ಪ್ರಸ್ತುತ
ಭಾರಧ್ವಾಜ್ ಎಸ್.
ಎಲ್ಲ ಕನ್ನಡ ಸುದ್ದಿ ವಾಹಿನಿಗಳಲ್ಲಿ ಬರುತ್ತಿರುವ ಸುದ್ದಿ – ಬಹಳಷ್ಟು ಹೆಣ್ಣು ಮಕ್ಕಳು ತಮ್ಮ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡಿನೊಂದಿಗೆ ಅಂಚೆ ಕಚೇರಿಗಳಿಗೆ ಮುತ್ತಿಗೆ ಹಾಕಿರುವುದು. ಹಲವೆಡೆ ಇಷ್ಟೊಂದು ಜನರನ್ನು ನಿಭಾಯಿಸಲು ಅಂಚೆ ಕಚೇರಿಯ ಸಿಬ್ಬಂದಿ ಕೊರತೆಯಂಟಾಗಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯಮಿಸಲಾಗಿದೆಯಂತೆ. ಅಂಚೆ ಕಚೇರಿಯವರಿಗಂತೂ ಸುಗ್ಗಿಯ ಕಾಲ. ಪ್ರತಿಯೊಬ್ಬರಿಗೂ ಅಂಚೆ ಇಲಾಖೆಯ ಉಳಿತಾಯ ಖಾತೆ
ಯನ್ನು ತೆರೆಯುತ್ತಿzರೆ. ಏನಿದು ಸಮಾಚಾರ ಎಂದರೆ, ರಾಹುಲ್ ಗಾಂಧಿಯ ಹೇಳಿಕೆಯ ಪ್ರಕಾರ ‘ಕಟಾ ಕಟ’ ಖಾತೆಗೆ ಪ್ರತಿ ತಿಂಗಳೂ ೮,೫೦೦ ರು. ಜಮೆ ಮಾಡುತ್ತಾರಂತೆ, ಅದೂ ಜೂನ್ ೪ರ ನಂತರ.
ಇನ್ನು ಒಂದು ಹಂತ (ಕೊನೆಯ ಹಂತ ೭ನೇಯದು) ಬಾಕಿಯಿದ್ದು, ಜೂನ್ ೧ರಂದು ಉಳಿದ ೫೭ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ. ಅಲ್ಲಿಗೆ ಲೋಕಸಭೆಯ ಚುನಾವಣಾ ಪ್ರಕ್ರಿಯೆ ಒಂದು ಹಂತಕ್ಕೆ ಮುಗಿದು, ಮತಗಳ ಎಣಿಕೆ ಮತ್ತು ಫಲಿತಾಂಶಕ್ಕಾಗಿ ಜೂನ್ ೪ರವೆರೆಗೆ ಕಾಯಬೇಕಾಗಿದೆ. ಅಲ್ಲಿಯವೆರೆಗೆ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ, ಗದ್ದುಗೆ ಯಾರು ಹಿಡಿಯುತ್ತಾರೆ ಎಂಬುದು ಕೇವಲ ಉಹಾಪೋಹವೇ ಹೊರತು, ಯಾರೂ
ಫಲಿತಾಂಶವನ್ನು ಸಹ ನಿಖರವಾಗಿ ಹೇಳಲಾರರು. ಬಹಳಷ್ಟು ಜನರು ತಮ್ಮ ಅನುಭವಗಳಿಂದ, ರಾಜ್ಯ, ಪ್ರಾಂತ್ಯಗಳ ಜನರ ಅಭಿಪ್ರಾಯ ಸಂಗ್ರಹದಿಂದ ಕೆಲವೊಂದು ನಿರೀಕ್ಷೆಗಳನ್ನಿಡಬಹುದಷ್ಟೇ. ಈ ನಿರೀಕ್ಷೆ ಗಳು ಎಷ್ಟರಮಟ್ಟಿಗೆ ನಿಜಕ್ಕೆ ಹತ್ತಿರವಾಗಿರುತ್ತದೆ ಎಂಬುದು ಜೂನ್ ೪ರಂದು ತಿಳಿಯಬರುತ್ತದೆ.
