Sunday, 19th May 2024

ಸಾಧನೆ ಎನ್ನುವುದು ಸಾಧಕನ ಸ್ವತ್ತು

ಪ್ರಸ್ತುತ

ರಂಗನಾಥ್ ಎನ್.ವಾಲ್ಮೀಕಿ

ಸಾಧನೆ ಎಂಬುದು ಸಾಧಕನ ಸ್ವತ್ತು ವಿನಃ ಸೋಮಾರಿಯ ಸ್ವತ್ತಲ್ಲ ಎಂಬ ಮಾತು ಸದಾ ವಾಸ್ತವ ಹಾಗೂ ಸಾರ್ವಕಾಲಿಕ ಸತ್ಯವಾದ ಮಾತು. ಈ ಪ್ರಪಂಚದಲ್ಲಿ ಸಾಧಕನಿಗೆ ತುಂಬಾ ಗೌರವ ಹಾಗೂ ಬೆಲೆ. ಹೀಗಾಗಿ ನಾವು ಈ ಸ್ಪರ್ಧಾತ್ಮಕ ಯುಗದಲ್ಲಿ ಗೆಲ್ಲಬೇಕಾದರೆ ತುಂಬಾ ಶ್ರಮಿಸಬೇಕು. ನಮ್ಮ ಬದುಕಿನಲ್ಲಿ ನಿರ್ದಿಷ್ಟ ಗುರಿಯಿಟ್ಟುಕೊಂಡು ಆ ಗುರಿ ಸಾಧನೆಗೆ ಯೋಜನಾ ಬದ್ಧವಾಗಿ ನಿರಂತರವಾಗಿ ಪ್ರಯತ್ನ ಮಾಡಬೇಕು.

ಯಾವುದೇ ಗೆಲುವು ಸುಲಭವಾಗಿ ಸಿಗದು. ಅಬ್ರಹಾಂ ಲಿಂಕನ್ ಅಮೇರಿಕಾದ ಅಧ್ಯಕ್ಷರಾಗುವ ಮುನ್ನ ಅದೆಷ್ಟು ಬಾರಿ ಸೋಲು ಕಂಡಿಲ್ಲ ಅದೆಷ್ಟೋ ನೋವು ಅವಮಾನ ಎದುರಿಸಿಲ್ಲ. ಆದರೂ ಅವರು ಛಲಬಿಡದ ತ್ರಿವಿಕ್ರಮನಂತೆ ಹೋರಾಟ ಮುಂದುವರೆಸಿದರೂ ಕೊನೆಗೆ ಗೆಲುವನ್ನು ಸಾಧಿಸಿದರು. ಇವರ ಬದುಕು ಅನೇಕ ಸಾಧಕರಿಗೆ ಅನೇಕ ಸಂದೇಶಗಳನ್ನು ನೀಡುವುದು. ಮುಖ್ಯವಾಗಿ ಸಾಧಕನಿಗೆ ತಾಳ್ಮೆ ಬಲು ಮುಖ್ಯ. ಸಾಧನೆ ಹಾದಿಯಲ್ಲಿ ಸಾಗು ವಾಗ ಒಂದೆರೆಡೂ ಇಲ್ಲವೇ ಸತತವಾಗಿ ಸೋತರೂ ಎದೆಗುಂದದೇ ನಮ್ಮ ಪ್ರಾಮಾಣಿಕ ಪ್ರಯತ್ನ ಮುಂದುವರೆಸಬೇಕು. ಪ್ರಯತ್ನ ಪಡುವುದರಿಂದ ಒಂದು ನಮಗೆ ಗೆಲುವು ಸಿಗುವುದು ಇಲ್ಲವೇ ಸೋತರೆ ಅನುಭವ ಸಿಗುವುದು ಹೀಗಾಗಿ ನಿರಂತರವಾಗಿ ಪ್ರಯತ್ನ ಮಾಡುತ್ತಾ ಇರಬೇಕು.

