನ್ನು ತುಂಬಿದಾಗ, ಅದು ಮಿದುಳು ಮತ್ತು ಮಿದುಳುಬಳ್ಳಿಯಾದ್ಯಂತ ಹರಿಯುವುದನ್ನು ತೋರಿಸಿದರು. ಅಮೆರಿಕದ ಜೇಮ್ಸ್ ಲಿಯೋನಾರ್ಡ್ ಕಾರ್ನಿಂಗ್ ಜೀವಂತ ವ್ಯಕ್ತಿಯ ಬೆನ್ನುಹುರಿಗೆ ಸೂಜಿ ಚುಚ್ಚಿ ಒಳಗೆ ಹರಿಯುತ್ತಿದ್ದ ಬಳ್ಳಿಮಿದುಳ ದ್ರವವನ್ನು ಬಸಿದ ಮೊದಲ ವೈದ್ಯ ನೆನಿಸಿಕೊಂಡ. ಬ್ರಿಟನ್ನಿನ ವಾಲ್ಟರ್ ಎಸೆಕ್ಸ್ ವಿಂಟರ್ ಹಾಗೂ ಜರ್ಮನ್ ವೈದ್ಯ ಹೆನ್ರೀಚ್ ಅರೀನಿಯಸ್ ಕ್ವಿಂಕೆ ಬಳ್ಳಿಮಿದುಳ ದ್ರವದ ರಾಸಾಯನಿಕ ಅಧ್ಯಯನ
ಕೈಗೊಂಡವರಲ್ಲಿ ಮೊದಲಿಗರು. ಇವರು ಬಳ್ಳಿಮಿದುಳ ದ್ರವದ ಒತ್ತಡವನ್ನು ಅಳೆದರು. ಮಿದುಳುರಿಯೂತಕ್ಕೆ ಒಳಗಾದವರ ಬಳ್ಳಿಮಿದುಳ ದ್ರವದಲ್ಲಿ ಗ್ಲೂಕೋಸ್
ಪ್ರಮಾಣ ಕಡಿಮೆಯಾಗಿರುತ್ತದೆ ಎನ್ನುವುದನ್ನು ತೋರಿದರು.

ಇಂದು ಹಲವು ರೋಗಗಳನ್ನು ಪತ್ತೆಹಚ್ಚಲು ಬಳ್ಳಿಮಿದುಳ ದ್ರವವನ್ನು ಬಸಿಯುವ ಪರೀಕ್ಷೆ ಸರ್ವೇಸಾಮಾನ್ಯವಾಗಿ ನಡೆಯುತ್ತಿದೆ. ಹಾಗಾಗಿ ಬಳ್ಳಿಮಿದುಳ ದ್ರವದ ಬಗೆಗಿನ ನಮ್ಮ ತಿಳಿವಳಿಕೆ ಹೆಚ್ಚಿಸಿದ ಇಮ್ ಹೋಟೆಪ್, ಹಿಪ್ಪೋಕ್ರೇಟಸ್, ಗ್ಯಾಲನ್, ವೆಸಾಲಿಯಸ್, ಕೋಟಿನ್ಯು, ಮೆಗೆಂಡಿ, ಕಾರ್ನಿಂಗ್, ಕ್ವಿಂಕೆ ಮುಂತಾದವರ ಸಹಸ್ರಮಾನಗಳ ಸಂಶೋಧನೆ ಹಾಗೂ ಅಧ್ಯಯನದ ಫಲವಾಗಿ ಇಂದು ನಮಗೆ ಬಳ್ಳಿಮಿದುಳ ದ್ರವದ ಸಮಗ್ರ ಮಾಹಿತಿ ತಿಳಿದಿದೆ. ಎಲ್ಲರಿಗೂ ಒಮ್ಮೆ ಶರಣು ಎನ್ನೋಣ.