ಕೇವಲ ಚುನಾವಣಾ ಪ್ರಚಾರದಲ್ಲಿ ನೀಡಿದ ಹೇಳಿಕೆಯನ್ನು ಆದರಿಸಿ, ಅಂಚೆ ಕಚೇರಿಗಳ ಮುಂದೆ ಸಾಲುಗಟ್ಟಿರುವವರನ್ನು ನೋಡಿದರೆ, ಅವರ ಆತ್ಮ ವಿಶ್ವಾಸಕ್ಕೆ ಮೆಚ್ಚಲೇ ಬೇಕು. ಕರ್ನಾಟಕದ ಚುನಾವಣೆಯಲ್ಲಿ ನೀಡಿದ ಉಚಿತ ಭರವಸೆಗಳನ್ನು ನೋಡಿ, ರಾಷ್ಟ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜೂನ್ ೪ರಂದೇ ತಮ್ಮ ಖಾತೆಗೆ ಹಣ ಬಂದು ಬೀಳಬಹುದು ಎಂಬ ನಿರೀಕ್ಷೆಯಲ್ಲಿ ಇವರೆಲ್ಲರೂ ಇದ್ದಾರೆ.
೫೪೩ ಲೋಕಸಭಾ ಸ್ಥಾನಗಳಿಗೆ ಎನ್‌ಡಿಎ ಉಮೇದುವಾರರು ೫೪೦ ಸ್ಥಾನಗಳಿಗೆ (ಶೇಕಡಾ ೯೯%) ಸ್ಪರ್ಧಿಸಿದ್ದರೆ, ಐಎನ್‌ಡಿಎಐ ಉಮೇದುವಾರರು ೪೮೨ ಸ್ಥಾನಗಳಿಗೆ (ಶೇಕಡಾ ೮೯%) ಸ್ಪರ್ಧಿಸಿದ್ದಾರೆ. ಈ ಅಂಕಿ ಅಂಶಗಳ ಪ್ರಕಾರ ಇಬ್ಬರೂ ಶೇ.೫೦ರಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಾರೆ ಅಂದುಕೊಂಡರೆ, ಎನ್‌ಡಿಎ ಕೂಟವು ಲೋಕಸಭೆಯಲ್ಲಿ ಬೇಕಾಗಿರುವ ೨೭೨ ಸ್ಥಾನಗಳ ಹತ್ತಿರಕ್ಕೆ ಬಂದು ನಿಲ್ಲುತ್ತಾರೆ ಮತ್ತು ಐಎನ್‌ಡಿಎಐ ಕೂಟವು ಸರಳ ಬಹುಮತಕ್ಕೆ ಇನ್ನೂ ೩೧ ಸ್ಥಾನಗಳ ಕೊರತೆ ಹೊಂದುತ್ತಾರೆ. ಇದು ಬರಿಯ ಶೇ.೫೦ರ ಲೆಕ್ಕಾಚಾರ, ಆದರೆ ಅದು ಹಾಗಾಗುವುದಿಲ್ಲ. ಇದರ ಜೊತೆಗೆ ಪಕ್ಷ ಮತ್ತು ಅದರ
ಪ್ರಣಾಳಿಕೆ, ಕ್ಷೇತ್ರ, ಪ್ರಚಾರದ ವೈಖರಿ, ಜನಸಂಖ್ಯೆ ಮತ್ತು ಅಲ್ಲಿನ ವಿವಿಧತೆ, ಶೇಖಡಾವಾರು ಮತದಾನ, ಆಶ್ವಾಸನೆ ಗಳು, ಹೀಗೆ ವಿವಿಧ ರೀತಿಯ ಅಂಶಗಳು ಸೇರಿಸಬೇಕಾಗುತ್ತದೆ.