ಯಾವುದೇ ಸಾಧನೆ ಅಸಾಧ್ಯ ಎಂಬುದು ಇಲ್ಲ. ಇಲ್ಲಿ ಎಲ್ಲವೂ ಸಾಧ್ಯವಾಗಿವೆ. ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಯಾರೂ ಮುರಿಯಲಾರರು ಎಂದು ತಿಳಿಯಲಾಗಿತ್ತು. ಆದರೆ ನಮ್ಮ ದೇಶದ ಇನ್ನೊಬ್ಬ ಕ್ರೀಡಾಪಟು ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದರೂ ಕೊಹ್ಲಿಯವರ ದಾಖಲೆಯನ್ನು ಭವಿಷ್ಯದಲ್ಲಿ ಮತ್ತೊಬ್ಬ ಅಟಗಾರ ಮುರಿಯಬಹುದು ಇದರ ಅರ್ಥ ಇಷ್ಟೇ ಯಾವುದೇ ಸಾಧನೆ ಅಂತಿಮವಲ್ಲ. ಪ್ರತಿ ಸಾಧನೆಯೂ ಸಾಧ್ಯತೆಯನ್ನು ಹೊಂದಿದೆ ಎಂಬುದನ್ನು ಅರಿಯಬೇಕು. ಸಾಧನೆ ಸಾಧ್ಯತೆ ಇವೆರಡೂ ಪರಸ್ಪರ ಪೂರಕ ಪದಗಳು ಅಷ್ಟೇ ಅಲ್ಲ ಪೂರಕ ಕ್ರಿಯೆಗಳು ಕೂಡಾ ಆಗಿವೆ.

ಸಾಧನೆ ಮಾಡಬೇಕಾದರೆ ಉತ್ತಮ ಗುಣಗಳನ್ನು ರೂಢಿಸಿಕೊಂಡು ಸಮಯವನ್ನು ವ್ಯಯಮಾಡದೇ ನಿರಂತರವಾಗಿ ನಮ್ಮ ಗುರಿ ಕಡೆ ಗಮನ ಇರಬೇಕು. ಮುಂದೊಂದು ದಿನ ಕೆಎಎಸ್ ಅಥವಾ ಐಎಎಸ್ ಅಧಿಕಾರಿ ಆಗಬೇಕಂದರೆ ವಿದ್ಯಾರ್ಥಿ ದೆಸೆಯಿಂದಲೇ ಅದಕ್ಕೆ ತಯಾರಿ ನಡೆಸಬೇಕು. ಉತ್ತಮ ಉದ್ಯಮಿ ಯಾಗಬೇಕೆಂದರೆ ಯಶಸ್ವಿ ಹಾಗೂ ಸೋತು ಗೆದ್ದ ಉದ್ಯಮಿಗಳ ಕಥೆ ಓದಿ ತಿಳಿಯಬೇಕು. ಸ್ವತಃ ಅದರಲ್ಲಿ ತೊಡಗಬೇಕು. ಪ್ರಯತ್ನ ಪಡದೇ ಹೊರತು ಈ ಜೀವನದಲ್ಲಿ ಯಾರಿಗೂ ಏನೂ ಸಿಗದು ಹೀಗಾಗಿ ಸಾಧಕ ಯಾವಾಗಲೂ ನಿರಂತರವಾಗಿ ಪ್ರಯತ್ನಶೀಲನಾಗಿರುತ್ತಾನೆ ಎಂಬದು ಅರಿಯ ಬೇಕು. ಸಾಧನೆ ಹಾದಿಯಲ್ಲಿ ಸಾಗುವಾಗ ಕೆಲವರು ನಮ್ಮ ಆತ್ಮವಿಶ್ವಾಸ ಕುಗ್ಗಿಸುವ ಮಾತು ಆಡಬಹುದು ಅಂತಹ ಮಾತುಗಳಿಗೆ ಕಿವಿಗೊಡದೇ ನಾವು ಸಾಧನೆ ಕಡೆ ಮುಖ ಮಾಡಬೇಕು.