ಇಷ್ಟೊಂದು ವೈರುಧ್ಯಗಳಿರುವಾಗ ಯಾವುದೇ ರೀತಿಯ ಸಮೀಕ್ಷೆಗಳು ನಿಖರವಾಗಿರುವುದಿಲ್ಲ. ಐಎನ್‌ಡಿಎಐ ಕೂಟದವರಿಗೇ ಬಹುಮತ ಬಂದರೂ, ಪ್ರಧಾನಿಯ ಆಯ್ಕೆಗೆ ಕೆಲವೊಂದು ದಿನಗಳ ಕಾಲ ತೆರೆ ಮರೆಯ ಕಸರತ್ತು ನಡೆಸಲೇ ಬೇಕಾಗುತ್ತದೆ. ದಿನಗೂಲಿ ಮಾಡಿಕೊಂಡು, ಬಡತನವನ್ನು ಹೊದ್ದುಕೊಂಡಿರುವ ವರಿಗೆ ಈ ಉಚಿತ ಕೊಡುಗೆಗಳು ಅಲ್ಪ ಕಾಲದವೆರೆಗೆ ಸಹಾಯ ಮಾಡಬಹುದು. ಆದರೆ ಅವರನ್ನು ಬಡತನದಿಂದ ಮೇಲೆತ್ತಲು
ಸಹಾಯ ಮಾಡುವುದಿಲ್ಲ. ಇಂದು ಎಲ್ಲರೂ ಈ ಉಚಿತಗಳ ಹಿಂದೆ ಹೋಗಿದ್ದಾರೆ. ಈಗ ಏನಾದರು ಈ ಉಚಿತಗಳನ್ನು ಹಿಂದೆಗೆದು ಕೊಂಡರೆ ಎಲ್ಲರೂ ಸರಕಾರಕ್ಕೆ ಹಿಡಿಶಾಪ ಹಾಕುವುದಂತೂ ಖಂಡಿತ.
ಉದಾಹರಣೆಗೆ ಮೊನ್ನೆಯ ಬೇಸಿಗೆಯಲ್ಲಿ ಅಧಿಕ ವಿದ್ಯುತ್ ಬಳಸಿ, ಉಚಿತ ಯೂನಿಟ್‌ಗಳ ಮಿತಿಯನ್ನು ಮೀರಿದವರು, ಪೂರ್ಣ ಪ್ರಮಾಣದ ಬಿಲ್ಲನ್ನು ಕಟ್ಟುವಾಗ ಎಷ್ಟೊಂದು ಸಂಕಟಪಟ್ಟಿದ್ದಾರೆ ಎಂಬುದು ಅವರಿಗಷ್ಟೇ ಗೊತ್ತು. ಇದೇ ರೀತಿ ಮುಂದೆ ಬಸ್ಸಿನಲ್ಲಿ ಟಿಕೆಟು ತಗೆದುಕೊಳ್ಳಬೇಕೆಂದರೂ ಸಹ ಬಹಳವೇ ಸಂಕಟಕ್ಕೊಳಗಾಗುತ್ತಾರೆ. ಇದಕ್ಕೆ ಉಳ್ಳವರು, ಬಡವರು ಎಂಬ ಯಾವುದೇ ಭೇದವಿಲ್ಲ. ಈ ಉಚಿತ ಕೊಡುಗೆಗಳಿಂದ ನಾವು ಹಿತವಾಗಿ ಮತ್ತು ಮಿತವಾಗಿ ಬಳಸುವ ಯೋಚನೆಯನ್ನೇ ಬಿಟ್ಟಿದ್ದೇವೆ. ಸುಲಭವಾಗಿ ಹಾಗೂ ಉಚಿತವಾಗಿ ಏನು ಸಿಕ್ಕರೂ ಸಾಕು, ಅದಕ್ಕಾಗಿ ಕಷ್ಟ ಪಡಬೇಕಿಲ್ಲ ಮತ್ತು ಅದಕ್ಕೆ ಯಾವುದೇ ರೀತಿಯ ಇತಿಮಿತಿಗಳಿಲ್ಲದಿದ್ದರೆ ಸಾಕು. ಆದರೆ ಅದರಿಂದಾಗುವ ದುಷ್ಪರಿಣಾಮಗಳಿಗೆ ನಮ್ಮ ಮುಂದಿನ ಪೀಳಿಗೆಯವರು ಬಲಿಯಾಗುತ್ತಾರೆ ಎಂಬ ಅರಿವು ಜನರಲ್ಲೂ ಇಲ್ಲ, ರಾಜಕೀಯ ನಾಯಕರಿಗೂ ಇಲ್ಲ.
ಇದಕ್ಕೆ ಅಂಚೆ ಕಚೇರಿಯಮುಂದೆ ನಿಂತಿರುವ ಜನರೇ ಸಾಕ್ಷಿ.
(ಲೇಖಕರು: ಹವ್ಯಾಸಿ ಬರಹಗಾರರು)