ಸಾಧಿಸುವ ಹಾದಿಯಲ್ಲಿ ಸಾಗುವಾಗ ಕೆಲವರು ಕುಹಕ ನುಡಿಗಳನ್ನು ಆಡಬಹುದು. ಟೀಕೆ ನಿಂದನೆ ಮಾಡಬಹುದು ಅದಕ್ಕೂ ಅಂತಹ ಮಾತಿಗೂ ಎಳ್ಳಷ್ಟು ಬೆಲೆ ಕೊಡಬಾರದು. ಟೀಕೆ ನಿಂದನೆಗಳು ಯಾರಿಗೂ ಬಿಟ್ಟಿಲ್ಲ ಅವು ಸಹಜ ಕೂಡಾ. ಮಹಾನ್ ಸಾಧಕರಾದವರನ್ನು ಅನೇಕರು ಟೀಕಿಸಿರುವು ದನ್ನು ಕಾಣಬಹುದು. ಮಹಾತ್ಮ ಗಾಂಧೀಜಿ, ಗೌತಮ ಬುದ್ಧ, ಮಹಾವೀರ, ಅಶೋಕ ಮಹಾರಾಜ ಹೀಗೆ ಅನೇಕ ಸಾಧಕರನ್ನು ನೆನೆದಾಗ ಅವರು ಅನೇಕ ಸೋಲು ನೋವು ಎದುರಿಸಿ ಕೊನೆಗೆ ಗೆದ್ದವರು. ಹೀಗಾಗಿ ಸಾಧನೆ ಹಾದಿಯಲ್ಲಿ ಸಾಗುವಾಗ ಎದುರಾಗುವ ಸಂದರ್ಭಗಳನ್ನು ಸಮಚಿತ್ತದಿಂದ ಸ್ವೀಕರಿಸ ಬೇಕು. ಸಾಧಕರ ಒಡನಾಟ ಬೆಳೆಸಿಕೊಳ್ಳಬೇಕು. ನಿಷೇಧಾತ್ಮಕವಾಗಿ ಸಂಕುಚಿತವಾಗಿ ಚಿಂತನೆ ಮಾಡುವ ವ್ಯಕ್ತಿಗಳಿಂದ ಬಲುದೂರ ಇರಬೇಕು.

ಮಾನಸಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಧನಾತ್ಮಕವಾಗಿ ಆಲೋಚಿಸುವ ವ್ಯಕ್ತಿಗಳ ಜತೆ ಆತ್ಮೀಯ ಒಡನಾಟ ಹೊಂದಬೇಕು ಈ ರೀತಿಯ ಸಂಬಂಧಗಳು ನಮ್ಮ ಸಾಧನೆಗೆ ಸಹಕಾರಿಯಾಗುತ್ತವೆ ಎಂಬುದನ್ನು ಮರೆಯಬಾರದು. ಇನ್ನು ಸಾಧನೆ ಮಾಡಹೊರಟಾಗ ಕೆಲವೊಂದು ಸಣ್ಣ ಪುಟ್ಟ ತ್ಯಾಗಗಳನ್ನು ಮಾಡಬೇಕು. ಊರೂರು ಅಲೆಯುವುದು. ಅತಿಯಾಗಿ ಮೊಬೈಲ್ ಬಳಕೆ, ಟಿವಿ ವೀಕ್ಷಣೆ ಒಣಹರಟೆ ಬಿಡಬೇಕು ಸಾಧನೆ ಎಂಬುದು ಸಾಧ್ಯತೆ
ಹೊಂದಿದೆ ಎಂಬುದನ್ನು ಮುನ್ನಡೆಯೋಣ ನಾವು ಕೂಡಾ ಸಾಧನೆ ಹಾದಿಯಲ್ಲಿ ಸಾಗೋಣ.

(ಲೇಖಕರು : ಹವ್ಯಾಸಿ ಬರಹಗಾರರು ಹಾಗೂ ಶಿಕ್ಷಕರು)

Leave a Reply

Your email address will not be published. Required fields are marked *

error: Content is protected !!